ಕೋಗಿಲು ಅಕ್ರಮ ನಿರ್ಮಾಣ ತೆರವು ಪ್ರಕರಣ | ಜ.2ಕ್ಕೆ ಸಂತ್ರಸ್ತರಿಗೆ ಮನೆಗಳ ವಿತರಣೆ : ಸಚಿವ ಝಮೀರ್ ಅಹ್ಮದ್ ಖಾನ್

ಬೆಂಗಳೂರು : ಯಲಹಂಕ ಸಮೀಪದ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಹಿನ್ನೆಲೆಯಲ್ಲಿ ಅರ್ಹ ಸಂತ್ರಸ್ತರಿಗೆ 2026ರ ಜನವರಿ 2ಕ್ಕೆ ಮನೆ ವಿತರಣೆ ಮಾಡಲಾಗುವುದು ಎಂದು ವಸತಿ ಸಚಿವ ಬಿ.ಝಡ್. ಝಮೀರ್ ಅಹ್ಮದ್ ಖಾನ್ ಅವರು ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಬುಧವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳ ತೆರವು ಪ್ರಕರಣದ ಹಿನ್ನೆಲೆಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಹಾಗೂ ರಾಜೀವ್ ಗಾಂಧಿ ವಸತಿ ನಿಗಮ ವತಿಯಿಂದ ಪರ್ಯಾಯವಾಗಿ ಶಾಶ್ವತ ವಸತಿ ವ್ಯವಸ್ಥೆ ಮಾಡಿಕೊಡುವ ಬಗ್ಗೆ ದಾಖಲೆ ಪರಿಶೀಲನೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಈ ವಿಚಾರದಲ್ಲಿ ಅರ್ಹರಿಗೆ ಮಾತ್ರ ವಸತಿ ವ್ಯವಸ್ಥೆ ಮಾಡಿಕೊಡುವುದು ನಮ್ಮ ಸರಕಾರದ ಉದ್ದೇಶ. ಹೀಗಾಗಿ ಯಾವುದೇ ರೀತಿಯ ತರಾತುರಿ ಮಾಡದೆ ಸಮಗ್ರವಾಗಿ ದಾಖಲೆ ಪರಿಶೀಲನೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯಯವರು ಸೂಚನೆ ನೀಡಿದ್ದು, ಕಂದಾಯ ಇಲಾಖೆ ಹಾಗೂ ಗ್ರೇಟರ್ ಬೆಂಗಳೂರು ಪ್ರಾಧಿಕಾರಿದ ಅಧಿಕಾರಿಗಳು ಆ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಝಮೀರ್ ಅಹ್ಮದ್ ಮಾಹಿತಿ ನೀಡಿದ್ದಾರೆ.
ಸಂತ್ರಸ್ತರ ದಾಖಲೆ ಪರಿಶೀಲನೆ ಕಾರ್ಯದ ಹಿನ್ನೆಲೆಯಲ್ಲಿ 2026ರ ಜನವರಿ ಒಂದರಂದು ಉದ್ದೇಶಿಸಲಾಗಿದ್ದ ಮನೆಗಳ ವಿತರಣೆಯನ್ನು ಜನವರಿ 2ಕ್ಕೆ ಮುಂದೂಡಿಕೆ ಮಾಡಲಾಗಿದೆ. ಕೋಗಿಲು ಬಡಾವಣೆಯಲ್ಲಿ ನೆಲೆಸಿದ್ದ ಕನ್ನಡಿಗರಿಗೆ ಮಾತ್ರವೇ ವಸತಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಝಮೀರ್ ಅಹಮದ್ ಖಾನ್ ಪ್ರಕಟಣೆಯಲ್ಲಿ ವಿವರಣೆ ನೀಡಿದ್ದಾರೆ.







