ಯೋಗ ಭಾರತದ ಜ್ಞಾನ ಪರಂಪರೆಯ ಜಾಗತಿಕ ಕೊಡುಗೆ: ಪ್ರಧಾನಿ ಮೋದಿ
ಎಸ್-ವ್ಯಾಸ ಸುವರ್ಣ ಮಹೋತ್ಸವ, ಎಚ್.ವಿ.ಶೇಷಾದ್ರಿ ಜನ್ಮಶತಮಾನೋತ್ಸವ ಉದ್ಘಾಟನೆ

ನರೇಂದ್ರ ಮೋದಿ |Photo Credit : PTI
ಬೆಂಗಳೂರು : ಯೋಗ, ಆಯುರ್ವೇದ ಸೇರಿದಂತೆ ಭಾರತದ ಸಾಂಪ್ರದಾಯಿಕ ಜ್ಞಾನ, ಸಂಸ್ಕೃತಿ ಮತ್ತು ವಿಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವಲ್ಲಿ ಕಳೆದ 12 ವರ್ಷಗಳಲ್ಲಿ ದೇಶ ಮಹತ್ವದ ಸಾಧನೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಬೆಂಗಳೂರಿನ ಪ್ರಶಾಂತಿ ಕುಟೀರಂನಲ್ಲಿರುವ ಎಸ್-ವ್ಯಾಸ ವಿಶ್ವವಿದ್ಯಾಲಯದ ಸುವರ್ಣ ಮಹೋತ್ಸವ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ನಾಯಕ, ಲೇಖಕ ಎಚ್.ವಿ.ಶೇಷಾದ್ರಿ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
'ಎಲ್ಲರಿಗೂ ನನ್ನ ನಮಸ್ಕಾರ' ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ, ಕರ್ನಾಟಕದ ಭೂಮಿ ಶತಮಾನಗಳಿಂದ ಯೋಗದ ಕೇಂದ್ರವಾಗಿದೆ. ಅನೇಕ ಆಚಾರ್ಯರು, ವಿದ್ವಾಂಸರು ಯೋಗ ಪರಂಪರೆಯನ್ನು ಶ್ರೀಮಂತಗೊಳಿಸಿದ್ದಾರೆ. ಯೋಗದೊಂದಿಗೆ ಕಲಾ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ ಡಾ.ರಾಜ್ಕುಮಾರ್ ಅವರ ಕೊಡುಗೆಯನ್ನು ಸ್ಮರಿಸಿದರು. ಪ್ರಶಾಂತಿ ಕುಟೀರಂನ 50 ವರ್ಷಗಳ ಸೇವೆ ಪ್ರತಿಯೊಬ್ಬ ಭಾರತೀಯನಿಗೂ ತಿಳಿಯಬೇಕಾದ ಯಶೋಗಾಥೆಯಾಗಿದೆ. ಸಾಮಾನ್ಯ ಯೋಗ ಕೇಂದ್ರವಾಗಿ ಆರಂಭಗೊಂಡ ಸಂಸ್ಥೆ ಇಂದು ದೊಡ್ಡ ಚಳವಳಿ ಮತ್ತು ಪ್ರೇರಣೆಯಾಗಿ ಬೆಳೆದಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಷ್ಟ್ರವನ್ನು ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ಯಲು ಸಮರ್ಪಣೆ, ಸಾಮರ್ಥ್ಯ ಹಾಗೂ ಶಿಸ್ತು ಹೊಂದಿರುವ ನಾಗರಿಕರ ಅಗತ್ಯವಿದೆ ಎಂಬುದನ್ನು ಎಚ್.ವಿ.ಶೇಷಾದ್ರಿ ಅವರು ಅರಿತಿದ್ದರು. ಅಂತಹ ವ್ಯಕ್ತಿಗಳನ್ನು ರೂಪಿಸುವ ಉದ್ದೇಶದಿಂದ ತಮ್ಮ ಜೀವನವನ್ನೇ ರಾಷ್ಟ್ರ ನಿರ್ಮಾಣದ ಕಾರ್ಯಕ್ಕೆ ಮುಡಿಪಾಗಿಟ್ಟಿದ್ದರು. ಸರಳ ಜೀವನ, ಅಪಾರ ಅನುಭವದ ನಡುವೆಯೂ ವಿನಮ್ರತೆ ಮತ್ತು ಹಿಂಬದಿಯಲ್ಲಿದ್ದು, ಇತರರನ್ನು ಮುನ್ನಡೆಸುವ ಗುಣ ಅವರಲ್ಲಿತ್ತು. ದೇಶಕ್ಕಾಗಿ ಜನರನ್ನು ಸಂಘಟಿಸಿದ್ದು ಅವರ ದೊಡ್ಡ ಸಾಧನೆ ಎಂದು ಹೇಳಿದರು.
ಯೋಗ ಶಿಕ್ಷಣ, ವೈಜ್ಞಾನಿಕ ಸಂಶೋಧನೆ ಮತ್ತು ಆರೋಗ್ಯ ಸೇವೆಯಲ್ಲಿ ಎಸ್-ವ್ಯಾಸ ಮಹತ್ವದ ಸಂಸ್ಥೆಯಾಗಿ ಬೆಳೆದಿದೆ. ಯೋಗದ ಜತೆಗೆ ಆಯುರ್ವೇದ, ಪ್ರಕೃತಿ ಚಿಕಿತ್ಸೆ ಹಾಗೂ ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಸಂಯೋಜಿಸಿ ಆರೋಗ್ಯ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿದೆ ಎಂದರು.
ಭಾರತದ ಪ್ರಯತ್ನದಿಂದ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ. ಕೋಟ್ಯಂತರ ಜನರು ಭಾಗವಹಿಸುತ್ತಿದ್ದು, ಅನೇಕ ದೇಶಗಳ ಶಾಲೆಗಳಿಗೂ ಯೋಗ ತಲುಪಿದೆ. ಸೌದಿ ಅರೇಬಿಯಾ ಯೋಗಕ್ಕೆ ಕ್ರೀಡಾ ಚಟುವಟಿಕೆಯ ಮಾನ್ಯತೆ ನೀಡಿರುವುದು ಮಹತ್ವದ ಬೆಳವಣಿಗೆ. ಖೇಲೋ ಇಂಡಿಯಾ ಹಾಗೂ ರಾಷ್ಟ್ರೀಯ ಕ್ರೀಡಾಕೂಟಗಳಲ್ಲೂ ಯೋಗಾಸನಕ್ಕೆ ಮಾನ್ಯತೆ ದೊರೆತಿದೆ ಎಂದು ತಿಳಿಸಿದರು.
ಆಯುರ್ವೇದ ಸಂಶೋಧನೆ, ಪೇಟೆಂಟ್ ಹಾಗೂ ಆಯುಷ್ ಉತ್ಪನ್ನಗಳ ರಫ್ತಿಗೆ ಸರ್ಕಾರ ಪ್ರೋತ್ಸಾಹ ನೀಡುತ್ತಿದೆ. ಅರಿಶಿಣದ ಮಾರುಕಟ್ಟೆ ವಿಸ್ತರಣೆಗೆ ರಾಷ್ಟ್ರೀಯ ಅರಿಶಿಣ ಮಂಡಳಿ ಸ್ಥಾಪಿಸಲಾಗಿದೆ. ಜಾಮ್ ನಗರದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಸಂಶೋಧನಾ ಕೇಂದ್ರ ಆರಂಭಿಸಿರುವುದು ಈ ಕ್ಷೇತ್ರದ ಬೆಳವಣಿಗೆಗೆ ನೆರವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಎಸ್-ವ್ಯಾಸ ಸುವರ್ಣ ಮಹೋತ್ಸವ ಆಡಳಿತ ಮಂಡಳಿ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ ಪ್ರಧಾನಿ, ಕೇರಳದ ತಿರುವನಂತಪುರದಲ್ಲಿ ಆರಂಭವಾಗಲಿರುವ ಎಸ್-ವ್ಯಾಸದ ಆಫ್-ಕ್ಯಾಂಪಸ್ಗೆ ಚಾಲನೆ ನೀಡಿದರು. ಪ್ರಶಾಂತಿ ಕುಟೀರಂ 75ನೇ ವರ್ಷಾಚರಣೆ ಆಚರಿಸುವ ವೇಳೆಗೆ ಭಾರತ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿರಲಿದೆ. ಅದಕ್ಕಾಗಿ ಈಗಿನಿಂದಲೇ ಅಗತ್ಯ ಯೋಜನೆಗಳನ್ನು ರೂಪಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕದ ರಾಜ್ಯಪಾಲೆ ಡಾ. ಸುಧಾ ಯಾದವ್, ಆರಸ್ಸೆಸ್ ಸಹಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಎಸ್-ವ್ಯಾಸ ಅಧ್ಯಕ್ಷ ಡಾ.ಎಚ್.ಆರ್. ನಾಗೇಂದ್ರ, ಉಪಾಧ್ಯಕ್ಷೆ ಡಾ.ನಾಗರತ್ನ, ಸಂಸದ ಡಾ.ಸಿ.ಎನ್. ಮಂಜುನಾಥ್, ವಿಶ್ವವಿದ್ಯಾಲಯದ ಕುಲಾಧಿಪತಿ ಎಚ್.ಆರ್. ದಯಾನಂದ ಸ್ವಾಮಿ, ಕುಲಪತಿ ಡಾ. ಮಂಜುನಾಥ್ ಹಾಗೂ ದಕ್ಷಿಣ ಕೊರಿಯಾದ ಮಿರಿಯಾಂಗ್ ನಗರದ ಮೇಯರ್ ಅಹ್ನ್ ಬ್ಯುನ್ಗ್ ಕು ಉಪಸ್ಥಿತರಿದ್ದರು.






