ವಿಶ್ವ ಯೋಗ ದಿನದಂದು ‘ಯೋಗ ಸಂಗಮ' ಕಾರ್ಯಕ್ರಮ ಆಯೋಜನೆ : ದಿನೇಶ್ ಗುಂಡೂರಾವ್
"ಏಕಕಾಲದಲ್ಲಿ ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ"

ದಿನೇಶ್ ಗುಂಡೂರಾವ್
ಬೆಂಗಳೂರು : ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ಜೂ.21ರಂದು ರಾಜ್ಯದಲ್ಲಿ ‘ಯೋಗ ಸಂಗಮ' ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಏಕಕಾಲದಲ್ಲಿ ರಾಜ್ಯಾದ್ಯಂತ 5 ಲಕ್ಷ ಜನರಿಂದ ಯೋಗಭ್ಯಾಸ ನಡೆಸಲು ರಾಜ್ಯ ಸರಕಾರ ಅನುವು ಮಾಡಿಕೊಡುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಂಗಳವಾರ ಇಲ್ಲಿನ ಆರೋಗ್ಯಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಜೂ.21ರ ಮುಂಜಾನೆ 6 ಗಂಟೆಯಿಂದ 8 ಗಂಟೆಯವರೆಗೆ 5 ಸಾವಿರ ಜನರು ವಿಧಾನಸೌಧದ ಮೆಟ್ಟಿಲುಗಳ ಎದುರು ಯೋಗಾಭ್ಯಾಸ ನಡೆಸಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಶಾಸಕರು, ಸಂಸದರು, ಕ್ರೀಡಾಪಟುಗಳು, ತಾರೆಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಮೈಸೂರಿನ ಅರಮನೆ ಆವರಣದಲ್ಲಿ ‘ಯೋಗ ಮಹಾಕುಂಭ' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಯೋಗ ದಿನಾಚರಣೆಯಂದು 15 ಸಾವಿರ ಜನರು ಯೋಗಭ್ಯಾಸ ನಡೆಸಲಿದ್ದಾರೆ. ಹೀಗೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ‘ಯೋಗ ಸಂಗಮ' ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಪ್ರತಿ ಕಾರ್ಯಕ್ರಮದಲ್ಲಿ ಕನಿಷ್ಠ 5 ಸಾವಿರ ಜನರು ಭಾಗವಹಿಸಲಿದ್ದಾರೆ. ಬೆಳಗ್ಗೆ 7 ಗಂಟೆಯಿಂದ 7.45ರವರೆಗೆ ರಾಜ್ಯದ 100 ಆರೋಗ್ಯ ಕೇಂದ್ರಗಳಲ್ಲಿ 45 ನಿಮಿಷಗಳ ಯೋಗ ಪ್ರಾತ್ಯಕ್ಷಿಕೆ ಪ್ರದರ್ಶನ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಯೋಗ ದಿನಾಚರಣೆಯ ಪ್ರಯುಕ್ತ ರಾಜ್ಯದ ಹಲವೆಡೆ ಯೋಗ ಪಾರ್ಕ್, ಯೋಗ ಧನುಷ್, ಹಸಿರು ಯೋಗ, ಯೋಗ ಮಹಾಕುಂಭ, ಯೋಗ ಸಂಯೋಗ, ಯೋಗ ಅನ್ ಪ್ಲಗ್ಸ್ ನಂತಹ ಕಾರ್ಯಕ್ರಮಗಳನ್ನು ರಾಜ್ಯದ ಆಯುಷ್ ಇಲಾಖೆಯಿಂದ ಆಯೋಜಿಸಲಾಗಿದೆ. ಹಸಿರು ಯೋಗ ಕಾರ್ಯಕ್ರಮದ ಅಡಿಯಲ್ಲಿ 1 ಲಕ್ಷ ಗಿಡಗಳನ್ನು ನಡಲಾಗುವುದು. ಅಲ್ಲದೇ ಯೋಗ ಧನಷ್ ಎಂಬ ಕಾರ್ಯಕ್ರಮದ ಅಡಿಯಲ್ಲಿ 5 ಸಾವಿರ ಶಾಲೆಗಳಲ್ಲಿ ಯೋಗ ಪ್ರೋಟೋಕಾಲ್ ಅನ್ನು ಹೇಳಿಕೊಡಲಾಗುವುದು ಎಂದು ಅವರು ತಿಳಿಸಿದರು.
ಜೂನ್ ಕೊನೆ ವಾರದಲ್ಲಿ ‘ಒಂದು ವಿಶ್ವ-ಒಂದು ಆರೋಗ್ಯದಲ್ಲಿ ಯೋಗದ ಪಾತ್ರ’ ಎಂಬ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಮೈಸೂರು ವಿಶ್ವವಿದ್ಯಾಲಯದ ವಿಜ್ಞಾನಭವನದಲ್ಲಿ ಆಯೋಜಿಸಿದ್ದು, ಇದರಲ್ಲಿ ರಾಷ್ಟ್ರೀಯ ಯೋಗ ತಜ್ಞರು ತಮ್ಮ ವಿಚಾರವನ್ನು ಮಂಡಿಸಲಿದ್ದಾರೆ. ಜುಲೈ ಮೊದಲನೆಯ ವಾರದಲ್ಲಿ ನಗರದಲ್ಲಿರುವ ನಿಮಾನ್ಸ್ ಆಸ್ಪತ್ರೆಯ ಸಭಾಂಗಣದಲ್ಲಿ ‘ಮಾನಸ ಯೋಗ’ ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಇದೇ ವೇಳೆ ಯೋಗದ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಲು ಡಿಜಿಟಲ್ ಪೋಸ್ಟರ್ ಬಿಡುಗಡೆ ಮಾಡಲಾಯಿತು. ಆಯುಷ್ ಇಲಾಖೆಯ ಆಯುಕ್ತ ವಿಪಿನ್ ಸಿಂಗ್ ಇದ್ದರು.
‘ರಾಜ್ಯದಲ್ಲಿ ಮೈಸೂರು ಜಿಲ್ಲೆಯನ್ನು ‘ಯೋಗ ಜಿಲ್ಲೆಯನ್ನಾಗಿ' ಮಾಡಲು ಈಗಾಗಲೇ ಯೋಜನೆ ರೂಪಿಸಿದ್ದು, ಈ ಬಗ್ಗೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಮೈಸೂರು ಜಿಲ್ಲೆಯ ಪ್ರತಿಯೊಂದು ಮನೆಗಳಲ್ಲಿ ಒಬ್ಬರಾದರೂ ಯೋಗಭ್ಯಾಸ ನಡೆಸುವಂತಾಗಬೇಕು ಎಂಬ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ದೇಶದಲ್ಲಿಯೇ ಪ್ರಥಮ ಬಾರಿಗೆ ಒಂದು ಜಿಲ್ಲೆಯನ್ನು ಸಂಪೂರ್ಣವಾಗಿ ಯೋಗ ಜಿಲ್ಲೆಯನ್ನಾಗಿ ರೂಪಿಸುವ ಕಾರ್ಯಕ್ಕೆ ರಾಜ್ಯ ಸರಕಾರ ಕೈ ಹಾಕಿದ್ದು, ಈ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ’
-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ







