ಗ್ರೀಸ್ ನಲ್ಲಿ ಪ್ರಬಲ ಭೂಕಂಪ; ತುರ್ಕಿಯಾದಲ್ಲೂ ಕಂಪಿಸಿದ ಭೂಮಿ

ಅಥೆನ್ಸ್: ರಿಕ್ಟರ್ ಮಾಪಕದಲ್ಲಿ 6.2ರಷ್ಟಿದ್ದ ಪ್ರಬಲ ಭೂಕಂಪ ಗ್ರೀಸ್ ದೊಡೆಕನೀಸ್ ದ್ವೀಪ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದೆ. ತುರ್ಕಿಯಾ ಗಡಿಯಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಯೂರೋಪಿಯನ್ ಮೆಡಿಟರೇನಿಯನ್ ಭೂಕಂಪ ಮಾಪನ ಕೇಂದ್ರ ಪ್ರಕಟಿಸಿದೆ.
ಸುಮಾರು 68 ಕಿಲೋಮೀಟರ್ ಆಳದಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಇಎಂಎಸ್ಇ ದೃಢಪಡಿಸಿದೆ.
ಏತನ್ಮಧ್ಯೆ ಮೆಡಿಟರೇನಿಯನ್ ಕರಾವಳಿ ಪಟ್ಟಣದಲ್ಲಿ ಮಂಗಳವಾರ ನಸುಕಿನ ವೇಳೆ 5.8 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ತುರ್ಕಿಯಾದ ವಿಕೋಪ ನಿರ್ವಹಣೆ ಏಜೆನ್ಸಿ ಹೇಳಿದೆ.
ಭೂಕಂಪದ ಸಂದರ್ಭದಲ್ಲಿ ಭೀತಿಯಿಂದ ಹೊರಗೆ ಓಡುವ ವೇಳೆ ಏಳು ಮಂದಿ ಗಾಯಗೊಂಡಿದ್ದಾರೆ. ಕೆಲವರು ಕಿಟಕಿ ಅಥವಾ ಬಾಲ್ಕನಿಯಿಂದ ಹಾರಿ ಅವಘಡ ಸಂಭವಿಸಿದೆ ಎಂದು ಮರ್ಮರೀಸ್ ಗವರ್ನರ್ ಇದ್ರಿ ಅಕ್ಬಿಯಿಕ್ ಹೇಳಿದ್ದಾರೆ. ಕಟ್ಟಡಗಳಿಗೆ ಗಂಭೀರವಾದ ಹಾನಿಯಾದ ಬಗ್ಗೆ ತಕ್ಷಣಕ್ಕೆ ಯಾವುದೇ ವರದಿಗಳು ಬಂದಿಲ್ಲ.
ಮೆಡಿಟರೇನಿಯನ್ ಸಮುದ್ರದಲ್ಲಿ ನಸುಕಿನ 2.17ರ ವೇಳೆಗೆ ಭೂಕಂಪ ಸಂಭವಿಸಿದ್ದು, ಗ್ರೀಕ್ ನ ರ್ಹೋಡ್ಸ್ ದ್ವೀಪ ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ತೀವ್ರತೆ ಅಧಿಕವಾಗಿತ್ತು.







