ಡಿ.7ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ

ಬೆಂಗಳೂರು : ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಡಿ.7ರಿಂದ ಹತ್ತು ದಿನಗಳ ಕಾಲ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ನಡೆಸಲು ರಾಜ್ಯ ಸರಕಾರ ಸಂಭಾವ್ಯ ನಿರ್ಧಾರ ಕೈಗೊಂಡಿದೆ.
ಈ ಸಂಬಂಧ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಅವರು ವಿಧಾನ ಪರಿಷತ್ತಿನ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಇತ್ತೀಚಿಗೆ ನಡೆದ ಸಚಿವ ಸಂಪುಟದಲ್ಲಿ ಕರ್ನಾಟಕ ವಿಧಾನಮಂಡಲದ ಉಭಯ ಸದನಗಳ ಚಳಿಗಾಲದ ಅಧಿವೇಶನವನ್ನು ಡಿ.7ರಿಂದ ಹತ್ತು ದಿನಗಳ ಕಾಲ ಸಮಾವೇಶಗೊಳಿಸಲು ಸಂಭಾವ್ಯ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹೀಗಾಗಿ, ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಅಧಿವೇಶನಕ್ಕಾಗಿ ಅಗತ್ಯ ಪೂರ್ವ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುವ ಚಳಿಗಾಲದ ಅಧಿವೇಶನವು ಉತ್ತರ ಕರ್ನಾಟಕದ ಜನರ ಸಮಸ್ಯೆಗಳು, ಪ್ರಾದೇಶಿಕ ಅಸಮತೋಲನ, ಅಭಿವೃದ್ಧಿ ಕಾಮಗಾರಿಗಳು ಹಾಗೂ ಮೂಲಸೌಕರ್ಯಗಳ ಕುರಿತು ಚರ್ಚಿಸಲು ಮಹತ್ವದ ವೇದಿಕೆಯಾಗಲಿದೆ. ಉತ್ತರ ಕರ್ನಾಟಕದ ಹಲವು ಜಿಲ್ಲೆಗಳು ಎದುರಿಸುತ್ತಿರುವ ನೀರಾವರಿ, ಕೃಷಿ, ಉದ್ಯೋಗ, ಕೈಗಾರಿಕೆ, ಶಿಕ್ಷಣ, ಆರೋಗ್ಯ, ರಸ್ತೆ ಸಂಪರ್ಕ, ಕುಡಿಯುವ ನೀರು ಸೇರಿದಂತೆ ವಿವಿಧ ಸಮಸ್ಯೆಗಳು ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪವಾಗುವ ನಿರೀಕ್ಷೆಯಿದೆ. ಈ ಭಾಗದ ಜನರ ಬಹುದಿನಗಳ ಬೇಡಿಕೆಗಳು ಹಾಗೂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಜನಪ್ರತಿನಿಧಿಗಳಿಗೆ ಅವಕಾಶ ದೊರೆಯಲಿದೆ.






