ʼಮತಗಳ್ಳತನʼ | ಚುನಾವಣಾ ಆಯುಕ್ತರು ಪುಡಾರಿ ರೀತಿ ಮಾತನಾಡುತ್ತಾರೆ : ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಬಿಜೆಪಿ ಮತಗಳ್ಳತನದ ಮೂಲಕ ಅಧಿಕಾರಕ್ಕೆ ಬಂದಿರುವುದನ್ನು ನಮ್ಮ ನಾಯಕ ರಾಹುಲ್ ಗಾಂಧಿ ಸಾಕ್ಷಿ ಸಮೇತ ತೋರಿಸಿದರೂ ಕ್ರಮ ಕೈಗೊಳ್ಳದೆ ಕೇಂದ್ರ ಚುನಾವಣಾ ಆಯುಕ್ತರು ಪುಡಾರಿ ರೀತಿ ಮಾತನಾಡುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ವರುಣಾ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಗಡೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ನಂಜನಗೂಡು ತಾಲೂಕು ಬಿಳಿಗೆರೆ ಗ್ರಾಮದಲ್ಲಿ ಮಂಗಳವಾರ ನಡೆದ ʼವೋಟ್ ಚೋರಿʼ ವಿರೋಧಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಮಾತನಾಡಿದರು.
ಅಧಿಕಾರಕ್ಕಾಗಿ ಬಿಜೆಪಿಯವರು ಎಂತಹ ನೀಚ ಕೆಲಸಕ್ಕಾದರೂ ಕೈ ಹಾಕುತ್ತಾರೆ. ಹಾಗಾಗಿ ವೋಟ್ ಚೋರಿ ಮೂಲಕ ಅಧಿಕಾರಕ್ಕೆ ಬಂದಿದ್ದಾರೆ. ಮತಗಳ್ಳತನ ಮಾಡಿರುವ ಬಗ್ಗೆ ರಾಹುಲ್ ಗಾಂಧಿಯವರು ತಮ್ಮ ತಂಡದ ಮೂಲಕ ಆರು ತಿಂಗಳು ಅಧ್ಯಯನ ನಡೆಸಿ ಸಾಕ್ಷಿ ಸಮೇತ ನೀಡಿದರೆ, ಕೇಂದ್ರ ಚುನಾವಣಾ ಆಯುಕ್ತರು ರಾಜಕೀಯ ಪಕ್ಷದ ಏಜೆಂಟ್ ರೀತಿ, ಪುಡಾರಿ ತರ ಮಾತನಾಡುತ್ತಾರೆ ಎಂದು ಹೇಳಿದರು.
ಮತಗಳ್ಳತನ ಆಗದಿದ್ದರೆ ಕೇಂದ್ರದಲ್ಲಿ ನಮ್ಮ ಒಕ್ಕೂಟದ ಪಕ್ಷವೇ ಅಧಿಕಾರಕ್ಕೆ ಬರುತ್ತಿತ್ತು ಬಿಜೆಪಿಯವರ ಈ ಮತಗಳ್ಳತನದಿಂದ ನಾವು ಸೋತಿದ್ದೇವೆ. ನಾವು ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಸಂವಿಧಾನವನ್ನೇ ಬದಲಾವಣೆ ಮಾಡಬೇಕು ಮತ್ತು ವಾಮ ಮಾರ್ಗದಿಂದ ಅಧಿಕಾರಕ್ಕೆ ಬರಬೇಕು ಎಂಬ ಉದ್ದೇಶದಿಂದ ಬಿಜೆಪಿ ಮತಗಳ್ಳತನ ಮಾಡುತ್ತಿದೆ. ಬಿಜೆಪಿ ಸೇರಿದಂತೆ ಕೋಮುವಾದಿ ಪಕ್ಷಗಳು ದೇಶದಲ್ಲಿ ಸರ್ವಾಧಿಕಾರಿ ಅಧಿಕಾರಕ್ಕೋಸ್ಕರ ಆಯೋಗದ ಮೂಲಕ ನಡೆಸುತ್ತಿರುವ ಮತಗಳ್ಳತನ ನಿಲ್ಲಬೇಕು. ಚುನಾವಣಾ ಆಯೋಗ ನಿಷ್ಪಕ್ಷಪಾತವಾಗಿ ಪಾರದರ್ಶಕವಾಗಿ ಚುನಾವಣೆಗಳನ್ನು ನಡೆಸಬೇಕೆಂಬ ಉದ್ದೇಶದಿಂದ ಜನಜಾಗೃತಿಯನ್ನು ಮೂಡಿಸಲು ಕಾಂಗ್ರೆಸ್ ದೇಶದಾದ್ಯಂತ ಮತಗಳ್ಳತನದ ವಿರುದ್ಧ ಚಳುವಳಿ ಮಾದರಿಯಲ್ಲಿ ಸಹಿ ಸಂಗ್ರಹ ಅಭಿಯಾನವನ್ನು ನಡೆಸುತ್ತಿದೆ ಎಂದು ಹೇಳಿದರು.







