ದೇಶದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಗಳಲ್ಲಿ ಡಿ.ಕೆ. ಶಿವಕುಮಾರ್ ಗೆ ಅಗ್ರಸ್ಥಾನ

Photo : x@DKShivakumar
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಒಟ್ಟು ಘೋಷಿತ ಆಸ್ತಿ 1,413 ಕೋಟಿ ರೂ.ಗಳಾಗಿದ್ದು, ಅವರು ಇದೀಗ ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಹಿಂದಿ ಹೃದಯಭಾಗದ ರಾಜ್ಯಗಳ 10 ಮುಖ್ಯಮಂತ್ರಿಗಳ ಒಟ್ಟು ಸಂಪತ್ತನ್ನೂ ಮೀರಿದ ಸಂಪತ್ತನ್ನು ಅವರು ಹೊಂದಿರುವುದಾಗಿ ಇತ್ತೀಚೆಗಿನ ಚುನಾವಣಾ ಅಫಿಡವಿಟ್ ಗಳ ವಿವರಗಳು ತಿಳಿಸಿವೆ.
2023ರ ಚುನಾವಣಾ ಅಫಿಡವಿಟ್ ನಲ್ಲಿ ಕೊನೆಯದಾಗಿ ಘೋಷಿಸಲಾದ ಡಿ.ಕೆ. ಶಿವಕುಮಾರ್ ಅವರು ಒಟ್ಟು ನಿವ್ವಳ ಮೌಲ್ಯವು ಕೃಷಿ, ವಸತಿ ಮತ್ತು ವಾಣಿಜ್ಯ ಭೂಮಿಯ ಮೌಲ್ಯದಿಂದಾಗಿ ಈಗ ಹೆಚ್ಚಾಗಿದೆ. ಇದರಲ್ಲಿ ರಾಮನಗರ ಎಂದು ಮೊದಲು ಕರೆಯಲಾಗುತ್ತಿದ್ದ ಬೆಂಗಳೂರು ದಕ್ಷಿಣದ ಭೂಮಿಗಳೂ ಸೇರಿವೆ.
ದಕ್ಷಿಣ ಭಾರತದ ಮುಖ್ಯಮಂತ್ರಿಗಳ ಘೋಷಿತ ಆಸ್ತಿಗಳು:
► ಡಿ.ಕೆ. ಶಿವಕುಮಾರ್- 1413 ಕೋಟಿ ರೂ.
► ಎನ್. ಚಂದ್ರಬಾಬು ನಾಯ್ಡು- 931 ಕೋಟಿ ರೂ.
► ಜೋಸೆಫ್ ವಿಜಯ್- 648 ಕೋಟಿ ರೂ.
► ರೇವಂತ್ ರೆಡ್ಡಿ- 30 ಕೋಟಿ ರೂ.
► ವಿಡಿ ಸತೀಶನ್ – 6.6 ಕೋಟಿ ರೂ.
ಹಿಂದಿ ಹೃದಯಭಾಗದ ಮುಖ್ಯಮಂತ್ರಿಗಳು:
► ಡಾ. ಮೋಹನ್ ಯಾದವ್ – 42 ಕೋಟಿ ರೂ.
► ಹೇಮಂತ್ ಸೊರೆನ್- 25 ಕೋಟಿ ರೂ.
► ಸಾಮ್ರಾಟ್ ಚೌಧರಿ– 11 ಕೋಟಿ ರೂ.
► ಸುಖವೀರ್ ಸಿಂಗ್ ಸುಖು – 7.81 ಕೋಟಿ ರೂ.
► ನಯಾಬ್ ಸಿಂಗ್ ಸೈನಿ– 5.8 ಕೋಟಿ ರೂ.
► ರೇಖಾ ಗುಪ್ತಾ– 5 ಕೋಟಿ ರೂ.
► ವಿಷ್ಣು ಡಿಯೊ ಸಾಯಿ– 3.8 ಕೋಟಿ ರೂ.
► ಪುಷ್ಕರ್ ಸಿಂಗ್ ಧಾಮಿ- 3.4 ಕೋಟಿ ರೂ.
► ಆದಿತ್ಯನಾಥ್- 1.54 ಕೋಟಿ ರೂ.
► ಬಜನ್ ಲಾಲ್ ಶರ್ಮಾ- 1.46 ಕೋಟಿ ರೂ.
ಅಫಿಡವಿಟ್ ಗಳ ಪ್ರಕಾರ ಡಿ.ಕೆ. ಶಿವಕುಮಾರ್ ಅವರ ನಂತರದ ಸ್ಥಾನದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರಿದ್ದಾರೆ. ತೃತೀಯ ಸ್ಥಾನದಲ್ಲಿ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರಿದ್ದಾರೆ.
ಅಸೋಸಿಯೇಶನ್ ಆಫ್ ಡೆಮಾಕ್ರೆಟಿಕ್ ರಿಫಾರ್ಮ್ಸ್ (ADR) ಮಾಡಿರುವ ಅಫಿಡವಿಟ್ ಗಳ ವಿಶ್ಲೇಷಣೆಯ ಪ್ರಕಾರ ಹಿಂದಿ ಭಾಷಿಕ ರಾಜ್ಯಗಳಾದ ಬಿಹಾರ, ಛತ್ತೀಸ್ ಗಢ, ಹರ್ಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್, ಮಧ್ಯಪ್ರದೇಶ, ರಾಜಸ್ಥಾನ, ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ದಿಲ್ಲಿಯ 10 ಮುಖ್ಯಮಂತ್ರಿಗಳ ಒಟ್ಟು ಆಸ್ತಿ ಮೌಲ್ಯ 106.75 ಕೋಟಿ ರೂ.!
ಕಳೆದ ವರ್ಷ ಮೇ ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಮರುನಾಮಕರಣ ಮಾಡಿದೆ. ಉಪ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಈ ಯೋಜನೆಯನ್ನು ಜಾರಿಗೆ ತಂದಿದ್ದರು. ಬೆಂಗಳೂರು ದಕ್ಷಿಣ ಜಿಲ್ಲೆಯ ಕನಕಪುರ ಭಾಗವನ್ನು ಪ್ರತಿನಿಧಿಸುವ ಡಿ.ಕೆ. ಶಿವಕುಮಾರ್ ಮರುನಾಮಕರಣದ ನಂತರ ತಮ್ಮ ಕ್ಷೇತ್ರದ ಭೂಮಿ ಬೆಲೆಗಳು ಗಮನಾರ್ಹವಾಗಿ ಹೆಚ್ಚಾಗುತ್ತದೆ ಎಂದು ಮತದಾರರಿಗೆ ಭರವಸೆ ನೀಡಿದ್ದರು. ಡಿ.ಕೆ. ಶಿವಕುಮಾರ್ ಅವರು ಈ ಜಿಲ್ಲೆಯಲ್ಲಿ 71 ಎಕರೆಗೂ ಹೆಚ್ಚು ಕೃಷಿ ಮತ್ತು ಇತರ ಆಸ್ತಿಗಳನ್ನು ಹೊಂದಿದ್ದು, ಅದರ ಮೌಲ್ಯ 10.37 ಕೋಟಿ ರೂ.ಗಳಷ್ಟಿದೆ ಎಂದು ಅಫಿಡವಿಟ್ ನಲ್ಲಿ ಹೇಳಲಾಗಿದೆ. ಅವರ ಸಹೋದರ ಬೆಂಗಳೂರು ಗ್ರಾಮಾಂತರದ ಮಾಜಿ ಸಂಸದ ಡಿಕೆ ಸುರೇಶ್ ಜಿಲ್ಲೆಯಲ್ಲಿ 93.97 ಎಕರೆಗೂ ಹೆಚ್ಚು ಕೃಷಿ ಮತ್ತು ಆಸ್ತಿ ಹೊಂದಿದ್ದು, ಒಟ್ಟು ಮೌಲ್ಯ 8.35 ಕೋಟಿ ರೂ.ಗಳಷ್ಟಿದೆ ಎಂದು ಘೋಷಿಸಿದ್ದಾರೆ.
ಕೃಪೆ: deccanherald.com






