ಕನ್ನಡದಲ್ಲಿ ಬರೆಯುವುದೆಂದರೆ ಬ್ರಹ್ಮಾಂಡದ ವಿಸ್ಮಯ ಮತ್ತು ಭೂಮಿಯ ಜ್ಞಾನದ ಪರಂಪರೆ ಪಡೆಯುವುದು : ಬಾನು ಮುಷ್ತಾಕ್
ಇಂಟರ್ ನ್ಯಾಷನಲ್ ಬೂಕರ್ ಪಡೆದ ಬಾನು ಮುಷ್ತಾಕ್ ಮಾಡಿದ ಭಾಷಣದ ಪೂರ್ಣ ಪಾಠ

ಲಂಡನ್ ನಲ್ಲಿ ನಡೆದ ಬೂಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಯೊಂದಿಗೆ ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ ಸಂಭ್ರಮ | Photo : AP
ಲಂಡನ್ ನಲ್ಲಿ ಮಂಗಳವಾರ ತಡರಾತ್ರಿ ನಡೆದ ಸಮಾರಂಭದಲ್ಲಿ ತಮ್ಮ ‘ಹಸೀನಾ ಮತ್ತು ಇತರ ಕತೆಗಳು’ ಕಥಾಸಂಕಲನದ ಇಂಗ್ಲಿಷ್ ಅನುವಾದಿತ ‘ಹಾರ್ಟ್ ಲ್ಯಾಂಪ್’ ಕೃತಿಗೆ ಪ್ರತಿಷ್ಠಿತ ಇಂಟರ್ ನ್ಯಾಷನಲ್ ಬೂಕರ್ ಪ್ರಶಸ್ತಿ ಪಡೆದ ಖ್ಯಾತ ಲೇಖಕಿ ಬಾನು ಮುಷ್ತಾಕ್ ಅವರು ಬಳಿಕ ಮಾಡಿದ ಭಾಷಣದ ಪೂರ್ಣಪಾಠ ಇಲ್ಲಿದೆ :
ಶುಭ ಸಂಜೆ,
ಗೌರವಾನ್ವಿತ ತೀರ್ಪುಗಾರರೇ, ಸಹ ಲೇಖಕರೇ, ಮತ್ತು ಪ್ರಪಂಚದಾದ್ಯಂತದ ಪ್ರೀತಿಯ ಓದುಗರೇ,
ನನ್ನದೇ ಸಂಸ್ಕೃತಿಯ ಒಂದು ಮಾತನ್ನು ಎರವಲು ಪಡೆದು ಹೇಳುವುದಾದರೆ,
ಈ ಕ್ಷಣವು ಸಾವಿರಾರು ಮಿಂಚುಹುಳುಗಳು ಒಂದೇ ಆಕಾಶದಲ್ಲಿ ಬೆಳಕನ್ನು ಹರಡಿದಂತೆ ಭಾಸವಾಗುತ್ತಿದೆ - ಸಂಕ್ಷಿಪ್ತ, ಅದ್ಭುತ, ಮತ್ತು ಸಂಪೂರ್ಣವಾಗಿ ಸಾಮೂಹಿಕ.
ಈ ಅಸಾಮಾನ್ಯ ಅಂತಿಮ ಸ್ಪರ್ಧಿಗಳ ನಡುವೆ ನಿಲ್ಲುವುದೇ ನನಗೆ ದೊಡ್ಡ ಗೌರವ.
ಈ ಕ್ಷಣವನ್ನು ನಾನು ಎಂದಿಗೂ ಮರೆಯುವುದಿಲ್ಲ, ಮತ್ತು ಈ ಮಹಾನ್ ಗೌರವವನ್ನು ನಾನು ಒಬ್ಬ ವ್ಯಕ್ತಿಯಾಗಿ ಸ್ವೀಕರಿಸುತ್ತಿಲ್ಲ, ಬದಲಾಗಿ ಅನೇಕರೊಂದಿಗೆ ಸೇರಿ ಎತ್ತಿದ ಧ್ವನಿಯಾಗಿ ಸ್ವೀಕರಿಸುತ್ತಿದ್ದೇನೆ. ನಾನು ಸಂತೋಷವಾಗಿದ್ದೇನೆ - ನನಗಾಗಿ ಮತ್ತು ವೈವಿಧ್ಯತೆ ಹಾಗೂ ಒಳಗೊಳ್ಳುವಿಕೆಯಿಂದ ತುಂಬಿರುವ ಇಡೀ ಜಗತ್ತಿಗಾಗಿ.
ನಾನು ನನ್ನ ಅನುವಾದಕಿ ದೀಪಾ ಭಾಸ್ತಿಯವರಿಗೂ ಕೃತಜ್ಞಳಾಗಿದ್ದೇನೆ. ಇದು ಕೇವಲ ವೈಯಕ್ತಿಕ ಸಾಧನೆಯಲ್ಲ; ಇದು ನಾವು, ವ್ಯಕ್ತಿಗಳಾಗಿ ಮತ್ತು ಜಾಗತಿಕ ಸಮುದಾಯವಾಗಿ, ವೈವಿಧ್ಯತೆಯನ್ನು ಅಪ್ಪಿಕೊಂಡಾಗ, ನಮ್ಮ ಭಿನ್ನತೆಗಳನ್ನು ಸ್ವೀಕರಿಸಿದಾಗ, ಮತ್ತು ಒಬ್ಬರಿಗೊಬ್ಬರು ಜೊತೆಗೂಡಿದಾಗ ಅಭಿವೃದ್ಧಿ ಸಾಧಿಸಬಹುದು ಎಂಬುದರ ದೃಢೀಕರಣವಾಗಿದೆ. ಒಟ್ಟಾಗಿ, ನಾವು ಪ್ರತಿಯೊಬ್ಬರ ಧ್ವನಿಯೂ ಕೇಳಲ್ಪಡುವ, ಪ್ರತಿಯೊಂದು ಕಥೆಯೂ ಮುಖ್ಯವಾಗುವ, ಮತ್ತು ಪ್ರತಿಯೊಬ್ಬ ವ್ಯಕ್ತಿಯನ್ನೂ ಸೇರಿಸಿಕೊಳ್ಳುವ ಜಗತ್ತನ್ನು ಸೃಷ್ಟಿಸುತ್ತೇವೆ.
ಮೊದಲಿಗೆ, ಬೂಕರ್ ಪ್ರಶಸ್ತಿ ಸಮಿತಿಗೆ - ಪ್ರಪಂಚಗಳನ್ನು ಬೆಸೆಯಲು ಧೈರ್ಯಮಾಡುವ ಕಥೆಗಳನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು.
ನನ್ನ ದಣಿವರಿಯದ ತಂಡಕ್ಕೆ, ನನ್ನ ದೂರದೃಷ್ಟಿಯ ಸಾಹಿತ್ಯಿಕ ಏಜೆಂಟ್, ಈ ಪುಸ್ತಕಕ್ಕೆ ಹೃದಯ ಬಡಿತ ಬರುವ ಮೊದಲೇ ಇದರಲ್ಲಿ ನಂಬಿಕೆ ಇಟ್ಟಿ ಕನಿಷ್ಕ ಗುಪ್ತಾ, ; ನನ್ನ ಅನುವಾದಕಿ ದೀಪಾ ಭಾಸ್ತಿಗೆ, ನನ್ನ ಮಾತುಗಳನ್ನು ತಮ್ಮದಾಗಿಸಿಕೊಂಡಿದ್ದೀರಿ; ನನ್ನ ಪ್ರಕಾಶಕರಿಗೆ, ವಿಶೇಷವಾಗಿ ಪೆಂಗ್ವಿನ್ ರಾಂಡಮ್ ಹೌಸ್ ಮತ್ತು ಅದರ್ ಸ್ಟೋರೀಸ್ , ತಾರಾ ಮತ್ತು ಸ್ಟೀಫನ್ - ನಾವು ಭಾಷೆಗಳು ಮತ್ತು ಗಡಿಗಳನ್ನು ದಾಟಿ ಸಾಗಿದಾಗ, ಇದು ನಿಮ್ಮ ವಿಜಯವೂ ಹೌದು.
ನನ್ನ ಕುಟುಂಬ, ಸ್ನೇಹಿತರು, ಮತ್ತು ಓದುಗರಿಗೆ ನಿಮಗೂ ಧನ್ಯವಾದಗಳು - ನೀವು ನನ್ನ ಕಥೆಗಳು ಬೆಳೆಯುವ ಮಣ್ಣು.
ಈ ಪುಸ್ತಕವು ಯಾವುದೇ ಕಥೆಯು ಸ್ಥಳೀಯವಲ್ಲ ಎಂಬ ಕಲ್ಪನೆಗೆ ನನ್ನ ಪ್ರೇಮ ಪತ್ರ. ನನ್ನ ಹಳ್ಳಿಯ ಆಲದ ಮರದ ಕೆಳಗೆ ಹುಟ್ಟಿದ ಕಥೆಯೊಂದು ಇಂದು ರಾತ್ರಿ ಈ ವೇದಿಕೆಯವರೆಗೆ ನೆರಳು ಬೀರಬಲ್ಲದು.
ನನ್ನೊಂದಿಗೆ ಈ ಪಯಣದಲ್ಲಿ ಸಾಗಿದ ಪ್ರತಿಯೊಬ್ಬರಿಗೂ - ನೀವು ಕನ್ನಡ ಭಾಷೆಯನ್ನು ಹಂಚಿಕೊಂಡ ಮನೆಯನ್ನಾಗಿಸಿದ್ದೀರಿ. ಇದು ಸ್ಥಿತಿಸ್ಥಾಪಕತ್ವ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಹಾಡುವ ಭಾಷೆ. ಕನ್ನಡದಲ್ಲಿ ಬರೆಯುವುದೆಂದರೆ ಬ್ರಹ್ಮಾಂಡದ ವಿಸ್ಮಯ ಮತ್ತು ಭೂಮಿಯ ಜ್ಞಾನದ ಪರಂಪರೆಯನ್ನು ಪಡೆದುಕೊಳ್ಳುವುದು.
ಯಾವುದೇ ಕಥೆಯು ಎಂದಿಗೂ ಚಿಕ್ಕದಲ್ಲ ಎಂಬ ನಂಬಿಕೆಯಿಂದ ಈ ಪುಸ್ತಕ ಹುಟ್ಟಿದೆ. ಮಾನವ ಅನುಭವದ ವಸ್ತ್ರದಲ್ಲಿ, ಪ್ರತಿಯೊಂದು ದಾರವೂ ಇಡೀ ವಸ್ತ್ರದ ಭಾರವನ್ನು ಹೊತ್ತಿರುತ್ತದೆ.
ನಮ್ಮನ್ನು ವಿಭಜಿಸಲು ಪ್ರಯತ್ನಿಸುವ ಜಗತ್ತಿನಲ್ಲಿ, ಸಾಹಿತ್ಯವು ನಾವು ಪರಸ್ಪರರ ಮನಸ್ಸಿನಲ್ಲಿ, ಕೆಲವೇ ಪುಟಗಳಿಗಾದರೂ, ಒಟ್ಟಿಗೆ ಸಹಬಾಳ್ವೆ ಮಾಡಬಹುದಾದ ಕೊನೆಯ ಪವಿತ್ರ ಸ್ಥಳಗಳಲ್ಲಿ ಒಂದಾಗಿ ಉಳಿದಿದೆ.
ತಮ್ಮ ಸಮಯವನ್ನು ನನ್ನನ್ನು ನಂಬಿ ಒಪ್ಪಿಸಿದ ಪ್ರತಿಯೊಬ್ಬ ಓದುಗರಿಗೂ - ನನ್ನ ಮಾತುಗಳನ್ನು ನಿಮ್ಮ ಹೃದಯದೊಳಗೆ ಅಲೆಯಲು ಬಿಟ್ಟಿದ್ದಕ್ಕಾಗಿ ಧನ್ಯವಾದಗಳು.
ಇಂದು ರಾತ್ರಿ ಒಂದು ಅಂತ್ಯವಲ್ಲ - ಇದು ಮುಂದಕ್ಕೆ ಸಾಗುವ ದೀವಟಿಗೆ. ಇದು ಕೇಳದ ಮೂಲೆಗಳಿಂದ ಹೆಚ್ಚಿನ ಕಥೆಗಳಿಗೆ, ಗಡಿಗಳನ್ನು ಮೀರುವ ಹೆಚ್ಚಿನ ಅನುವಾದಗಳಿಗೆ, ಮತ್ತು ಬ್ರಹ್ಮಾಂಡವು ಪ್ರತಿಯೊಂದು ಕಣ್ಣಿನೊಳಗೆ ಸರಿಹೊಂದುತ್ತದೆ ಎಂದು ನಮಗೆ ನೆನಪಿಸುವ ಹೆಚ್ಚಿನ ಧ್ವನಿಗಳಿಗೆ ದಾರಿ ದೀಪವಾಗಲಿ.
ನನ್ನ ಆತ್ಮದ ಆಳದಿಂದ ನಿಮಗೆಲ್ಲರಿಗೂ ಧನ್ಯವಾದಗಳು.
ಧನ್ಯವಾದಗಳು.
ಇಂಗ್ಲೀಷ್ ನಿಂದ ಕನ್ನಡಕ್ಕೆ : ನಿಹಾಲ್ ಕುದ್ರೋಳಿ







