ಬಿಜೆಪಿ ರಾಷ್ಟ್ರಾಧ್ಯಕ್ಷರಿಗೆ ಅಡ್ಡ ಮತದಾನದ ವರದಿ ಸಲ್ಲಿಸುತ್ತೇವೆ: ಬಿ.ವೈ. ವಿಜಯೇಂದ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ
ಹೊಸದಿಲ್ಲಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಕೆಲವು ಶಾಸಕರು ಅಡ್ಡ ಮತದಾನ ಮಾಡಿ ಪಕ್ಷದ ವಿಪ್ ಉಲ್ಲಂಘಿಸಿದ ಕುರಿತು ಸಮಗ್ರ ವರದಿಯನ್ನು ನಮ್ಮ ರಾಷ್ಟ್ರೀಯಾಧ್ಯಕ್ಷ ನಿತಿನ್ ನಬೀನ್ ಅವರಿಗೆ ಸಲ್ಲಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಮಂಗಳವಾರ ದಿಲ್ಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರತಿಪಕ್ಷ ನಾಯಕ ಆರ್.ಅಶೋಕ್ ಹಾಗೂ ನಾನು, ಚುನಾವಣಾ ಜವಾಬ್ದಾರಿ ಹೊತ್ತ ರವಿಕುಮಾರ್, ನವೀನ್ ಅವರು ರಾಷ್ಟ್ರೀಯಾಧ್ಯಕ್ಷರನ್ನು ಭೇಟಿ ಮಾಡಲಿದ್ದೇವೆ. ಮೊದಲ ಹಂತದಲ್ಲಿ ಏನೇನು ಆಗಿದೆ ಎಂಬ ವರದಿಯನ್ನು ನಾವು ರಾಷ್ಟ್ರೀಯಾಧ್ಯಕ್ಷರಿಗೆ ನೀಡಲಿದ್ದೇವೆ ಎಂದರು.
ಪಕ್ಷದ ಹಿರಿಯ ಮುಖಂಡ ಸಿ.ಟಿ.ರವಿ ನೇತೃತ್ವದಲ್ಲಿ ಸತ್ಯಶೋಧನಾ ಸಮಿತಿಯನ್ನೂ ಮಾಡಿದ್ದೇವೆ. ಅವರೂ ನಮಗೆ ವರದಿ ನೀಡಲಿದ್ದು, ಅದನ್ನು ಬಳಿಕ ರಾಷ್ಟ್ರೀಯಾಧ್ಯಕ್ಷರಿಗೆ ಕೊಡಲಿದ್ದೇವೆ. ಚುನಾವಣೆಯ ಮರುದಿನ ನಾನೇ ರಾಷ್ಟ್ರೀಯಾಧ್ಯಕ್ಷರಿಗೆ ಕರೆ ಮಾಡಿ ಮಾಹಿತಿ ಕೊಟ್ಟಿದ್ದೇನೆ. ಆಗ ಕೆಲವು ಮಾಹಿತಿಗಳನ್ನು ಅವರೂ ಕೇಳಿದ್ದರು. ಆಗ ಭೇಟಿಗೆ ಸಮಯಾವಕಾಶ ಕೋರಿದ್ದು, ಇವತ್ತು ಬಂದಿದ್ದೇವೆ ಎಂದು ನುಡಿದರು.
ಮಾಜಿ ಸಿಎಂ ಸದಾನಂದಗೌಡ ಅವರು ಯಾವ ರೀತಿ ಹೇಳಿದ್ದಾರೆ ಎಂದು ಗೊತ್ತಿಲ್ಲ. ಮೊನ್ನೆ ನನಗೆ ಅವರು ದೂರವಾಣಿ ಕರೆ ಮಾಡಿದ್ದರು. ನಮ್ಮ ನಾಯಕರು ಕರೆ ಮಾಡಿದಾಗ ವಾಪಸ್ ಮಾಡುವ ಪರಿಪಾಠ ನನ್ನದು. ಬೆಂಗಳೂರಿಗೆ ಹೋದ ಬಳಿಕ ಸದಾನಂದಗೌಡರನ್ನು ವೈಯಕ್ತಿಕವಾಗಿ ಭೇಟಿ ಮಾಡುವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕರೆಯುವುದು ಬೇಡ ಎಂಬ ಸಲಹೆ ಬಂದಿದೆ. ಈ ಬಗ್ಗೆ ನನ್ನ ಅಭಿಪ್ರಾಯ ತಿಳಿಸಿದ್ದೇನೆ. ಅಂತಿಮವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಅವರು ಎಲ್ಲರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಿ ಎಂದು ವಿಜಯೇಂದ್ರ ತಿಳಿಸಿದರು.
‘ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಕೆಲವು ಶಾಸಕರು ಅಡ್ಡ ಮತದಾನ ಮಾಡಿ ವಿಪ್ ಉಲ್ಲಂಘಿಸಿದ ಬಗ್ಗೆ ಸವಿಸ್ತಾರವಾಗಿ ಮಾಹಿತಿಯನ್ನು ರಾಷ್ಟ್ರೀಯಾಧ್ಯಕ್ಷ ನಿತಿನ್ ನಬೀನ್ ಅವರ ಗಮನಕ್ಕೆ ತಂದಿದ್ದೇವೆ. ರಾಷ್ಟ್ರೀಯಾಧ್ಯಕ್ಷರಿಗೂ ಅವರದೇ ಆದ ಮಾಹಿತಿ ಇತ್ತು. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ದ್ರೋಹ ಎಸಗಿರುವವರ ವಿರುದ್ಧ ಕಠಿಣ ನಿರ್ಣಯ ಮಾಡಲೇಬೇಕಾಗುತ್ತದೆ’
-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
‘ಅಡ್ಡ ಮತದಾನ ಸಂಬಂಧ ಅಂಕಿ-ಅಂಶಗಳು ನಮ್ಮ ಪಕ್ಷದ ರಾಷ್ಟ್ರೀಯಾಧ್ಯಕ್ಷರ ಬಳಿ ಇದೆ. ಯಾರು ಈ ರೀತಿಯಲ್ಲಿ ಮಾಡಿರಬಹುದೆಂಬ ಮಾಹಿತಿಯೂ ಅವರ ಬಳಿ ಇದೆ. ನಾವು ಕೊಟ್ಟ ಮಾಹಿತಿ ಮೇರೆಗೆ ತಪ್ಪು ಮಾಡಿದವರ ವಿರುದ್ಧ ಸರಿಯಾದ ಸಮಯಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ. ಪಕ್ಷಕ್ಕೆ ದ್ರೋಹ ಬಗೆದವರಿಗೆ ಸರಿಯಾದ ಪಾಠ ಕಲಿಸುವುದಾಗಿ ಅವರು ಸ್ಪಷ್ಟವಾಗಿ ಹೇಳಿದ್ದಾರೆ’
-ಆರ್.ಅಶೋಕ್, ಪ್ರತಿಪಕ್ಷ ನಾಯಕ






