ಸುಹಾಸ್ ಶೆಟ್ಟಿ ಕೊಲೆ ಪ್ರಕರಣ; ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು: ಬಜ್ಪೆಯ ಕಿನ್ನಿಪದವಿನಲ್ಲಿ ರೌಡಿ ಶೀಟರ್ ಸುಹಾಸ್ ಶೆಟ್ಟಿಯ ಹತ್ಯೆ ನಡೆದಿರುವ ಹಿನ್ನೆಲೆಯಲ್ಲಿ, ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಅವರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವಂತಹ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೇ 2 ರಿಂದ 6ರ ವರೆಗೆ ಸೆಕ್ಷನ್ 163 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವಾಗ ಪ್ರತಿಭಟನೆಗೆ ನಿಷೇಧ ಹೇರಲಾಗಿದೆ. ಐದು ಅಥವಾ ಹೆಚ್ಚಿನ ಜನರು ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.
ಮೇ 2 ರ ಬೆಳಿಗ್ಗೆ 6 ರಿಂದ ಮೇ 6ರ ಸಂಜೆ ಬೆಳಿಗ್ಗೆ 6 ರ ವರೆಗೆ ಈ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಪ್ರಕಟನೆ ತಿಳಿಸಿದೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಕಮಿಷನರೇಟ್ ವ್ಯಾಪ್ತಿ ಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪು ಸೇರುವಂತಿಲ್ಲ. ದೊಣ್ಣೆ, ಕತ್ತಿ, ಕೋಲು, ಬಂದೂಕು, ಚಾಕು ಸೇರಿದಂತೆ ಮನುಷ್ಯರಿಗೆ ದೈಹಿಕವಾಗಿ ಹಲ್ಲೆ ಮಾಡುವಂತಹ ಯಾವುದೇ ರೀತಿಯ ಶಸ್ತ್ರಗಳನ್ನು ಒಯ್ಯುವಂತಿಲ್ಲ. ಪಟಾಕಿ ಸಿಡಿಸುವಂತಿಲ್ಲ. ಆ್ಯಸಿಡ್ ಅಥವಾ ಸ್ಫೋಟಕಗಳನ್ನು ಒಯ್ಯುವಂತಿಲ್ಲ. ವ್ಯಕ್ತಿಗಳ ಪ್ರತಿಕೃತಿ ಸುಡುವಂತಿಲ್ಲ. ಕಲ್ಲುಗಳನ್ನು ಅಥವಾ ಕ್ಷಿಪಣಿಗಳನ್ನು ಎಸೆಯುವ ಸಾಧನಗಳನ್ನು ಒಯ್ಯುವುದನ್ನು, ಶೇಖರಿಸುವುದನ್ಲನು ಅಥವಾ ತಯಾರಿಸುವುದನ್ನು ನಿಷೇಧಿಸಲಾಗಿದೆ.
ಸರ್ಕಾರಿ ಸಂಸ್ಥೆ ಅಥವಾ ಸಂಘಟನೆಗಳ ವಿರುದ್ಧ, ಕಾರ್ಯನಿರತ ಅಧಿಕಾರಿ ಅಥವಾ ಸಿಬ್ಬಂದಿಯ ವಿರುದ್ದ ನಿಂದನಾತ್ಮಕ ಘೋಷಣೆ ಕೂಗುವುದನ್ನು, ಭಾಷಣ ಮಾಡುವುದನ್ನು, ಪ್ರತಿಭಟನೆ ನಡೆಸುವುದನ್ನು, ಅವಾಚ್ಯ ಶಬ್ದ ಬಳಸುವುದನ್ನು, ಪ್ರಚೋದನಾಕಾರಿ ಭಾಷಣ ಮಾಡುವುದನ್ನು, ಗಾಯನ ಮೊದಲಾದ ಚಟುವಟಿಕೆ ನಡೆಸುವುದನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.







