ಮುಂಬರುವ ವಿಧಾನಸಭಾ ಚುನಾವಣೆಗೆ ಯಶವಂತಪುರದ ಬಿಜೆಪಿ ಅಭ್ಯರ್ಥಿ ಘೋಷಿಸಿದ ಯಡಿಯೂರಪ್ಪ

ಯಡಿಯೂರಪ್ಪ
ಬೆಂಗಳೂರು : ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಯಶವಂತಪುರ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ರೈತ ಮೋರ್ಚಾ ಉಪಾಧ್ಯಕ್ಷ ರುದ್ರೇಶ್ ಅವರ ಹೆಸರನ್ನು ಘೋಷಣೆ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಸೋಮವಾರ ರುದ್ರೇಶ್ ಹುಟ್ಟುಹಬ್ಬದ ಹಿನ್ನಲೆಯಲ್ಲಿ ನಗರದ ಹೊರವಲಯದಲ್ಲಿರುವ ಅವರ ನಿವಾಸಕ್ಕೆ ತೆರಳಿದ ಯಡಿಯೂರಪ್ಪ, ಮುಂದಿನ ವಿಧಾನಸಭಾ ಚುನಾವಣೆಗೆ ಯಶವಂತಪುರ ಕ್ಷೇತ್ರದಿಂದ ಎಂ. ರುದ್ರೇಶ್ ಸ್ಪರ್ಧಿಸಲಿದ್ದಾರೆ. ನಿಸ್ವಾರ್ಥ ಸೇವೆಯಿಂದ ಸಮಾಜಮುಖಿ ಕೆಲಸ ಮಾಡುವವರಿಗೆ ಯಾವಾಗಲೂ ನನ್ನ ಆಶೀರ್ವಾದ ಇರುತ್ತದೆ ಎಂದು ಪ್ರಕಟಿಸಿದರು.
‘ರುದ್ರೇಶ್ಗೆ ಕ್ಷೇತ್ರದ ಜನರ ಆಶೀರ್ವಾದ ಸಿಗುವಂತೆ ಪಕ್ಷದಿಂದ ಶ್ರಮಿಸಲಾಗುವುದು. ಶಾಸಕರಾಗಿ ರುದ್ರೇಶ್ ಆಯ್ಕೆಯಾಗುವುದುನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ’ ಎಂದು ಯಡಿಯೂರಪ್ಪ ಇದೇ ವೇಳೆ ಹೇಳಿದ್ದಾರೆ. ಇದಕ್ಕೆ ಮೈತ್ರಿ ಪಕ್ಷ ಜೆಡಿಎಸ್ ನಾಯಕರ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾವಣೆಗೆ ಮೊದಲೇ ಅಭ್ಯರ್ಥಿ ಘೋಷಣೆ ಸರಿಯಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಆ ಹಿನ್ನೆಲೆಯಲ್ಲಿ ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ‘ಯಾರು ಅಭ್ಯರ್ಥಿ ಆಗಬೇಕೆಂದು ಕಮಿಟಿ ಸಭೆಯಲ್ಲಿ ಚರ್ಚೆಯಾಗಿ ರಾಷ್ಟ್ರೀಯ ಮಟ್ಟದಲ್ಲಿ ತೀರ್ಮಾನ ಅಗುತ್ತದೆ. ಯಶವಂತಪುರ ಮಾತ್ರವಲ್ಲ, ಶಿಕಾರಿಪುರ ಸೇರಿದಂತೆ ಯಾವುದೇ ಕ್ಷೇತ್ರದ ಅಭ್ಯರ್ಥಿ ಯಾರು ಎಂದು ವರಿಷ್ಠರು ತೀರ್ಮಾನ ಮಾಡಬೇಕಾಗುತ್ತದೆ. ರುದ್ರೇಶ್ ಮೇಲಿನ ಅಭಿಮಾನದಿಂದ ಬಿಎಸ್ವೈಯವರು ಹೇಳಿರಬಹುದು’ ಎಂದು ವಿವರಣೆ ನೀಡಿದರು.







