Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಬಿಜೆಪಿಯ ಉರುಳಿಗೆ ಕಾಂಗ್ರೆಸ್‌ನ ಕೊರಳು?

ಬಿಜೆಪಿಯ ಉರುಳಿಗೆ ಕಾಂಗ್ರೆಸ್‌ನ ಕೊರಳು?

ಶಿವಸುಂದರ್ಶಿವಸುಂದರ್27 May 2026 12:18 PM IST
share
ಬಿಜೆಪಿಯ ಉರುಳಿಗೆ ಕಾಂಗ್ರೆಸ್‌ನ ಕೊರಳು?
ಎಸ್‌ಐಆರ್ ವಿರೋಧಿಸಲ್ಲ ಎಂದು ತೀರ್ಮಾನಿಸಿರುವ ಕಾಂಗ್ರೆಸ್!

ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕಿಂತ ಪ್ರಜಾತಂತ್ರದ ಉಳಿವನ್ನು ತನ್ನ ಗುರಿಯಾಗಿರಿಸಿಕೊಂಡಿದ್ದರೆ ಎಸ್‌ಐಆರ್ ಅನ್ನು ಸಂಪೂರ್ಣವಾಗಿ ವಿರೋಧಿಸಬೇಕು. ಅದರ ವಿರುದ್ಧ ಪ್ರಬಲ ಜನಾಂದೋಲನವನ್ನು ನಿರ್ಮಿಸಬೇಕು. ತನ್ನ ಸಂಭವನೀಯ ಮತದಾರರನ್ನು ಹೊರಗಟ್ಟಿ ತಯಾರಾಗುವ ಎಸ್‌ಐಆರ್ ಆಧರಿತ ಮತಪಟ್ಟಿಯ ಮೇಲೆ ನಡೆಸುವ ಚುನಾವಣೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸಾಂವಿಧಾನಿಕ ಸವಾಲನ್ನು ಒಡ್ಡಬೇಕು.

ಆದರೆ ಕಾಂಗ್ರೆಸ್ ಪಕ್ಷ ಮಾಡಿದ್ದೇನು?

ಕಳೆದ ಮೇ 24ರಂದು ಕರ್ನಾಟಕದಲ್ಲಿ ಪ್ರಾರಂಭವಾಗಲಿರುವ ಎಸ್‌ಐಆರ್ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ಕರ್ನಾಟಕದ ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನೂ ಒಳಗೊಂಡಂತೆ ರಾಜ್ಯದ ಸಕಲ ಮುಖಂಡರೂ ಬೆಂಗಳೂರು ಹೊರವಲಯದ ಹೋಟೆಲ್ ಒಂದರಲ್ಲಿ ಸಭೆ ಸೇರಿದ್ದರಷ್ಟೆ. ಅದರಲ್ಲಿ ಎಸ್‌ಐಆರ್ ಬಗ್ಗೆ ಸಿಕ್ಕಾಪಟ್ಟೆ ಚರ್ಚೆ ನಡೆಸಲಾಯಿತು. ಇತರ ರಾಜ್ಯಗಳಲ್ಲಿ ಅದರಲ್ಲೂ ವಿಶೇಷವಾಗಿ ಪ. ಬಂಗಾಳದಲ್ಲಿ ಅದು ಮಾಡಿರುವ ಅನಾಹುತದ ವಿವರವನ್ನೂ ಪಡೆದುಕೊಳ್ಳಲಾಯಿತು. ಅದಕ್ಕೆ ಮುಂಚೆಯೂ ಎಸ್‌ಐಆರ್ ಅನ್ನು ವಿರೋಧಿಸುತ್ತಿರುವ ಕರ್ನಾಟಕದ ಜನಸಂಘಟನೆಗಳು ಕರ್ನಾಟಕ ಸರಕಾರಕ್ಕೆ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಎಸ್‌ಐಆರ್ ಹೇಗೆ ಅಸಾಂವಿಧಾನಿಕ ಮತ್ತು ಅದನ್ನು ಭಾರತೀಯ ಸಂಸದೀಯ ವ್ಯವಸ್ಥೆಯಲ್ಲಿ ವಿರೋಧ ಪಕ್ಷಗಳ ಅಸ್ತಿತ್ವವನ್ನೇ ನಾಶಮಾಡಿ ಬಿಜೆಪಿಗೆ ಒಂದು ಶಾಶ್ವತ ಮೆಜಾರಿಟಿಯನ್ನು ಗಳಿಸಿಕೊಡಲೆಂದೇ ರೂಪಿತವಾಗಿದೆಯೆಂದು ವಿವಿಧ ಹಂತಗಳಲ್ಲಿ ಮತ್ತು ವಿವಿಧ ರೂಪಗಳಲ್ಲಿ ಮನವರಿಕೆ ಮಾಡಿಕೊಡುವ ಪ್ರಯತ್ನಗಳನ್ನು ಮಾಡಿದ್ದರು.

ಆದರೆ ನಾಗರಿಕ ಸಮಾಜದ ಈ ಎಲ್ಲಾ ಪ್ರಯತ್ನಗಳು ಹೆಚ್ಚಿನ ಪರಿಣಾಮವನ್ನು ಉಂಟು ಮಾಡಿಲ್ಲವೆಂದು ಮೇ 24ರ ಸಭೆಯ ನಂತರ ನಿಚ್ಚಳವಾಗಿದೆ. ಅದು ಆ ಸಭೆಯ ನಂತರ ಕಾಂಗ್ರೆಸ್ ಅಧ್ಯಕ್ಷರೂ ಮತ್ತು ಸರಕಾರದ ಉಪಮುಖ್ಯಮಂತ್ರಿಗಳೂ ಆಗಿರುವ ಡಿ.ಕೆ. ಶಿವಕುಮಾರ್ ಅವರು ನೀಡಿದ ಹೇಳಿಕೆಗಳಲ್ಲೂ, ಕರ್ನಾಟಕ ಕಾಂಗ್ರೆಸ್‌ನ ರಾಜ್ಯಮಟ್ಟದ ಎಸ್‌ಐಆರ್ ಉಸ್ತುವಾರಿಯೂ ಆಗಿರುವ ವಿ.ಆರ್. ಸುದರ್ಶನ್ ಅವರ ಸಂದರ್ಶನಗಳಲ್ಲೂ, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕಾಂಗ್ರೆಸ್‌ನ ಹಿರಿಯ ನಾಯಕರುಗಳ ಉಡಾಫೆೆ ಪ್ರತಿಕ್ರಿಯೆಗಳಲ್ಲೂ ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಇಂತಹ ಗಂಭೀರವಾದ ವಿಷಯದ ಸಭೆ ಕಾಂಗ್ರೆಸ್‌ನ 34 ಶಾಸಕರೇ ಗೈರು ಹಾಜರಾಗಿದ್ದದ್ದು ಒಂದು ಪಕ್ಷವಾಗಿ ಕಾಂಗ್ರೆಸ್ ಪ್ರಜಾತಂತ್ರವನ್ನು ಉಳಿಸುವುದು ಬಿಡಿ, ತನ್ನನ್ನು ತಾನು ಉಳಿಸಿಕೊಳ್ಳುವಲ್ಲೂ ಎಷ್ಟು ಗಂಭೀರವಾಗಿದೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ.

ಅದೇ ದಿನವೇ ಎಸ್‌ಐಆರ್ ದಾಳಿಯ ಸೂತ್ರಧಾರಿಯಾಗಿರುವ ಬಿಜೆಪಿಯ ಕರ್ನಾಟಕ ಘಟಕವು ತನ್ನ ಡಮ್ಮಿ ಹೊಸ ರಾಷ್ಟ್ರಾಧ್ಯಕ್ಷರ ನೇತೃತ್ವದಲ್ಲಿ ಬಿಜೆಪಿ ನಾಯಕರ ರಾಜ್ಯಮಟ್ಟದ ಸಭೆಯನ್ನೂ ನಡೆಸಿತು.

ಹೀಗಾಗಿ ಒಂದೇ ದಿನ ಪ್ರಜಾತಂತ್ರವನ್ನು ನಾಶ ಮಾಡಲು ಹೊರಟಿರುವ ಬಿಜೆಪಿ ತನ್ನ ತಯಾರಿ ಮತ್ತು ನಿಲುವನ್ನು ಪ್ರಕಟಿಸಿತು ಮತ್ತು ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ತನ್ನ ನಿಲುವು ಮತ್ತು ಕಾರ್ಯಕ್ರಮಗಳನ್ನು ಪ್ರಕಟಿಸಿತು. ಆದರೆ ಕರ್ನಾಟಕದಲ್ಲಿ ಸರಕಾರ ನಡೆಸುತ್ತಿರುವ ಕಾಂಗ್ರೆಸ್ ಪಕ್ಷದ ನಿಲುವು ಮತ್ತು ಕಾರ್ಯಕ್ರಮಗಳು ಎಸ್‌ಐಆರ್ ಸಂಚನ್ನು ಸೋಲಿಸುವ ಉದ್ದೇಶವನ್ನಿರಲಿ ಎಸ್‌ಐಆರ್ ಹುನ್ನಾರವನ್ನು ಸಂಪೂರ್ಣವಾಗಿ ಗ್ರಹಿಸಲೂ ನಿರಾಕರಿಸುವಂತಿದೆ.

ಈಗಾಗಲೇ ಎಸ್‌ಐಆರ್ ನಡೆದಿರುವ 13 ರಾಜ್ಯಗಳ ಅನುಭವಗಳು, ಸುಪ್ರೀಂ ಕೋರ್ಟ್‌ನಲ್ಲಿ ಚುನಾವಣಾ ಆಯೋಗ ಎಸ್‌ಐಆರ್ ಸಮರ್ಥನೆಯಲ್ಲಿ ಮುಂದಿಟ್ಟಿರುವ ಅಸಾಂವಿಧಾನಿಕ ಸಮರ್ಥನೆಗಳು, ಪ. ಬಂಗಾಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಚುನಾವಣಾ ಆಯೋಗ ಎಸ್‌ಐಆರ್ ಮುಸುಕಿನಲ್ಲಿ Logical Discrepancy ಹೆಸರಿನಲ್ಲಿ ಮುಸ್ಲಿಮ್ ಮತದಾರರನ್ನು ಗುರಿಯಾಗಿರಿಸಿಕೊಂಡು ನಡೆಸಿದ ಅತಿರೇಕಗಳು, ಅದಕ್ಕೆ ಸುಪ್ರೀಂ ಕೋರ್ಟ್ ಕೊಟ್ಟ ಪರವಾನಿಗೆಗಳು ಎಲ್ಲವೂ ಎಸ್‌ಐಆರ್ ಎನ್ನುವುದು ಮೋದಿ ಸರಕಾರ ಚುನಾವಣಾ ಆಯೋಗದ ಮೂಲಕ ಈ ದೇಶದ ಪ್ರಜಾತಂತ್ರದ ವಿರುದ್ಧ ನಡೆಸಿರುವ ಮಹಾ ಕುತಂತ್ರ ಎಂಬುದನ್ನು ಸ್ಪಷ್ಟಪಡಿಸಿದೆ. ಬಿಜೆಪಿಗೆ ಸಾಮಾನ್ಯವಾಗಿ ವೋಟು ಹಾಕದ ಮತದಾರರನ್ನು ಎಸ್‌ಐಆರ್ ಮೂಲಕ ಮತಪಟ್ಟಿಯಿಂದ ಮಾತ್ರವಲ್ಲದೆ ನಾಗರಿಕತ್ವದಿಂದಲೇ ಹೊರಹಾಕುವ ಫ್ಯಾಶಿಸ್ಟ್ ಸಂಚು ಎಂಬುದಕ್ಕೆ ಪ. ಬಂಗಾಳ ಪುರಾವೆಯೊದಗಿಸಿದೆ.

ಇಂತಹ ಕ್ರಮಗಳನ್ನು ಫ್ಯಾಶಿಸ್ಟ್ ಜರ್ಮನಿಯಲ್ಲಿ ಹಿಟ್ಲರ್ ಜಾರಿ ಮಾಡಿದ್ದ. ಆಗ ಕವಿ ಬ್ರೆಕ್ಟ್ ‘‘ಜನರ ಬಗ್ಗೆ ಸರಕಾರಕ್ಕೆ ಅಸಮಾಧಾನವಾಗಿದೆ. ಆದ್ದರಿಂದ ಜನರನ್ನು ವಜಾ ಮಾಡಲಾಗಿದೆ’’ ಎಂದು ವಿಡಂಬನೆ ಮಾಡಿದ್ದ. ಪ್ರಜಾತಂತ್ರದಲ್ಲಿ ಜನರು ಸರಕಾರವನ್ನು ಆಯ್ಕೆ ಮಾಡಬೇಕು. ಆದರೆ ಹೇಗೆ ಫ್ಯಾಶಿಸಂ ಕಾಲದಲ್ಲಿ ಸರಕಾರವೇ ಜನರನ್ನು ಆಯ್ಕೆ ಮಾಡುತ್ತದೆ ಎಂದು ವ್ಯಂಗ್ಯವಾಗಿ ವಾಸ್ತವದ ಕ್ರೂರತೆಯನ್ನು ನೆನಪಿಸಿದ್ದ. ಇಂದು ಭಾರತದಲ್ಲಿ ಎಸ್‌ಐಆರ್ ಮೂಲಕ ನಡೆಯುತ್ತಾ ಇರುವುದು ಇದೇ. ಎಸ್‌ಐಆರ್ ಎಂಬುದು ಬಿಜೆಪಿಗೆ ಸಂಸದೀಯ ರಾಜಕಾರಣದಲ್ಲಿ ಶಾಶ್ವತ ಮೆಜಾರಿಟಿಯನ್ನು ಒದಗಿಸಿಕೊಡುವ ಬೃಹತ್ ಹುನ್ನಾರ. ಭಾರತವನ್ನು ವಿರೋಧ ಪಕ್ಷ ಮುಕ್ತ ಮಾಡುವ ಯೋಜನೆ ಹಾಗೂ ದೀರ್ಘ ಕಾಲದಲ್ಲಿ ಬಡವರನ್ನು, ಮುಸ್ಲಿಮರನ್ನು, ದಲಿತರನ್ನು, ಆದಿವಾಸಿಗಳನ್ನು, ಟ್ರಾನ್ಸ್‌ಜೆಂಡರ್ ವ್ಯಕ್ತಿಗಳನ್ನು, ಭಾರತೀಯ ವಲಸೆ ಕಾರ್ಮಿಕರನ್ನು ಎರಡನೇ ದರ್ಜೆ ಪ್ರಜೆಗಳನ್ನಾಗಿಸಿ ಅಂಬೇಡ್ಕರ್ ಭಾರತವನ್ನು ಸಾಂವಿಧಾನಿಕವಾಗಿಯೇ ಸಾವರ್ಕರ್ ಭಾರತವಾಗಿಸಲು ಸಂಘಿ ಫ್ಯಾಶಿಸ್ಟರು ಸಂವಿಧಾನದ ವಿರುದ್ಧ ನಡೆಸಿರುವ ಬೃಹತ್ ಪ್ರತಿಕ್ರಾಂತಿ.

ಎಸ್‌ಐಆರ್ ಎಂದರೆ ಎಸ್‌ಆರ್ ಅಥವಾ ಐಆರ್ ಅಲ್ಲ

ಹಾಗೆ ನೋಡಿದರೆ ಮತಪಟ್ಟಿ ಪರಿಷ್ಕರಣೆಗೆ ಜನರು ಹೇಳಿದ ಮಾಹಿತಿಯನ್ನು ದಾಖಲಿಸಿಕೊಳ್ಳುವ ಎಸ್‌ಆರ್ (Summary Revision) ಮತ್ತು ಐಆರ್(Intensive Revision) ಎಂಬ ಎರಡು ಪ್ರಕ್ರಿಯೆಗಳನ್ನು ಮಾತ್ರ 1951ರಿಂದ ಮಾಡಿಕೊಂಡು ಬರಲಾಗುತ್ತಿದೆ. ಸ್ವಾತಂತ್ರ್ಯಾನಂತರದ ಕಳೆದ 77 ವರ್ಷಗಳಲ್ಲಿ ಜನರು ತಮ್ಮ ದಾಖಲೆಗಳನ್ನು ಕೊಟ್ಟು ನಾಗರಿಕತ್ವ ಸಾಬೀತು ಮಾಡಿಕೊಳ್ಳಬೇಕೆಂಬ ಎಸ್‌ಐಆರ್ ಎಂಬ ಒಂದು ಪ್ರಕ್ರಿಯೆ ಸಂವಿಧಾನದಲ್ಲಾಗಲೀ, 1950ರ ಪ್ರಜಾ ಪ್ರತಿನಿಧಿ ಕಾಯ್ದೆಯಲ್ಲಾಗಲೀ ಅಥವಾ 1960ರ ಮತಪಟ್ಟಿ ಪರಿಷ್ಕರಣಾ ನಿಯಮಗಳಲ್ಲಾಗಲೀ ಇಲ್ಲವೇ ಇಲ್ಲ. ಹೀಗಾಗಿ ಎಸ್‌ಐಆರ್ ಎಂಬುದು ತನಗೆ ಬೇಡದ ಮತದಾರರನ್ನು ವಜಾ ಮಾಡಲೆಂದೇ ಮೋದಿ ಸರಕಾರ ತನ್ನ ಕೈಗೊಂಬೆ ಚುನಾವಣಾ ಆಯೋಗದ ಮೂಲಕ ಪರಿಚಯಿಸಿರುವ ಫ್ಯಾಶಿಸ್ಟ್ ಪ್ರಕ್ರಿಯೆ.

ಅದಕ್ಕಾಗಿ ಬಿಜೆಪಿಗೆ ಮತಹಾಕದವರನ್ನು ವ್ಯವಸ್ಥಿತವಾಗಿ ಹೊರದಬ್ಬಿ ಹೊಸ ಮತಪಟ್ಟಿಯನ್ನು ತಯಾರಿಸಿ, ಆ ಮತಪಟ್ಟಿಯನ್ನು ಆಧರಿಸಿ ಚುನಾವಣೆಗಳನ್ನು ನಡೆಸುವುದು ಬಿಜೆಪಿಯ ತತ್‌ಕ್ಷಣದ ಯೋಜನೆ. ಹೀಗಾಗಿ ಎಸ್‌ಐಆರ್ ಯಶಸ್ವಿಯಾಗಿ ನಡೆಯುತ್ತದೆ ಎಂದರೆ ಆ ರಾಜ್ಯದಲ್ಲಿ ವಿರೋಧ ಪಕ್ಷಗಳಿಗೆ ಮತ ಹಾಕುವವರ ಸಂಖ್ಯೆ ಗಣನೀಯವಾಗಿ ಕಡಿತವಾಗಿದೆ ಎಂದರ್ಥ. ಅದಕ್ಕಾಗಿಯೇ ಎಸ್‌ಐಆರ್ ಮೂಲಕ ಮತದಾರರ ಪರಿಶೀಲನೆನ್ನಲ್ಲ, ನಾಗರಿಕತ್ವ ಪರಿಶೀಲನೆಯನ್ನು ಮಾಡಲಾಗುತ್ತಿದೆ. ಅದಕ್ಕೆ ಜನಸಾಮಾನ್ಯರು ಒದಗಿಸಲಾಗದ 11 ದಾಖಲೆಗಳಲ್ಲಿ ಒಂದನ್ನು ಕೊಡಲೇ ಬೇಕೆಂಬುದನ್ನು ಮೊತ್ತ ಮೊದಲ ಬಾರಿಗೆ ಕಡ್ಡಾಯ ಮಾಡಲಾಗಿದೆ.

ಹೀಗಾಗಿ ವಿರೋಧ ಪಕ್ಷಗಳು ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕಿಂತ ಪ್ರಜಾತಂತ್ರದ ಉಳಿವನ್ನು ತನ್ನ ಗುರಿಯಾಗಿರಿಸಿಕೊಂಡಿದ್ದರೆ ಎಸ್‌ಐಆರ್ ಅನ್ನು ಸಂಪೂರ್ಣವಾಗಿ ವಿರೋಧಿಸಬೇಕು. ಅದರ ವಿರುದ್ಧ ಪ್ರಬಲ ಜನಾಂದೋಲನವನ್ನು ನಿರ್ಮಿಸಬೇಕು. ತನ್ನ ಸಂಭವನೀಯ ಮತದಾರರನ್ನು ಹೊರಗಟ್ಟಿ ತಯಾರಾಗುವ ಎಸ್‌ಐಆರ್ ಆಧರಿತ ಮತಪಟ್ಟಿಯ ಮೇಲೆ ನಡೆಸುವ ಚುನಾವಣೆಗಳಲ್ಲಿ ಭಾಗವಹಿಸುವುದಿಲ್ಲ ಎಂದು ಸಾಂವಿಧಾನಿಕ ಸವಾಲನ್ನು ಒಡ್ಡಬೇಕು.

ಆದರೆ ಕಾಂಗ್ರೆಸ್ ಪಕ್ಷ ಮಾಡಿದ್ದೇನು?

ಒಂದೆಡೆ ಬಿಜೆಪಿ ಸಭೆಯು ತನ್ನ ದುರುದ್ದೇಶಕ್ಕೆ ಅನುಗುಣವಾಗಿ ‘‘ಎಸ್‌ಐಆರ್ ಸರಿಯಾಗಿ ನಡೆದರೆ ಕರ್ನಾಟಕದಲ್ಲಿ ಬಿಜೆಪಿ ಗೆಲುವು ಖಚಿತ. ಪ. ಬಂಗಾಳದಲ್ಲಿ ಅದು ಸಾಬೀತಾಗಿದೆ. ವಿರೋಧ ಪಕ್ಷಗಳು ಅಕ್ರಮ ಮುಸ್ಲಿಮ್ ವಲಸಿಗರ ಆಧಾರದಲ್ಲಿ ಗೆಲ್ಲುತ್ತಿದ್ದುದಕ್ಕೆ ಎಸ್‌ಐಆರ್ ತಡೆಯೊಡ್ಡಿದೆ. ಕರ್ನಾಟಕದಲ್ಲೂ ಅದರಲ್ಲೂ ಬೆಂಗಳೂರಿನಲ್ಲಿ ಲಕ್ಷಾಂತರ ಅಕ್ರಮ ವಲಸಿಗರಿದ್ದಾರೆ. ಅವರನ್ನು ಮತಪಟ್ಟಿಯಿಂದ ಮತ್ತು ದೇಶದಿಂದ ಎಸ್‌ಐಆರ್ ಮೂಲಕ ಹೊರಹಾಕಲಾಗುವುದು’’ ಎಂದು ಘೋಷಿಸಿತು.

ಆ ಮೂಲಕ ಎಸ್‌ಐಆರ್‌ನ ಅಸಲಿ ದುರುದ್ದೇಶವನ್ನು ಮುಚ್ಚಿಟ್ಟು, ಅದು ಅಕ್ರಮ ಮುಸ್ಲಿಮ್ ವಲಸಿಗರ ವಿರುದ್ಧದ ಅಭಿಯಾನ ಎಂಬ ನೆರೆಟಿವ್ ಅನ್ನು ಅಚ್ಚುಕಟ್ಟಾಗಿ ಜನರ ಮುಂದಿಟ್ಟಿತು.

ಇದನ್ನು ಸೋಲಿಸಲು ಕಾಂಗ್ರೆಸ್ ಪಕ್ಷ ಎಸ್‌ಐಆರ್‌ನ ಅಸಲಿ ಹುನ್ನಾರಗಳನ್ನು, ಅದು ಅಸಾಂವಿಧಾನಿಕವಾಗಿರುವ ಬಗೆಯನ್ನು, ಭಾರತೀಯ ಮುಸ್ಲಿಮರ ಜೊತೆಗೆ ದಲಿತ, ಆದಿವಾಸಿಗಳನ್ನು ಹೊರಹಾಕಲಿರುವ ಅದರ ಸಾವರ್ಕರೀಯ ಹುನ್ನಾರದ ರಾಜಕೀಯವನ್ನು ಬಯಲಿಗೆಳೆದು ಬಿಜೆಪಿಯ ನೆರೆಟಿವ್ ಅನ್ನು ಬಯಲಿಗೆಳೆಯಬೇಕಿತ್ತು.

ಹಾಗೆಯೇ ಎಸ್‌ಐಆರ್ ವಿರುದ್ಧ ಕೋರ್ಟ್‌ನಲ್ಲಿ, ಸದನದಲ್ಲಿ ಮತ್ತು ಬೀದಿಯಲ್ಲಿ ಹೋರಾಟ ಮಾಡಲು ಸಂಕಲ್ಪ ತೊಡಬೇಕಿತ್ತು. ತನ್ನದೇ ಸರಕಾರವಿರುವ ಈ ರಾಜ್ಯದಲ್ಲಿ ತನ್ನ ಫೆಡರಲ್ ಅಧಿಕಾರವನ್ನು ಬಳಸಿಕೊಂಡು ಸುಪ್ರೀಂ ಕೋರ್ಟ್‌ನಲ್ಲಿ ಜನರನ್ನು ರಕ್ಷಿಸುವ ತನ್ನ ಸಾಂವಿಧಾನಿಕ ಹೊಣೆಗಾರಿಕೆಯ ಕಾರಣಕ್ಕೆ ಎಲ್ಲಿಯ ತನಕ ಎಸ್‌ಐಆರ್‌ನ ಸಾಂವಿಧಾನಿಕತೆಯ ಬಗ್ಗೆ ಅಂತಿಮ ತೀರ್ಮಾನವಾಗುವುದಿಲ್ಲವೋ ಅಲ್ಲಿಯ ತನಕ ಎಸ್‌ಐಆರ್‌ಗೆ ಅವಕಾಶ ಕೊಡುವುದಿಲ್ಲವೆಂದು ಪ್ರತಿಪಾದನೆ ಮಾಡಬೇಕಿತ್ತು. ಅದರ ಪರಿಣಾಮ ಏನೇ ಇದ್ದರೂ ಜನರ ಕೋರ್ಟ್‌ನಲ್ಲಿ ಕಾಂಗ್ರೆಸ್ ಗೆಲ್ಲುತ್ತಿತ್ತು.

ಆದರೆ ಕಾಂಗ್ರೆಸ್ ತೆಗೆದುಕೊಂಡ ನಿಲುವು ಮತ್ತು ಕಾರ್ಯಕ್ರಮಗಳೆಲ್ಲವೂ ಆತ್ಮಹತ್ಯಾತ್ಮಕವಾಗಿದ್ದು ಮಾತ್ರವಲ್ಲದೆ ಬಿಜೆಪಿಯ ನೆರೆಟಿವ್ ಮತ್ತು ರಾಜಕೀಯವನ್ನು ಗಟ್ಟಿಗೊಳಿಸುವಂತಿದೆ.

ಎಸ್‌ಐಆರ್ ಬಗ್ಗೆ ಕಾಂಗ್ರೆಸ್‌ನ ಆತ್ಮಹತ್ಯಾತ್ಮಕ ನಿಲುವು

ಮೇ 24ರ ಸಭೆಯಲ್ಲಿ ಕಾಂಗ್ರೆಸ್ ಪಕ್ಷ ತೆಗೆದುಕೊಂಡ ನಿಲುವು ಹೀಗಿವೆ:

-ಎಸ್‌ಐಆರ್ ವಿರುದ್ಧ ಹೋರಾಡುವುದಿಲ್ಲ. ಬದಲಿಗೆ ಅದರ ಬಗ್ಗೆ ಜನಜಾಗೃತಿ ಮೂಡಿಸಲಾಗುವುದು.

-ಎಸ್‌ಐಆರ್ ಪ್ರಕ್ರಿಯೆಯಲ್ಲಿ ಜನರು ಸಕ್ರಿಯವಾಗಿ ಭಾಗವಹಿಸಿ ತಮ್ಮ ಫಾರಂಗಳನ್ನು ಭರ್ತಿ ಮಾಡಿ ಕಾಲಬದ್ಧವಾಗಿ ವಾಪಸ್ ನೀಡಿ ಮತಪಟ್ಟಿಯಲ್ಲಿ ತಮ್ಮ ಹೆಸರು ಉಳಿಸಿಕೊಳ್ಳಲು ತಮ್ಮ ಪಕ್ಷದ ಮೂಲಕ ಸಹಕರಿಸಲಾಗುವುದು.

-ದಾಖಲೆಗಳಿಲ್ಲದ ಜನರಿಗೆ ದಾಖಲೆಗಳನ್ನು ಒದಗಿಸಲು ಚಿಂತನೆ ಮಾಡಲಾಗುತ್ತಿದೆ ಎಂದು ಕೆಲವು ಪತ್ರಿಕೆಗಳು ವರದಿ ಮಾಡಿವೆ. ಕೆಲವು ಪತ್ರಿಕೆಗಳು ಕರ್ನಾಟಕದ ಎಲ್ಲಾ ಮತದಾರರಿಗೆ ಸ್ಮಾರ್ಟ್‌ಕಾರ್ಡ್ ಒದಗಿಸಲು ಕಾಂಗ್ರೆಸ್ ಚಿಂತಿಸುತ್ತಿದೆ ಎಂದು ವರದಿ ಮಾಡಿದೆ.

-ಒಬ್ಬ ಅರ್ಹ ಮತದಾರರನ್ನೂ ಕೈಬಿಡದಂತೆ ಪಾರದರ್ಶಕವಾಗಿ ಎಸ್‌ಐಆರ್ ನಡೆಸಬೇಕೆಂದು ಮುಖ್ಯ ಚುನಾವಣಾಧಿಕಾರಿಗೆ ಎಚ್ಚರಿಕೆ ನೀಡಲಾಗುವುದು ಎಂದು ಕೂಡ ಹೇಳಲಾಗಿದೆ.

ಆದರೆ ಈ ನಿಲುವುಗಳು ಮತ್ತು ಕ್ರಮಗಳು ಎಸ್‌ಐಆರ್ ಎಂಬ ಬಿಜೆಪಿಯ ಫ್ಯಾಶಿಸ್ಟ್ ಯೋಜನೆಯಿಂದ ಜನರನ್ನು ರಕ್ಷಿಸುತ್ತದೆಯೇ? ಬಿಜೆಪಿಯ ಫ್ಯಾಶಿಸ್ಟ್ ರಾಜಕೀಯವನ್ನು ಮತ್ತು ಯೋಜನೆಯನ್ನು ಸೋಲಿಸುವಂತಿದೆಯೇ?

ಎಸ್‌ಐಆರ್ ಬಗ್ಗೆ ಕಾಂಗ್ರೆಸ್ ನಿಲುವು-ಕಾರ್ಯಕ್ರಮಗಳು ಬಿಜೆಪಿಗೆ ಪೂರಕ!?

-ಮೊದಲನೆಯದಾಗಿ ಎಸ್‌ಐಆರ್ ವಿರುದ್ಧ ಹೋರಾಡುವುದಿಲ್ಲ ಎಂದು ಘೋಷಿಸುವ ಮೂಲಕ ಕಾಂಗ್ರೆಸ್ ಪಕ್ಷ ಎಸ್‌ಐಆರ್ ಹಿಂದಿನ ಬಿಜೆಪಿಯ ದುರುದ್ದೇಶಕ್ಕೆ ವಾಕ್ ಓವರ್ ಕೊಟ್ಟುಬಿಟ್ಟಿದೆ.

((https://www.thehindu.com/news/national/karnataka/karnataka-congress-office-bearers-who-missed-sir-conclave-will-be-stripped-of-their-posts-dk-shivakumar/article71020794.ece)

-ಎರಡನೆಯದಾಗಿ ಎಸ್‌ಐಆರ್ ಎಂಬುದು ಸಂವಿಧಾನ ಬಾಹಿರ ಎಂಬ ಅರಿವನ್ನು ಜನರಲ್ಲಿ ಮೂಡಿಸದೆ ಅದು ಮತ್ತೊಂದು ಮತಪಟ್ಟಿ ಶುದ್ಧೀಕರಣದ ಸಾಮಾನ್ಯ ಕಾರ್ಯಕ್ರಮ ಎಂಬ ಬಿಜೆಪಿ ಮತ್ತು ಚುನಾವಣಾ ಆಯೋಗದ ಸುಳ್ಳು ಪ್ರಚಾರಕ್ಕೆ ಮಾನ್ಯತೆ ತಂದು ಕೊಟ್ಟುಬಿಟ್ಟಿದೆ. (ವಾಸ್ತವವಾಗಿ ಎಸ್‌ಐಆರ್ ಬಗೆಗಿನ ಪತ್ರಿಕೆಯೊಂದರ ವೀಡಿಯೊ ಸಂದರ್ಶನದಲ್ಲಿ ಕರ್ನಾಟಕದ ಕಾಂಗ್ರೆಸ್ ಪಕ್ಷದ ಎಸ್‌ಐಆರ್ ವಿದ್ಯಮಾನಗಳ ಸಮಿತಿಯ ಮುಖ್ಯಸ್ಥರಾಗಿರುವ ವಿ.ಆರ್. ಸುದರ್ಶನ್ ಅವರು ದೇಶದಲ್ಲಿ ಒಂಭತ್ತು ಬಾರಿ ಎಸ್‌ಐಆರ್ ಆಗಿದೆಯೆಂಬ ಆಯೋಗ ಹಾಗೂ ಬಿಜೆಪಿಯ ಸುಳ್ಳನ್ನೇ ಪುನರುಚ್ಚರಿಸಿದ್ದಾರೆ.

(https://www.youtube.com/watch?v=ckN1e5U2xAQ&t=3s)

-ಮೂರನೆಯದಾಗಿ, ಎಸ್‌ಐಆರ್ ಮುಸುಕಿನಲ್ಲಿ ಬಿಜೆಪಿ ನಡೆಸುತ್ತಿರುವ ಅಸಾಂವಿಧಾನಿಕ ನಾಗರಿಕತ್ವ ಪರಿಶೀಲನೆ ಎಂಬ ವಿಷಯವನ್ನೇ ಮುಂದು ಮಾಡದೆ ವಿರೋಧ ಪಕ್ಷವಾಗಿ ತನ್ನ ರಾಜಕೀಯ ಜವಾಬ್ದಾರಿಯಿಂದ ಹಿಂದೆ ಸರಿದಿದೆ. ಸಂವಿಧಾನದ ಮೇಲಿನ ದಾಳಿಗೆ ಅವಕಾಶ ಮಾಡಿಕೊಟ್ಟಿದೆ.

-ನಾಲ್ಕನೆಯದಾಗಿ, ಭಾರತೀಯ ಮುಸ್ಲಿಮರನ್ನು ಹೊರದಬ್ಬಲೆಂದೇ ಹೊಸದಾಗಿ ರೂಪಿಸಲಾದ Logical Discrepancy ಎಂಬ ಕಾನೂನು ಮತ್ತು ಸಂವಿಧಾನ ಬಾಹಿರ ಕ್ರಮವನ್ನು ಕರ್ನಾಟಕದಲ್ಲೂ ಅನ್ವಯಿಸಲಾಗುವುದು ಎಂದು ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ಘೋಷಿದ್ದರೂ ಅದಕ್ಕೆ ಕನಿಷ್ಠ ತಾತ್ವಿಕ ಪ್ರತಿರೋಧವನ್ನು ಕರ್ನಾಟಕ ಕಾಂಗ್ರೆಸ್ ವ್ಯಕ್ತಪಡಿಸದೆ, ಅದನ್ನು ಕೈಬಿಡಬೇಕೆಂದು ಆಗ್ರಹಿಸದೆ ದಾಖಲೆ ಇದ್ದರೂ ಹೊರದಬ್ಬುವ ಪ್ರಕ್ರಿಯೆಗೆ ಮಾನ್ಯತೆ ನೀಡಿದೆ.

-ಐದನೆಯದಾಗಿ, ಒಬ್ಬ ಅರ್ಹ ಮತದಾರರನ್ನು ಹೊರಗಿಡದಂತೆ ಆಯೋಗಕ್ಕೆ ಎಚ್ಚರಿಕೆ ನೀಡಲಾಗಿದೆ ಎಂದೂ ಆಯೋಗ ಕೊಟ್ಟ ಫಾರಂ ಅನ್ನು ಭರ್ತಿ ಮಾಡಿ ಹಿಂದಿರುಗಿಸಲು ಜನರಲ್ಲಿ ಜಾಗೃತಿ ಮತ್ತು ಸಹಾಯ ಮಾಡುವ ಕ್ರಮವನ್ನು ಕಾಂಗ್ರೆಸ್ ಘೋಷಿಸಿದೆ. ಅಷ್ಟರಮಟ್ಟಿಗೆ ಅದು ದಾಖಲೆಗಳಿದ್ದರೂ ಅಜ್ಞಾನದಿಂದ ಹೊರಗುಳಿಯಬಹುದಾದವರನ್ನು ರಕ್ಷಿಸುತ್ತದೆ. ಅದು ಸರಿಯಾದ ಕ್ರಮ.

ಆದರೆ ಎಸ್‌ಐಆರ್ ಪ್ರಕ್ರಿಯೆಗಳು ತಾನು ನಿಗದಿ ಪಡಿಸಿದ 11 ದಾಖಲೆಗಳನ್ನು ನೀಡದ ಭಾರತೀಯರನ್ನು ಅನರ್ಹ ಎಂದು ಘೋಷಿಸಲೆಂದೇ ರೂಪಿತವಾಗಿದೆ ಮತ್ತು ದಾಖಲೆ ನೀಡಿದರೂ Logical Discrepancy ಹೆಸರಿನಲ್ಲಿ ಉದ್ದೇಶಪೂರ್ವಕವಾಗಿ ಮುಸ್ಲಿಮರನ್ನು ಮತ್ತು ಬಡವರನ್ನು ಹೊರದಬ್ಬಲೆಂದೇ ರೂಪಿತವಾಗಿವೆ. ಆದ್ದರಿಂದ ಅವು ರದ್ದಾಗದೆ ಎಸ್‌ಐಆರ್ ಅಪಾಯದಿಂದ ವಂಚಿತ ಜನಸಮುದಾಯಗಳನ್ನು ರಕ್ಷಿಸಲು ಸಾಧ್ಯವಿಲ್ಲ. ಅದನ್ನು ಮಾಡದೆ ಒಬ್ಬ ಅರ್ಹ ಮತದಾರರನ್ನು ಹೊರಗಿಡದಂತೆ ನೋಡಿಕೊಳ್ಳುತ್ತೇವೆ ಎಂಬುದು ಹುಲಿಯನ್ನು ಮನೆಯೊಳಗೆ ಆಹ್ವಾನಿಸಿ ಯಾರನ್ನೂ ಕೊಲ್ಲದಂತೆ ನೋಡಿಕೊಳ್ಳುತ್ತೇವೆ ಎಂಬ ಭರವಸೆಯಷ್ಟೇ ಹಾಸ್ಯಾಸ್ಪದ.

-ಆರನೆಯದಾಗಿ, ಜನರ ಬಳಿ ಇರದ ದಾಖಲೆಗಳನ್ನು ಒದಗಿಸಲು ಸರಕಾರ ಕ್ರಮ ಕೈಗೊಳ್ಳುವಂತೆ ಪಕ್ಷವು ವಿನಂತಿಸಿದೆ ಅಥವಾ ಸರಕಾರವೇ ಎಲ್ಲಾ ಮತದಾರರಿಗೆ ಸ್ಮಾರ್ಟ್ ಕಾರ್ಡ್ ಕೊಡುವ ಚಿಂತನೆ ನಡೆಸಿದೆ ಎಂದು ಕೆಲವೇ ಪತ್ರಿಕೆಗಳು ವರದಿ ಮಾಡಿವೆ.

ಆದರೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಚುನಾವಣಾ ಆಯೋಗದ್ದೇ ಪರಮಾಧಿಕಾರ. ಯಾವ ದಾಖಲೆಗಳೆಂಬುದನ್ನು ಅದು ನಿಗದಿ ಮಾಡಬೇಕೆ ವಿನಾ ರಾಜ್ಯ ಸರಕಾರ ಕೊಡುವ ಇತರ ದಾಖಲೆಗಳನ್ನು ಅದು ಮಾನ್ಯ ಮಾಡುವುದಿಲ್ಲ. ಆಯೋಗ ನಿಗದಿ ಮಾಡಿರುವ ದಾಖಲೆಗಳನ್ನು (ಜನನ, ಜಾತಿ, ವಸತಿ, ಆಸ್ತಿ, ಸರಕಾರಿ ಉದ್ಯೋಗ, ಪಾಸ್ ಪೋರ್ಟ್..ಇತ್ಯಾದಿ)ಈಗ ದಿಢೀರನೆ ಸೂಕ್ತ ಪರಿಶೀಲನೆ ಇಲ್ಲದೆ, ಪ್ರಕ್ರಿಯೆಗಳನ್ನು ಅನುಸರಿಸದೆ ಕೊಡಲು ಬರುವುದಿಲ್ಲ. ಕೊಟ್ಟರೂ ಅವುಗಳನ್ನು ಆಯೋಗ Logical Discrepancy ಹೆಸರಿನಲ್ಲಿ ನಿರಾಕರಿಸುವ ಪರಮಾಧಿಕಾರ ಹೊಂದಿದೆ. ಇದನ್ನು ಸುಪ್ರೀಂ ಕೋರ್ಟ್ ನಿಲ್ಲಿಸಬಹುದು. ಆದರೆ ಅದು ಈ ವಿಷಯದಲ್ಲಿ ಕುರುಡು ಮತ್ತು ಕಿವುಡಾಗಿ ಶಾಶ್ವತ ರಜೆಯ ಮೇಲಿದೆ. ಕರ್ನಾಟಕವು ಬಿಜೆಪಿಯ ಕಬಳಿಕೆಯ ಪಟ್ಟಿಯಲ್ಲಿ ಆದ್ಯತೆಯಲ್ಲಿರುವುದರಿಂದ ಸರಕಾರದ ಈ ಬಗೆಯ ಕೊನೆಯ ಕ್ಷಣದ ತರಾತುರಿ ಕ್ರಮಗಳನ್ನು ಬಿಜೆಪಿ ವಿರೋಧಿಸುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು Unreliable Documents ಎಂದೋ ಹೇಳುವ ಅವಕಾಶಗಳಿವೆ.

ಹೀಗಾಗಿ ಕಾಂಗ್ರೆಸ್ ಪಕ್ಷ ಎಸ್‌ಐಆರ್ ಬಗ್ಗೆ ತೆಗೆದುಕೊಂಡ ರಾಜಕೀಯ ನಿಲುವಾಗಲೀ, ಜನರನ್ನು ರಕ್ಷಿಸುವ ಹೆಸರಿನಲ್ಲಿ ಘೋಷಿಸಿರುವ ಅರೆ ಮನಸ್ಸಿನ ಕಾರ್ಯಕ್ರಮಗಳಾಗಲೀ ಎಸ್‌ಐಆರ್‌ನಿಂದ ಜನರನ್ನು ರಕ್ಷಿಸುವುದಿಲ್ಲ. ಕಾಂಗ್ರೆಸನ್ನೂ ರಕ್ಷಿಸುವುದಿಲ್ಲ.

ಎಸ್‌ಐಆರ್ ರದ್ದಾಗಬೇಕೆಂದು ಅಸಾಧಾರಣವಾದ ಶಾಸನಾತ್ಮಕ ಮತ್ತು ಸಂವಿಧಾನಾತ್ಮಕ ಹೆಜ್ಜೆಗಳನ್ನು ಮುಂದಿಡದೆ ಫ್ಯಾಶಿಸ್ಟ್ ಬಿಜೆಪಿಯ ಆಕ್ರಮಣದಿಂದ ಕಾಂಗ್ರೆಸಾಗಲೀ ಇತರ ವಿರೋಧ ಪಕ್ಷಗಳಾಗಲೀ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ.

ಆದ್ದರಿಂದ

-ವಿರೋಧ ಪಕ್ಷಗಳಿಗೆ ವೋಟು ಹಾಕಬಲ್ಲವರನ್ನು ಹೊರಗಿಡಲೆಂದೇ, ವಿರೋಧ ಪಕ್ಷ ಮುಕ್ತ ಭಾರತವನ್ನು ಸಾಧಿಸಲೆಂದೇ, ಬಿಜೆಪಿಗೆ ಶಾಶ್ವತ ಸಂಸದೀಯ ಮೆಜಾರಿಟಿ ಗಳಿಸಿಕೊಡಲೆಂದೇ ರೂಪಿಸಿರುವ ಎಸ್‌ಐಆರ್ ಮೂಲಕ ತಯಾರಾದ ಮತಪಟ್ಟಿಯನ್ನು ಆಧರಿಸಿದ ಚುನಾವಣೆಯಲ್ಲಿ ಭಾಗವಹಿಸುವುದಿಲ್ಲವೆಂಬ ಖಚಿತ ತೀರ್ಮಾನಕ್ಕೆ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಬರಬೇಕು. ಬಿಜೆಪಿ ತನ್ನ ಬೂತ್ ಏಜೆಂಟರಿಗೆಂದು ತಯಾರಿಸಿರುವ ಪುಸ್ತಿಕೆಯಲ್ಲಿ ಈ ಎಸ್‌ಐಆರ್ ಮತಪಟ್ಟಿ ಪ್ರಕ್ರಿಯೆಗೆ ನೀವು ನೂರು ದಿನ ಕೊಟ್ಟರೆ ಬಿಜೆಪಿ 50 ವರ್ಷ ಅಧಿಕಾರದಲ್ಲಿರುತ್ತದೆ ಎಂದು ಘೋಷಿಸಿಸುವುದು ಸುಮ್ಮನೆಯಲ್ಲ.

- ಎಸ್‌ಐಆರ್ ಎಂಬುದು ಅಸಾಂವಿಧಾನಿಕವಾದ ನಾಗರಿಕತ್ವ ಪರಿಶೀಲನೆ. ಅದರ ಸಾಂವಿಧಾನಿಕತೆ ಬಗ್ಗೆ ಸುಪ್ರೀಂ ಅಂತಿಮ ತೀರ್ಮಾನ ತೆಗೆದುಕೊಳ್ಳುವವರೆಗೆ ಕರ್ನಾಟಕದಲ್ಲಿ ಎಸ್‌ಐಆರ್ ಮಾಡುವುದಿಲ್ಲವೆಂದು ಕರ್ನಾಟಕ ಸರಕಾರ ಸುಪ್ರೀಂ ಕೋರ್ಟ್‌ನಲ್ಲಿ ವಾದಿಸಬೇಕು.

ಅಸಾಧಾರಣ ಸಂದರ್ಭಗಳು ಅಸಾಧಾರಣ ಪರಿಹಾರಗಳನ್ನು ಕೇಳುತ್ತವೆ.

ಆದರೆ ಕಾಂಗ್ರೆಸ್‌ನಿಂದ ಇವೆಲ್ಲವನ್ನೂ ನಿರೀಕ್ಷಿಸುವುದು ದುರಾಸೆಯಷ್ಟೇ ಅಲ್ಲ, ಕಾಂಗ್ರೆಸ್‌ನಲ್ಲಿನ ಕೆಲವು ಸಜ್ಜನ ವ್ಯಕ್ತಿಗಳ ಹೇಳಿಕೆಯನ್ನು ಆಧರಿಸಿ ಕಾಂಗ್ರೆಸ್ ಪಕ್ಷದ ಒಟ್ಟಾರೆ ವರ್ಗ ಹಿತಾಸಕ್ತಿಯನ್ನು ಮರೆಯುವ ರಾಜಕೀಯ ಮುಠ್ಠಾಳತನವಾಗುತ್ತದೆ. ಅದನ್ನೇ ಮೇ 24-25ರ ಕಾಂಗ್ರೆಸ್ ನಾಯಕರ ಸಭೆ ಮತ್ತು ಅದರ ತೀರ್ಮಾನಗಳು ಸ್ಪಷ್ಟ ಪಡಿಸುತ್ತವೆ.

ಹೀಗಾಗಿ ಈ ದೇಶವನ್ನು, ಸಂವಿಧಾನವನ್ನು ಮತ್ತು ಪ್ರಜಾತಂತ್ರವನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಾವು ಈ ದೇಶದ ಜನರೇ ಮಾಡಬೇಕಾಗಿದೆ. ಎನ್‌ಆರ್‌ಸಿ-ಸಿಎಎ ವಿರುದ್ಧ, ಮೂರು ರೈತ ವಿರೋಧಿ ಕಾಯ್ದೆಗಳ ವಿರುದ್ಧ ಪಕ್ಷಗಳು, ಸಂಸತ್ತು, ಕೋರ್ಟ್‌ಗಳು ಕೈಬಿಟ್ಟಾಗ ಈ ದೇಶದ ಜನರೇ ಹೇಗೆ ಬೀದಿಗಳಲ್ಲಿ ಒಗ್ಗೂಡಿ ಜನರಾಜಕಾರಣದ ಹೋರಾಟದ ಮೂಲಕ ಸರಕಾರವನ್ನು ಬಗ್ಗಿಸಿದರೋ, ಅದೇ ಮಾದರಿಯೊಂದೇ ಉಳಿದಿರುವ ಏಕೈಕ ದಾರಿ.

share
ಶಿವಸುಂದರ್
ಶಿವಸುಂದರ್
Next Story
X