ಸಂಘಿಗಳ ಎಸ್ಐಆರ್ ದ್ರೋಹಕ್ಕೆ ಕರ್ನಾಟಕದಲ್ಲಿ ಕಾಂಗ್ರೆಸ್ ಮನ್ನಣೆ?
ಕರ್ನಾಟಕದ ಕಾಂಗ್ರೆಸ್ ನಾಯಕರಿಗೊಂದು ಬಹಿರಂಗ ಪತ್ರ

ಕಾಂಗ್ರೆಸ್ ಸರಕಾರ ಹಾಗೂ ಪಕ್ಷದ ಪರೋಕ್ಷ ಸಹಕಾರ, ನೆಪಮಾತ್ರದ ವಿರೋಧ ಹಾಗೂ ಸಕ್ರಿಯ ಆಲಸ್ಯಗಳ ಮೂಲಕ ಮೋದಿ ಸರಕಾರ ಕರ್ನಾಟಕದಲ್ಲಿ ದುಷ್ಟ ಹಾಗೂ ವ್ಯವಸ್ಥಿತ ಕುತಂತ್ರವಾದ ಎಸ್ಐಆರ್-ASDDO ಮೂಲಕ ದೇಶದಲ್ಲಿ ಅತಿ ಹೆಚ್ಚು ಅರ್ಹ ಮತದಾರರನ್ನು ಹೊರದಬ್ಬಿದೆ. ಅದಕ್ಕೆ ಕರ್ನಾಟಕದ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಒಂದು ಕೋಟಿ ಮತದಾರರು ಡಿಲೀಟ್ ಆಗಿರುವುದೇ ಸಾಕ್ಷಿ.
ಇವರೆಲ್ಲರೂ ತಾವು ಡಿಲೀಟ್ ಆಗಿದ್ದೇವೆ ಎಂದೇ ಅರಿಯದ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು. ಅವರನ್ನು ಹೊರದಬ್ಬುವುದೇ ಬಿಜೆಪಿಯ ಎಸ್ಐಆರ್ನ ಕುತಂತ್ರ. ಅದನ್ನು ಕಾಂಗ್ರೆಸ್ ಕೂಡ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುವುದಾದರೆ ನಿಮಗೂ ಬಿಜೆಪಿಗೂ ವ್ಯತ್ಯಾಸವೇನು?
ಕರ್ನಾಟಕದ ಕಾಂಗ್ರೆಸ್ ನಾಯಕರೇ....
ಎಸ್ಐಆರ್ ಎಂಬುದು ಬಿಜೆಪಿ ಸೃಷ್ಟಿಸಿರುವ ದುಷ್ಟ ಅಸಾಂವಿಧಾನಿಕ ಯಂತ್ರ.
ಹೀಗಾಗಿ ಎಸ್ಐಆರ್ ಎಂಬುದೇ ಸಂವಿಧಾನದ ದುರ್ಬಳಕೆ..
ಅದಕ್ಕೆ ರಾಜ್ಯಗಳ ಭೇದಭಾವ ಇಲ್ಲ.
ಆದ್ದರಿಂದ ಎಸ್ಐಆರ್ ನಮ್ಮ ರಾಜ್ಯದಲ್ಲಿ ಮಾತ್ರ ಸರಿಯಾಗಿ ನಡೆದಿದೆ ಎನ್ನುವುದೇ ವಂಚನೆ ಮತ್ತು ಜನದ್ರೋಹ.
ಎಸ್ಐಆರ್ ದುರ್ಬಳಕೆಯಲ್ಲೂ ಮ್ಯಾಪಿಂಗ್ ಮತ್ತು ಫಾರಂ-7ಗಳ ಹೆಚ್ಚುವರಿ ಅತಿರೇಕಗಳು ಕೆಲವು ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚು ನಡೆದಿವೆ.
ಇದರ ವಿರುದ್ಧ ದೇಶಾದ್ಯಂತ ಭುಗಿಲೆದ್ದ ಹೋರಾಟ, ಇಸಿಐ ಒಳಗಿನ ಕರಾಮತ್ತುಗಳನ್ನು ‘ಇಂಡಿಯನ್ ಎಕ್ಸ್ಪ್ರೆಸ್’ ಬಯಲುಗೊಳಿಸಿದ್ದು ಮತ್ತು ಕರ್ನಾಟಕದಲ್ಲಿ ನಿಮ್ಮ ಮಂತ್ರಿಮಂಡಲವೂ ಆಯೋಗದ ಕಚೇರಿ ಮುಂದೆ ಧರಣಿ ಕೂತಿದ್ದರ ಕಾರಣದಿಂದಾಗಿ ಕರ್ನಾಟಕದಲ್ಲಿ ಮ್ಯಾಪಿಂಗ್ ಮತ್ತು ಫಾರಂ-7 ಅತಿರೇಕಗಳು ಇತರ ರಾಜ್ಯಕ್ಕೆ ಹೋಲಿಸಿದಲ್ಲಿ ಸ್ವಲ್ಪ ಕಡಿಮೆಯಾಗಿದೆ.
ಆದರೆ ಅದು ಎಸ್ಐಆರ್ ಪ್ರಕ್ರಿಯೆಯ ಒಳಗೆ ನಡೆದ ಅತಿರೇಕಗಳು ಮಾತ್ರ.
ವಾಸ್ತವದಲ್ಲಿ ಎಸ್ಐಆರ್ನ ಮೂಲ ಕುತಂತ್ರವಿರುವುದು ದಲಿತ-ದಮನಿತ-ಅಲ್ಪಸಂಖ್ಯಾತ ಮತ್ತು ವಲಸೆ ಕಾರ್ಮಿಕರನ್ನು ನಾಗರಿಕತ್ವದಿಂದಲೇ ವಂಚಿಸಲು ರೂಪಿಸಿರುವ ಂSಆಆಔ ಪ್ರಕ್ರಿಯೆಗಳಲ್ಲಿ.
ಇದನ್ನು ನಿಮ್ಮ ಪಕ್ಷ ಮೊದಲಿಂದಲೂ ತಾತ್ವಿಕವಾಗಿ ಮತ್ತು ರಾಜಕೀಯವಾಗಿ ವಿರೋಧಿಸಲೇ ಇಲ್ಲ.
3 ಕೋಟಿ ವಿದೇಶಿಯರು ಪತ್ತೆಯಾದರೆನ್ನುವ ಬಿಜೆಪಿ ಪ್ರಚಾರವನ್ನು ಕಾಂಗ್ರೆಸ್ ಸಮರ್ಥಿಸುತ್ತದೆಯೇ?
ಉದಾಹರಣೆಗೆ ಜ್ಞಾನೇಶ್ ಕುಮಾರ್ ರಾಜೀನಾಮೆಯನ್ನು ಒತ್ತಾಯಿಸಿ ದಿಲ್ಲಿಯಲ್ಲಿ ‘ಇಂಡಿಯಾ’ ಒಕ್ಕೂಟ ಮತ್ತು ಜನಸಂಘಟನೆಗಳ ಯಶಸ್ವಿ ಮತ್ತು ಐತಿಹಾಸಿಕ ಪ್ರದರ್ಶನವಾದ ಮರುದಿನ ಹೈದರಾಬಾದ್ನಲ್ಲಿ ಗೃಹಮಂತ್ರಿ ಅಮಿತ್ ಶಾ ಎಸ್ಐಆರ್ನಿಂದ ಈವರೆಗೆ ಹೊರದಬ್ಬಲ್ಪಟ್ಟಿರುವ 13.39 ಕೋಟಿ ಜನರಲ್ಲಿ 3 ಕೋಟಿ ಅಕ್ರಮ ವಿದೇಶಿಯರು. ಕಾಂಗ್ರೆಸ್ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಆದರೆ ವಾಸ್ತವವೇನು? ಈವರೆಗೆ ಎಸ್ಐಆರ್ ಮೂಲಕ ಹೊರದಬ್ಬಲ್ಪಟ್ಟವರಲ್ಲಿ:A-Absent(ಗೈರು) -3.01 ಕೋಟಿ,S-Shifted(ಸ್ಥಳಾಂತರ) -6.30 ಕೋಟಿ, D-Dead(ಸಾವು) -2.80 ಕೋಟಿ, D-Duplicate (ನಕಲು) 1.02 ಕೋಟಿ.
ಬಿಜೆಪಿಯ ಗೃಹಮಂತ್ರಿ ಮತ್ತು ಎಸ್ಐಆರ್ನ ಜನಕರಲ್ಲಿ ಒಬ್ಬರಾದ ಅಮಿತ್ ಶಾ ಅವರು ಗೈರು ಎಂದು ಪರಿಗಣಿಸಲ್ಪಟ್ಟ 3 ಕೋಟಿ ಜನರನ್ನು ಕೂಡ ವಿದೇಶಿ ನುಸುಳುಕೋರರು ಎಂದು ಆರೋಪಿಸುತ್ತಿದ್ದಾರೆ.
ಆದರೆ ಕರ್ನಾಟಕದ ಎಸ್ಐಆರ್ ಅಂತಿಮ ಪಟ್ಟಿ ಸ್ಪಷ್ಟಪಡಿಸುವಂತೆ ಗೈರು ಮತ್ತು ಸ್ಥಳಾಂತರ ಎಂದು ಅತಿ ಹೆಚ್ಚು ದಾಖಲಾದವರು ಕಲ್ಯಾಣ ಕರ್ನಾಟಕ ಮತ್ತು ರಾಜ್ಯದ ಇತರ ಹಿಂದುಳಿದ ಪ್ರದೇಶಗಳಿಂದ ಬೆಂಗಳೂರು ಇತ್ಯಾದಿ ಕಡೆಗಳಿಗೆ ಹೊಟ್ಟೆಪಾಡಿಗೆ ವಲಸೆ ಹೋಗಿರುವ ಇದೇ ದೇಶದ ದಲಿತರು, ಆದಿವಾಸಿಗಳು ಮತ್ತು ಬಡ ಒಬಿಸಿಗಳು. ಅವರಲ್ಲಿ ಬಹುಜನ ಬೆಂಗಳೂರಿಗೆ ವಲಸೆ ಬರುತ್ತಾರೆ. ಆದರೆ ಇಲ್ಲಿಯೂ ಬೆಳ್ಳಂಬೆಳಗ್ಗೆ ಹೊಟ್ಟೆಪಾಡಿಗೆ ಕೆಲಸಕ್ಕೆ ಹೋಗಿ ರಾತ್ರಿ ಮನೆಗೆ ಮರಳುತ್ತಾರೆ. ಹೀಗಾಗಿ ಬಿಎಲ್ಒಗಳು ಅವರ ಮನೆಗೆ ಬಂದಾಗ ಬೆಂಗಳೂರಿನಲ್ಲೂ ಅವರು ಸಿಗುವುದಿಲ್ಲ. ಇದೇ ಕಾರಣಕ್ಕೆ Absent ಎಂದು ಪರಿಗಣಿಸಿ ಕಾನೂನುಬಾಹಿರವಾಗಿ ಕರ್ನಾಟಕದಲ್ಲೇ ಈ ವರ್ಗದಡಿಯಲ್ಲಿ 20 ಲಕ್ಷ ಅರ್ಹ ದಮನಿತ ಮತದಾರರನ್ನು ಹೊರದಬ್ಬಲಾಗಿದೆ. ಹೀಗೆಯೇ 65 ಲಕ್ಷ ಅರ್ಹರನ್ನು Shifted ಎಂದು ಹೊರದಬ್ಬಲಾಗಿದೆ. ಈ Absent ಮತ್ತು Shiftedಗೆ ಏನು ವ್ಯತ್ಯಾಸ ಎಂದು ಈವರೆಗೆ ಚುನಾವಣಾ ಆಯೋಗ ಸ್ಪಷ್ಟಪಡಿಸಿಲ್ಲ. ಆದರೆ ಪರಿಣಾಮ ಮಾತ್ರ ಕರ್ನಾಟಕದಲ್ಲೇ 80 ಲಕ್ಷ ಮತ್ತು ಇಡೀ ಭಾರತದಲ್ಲಿ 9.31 ಕೋಟಿ ದಲಿತ ದಮನಿತ ಮತದಾರರನ್ನು ಹೊರದಬ್ಬಲಾಗಿದೆ.
ಕರ್ನಾಟಕದಲ್ಲಿ ಎಸ್ಐಆರ್ ಸಮರ್ಪಕವಾಗಿ ನಡೆದಿದೆ ಎಂದು ಪ್ರಮಾಣ ಪತ್ರ ಕೊಡುವ ಮೂಲಕ ಕರ್ನಾಟಕದ 80 ಲಕ್ಷ ಮತ್ತು ಒಟ್ಟಾರೆ ಭಾರತದ 9.31 ಕೋಟಿ ಜನರಿಗೆ ಕಾಂಗ್ರೆಸ್ ದ್ರೋಹ ಬಗೆಯುತ್ತಿಲ್ಲವೇ?
Absent/Shifted ಮತದಾರರನ್ನು ಹೊರದಬ್ಬುವುದು ಸಂವಿಧಾನ ಬಾಹಿರ!
ವಾಸ್ತವವಾಗಿ ಪ್ರಜಾ ಪ್ರತಿನಿಧಿ ಕಾಯ್ದೆ 1950ರ Section 20(1A) ABSENTEE ಮತದಾರರ ಬಗ್ಗೆ ಹೀಗೆ ಹೇಳುತ್ತದೆ:
A person absenting himself temporarily from his place of ordinary residence shall not by reason thereof cease to be ordinarily resident therein.
(https://indiankanoon.org/doc/33670590/)
ಅಂದರೆ ತನ್ನ ಸಾಮಾನ್ಯ ನಿವಾಸದಿಂದ ತಾತ್ಕಾಲಿಕವಾಗಿ ಗೈರಾಗಿರುವ ವ್ಯಕ್ತಿಯು ಆ ಕಾರಣದಿಂದಾಗಿ ಆ ಸಾಮಾನ್ಯ ನಿವಾಸಿಯಲ್ಲ ಎಂದು ಪರಿಗಣಿಸಲಾಗುವುದಿಲ್ಲ ಅರ್ಥಾತ್ ತಾತ್ಕಾಲಿಕವಾಗಿ ಗೈರಾಗಿದ್ದರೂ ಅವರನ್ನು ಮತಪಟ್ಟಿಯಿಂದ ಹೊರಗೆ ಹಾಕುವುದಿರಲಿ ಅದೇ ನಿವಾಸ ಸ್ಥಳದ ಮತಪಟ್ಟಿಯಲ್ಲೇ ಮುಂದುವರಿಸಬೇಕು ಎಂದು 1950ರ ಕಾಯ್ದೆ ಸ್ಪಷ್ಟಪಡಿಸುತ್ತದೆ.
ಹಾಗೆಯೇ ಚುನಾವಣಾ ಆಯೋಗದ 2023ರ Manual, ABSENTEEಗಳ ಬಗ್ಗೆ ಹೀಗೆ ಹೇಳುತ್ತದೆ:
Absentee Voter - An absentee voter is that person who is found to be absent for a limited period from place of his ordinary residence where he is enrolled as an elector. An absentee may be with family or without family. But his name cannot be deleted, as in the existing law, a person absenting himself temporarily from his place of ordinarily residence shall not, by reason thereof, cease to be ordinarily resident therein.
(https://www.ceoandaman.nic.in/election/HANDBOOKS/MANUAL ON ELECTORAL ROLLS 2024.pdf)
ಅಂದರೆ ತಾನು ಮತದಾರರನೆಂದು ನೋಂದಾಯಿಸಿಕೊಂಡಿರುವ ಸಾಮಾನ್ಯ ನಿವಾಸ ಸ್ಥಳದಿಂದ ತಾತ್ಕಾಲಿಕವಾಗಿ ಗೈರಾದವರನ್ನು ABSENTEE ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಗೈರಾದವರನ್ನು ಮತಪಟ್ಟಿಯಿಂದ ಹೊರಹಾಕಬಾರದು ಮತ್ತು ಆ ನಿವಾಸ ಸ್ಥಳದ ಮತಪಟ್ಟಿಯಿಂದಲೂ ತೆಗೆದುಹಾಕಬಾರದು.
ಹೀಗೆ ಕಾನೂನುಗಳು ಗೈರಾದವರನ್ನು ಅದೇ ಸ್ಥಳದ ಮತದಾರರೆಂದು ಪರಿಗಣಿಸಬೇಕು ಎಂದು ಸ್ಪಷ್ಟವಾಗಿದ್ದರೂ ಜ್ಞಾನೇಶ್ರ ಚುನಾವಣಾ ಆಯೋಗ ಕಾನೂನುಬಾಹಿರವಾಗಿ ಅಕ್ಟೋಬರ್ 27, 2025ರ ಆದೇಶದಲ್ಲಿ Absent/Shifted ಆದವರನ್ನು ಮತಪಟ್ಟಿಯಿಂದ ಹೊರಗೆ ಹಾಕಬೇಕೆಂದು ಕಾನೂನು ಬಾಹಿರ ನಿಯಮ ರೂಪಿಸಿದೆ. ಏಕೆಂದರೆ Absent/Shifted ಮತದಾರರನ್ನು ಅನರ್ಹಗೊಳಿಸುವುದಲ್ಲ. ಅವರನ್ನು ಪತ್ತೆ ಹಚ್ಚಿ ಅವರು ನಿಜಕ್ಕೂ ಶಾಶ್ವತವಾಗಿ ಸಾಮಾನ್ಯ ನಿವಾಸದಿಂದ ಗೈರಾಗಿದ್ದಾರೆಯೇ ಎಂದು ಪರಿಶೀಲಿಸಿ ಸ್ಥಳಾಂತರಗೊಂಡ ಪ್ರದೇಶದಲ್ಲಿ ಒಳಗೊಳ್ಳುವುದು ಅಥವಾ ತಾತ್ಕಾಲಿಕವಾಗಿ ಆ ನಿವಾಸದಲ್ಲಿ ಇಲ್ಲವೆಂದಾಗಿದ್ದರೆ ಅದೇ ನಿವಾಸದಲ್ಲಿ ಅವರ ಮತದಾರಿಕೆ ಮುಂದುವರಿಸುವುದು ಚುನಾವಣಾ ಆಯೋಗದ ಆದ್ಯ ಮತ್ತು ಸಾಂವಿಧಾನಿಕ ಕರ್ತವ್ಯ.
ಮೋದಿಯ ಕೈಗೊಂಬೆ ಜ್ಞಾನೇಶ್ ಕುಮಾರ್ ಬಿಜೆಪಿಯ ಹಿಂದುತ್ವವಾದಿ ಆಶಯಗಳನ್ನು ಪೂರೈಸಲು ಎಸ್ಐಆರ್ ಮೂಲಕ Absent/Shifted ವರ್ಗಗಳ ಮೂಲಕ ಈ ನಾಡಿನ ಮೂಲನಿವಾಸಿ ದಲಿತ ದಮನಿತರನ್ನು ಮತಪಟ್ಟಿಯಿಂದ ಹೊರದಬ್ಬುತ್ತಿದೆ.
ಅವೆಲ್ಲವೂ ಕರ್ನಾಟಕದಲ್ಲಿ ಸರಿಯಾಗಿ ನಡೆಯುತ್ತಿದೆ ಎಂದು ಸರ್ಟಿಫಿಕೇಟ್ನೀಡುವ ಮೂಲಕ ಕರ್ನಾಟಕದ ಕಾಂಗ್ರೆಸಿಗರು ಸಂಘಿ ಅಜೆಂಡಾಗಳನ್ನು ನಿರಾತಂಕವಾಗಿ ಜಾರಿ ಮಾಡುತ್ತಿಲ್ಲವೇ?
ಅಷ್ಟು ಮಾತ್ರವಲ್ಲ. ಮೊನ್ನೆ ದಿಲ್ಲಿಯ ಐತಿಹಾಸಿಕ ಪ್ರತಿರೋಧದಲ್ಲೂ ನಾಗರಿಕ ಸಂಘಟನೆಗಳ ಆಗ್ರಹ ಎಸ್ಐಆರ್ ರದ್ದಾಗಬೇಕು ಎಂಬುದಿತ್ತೇ ವಿನಾ ರಾಹುಲ್ ಗಾಂಧಿಯವರನ್ನೂ ಒಳಗೊಂಡಂತೆ ‘ಇಂಡಿಯಾ’ ಪಕ್ಷಗಳ ನಾಯಕರು ಜ್ಞಾನೇಶ್ ಕುಮಾರ್ರ ರಾಜೀನಾಮೆಯ ಬಗ್ಗೆಯೇ ಹೆಚ್ಚು ಒತ್ತುಕೊಟ್ಟಿದ್ದೇಕೆ? ಅದಕ್ಕೂ ಕರ್ನಾಟಕ ಕಾಂಗ್ರೆಸ್ ಸರಕಾರ ಮತ್ತು ನಾಯಕರ ಎಸ್ಐಆರ್ ಪರ ನಿಲುವುಗಳಿಗೂ ಸಂಬಂಧವಿದೆಯೇ?
ಕರ್ನಾಟಕ ಕಾಂಗ್ರೆಸ್ ನಾಯಕರ ಎಸ್ಐಆರ್ ಪರತೆ!
ಏಕೆಂದರೆ ಕಾಂಗ್ರೆಸ್ ಸರಕಾರಗಳಿಲ್ಲದ ಕಡೆಗಳಲ್ಲಿ ಎಸ್ಐಆರ್ ರದ್ದಾಗಬೇಕೆಂದು ಅಬ್ಬರಿಸಿದರೇ ವಿನಾ ನಿಮ್ಮ ಸರಕಾರಗಳಿರುವ ರಾಜ್ಯಗಳಲ್ಲಿ ಆದನ್ನು ತಡೆಯಲು ಸರಕಾರ ಹಾಗೂ ತಮ್ಮ ಪಕ್ಷ ಸೂಕ್ತವಾದ ಮತ್ತು ತೀವ್ರವಾದ ಪ್ರಯತ್ನಗಳನ್ನು ಮಾಡಲಿಲ್ಲ. ಬದಲಿಗೆ ಎಸ್ಐಆರ್ ಒಳಗೆ ಕಾಂಗ್ರೆಸ್ ಮತದಾರರನ್ನು ಮಾತ್ರ ರಕ್ಷಿಸಿಕೊಳ್ಳುವುದೇ ಹೇಗೆ ಎಂಬ ಅವಕಾಶವಾದಿ ದುರುದ್ದೇಶವನ್ನು ಮಾತ್ರ ನಿಮ್ಮ ಹೈಕಮಾಂಡ್ ಮತ್ತು ಸ್ಟೇಟ್ ಕಮಾಂಡ್ ಹೊಂದಿತ್ತೆಂಬುದು ಎಸ್ಐಆರ್ ನಂತರದ ನಿಮ್ಮ ನಾಯಕರ ಹೇಳಿಕೆಗಳಲ್ಲಿ ಮತ್ತು ಗುಸುಗುಸುಗಳಲ್ಲಿ ಸ್ಪಷ್ಟವಾಗಿ ಎದ್ದು ಕಾಣುತ್ತದೆ. (ವಿಪರ್ಯಾಸವೆಂದರೆ ಅದನ್ನು ಕೂಡ ನಿಮ್ಮ ಪಕ್ಷ ಸರಿಯಾಗಿ ಮಾಡಿಲ್ಲ!)
ಆದ್ದರಿಂದಲೇ... ದೇಶದಲ್ಲೇ ಅತಿ ಹೆಚ್ಚು ಎಸ್ಐಆರ್ ಡಿಲೀಷನ್ ಕರ್ನಾಟಕದಲ್ಲಿ ಆಗಿದೆ.
ಹಾಗಿದ್ದರೂ ನಿಮ್ಮ ಪಕ್ಷದ ಮತ್ತು ಸರಕಾರದ ಮುಖ್ಯಸ್ಥರಲ್ಲಿ ಕೆಲವರು ‘‘ಕರ್ನಾಟಕದಲ್ಲಿ ಎಸ್ಐಆರ್ ಸರಿಯಾಗಿ ಆಗಿದೆ’’ ಎಂದು ಬಹಿರಂಗವಾಗಿ ಸರ್ಟಿಫಿಕೇಟ್ ನೀಡುತ್ತಿದ್ದಾರೆ. ವಾಸ್ತವದಲ್ಲಿ ಕಾಂಗ್ರೆಸ್ನ ಬಹುಪಾಲು ನಾಯಕರು ಅಂತರಂಗದಲ್ಲಿ ಇದೇ ಧೋರಣೆ ಹೊಂದಿದ್ದಾರೆ...!
ಹೀಗಾಗಿ ಈ ಧೋರಣೆ ಕೇವಲ ಒಬ್ಬಿಬ್ಬರು ನಾಯಕರದ್ದಲ್ಲ. ಮೊದಲಿಂದಲೂ ಕರ್ನಾಟಕದ ಕಾಂಗ್ರೆಸ್ ನಾಯಕರು ಮತ್ತು ಸರಕಾರ ಎಸ್ಐಆರ್ ಯಶಸ್ವಿಗಾಗಿಯೇ ಪರೋಕ್ಷವಾಗಿ ಶ್ರಮಿಸಿದ್ದಾರೆ!!!
-ಕರ್ನಾಟಕದಲ್ಲಿ ಎಸ್ಐಆರ್ ಪ್ರಕ್ರಿಯೆ ಪ್ರಾರಂಭವಾದಾಗ ನಿಮ್ಮ ಆಗಿನ ಮುಖ್ಯಮಂತ್ರಿ ಎಸ್ಐಆರ್ನಲ್ಲಿ ರಾಜಕೀಯ ಮಾಡುವುದಿಲ್ಲ ಎಂದು ಘೋಷಿಸಿದ್ದರು.
-ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿಯಾದ ಮೇಲಂತೂ Enumeration Form ತುಂಬಿ ಎಸ್ಐಆರ್ನಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳ ದಿದ್ದರೆ ಅನ್ನಭಾಗ್ಯ, ಗೃಹಲಕ್ಷ್ಮಿ ಸೌಲಭ್ಯಗಳೂ ಸಿಗುವುದಿಲ್ಲ ಎಂದು ಬೆದರಿಸುತ್ತಾ ಮೋದಿ ಸರಕಾರದ ದುಷ್ಟ ಎಸ್ಐಆರ್ ಯಶಸ್ವಿಯಾಗಲು ಶ್ರಮಿಸಿದರು.
-ಮತ್ತೊಬ್ಬ ಮಂತ್ರಿ ಯು.ಟಿ. ಖಾದರ್ ಅವರೂ ಕೂಡ ಕಾಂಗ್ರೆಸ್ ಯಾವತ್ತಿಗೂ ಎಸ್ಐಆರ್ ಅನ್ನು ವಿರೋಧಿಸಿಲ್ಲ. ಕೆಲವು ಶಕ್ತಿಗಳು ಎಸ್ಐಆರ್ ಬಗ್ಗೆ ವಿನಾಕಾರಣ ಭೀತಿ ಹುಟ್ಟಿಸುತ್ತಿವೆ ಎಂದು ಘೋಷಿಸಿಬಿಟ್ಟಿದ್ದಾರೆ.
-ಆಗಸ್ಟ್ನಲ್ಲಿ ಕರಡು ಮತಪಟ್ಟಿ ಬಿಡುಗಡೆಯಾಗಿ ರಾಜ್ಯದ ಒಟ್ಟು 5.54 ಕೋಟಿ ಮತದಾರರಲ್ಲಿ 1.08 ಕೋಟಿ ಮತದಾರರು ಡಿಲೀಟ್ ಆದದ್ದು ನಿಮಗೆ ಆತಂಕವೇ ಆಗಲಿಲ್ಲ. ಬದಲಿಗೆ ನಿಮ್ಮ ಕ್ಯಾಬಿನೆಟ್ ಮಂತ್ರಿ ರಾಮಲಿಂಗಾ ರೆಡ್ಡಿಯವರು ಬಿಜೆಪಿಯ ಸುರೇಶ್ ಕುಮಾರ್ರಂತೆ ಮಾತನಾಡತೊಡಗಿದರು. ಬೆಂಗಳೂರಿನ ಮತದಾರರ ಸಂಖ್ಯೆ ಅರ್ಧಕ್ಕೆ ಅರ್ಧದಷ್ಟು ಇಳಿದಿರುವುದರಿಂದ ಈಗ ಆರು ಕಾರ್ಪೊರೇಷನ್ಗಳ ಅಗತ್ಯವಿಲ್ಲ ಎಂದು ಪ್ರತಿಪಾದಿಸುತ್ತಾ ಬೆಂಗಳೂರಿನ 55 ಲಕ್ಷ ಪೂರ್ವ ಮತದಾರರನ್ನು ಹೊರದಬ್ಬಿದ ಎಸ್ಐಆರ್ ಕುತಂತ್ರವನ್ನು ಕಿಂಚಿತ್ತೂ ಪ್ರಶ್ನಿಸದೆ ಅನುಮೋದಿಸಿಬಿಟ್ಟರು.
-ಇದೀಗ ಮತ್ತೊಬ್ಬ ಕ್ಯಾಬಿನೆಟ್ ಮಿನಿಸ್ಟರ್ ಆಗಿರುವ ಸತೀಶ್ ಜಾರಕಿಹೊಳಿಯವರು ಎಸ್ಐಆರ್ ಕರ್ನಾಟಕದಲ್ಲಿ ಸರಿಯಾಗಿ ನಡೆದಿದೆ ಎಂದು ಪ್ರತಿಪಾದಿಸಿದ್ದಾರೆ.
ಇದರ ಬಗ್ಗೆ ಆಕ್ಷೇಪಣೆಗಳು ಬರತೊಡಗಿದ ನಂತರ ಅವರು ಕೊಟ್ಟ ಸಮಜಾಯಿಷಿಗಳು ಕರ್ನಾಟಕದಲ್ಲಿ ಬಿಜೆಪಿಯ ಫಾರಂ-7 ಅಕ್ರಮಗಳನ್ನು ತಡೆದಿದ್ದರ ಬಗ್ಗೆ ಇವೆಯೇ ವಿನಾ ಎಸ್ಐಆರ್ನ ಮೂಲ ಕುತಂತ್ರವಾದ ASDDOಯಿಂದ ಒಂದು ಕೋಟಿ ಮತದಾರರನ್ನು ಹೊರದಬ್ಬಿರುವ ಬಗ್ಗೆ ಆತಂಕವನ್ನಾಗಲಿ, ಆಕ್ರೋಶವನ್ನಾಗಲಿ ತೋರಿಸಿಲ್ಲ.
ಹೀಗಾಗಿ... ಕಾಂಗ್ರೆಸ್ ಸರಕಾರ ಹಾಗೂ ಪಕ್ಷದ ಪರೋಕ್ಷ ಸಹಕಾರ, ನೆಪಮಾತ್ರದ ವಿರೋಧ ಹಾಗೂ ಸಕ್ರಿಯ ಆಲಸ್ಯಗಳ ಮೂಲಕ ಮೋದಿ ಸರಕಾರ ಕರ್ನಾಟಕದಲ್ಲಿ ದುಷ್ಟ ಹಾಗೂ ವ್ಯವಸ್ಥಿತ ಕುತಂತ್ರವಾದ ಎಸ್ಐಆರ್-ASDDOಮೂಲಕ ದೇಶದಲ್ಲಿ ಅತಿ ಹೆಚ್ಚು ಅರ್ಹ ಮತದಾರರನ್ನು ಹೊರದಬ್ಬಿದೆ. ಅದಕ್ಕೆ ಕರ್ನಾಟಕದ ಎಸ್ಐಆರ್ ಅಂತಿಮ ಪಟ್ಟಿಯಲ್ಲಿ ಒಂದು ಕೋಟಿ ಮತದಾರರು ಡಿಲೀಟ್ ಆಗಿರುವುದೇ ಸಾಕ್ಷಿ.
ಇವರೆಲ್ಲರೂ ತಾವು ಡಿಲೀಟ್ ಆಗಿದ್ದೇವೆ ಎಂದೇ ಅರಿಯದ ವಲಸೆ ಕಾರ್ಮಿಕರು, ಕೂಲಿ ಕಾರ್ಮಿಕರು, ದಲಿತರು, ಆದಿವಾಸಿಗಳು ಮತ್ತು ಅಲ್ಪಸಂಖ್ಯಾತರು. ಅವರನ್ನು ಹೊರದಬ್ಬುವುದೇ ಬಿಜೆಪಿಯ ಎಸ್ಐಆರ್ನ ಕುತಂತ್ರ. ಅದನ್ನು ಕಾಂಗ್ರೆಸ್ ಕೂಡ ಸರಿಯಾಗಿದೆ ಎಂದು ಸಮರ್ಥಿಸಿಕೊಳ್ಳುವುದಾದರೆ ನಿಮಗೂ ಬಿಜೆಪಿಗೂ ವ್ಯತ್ಯಾಸವೇನು?
ಕಣ್ಣೆದುರಿಗೆ ಕಾಣುತ್ತಿರುವ ಇಂತಹ ದುಷ್ಟತನವನ್ನು, ಕುತಂತ್ರವನ್ನು ಕೂಡ ನಿಮ್ಮ ನಾಯಕರು... ಎಸ್ಐಆರ್ ಸರಿಯಾಗಿ ನಡೆದಿದೆ, ಸತ್ತವರು, ಡುಪ್ಲಿಕೇಟ್ ಮತದಾರರು ಅಥವಾ ವಲಸೆ ಹೋದವರನ್ನು ಮಾತ್ರ ಡಿಲೀಟ್ ಮಾಡಲಾಗಿದೆ ಎಂದು ಅನಾಮತ್ತು ಸಮರ್ಥಿಸಿಕೊಳ್ಳುತ್ತಾ ಕರ್ನಾಟಕದ ಒಂದು ಕೋಟಿ ಅರ್ಹ ಮತದಾರರಿಗೆ ದ್ರೋಹ ಬಗೆಯುತ್ತಿಲ್ಲವೇ?!
ಸತ್ತವರು ಮತ್ತು ಡುಪ್ಲಿಕೇಟ್ ಮತದಾರರು ಡಿಲೀಟ್ ಆದ ಒಂದು ಕೋಟಿಯಲ್ಲಿ ಕೇವಲ 25 ಲಕ್ಷ. (ಅದೂ ಕೂಡ ಸಮಸ್ಯಾತ್ಮಕ ಲೆಕ್ಕಾಚಾರವೇ. ಆದರೂ) ಇನ್ನುಳಿದ 75 ಲಕ್ಷ ಮತದಾರರು ಏನಾದರು?
ಬೆಂಗಳೂರಿನ 50 ಲಕ್ಷ ಮತದಾರರು ಕಳೆದ ಒಂದು ವರ್ಷದಲ್ಲಿ ಬೆಂಗಳೂರನ್ನು ಬಿಟ್ಟು ವಲಸೆ ಹೋಗಿದ್ದಾರೆಯೇ?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬೆಂಗಳೂರಿನ ಜನಸಂಖ್ಯೆ 1.4 ಕೋಟಿ ಎಂದು ಹೇಳಿದ್ದಾರೆ. ಹಾಗಿದ್ದರೆ ಕನಿಷ್ಠ 1.03 ಕೋಟಿ ವಯಸ್ಕ ಮತದಾರರು ಇರಬೇಕಲ್ಲವೇ? ಹೇಗೆ ಮತ್ತು ಏಕೆ ಬೆಂಗಳೂರಿನ ಮತದಾರರ ಸಂಖ್ಯೆ ಕೇವಲ 55 ಲಕ್ಷ ಎಂದು ಒಪ್ಪಿಕೊಂಡಿರಿ?
ಉಳಿದೆಲ್ಲಾ ಮಾನದಂಡಗಳು ಬೆಂಗಳೂರಿಗೆ ರಾಜ್ಯದ ಮೂಲೆಮೂಲೆಯಿಂದ ಹೆಚ್ಚೆಚ್ಚು ಜನರು ವಲಸೆ ಬರುತ್ತಿದ್ದಾರೆ ಎಂಬುದನ್ನು ಸಾಬೀತು ಪಡಿಸುತ್ತಿರುವಾಗ ಎಸ್ಐಆರ್ ಮಾತ್ರ 55 ಲಕ್ಷ ಅರ್ಹ ಮತದಾರರು ಬೆಂಗಳೂರಿಂದ ವಲಸೆ ಹೋಗಿದ್ದಾರೆಂದು ಸಬೂಬು ಹೇಳುತ್ತಿದ್ದರೆ ದೇಶಾದ್ಯಂತ ಎಸ್ಐಆರ್ ವಿರೋಧಿಸುವ ಕಾಂಗ್ರೆಸ್ ಕರ್ನಾಟಕದಲ್ಲಿ ಮಾತ್ರ ಏಕೆ ಅದನ್ನು ಪ್ರಶ್ನಿಸದೆ ಒಪ್ಪಿಕೊಳ್ಳುತ್ತಿದೆ?
ತಮ್ಮ ಹಳ್ಳಿಗಳಿಂದಲೂ ಶಿಫ್ಟ್ ಎನಿಸಿಕೊಳ್ಳುವ, ಬೆಂಗಳೂರಿನಲ್ಲೂ ಶಿಫ್ಟ್ ಎನಿಸಿಕೊಳ್ಳುವ ಈ ಬಡಪಾಯಿ ವಲಸೆ ಕಾರ್ಮಿಕರನ್ನು ಮೋದಿ ಸರಕಾರ ಶಿಫ್ಟ್ ಮಾಡಿರುವುದಾದರೂ ಎಲ್ಲಿಗೆ? ನಾಗರಿಕತ್ವ ನಿರಾಕರಣೆಯ ಗಲ್ಲಿಗಾ?
ಬಿಜೆಪಿಯ ಮತನರಮೇಧವನ್ನು ಸಾರಾ ಸಗಟು ತಿರಸ್ಕರಿಸದೆ ಕಾಂಗ್ರೆಸ್ ಒಪ್ಪಿಕೊಳ್ಳುತ್ತಿರುವುದೇಕೆ?
ಸಂವಿಧಾನ ಮತ್ತು ಕಾನೂನಿನ ಪ್ರಕಾರ Shift ಅಥವಾ Absent ಆದ ಮತದಾರರು ಅನರ್ಹರೇನಲ್ಲ. ಅದನ್ನೇ ನಿನ್ನೆ ಸುಪ್ರೀಂ ಕೋರ್ಟ್ ಕೂಡ ಹೇಳಿದೆ. ಹೀಗಾಗಿ ಈ ಅರ್ಹ ಮತದಾರರನ್ನು ಎಲ್ಲಿದ್ದಾರೆ ಎಂದು ಹುಡುಕಿ ಮತಪೆಟ್ಟಿಗೆ ಸೇರಿಸುವುದು ಆಯೋಗದ ಕರ್ತವ್ಯ.
ಆದರೆ ಎಸ್ಐಆರ್ ಮೂಲಕ ಆಯೋಗ ಆ ಹೊಣೆಯನ್ನು ಅಮಾಯಕ ಮತದಾರರ ಮೇಲೆ ವರ್ಗಾಯಿಸುತ್ತಿದೆ. ಎಸ್ಐಆರ್ ಸರಿಯಾಗಿ ನಡೆದಿದೆ ಎನ್ನುವ ಕಾಂಗ್ರೆಸ್, ಬಿಜೆಪಿಯ ಆಯೋಗದ ಈ ದ್ರೋಹವನ್ನು ಪರೋಕ್ಷವಾಗಿ ಸಮರ್ಥಿಸುತ್ತಾ ಬಿಜೆಪಿಯೇ ಆಗಿಬಿಡುತ್ತಿಲ್ಲವೇ?
ಮತಪಟ್ಟಿ ಪರಿಷ್ಕರಣೆಯನ್ನು ಯಾರೂ ವಿರೋಧಿಸುತ್ತಿಲ್ಲ ಅದನ್ನು ಮಾಡಲು ಕಾನೂನು ಬದ್ಧವಾಗಿ, SSR ಮತ್ತು IR ಎಂಬ ಮಾರ್ಗಗಳಿವೆ. ಕಳೆದ 78 ವರ್ಷಗಳಿಂದ ಆ ಮಾರ್ಗದಲ್ಲಿ ಮತಪಟ್ಟಿ ಪರಿಷ್ಕರಣೆ ಮಾಡುತ್ತಾ 18 ಲೋಕಸಭಾ ಹಾಗೂ ನೂರಾರು ಶಾಸನಸಭಾ ಚುನಾವಣೆಗಳನ್ನು ಯಶಸ್ವಿಯಾಗಿ ಮಾಡಿಕೊಂಡು ಬರಲಾಗಿದೆ.
ಆದರೆ ಬಿಜೆಪಿ ಮತ್ತು ಜ್ಞಾನೇಶ್ರ ಆಯೋಗ ಎಸ್ಐಆರ್ ಅನ್ನು ಜಾರಿ ಮಾಡಿದ್ದೇ ಮತಪರಿಷ್ಕರಣೆಗಲ್ಲ. ಬದಲಿಗೆ ನಾಗರಿಕತ್ವ ಪರಿಷ್ಕರಣೆಗೆ. ಅದನ್ನು ಆಯೋಗವೇ ಸುಪ್ರೀಂ ಎದುರು ಒಪ್ಪಿಕೊಂಡಿದೆ. ಅದು ಸಂವಿಧಾನ ಬಾಹಿರ ಪ್ರಕ್ರಿಯೆ. ಎಸ್ಐಆರ್ನಲ್ಲಿ ಎಲ್ಲವೂ ಸರಿ ಇದೆ ಎನ್ನುತ್ತಾ ಕಾಂಗ್ರೆಸ್ ಬಿಜೆಪಿಯು ಸಂವಿಧಾನಕ್ಕೆ ಮಾಡುತ್ತಿರುವ ಈ ಕರಸೇವೆಯನ್ನು ಒಪ್ಪಿಕೊಳ್ಳುತ್ತಿಲ್ಲವೇ?
ಪತ್ತೆಯಾದ ಅಕ್ರಮ ವಿದೇಶೀಯರೆಷ್ಟು? ಬೆಟ್ಟ ಕಡಿದು ಇಲಿಯನ್ನೂ ಹಿಡಿಯದವರು...
ಎಸ್ಐಆರ್ ಮಾಡಲು ಬಿಜೆಪಿ ಕೊಟ್ಟ ಮತ್ತೊಂದು ಕಾರಣ ಅಕ್ರಮ ಬಾಂಗ್ಲಾದೇಶಿ ವಲಸೆಕೋರರನ್ನು ಹೊರಗಟ್ಟಬೇಕೆಂಬುದು.
ಎಸ್ಐಆರ್ಗೆ ಮುನ್ನ ಕರ್ನಾಟಕದಲ್ಲೂ 20 ಲಕ್ಷಕ್ಕೂ ಹೆಚ್ಚು ಬಾಂಗ್ಲಾ ದೇಶಿ ನುಸುಳುಕೋರರಿದ್ದಾರೆಂದು ಬಿಜೆಪಿ ಮತ್ತು ಸಂಘಿಗಳು ಹುಯಿಲೆಬ್ಬಿಸಿದ್ದರು. ಅದನ್ನು ಕಾಂಗ್ರೆಸ್ ಮುಖ್ಯಮಂತ್ರಿ ಡಿಕೆಶಿ ಕೂಡ ಪರೋಕ್ಷವಾಗಿ ಒಪ್ಪಿಕೊಂಡಿದ್ದರು.
ಇದೀಗ ಸ್ಪಷ್ಟವಾಗಿರುವಂತೆ ಕರ್ನಾಟಕದಲ್ಲಿ ಪತ್ತೆಯಾಗಿರುವುದು ಒಬ್ಬನೇ ಒಬ್ಬ ಬಾಂಗ್ಲಾದೇಶಿ. ದೇಶಾದ್ಯಂತ ಹೆಚ್ಚೆಂದರೆ 1600 ಅಕ್ರಮ ವಿದೇಶೀಯರು!!
(https://x.com/htTweets/status/2115627572906344687)
ಅವರಲ್ಲಿ ಮುಕ್ಕಾಲು ಭಾಗ ನೇಪಾಳಿ ಹಿಂದೂಗಳು. ಹೀಗಾಗಿ ಎಸ್ಐಆರ್ ಉದ್ದೇಶವೇ ಬಾಂಗ್ಲಾದೇಶಿ ನುಸುಳುಕೋರರ ನೆಪವೊಡ್ಡಿ ದೇಶದಲ್ಲಿ ಮುಸ್ಲಿಮ್ ದ್ವೇಷವನ್ನು ಕೆರಳಿಸುವುದಾಗಿತ್ತು ಹಾಗೂ ಕರ್ನಾಟಕದಲ್ಲೂ ಅದೇ ಸಂಚು ನಡೆದಿತ್ತಲ್ಲವೇ? ಹಾಗಿದ್ದ ಮೇಲೆ ಕರ್ನಾಟಕದಲ್ಲಿ ಎಸ್ಐಆರ್ ಸರಿಯಾಗಿ ನಡೆದಿದೆ ಎಂಬ ನಿಮ್ಮ ವಾದ ಬಿಜೆಪಿಯ ಫ್ಯಾಶಿಸ್ಟ್ ಯೋಜನೆಯನ್ನು ಬೆಂಬಲಿಸುತ್ತಿಲ್ಲವೇ?
ಆದ್ದರಿಂದ ಕಾಂಗ್ರೆಸಿಗರೇ..
ಕರ್ನಾಟಕದಲ್ಲೂ ಎಸ್ಐಆರ್ ಅನ್ನು ಸಾರಾ ಸಗಟಾಗಿ ತಿರಸ್ಕರಿಸಿ.
ಫ್ಯಾಶಿಸ್ಟ್ ಎಸ್ಐಆರ್ನ್ನೂ ಸಮರ್ಥಿಸಿಕೊಳ್ಳುವುದಾದರೆ ಕಾಂಗ್ರೆಸ್ ಪಕ್ಷವನ್ನು ವಿಸರ್ಜಿಸಿ ...ಹಾಗೂ ಇಡಿಯಾಗಿ ಬಿಜೆಪಿಯನ್ನು ಸೇರಿಕೊಂಡುಬಿಡಿ!.
ಹಾಗೆಯೇ... ಕಾಂಗ್ರೆಸ್ನ ಇಂತಹ ಎಸ್ಐಆರ್ ಸಮರ್ಥನೆಗಳನ್ನೂ ಬೆಂಬಲಿಸುವ... ಸಮರ್ಥನೆಗಳನ್ನು ಪೂರೈಸುವ ಪ್ರಗತಿಪರರೂ ಕಾಂಗ್ರೆಸ್ನೊಳಗೆ ವಿಲೀನವಾಗಿಬಿಡಿ!!
ಆಗ ಕರ್ನಾಟಕಕ್ಕೇ ತನ್ನ ಮಿತ್ರರು ಯಾರು-ಶತ್ರುಗಳು ಯಾರು ಎಂಬ ಸ್ಪಷ್ಟತೆಯಾದರೂ ಸಿಗುತ್ತದೆ. ಅಲ್ಲವೇ?
(ಅಂಕಣಕಾರರು ಹಿರಿಯ ಚಿಂತಕರು)






