ಸಿಎಂ ಸ್ಥಾನ | ತಲಾ 2 ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬುದು ವಿಪಕ್ಷದವರ ಸೃಷ್ಟಿ: ಯತೀಂದ್ರ ಸಿದ್ದರಾಮಯ್ಯ
"ಮುಡಾ ಪ್ರಕರಣದ ಗೆಲುವಿನಿಂದ ಸಿಎಂಗೆ ರಾಜಕೀಯವಾಗಿ ಶಕ್ತಿ ವೃದ್ಧಿ"

ಯತೀಂದ್ರ ಸಿದ್ದರಾಮಯ್ಯ
ಮೈಸೂರು : ಸಿದ್ಧರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿರುವುದಿಲ್ಲ ಎಂದು ಹೇಳಿದವರು ಯಾರು? ನಮ್ಮ ಪಕ್ಷದವರು ಯಾರಾದರೂ ಹೇಳಿದ್ದಾರೆಯೇ? ಎಂದು ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು.
ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ಧರಾಮಯ್ಯ 5 ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೊ ಇಲ್ಲವೊ ಎಂಬ ಚರ್ಚೆಯೇ ಸರಿಯಲ್ಲ ಎಂದು ಹೇಳಿದರು.
ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆಯಾಗಿದೆ ಎಂಬುದು ವಿರೋಧ ಪಕ್ಷದವರ ಸೃಷ್ಟಿ. ಸೆಪ್ಟಂಬರ್ ನಲ್ಲಿ ಕ್ರಾಂತಿಯಾಗಲಿದೆ ಎಂಬ ಕೆ.ಎನ್.ರಾಜಣ್ಣ ಹೇಳಿಕೆಯನ್ನು ಮುಖ್ಯಮಂತ್ರಿ ಸ್ಥಾನದ ಬಗ್ಗೆ ಅಂದು ಕೊಳ್ಳುತ್ತೀರಿ? ಬೇರೆ ಯಾವುದಾದರೂ ಕ್ರಾಂತಿಯಾಗಬಹುದು. ಅದೇನು ಎಂದು ಅವರನ್ನೇ ಕೇಳಬೇಕು ಎಂದು ಹೇಳಿದರು.
ಪಕ್ಷದ ಹೈಕಮಾಂಡ್ ಮತ್ತು ಶಾಸಕರುಗಳು ನಮ್ಮ ತಂದರ ಪರವಾಗಿದ್ದಾರೆ. ಹೀಗಿರುವಾಗ ಅವರನ್ನೇಕೆ ಕೆಳಗಿಳಿಸುತ್ತಾರೆ. ಮುಡಾ ಪ್ರಕರಣದ ಗೆಲುವಿನಿಂದ ತಂದೆಗೆ ರಾಜಕೀಯವಾಗಿ ಶಕ್ತಿ ವೃದ್ಧಿಸಿರುವುದು ನಿಜ. ಅವರನ್ನು ನೈತಿಕವಾಗಿ ಕುಗ್ಗಿಸುವ ಪ್ರಯತ್ನ ನಡೆದಿತ್ತು. ಅದೀಗ ನಿವಾರಣೆಯಾಗಿದೆ ಎಂದರು.
ಮಾಸ್ ಲೀಡರ್ ಆಗಿರುವ ಸಿದ್ದರಾಮಯ್ಯ ಅವರನ್ನು ನೈತಿಕವಾಗಿ ಕುಗ್ಗಿಸಿದರೆ ಪಕ್ಷಕ್ಕರ ಹಿನ್ನಡೆಯಾಗುತ್ತದೆ ಎಂಬುದು ವಿರೋಧ ಪಕ್ಷದವರ ಲೆಕ್ಕಾಚಾರ. ಆದರೆ ಅದೆಲ್ಲವನ್ನು ಮೀರಿ ನಾವು ನಿಲ್ಲುತ್ತಿದ್ದೇವೆ ಎಂದು ಹೇಳಿದರು.







