ಬಜೆಟ್ ಬಯಲು ಮಾಡಿರುವ ಮೋದಿಯಾನಾಮಿಕ್ಸ್‌ನ ನಾಲ್ಕು ಪ್ರಮಾದಗಳು

ಈರುಳ್ಳಿ ಬೆಲೆ ಜಾಸ್ತಿಯಾದರೆ ಈರುಳ್ಳಿ ತಿನ್ನುವುದು ನಿಲ್ಲಿಸಿಬಿಡಿ ಎಂದು ಸಲಹೆ ಮಾಡುವ, ಭಾರತದ ರೂಪಾಯಿ ಡಾಲರಿನೆದುರು ಮಂಡಿಯೂರಿ ಮಲಗುತ್ತಿದ್ದರೂ, ರೂಪಾಯಿ ಬೆಲೆ ಇಳಿಕೆಯಾಗಿಲ್ಲ, ಡಾಲರ್ ಬೆಲೆ ಏರಿಕೆಯಾಗಿದೆಯಷ್ಟೆ ಎಂಬ ವಿಚಿತ್ರ ಸಂಘಿವಾದ ಮಂಡಿಸುತ್ತಾ ಫ್ರಾನ್ಸ್‌ನ ಕೊನೆಯ ರಾಣಿ ಮೇರಿ ಆ್ಯಂಟನಿಯನ್ನು ನೆನಪಿಸುವ ಭಾರತದ ಹಣಕಾಸು ಮಂತ್ರಿ ನಿರ್ಮಲ ಸೀತಾರಾಮನ್ ಅವರು ಎನ್‌ಡಿಎ-3ರ ಎರಡನೇ ಬಜೆಟನ್ನು ಮಂಡಿಸಿದ್ದಾರೆ.
ಈ ಸಾಲಿನ ಬಜೆಟ್ ಕೂಡ ಮೋದಿ ಸರಕಾರದ ಮುಂದುವರಿದ ಮೋಸದ ಮತ್ತೊಂದು ವಾರ್ಷಿಕ ದಾಖಲೆಯೇ ಆಗಿದ್ದರೂ, ವಾರ್ಷಿಕ 12 ಲಕ್ಷ ರೂ. ಆದಾಯ ಇರುವರಿಗೆ ಆದಾಯ ತೆರಿಗೆ ಮನ್ನಾ ಮಾಡಿರುವ ವಿಷಯವು ಮಾತ್ರ ತುತ್ತೂರಿ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ದೇಶದ ಆರ್ಥಿಕತೆ ಹಳ್ಳ ಹಿಡಿಯುತ್ತಿದ್ದರೂ, ತಮ್ಮ ಬಹುಸಂಖ್ಯಾತ ಸಹ ದೇಶವಾಸಿಗಳ ಬದುಕು ದಿನೇ ದಿನೇ ದಾರುಣವಾಗುತ್ತಿದ್ದರೂ, ಮೋದಿ ಸರಕಾರದ ಪಕ್ಷಪಾತಿ ಆರ್ಥಿಕ ನೀತಿಯ ಫಲಾನುಭವಿಗಳಾಗಿರುವ ಕಾರ್ಪೊರೇಟ್‌ಗಳು ಮತ್ತು ಸುಶಿಕ್ಷಿತ ಹಾಗೂ ಸುಭದ್ರ ಆರ್ಥಿಕ ಸ್ಥಿತಿಯಲ್ಲಿರುವ ಮಧ್ಯಮವರ್ಗದ ಒಂದು ವಿಭಾಗ ಈಗಾಗಲೇ ತಮ್ಮ ಆತ್ಮಸಾಕ್ಷಿಯನ್ನು ದ್ವೇಷಕ್ಕೆ ಮತ್ತು ಸ್ವಾರ್ಥಕ್ಕೆ ಮಾರಿಕೊಂಡಿದ್ದು ತಮ್ಮ ಸ್ವಹಿತಾಸಕ್ತಿಯ ಕಾರಣಕ್ಕೆ ಬಜೆಟ್‌ನ ಭಜನೆ ಮಾಡುತ್ತಿವೆ.
ಆದರೆ ಈ ಬಜೆಟ್‌ನ ಹಿಂದಿನ ಗ್ರಹಿಕೆಯನ್ನು ಮತ್ತು ಘೋಷಿಸಿರುವ ಯೋಜನೆಗಳನ್ನು ಗಂಭೀರವಾಗಿ ಅಧ್ಯಯನ ಮಾಡಿದರೆ ನಿರ್ಮಲಕ್ಕನ ಈ ಬಜೆಟ್ ಮೋದಿಯಾನಾಮಿಕ್ಸ್‌ನ ನಾಲ್ಕು ಮುಖ್ಯ ಪ್ರಮಾದಗಳನ್ನು ಪರೋಕ್ಷವಾಗಿ ಬಯಲು ಮಾಡಿವೆ.
1.ದೇಶದ ಆರ್ಥಿಕತೆ ಪ್ರಗತಿಯಾಗುತ್ತಿಲ್ಲ- ಸಂಕಷ್ಟದಲ್ಲಿದೆ ಎನ್ನುವ ಬಜೆಟ್
ಮೋದಿ ಅಧಿಕಾರಕ್ಕೆ ಬಂದ ಮೇಲೆ ದೇಶದ ಆರ್ಥಿಕತೆ ವೇಗವಾಗಿ ಅಭಿವೃದ್ಧಿ ಕಾಣುತ್ತಿದೆ ಮತ್ತು 2027ರಲ್ಲಿ ಭಾರತ ಮೂರನೇ ಅತಿ ದೊಡ್ಡ ಆರ್ಥಿಕತೆಯಾಗುವುದಲ್ಲದೆ, ಮೋದಿಯವರನ್ನೇ ಅಧಿಕಾರದಲ್ಲಿರಿಸಿದರೆ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡಲಿದ್ದಾರೆ ಎಂದು ಮೋದಿ ಪಟಾಲಂ ಒಂದೇ ಸಮನೆ ಅಬ್ಬರದ ಪ್ರಚಾರ ಮಾಡುತ್ತಿದೆ. ಅದೇ ಅಂಶಗಳು ಈ ಬಜೆಟ್‌ನ ಬುರುಡೆಗಳಲ್ಲೂ ಕಾಣುತ್ತವೆ.
ಒಂದು ದೇಶದ ಹಾಗೂ ಅಲ್ಲಿನ ಬಹುಸಂಖ್ಯಾತ ಜನರ ನಿಜವಾದ ಅಭಿವೃದ್ಧಿಯನ್ನು ಜಿಡಿಪಿಯ ಅಂಕಿಅಂಶಗಳಿಂದ ತಿಳಿಯಲು ಅಸಾಧ್ಯವಾದರೂ, ಬಜೆಟ್‌ನಲ್ಲಿ ನೀಡಿರುವ ಅಂಕಿಅಂಶಗಳೇ ಹೇಗೆ ಮೋದಿ ಪಟಾಲಂನ ಹೇಳಿಕೆಗಳು ಉತ್ಪ್ರೇಕ್ಷೆಯ ಪರಮಾವಧಿ ಎಂದು ಸಾಬೀತು ಮಾಡಿವೆ.
ಮೊದಲನೆಯದಾಗಿ ಭಾರತವು 2047ರ ವೇಳೆಗೆ ಅಭಿವೃದ್ಧಿ ಹೊಂದಿದ ದೇಶವಾಗಬೇಕೆಂದರೆ ಭಾರತದ ಜಿಡಿಪಿಯ ಬೆಳವಣಿಗೆಯ ವೇಗ ಮುಂದಿನ ಎರಡು ದಶಕಗಳ ಕಾಲ ಶೇ. 8 ಅಥವಾ ಅದಕ್ಕಿಂತ ಹೆಚ್ಚಿರಬೇಕು ಮತ್ತು ಅದು ಅಸಂಘಟಿತ ಕ್ಷೇತ್ರಗಳಾದ ಕೃಷಿ ಮತ್ತು ಸಣ್ಣ ಹಾಗೂ ಅತಿ ಸಣ್ಣ ಕ್ಷೇತ್ರಗಳ ಅಭಿವೃದ್ಧಿಯನ್ನು ಒಳಗೊಂಡಿರಬೇಕು. ಆದರೆ ಭಾರತವು ಶೇ.8ರಷ್ಟು ಜಿಡಿಪಿ ಬೆಳವಣಿಗೆಯನ್ನು ಸಾಧಿಸಿದ್ದು ಯುಪಿಎ ಕಾಲಘಟ್ಟದಲ್ಲಿ. ಅದು ಕೂಡಾ ಅತ್ಯಂತ ಸಮಸ್ಯಾತ್ಮಕವಾದ ಕಾರ್ಪೊರೇಟ್ ಪರ ನೀತಿಯ ಪರಿಣಾಮವಾಗಿತ್ತು. ಏಕೆಂದರೆ ಆಗ ಜಿಡಿಪಿ ಅಷ್ಟು ಅಭಿವೃದ್ಧಿ ಸಾಧಿಸಿದ್ದು ಸಾರ್ವಜನಿಕ ಬ್ಯಾಂಕುಗಳಿಂದ ದೊಡ್ಡ ದೊಡ್ಡ ಕಾರ್ಪೊರೇಟುಗಳ ಹೂಡಿಕಾ ಸಾಲವನ್ನು ಪಡೆದುಕೊಂಡಿದ್ದಕ್ಕೆ. ಆ ಹೂಡಿಕೆಗಳು ಬಹುಪಾಲು ಬೇಕಾಬಿಟ್ಟಿಯಾಗಿತ್ತು ಮತ್ತು ದೇಶದ ಸಂಪನ್ಮೂಲಗಳು ವ್ಯರ್ಥವಾದವು. ಅದರ ಪರಿಣಾಮದಿಂದಾಗಿಯೇ ನಂತರದಲ್ಲಿ ತೀರಿಸಲಾಗದ ಸಾಲಗಳು (ಎನ್‌ಪಿಎ)ಮತ್ತು ಅದರ ಮನ್ನಾಗಳು ಕಾರ್ಪೊರೇಟುಗಳನ್ನು ಉಳಿಸಿದರೂ ದೇಶದ ಆರ್ಥಿಕ ಸ್ಥಿತಿಯನ್ನು ಅಸ್ತವ್ಯಸ್ತಗೊಳಿಸಿತು. ಮೇಲಾಗಿ ಅದು ಉದ್ಯೋಗ ಸೃಷ್ಟಿಸಿದ ಜಾಬ್‌ಲೆಸ್-ಉದ್ಯೋಗ ರಹಿತ ಗ್ರೋಥ್‌ನ ಅವಧಿಯಾಗಿತ್ತು. ಹೀಗೆ ಯುಪಿಎ ಅವಧಿಯಲ್ಲಿ ಶೇ.8ರಷ್ಟು ಜಿಡಿಪಿ ಅಭಿವೃದ್ಧಿಯಾದರೂ ಅದು ಆರ್ಥಿಕತೆಯನ್ನು ಕಂಗೆಡಿಸಿದ ಅಭಿವೃದ್ಧಿಯಾಗಿತ್ತು.
ಮೋದಿಯ ಅವಧಿಯ ಕಳೆದ ಹನ್ನೊಂದು ವರ್ಷಗಳ ಅಭಿವೃದ್ಧಿಯು ಉದ್ಯೋಗ ರಹಿತ ಅಭಿವೃದ್ಧಿಯ ಜೊತೆಗೆ ಇದ್ದ ಉದ್ಯೋಗಗಳನ್ನು ಕಿತ್ತುಕೊಳ್ಳುವ ಜಾಬ್ ಲಾಸ್ ಅಭಿವೃದ್ಧಿಯ ವಿದ್ಯಮಾನವನ್ನು ಸೃಷ್ಟಿಸಿತು. ಇದು ಭಾರತದ ಬಹುಜನರ ಆದಾಯವನ್ನು ಕಡಿತಗೊಳಿಸಿದ್ದರಿಂದ ಅವರ ಖರೀದಿ ಸಾಮರ್ಥ್ಯವನ್ನೂ ಕುಗ್ಗಿಸಿತು. ಇದರಿಂದಾಗಿ ಒಟ್ಟಾರೆ ಜಿಡಿಪಿಯ ಅಭಿವೃದ್ಧಿಯೂ ಕುಸಿಯುತ್ತಾ ಬಂದಿದೆ.
ಇವೆಲ್ಲವೂ 2016ರ ನೋಟು ನಿಷೇಧ ಮತ್ತು 2020ರ ಲಾಕ್‌ಡೌನ್‌ಗೆ ಮುಂಚೆಯೇ ಕಾಣಿಸಿಕೊಂಡ ಲಕ್ಷಣಗಳು. ಅಂದರೆ ಮೋದಿಯ ನೀತಿಗಳು ಈಗಾಗಲೇ ನಮ್ಮ ಅರ್ಥಿಕತೆಯಲ್ಲಿ ಕಾಣಿಸಿಕೊಂಡಿದ್ದ ರೋಗವನ್ನು ಗುರುತಿಸಲೇ ಇಲ್ಲ. ಬದಲಿಗೆ ಮೋದಿ ಸರಕಾರ ತನ್ನ ಅತ್ಯಂತ ವಿನಾಶಕಾರಿ ನೋಟು ನಿಷೇಧ, ಸುಲಿಗೆಕೋರ ಜಿಎಸ್‌ಟಿ ಮತ್ತು ಕ್ರೂರ ಲಾಕ್‌ಡೌನ್ ನೀತಿಗಳ ಮೂಲಕ ಈಗಾಗಲೇ ಆರ್ಥಿಕತೆಯನ್ನು ಕಾಡುತ್ತಿದ್ದ ರೋಗವನ್ನು ತೀವ್ರಗೊಳಿಸಿತು. ಇದರಿಂದಾಗಿ ಭಾರತದ ಆರ್ಥಿಕ ಅಭಿವೃದ್ಧಿ ಎಷ್ಟು ಕುಂಠಿತಗೊಂಡಿದೆ ಎಂಬುದನ್ನು ಈ ಬಾರಿಯ ಬಜೆಟೇ ಸ್ಪಷ್ಟಗೊಳಿಸಿದೆ.
ಬಜೆಟ್‌ಗೆ ಮುಂಚೆ ಈ ಸಾಲಿನಲ್ಲಿ ಭಾರತದ ಅಭಿವೃದ್ಧಿ ಶೇ. 7 ಅಥವಾ ಅದಕ್ಕಿಂತ ಜಾಸ್ತಿಯಾಗುತ್ತದೆ ಎಂದು ಕೊಚ್ಚಿಕೊಳ್ಳುತ್ತಿದ್ದ ಮೋದಿ ಸರಕಾರ ಹಾಲಿ ಬಜೆಟ್‌ನಲ್ಲಿ 2024-25ರ ಸಾಲಿನಲ್ಲಿ ಭಾರತದ ಅಭಿವೃದ್ಧಿ ಶೇ. 6.5ರಷ್ಟು ಮಾತ್ರ ಎಂದು ಒಪ್ಪಿಕೊಳ್ಳುತ್ತಿರುವುದಲ್ಲದೆ 2025-26ರ ಸಾಲಿನಲ್ಲೂ ಭಾರತದ ಅಭಿವೃದ್ಧಿ ಶೇ. 6.5ನ್ನು ದಾಟಲಾಗದು ಎಂದು ಒಪ್ಪಿಕೊಂಡಿದೆ. ಇದು ಮುಂದಿನ ಕೆಲವು ವರ್ಷಗಳವರೆಗೂ ಹೀಗೆ ಮುಂದುವರಿಯಲಿದೆ ಎಂಬ ಸೂಚನೆಯನ್ನು ಕೂಡ ಅದು ತನ್ನ ಮುಂದಿನ ಐದು ವರ್ಷಗಳ ಮಧ್ಯಂತರ ವರದಿಯಲ್ಲಿ ಕೊಟ್ಟಿದೆ.
ಇದಕ್ಕೆ ಕಾರಣ ಅಂತರ್‌ರಾಷ್ಟ್ರೀಯ ವಿದ್ಯಮಾನಗಳೆಂಬ ಸಬೂಬು ಹೇಳುತ್ತಿದ್ದರೂ ಭಾರತದಂತ 140 ಕೋಟಿ ಜನರಿರುವ ಒಂದು ಬೃಹತ್ ದೇಶ ತನ್ನ ಗೃಹ ಮಾರುಕಟ್ಟೆಯನ್ನು ಬೆಳೆಸಿಕೊಳ್ಳಲು ಒತ್ತು ನೀಡಿದ್ದರೆ, ಅರ್ಥಾತ್ ಈ ದೇಶದ ಬಹುಜನರ ಅದಾಯ ಮತ್ತು ಖರೀದಿ ಸಾಮರ್ಥ್ಯವನ್ನು ಹೆಚ್ಚಿಸಿದ್ದರೆ ಭಾರತಕ್ಕೆ ಈ ಆಪತ್ತು ಬರುತ್ತಲೇ ಇರಲಿಲ್ಲ. ಬಹುಜನರ ಬದಲು ಕಾರ್ಪೊರೇಟ್ ಬಂಡವಾಳಶಾಹಿಗಳ ಮತ್ತು ಮೇಲ್ ಮಧ್ಯಮವರ್ಗದ ಅಗತ್ಯಗಳನ್ನು ಪೂರೈಸುವ ಮೂಲಕ ಆರ್ಥಿಕ ಪ್ರಗತಿ ಎಂಬ ನೀತಿಯನ್ನು 1991ರಲ್ಲಿ ಮನಮೋಹನ್ ಸಿಂಗ್ ನೇತೃತ್ವದಲ್ಲಿ ಕಾಂಗ್ರೆಸ್ ಪ್ರಾರಂಭಿಸಿದ್ದನ್ನು ಮೋದಿ ಸರಕಾರ ಕಳೆದ ಹತ್ತು ವರ್ಷದಲ್ಲಿ ತೀವ್ರಗೊಳಿಸಿ ಭಾರತವನ್ನು ಈ ಪ್ರಮಾದಕ್ಕೆ ಒಡ್ಡಿದೆ. ಹೀಗಾಗಿ ಮೋದಿ ಸರಕಾರದ ನೀತಿಗಳಿಗೆ ಮನಮೋಹನ್ ಸಿಂಗ್ ಕಾಲದ ನೀತಿಗಳು ಪರಿಹಾರ ಎನ್ನುವ ವಿರೋಧ ಪಕ್ಷಗಳು ಸಮಸ್ಯೆಯ ಭಾಗವಾಗಿಯೇ ಮುಂದುವರಿಯುತ್ತಿವೆಯೇ ವಿನಾ ಪರಿಹಾರವಾಗುತ್ತಿಲ್ಲ.
2.ಮೋದಿ ಸರಕಾರದ ಆರ್ಥಿಕ ನೀತಿಗಳೇ ಸಂಕಷ್ಟಕ್ಕೆ ಕಾರಣವೆನ್ನುವ ಬಜೆಟ್
ನಿರ್ಮಲಕ್ಕನ ಹೋದ ಸಾಲಿನ ಬಜೆಟ್ ಮೋದಿ ಸರಕಾರದ ಆರ್ಥಿಕ ನೀತಿಗಳು ಉದ್ಯೋಗವನ್ನು ಸೃಷ್ಟಿಸುತ್ತಿಲ್ಲ ಎಂದು ಒಪ್ಪಿಕೊಂಡಿದ್ದರೆ ಈ ಸಾಲಿನ ಬಜೆಟ್ ಅಭಿವೃದ್ಧಿ ಗತಿ ಮಂದವಾಗಲು ಈವರೆಗೆ ಮೋದಿ ಸರಕಾರ ಅನುಸರಿಸಿದ ಆರ್ಥಿಕ ನೀತಿಗಳೇ ಕಾರಣ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತದೆ. ಒಪ್ಪಿಕೊಂಡರೂ ಮೋದಿ ಸರಕಾರದ ಆರ್ಥಿಕ ನೀತಿಗಳಲ್ಲಿ ಸಾರರೂಪದ ಯಾವುದೇ ಬದಲಾವಣೆಯಾಗಿಲ್ಲ ಎನ್ನುವುದು ಮೋದಿ ಮತ್ತು ದೇಶದ ಬಡವರ ಸಂಬಂಧ ಚುನಾವಣಾ ಕಾಲಕ್ಕೆ ಸೀಮಿತವಾದದ್ದು ಆದರೆ ಮೋದಿ ಮತ್ತು ಕಾರ್ಪೊರೇಟ್ ಸಂಬಂಧ ಕಾಲಾತೀತ ಮತ್ತು ತರ್ಕಾತೀತ ಗಾಢ ವರ್ಗ ಬಂಧುತ್ವದ್ದು ಎಂದು ಸ್ಪಷ್ಟ ಪಡಿಸುತ್ತದೆ.
ಉದಾಹರಣೆಗೆ ಆರ್ಥಿಕ ಅಭಿವೃದ್ಧಿಯಾಗಬೇಕೆಂದರೆ ಜನರ ಕೊಳ್ಳುವ ಶಕ್ತಿ ಹೆಚ್ಚಿಸುತ್ತಾ, ಗೃಹ ಮಾರುಕಟ್ಟೆಯನ್ನು ರಕ್ಷಿಸುತ್ತಾ ಮತ್ತು ವಿಸ್ತರಿಸುತ್ತಾ ಒಳಗೊಳ್ಳುವ Supply Side ಅಭಿವೃದ್ಧಿ ಮಾದರಿಯನ್ನು ಸ್ವಾತಂತ್ರ್ಯ ನಂತರದಲ್ಲಿ ಬಹುಪಾಲು ದೇಶಗಳು ಅನುಸರಿಸಿದವು. ಆದರೆ 1991ರ ನಂತರ ಜನರ ಕೊಳ್ಳುವ ಶಕ್ತಿಯನ್ನು ಹೆಚ್ಚಿಸುವ ಬದಲು ಬಂಡವಾಳಶಾಹಿಗಳ ಹೂಡಿಕಾ ಸಾಮರ್ಥ್ಯವನ್ನು ಹೆಚ್ಚಿಸಿದರೆ ಅವರು ಹೂಡಿಕೆ ಹೆಚ್ಚು ಮಾಡಿ, ಅದರಿಂದ ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತದೆ. ಅದರಿಂದ ಕಾರ್ಮಿಕರ, ಬಡವರ ಆದಾಯ ಹೆಚ್ಚುತ್ತದೆ. ಅದರಿಂದ ಮಾರುಕಟ್ಟೆಯಲ್ಲಿ ಖರೀದಿ ಜಾಸ್ತಿಯಾಗಿ ಅಭಿವೃದ್ಧಿಯಾಗುತ್ತದೆ ಎನ್ನುವ Suಠಿಠಿಟಥಿ Siಜe ಆರ್ಥಿಕ ಸಿದ್ಧಾಂತ ಚಾಲ್ತಿಗೆ ಬಂತು. ಅದರ ಭಾಗವಾಗಿ ಹೂಡಿಕೆ ಹೆಚ್ಚಿಸಲು ಬಂಡವಾಳಿಗರಿಗೆ ತೆರಿಗೆ ವಿನಾಯಿತಿ, ಉಚಿತ ಪೂರಕ ಸೌಲಭ್ಯಗಳ ಸರಬರಾಜು, ಅವರ ಲಾಭದ ದರ ಹೆಚ್ಚಿಸುವ ಕಾರ್ಮಿಕ ನೀತಿ, ವಿದೇಶಿ ಹೂಡಿಕೆದಾರರಿಗೆ ಪೂರಕ ಸ್ವರ್ಗದ ಸೃಷ್ಟಿಯ ಆರ್ಥಿಕ ಸಿದ್ಧಾಂತವನ್ನು ಅನುಸರಿಸಲಾರಂಭಿಸಿದರು. ಭಾರತದಲ್ಲಿ ಮನಮೋಹನ್ ಸಿಂಗ್-ನರಸಿಂಹರಾವ್ ನೇತೃತ್ವದ ಕಾಂಗ್ರೆಸ್ ಸರಕಾರ ಜನವಿರೋಧಿ ಆರ್ಥಿಕ ಸಿದ್ಧಾಂತದ ವ್ಯವಸ್ಥಿತ ಪ್ರತಿಪಾದಕರಾದರೆ ಮೋದಿ ಅದನ್ನು ಉಗ್ರವಾಗಿ ಮತ್ತು ವಿಕೃತವಾಗಿ ಜಾರಿಗೊಳಿಸಿದ ವೇಗವರ್ಧಕ.
ಹೀಗಾಗಿಯೇ ಭಾರತದ ರೈತಾಪಿ, ಸಣ್ಣ ಉದ್ಯಮಿಗಳು, ಕೂಲಿ-ಕಾರ್ಮಿಕರು ಸಂಕಷ್ಟದಲ್ಲಿದ್ದರೂ ಮೋದಿ ಸರಕಾರ ಎಂಎಸ್‌ಪಿಯನ್ನು ಶಾಸನ ಬದ್ಧಗೊಳಿಸುವ, ಸಣ್ಣ ಮತ್ತು ಅತಿಸಣ್ಣ ಉದ್ಯಮಿಗಳಿಗೆ ಬೆಂಗಾವಲಿಗೆ ನಿಲ್ಲುವ ನೀತಿಗಳ ಬದಲು ಎಲ್ಲಾ ಕ್ಷೇತ್ರದಲ್ಲೂ ಕಾರ್ಪೊರೇಟ್ ದಾಳಿಗೆ ಅವಕಾಶ ತೆರೆದಿಟ್ಟಿತು. 2018-19ರಲ್ಲಿ ಕಾರ್ಪೊರೇಟ್‌ಗಳಿಗೆ ಹಾಕುತ್ತಿದ್ದ ಕಾರ್ಪೊರೇಟ್ ತೆರಿಗೆಯನ್ನು ಶೇ.15ರಷ್ಟು ಇಳಿಸಿತು. ಇದರಿಂದಾಗಿ 2021ರ ನಂತರ ಏನಿಲ್ಲವೆಂದರೂ ಭಾರತದ ಬೊಕ್ಕಸಕ್ಕೆ 4 ಲಕ್ಷ ಕೋಟಿ ರೂ. ತೆರಿಗೆ ಖೋತಾ ಆಯಿತು. ಇದರ ಪ್ರಧಾನ ಲಾಭ ಪಡೆಯುತ್ತಿರುವವರು ಹೆಚ್ಚೆಂದರೆ 5,000 ಕಂಪೆನಿಗಳು. ಬದಲಿಗೆ ಕೇವಲ ಒಂದು ಲಕ್ಷ ಕೋಟಿಯನ್ನು ವೆಚ್ಚ ಮಾಡಿ ರೈತಾಪಿಯ ಬೆಂಬಲ ಬೆಲೆ, ಸಣ್ಣ ಉದ್ಯಮಿಗಳ ಲಾಭ ಖಾತರಿ ಮಾಡಿದ್ದರೆ ದೇಶದಲ್ಲಿ ಏನಿಲ್ಲವೆಂದರೂ 60 ಕೋಟಿಗೂ ಹೆಚ್ಚು ಜನರ ಆದಾಯ ಹೆಚ್ಚಿಸಿಕೊಳ್ಳುವ ಶಕ್ತಿ ಹೆಚ್ಚಾಗುತ್ತಿತ್ತು.
ಮತ್ತೊಂದು ಕಡೆ ಇಷ್ಟೆಲ್ಲಾ ಲಾಭ ಪಡೆದ ಖಾಸಗಿ ದೊಡ್ಡ ಬಂಡವಾಳಿಗರು ತಮಗೆ ಸಿಕ್ಕ ತೆರಿಗೆ ವಿನಾಯಿತಿಯನ್ನು ವಿದೇಶದಲ್ಲಿ ಐಷಾರಾಮಿ ಬದುಕಿಗೆ ವ್ಯಯ ಮಾಡುತ್ತಿದ್ದಾರೆಯೇ ವಿನಾ ದೇಶದಲ್ಲಿ ಹೂಡಿಕೆ ಮಾಡುತ್ತಿಲ್ಲ. ಕಳೆದೆರಡು ವರ್ಷಗಳಿಂದ ಹೆಚ್ಚು ಉತ್ಪಾದನೆ ಮಾಡಿದರೆ ಹೆಚ್ಚು ಪ್ರೋತ್ಸಾಹ ಕೊಡುವ ಪಿಎಲ್‌ಐ ಯೋಜನೆಯಾನ್ನು ಮೋದಿ ಸರಕಾರ ಜಾರಿಗೆ ತಂದಿತು. ಆದರೂ ಖಾಸಗಿ ಬಂಡವಾಳ ಹೂಡಿಕೆ ಮಾಡುತ್ತಿಲ್ಲ. ಏಕೆಂದರೆ ಹೂಡಿಕೆ ಮಾಡಬೇಕೆಂದರೆ ಆರ್ಥಿಕತೆಯಲ್ಲಿ ಬೇಡಿಕೆ ಇರಬೇಕು. ಆದರೆ ಉದ್ಯಮಗಳ ಉತ್ಪನ್ನಗಳ ಶೇ. 30-40 ಭಾಗ ಬಿಕರಿಯೇ ಆಗುತ್ತಿಲ್ಲ. ಏಕೆಂದರೆ ಜನರು ಕೊಳ್ಳುತ್ತಿಲ್ಲ. ಅದಕ್ಕೆ ಕಾರಣ ಜನರ ಬಳಿ ಕೊಳ್ಳುವ ಶಕ್ತಿ ಇಲ್ಲ. ಕೊಳ್ಳುವ ಶಕ್ತಿ ಕೊಡುವ ಆರ್ಥಿಕತೆಯನ್ನು ಮೋದಿ ಸರಕಾರ ಕಾರ್ಪೊರೇಟ್‌ಗಳ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ವಿಶೇಷವಾಗಿ ನಿರ್ಲಕ್ಷಿಸುತ್ತಾ ಬಂದಿದೆ.
ಇದನ್ನು ಈವರೆಗೆ ಎಲ್ಲಾ ಜನಪರ ಅರ್ಥಶಾಸ್ತ್ರಜ್ಞರು ಮತ್ತು ಪರಿಣಿತರು ಹೇಳುತ್ತಾ ಬಂದಿದ್ದರು. ಈ ಬಜೆಟ್‌ನಲ್ಲಿ ಸರಕಾರವೇ ಅದನ್ನು ಒಪ್ಪಿಕೊಂಡಿದೆ. Democracy, Demography, Demand - ಪ್ರಜಾತಂತ್ರ, ಜನಸಂಖ್ಯೆ ಮತ್ತು ಬೇಡಿಕೆಗಳ ಗಮನದಲ್ಲಿಟ್ಟುಕೊಳ್ಳುವುದು ಹಾಗೂ ಕೃಷಿ, ಸಣ್ಣ ಮತ್ತು ಮಧ್ಯಮ ಉದ್ಯಮಗಳು, ಖಾಸಗಿ ಹೂಡಿಕೆ ಮತ್ತು ರ್ತುಗಳು ದೇಶದ ಅಭಿವೃದ್ಧಿಯ ಇಂಜಿನ್‌ಗಳೆಂದು ನಿರ್ಮಲಕ್ಕ ಬಾಯಿ ಮಾತಿಗಾದರೂ ದಾಖಲಿಸಿರುವುದು ಪರೋಕ್ಷವಾಗಿ ಈವರೆಗೆ ಮೋದಿ ಸರಕಾರ ಅನುಸರಿಸಿಕೊಂಡು ಬಂದ ‘ಹೂಡಿಕೆಯೇ ಎಲ್ಲ’ ಎಂಬ ಆರ್ಥಿಕ ನೀತಿ ತಪ್ಪೆಂದು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ.
ಆದರೆ ಬಜೆಟ್‌ನಲ್ಲಿ ಇಷ್ಟೆಲ್ಲಾ ಒಪ್ಪಿಕೊಂಡರೂ ಮೋದಿ ಸರಕಾರ ಮತ್ತೆ ಅನುಸರಿಸಿರುವ ಮಾರ್ಗ ಕಾರ್ಪೊರೇಟ್ ಮತ್ತು ಮೇಲ್ ಮಧ್ಯಮ ವರ್ಗದ ಹಿತಾಸಕ್ತಿಯನ್ನು ಮಾತ್ರ ಕಾಪಾಡುವ ದೇಶದ್ರೋಹಿ ಆರ್ಥಿಕ ನೀತಿಯದ್ದೇ ಆಗಿದೆ ಎಂಬುದನ್ನು ಬಜೆಟ್ ಸ್ಪಷ್ಟವಾಗಿ ಸಾರುತ್ತದೆ.
3. ರೂ. 12 ಲಕ್ಷ ಆದಾಯ ತೆರಿಗೆ ವಿನಾಯಿತಿಯಿಂದ ಬೇಡಿಕೆ ಹೆಚ್ಚುವುದೇ?
ಬಜೆಟ್ ಭಾಷಣದ ಪ್ರಾರಂಭದಲ್ಲಿ ತೆಲುಗು ಕವಿ ಗುರುಜಾಡ ಅಪ್ಪಾರಾವ್ ಅವರ ‘‘ದೇಶವೆಂದರೆ ಮಣ್ಣಲ್ಲ, ಮನುಷ್ಯರು’’ ಎಂಬ ಮಾತನ್ನು ಹಣಕಾಸು ಮಂತ್ರಿ ಕೋಟ್ ಮಾಡಿದರೂ ಅವರ ಪ್ರಕಾರ ದೇಶದ ಜನರೆಂದರೆ ಮೇಲ್ ಮಧ್ಯಮ ವರ್ಗ ಹಾಗೂ ಕಾರ್ಪೊರೇಟ್ ಬಂಡವಾಳಿಗರೇ ಹೊರತು ಜನಸಾಮಾನ್ಯರಲ್ಲ ಎಂಬುದನ್ನು ಉಳಿದ ಬಜೆಟ್ ಸ್ಪಷ್ಟ ಪಡಿಸುತ್ತದೆ.
ಈ ಬಜೆಟ್‌ನಲ್ಲಿ ಅತಿ ಮುಖ್ಯವೆಂದು ಮಾಧ್ಯಮಗಳು ಹಾಗೂ ಸರಕಾರ ಬೆನ್ನು ತಟ್ಟಿಕೊಳ್ಳುತ್ತಿರುವುದು ವಾರ್ಷಿಕ 12 ಲಕ್ಷ ರೂ. ಆದಾಯದ ತನಕ ಆದಾಯ ತೆರಿಗೆಯನ್ನು ರದ್ದು ಮಾಡಿರುವ ಬಗ್ಗೆ. ಇದರಿಂದ ದೇಶದ ಮಧ್ಯಮ ವರ್ಗದ ಬಳಿ ಹೆಚ್ಚು ಹಣ ಉಳಿಯುತ್ತದೆಯೆಂದೂ, ಅವರು ಆ ಹೆಚ್ಚಿನ ಉಳಿತಾಯವನ್ನು ಖರೀದಿಗಳಲ್ಲಿ ವಿನಿಯೋಗಿಸುವುದರಿಂದ ಆರ್ಥಿಕತೆ ಮತ್ತು ಬೇಡಿಕೆ ಚೇತರಿಸಿಕೊಳ್ಳುವುದೆಂದೂ ಕೊಚ್ಚಿಕೊಳ್ಳಲಾಗುತ್ತಿದೆ.
140 ಕೋಟಿಗೂ ಹೆಚ್ಚು ಜನರಿರುವ ಈ ದೇಶದಲ್ಲಿ ಆದಾಯ ತೆರಿಗೆ ಕಟ್ಟುವವರು ಪ್ರಧಾನವಾಗಿ ಮೂರುವರೆ ಕೋಟಿ ಜನರು ಮಾತ್ರ. ಅದರಲ್ಲಿ ಈವರೆಗೆ ಏಳು ಲಕ್ಷ ವಾರ್ಷಿಕ ಆದಾಯ ಇರುವವರು ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತಿದ್ದರು. ಈಗ ಅದನ್ನು 12 ಲಕ್ಷಕ್ಕೆ ಹೆಚ್ಚಿಸಲಾಗಿದೆ. 12 ಲಕ್ಷಕ್ಕಿಂತ ಒಂದು ರೂಪಾಯಿ ಹೆಚ್ಚಾದರೂ ಅವರು ತಮ್ಮ ಇಡೀ 12 ಲಕ್ಷ ಆದಾಯಕ್ಕೂ ಸೇರಿ ತೆರಿಗೆ ಕಟ್ಟ ಬೇಕು. ಅಂದರೆ ಈ ನೀತಿಯಿಂದ ಈಗ ಹೆಚ್ಚುವರಿಯಾಗಿ ಲಾಭ ಸಿಕ್ಕಿರುವುದು ಈ ಹಿಂದೆ 7-12 ಲಕ್ಷ ಆದಾಯದ ಬ್ರಾಕೆಟ್‌ನಲ್ಲಿದ್ದವರಿಗೆ ಮಾತ್ರ. ಅವರು ಹೆಚ್ಚೆಂದರೆ ಒಂದು ಕೋಟಿ ಜನರು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಹೀಗಾಗಿ ಇದು ಬಹುದೊಡ್ಡ ಜನರಿಗೆ ಕೊಟ್ಟ ರಿಯಾಯತಿ ಏನಲ್ಲ.
ಎರಡನೆಯದಾಗಿ ಈ ಹೆಚ್ಚುವರಿ ತೆರಿಗೆ ಉಳಿತಾಯ ಪಡೆದ ಮೇಲ್ ಮಧ್ಯಮ ವರ್ಗದವರು ತಮ್ಮ ಐಷಾರಾಮಿ ಖರೀದಿಗಳಿಗೆ ಶೇ. 18-28ರಷ್ಟು ಜಿಎಸ್‌ಟಿಯನ್ನು ಕಟ್ಟಲೇ ಬೇಕು. ಹೀಗಾಗಿ ಆದಾಯ ತೆರಿಗೆಯಾಗಿ ಈ ವರ್ಗದ ಜೇಬಿನಿಂದ ಸರಕಾರಕ್ಕೆ ಸೇರುತ್ತಿದ್ದ ಹಣ, ಈಗ ಜಿಎಸ್‌ಟಿ ರೂಪದಲ್ಲಿ ಸೇರುತ್ತದೆ. ಹೀಗಾಗಿ ಫಲಾನುಭವಿ ಮಧ್ಯಮವರ್ಗಕ್ಕೆ ಹೆಚ್ಚಿನ ಪ್ರಯೋಜನವೇನೂ ಇಲ್ಲ.
ಅದೆಲ್ಲಕ್ಕಿಂತ ಮುಖ್ಯವಾಗಿ ಈ ಮಧ್ಯಮ ವರ್ಗ ಅಂದರೆ ತಿಂಗಳಿಗೆ 75,000-1,00,000 ಆದಾಯ ಪಡೆಯುವ ವರ್ಗ ಈಗ ಪಡೆಯಲಿರುವ ತನ್ನ ಹೆಚ್ಚಿನ ತೆರಿಗೆ ಉಳಿತಾಯವನ್ನು ವಿದೇಶಿ ಪ್ರವಾಸ, ಮಕ್ಕಳ ವಿದೇಶಿ ವ್ಯಾಸಂಗ, ವಿದೇಶಿ ವಸ್ತುಗಳ ಖರೀದಿಯ ಮೇಲೆ ವ್ಯಯ ಮಾಡುವ ಅಥವಾ ಉಳಿತಾಯ ಮಾಡುವ ಅಥವಾ ಶೇರು ಹೂಡಿಕೆ ಮಾಡುವ ಸಾಧ್ಯತೆಯೇ ಹೆಚ್ಚು. ಇಂತಹ ವೆಚ್ಚಗಳಿಂದ ದೇಶದೊಳಗಿನ ಆರ್ಥಿಕತೆಗೆ ಯಾವುದೇ ಚೇತರಿಕೆ ಸಿಗುವುದಿಲ್ಲ.
ಏಕೆಂದರೆ ಅತ್ಯಗತ್ಯ ಹಾಗೂ ಜೀವನಾವಶ್ಯಕ ವಸ್ತುಗಳ ಖರೀದಿಯನ್ನು ಮಾಡಲೇ ಬೇಕಾದ ಅಗತ್ಯವಿರುವ ಬಡವರು, ತಳ ಮಧ್ಯಮ ವರ್ಗದವರು ತಮ್ಮೆಲ್ಲಾ ಹೆಚ್ಚುವರಿ ಆದಾಯವನ್ನು ಅಗತ್ಯ ಖರೀದಿಯ ಮೇಲೆ ವಿನಿಯೋಗಿಸುತ್ತಾರೆ. ಆ ಅಗತ್ಯಗಳಿಲ್ಲದ ಮೇಲ್ ಮಧ್ಯಮ ವರ್ಗ ಉಳಿತಾಯ ಅಥವಾ ವಿದೇಶಿ ಖರೀದಿ ಮಾಡುವುದೇ ಜಾಸ್ತಿ.
ಹೀಗಾಗಿ ಆರ್ಥಿಕತೆಯಲ್ಲಿ ಬಡವರ ಮತ್ತು ಕೆಳ ಮಧ್ಯಮವರ್ಗದವರ ಬಳಿ ಹೆಚ್ಚು ಹಣ ಉಳಿಯಬಹುದಾಗಿದ್ದ ರೀತಿಯಲ್ಲಿ ಪೆಟ್ರೊಲ್-ಡೀಸೆಲ್ ಬೆಲೆ ಕಡಿತ, ಜಿಎಸ್‌ಟಿ ಕಡಿತವಾಗಿದ್ದರೆ ಆರ್ಥಿಕತೆಗೆ ಹೆಚ್ಚು ಲಾಭವಾಗುತ್ತಿತ್ತೇ ವಿನಾ ತಿಂಗಳಿಗೆ ಒಂದು ಲಕ್ಷ ಆದಾಯವಿರುವವರ ತೆರಿಗೆ ವಿನಾಯಿತಿ ಒಂದು ಕ್ರೂರ ಆರ್ಥಿಕ, ರಾಜಕೀಯ ಮತ್ತು ನೈತಿಕ ವಿಡಂಬನೆಯಂತಿದೆ.
4.ಬಡವರನ್ನು ಸುಲಿದು ಶ್ರೀಮಂತರಿಗೆ ವಿನಾಯಿತಿ ಮತ್ತು ರಿಯಾಯಿತಿ
ಮೋದಿ ಸರಕಾರದ್ದು ತರ್ಕಹೀನ ಆರ್ಥಿಕ ನೀತಿ ಮಾತ್ರವಲ್ಲ, ಅತ್ಯಂತ ಅಮಾನುಷ ಆರ್ಥಿಕ ನೀತಿ ಕೂಡ. ಏಕೆಂದರೆ ಮೋದಿ ಸರಕಾರ ಮೇಲ್ ಮಧ್ಯಮ ವರ್ಗಕ್ಕೆ ಕೊಡುತ್ತಿರುವ ತೆರಿಗೆ ವಿನಾಯಿತಿಯಿಂದ ಆಗುವ ನಷ್ಟವನ್ನು ಬಡವರು, ಸಣ್ಣ ಉದ್ಯಮಿಗಳು ಮತ್ತು ರೈತಾಪಿಗಳಿಗೆ ದಕ್ಕಬೇಕಿದ್ದ ಪಾಲನ್ನು ಕಡಿತ ಮಾಡುವುದರಿಂದ ಸರಿದೂಗಿಸಿಕೊಳ್ಳುತ್ತಿದೆ.
ಈ ಬಜೆಟನ್ನು ನೋಡಿದರೆ ಕೃಷಿ, ಗ್ರಾಮೀಣ ಅಭಿವೃದ್ಧಿ, ನರೇಗಾ, ಪರಿಶಿಷ್ಟ ಕಲ್ಯಾಣ, ಅಶಕ್ತರ ಸಹಾಯ ಧನ, ಶಿಕ್ಷಣ ಮತ್ತು ಆರೋಗ್ಯಗಳಂಥ ಜನಸಾಮಾನ್ಯರ ಕಲ್ಯಾಣ ಯೋಜನೆಗಳಿಗೆ ಹಿಂದಿನ ಬಜೆಟ್‌ನಲ್ಲಿ ಘೋಷಿಸಿದ ಮೊತ್ತಕ್ಕಿಂತ ಸಾಕಷ್ಟು ಕಡಿಮೆ ವ್ಯಯವಾಗಿರುವುದನ್ನು ಸೂಚಿಸುತ್ತದೆ. ಈ ಸಾಲಿನ ಬಜೆಟ್‌ನ ಅಂದಾಜಿನ (ಬಿಇ) ಅಂಕಿಸಂಖ್ಯೆಗಳ ಅಸಲಿಯತ್ತು ಮುಂದಿನ ಸಾಲಿನ ಬಜೆಟ್ ಮಂಡಿಸುವಾಗ ಅಂದಾಜಿಸುವ ರಿವೈಸ್ಡ್ ಬಜೆಟ್‌ನಲ್ಲಿ (ಆರ್‌ಇ)ಗೊತ್ತಾಗುತ್ತದೆ. ಈ ವರ್ಷದ ಕರಾರುವಾಕ್‌ಆದಾಯ ಮತ್ತು ವೆಚ್ಚ ಎರಡು ವರ್ಷಗಳ ನಂತರದ ಬಜೆಟ್‌ನಲ್ಲಿ ಮಂಡಿಸುವ ವಾಸ್ತವಿಕ ಅಂಕಿಸಂಖ್ಯೆಗಳಲ್ಲಿ (Actulas) ಗೊತ್ತಾಗುತ್ತದೆ. ಸಾಮಾನ್ಯವಾಗಿ ಬಜೆಟ್ ಅಂದಾಜಿಗಿಂತ ರಿವೈಸ್ಡ್ ಬಜೆಟ್ ಕಡಿಮೆ. ಅದಕ್ಕಿಂತ ವಾಸ್ತವಿಕ ಇನ್ನೂ ಕಡಿಮೆ. ಹೀಗಾಗಿ ಯಾವುದೇ ಸಾಮಾಜಿಕ ಕ್ಷೇತ್ರಗಳಲ್ಲಿ ಹೂಡಿಕೆಯ ಬಗ್ಗೆ ಸರಕಾರ ಘೋಷಿಸುವ ಅಂಕಿಸಂಖ್ಯೆಗೆ ಶೇ. 30ರಷ್ಟಾದರೂ ರಿಯಾಯಿತಿಯನ್ನು ಕೊಟ್ಟೇ ಗ್ರಹಿಸಬೇಕು.
ಅದೊಂದು ಕಡೆ ಇದ್ದರೆ ಈ ಸಾಲಿನ ಬಜೆಟ್‌ನಲ್ಲಿ ಆ ಬಗೆಯಲ್ಲಿ ಯಾವುದೇ ಮುಚ್ಚುಮರೆಯನ್ನು ಮಾಡದೆ ಗ್ರಾಮೀಣ ಅಭಿವೃದ್ಧಿ, ನರೇಗಾ, ಶಿಕ್ಷಣ, ಜಲಜೀವನ್, ಪರಿಶಿಷ್ಟ ಕಲ್ಯಾಣ ಯೋಜನೆಗಳಲ್ಲಿ ಅಂದಾಜು 1.28 ಲಕ್ಷ ಕೋಟಿ ರೂ. ವೆಚ್ಚವನ್ನು ಬಜೆಟ್ ಅಂದಾಜಿನಲ್ಲೇ ಕಡಿಮೆ ತೋರಿಸಿದೆ. ಹಾಗಿದ್ದ ಮೇಲೆ ವಾಸ್ತವಿಕ ವೆಚ್ಚ ಇನ್ನು ಎಷ್ಟು ಕಡಿಮೆಯಾಗಬಹುದು ಎಂಬುದು ಯಾರ ಊಹೆಗೂ ನಿಲುಕುವ ವಿಷಯ. ಇದರ ಜೊತೆಗೆ ರಾಜ್ಯಗಳಿಗೆ ಕೊಡುವ ಅನುದಾನವನ್ನು ಕಡಿಮೆ ಮಾಡಿ ಮೇಲ್ ಮಧ್ಯಮ ವರ್ಗಕ್ಕೆ ಹಾಗೂ ಕಾರ್ಪೊರೇಟ್‌ಗಳಿಗೆ ಕೊಡುತ್ತಿರುವ ರಿಯಾಯಿತಿಯನ್ನು ಸರಿದೂಗಿಸುತ್ತಿದೆ.
ಹೀಗಾಗಿ ಇದು:
ಬಡವರಿಗೆ ಮೋಸ ಮತ್ತು ಮೇಲ್ ಮಧ್ಯಮವರ್ಗದವರಿಗೆ ಮತ್ತು ಕಾರ್ಪೊರೇಟಿಗರಿಗೆ ಮಾತ್ರ ವಿಶ್ವಾಸ ಕೊಡುವ ದೇಶದ್ರೋಹಿ ಬಜೆಟಾಗಿದೆ.
ಇಂದು ಬಂಡವಾಳಶಾಹಿ ಆರ್ಥಿಕತೆಯನ್ನು ಅಪ್ಪಿಕೊಂಡಿರುವ ವ್ಯವಸ್ಥೆಯಲ್ಲಿ ಒಂದು ಬಂಡವಾಳಶಾಹಿ ಪರ, ಕೋಮುವಾದಿ ಸರಕಾರ ಇದಕ್ಕಿಂತ ವಿಶೇಷವಾದ ಜನಪರ ಬಜೆಟನ್ನೇನೂ ಮಂಡಿಸುತ್ತಿರಲಿಲ್ಲ. ಬಂಡವಾಳಶಾಹಿ ವ್ಯವಸ್ಥೆಯನ್ನೇ ಏಕಮಾತ್ರ ಪರಿಹಾರ ಎಂದು ಒಪ್ಪಿಕೊಂಡಿರುವ ವಿರೋಧ ಪಕ್ಷಗಳ ವಿರೋಧಗಳು ಕೂಡಾ ಲೂಟಿಯ ವೇಗವನ್ನು ವಿರೋಧಿಸಬಹುದೇ ವಿನಾ ಬಂಡವಾಳಶಾಹಿ ದಿಕ್ಕನ್ನಲ್ಲ.
ಜನಪರ ಬಜೆಟ್, ಜನಪರ-ಜನರ ಸರಕಾರಗಳ ನೇತೃತ್ವದ ಸಮಾಜವಾದಿ ಆರ್ಥಿಕತೆಯಿಂದ ಮಾತ್ರ ಸಾಧ್ಯ. ಅದಕ್ಕೆ ಅಂಬೇಡ್ಕರ್ ಕನಸು ಕಂಡಿದ್ದು ಪ್ರಭುತ್ವ ಸಮಾಜವಾದ. ಅದಾಗಬೇಕೆಂದರೆ ಎಲ್ಲಾ ಬಗೆಯ ಬಂಡವಾಳಶಾಹಿ ಮತ್ತು ಬ್ರಾಹ್ಮಣಶಾಹಿಗಳ ವಿರುದ್ಧವೂ ಹೋರಾಡಬೇಕೆಂದು ಅಂಬೇಡ್ಕರ್ ಹೇಳಿದ್ದರು. ಅಲ್ಲವೇ?