ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನಾಪತ್ತೆ : ಶಾಸಕ ಯತ್ನಾಳ್ ಲೇವಡಿ

ಬೆಂಗಳೂರು : ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಪತ್ತೆಯಾಗಿದ್ದು, ಬಿಜೆಪಿಯಲ್ಲಿ ಕ್ರಾಂತಿಯಾಗುತ್ತದೆಯೋ ಅಥವಾ ಶಾಂತಿಯಾಗುತ್ತದೆಯೋ ಗೊತ್ತಿಲ್ಲ ಎಂದು ಬಿಜೆಪಿ ಉಚ್ಛಾಟಿತ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಇಂದಿಲ್ಲಿ ಲೇವಡಿ ಮಾಡಿದ್ದಾರೆ.
ಗುರುವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರೆಸ್ಸೆಸ್) ವಿರುದ್ಧ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮನಸೋ ಇಚ್ಛೆ ಮಾತನಾಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್ ಏಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.
ನಾಟಿ ಕೋಳಿ ತಿನ್ನುತ್ತಾರೆ: ‘ಬಿಜೆಪಿ ಮುಖಂಡರು ರಾತ್ರಿಯಾದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನೆಯಲ್ಲಿ ರಾಗಿ ಮುದ್ದೆ, ನಾಟಿ ಕೋಳಿ ತಿನ್ನುತ್ತಾರೆ. ಬೆಳಗ್ಗೆ ಸಿದ್ದರಾಮಯ್ಯ ಮನೆಯಲ್ಲಿ ತಟ್ಟೆ ಇಡ್ಲಿ ತಿನ್ನುತ್ತಿದ್ದರೆ ಬಿಜೆಪಿ ಪಕ್ಷ ಉದ್ಧಾರ ಆಗಲು ಸಾಧ್ಯವೇ?’ ಎಂದು ಅವರು ಕೇಳಿದರು.
ಆರೆಸ್ಸೆಸ್ ಪಥಸಂಚಲನದಲ್ಲಿ ಭಾಗವಹಿಸಿದ್ದ ಪಿಡಿಓ ಅಮಾನತಿಗೆ ಕೋರ್ಟ್ ತಡೆಯಾಜ್ಞೆ ನೀಡಿದೆ. ರಾಜ್ಯದಲ್ಲಿ ಅಧಿಕಾರಿಗಳು ಸಚಿವ ಪ್ರಿಯಾಂಕ್ ಖರ್ಗೆಯ ಕೈಗೊಂಬೆಯಾಗಿದ್ದಾರೆ. ಅವರ ತಂದೆ ಎಐಸಿಸಿ ಅಧ್ಯಕ್ಷರೆಂದು ಇವರು ಬರೆದ ಪತ್ರಕ್ಕೆ ಪರಿಶೀಲಿಸಿ ಎಂದು ಸಿಎಂ ಹೇಳುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇದೀಗ ಪ್ರಿಯಾಂಕ್ ಖರ್ಗೆಯ ಕೈಗೊಂಬೆಯಾಗಿದ್ದಾರೆ’ ಎಂದು ಲೇವಡಿ ಮಾಡಿದರು.







