ತಿಪಟೂರು | ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗಿ; ವೈದ್ಯ ಶ್ರೀಧರ್ ಹೆಸರನ್ನು ʼಯಶಸ್ವಿನಿ ಟ್ರಸ್ಟ್ʼನಿಂದ ಕೈಬಿಟ್ಟ ಸರಕಾರ

ವೈದ್ಯ ಶ್ರೀಧರ್
ತಿಪಟೂರು : ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದ ಪಥ ಸಂಚಲನದಲ್ಲಿ ಗಣವೇಷ ಧರಿಸಿ ಪಾಲ್ಗೊಂಡಿದ್ದ ತುಮಕೂರು ಜಿಲ್ಲೆಯ ತಿಪಟೂರಿನ ವೈದ್ಯ ಶ್ರೀಧರ್ ಅವರ ಹೆಸರನ್ನು ಯಶಸ್ವಿನಿ ಟ್ರಸ್ಟ್ನಿಂದ ಕೈಬಿಡಲಾಗಿದೆ.
ಆರೆಸ್ಸೆಸ್ ಪಥ ಸಂಚಲನದಲ್ಲಿ ಭಾಗವಹಿಸಿದ್ದ ವೈದ್ಯರಿಗೆ ಸರಕಾರದ ಯಶಸ್ವಿನಿ ಟ್ರಸ್ಟ್ ಟ್ರಸ್ಟಿಯಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಇದಕ್ಕೆ ಕಾಂಗ್ರೆಸ್ ಪಕ್ಷದಿಂದಲೇ ಆಕ್ಷೇಪ ವ್ಯಕ್ತವಾಗಿತ್ತು. ಆ ಹಿನ್ನೆಲೆಯಲ್ಲಿ ಯಶಸ್ವಿನಿ ಟ್ರಸ್ಟ್ ನ ಟ್ರಸ್ಟಿ ಸ್ಥಾನದಿಂದ ವೈದ್ಯ ಶ್ರೀಧರ್ ಅವರ ಹೆಸರನ್ನು ಕೈಬಿಟ್ಟಿರುವ ಸಂಬಂಧ ಸರಕಾರ ಆದೇಶವನ್ನು ಹೊರಡಿಸಿದೆ.
ಆಡಳಿತಾತ್ಮಕ ದೃಷ್ಟಿಯಿಂದ ಈ ಹಿಂದಿನ ಆದೇಶವನ್ನು ಮಾರ್ಪಡಿಸಿ, ಡಾ.ಶೀಧರ್ ಅವರ ಹೆಸರನ್ನು ಕೈಬಿಡಲಾಗಿದೆ ಎಂದು ಉಲ್ಲೇಖಿಸಲಾಗಿದೆ. ಈ ಹಿಂದಿನ ಆದೇಶ ಖಂಡಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಪತ್ರ ಬರೆದಿದ್ದ ಕಾಂಗ್ರೆಸ್ ಮುಖಂಡ ಶಶಿಧರ್, ಅ.12ರಂದು ತಿಪಟೂರಿನಲ್ಲಿ ನಡೆದಿದ್ದ ಆರೆಸ್ಸೆಸ್ ಪಥಸಂಚಲನದಲ್ಲಿ ಡಾ.ಶ್ರೀಧರ್ ಗಣವೇಶ ಧರಿಸಿ ಭಾಗಿಯಾಗಿದ್ದರು ಎಂದು ಉಲ್ಲೇಖಿಸಿದ್ದರು.
ಕ್ಷಮೆಯಾಚನೆ: ತಿಪಟೂರಿನ ಶಾಸಕ ಷಡಕ್ಷರಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಈ ಪ್ರಕರಣದಿಂದ ಸಿಎಂಗೆ ಮುಜುಗರವಾಗಿದ್ದರೆ ಕ್ಷಮೆ ಕೇಳುತ್ತೇನೆ. ಡಾ.ಶ್ರೀಧರ್ ಆರೆಸ್ಸೆಸ್ನಲ್ಲಿ ಸಕ್ರಿಯವಾಗಿರುವುದು ನನಗೆ ಗೊತ್ತಿರಲಿಲ್ಲ. ಅವರ ಅಭಿಮಾನಿಗಳು ಜನರ ಸೇವೆ ಮಾಡಿದ್ದಾರೆ, ಅವಕಾಶ ನೀಡಿ ಎಂದು ಪ್ರಸ್ತಾಪ ಮಾಡಿದ್ದರು. ಹೀಗಾಗಿ ಶಿಫಾರಸು ಮಾಡಲಾಗಿತ್ತು. ಆದರೆ, ಉದ್ದೇಶಪೂರ್ವಕವಾಗಿ ಅವರನ್ನು ಬೆಂಬಲಿಸಿರಲಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
.







