Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಮುಸ್ಲಿಮರಿಗೆ ಕಿರುಕುಳ ನೀಡಲು ಮತ್ತೊಂದು...

ಮುಸ್ಲಿಮರಿಗೆ ಕಿರುಕುಳ ನೀಡಲು ಮತ್ತೊಂದು ಬೃಹತ್ ಹುನ್ನಾರ!

ಶಿವಸುಂದರ್ಶಿವಸುಂದರ್10 Jun 2026 11:15 AM IST
share
ಮುಸ್ಲಿಮರಿಗೆ ಕಿರುಕುಳ ನೀಡಲು ಮತ್ತೊಂದು ಬೃಹತ್ ಹುನ್ನಾರ!
ಜನಸಂಖ್ಯಾ ಬದಲಾವಣೆಯ ಉನ್ನತ ಸಮಿತಿ (HLC-DC)

ಸರಕಾರ ಚಿಂತಿಸಬೇಕಿರುವುದು ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆಯ ಬಗ್ಗೆಯಲ್ಲ. ಈಗ ಜಗತ್ತಿನಲೇ ಅತಿ ಹೆಚ್ಚು ಯುವಶಕ್ತಿ ಇರುವ ಈ ದೇಶದಲ್ಲಿ ಹೇಗೆ ಉದ್ಯೋಗಗಳನ್ನು ಸೃಷ್ಟಿಸಿ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಮತ್ತು ಇನ್ನೆರಡು ದಶಕಗಳ ನಂತರ ಎದುರಾಗಲಿರುವ ಹಿರಿಯರ ಬಾಹುಳ್ಯ ತಂದೊಡ್ಡುವ ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ.

ಭಾರತಕ್ಕೆ ಕೋಟ್ಯಂತರ ಸಂಖ್ಯೆಯಲ್ಲಿ ಪಕ್ಕದ ದೇಶಗಳಿಂದ ಅಕ್ರಮ ಮುಸ್ಲಿಮರು ವಲಸೆ ಬರುತ್ತಿದ್ದಾರೆಂಬ ಹುಸಿ ಕಾರಣವೊಡ್ಡಿ ಮೋದಿ ಸರಕಾರದ ಕೈಗೊಂಬೆಯಾದ ಭಾರತದ ಚುನಾವಣಾ ಆಯೋಗ ಎಸ್‌ಐಆರ್ ಮಾಡಿ ಮುಗಿಸುತ್ತಿದೆ. ಆದರೆ ಭಾರತ ಸರಕಾರ ಮತ್ತು ಆಯೋಗವು ಅಕ್ರಮ ವಲಸೆಯಿಂದ ಕೋಲಾಹಲವಾಗುತ್ತಿದೆ ಎಂದು ಯಾವ ಅಧ್ಯಯನವನ್ನು ಆಧರಿಸಿ ತೀರ್ಮಾನಕ್ಕೆ ಬಂದಿದೆ? ಈ ಪ್ರಶ್ನೆಗೆ ಸರಕಾರವೂ ಉತ್ತರಿಸಿಲ್ಲ, ಆಯೋಗವೂ ಉತ್ತರಿಸಿಲ್ಲ. ಅಕ್ರಮ ವಲಸೆಯ ಬಗ್ಗೆ ಸರಿಯಾದ ಅಧ್ಯಯನವಿಲ್ಲದೆ ಎಸ್‌ಐಆರ್‌ನಂತಹ ಅನಾಹುತಕಾರಿ ಪರಿಷ್ಕರಣೆಯನ್ನು ಹೇಗೆ ಮತ್ತು ಏಕೆ ಮಾಡುತ್ತಿದ್ದೀರೆಂದು ಎಸ್‌ಐಆರ್‌ನ ಸಾಂವಿಧಾನಿಕತೆಯನ್ನು ಎತ್ತಿಹಿಡಿದ ಸುಪ್ರೀಂ ಕೋರ್ಟ್ ಕೂಡ ಕೇಳಲಿಲ್ಲ.

ಹೀಗೆ ಯಾವುದೇ ಅಧ್ಯಯನದ ಬುನಾದಿಯೂ ಇಲ್ಲದೆ ಮುಕ್ಕಾಲು ಭಾಗ ಎಸ್‌ಐಆರ್ ಮುಗಿದು, ಈಗಾಗಲೇ 7.5 ಕೋಟಿ ಭಾರತೀಯರನ್ನು ಮತಪಟ್ಟಿಯಿಂದ ಹೊರದಬ್ಬಿದ ಮೇಲೆ, ಮೋದಿ ಸರಕಾರ ಸುಪ್ರೀಂ ತೀರ್ಪು ಹೊರಬರುವ ಒಂದು ದಿನ ಮುಂಚೆ -ಮೇ 26ರಂದು -

‘High Level Committee On Demographic Change’- ಜನಸಂಖ್ಯಾ ಬದಲಾವಣೆಯನ್ನು ಅಧ್ಯಯನ ಮಾಡಲು ಉನ್ನತ ಮಟ್ಟದ ಸಮಿತಿಯನ್ನು ನಿವೃತ್ತ ನ್ಯಾಯಮೂರ್ತಿ ಪ್ರಕಾಶ್ ಪ್ರಭಾಕರ್ ನವ್ಲೇಕರ್ ಅವರ ನೇತೃತ್ವದಲ್ಲಿ ರಚಿಸಿದೆ.

ಈ ಸಮಿತಿಯ ರಚನೆ, ಸದಸ್ಯರು ಮತ್ತು ನಿಗದಿ ಪಡಿಸಲಾಗಿರುವ ಅಧ್ಯಯನ ಸೂಚಿಗಳನ್ನು ಗಮನಿಸಿದರೆ ಇದು ಭಾರತೀಯ ಮುಸ್ಲಿಮರಿಗೆ ನಿರಂತರ ಕಿರುಕುಳ ನೀಡಲೆಂದೇ ರಚಿಸಲಾಗಿರುವ ಬೃಹತ್ ಹುನ್ನಾರವೆಂಬುದು ಸ್ಪಷ್ಟವಾಗುತ್ತದೆ.

ಮೊದಲನೆಯದಾಗಿ ಈ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವ ನ್ಯಾ. ಪ್ರಕಾಶ್ ಅವರೇ ಹೇಳಿರುವಂತೆ ಅವರಿಗೆ ಈ ವಿಷಯದಲ್ಲಿ ಯಾವುದೇ ಬಗೆಯ ಪರಿಣಿತಿಯೂ ಇಲ್ಲ ಮತ್ತು ಅವರಿಗೆ ಈ ಬಗ್ಗೆ ಪೂರ್ವ ಸೂಚನೆಯನ್ನೂ ಕೊಟ್ಟಿರಲಿಲ್ಲ.

ಎರಡನೆಯದಾಗಿ ಸಮಿತಿಯಲ್ಲಿ ಇರುವ ಇತರ ಸದಸ್ಯರು-ಒಬ್ಬರು ನಿವೃತ್ತ ಆಡಳಿತಾಧಿಕಾರಿ (ದುರ್ಗಾ ಶಂಕರ್ ಮಿಶ್ರಾ), ಇನ್ನೊಬ್ಬರು ನಿವೃತ್ತ ಪೊಲೀಸ್ ಅಧಿಕಾರಿ (ಬಾಲಾಜಿ ಶ್ರೀವಾಸ್ತವ), ಮತ್ತೊಬ್ಬರು ಪ್ರಧಾನಿಯ ಆರ್ಥಿಕ ಸಲಹೆಗಾರರಾಗಿರುವ ಶಮಿಕಾ ರವಿ. (ಈ ವಿದ್ವಾಂಸರೇ ಮೊನ್ನೆ ‘‘ರೂಪಾಯಿ ಬೆಲೆ ಡಾಲರ್‌ನ ಎದುರು ನೂರು ರೂಪಾಯಿಯಾದರೇನಂತೆ, ಅದೊಂದು ಸಂಖ್ಯೆ ಅಷ್ಟೆ’’ ಎಂಬ ಉಡಾಫೆ ಹೇಳಿಕೆ ಕೊಟ್ಟವರು.)

ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಜನಸಂಖ್ಯೆಯ ಬದಲಾವಣೆಯ ಬಗ್ಗೆ ಅಧ್ಯಯನ ಮಾಡಲು ರಚಿಸಲಾಗಿರುವ ಈ ಸಮಿತಿಯಲ್ಲಿ ಒಬ್ಬರೂ ಜನಸಂಖ್ಯಾ ಶಾಸ್ತ್ರದ ಪರಿಣಿತರಿಲ್ಲ. ಎಲ್ಲರೂ ಮೋದಿನಿಷ್ಠರೇ ಹೊರತು ಬೇರೆ ಯಾವುದೇ ಅರ್ಹತೆ ಇಲ್ಲ.

ಇನ್ನು ಈ ಸಮಿತಿಗೆ ಕೊಟ್ಟಿರುವ ಕಾರ್ಯುಸೂಚಿಯಲ್ಲಿ ಭಾರತದಲ್ಲಿ ದೊಡ್ಡ ಮಟ್ಟದಲ್ಲಿ ನೆರೆದೇಶಗಳಿಂದ ವ್ಯವಸ್ಥಿತ ಅಕ್ರಮ ವಲಸೆ ನಡೆಯುತ್ತಿದೆಯೇ ಎಂಬ ಪ್ರಶ್ನೆಯನ್ನೇ ಸೂಚಿಸಿಲ್ಲ.

ಅಪಪ್ರಚಾರವನ್ನು ಅಧಿಕೃತಗೊಳಿಸಬೇಕೆಂಬ ಅಧ್ಯಯನ ಸೂಚಿ!

ಬದಲಿಗೆ ಈಗಾಗಲೇ ಆ ಬಗೆಯ ವ್ಯವಸ್ಥಿತ, ದುರುದ್ದೇಶದ ಮತ್ತು ಬೃಹತ್ ಮಟ್ಟದ ಅಕ್ರಮ ವಲಸೆ ನಡೆಯುತ್ತಿದೆ ಎಂಬ ತೀರ್ಮಾನಕ್ಕೆ ಬಂದು:

-ಇಂತಹ ಅಕ್ರಮ ವಲಸೆಯಿಂದ ಜನಸಂಖ್ಯಾ ಪ್ರಮಾಣದಲ್ಲಿ ಆಗುವ ಬದಲಾವಣೆಗಳು ಒಡ್ಡುವ ಸವಾಲುಗಳೇನು?

-ಅಂತಹ ವಲಸೆಗೆ ಕಾರಣಗಳೇನು?

-ಅಂತಹ ವಲಸೆಯಿಂದ ಗಡಿ ರಾಜ್ಯಗಳಲ್ಲಿ ಸಮುದಾಯ ಮತ್ತು ಧಾರ್ಮಿಕ ಗುಂಪುಗಳ ಮಟ್ಟದಲ್ಲಿ ಆಗುತ್ತಿರುವ ವ್ಯವಸ್ಥಿತ ಬದಲಾವಣೆಯ ಸ್ವರೂಪವೇನು?

- ಅಕ್ರಮ ವಲಸೆಯನ್ನು ತಡೆಗಟ್ಟಲು ಮತ್ತು ಅಕ್ರಮ ವಲಸಿಗರನ್ನು ಗುರುತಿಸಿ ಹೊರಗಟ್ಟಲು ಯಾವ ಬಗೆಯ ವ್ಯವಸ್ಥಿತ ಮತ್ತು ನಿರಂತರ ಕಾರ್ಯಕ್ರಮಗಳನ್ನು ತೆಗೆದುಕೊಳ್ಳಬಹುದು?

-ಅದರ ಜೊತೆಗೆ ಗಡಿ ಭದ್ರತೆ, ಜನಸಂಖ್ಯೆ ಸ್ಥಿರೀಕರಣ ಮತ್ತು ಕೇಂದ್ರ-ರಾಜ್ಯಗಳ ನಡುವೆ ಈ ವಿಷಯದಲ್ಲಿ ಯಾವ ಬಗೆಯ ಸಮನ್ವಯ ಇರಬೇಕು ಇನ್ನಿತ್ಯಾದಿ ಅಂಶಗಳನ್ನು ಅಧ್ಯಯನ ಮಾಡಿ ಒಂದು ವರ್ಷದಲ್ಲಿ ವರದಿ-ಶಿಫಾರಸುಗಳನ್ನು ಸಲ್ಲಿಸಬೇಕೆಂದು ಸೂಚಿಸಲಾಗಿದೆ.

(https://www.pib.gov.in/PressReleasePage.aspx?PRID=2265494®=3&lang=2)

ಹೀಗಾಗಿ ಈ ಮೋದಿ ಕಾರ್ಯಸೂಚಿಯು ಸಂಘ ಪರಿವಾರ ಮತ್ತು ಬಿಜೆಪಿ ಈ ದೇಶದಲ್ಲಿ ಜನಸಂಖ್ಯಾ ಏರಿಕೆಯ ಬಗ್ಗೆ ಹಬ್ಬಿಸುತ್ತಿರುವ ಹಲವು ಕೋಮುವಾದಿ ಸುಳ್ಳುಗಳನ್ನು ಅಧಿಕೃತವಾದ ಸತ್ಯಗಳೆಂಬಂತೆ ಬಿಂಬಿಸುತ್ತಿವೆ. ಅವು:

-ದೇಶದಲ್ಲಿ ಮುಸ್ಲಿಮ್ ಜನಸಂಖ್ಯೆ ಜಾಸ್ತಿಯಾಗುತ್ತಿದೆ ಮತ್ತು ಅದಕ್ಕೆ ಅವರಲ್ಲಿ ಜನಸಂಖ್ಯಾ ನಿಯಂತ್ರಣವಿಲ್ಲದಿರುವುದು ಮಾತ್ರವಲ್ಲದೆ ಬಾಂಗ್ಲಾದೇಶ ಮತ್ತಿತರ ದೇಶಗಳಿಂದ ಅಕ್ರಮವಾಗಿ ವಲಸೆ ಬಂದು ನೆಲೆಸುತ್ತಿರುವುದು ಕಾರಣವಾಗಿದೆ.

-ಇದರ ಹಿಂದೆ ಭಾರತದಲ್ಲಿ ಹಿಂದೂಗಳ ಸಂಖ್ಯೆಯನ್ನು ಕಡಿಮೆ ಮಾಡಿ ಭಾರತವನ್ನು ಮುಸ್ಲಿಮ್ ದೇಶವನ್ನಾಗಿ ಮಾಡಬೇಕೆಂಬ ಹುನ್ನಾರವಿದೆ.

-ಇದೊಂದು ಅಂತರ್‌ರಾಷ್ಟ್ರೀಯ ಷಡ್ಯಂತ್ರವಾಗಿದ್ದು ಅದಕ್ಕೆ ಭಾರತೀಯ ಮುಸ್ಲಿಮರ ಸಹಕಾರವಿದೆ. ಆದ್ದರಿಂದ ಎಲ್ಲಾ ಮುಸ್ಲಿಮರೂ ಅನುಮಾನಿತರೇ. ಈ ಷಡ್ಯಂತ್ರವನ್ನು ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಮೂಲಕ ಸೋಲಿಸಬೇಕು.

Demographic Change ಸಮಿತಿಗೆ ಕೊಟ್ಟಿರುವ ಅಧ್ಯಯನ ಸೂಚಿಗಳನ್ನು ಗಮನಿಸಿದರೆ ಸಂಘಿಗಳ ಈ ಸುಳ್ಳು ಮತ್ತು ಕೋಮು ಧ್ರುವೀಕರಣದ ಪ್ರಚಾರವನ್ನು ಸತ್ಯವೆಂದು ಸಾಬೀತು ಮಾಡಲೆಂದೇ ಈ ಸಮಿತಿಯನ್ನು ರಚಿಸಿರುವುದು ಸ್ಪಷ್ಟವಾಗುತ್ತದೆ.

ಈ ಅಪಪ್ರಚಾರವನ್ನು ಮಾಡುತ್ತಲೇ ಈಗಾಗಲೇ ದೇಶಾದ್ಯಂತ ಮುಸ್ಲಿಮ್ ವಿರೋಧಿ ಫ್ಯಾಶಿಸ್ಟ್ ಮನಸ್ಥಿತಿಯನ್ನು ಸಮಾಜದಲ್ಲಿ ಸಂಘಿಗಳು ಸೃಷ್ಟಿಸಿದ್ದಾರೆ. ಆದ್ದರಿಂದಲೇ ಎಸ್‌ಐಆರ್‌ನಿಂದ ದೊಡ್ಡ ಸಂಖ್ಯೆಯಲ್ಲಿ ದಾಖಲೆಗಳಿಲ್ಲದ ಹಿಂದೂಗಳೇ ಹೊರದಬ್ಬಲ್ಪಡುತ್ತಿದ್ದರೂ ಮೋದಿ ಹಿಂದೂಗಳನ್ನು ಮುಸ್ಲಿಮರಿಂದ ರಕ್ಷಿಸುತ್ತಿದ್ದಾರೆ ಎಂಬ ನರೆಟಿವ್ ಕಟ್ಟಿ ಹಿಂದೂ ಬಡವರು ಅವರ ಬೆರಳಿಂದ ಅವರ ಕಣ್ಣನ್ನೇ ಚುಚ್ಚಿಕೊಳ್ಳುವಂತೆ ಮಾಡುತ್ತಿದ್ದಾರೆ.

ಆರ್ಥಿಕ ನಿರಾಶ್ರಿತರೋ? ಅಕ್ರಮ ಸಂಚುಕೋರರೋ?

ಹಾಗೆ ನೋಡಿದರೆ ಕಳೆದ 77 ವರ್ಷಗಳಲ್ಲಿ ಈ ದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಈ ದೇಶವನ್ನು ಆಳಿದ್ದರೂ ಕೋಟಿಯಿರಲಿ, ಲಕ್ಷವಿರಲಿ, ಸಾವಿರ ಸಂಖ್ಯೆಗಳಲ್ಲಿ ಮಾತ್ರ ಅಕ್ರಮ ವಲಸಿಗರು ಹೊಟ್ಟೆಪಾಡಿಗೆ ಭಾರತಕ್ಕೆ ಬಂದಿರಬಹುದಷ್ಟೆ! ಅದರಲ್ಲೂ 2005ರ ನಂತರ ಬಾಂಗ್ಲಾ ದೇಶದ ಆರ್ಥಿಕ ಪ್ರಗತಿ ಸಿದ್ಧ ಉಡುಪು ರಫ್ತು ಇತ್ಯಾದಿಗಳ ಕಾರಣದಿಂದ ಭಾರತಕ್ಕಿಂತ ವೇಗವಾಗಿದ್ದು ಅಲ್ಲಿಯ ತಲಾ ಆದಾಯ ಭಾರತಕ್ಕಿಂತ ತುಸು ಹೆಚ್ಚೇ ಆಗಿದೆ. ಹೀಗಾಗಿ ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮ ವಲಸೆ ಗಮನಾರ್ಹವಾಗಿ ಕಡಿಮೆಯಾಗಿದೆ.

ಇದೇ ಕಾರಣದಿಂದಲೇ ಬಿಹಾರ ಮತ್ತು ಪ. ಬಂಗಾಳವನ್ನೂ ಒಳಗೊಂಡಂತೆ ಎಸ್‌ಐಆರ್ ಮುಗಿದಿರುವ ರಾಜ್ಯಗಳಲ್ಲಿ ಎಸ್‌ಐಆರ್ ಮೂಲಕ ಎಷ್ಟು ನೂರು, ಸಾವಿರ ಅಥವಾ ಲಕ್ಷ ಅಕ್ರಮ ವಲಸೆಗಾರರನ್ನು ಪತ್ತೆ ಹಚ್ಚಲಾಯಿತು ಎಂಬ ಪ್ರಶ್ನೆಗೆ ಆಯೋಗ ಮತ್ತು ಮೋದಿ ಸರಕಾರ ಉತ್ತರವನ್ನೇ ಕೊಡುತ್ತಿಲ್ಲ. ಸುಪ್ರೀಂ ಕೂಡ ಈ ಪ್ರಶ್ನೆಯನ್ನು ಆಯೋಗಕ್ಕೆ ಕೇಳಿಲ್ಲ.

ಈ ಮಧ್ಯೆ ಕಳೆದ ಎರಡು ವಾರಗಳಲ್ಲಿ ಪ. ಬಂಗಾಳದಲ್ಲಿ ಮತ್ತು ಗುಜರಾತ್‌ಗಳಲ್ಲಿ ಅಲ್ಲಿನ ಬಿಜೆಪಿ ಸರಕಾರ ವೀಸಾ ಅವಧಿ ಮೀರಿ ವಾಸಿಸುತ್ತಿದ್ದ ಮತ್ತು ದಾಖಲೆಗಳಿಲ್ಲದೆ ವಾಸಿಸುತ್ತಿದ್ದ 3-4 ಸಾವಿರ ಬಡ ಬಾಂಗ್ಲಾ ದೇಶಿಗಳನ್ನು ಪತ್ತೆ ಹಚ್ಚಿದ ವರದಿಗಳು ಬರುತ್ತಿವೆ. ಇದು ಹೊಟ್ಟೆ ಪಾಡಿಗಾಗಿ ಅಮೆರಿಕಕ್ಕೆ ಪ್ರತಿವರ್ಷ ಸಾವಿರಾರು ಭಾರತೀಯರು ಅಕ್ರಮವಾಗಿ ಹೋಗಿ ಬಂಧನಕ್ಕೊಳಗಾಗುತ್ತಿದ್ದಾರಲ್ಲ ಆ ರೀತಿಯದ್ದು. ಭಾರತೀಯ ಹಿಂದೂಗಳು ಸಾವಿರ ಸಂಖ್ಯೆಯಲ್ಲಿ ಅಕ್ರಮವಾಗಿ ಅಮೆರಿಕಕ್ಕೆ ವಲಸೆ ಹೋಗುವುದು ಅಲ್ಲಿನ ಜನಸಂಖ್ಯೆಯಲ್ಲಿ ಜನಾಂಗೀಯ ಏರುಪೇರನ್ನು ತಂದು ಅಮೆರಿಕವನ್ನು ಆಕ್ರಮಣ ಮಾಡಿಕೊಳ್ಳಲು ಅಲ್ಲ. ಹಾಗೆಯೇ ಬಾಂಗ್ಲಾದೇಶದಿಂದ ಇಲ್ಲಿಗೆ ವಲಸೆ ಬಂದಿರಬಹುದಾದ ಕೆಲವು ಸಾವಿರ ದಾಖಲೆಗಳಿಲ್ಲದ ಕಾರ್ಮಿಕರು ಆರ್ಥಿಕ ನಿರಾಶ್ರಿತರೇ ವಿನಾ ಸಂಚುಕೋರರಲ್ಲ.

ಆದರೆ ಮುಸ್ಲಿಮರಿಗೆ ಅಕ್ರಮರೆಂದು ಹಣೆಪಟ್ಟಿ ಕಟ್ಟಿ ಸದಾ ತೂಗು ಕತ್ತಿಯ ಕೆಳಗಿರಿಸಿ ಶಾಶ್ವತ ಅತಂತ್ರರನ್ನಾಗಿಸಬಹುದೆಂಬುದನ್ನು ಸೂಚಿಸಲೆಂದೇ ‘ಜನಸಂಖ್ಯಾ ಬದಲಾವಣೆಯ ಸಮಿತಿ’ಯನ್ನು ರಚಿಸಲಾಗಿದೆ.

ಹಾಗೆ ನೋಡಿದರೆ ವಿದೇಶಿ ಮುಸ್ಲಿಮರ ಅಕ್ರಮ ವಲಸೆಯಿಂದಲೂ ಭಾರತದ ಜನಸಂಖ್ಯೆಗೆ ಸವಾಲಿಲ್ಲ. ಸ್ಥಳೀಯ ಮುಸ್ಲಿಮರ ಜನಸಂಖ್ಯೆಯಿಂದಲೂ ಭಾರತಕ್ಕೆ ಸವಾಲಿಲ್ಲ. ಜನಸಂಖ್ಯೆಯ ವಿಷಯದಲ್ಲಿ ಭಾರತಕ್ಕಿರುವ ಸವಾಲೇ ಬೇರೆ. ಮೋದಿ ಸರಕಾರ ತನ್ನ ಫ್ಯಾಶಿಸ್ಟ್ ಕುತಂತ್ರಗಳಿಂದ ಅಸಲಿ ಸಮಸ್ಯೆಗಳನ್ನು ಮುಚ್ಚಿ ಹಾಕುತ್ತಿದೆ.

ಮುಸ್ಲಿಮ್ ಜನಸಂಖ್ಯಾ ಏರಿಕೆಯೆಂಬ ಮಿಥ್ಯೆ

ಈ ಬಿಜೆಪಿ ಪಕ್ಷದ ಜನ ಒಮ್ಮೆಯಾದರೂ ಪಕ್ಷದ ಹಿತಕ್ಕಿಂತ ಹೆಚ್ಚು ದೇಶದ ಹಿತವನ್ನು ಗಮನದಲ್ಲಿಟ್ಟುಕೊಂಡು ಯೋಚಿಸಿದರೆ:

- ಭಾರತವು ಜನಸಂಖ್ಯಾ ಸ್ಫೋಟದ ಪರಿಸ್ಥಿತಿಯನ್ನು ಎದುರಿಸುತ್ತಿಲ್ಲವೆಂದೂ,

-ವಾಸ್ತವವಾಗಿ ಜನಸಂಖ್ಯಾ ಏರಿಕೆಯು ಭಾರತದ ಬಡತನಕ್ಕೆ ಕಾರಣವಲ್ಲ ಎಂಬುದೂ ಹಾಗೂ ಈಗ ಭಾರತದಲ್ಲಿ ಯುವಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಅದ್ಭುತ ಆರ್ಥಿಕ ಪ್ರಗತಿಯ ಅವಕಾಶವಿದೆಯೆಂಬುದೂ,

- ಹಾಗೂ ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಗತಿ ಕಳೆದ ಎರಡು ದಶಕಗಳಲ್ಲಿ ಹಿಂದೂಗಳ ಜನಸಂಖ್ಯೆಯ ಏರಿಕೆಯ ಗತಿಗಿಂತ ತೀವ್ರವಾಗಿ ಕುಸಿಯುತ್ತಿರುವುದೂ ಸ್ಪಷ್ಟವಾಗುತ್ತದೆ.

ಈ ಎಲ್ಲಾ ಅಂಶಗಳನ್ನು ಭಾರತ ಸರಕಾರದ ಕುಟುಂಬ ಮತ್ತು ಆರೋಗ್ಯ ಕಲ್ಯಾಣ ಇಲಾಖೆಯ ಭಾಗವಾಗಿರುವ ರಾಷ್ಟೀಯ ಕುಟುಂಬ ಆರೋಗ್ಯ ಸರ್ವೇ (NFHS)ನ 3,4 ಮತ್ತು 5ನೇ ಸುತ್ತಿನ ಸರ್ವೇಗಳು ಹಾಗೂ ಭಾರತದ 1991, 2001 ಹಾಗೂ 2011ರ ಜನಸಂಖ್ಯಾ ಸೆನ್ಸಸ್ ವರದಿಗಳೂ ಸ್ಪಷ್ಟಪಡಿಸುತ್ತವೆ.

ಭಾರತದ ಜನಸಂಖ್ಯೆಯ ಏರಿಕೆಯ ದರ ಕುಸಿಯುತ್ತಿದೆ

ಜನಸಂಖ್ಯೆಯ ಕುರಿತಾದ ಮತ್ತೊಂದು ಅತಿದೊಡ್ಡ ಮಿಥ್ಯೆಯೆಂದರೆ ಜನಸಂಖ್ಯೆಯಲ್ಲಿ ಭಾರತವು ಇಡೀ ಜಗತ್ತಿನಲ್ಲೇ ಮೊದಲನೇ ಸ್ಥಾನದಲ್ಲಿದ್ದು ಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ಸ್ಫೋಟಕ ಪರಿಸ್ಥಿತಿಯಲ್ಲಿದೆ. ಆದ್ದರಿಂದ ಅದನ್ನು ಕೂಡಲೇ ನಿಯಂತ್ರಣದಲ್ಲಿಡಲು ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು...ಇತ್ಯಾದಿ.

ವಾಸ್ತವದಲ್ಲಿ ಪರಿಸ್ಥಿತಿ ಅದಕ್ಕೆ ತದ್ವಿರುದ್ಧವಾಗಿದೆ. ಭಾರತದ ಜನಸಂಖ್ಯಾ ಏರಿಕೆಯ ದರ ಆರೋಗ್ಯಕರವಾಗಿ ಕಡಿಮೆಯಾಗುತ್ತಿದೆಯೇ ವಿನಾ ಹೆಚ್ಚಾಗುತ್ತಿಲ್ಲ..

ಸಾಮಾನ್ಯವಾಗಿ ಒಂದು ದೇಶದ ಜನಸಂಖ್ಯೆಯ ಏರಿಕೆಯ ಗತಿಯನ್ನು ಅರಿಯಲು ಒಟ್ಟಾರೆ ಫಲವಂತಿಕೆ ದರ (Total Fertility Rate- TFR) ಎಂಬ ಮಾನದಂಡವನ್ನು ಬಳಸುತ್ತಾರೆ. ಅಂದರೆ ಒಂದು ದೇಶದಲ್ಲಿ-ಪ್ರದೇಶದಲ್ಲಿ ಒಬ್ಬ ಮಹಿಳೆ 18-49 ವಯಸ್ಸಿನ ನಡುವಿನ ತನ್ನ ಗರ್ಭಧಾರಣಾ ಅವಧಿಯಲ್ಲಿ ಎಷ್ಟು ಮಕ್ಕಳಿಗೆ ಜನ್ಮ ನೀಡುತ್ತಿದ್ದಾಳೆ ಎನ್ನುವ ಸರಾಸರಿ ಸಂಖ್ಯೆಯದು.

ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಭಾರತದ TFR ದರ 5.9. ಅಂದರೆ 1951ರ ವೇಳೆಗೆ ಭಾರತದ ಮಹಿಳೆ ಸರಾಸರಿ 6 ಮಕ್ಕಳಿಗೆ ಜನ್ಮ ಕೊಡುತ್ತಿದ್ದಳು ಎಂದರ್ಥ. ಅದೇ ರೀತಿ ಮುಂದುವರಿದಿದ್ದರೆ ಈಗ ಭಾರತದ ಜನಸಂಖ್ಯೆ 250-300 ಕೋಟಿಗೆ ತಲುಪಬೇಕಿತ್ತು. ಆದರೆ ಭಾರತವು ಪ್ರಾರಂಭದಿಂದಲೇ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಅರಿವು ಹಾಗೂ ಕುಟುಂಬ ನಿಯಂತ್ರಣ ಸಾಧನಗಳ ಲಭ್ಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದರಿಂದ ಎಲ್ಲೆಲ್ಲಿ ಅರಿವು, ಲಭ್ಯತೆ ಹಾಗೂ ಮಹಿಳೆಯ ಶಿಕ್ಷಣ ಹಾಗೂ ಸಬಲೀಕರಣ ಸಾಪೇಕ್ಷವಾಗಿ ಸಾಧ್ಯವಾಯಿತೋ ಅಲ್ಲೆಲ್ಲಾ ಬಹಳ ಬೇಗನೆ TFR ದರ ಕುಸಿಯುತ್ತಾ ಬಂತು.

2015-16ರ NFHSನ ಅಂಕಿಅಂಶದ ಪ್ರಕಾರ ಈಗ ಭಾರತದ ಸರಾಸರಿ TFR ದರ 2.30ಕ್ಕೆ ಕುಸಿದಿದೆ. ಅಂದರೆ 1951ಕ್ಕೆ ಹೋಲಿಸಿದರೆ ಜನಸಂಖ್ಯಾ ಏರಿಕೆಯ ದರ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಿದೆ.

(http://rchiips.org/nfhs/nfhs-4Reports/India.pdf)

TFR ದರ ಕುಸಿಯಲು ಕಾರಣ ಮಹಿಳಾ ಸಬಲೀಕರಣವೇ ವಿನಾ ಕಾನೂನಲ್ಲ

ಹಾಗೆ ನೋಡಿದರೆ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಬಲವಂತದ ಸಂತಾನ ಹರಣ ಶಸ್ತ್ರ ಚಿಕಿತ್ಸೆಗಳನ್ನು ನಡೆಸಿದ ಅತಿರೇಕಗಳನ್ನು ಬಿಟ್ಟರೆ ಭಾರತದ ಜನಸಂಖ್ಯಾ ನಿಯಂತ್ರಣ ಯೋಜನೆಯು ಪ್ರಧಾನವಾಗಿ ಮನವರಿಕೆ, ಸೌಲಭ್ಯಗಳ ಒದಗಿಸುವಿಕೆ ಹಾಗೂ ಮಹಿಳೆಯ ಸಬಲೀಕರಣಗಳನ್ನು ಆಧರಿಸಿಯೇ ನಡೆಯುತ್ತಿದೆ. ಜಗತ್ತಿನಾದ್ಯಂತ ಎಲ್ಲಾ ಯಶಸ್ವಿ ಕುಟುಂಬ ನಿಯಂತ್ರಣಗಳ ಕಥನವೂ ಇದೇ ಮಾರ್ಗವನ್ನು ಅನುಸರಿಸಿದೆ. 1994ರಲ್ಲಿ ಕೈರೋದಲ್ಲಿ ನಡೆದ ಜನಸಂಖ್ಯಾ ನಿಯಂತ್ರಣ ಮತ್ತು ಅಭಿವೃದ್ಧಿ ಸಮ್ಮೇಳನದಲ್ಲೂ ಭಾರತ ಇದೇ ಮಾರ್ಗಕ್ಕೆ ಬದ್ಧವಾಗಿರುವುದಾಗಿ ಘೋಷಿಸಿದೆ.

ಭಾರತದೊಳಗೆ ವಿವಿಧ ರಾಜ್ಯಗಳಲ್ಲಿ ವಿಭಿನ್ನವಾಗಿರುವ ಈ TFR ದರವನ್ನು ಅವಲೋಕಿಸಿದಾಗಲೂ ಈ ಅಂಶ ಸ್ಪಷ್ಟವಾಗುತ್ತದೆ. 2015-16ರ NFHSನ ವರದಿಯ ಪ್ರಕಾರ ಭಾರತದ ಸರಾಸರಿ TFR ದರ 2.3 ಆಗಿದ್ದರೆ ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ, ಗುಜರಾತ್..ಇನ್ನಿತ್ಯಾದಿ ಸಾಪೇಕ್ಷವಾಗಿ ಅಭಿವೃದ್ಧಿ ಹೊಂದಿದ ರಾಜ್ಯಗಳಲ್ಲಿ TFR ದರ 1.7-1.8ರಷ್ಟು ಮಾತ್ರ ಅಂದರೆ ದೇಶದ ಸರಾಸರಿಗಿಂತ ಕಡಿಮೆಯಾಗಿತ್ತು.

ಆದರೆ ಬಿಹಾರದ ದರ 3.4 ಆಗಿದ್ದರೆ ಉತ್ತರ ಪ್ರದೇಶದ್ದು 2.7. ಅಂದರೆ ದೇಶದ ಸರಾಸರಿಗಿಂತ ಹೆಚ್ಚು. ಮೇಲ್ನೋಟಕ್ಕೆ ಕಾಣುವಂತೆ ಬಿಹಾರ ಹಾಗೂ ಉತರ ಪ್ರದೇಶಗಳಿಗಿಂತ TFR ದರ ಕಡಿಮೆ ಇರುವ ರಾಜ್ಯಗಳಲ್ಲಿ ಮಹಿಳಾ ಸಾಕ್ಷರತೆ, ಶಿಕ್ಷಣ, ಸಾರ್ವಜನಿಕ ವಲಯದಲ್ಲಿ ಮಹಿಳೆಯ ಭಾಗವಹಿಸುವಿಕೆ ಮತ್ತು ಆ ರಾಜ್ಯಗಳ ಸಾಪೇಕ್ಷ ಅಭಿವೃದ್ಧಿ ದರಗಳು ಹೆಚ್ಚಾಗಿದೆ.

ಹಾಗೆ ನೋಡಿದರೆ, ಉತ್ತರ ಪ್ರದೇಶ ಮತ್ತು ಬಿಹಾರದ ಹಿಂದೂಗಳ TFR ದರವು ದಕ್ಷಿಣ ರಾಜ್ಯಗಳ ಮುಸ್ಲಿಮರ TFR ದರಕ್ಕಿಂತ ಜಾಸ್ತಿ. ಅರ್ಥಾತ್ ಬಿಹಾರ ಹಾಗೂ ಉತ್ತರ ಪ್ರದೇಶಗಳ ಹಿಂದೂಗಳಿಗಿಂತ ದಕ್ಷಿಣ ರಾಜ್ಯಗಳ ಮುಸ್ಲಿಮ್ ಮಹಿಳೆಯರು ಕಡಿಮೆ ಮಕ್ಕಳಿಗೆ ಜನ್ಮ ನೀಡುತ್ತಿದ್ದಾರೆ. ಆದ್ದರಿಂದಲೇ ‘Development Is The Best Contraceptive- ಅಭಿವೃದ್ಧಿಯೇ ಅತ್ಯುತ್ತಮ ಸಂತಾನ ನಿರೋಧಕ’ ಎಂಬ ಮಂತ್ರವನ್ನು ಜಗತ್ತಿನಾದ್ಯಂತ ಜಪಿಸಲಾಗುತ್ತಿದೆ. ಶಿಕ್ಷಿಸುವ ಕಾನೂನುಗಳಲ್ಲ.

ಅಷ್ಟೇ ಮುಖ್ಯವಾಗಿ 2020-21ರ NFHSನ ವರದಿಯ ಪ್ರಕಾರ ಭಾರತದ ಶೇ. 54ರಷ್ಟು ಮಹಿಳೆಯರಿಗೆ ಕೇವಲ ಇಬ್ಬರು ಮಕ್ಕಳಿದ್ದರೆ ಈ ದಶಕದಲ್ಲಿ ಮದುವೆಯಾದ ಶೇ. 76ರಷ್ಟು ಮಹಿಳೆಯರಿಗೆ ಎರಡನೇ ಮಗುವನ್ನು ಮಾಡಿಕೊಳ್ಳಲು ಇಷ್ಟವಿಲ್ಲ.

ಅಂದರೆ ಕುಟುಂಬದಲ್ಲಿ ಮಹಿಳೆಯನ್ನು ಆಕೆಯ ದೇಹದ ಮೇಲೆ ಹಾಗೂ ಫಲವಂತಿಕೆಯ ಮೇಲೆ ತಾನೇ ತೀರ್ಮಾನ ತೆಗೆದುಕೊಳ್ಳುವಷ್ಟು ಸಬಲೀಕರಿಸಿದರೆ ಮತ್ತು ಕುಟುಂಬಗಳು ಪ್ರಜಾತಾಂತ್ರೀಕರಣಗೊಂಡರೆ ತಾನಾಗಿಯೇ ದೇಶದ ಜನಸಂಖ್ಯೆ ಕಡಿಮೆಯಾಗುತ್ತದೆ.

ಮುಸ್ಲಿಮರ ಜನಸಂಖ್ಯೆ ಹಿಂದೂಗಳಿಗಿಂತ ವೇಗವಾಗಿ ಕಡಿಮೆಯಾಗುತ್ತಿದೆ

NFHSನ ವರದಿಗಳು ಸ್ಪಷ್ಟಪಡಿಸುವ ಮತ್ತೊಂದು ಸತ್ಯವೇನೆಂದರೆ ಕಳೆದ ಮೂರು ದಶಕಗಳಿಂದ ದೇಶದಲ್ಲಿ ಮುಸ್ಲಿಮರ TFR ದರವು ಹಿಂದೂಗಳಿಗಿಂತ ವೇಗವಾಗಿ ಇಳಿಕೆಯಾಗುತ್ತಿದೆ. ಉದಾಹರಣೆಗೆ 2005-6ರಲ್ಲಿ ನಡೆದ NFHSನ 3ನೇ ಸರ್ವೇಯ ಪ್ರಕಾರ ಹಿಂದೂಗಳ TFR ದರವು 2.59 ಇದ್ದರೆ ಮುಸ್ಲಿಮರ TFR ದರವು 3.4ರಷ್ಟಿತ್ತು.

ಆದರೆ ಹತ್ತುವರ್ಷಗಳ ನಂತರ NFHSನ 4ನೇ ಸರ್ವೇಯ ಪ್ರಕಾರ ಹಿಂದೂಗಳ TFR ದರವು 2.59ರಿಂದ 2.13ಕ್ಕೆ ಇಳಿದಿತ್ತು. ಅಂದರೆ 0.46ರಷ್ಟು ಇಳಿಕೆ. ಅದೇ ಅವಧಿಯಲ್ಲಿ ಮುಸ್ಲಿಮರ TFR ದರವು 3.4ರಿಂದ 2.61ಕ್ಕೆ ಇಳಿಯಿತು. ಅಂದರೆ 0.79 ರಷ್ಟು ಇಳಿಕೆ.

ಅಂದರೆ, ಈಗಲೂ ಮುಸ್ಲಿಮರ TFR ದರವು ಹಿಂದೂಗಳಿಗಿಂತ ಜಾಸ್ತಿ ಇದ್ದರೂ ಕಳೆದೊಂದು ದಶಕದಲ್ಲಿ ಮುಸ್ಲಿಮರ TFR ದರ ಮತ್ತು ಆ ಕಾರಣಕ್ಕಾಗಿ ಮುಸ್ಲಿಮರ ಜನಸಂಖ್ಯಾ ಏರಿಕೆಯ ಪ್ರಮಾಣ ಹಿಂದೂಗಳಿಗಿಂತ ತೀವ್ರವಾಗಿ ಕಡಿಮೆಯಾಗುತ್ತಿದೆ.

2005ರಲ್ಲಿ ಮುಸ್ಲಿಮರ TFR ಪ್ರಮಾಣವು ಹಿಂದೂಗಳಿಗಿಂತ 0.81 ರಷ್ಟು ಹೆಚ್ಚಿದ್ದರೆ ಆ ಅಂತರವು ಹತ್ತು ವರ್ಷಗಳ ನಂತರ 2015ರಲ್ಲಿ 0.4ಕ್ಕೆ ಇಳಿದಿದೆ. ಹೀಗಾಗಿ ಮುಂದಿನ ದಶಕದಲ್ಲಿ ಹಿಂದೂ-ಮುಸ್ಲಿಮ್ ಫಲವಂತಿಕೆಯ ಪ್ರಮಾಣದಲ್ಲಿ ಯಾವುದೇ ಅಂತರ ಇಲ್ಲದಂತಾಗಲಿದೆ.

ಅಷ್ಟೇ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಮುಸ್ಲಿಮ್ TFR ದರವು ಕೇರಳ, ಅಸ್ಸಾಂ, ಪ. ಬಂಗಾಳ ಜಮ್ಮು-ಕಾಶ್ಮೀರದಂತಹ ಮುಸ್ಲಿಮ್ ಬಾಹುಳ್ಯವಿರುವ ರಾಜ್ಯಗಳಲ್ಲೇ ವೇಗವಾಗಿ ಕುಸಿಯುತ್ತಿದೆ.

ಮೇಲಿನ ಸರಕಾರಿ ಅಂಕಿಅಂಶಗಳು ಸ್ಪಷ್ಟಪಡಿಸುವುದು-

-ಭಾರತದ ಜನಸಂಖ್ಯಾ ಏರಿಕೆಯ ಪ್ರಮಾಣ ಆರೋಗ್ಯಕರವಾಗಿ ಕುಸಿಯುತ್ತಿದೆ.

-ಮುಸ್ಲಿಮರ ಜನಸಂಖ್ಯೆಯ ಏರಿಕೆಯ ಪ್ರಮಾಣವು ಹಿಂದೂಗಳ ಜನಸಂಖ್ಯೆಯ ಏರಿಕೆಯ ಪ್ರಮಾಣಕ್ಕಿಂತ ಅರ್ಧಕ್ಕರ್ಧ ಕಡಿಮೆಯಾಗುತ್ತಿದೆ.

-ಮತ್ತು ಯಾವ ರಾಜ್ಯಗಳಲ್ಲಿ ಸಾಪೇಕ್ಷವಾಗಿ ಅಭಿವೃದ್ಧಿಯಾಗಿದೆಯೋ ಆ ರಾಜ್ಯಗಳಲ್ಲಿ ಹಿಂದೂ-ಮುಸ್ಲಿಮ್ ಎಂಬ ಭೇದ ಭಾವವಿಲ್ಲದೆ ಎಲ್ಲಾ ಸಮುದಾಯಗಳ TFR ದರ ಕುಸಿದಿದೆ.

ಹೀಗಾಗಿ ಜನಸಂಖ್ಯೆಯ ನಿಯಂತ್ರಣ ಮಾಡಲು ಸರಕಾರ ಗಮನಹರಿಸಬೇಕಿರುವುದು ಶಿಕ್ಷಣ, ಉದ್ಯೋಗ, ಆರೋಗ್ಯ, ಕುಟುಂಬ ಕಲ್ಯಾಣ ಯೋಜನೆಗಳ ಅರಿವು, ಸಾಧನಗಳ ಲಭ್ಯತೆ ಮತ್ತು ಮಹಿಳಾ ಸಬಲೀಕರಣಗಳ ಮೇಲೆ.

ಅಸಲಿ ಸಮಸ್ಯೆ-ಜನಸಂಖ್ಯೆ ಹೆಚ್ಚಳದ್ದಲ್ಲ-ಕಡಿಮೆಯಾಗುತ್ತಿರುವುದು!

ಹಾಗೆ ನೋಡಿದರೆ, NFHSನ ವರದಿಗಳೂ ಹಾಗೂ ಜಗತ್ತಿನಾದ್ಯಂತ ನಡೆಯುತ್ತಿರುವ ಜನಸಂಖ್ಯೆ ಅಧ್ಯಯನಗಳು ಮುಂದಿಡುತ್ತಿರುವ ಅಪಾಯ ಜನಸಂಖ್ಯೆ ಹೆಚ್ಚಳದ್ದಲ್ಲ. ಜನಸಂಖ್ಯೆ ಕಡಿಮೆಯಾಗುತ್ತಿರುವುದು!

LANCET ಎಂಬ ಜಗತ್ತಿನ ಅತ್ಯಂತ ಪ್ರತಿಷ್ಠಿತ ವೈಜ್ಞಾನಿಕ ಜರ್ನಲ್ ನ ಅಧ್ಯಯನದ ಪ್ರಕಾರ ಈಗ ಭಾರತದ ಜನಸಂಖ್ಯೆ 140 ಕೋಟಿಯಿದ್ದು, 2048ರ ವೇಳೆಗೆ 160 ಕೋಟಿಗೆ ತಲುಪಿದರೂ ಜನಸಂಖ್ಯೆಯ ಏರಿಕೆಯ ವೇಗ ಕುಸಿಯುತ್ತಿರುವುದರಿಂದ 2048ರಿಂದ ಭಾರತದ ಜನಸಂಖ್ಯೆ ಕುಸಿಯುತ್ತಾ ಹೋಗುತ್ತದೆ ಹಾಗೂ 2100ರ ವೇಳೆಗೆ ಭಾರತದ ಜನಸಂಖ್ಯೆ 109 ಕೋಟಿಗೆ ಇಳಿದಿರುತ್ತದೆ.

ಅದಕ್ಕಿಂತ ಗಂಭೀರವಾದ ಸಂಗತಿಯೆಂದರೆ ಆ ಸಂದರ್ಭದಲ್ಲಿ ಕೆಲಸ ಮಾಡಬಲ್ಲ ಯುವಕರ ಸಂಖ್ಯೆಗಿಂತ ಹಿರಿಯರ-ವೃದ್ಧರ ಸಂಖ್ಯೆ ಎರಡು ಪಟ್ಟು ಹೆಚ್ಚಿರುತ್ತದೆ. ಒಬ್ಬ ದುಡಿಯುವ ವ್ಯಕ್ತಿಯ ಮೇಲೆ ಅಪ್ಪ, ಅಮ್ಮ, ತಾತ, ಅಜ್ಜಿ ಹೀಗೆ ನಾಲ್ವರು ಅವಲಂಬಿತರಾಗುವ ಪರಿಸ್ಥಿತಿ ಎದುರಾಗುತ್ತದೆ. ಇದು ಆ ದೇಶದ ಆರ್ಥಿಕತೆಯ ಮೇಲೂ ಪರಿಣಾಮ ಬೀರುತ್ತದೆ. ಕೆಲಸ ಮಾಡುವ ಜನರಿಗಾಗಿ ಜನಸಂಖ್ಯೆ ಹೆಚ್ಚಿರುವ ಪ್ರದೇಶಗಳನ್ನು ಅವಲಂಬಿಸಬೇಕಾಗುತ್ತದೆ.

ಹೀಗಾಗಿ ಸರಕಾರ ಚಿಂತಿಸಬೇಕಿರುವುದು ಇಲ್ಲದ ಜನಸಂಖ್ಯಾ ಸ್ಫೋಟದ ಸಮಸ್ಯೆಯ ಬಗ್ಗೆಯಲ್ಲ. ಈಗ ಜಗತ್ತಿನಲೇ ಅತಿ ಹೆಚ್ಚು ಯುವಶಕ್ತಿ ಇರುವ ಈ ದೇಶದಲ್ಲಿ ಹೇಗೆ ಉದ್ಯೋಗಗಳನ್ನು ಸೃಷ್ಟಿಸಿ ಅದನ್ನು ರಚನಾತ್ಮಕವಾಗಿ ಬಳಸಿಕೊಳ್ಳಬಹುದು ಎಂಬ ಬಗ್ಗೆ ಮತ್ತು ಇನ್ನೆರಡು ದಶಕಗಳ ನಂತರ ಎದುರಾಗಲಿರುವ ಹಿರಿಯರ ಬಾಹುಳ್ಯ ತಂದೊಡ್ಡುವ ಆರ್ಥಿಕ-ರಾಜಕೀಯ-ಸಾಂಸ್ಕೃತಿಕ ಸಮಸ್ಯೆಗಳನ್ನು ಹೇಗೆ ಎದುರಿಸುವುದು ಎಂಬ ಬಗ್ಗೆ.

ಆದರೆ ಈ ಸಂಘಿ ಫ್ಯಾಶಿಸ್ಟರು ಭಾರತದ ವರ್ತಮಾನಕ್ಕೂ ಶತ್ರುಗಳೇ, ಭವಿಷ್ಯಕ್ಕೂ ಶತ್ರುಗಳೇ..

Tags

Muslims
share
ಶಿವಸುಂದರ್
ಶಿವಸುಂದರ್
Next Story
X