ಯೋಗೀಶ್ ಗೌಡ ಕೊಲೆ ಪ್ರಕರಣ : ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸಿಬಿಐ ವಶಕ್ಕೆ
ಸುಪ್ರೀಂಕೋರ್ಟ್ನಿಂದ ಜಾಮೀನು ರದ್ದು ಹಿನ್ನಲೆ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶರಣು

ವಿನಯ್ ಕುಲಕರ್ಣಿ
ಬೆಂಗಳೂರು : ಯೋಗೀಶ್ ಗೌಡ ಹತ್ಯೆ ಪ್ರಕರಣದ ಆರೋಪಿ ಮಾಜಿ ಸಚಿವ, ಶಾಸಕ ವಿನಯ್ ಕುಲಕರ್ಣಿ ಇಂದು (ಶುಕ್ರವಾರ) ನ್ಯಾಯಾಲಯದ ಮುಂದೆ ಶರಣಾಗಿದ್ದಾರೆ. ಸುಪ್ರೀಂಕೋರ್ಟ್ನಿಂದ ಜಾಮೀನು ರದ್ದು ಹಿನ್ನಲೆಯಲ್ಲಿ ವಿನಯ್ ಕುಲಕರ್ಣಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶರಣಾಗಿದ್ದಾರೆ.
ಬಿಜೆಪಿ ಮುಖಂಡ ಯೋಗೀಶ್ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಮಂಜೂರು ಮಾಡಲಾಗಿದ್ದ ಜಾಮೀನನ್ನು ಇತ್ತೀಚಿಗೆ ಸುಪ್ರೀಂಕೋರ್ಟ್ ರದ್ದುಗೊಳಿಸಿತ್ತು. ಅಲ್ಲದೆ, ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯದ ಮುಂದೆ ಶರಣಾಗುವಂತೆ ಕುಲಕರ್ಣಿಗೆ ಆದೇಶ ನೀಡಿತ್ತು.
ಈ ಹಿನ್ನೆಲೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಕ್ಕೆ ವಿನಯ್ ಕುಲಕರ್ಣಿ ಹಾಜರಾಗಿದ್ದು, ನ್ಯಾಯಾಲಯ ಅವರನ್ನು ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದೆ.
ಏನಿದು ಘಟನೆ :
ಧಾರವಾಡದ ಬಿಜೆಪಿ ಮುಖಂಡ ಯೋಗೀಶ್ಗೌಡ ಕೊಲೆ ಪ್ರಕರಣದಲ್ಲಿ ಮುಖ್ಯ ಆರೋಪಿಯಾಗಿದ್ದ ವಿನಯ್ ಕುಲಕರ್ಣಿ ಅವರಿಗೆ 2021ರ ಆಗಸ್ಟ್ 11ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತ್ತು. ಕುಲಕರ್ಣಿ ಹಾಗೂ ಇನ್ನೋರ್ವ ಆರೋಪಿಯು ಪ್ರಕರಣದ ಸಾಕ್ಷಿಗಳಿಗೆ 1 ಲಕ್ಷ ರೂ.ವರೆಗೆ ಹಣದ ಅಮಿಷವೊಡ್ಡುತ್ತಿದ್ದಾರೆ. ಇದು ಷರತ್ತುಗಳ ಉಲ್ಲಂಘನೆಯಾಗಿದ್ದು ಅವರ ಜಾಮೀನನ್ನು ರದ್ದುಪಡಿಸಬೇಕೆಂದು ಕೋರಿ ಸಿಬಿಐ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು.
ಸಿಬಿಐ ಅರ್ಜಿಯನ್ನು ಪುರಸ್ಕರಿಸಿದ ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿ ಅವರ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿತ್ತು. 2016ರ ಮೇ ತಿಂಗಳಲ್ಲಿ ಯೋಗೀಶ್ ಗೌಡ ಅವರ ಕೊಲೆಯಾಗಿತ್ತು.







