Bengaluru | ಯಲಹಂಕದ ಜಗನ್ ನಿವಾಸಕ್ಕೆ ತೆರಳದಂತೆ ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ಶರ್ಮಿಳಾಗೆ ಪೊಲೀಸರ ತಡೆ
ನ್ಯಾಯಾಲಯದ ಮಧ್ಯಂತರ ತಡೆಯಾಜ್ಞೆ ಹಿನ್ನೆಲೆಯಲ್ಲಿ ಪೊಲೀಸರ ಕ್ರಮ

Photo credit : X@nabilajamal_
ಬೆಂಗಳೂರು: ಆಂಧ್ರಪ್ರದೇಶ ಕಾಂಗ್ರೆಸ್ ಮುಖ್ಯಸ್ಥೆ ವೈ.ಎಸ್. ಶರ್ಮಿಳಾ ಅವರು ತಮ್ಮ ಸಹೋದರ, ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಬೆಂಗಳೂರಿನ ವಿವಾದಿತ ಯಲಹಂಕ ನಿವಾಸಕ್ಕೆ ತೆರಳಲು ಯತ್ನಿಸಿದಾಗ ಪೊಲೀಸರು ತಡೆದಿದ್ದಾರೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಶರ್ಮಿಳಾ ಅವರನ್ನು ಪೊಲೀಸರು ತಡೆದಿದ್ದು, ಅವರು ತಮ್ಮ ತಾಯಿ ವೈ.ಎಸ್. ವಿಜಯಮ್ಮ ಹಾಗೂ ಕುಟುಂಬದ ಇತರ ಸದಸ್ಯರೊಂದಿಗೆ ನಿವಾಸದತ್ತ ತೆರಳುತ್ತಿದ್ದರು.
ನ. 21ರಂದು ದೇವನಹಳ್ಳಿ ನ್ಯಾಯಾಲಯ ನೀಡಿದ್ದ ಮಧ್ಯಂತರ ತಡೆಯಾಜ್ಞೆಯ ಹಿನ್ನೆಲೆಯಲ್ಲಿ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ನ್ಯಾಯಾಲಯದ ಆದೇಶದಂತೆ ಶರ್ಮಿಳಾ ಮತ್ತು ಅವರಿಗೆ ಸಂಬಂಧಿಸಿದ ವ್ಯಕ್ತಿಗಳು ಜಗನ್ ಅವರ ಯಲಹಂಕದ ನಿವಾಸವಿರುವ ನಿವೇಶನದೊಳಗೆ ಪ್ರವೇಶಿಸುವುದನ್ನು ಹಾಗೂ ಆಸ್ತಿಯ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದನ್ನು ನಿರ್ಬಂಧಿಸಿದೆ.
ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ ಸಹೋದರ ಮತ್ತು ಸಹೋದರಿಯ ನಡುವೆ ನಡೆಯುತ್ತಿರುವ ಕೌಟುಂಬಿಕ ವಿವಾದದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.
ಶರ್ಮಿಳಾ ಅವರ ಮಗಳ ಮದುವೆ ನ. 25ರಂದು ನಡೆಯಲಿದ್ದು, ಪ್ರಾರಂಭದಲ್ಲಿ ಬೆಂಗಳೂರಿನ ಈ ನಿವಾಸದಲ್ಲಿ ಮದುವೆ ನಡೆಸಲು ಯೋಜಿಸಲಾಗಿತ್ತು. ಆದರೆ ಜಗನ್ ರೆಡ್ಡಿ ಅವರು ಸಮ್ಮತಿ ಸೂಚಿಸದ ಬಳಿಕ ಮದುವೆಯನ್ನು ಹೈದರಾಬಾದ್ ಗೆ ಸ್ಥಳಾಂತರಿಸಲಾಗಿದೆ.






