ಉತ್ತರಾಧಿಕಾರಿ ಕುರಿತು ಯತೀಂದ್ರ ನೀಡಿರುವ ಹೇಳಿಕೆ ತಿರುಚಿ ಬರೆಯಲಾಗಿದೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಮುಖ್ಯಮಂತ್ರಿ ಸಿದ್ದರಾಮಯ್ಯ (File Photo)
ಬೆಂಗಳೂರು: ನನ್ನ ಉತ್ತರಾಧಿಕಾರಿ ವಿಚಾರದ ಕುರಿತು ವಿಧಾನ ಪರಿಷತ್ ಸದಸ್ಯ ಯತೀಂದ್ರ ನೀಡಿರುವ ಹೇಳಿಕೆಯನ್ನು ತಿರುಚಿ ಬರೆಯಲಾಗಿದೆ. ನಾನು ಈ ಬಗ್ಗೆ ಯತೀಂದ್ರರನ್ನು ಕೇಳಿದೆ. ಸೈದ್ಧಾಂತಿಕವಾಗಿ ಮಾತ್ರ ಮಾತನಾಡಿರುವುದಾಗಿ ತಿಳಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಣೆ ನೀಡಿದರು.
ಶುಕ್ರವಾರ ವಿಧಾನಸೌಧದಲ್ಲಿ 72ನೆ ಸಹಕಾರ ಸಪ್ತಾಹ ಆಚರಣೆ ಸಂಬಂಧ ನಡೆದ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು, ಯಾರೋ ನಿಮ್ಮಂತವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರಬಹುದು. ನಾನು ಸಹಕಾರ ಸಪ್ತಾಹದ ಕುರಿತು ಹೇಳಿದೆ, ಈಗ ನೀವು ರಾಜಣ್ಣ ಬಗ್ಗೆ ಕೇಳಲಿಲ್ಲವೇ ಹಾಗೆ ಯತೀಂದ್ರರನ್ನು ಕೇಳಿರುತ್ತಾರೆ. ಅದಕ್ಕೆ ಆತ ಅಲ್ಲಿ ಹೇಳಿರುತ್ತಾನೆ ಎಂದು ಸಮರ್ಥಿಸಿಕೊಂಡರು.
ಸಂಪುಟಕ್ಕೆ ಕೆ.ಎನ್.ರಾಜಣ್ಣ ವಾಪಸ್ ಬರುತ್ತಾರಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಈ ಸಂಬಂಧ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಹಕಾರ ಸಚಿವರಾಗಿದ್ದ ರಾಜಣ್ಣ ಈಗ ಸಂಪುಟದಲ್ಲಿ ಇಲ್ಲದೆ ಇರುವುದರಿಂದ ನಾನು ಸಹಕಾರ ಸಪ್ತಾಹ ಆಚರಣೆ ಮಾಡುತ್ತಿದ್ದೇನೆ ಎಂದರು.
‘ನಮ್ಮ ಸಮುದಾಯದ 16 ಮಂದಿ ಶಾಸಕರಿದ್ದು, ಇಬ್ಬರನ್ನು ಮಂತ್ರಿಗಿರಿಯಿಂದ ತೆಗೆದು ಹಾಕಲಾಗಿದೆ. ಆದರೆ, ಆ ಸ್ಥಾನ ತುಂಬಬೇಕು. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಇಲ್ಲವೇ ಇಲ್ಲ, ಅದನ್ನು ಹೈಕಮಾಂಡ್ ತೀರ್ಮಾನ ಮಾಡುತ್ತಾರೆ’
-ಕೆ.ಎನ್.ರಾಜಣ್ಣ, ಮಾಜಿ ಸಚಿವ







