ಫ್ಯಾಶಿಸ್ಟ್ ಎಸ್‌ಐಆರ್ ಮತ್ತು ನಿಷ್ಕ್ರಿಯ ಕಾಂಗ್ರೆಸ್!: ಬಡವ, ಮುಸ್ಲಿಮರ ನಾಗರಿಕತ್ವ ಕಸಿಯುವ ಎಸ್‌ಐಆರ್‌ನ ಹೊಸ ತಂತ್ರ-ಕುತಂತ್ರಗಳು

ಎಸ್‌ಐಆರ್ ಎಂದರೆ ದೇಶದ ಸಕಲ ಜನರ ನಾಗರಿಕತ್ವ ಪರಿಶೀಲನೆ ಎಂಬ ಬಗ್ಗೆ ಯಾವುದೇ ಅನುಮಾನಗಳು ಬೇಕಾಗಿಲ್ಲ. ಆದರೆ ಆ ರೀತಿ ನಾಗರಿಕತ್ವ ಪರಿಶೀಲನೆ ಮಾಡುವ ಮತ್ತು ಅದನ್ನು ಆಧರಿಸಿ ನಾಗರಿಕತ್ವ ಸ್ವೀಕಾರ ಅಥವಾ ತಿರಸ್ಕಾರ ಮಾಡುವ ಶಾಸನಾತ್ಮಕ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ನಾಗರಿಕತ್ವ ತಿರಸ್ಕರಿಸುವ ಅಧಿಕಾರವನ್ನು ಸಂವಿಧಾನದ ಆರ್ಟಿಕಲ್ 324 ಆಗಲೀ 326 ಆಗಲೀ ಚುನಾವಣಾ ಆಯೋಗಕ್ಕೆ ಕೊಟ್ಟಿಲ್ಲ.
ಚುನಾವಣಾ ಆಯೋಗವು ಮಾಮೂಲಿನಂತೆ ಮತಪಟ್ಟಿ ಪರಿಷ್ಕರಣೆ ಮಾಡದೆ ದಿಢೀರನೆ ಸಮಗ್ರ ತೀವ್ರ ಪರಿಷ್ಕರಣೆ (ಎಸ್‌ಐಆರ್) ಮಾಡುತ್ತಿರುವುದು ಏಕೆಂಬುದು ಈಗ ಗುಟ್ಟಾಗಿ ಏನೂ ಉಳಿದಿಲ್ಲ. ಇದೇ ಜನವರಿ 22ರಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಾಡುತ್ತಾ ಚುನಾವಣಾ ಆಯೋಗವು ಎಸ್‌ಐಆರ್ ಮಾಡುತ್ತಿರುವ ಉದ್ದೇಶವನ್ನು ಅನುಮಾನಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸಿದೆ. ಅದರ ಪ್ರಕಾರ ಭಾರತದ ನಾಗರಿಕತ್ವ ಕಾಯ್ದೆಗೆ 2003ರಲ್ಲಿ ತಿದ್ದುಪಡಿ ಆಯಿತು.. ಆದರೆ ಅದು:
‘‘This amendment came after the previous SIR. The amendment had never been applied in the intervening years, until now. Revision of electoral rolls had been done earlier on the basis of self-declaration of citizenship. This [SIR 2025] we found was an opportune time to take note of this statutory amendment of 2003 and examine citizenship for the purpose of preparing the electoral roll,”
(ಕಳೆದ ಬಾರಿ ಎಸ್‌ಐಆರ್ ನಡೆದದ್ದು ಭಾರತದ ನಾಗರಿಕತ್ವ ಕಾಯ್ದೆಗೆ 2003 ರಲ್ಲಿ ತಿದ್ದುಪಡಿ ಮಾಡುವ ಮುನ್ನ. ಆ ತಿದ್ದುಪಡಿಗಳನ್ನು ಮಾಡಿದ ಮೇಲೆ ಈ ದೇಶದಲ್ಲಿ ಎಸ್‌ಐಆರ್ ಆಗಿಯೇ ಇಲ್ಲ. ಆದ್ದರಿಂದ ಈ ಬಾರಿ ಎಸ್‌ಐಆರ್ ಮಾಡುವಾಗ ನಾಗರಿಕತ್ವ ಕಾಯ್ದೆಗೆ ಆಗಿರುವ ತಿದ್ದುಪಡಿಯನ್ನು ಗಮನದಲ್ಲಿಟ್ಟುಕೊಂಡು ಮತಪಟ್ಟಿಯನ್ನು ತಯಾರು ಮಾಡುವ ಮುನ್ನ ನಾಗರಿಕತ್ವವನ್ನು ಪರಿಶೀಲಿಸಲು ಸರಿಯಾದ ಸಂದರ್ಭವೆಂದು ನಾವು ತೀರ್ಮಾನಿಸಿದೆವು.)
ಹೀಗಾಗಿ ಎಸ್‌ಐಆರ್ ಎಂದರೆ ದೇಶದ ಸಕಲ ಜನರ ನಾಗರಿಕತ್ವ ಪರಿಶೀಲನೆ ಎಂಬ ಬಗ್ಗೆ ಯಾವುದೇ ಅನುಮಾನಗಳು ಬೇಕಾಗಿಲ್ಲ. ಆದರೆ ಆ ರೀತಿ ನಾಗರಿಕತ್ವ ಪರಿಶೀಲನೆ ಮಾಡುವ ಮತ್ತು ಅದನ್ನು ಆಧರಿಸಿ ನಾಗರಿಕತ್ವ ಸ್ವೀಕಾರ ಅಥವಾ ತಿರಸ್ಕಾರ ಮಾಡುವ ಶಾಸನಾತ್ಮಕ ಅಧಿಕಾರ ಚುನಾವಣಾ ಆಯೋಗಕ್ಕಿಲ್ಲ. ನಾಗರಿಕತ್ವ ತಿರಸ್ಕರಿಸುವ ಅಧಿಕಾರವನ್ನು ಸಂವಿಧಾನದ ಆರ್ಟಿಕಲ್ 324 ಆಗಲೀ 326 ಆಗಲೀ ಚುನಾವಣಾ ಆಯೋಗಕ್ಕೆ ಕೊಟ್ಟಿಲ್ಲ. ಈ ಸಂಬಂಧ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ 1995ರಲ್ಲೇ ಲಾಲ್ ಬಾಬು ಹುಸೇನ್ ಪ್ರಕರಣದಲ್ಲಿ ಸ್ಪಷ್ಟಪಡಿಸಿದೆ. ಚುನಾವಣಾ ಆಯೋಗದ ಈ ಅಸಾಂವಿಧಾನಿಕತೆಯ ಬಗ್ಗೆ ಹಾಲಿ ತ್ರಿಸದಸ್ಯ ಪೀಠದ ನ್ಯಾ. ಬಾಗ್ಚಿಯವರು ಮಾತ್ರ ಆಗೀಗ ಮೌಖಿಕವಾಗಿ ಮಾತ್ರ ಪ್ರಶ್ನೆ ಮಾಡುತ್ತಿದ್ದಾರೆ. ಹೀಗಾಗಿ ಸುಪ್ರೀಂನ ಅಂತಿಮ ಆದೇಶ ಮೋದಿ ಸರಕಾರದ ಫ್ಯಾಶಿಸ್ಟ್ ಎಸ್‌ಐಆರ್‌ಗೆ ತಡೆಯೊಡ್ಡಬಲ್ಲದೇ ಎಂಬುದು ಖಾತರಿ ಇಲ್ಲ.
ಆದ್ದರಿಂದ ಈ ಎಸ್‌ಐಆರ್ ಮುಸುಕಿನಲ್ಲಿರುವ ಎನ್‌ಆರ್‌ಸಿಯೇ ಎಂಬುದು ಸ್ಪಷ್ಟ. ಆದ್ದರಿಂದಲೇ ಎಸ್‌ಐಆರ್‌ನ ಇಡೀ ಪ್ರಕ್ರಿಯೆಯನ್ನು ಎನ್‌ಆರ್‌ಸಿಯಂತೆ ಸರಿಯಾದ ದಾಖಲೆಗಳಿಲ್ಲದ ಗ್ರಾಮೀಣ ಮತ್ತು ನಗರದ ಬಡವರನ್ನು, ಆದಿವಾಸಿಗಳನ್ನು ವ್ಯವಸ್ಥಿತವಾಗಿ ಹಾಗೂ ಮುಸ್ಲಿಮರನ್ನು ಮತ್ತು ಕ್ರಿಶ್ಚಿಯನ್‌ರನ್ನು ಗುರಿ ಮಾಡಿ ಹೊರಗಿಡುವಂತೆ ರೂಪಿಸಲಾಗಿದೆ.
ಉದಾಹರಣೆಗೆ:
- ಎಸ್‌ಐಆರ್‌ನ ಪ್ರಕ್ರಿಯೆ- Mapping ಮತ್ತು Clamis and Objections,
- ಅದರ ನಿಬಂಧನೆಗಳು-ಮ್ಯಾಪಿಂಗ್ ಆಗದಿದ್ದರೆ ಕೊಡಬೇಕಿರುವ ದಾಖಲೆಗಳು ಮತ್ತು
-ಅವೆಲ್ಲವನ್ನು ಕೊಟ್ಟರೂ ಎಸ್‌ಐಆರ್ ನಡೆಯುತ್ತಿರುವ ರಾಜ್ಯಗಳಲ್ಲಿ ಚುನಾವಣಾ ಆಯೋಗ ಹಾಕುತ್ತಿರುವ ಹೊಸಹೊಸ ನಿಬಂಧನೆಗಳನ್ನು ನೋಡಿದರೆ ಅದು ಅತ್ಯಂತ ಸ್ಪಷ್ಟವಾಗುತ್ತದೆ.
ಅವಸರದ ಮ್ಯಾಪಿಂಗ್ ಹೊರಗೆ ಹಾಕುವ ಮೊದಲ ವಿಧಾನ
ಹಾಲಿ ಮತದಾರರ ಹೆಸರು 2003ರ ನಾಗರಿಕತ್ವ ಕಾಯ್ದೆ ಜಾರಿಗೆ ಬರುವ ಮುನ್ನ ನಡೆದ 2002, 2003ರ ಪರಿಷ್ಕೃತ ಪಟ್ಟಿಯಲ್ಲಿ ಕೂಡ ಇದ್ದರೆ ಆ ಮತದರಾರು ಯಾವುದೇ ಇತರ ಪ್ರಕ್ರಿಯೆಗೆ ಒಳಪಡಬೇಕಿಲ್ಲ ಮತ್ತು ಯಾವುದೇ ಹೆಚ್ಚುವರಿ ದಾಖಲೆಗಳನ್ನು ಕೊಡಬೇಕಿಲ್ಲ ಎಂದು ಆಯೋಗ ಸುಪ್ರೀಂ ಕೋರ್ಟ್ ನಲ್ಲಿ ಹೇಳಿದೆ.
ಆದರೆ ಈಗ ಹಾಲಿ 12 ರಾಜ್ಯಗಳಲ್ಲಿ ಮೊದಲ ಹಂತದ ಪ್ರಕ್ರಿಯೆ ಮುಗಿದಿದ್ದು ಪ. ಬಂಗಾಳದಲ್ಲಿ 31 ಲಕ್ಷ, ಉತ್ತರ ಪ್ರದೇಶದಲ್ಲಿ 1.06 ಕೋಟಿ, ಮತದಾರರ ಹೆಸರುಗಳು ಮ್ಯಾಪ್ ಆಗಿಲ್ಲ. ಅದಕ್ಕೆ ಪ್ರಧಾನ ಕಾರಣ:
1) ಈ ರೀತಿಯ ಮ್ಯಾಪಿಂಗ್ ನಡೆಯುತ್ತಿದೆ ಎಂಬುದೇ ಬಹುಜನರಿಗೆ ಗೊತ್ತಿಲ್ಲ. ಸಾಧಾರಣವಾಗಿBLO (Booth Level Officer)ಗಳು ಮನೆಮನೆಗೆ ಹೋಗಿ ಮತದಾರರ ಹೆಸರನ್ನು ಮ್ಯಾಪ್ ಮಾಡಬೇಕು. ಆದರೆ ಈ ಸರಕಾರಿ ನೌಕರರು ತಮ್ಮ ಸರಕಾರಿ ಕೆಲಸ ಮುಗಿಸಿದ ನಂತರವೇ ಮನೆಗಳಿಗೆ ಹೋಗಬೇಕು. ಸಾಮಾನ್ಯವಾಗಿ ವಲಸೆ ಕಾರ್ಮಿಕರು ತಿಂಗಳುಗಟ್ಟಲೇ ಮನೆ ಬಿಟ್ಟು ಇತರ ರಾಜ್ಯಗಳಿಗೆ ವಲಸೆ ಹೋಗಿರುತ್ತಾರೆ. ಒಂದು ಮನೆಗೆ ಮೂರು ಬಾರಿ ಭೇಟಿ ಕೊಡಬೇಕು. ಆದರೆ ತಮ್ಮ ಕೆಲಸ ಮುಗಿಸಿದ ನಂತರ ಈ ಹೆಚ್ಚುವರಿ ಕೆಲಸದ ಹೊರೆಯನ್ನು ಆ ಅಧಿಕಾರಿಗಳು ನಿಭಾಯಿಸುವುದು ಕಷ್ಟ.
ಕರ್ನಾಟಕದ ಬಹುಪಾಲು ಜಿಲ್ಲೆಗಳಲ್ಲಿ ಚುನಾವಣಾ ಅಧಿಕಾರಿಯ ಕಚೇರಿಯಲ್ಲಿ ಪ್ರಕಟಣೆ ನೀಡಲಾಗಿದ್ದು ಎರಡು ಮೂರು ದಿನಗಳಲ್ಲಿ ಮತದಾರರೇ ಬಂದು ಮ್ಯಾಪ್ ಮಾಡಿಕೊಳ್ಳಬೇಕೆಂಬ ಸೂಚನೆಯನ್ನು ನೀಡಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಬಿಎಲ್‌ಒಗಳು ಮನೆಮನೆಗೆ ಹೋಗುತ್ತಿದ್ದರೂ ಎಲ್ಲಾ ಮನೆಗಳನ್ನು ತಲುಪಲು ಸಾಧ್ಯವಾಗುತ್ತಿಲ್ಲ.
2) ಎರಡನೆಯದಾಗಿ 2002ರ ಹೆಸರುಗಳಲ್ಲಿ ಹಾಗೂ ಇಂದಿನ ದಾಖಲೆಯಲ್ಲಿ ಹೆಸರಿನಲ್ಲಿ ಇರುವ ಸ್ಪೆಲ್ಲಿಂಗ್ ವ್ಯತ್ಯಾಸ ಹಾಗೂ ತಮ್ಮ ಹೆಸರುಗಳು ಇಲ್ಲದಿದ್ದರೆ ತಮ್ಮ progeny ಅರ್ಥಾತ್ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಹೆಸರುಗಳಿದ್ದರೂ ಮ್ಯಾಪ್ ಆಗುತ್ತದೆ ಎಂಬ ಅವಕಾಶವಿದ್ದರೂ ಸಹಜವಾಗಿಯೇ ಅದರ ಲಾಭ ಸದಾ ಹೊಟ್ಟೆಪಾಡಿಗಾಗಿ ವಸತಿಯನ್ನು ಬದಲಿಸಬೇಕಾದ ಮತ್ತು ಸ್ಥಿರ ಬದುಕು ಇಲ್ಲದ ಗ್ರಾಮೀಣ ಹಾಗೂ ನಗರದ ಬಡವರಿಗೆ ಸಿಗುತ್ತಿಲ್ಲ. ಸಿಗಲು ಸಾಧ್ಯವೂ ಇಲ್ಲ. ಕೇವಲ ಈ ಕಾರಣಕ್ಕಾಗಿಯೇ ಉ. ಪ್ರದೇಶದಲ್ಲಿ ಒಂದು ಕೋಟಿಗೂ ಹೆಚ್ಚು ಜನರ ಹೆಸರು ಮ್ಯಾಪಿಂಗ್ ಆಗಿಲ್ಲ.
ಕರ್ನಾಟಕದಲ್ಲಿ ಈ ಎರಡೂ ಕಾರಣಗಳಿಗಾಗಿ ಹೋದವಾರದ ವೇಳೆಗೆ 2.03 ಕೋಟಿ ಮತದಾರರ ಮ್ಯಾಪಿಂಗ್ ಇನ್ನೂ ಆಗಿರಲಿಲ್ಲ. ಬೆಂಗಳೂರಿನಲ್ಲಂತೂ ಶೇ. 23ರ ಜನರ ಮ್ಯಾಪಿಂಗ್ ಮಾತ್ರ ಆಗಿದೆ ಎಂದು ಕರ್ನಾಟಕದ ಮುಖ್ಯ ಚುನಾವಣಾ ಆಯುಕ್ತರು ಪತ್ರಿಕೆಗಳಿಗೆ ಹೇಳಿದ್ದರು.
ಹೀಗಾಗಿ ಮೇಲ್ನೋಟಕ್ಕೆ ಈ ಮ್ಯಾಪಿಂಗ್ ಮತದಾರ ಹೆಸರನ್ನು ಒಳಗೊಳ್ಳುವ ಪ್ರಕ್ರಿಯೆ ಎಂದು ಕಂಡರೂ ಸಾರದಲ್ಲಿ ಹೊರ ಹಾಕುವ ಮೊದಲ ಸಾಧನವಾಗಿ ಕೆಲಸ ಮಾಡುತ್ತಿದೆ.
ನಾಗರಿಕತ್ವದ ದಾಖಲೆಗಳು-ಆಸ್ತಿ, ಶಿಕ್ಷಣ, ಸ್ಥಾನಮಾನ ಇದ್ದರೆ ಮಾತ್ರ ಪೌರರು!?
ಚುನಾವಣಾ ಆಯೋಗವು 2025ರ ಅಕ್ಟೋಬರ್ 25ರಂದು ಮತದಾರರು Claims and Objection ಹಂತದಲ್ಲಿ ಈ ಕೆಳಗಿನ 12 ದಾಖಲೆಗಳನ್ನು ಕೊಟ್ಟು ನಾಗರಿಕತ್ವ ಸಾಬೀತು ಮಾಡಿಕೊಳ್ಳಬೇಕೆಂದು ಪ್ರಕಟಣೆ ನೀಡಿದೆ. ಅದರ ಪ್ರಕಾರ ಈ ಕೆಳಗಿನ ದಾಖಲೆಗಳನ್ನು ಮಾತ್ರ ಆಯೋಗ ಒಪ್ಪಿಕೊಳ್ಳಲಿದೆಯೇ ಹೊರತು ಸರಕಾರವೇ ಜನರಿಗೆ ಕೊಟ್ಟಿರುವ ರೇಷನ್ ಕಾರ್ಡ್, ವೋಟರ್ ಕಾರ್ಡ್‌ಗಳನ್ನು ಒಪ್ಪಿಕೊಳ್ಳುವುದಿಲ್ಲ. ಆಧಾರ್ ಕಾರ್ಡ್ ಹೆಸರು ಆದೇಶದಲ್ಲಿದ್ದರೂ ತಳಹಂತದಲ್ಲಿ ಅದರ ಹೆಸರನ್ನು ಪ್ರಸ್ತಾಪ ಮಾಡುತ್ತಿಲ್ಲ. ಒಪ್ಪಿಕೊಳ್ಳುತ್ತಿಲ್ಲ.:
1. ಯಾವುದೇ ಕೇಂದ್ರ ಅಥವಾ ರಾಜ್ಯ ಸರಕಾರಗಳ ಅಥವಾ ಸರಕಾರಿ ಉದ್ದಿಮೆಗಳು ತಮ್ಮ ರೆಗ್ಯುಲರ್ ನೌಕರರಿಗೆ ನೀಡಿರುವ ಗುರುತು ಪತ್ರ, ಆದೇಶ ಪತ್ರ.
2. 1987ರ ಜುಲೈ 1ಕ್ಕೆ ಮುಂಚೆ ಸರಕಾರಗಳು, ಸ್ಥಳೀಯ ಆಡಳಿತ ಸಂಸ್ಥೆಗಳು, ಪೋಸ್ಟ್ ಆಫೀಸ್ ಅಥವಾ ಜೀವ ವಿಮಾ ನಿಗಮಗಳು, ಬ್ಯಾಂಕುಗಳು, ಭಾರತದಲ್ಲಿ ನೀಡಿರುವ ಯಾವುದೇ ದಾಖಲೆಗಳು, ಗುರುತು ಅಥವಾ ಪ್ರಮಾಣ ಪತ್ರಗಳು.
3. ಸಕ್ಷಮ ಪ್ರಾಧಿಕಾರವು ನೀಡಿರುವ ಜನನ ಪ್ರಮಾಣ ಪತ್ರ.
4. ಪಾಸ್ ಪೋರ್ಟ್.
5. ಅಧಿಕೃತ ಶಿಕ್ಷಣ ಪ್ರಾಧಿಕಾರ ಅಥವಾ ವಿಶ್ವವಿದ್ಯಾನಿಲಯಗಳು ನೀಡಿರುವ ಎಸೆಸೆಲ್ಸಿ ಅಥವಾ ಇತರ ಪ್ರಮಾಣಿತ ದಾಖಲೆಗಳು.
6. ರಾಜ್ಯಗಳ ಸಕ್ಷಮ ಪ್ರಾಧಿಕಾರಗಳು ನೀಡಿರುವ ಶಾಶ್ವತ ವಾಸ ಪತ್ರ.
7. ಅರಣ್ಯ ಹಕ್ಕು ಪ್ರಮಾಣ ಪತ್ರ.
8. ಸಕ್ಷಮ ಪ್ರಾಧಿಕಾರವು ನೀಡಿರುವ ಯಾವುದೇ ಜಾತಿ ಪ್ರಮಾಣ ಪತ್ರ.
9. ಎನ್‌ಆರ್‌ಸಿ ನಡೆದಿದ್ದರೆ ಅದರ ದಾಖಲೆ (ಸದ್ಯಕ್ಕೆ ಅದು ಅಸ್ಸಾಮಿಗೆ ಮಾತ್ರ ಅನ್ವಯ).
10. ರಾಜ್ಯ ಸರಕಾರ ಅಥವಾ ಸ್ಥಳೀಯ ಸಂಸ್ಥೆಗಳು ಸಿದ್ಧಪಡಿಸಿರುವ ಕೌಟುಂಬಿಕ ದಾಖಲೆಗಳು.
11. ಸರಕಾರವು ನೀಡಿರುವ ಯಾವುದೇ ಭೂಮಿ ಅಥವಾ ಮನೆ ದಾಖಲೆಗಳು.
12. ಚುನಾವಣಾ ಆಯೋಗದ ಸೆಪ್ಟಂಬರ್ 9ರ ಆದೇಶದಂತೆ ಆಧಾರ್ ಕಾರ್ಡ್
(ಆದರೆ ಈ ಆದೇಶವಿದ್ದರೂ ಬಹುಪಾಲು ರಾಜ್ಯಗಳಲ್ಲಿ ಸ್ಥಳೀಯ ಚುನಾವಣಾ ಅಧಿಕಾರಿಗಳು ಆಧಾರ್ ಅನ್ನು ತಿರಸ್ಕರಿಸುತ್ತಿದ್ದಾರೆ. ಕರ್ನಾಟಕದಲ್ಲಿಯಾದರೆ ಹಲವು ಜಿಲ್ಲಾಧಿಕಾರಿಗಳು ನೀಡಿರುವ ಪ್ರಕಟಣೆಗಳಲ್ಲಿ ಸುಪ್ರೀಂ ಆದೇಶಕ್ಕೆ ಮುನ್ನ ಆಯೋಗವು ನಿಗದಿಪಡಿಸಿದ್ದ 11 ದಾಖಲೆಗಳನ್ನು ನಮೂದಿಸಲಾಗಿದೆ. ಆಧಾರನ್ನು ಅಧಿಕೃತವಾಗಿ ಹೆಸರಿಸಿಲ್ಲ.)
ಹೆಚ್ಚಿನ ವಿವರಗಳಿಗೆ ಆಸಕ್ತರು ಚುನಾವಣಾ ಆಯೋಗದ ಪ್ರಕಟಣೆಯನ್ನು ಈ ವೆಬ್ ವಿಳಾಸದಲ್ಲಿ ಓದಬಹುದು:
https://www.instagram.com/p/DQT5LLJgpPx/?hl=en
ಮೇಲ್ನೋಟಕ್ಕೆ ಸ್ಪಷ್ಟವಾಗುವಂತೆ ಇವೆಲ್ಲವೂ ಎನ್‌ಆರ್‌ಸಿ ಪ್ರಕ್ರಿಯೆಯಲ್ಲಿ ಕೇಳಿದ ದಾಖಲೆಗಳೇ ಮತ್ತು ಈ ದಾಖಲೆಗಳನ್ನು ಆಸ್ತಿ, ಶಿಕ್ಷಣ, ಸ್ಥಾನಮಾನ, ಸ್ಥಿರ ಬದುಕು ಮತ್ತು ಸರಕಾರದೊಂದಿಗೆ ಒಡನಾಟದ ಅಗತ್ಯ, ಪರಿಚಯ ಇರುವವರು ಮಾತ್ರ ಒದಗಿಸಬಹುದು.
ಅವರನ್ನು ಬಿಟ್ಟು ಸ್ವಾತಂತ್ರ್ಯ ಬಂದು 77 ವರ್ಷಗಳ ನಂತರವೂ ಸಮಾಜದ ಅಂಚಿನಲ್ಲಿ ಬದುಕುತ್ತಿರುವ, ಆದರೆ ಉಳಿದವರಷ್ಟೇ ಭಾರತೀಯರಾಗಿರುವ ಹೊಟ್ಟೆಪಾಡಿಗಾಗಿ ವಲಸೆ ಹೋಗುವ, ಸ್ಥಿರವಾದ ಉದ್ಯೋಗ, ವಸತಿ, ವಿಳಾಸ ಇಲ್ಲದ, ಆಸ್ತಿ-ಶಿಕ್ಷಣ ಇಲ್ಲದ, ಕುಟುಂಬದಿಂದ ಪರಿತ್ಯಕ್ತರಾದವರು, ಟ್ರಾನ್ಸ್ ಝೆಂಡರ್‌ಗಳು, ಅಲೆಮಾರಿಗಳು ಹೀಗೆ ಕೋಟ್ಯಂತರ ಜನರು ಕೊಡಲು ಸಾಧ್ಯವೇ ಇಲ್ಲ. ಹೀಗಾಗಿ ಈ ನಿಬಂಧನೆಗಳೇ ಕೋಟ್ಯಂತರ ಅಂಚಿನ ಜನರಿಗೆ ನಾಗರಿಕತ್ವ ನಿರಾಕರಿಸುವ ಫ್ಯಾಶಿಸ್ಟ್ ಪ್ರಕ್ರಿಯೆ ಆಗಿದೆ.
ಇದಲ್ಲದೆ ಎಸ್‌ಐಆರ್ ನಡೆಯುತ್ತಿರುವ ರಾಜ್ಯಗಳಲ್ಲಿ ಇದನ್ನು ಹೊರತು ಪಡಿಸಿ ಇನ್ನೂ ಹೊಸಹೊಸ ನಿಯಮಗಳನ್ನು ಜಾರಿಗೆ ತಂದು ಮ್ಯಾಪಿಂಗ್ ಆದ ನಂತರವೂ, ದಾಖಲೆಗಳನ್ನು ಕೊಟ್ಟ ನಂತರವೂ ವಿಶೇಷವಾಗಿ ಮುಸ್ಲಿಮರನ್ನು ಟಾರ್ಗೆಟ್ ಮಾಡಿ ನೋಟಿಸ್ ಕಳಿಸಲಾಗುತ್ತಿದೆ.
ಬಡವರ ಹಾಗೂ ಮುಸ್ಲಿಮರ ವಿರುದ್ಧ ಎಸ್‌ಐಆರ್‌ನ ಹೊಸ ನಿಯಮಾಸ್ತ್ರಗಳು:
ಈಗ ಪ. ಬಂಗಾಳದಲ್ಲಿ ಬಡವರ ಮೇಲೆ ಮತ್ತೊಂದು ದಾಖಲಾಸ್ತ್ರವನ್ನು ಪ್ರಯೋಗಿಸಲಾಗಿದೆ...
ಭಾರತದಲ್ಲೇ ಜನಿಸಿದ್ದಕ್ಕೆ ಇದ್ದಿದ್ದರಲ್ಲಿ ಸುಲಭವಾಗಿ ಸಿಗಬಹುದಾದ ದಾಖಲೆಯಾಗಿದ್ದ ಎಸೆಸೆಲ್ಸಿ ಪ್ರವೇಶ ಪ್ರಮಾಣ ಪತ್ರವನ್ನು ಕೂಡ ಒಂದು ಪೌರತ್ವ ದಾಖಲೆಯಾಗಿ ಸ್ವೀಕರಿಸಲಾಗುವುದಿಲ್ಲ ಎಂದು ಚುನಾವಣಾ ಆಯೋಗ ಜನವರಿ 15ರಂದು ಆದೇಶ ಹೊರಡಿಸಿದೆ.
Logical Discrepancy-ಬೇಡವಾದವರನ್ನು ಹೊರಗಿಡುವ ಹೊಸ ತಂತ್ರ
ಈ Logical Discrepancy ಎಂಬುದು ಬಡವರನ್ನು ಮತ್ತು ಮುಸ್ಲಿಮರನ್ನು ಮ್ಯಾಪಿಂಗ್ ಆದರೂ ಹೊರಗಿಡಲು ಚುನಾವಣಾ ಆಯೋಗ ಅನ್ವೇಷಿಸಿರುವ ಹೊಸ ಸಾಫ್ಟ್‌ವೇರ್.
ಈಗ ಎಸ್‌ಐಆರ್ ಮೊದಲ ಹಂತ ಮುಗಿಸಿರುವ 12 ರಾಜ್ಯಗಳಲ್ಲಿ ಮ್ಯಾಪಿಂಗ್ ಪರೀಕ್ಷೆಯಲ್ಲಿ ಗೆದ್ದವರಿಗೂ ಹೆಚ್ಚುವರಿಯಾಗಿ ನೋಟಿಸ್ ಕೊಡಲಾಗುತ್ತಿದೆ. ಉದಾಹರಣೆಗೆ ಪ. ಬಂಗಾಳದಲ್ಲಿ 58 ಲಕ್ಷ ಜನರು ಮಾತ್ರ ಮೊದಲ ಹಂತದಲ್ಲಿ ಹೊರಗುಳಿದಿದ್ದರು ಮತ್ತು ಮುಸ್ಲಿಮ್ ಜನಸಂಖ್ಯೆ ಹೆಚ್ಚಿರುವ ಕ್ಷೇತ್ರಗಳಲ್ಲಿ ಹೆಚ್ಚು ಮ್ಯಾಪಿಂಗ್ ಆಗಿತ್ತು. ಆದರೆ ಎರಡನೇ ಹಂತದಲ್ಲಿ 1.3 ಕೋಟಿ ಜನರಿಗೆ ಕೊಟ್ಟಿರುವ ಮಾಹಿತಿಗಳು ಹೊಂದಾಣಿಕೆಯಾಗುತ್ತಿಲ್ಲ- Logical Discrepancy ಎಂಬ ನೆಪವೊಡ್ಡಿ ನೋಟಿಸ್ ಕಳಿಸಿದೆ ಮತ್ತು ಈ ಬಗೆಯ ನೋಟಿಸ್‌ಗಳು ಮ್ಯಾಪಿಂಗ್ ಆದ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಗಳಲ್ಲೇ-ಅರ್ಥಾತ್ ಮ್ಯಾಪಿಂಗ್ ಪರೀಕ್ಷೆ ಪಾಸಾದ ಮುಸ್ಲಿಮರಿಗೇ ನೀಡಲಾಗಿದೆ. ಅದೇ ರೀತಿ ಉತ್ತರ ಪ್ರದೇಶದಲ್ಲಿ ಮೊದಲ ಹಂತದಲ್ಲಿ 2.9 ಕೋಟಿ ಜನರು ಹೊರಗುಳಿದಿದ್ದರೆ ಈ Logical Discrepancy ಹೆಸರಲ್ಲಿ ಹೆಚ್ಚುವರಿಯಾಗಿ 3.6 ಕೋಟಿ ಜನರಿಗೆ ನೋಟಿಸ್ ಕಳಿಸಲಾಗಿದೆ.
ಹೊಸ ಈ Logical Discrepancy ನಿಯಮಗಳ ಪ್ರಕಾರ:
-ಆರಕ್ಕಿಂತ ಹೆಚ್ಚು ಮಕ್ಕಳು ಒಬ್ಬ ತಂದೆಯ ಹೆಸರನ್ನು ಸೂಚಿಸಿದ್ದಾರೆ. ಅರ್ಥಾತ್ ಆರಕ್ಕಿಂತ ಹೆಚ್ಚು ಮಕ್ಕಳಿರುವ ಮತದಾರರು ಸಂಶಯಾಸ್ಪದರು.
-ಅಮ್ಮ ಮತ್ತು ಮಕ್ಕಳ ನಡುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇದ್ದರೆ ಅನುಮಾನಾಸ್ಪದರು.
-ಅಜ್ಜಿ ಮತ್ತು ಮೊಮ್ಮಕ್ಕಳ ನಡುವಿನ ವಯಸ್ಸಿನ ಅಂತರ 40ಕ್ಕಿಂತ ಕಡಿಮೆ ಇದ್ದರೆ ಅನುಮಾನಿತರು.
-ಅಪ್ಪನ ಹೆಸರಿನಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ ಅನುಮಾನಾಸ್ಪದರು.
ಈ ಹೊಸ ತಕರಾರುಗಳ ಅನ್ವಯ ಪ. ಬಂಗಾಳದಲ್ಲಿ:
-23.6 ಲಕ್ಷ ಜನರಿಗೆ ಆರಕ್ಕಿಂತ ಹೆಚ್ಚು ಮಕ್ಕಳಿರುವ ಕಾರಣಕ್ಕೆ ನೋಟಿಸ್ ಕೊಡಲಾಗಿದೆ.
-11 ಲಕ್ಷ ಜನರಿಗೆ ತಾಯಿ ಮತ್ತು ಮಕ್ಕಳ ಅಂತರ 15 ವರ್ಷಕ್ಕಿಂತ ಕಡಿಮೆ ಇದೆ ಎನ್ನುವ ಕಾರಣಕ್ಕೆ ನೋಟಿಸ್ ನೀಡಲಾಗಿದೆ.
-85 ಲಕ್ಷ ಜನರಿಗೆ ತಂದೆಯ ಹೆಸರಿನ ಸ್ಪೆಲ್ಲಿಂಗ್ ಸರಿಯಿಲ್ಲ ಎನ್ನುವ ಕಾರಣಕ್ಕೆ ಅನುಮಾನಿಸಿ ನೋಟಿಸ್ ಕೊಡಲಾಗಿದೆ.
ಉ.ಪ್ರದೇಶದಲ್ಲಿ:
-1.04 ಕೋಟಿ ಜನರಿಗೆ ಮ್ಯಾಪಿಂಗ್ ಆಗಲಿಲ್ಲವೆನ್ನುವ ಕಾರಣಕ್ಕೆ,
-2.22 ಕೋಟಿ ಜನರಿಗೆ ಆರಕ್ಕಿಂತ ಹೆಚ್ಚು ಮಕ್ಕಳು, ತಾಯಿಯ ವಯಸ್ಸಿನ ಜೊತೆ 15ಕ್ಕಿಂತ ಕಡಿಮೆ ವಯಸ್ಸಿನ ಅಂತರ ಮತ್ತು ತಂದೆಯ ಹೆಸರಿನ ಸ್ಪೆಲ್ಲಿಂಗ್ ಮಿಸ್ಟೇಕ್ ಕಾರಣಗಳಿಗೆ ನೀಡಲಾಗಿದೆ.
ಇದಕ್ಕೆ ಸಂಬಂಧಪಟ್ಟ The Hindu ಪತ್ರಿಕೆಯ ತನಿಖಾ ವರದಿಯನ್ನು ಆಸಕ್ತರು ಈ ವೆಬ್ ವಿಳಾಸದಲ್ಲಿ ಓದಬಹುದು:
ಆರಕ್ಕಿಂತ ಹೆಚ್ಚಿನ ಮಕ್ಕಳ ವಿಷಯದ ಬಗ್ಗೆ ಚುನಾವಣಾ ಆಯೋಗವು ಸುಪ್ರೀಂ ಗೆ ಸಲ್ಲಿಸಿರುವ ವರದಿಯಲ್ಲಿ ಕೆಲವು ಅತಿರೇಕದ ಉದಾಹರಣೆಗಳನ್ನು ನೀಡಿ ಸಮರ್ಥಿಸಿಕೊಂಡಿದೆ. ಅದರ ಪ್ರಕಾರವೇ ಕೇವಲ ಏಳು ಜನರ ಹೆಸರು 100 ಮಕ್ಕಳ ಹೆಸರುಗಳೊಂದಿಗೆ, 50 ಹೆಸರುಗಳು 20 ಮಕ್ಕಳ ಹೆಸರುಗಳೊಂದಿಗೆ ಮತ್ತು 8,682 ಹೆಸರುಗಳು 10ಕ್ಕಿಂತ ಹೆಚ್ಚು ಮಕ್ಕಳಿರುವಂತೆ ನಮೂದಾಗಿದೆ. ಅಂದರೆ ಇದು ಆರಕ್ಕಿಂತ ಹೆಚ್ಚು ಮಕ್ಕಳೆಂಬ ವರ್ಗೀಕರಣದಲ್ಲಿ ನೋಟಿಸ್ ಪಡೆದಿರುವ ಸಂಖ್ಯೆಯಲ್ಲಿ ಶೇ. 0.012 ಮಾತ್ರ! ಅದಕ್ಕಾಗಿ 23 ಲಕ್ಷ ಜನರಿಗೆ ನೋಟಿಸ್ ನೀಡಲಾಗಿದೆ!
ಎಲ್ಲಕ್ಕಿಂತ ಹೆಚ್ಚಾಗಿ ಆರು ಮಕ್ಕಳಿರುವುದು ಭಾರತದಲ್ಲಿ ಅಸಾಮಾನ್ಯವೇ?
ಈಗಲೂ ಬಾಲ್ಯ ವಿವಾಹ ವಿಪರೀತವಾಗಿ ನಡೆಯುತ್ತಿರುವ ಈ ರಾಜ್ಯಗಳಲ್ಲಿ ತಾಯಿ ಮತ್ತು ಮಕ್ಕಳ ನಡುವಿನ ವಯಸ್ಸಿನ ಅಂತರ 15 ವರ್ಷಕ್ಕಿಂತ ಕಡಿಮೆ ಇರುವುದು ಅಸಾಮಾನ್ಯವೇ?
ಬಿಜೆಪಿಯ ಹಾಲಿ ಶಾಸಕ ಮತ್ತು ಸಂಸದರಲ್ಲೇ ಎಷ್ಟು ಜನರಿಗೆ ಆರಕ್ಕಿಂತ ಹೆಚ್ಚು ಮಕ್ಕಳಿಲ್ಲ? ಅವರಿಗೆಲ್ಲಾ ನೋಟಿಸ್ ಹೋಗಿದೆಯೇ?
ಈ ರೀತಿ ಆರು ಮಕ್ಕಳ ವರ್ಗವನ್ನು ಅನುಮಾನಾಸ್ಪದ ಎಂದು ವರ್ಗೀಕರಿಸುವ ಸಾಫ್ಟ್‌ವೇರನ್ನು ಅಳವಡಿಸುವ ಮುಂಚೆ ಆಯೋಗ ರಾಜಕೀಯ ಪಕ್ಷಗಳ ಜೊತೆ ಸಮಾಲೋಚನೆ ಮಾಡಿತ್ತೇ?
ಭಾರತದ ಸಾಮಾಜಿಕ ಸಂದರ್ಭವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಆರು ಮಕ್ಕಳ ಅಥವಾ ವಯಸ್ಸಿನ ಅಂತರವನ್ನು ಅನುಮಾನಾಸ್ಪದ ಮಾನದಂಡವಾಗಿ ಪರಿಗಣಿಸಿರುವುದೇ ಆಯೋಗದ ದುರುದ್ದೇಶವನ್ನು ಸ್ಪಷ್ಟಪಡಿಸುವುದಿಲ್ಲವೇ?
ಮುಸ್ಲಿಮರ ಮೇಲೆ ಯೋಜಿತ ಲಾಜಿಕಲ್ ಲಿಂಚಿಂಗ್?
ಮತ್ತೊಂದು ಕಡೆ ರಾಜಸ್ಥಾನದಲ್ಲಿ ಕಡಿಮೆ ಮತಗಳಿಂದ ಬಿಜೆಪಿಯು ಚುನಾವಣೆ ಗೆದ್ದ ಕ್ಷೇತ್ರಗಳಲ್ಲಿ ಇಲ್ಲದ ಕಾರಣ ಕೊಟ್ಟು ಮುಸ್ಲಿಮರನ್ನು ಹೊರಗಿಡಲು ತನ್ನ ಮೇಲೆ ಅಪಾರವಾದ ಒತ್ತಡವನ್ನು ಹಾಕಲಾಗುತ್ತಿದೆ ಎಂದೂ, ಹೀಗೆ ಆದರೆ ತಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆಂದು ರಾಜಸ್ಥಾನದ ಹವಾ ಮಹಲ್ ಕ್ಷೇತ್ರದ ಬಿಎಲ್‌ಒ ಕೀರ್ತಿ ಕುಮಾರ್ ಕೊಟ್ಟಿರುವ ಹೇಳಿಕೆ ಕೆಳಗೆ ವರದಿಯಲ್ಲಿದೆ.
https://x.com/newslaundry/status/2014163608947789952
ಮತ್ತೊಂದು ಕಡೆ ಅಸ್ಸಾಮಿನಲ್ಲಿ Form 7 ಅನ್ನು ಬಳಸಿ ಮುಸ್ಲಿಮ್ ಮತದಾರರ ವಿರುದ್ಧ ಸಾವಿರಾರು ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ಅದರಲ್ಲೂ ವಿಶೇಷವಾಗಿ ಮುಸ್ಲಿಮರು ಹೆಚ್ಚಿರುವ ನೌಗಾವ್ ಮತ್ತು ಇತರ ಜಿಲ್ಲೆಗಳಲ್ಲಿ Dead and Shifted ವರ್ಗದಲ್ಲಿ ಬದುಕಿರುವ ಮತ್ತು ಅದೇ ವಿಳಾಸದಲ್ಲಿ ವಾಸ ಮಾಡುತ್ತಿರುವ ಸಾವಿರಾರು ಮುಸ್ಲಿಮರ ಬಗ್ಗೆ ಆಕ್ಷೇಪಣೆಗಳನ್ನು ಸಲ್ಲಿಸಲಾಗುತ್ತಿದೆ. ಆ ರೀತಿ ದೂರು ಸಲ್ಲಿಸುತ್ತಿರುವವರಲ್ಲಿ ಬಹುಪಾಲು ಬಿಜೆಪಿ ಕಾರ್ಯಕರ್ತರೇ ಆಗಿದ್ದಾರೆ.
ಹೀಗಾಗಿ ಎಸ್‌ಐಆರ್ ಪ್ರಕ್ರಿಯೆಯ ಪ್ರಜಾತಂತ್ರೀಕರಣ ಸಾಧ್ಯವಿಲ್ಲ.
ಎಸ್‌ಐಆರ್ ರದ್ದಾಗಬೇಕು. ಇಲ್ಲವಾದರೆ.. ಎಸ್‌ಐಆರ್ ಭಾರತದ ಪ್ರಜಾತಂತ್ರವನ್ನು ರದ್ದು ಮಾಡುತ್ತದೆ.
ಆದರೂ ಎಸ್‌ಐಆರ್ ಬಗ್ಗೆ ರಾಜಕೀಯ ಮಾಡುವುದಿಲ್ಲ ಎಂಬ ಕರ್ನಾಟಕದ ಸಿದ್ದು ಕಾಂಗ್ರೆಸ್‌ನ ನಿಲುವನ್ನು ಏನೆಂದು ಕರೆಯುವುದು?
ರಾಜಕೀಯ ಬೇಜವಾಬ್ದಾರಿ? ಅಧಿಕಾರಮೋಹಿ ಅವಕಾಶವಾದ? ಸಂವಿಧಾನ ದ್ರೋಹ? ಫ್ಯಾಶಿಸ್ಟರೊಂದಿಗೆ ಗುಪ್ತ ಸಹಕಾರ?







