ಮಹಿಳಾ ಮೀಸಲಾತಿ ಭಿಕ್ಷೆಯಲ್ಲ ನಮ್ಮ ಹಕ್ಕು: ಎಐಸಿಸಿ ಕಾರ್ಯದರ್ಶಿ ಅಮೃತಾ ಧವನ್

ಬೆಂಗಳೂರು, ಸೆ. 25: ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿ ಎಂದು ನಾವು ಭಿಕ್ಷೆ ಕೇಳುತ್ತಿಲ್ಲ. ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ. ಮಹಿಳಾ ಮೀಸಲಾತಿ ವಿಚಾರ ತಳಮಟ್ಟದ ಸಮಸ್ಯೆಯಾಗಿ ಉಳಿದಿಲ್ಲ. ಪಂಚಾಯಿತಿಯಿಂದ ಹಿಡಿದು ಸಂಸತ್ತಿನ ತನಕ ಇದರ ಬೇರುಗಳು ಹರಡಿವೆ ಎಂದು ಎಐಸಿಸಿ ಕಾರ್ಯದರ್ಶಿ ಅಮೃತಾ ಧವನ್ ಹೇಳಿದರು.
ಸೋಮವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಹಿಳೆಯರಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ದೊರೆಯಲು ಈ ಮಸೂದೆ ಸಹಾಯ ಮಾಡುತ್ತದೆ ಎಂದು ಭಾವಿಸಿದ್ದೆವು. ಆದರೆ ಅದು ಕನಸಾಗಿ ಉಳಿದಿದೆ ಎಂದರು.
ಮಹಿಳಾ ಮೀಸಲಾತಿ ಮಸೂದೆ ಮತ್ತೆ ಮುನ್ನೆಲೆಗೆ ಬಂದಿತು ಎಂದು ನಾವೆಲ್ಲ ಸಂಭ್ರಮದಿಂದ ಇದ್ದೆವು. ಆದರೆ ಆ ಸಂಭ್ರಮವನ್ನು ಬಿಜೆಪಿ ಸರಕಾರ ಕಸಿದುಕೊಂಡಿತು. ಕಳೆದ ಒಂಭತ್ತುವರೆ ವರ್ಷಗಳ ಕಾಲ ಮೌನವಾಗಿದ್ದ ಪ್ರಧಾನಿ ಮೋದಿಗೆ ದಿಢೀರ್ ಎಂದು ಮಹಿಳೆಯರ ಮೇಲೆ ಪ್ರೀತಿ ಹುಟ್ಟಲು ಕಾರಣವೇನು? ಕೇವಲ ಚುನಾವಣೆ ದೃಷ್ಟಿಯಿಂದ ಮಾತ್ರ ಈ ಕಳಕಳಿ ಹುಟ್ಟಿದೆ ಎಂದು ಅವರು ತಿಳಿಸಿದರು.
ಮೀಸಲಾತಿ ಮಸೂದೆ ಜಾರಿ ಮಾಡಿದ್ದೇವೆ ಎನ್ನುವುದು ಕಣ್ಕಟ್ಟಿನ ಸಂಗತಿ, ಏಕೆಂದರೆ ಇದು ಸರಿಯಾಗಿ ಜಾರಿಯಾಗಲು ಇನ್ನೂ 8-10 ವರ್ಷಗಳು ನಾವು ಕಾಯಬೇಕು. ಏಕೆ ಈ ಕೂಡಲೇ ಜಾರಿ ಮಾಡಲು ನಿಮಗೆ ಆಗುವುದಿಲ್ಲವೇ ಅಥವಾ ಮಹಿಳಾ ಮೀಸಲಾತಿ ಪರವಾಗಿ ಕೇವಲ ಬಾಯಿ ಮಾತಿನ ಉಪಚಾರವೇ ನಿಮ್ಮದು ಎಂದು ಅಮ್ರಿತಾ ಧವನ್ ಪ್ರಶ್ನಿಸಿದರು.
ಇಡೀ ಮೀಸಲಾತಿ ಮಸೂದೆ ಅನೇಕ ದೌರ್ಬಲ್ಯಗಳಿಂದ ಕೂಡಿದೆ. ಯಾವ ಮಹಿಳೆಯರಿಗೆ ಇದರ ಉಪಯೋಗ ಸಿಗುತ್ತದೆ, ಯಾವಾಗಿನಿಂದ ಎನ್ನುವ ಸ್ಪಷ್ಟತೆ ಇಲ್ಲ. ಜನಗಣತಿ ಹಾಗೂ ಕ್ಷೇತ್ರ ಪುನರ್‍ವಿಂಗಣೆ ಆದ ನಂತರ ಮಸೂದೆ ಜಾರಿಗೆ ಬರುತ್ತದೆ ಎಂದು ಹೇಳಲಾಗಿದೆ. ಮಹಿಳಾ ಮೀಸಲಾತಿ ಎನ್ನುವ ಪದಗಳನ್ನು ಹೇಳುವ ಮೂಲಕ ಕೇವಲ ಕಣ್ಣೊರೆಸುವ ತಂತ್ರ ಮಾಡಿದ್ದಾರೆ ಪ್ರಧಾನಿ ಮೋದಿ ಎಂದು ಅವರು ಆರೋಪಿಸಿದರು.
ಬಿಜೆಪಿಯ ಪ್ರಮುಖ ಹುದ್ದೆಗಳಲ್ಲಿ ಒಬ್ಬರೂ ಮಹಿಳೆಯರಿಲ್ಲ. ದೊಡ್ಡ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರ ಹುದ್ದೆಗೆ ಮಹಿಳೆಯರು ಸಿಗಲಿಲ್ಲವೇ? ಮಹಿಳಾ ಮೋರ್ಚಕ್ಕೂ ಪುರುಷರನ್ನೆ ಅಧ್ಯಕರನ್ನಾಗಿ ಕೂರಿಸಿದ್ದಾರೆ. ಆರೆಸ್ಸೆಸ್ ಸೇರಿದಂತೆ ಇತರೇ ಬಿಜೆಪಿ ಸೋದರ ಸಂಘಟನೆಗಳು ಮಹಿಯರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಿಯೆ ಇಲ್ಲ ಎಂದು ಅಮ್ರಿತಾ ಧವನ್ ದೂರಿದರು.
ಕಾಂಗ್ರೆಸ್ ಪಕ್ಷ ಇದುವರೆಗೂ 5 ಜನ ಮಹಿಳೆಯರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಮೊದಲ ಮಹಿಳಾ ರಾಜ್ಯಪಾಲರನ್ನಾಗಿ ಸರೋಜಿನಿ ನಾಯ್ಡು, ಮೊದಲ ಮುಖ್ಯಮಂತ್ರಿಯಾಗಿ ಸುಚೇತ ಕೃಪಲಾನಿ, ಮೀರಾ ಕುಮಾರಿ ಅವರನ್ನು ಮೊದಲ ಮಹಿಳಾ ಸಭಾಪತಿಯಾಗಿ, ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿಗಳನ್ನಾಗಿ ಮಾಡಿದ ಹೆಗ್ಗಳಿಕೆ ಕಾಂಗ್ರೆಸ್ ಪಕ್ಷದ್ದು ಎಂದು ಅವರು ಸ್ಮರಿಸಿದರು.
16 ರಾಜ್ಯಗಳಲ್ಲಿ ಅಧಿಕಾರದಲ್ಲಿದೆ ಆದರೆ ಮಹಿಳೆಯರಿಗೆ ಒಂದೇ ಒಂದು ಉನ್ನತ ಸ್ಥಾನಗಳಿಲ್ಲ. ಮಹಿಳಾ ಮೀಸಲಾತಿಯ ಕಲ್ಪನೆ ಬಂದಿದ್ದೆ ಕಾಂಗ್ರೆಸ್ ಪಕ್ಷದಿಂದ, 1989ರಲ್ಲಿ ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರ ಕನಸಿನ ಕೂಸು. ಸ್ಥಳೀಯ ಸಂಸ್ಥೆಗಳಲ್ಲಿ ಧೈರ್ಯದಿಂದ ಮಹಿಳಾ ಮೀಸಲಾತಿ ತಂದವರು. ಮಸೂದೆ ಜಾರಿಯಾಗಿ ಕೇವಲ ಮೂರೆ ವರ್ಷಗಳಲ್ಲಿ ಅನುμÁ್ಠನಕ್ಕೆ ಬಂದಿತು ಎಂದು ಅವರು ಹೇಳಿದರು.
ಮನಮೋಹನ್ ಸಿಂಗ್ ಯುಪಿಎ ಅವಧಿಯಲ್ಲಿ ಪ್ರಧಾನಿಯಾಗಿದ್ದಾಗ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಪಾಸ್ ಮಾಡಿಸಿದ್ದರು. ಆದರೆ ಈಗ ಅಧಿಕಾರದಲ್ಲಿ ಕುಳಿತಿರುವ ಬಿಜೆಪಿಯ ಕುತಂತ್ರದಿಂದ ಅಂದು ಲೋಕಸಭೆಯಲ್ಲಿ ಜಾರಿಯಾಗಲಿಲ್ಲ. ಇಂತಹವರು ಈಗ ಸಮಾನತೆಯ ಬಗ್ಗೆ ಮಾತನಾಡುತ್ತಾರೆ ಎಂದು ಅಮ್ರಿತಾ ಧವನ್ ಕಿಡಿಗಾರಿದರು.
ಪ್ರಧಾನಿ ಮೋದಿಗೆ ಮೂರು ಪ್ರಶ್ನೆ: ‘ಪ್ರಧಾನಿ ಮೋದಿ ಅವರೇ ಮಹಿಳೆಯರು ದಡ್ಡರಲ್ಲ, ನಿಮ್ಮ ಕುತಂತ್ರಗಳನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ನಿಮಗೆ ಮೂರು ಪ್ರಶ್ನೆಗಳನ್ನು ಕೇಳಲು ಇಚ್ಚಿಸುತ್ತೇನೆ. ಯಾವಾಗ ಜನಗಣತಿ ಮತ್ತು ಕ್ಷೇತ್ರ ಪುನರ್‍ವಿಂಗಡಣೆ ಮಾಡುತ್ತೀರಿ? ಹಿಂದುಳಿದ ವರ್ಗಗಳಿಗೆ ನಿಮ್ಮ ಮೀಸಲಾತಿ ಮಸೂದೆಯಲ್ಲಿ ಜಾಗವಿಲ್ಲವೇ? ಎಸ್ಸಿ-ಎಸ್ಟಿ ಮಹಿಳೆಯರಿಗೆ ಒಳ ಮೀಸಲಾತಿ ನೀಡುವ ಉದ್ದೇಶ ನಿಮಗೆ ಇಲ್ಲವೇ ಅಥವಾ ಜಾಣ ಕುರುಡೆ?’ ಎಂದು ಅಮ್ರಿತಾ ಧವನ್ ಪ್ರಶ್ನಿಸಿದರು.







