Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಜಸ್ಟಿಸ್ ಕರ್ಣನ್ ಜಾತಿಗ್ರಸ್ತ...

ಜಸ್ಟಿಸ್ ಕರ್ಣನ್ ಜಾತಿಗ್ರಸ್ತ ನ್ಯಾಯಾಂಗಕ್ಕೆ, ಸಮಾಜಕ್ಕೆ ಹಿಡಿದ ಕೈಗನ್ನಡಿ

ಶಿವಸುಂದರ್ಶಿವಸುಂದರ್18 Nov 2026 10:48 AM IST
share
ಜಸ್ಟಿಸ್ ಕರ್ಣನ್ ಜಾತಿಗ್ರಸ್ತ ನ್ಯಾಯಾಂಗಕ್ಕೆ, ಸಮಾಜಕ್ಕೆ ಹಿಡಿದ ಕೈಗನ್ನಡಿ

ಕರ್ಣನ್ ಅವರ ಪ್ರತಿರೋಧವು ನೇರ ಹಾಗೂ ಸರಳವಾಗಿಲ್ಲ. ಏಕೆಂದರೆ ಇಲ್ಲಿ ಕರ್ಣನ್ ಕೂಡಾ ಅಧಿಕಾರಯುತ ನ್ಯಾಯಾಧೀಶರೇ ಆಗಿದ್ದು ತಮಗಿಂತ ಹೆಚ್ಚಿನ ಅಧಿಕಾರವನ್ನು ಹೊಂದಿರುವ ಸುಪ್ರಿಂಕೋರ್ಟ್‌ನ ಸಾಂಸ್ಥಿಕ ಅಹಂಕಾರಕ್ಕೆ ಹಾಗೂ ಜಾತಿ ಪೂರ್ವಾಗ್ರಹಗಳನ್ನು ಹೊಂದಿದ್ದ ನಾಗರಿಕ ಸಮಾಜದ ಮನಸ್ಥಿತಿಗೆ ಸವಾಲು ಹಾಕಿದ್ದರು. ಆ ಪ್ರಕ್ರಿಯೆಯಲ್ಲಿ ಹೈಕೋರ್ಟ್‌ನ ಜಡ್ಜುಗಳಿಗೆ ತರವಲ್ಲದ ರೀತಿಯಲ್ಲಿ ನಡವಳಿಕೆ ಹಾಗೂ ಆದೇಶಗಳನ್ನು ನೀಡಿದ್ದರು ಎಂದೇ ಇಟ್ಟುಕೊಳ್ಳೋಣ.

ಆದರೆ ಸಾರದಲ್ಲಿ ಅವರ ಪ್ರತಿರೋಧ ನ್ಯಾಯಿಕ ಅಧಿಕಾರದ ಪ್ರಜಾತಾಂತ್ರೀಕರಣಕ್ಕಾಗಿಯೇ ಇತ್ತು. ಹೀಗಾಗಿ ಅದಕ್ಕೆ ಪ್ರಜಾತಾಂತ್ರಿಕ ನೈತಿಕತೆ ಇದೆ. ಅದನ್ನು ಕಾಣದೆ ಅವರ ನಡೆಗಳಲ್ಲಿ ಕೇವಲ ವಿವೇಚನೆ ಇಲ್ಲದ ನಡವಳಿಕೆ ಮತ್ತು ಅಸಂಬದ್ಧ ಆದೇಶಗಳನ್ನು ಮಾತ್ರ ಗುರುತಿಸುವುದು ಪ್ರತಿರೋಧದ ಬ್ರಾಹ್ಮಣ್ಯವಾಗುತ್ತದೆ.

ಬ್ರಾಹ್ಮಣಶಾಹಿ ನ್ಯಾಯಾಂಗಕ್ಕೆ ಮತ್ತು ಸಮಾಜಕ್ಕೆ ವಿಕ್ಷಿಪ್ತವೆನಿಸುವ ವಿಧಾನಗಳಲ್ಲಿ ಅಸಮ್ಮತ ಸ್ವರೂಪಗಳಿಗೆ ಸವಾಲೆಸೆದಿದ್ದ ನ್ಯಾ. ಕರ್ಣನ್ ನ.13ರಂದು ನಿಧನರಾದರು.

ಅಂದು ಮಾರಿಕೊಂಡ ಮಾಧ್ಯಮಗಳಿರಲಿ ಪರ್ಯಾಯ ಮಾಧ್ಯಮಗಳೂ ಸಹ ಅವರನ್ನಾಗಲೀ ಮತ್ತು ಅವರು ಬ್ರಾಹ್ಮಣೀಯ ಸಭ್ಯತೆಯ ನಾಗರಿಕ ಸಮಾಜಕ್ಕೆ ವಿಲಕ್ಷಣವೆನಿಸುವ ರೀತಿಯಲ್ಲಿ ಎತ್ತಿದ ಪ್ರಶ್ನೆಗಳನ್ನಾಗಲೀ ಹೆಚ್ಚು ನೆನಪಿಸಿಕೊಂಡಂತೆ ಕಾಣಲಿಲ್ಲ.

‘ನ್ಯೂಟ್ರಲ್ ನ್ಯಾಯಾಂಗ’ ಉನ್ನತ ಮಟ್ಟದಲ್ಲಿ ಸಾಂಸ್ಥಿಕವಾಗಿ ಕೆಲಸ ಮಾಡುವ ಬ್ರಾಹ್ಮಣ್ಯ, ದಲಿತ ಅಸಹನೆ, ಆಳವಾದ ಭ್ರಷ್ಟಾಚಾರ ಇವುಗಳು ಇಂದು ಯಾರೂ ನಿರಾಕರಿಸಲಾಗದ ಮಟ್ಟಿಗೆ ಸಾಬೀತಾಗಿವೆ. ಆದರೆ ಅದನ್ನು ನ್ಯಾ. ಕರ್ಣನ್ ಅವರು ಒರಟಾಗಿ ಹಾಗೂ ಅಸಾಂಪ್ರದಾಯಿಕವಾಗಿ ಹೇಳಿದಾಗ ನ್ಯಾಯಾಂಗದ ಇತಿಹಾಸದಲ್ಲೇ ಅತ್ಯಪರೂಪದ ರೀತಿಯಲ್ಲಿ ಅವರನ್ನು ಶಿಕ್ಷೆಗೆ ಗುರಿ ಮಾಡಿತು.

ವಾಸ್ತವದಲ್ಲಿ ಭ್ರಷ್ಟ ಹಣದೊಂದಿಗೆ ಪತ್ತೆಯಾದ ಅಗರ್ವಾಲರು, ಆಳುವ ಸರಕಾರಕ್ಕೆ ಬಕೆಟ್ ಹಿಡಿಯುತ್ತಲೇ ಮೇಲೇರಿದ ಮಿಶ್ರಾಗಳು, ಮೀಸಲಾತಿಯ ಬಗ್ಗೆ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಅಪಾರವಾದ ಪೂರ್ವಾಗ್ರಹ ಇಟ್ಟುಕೊಂಡ ಮೇಧಾವಿ ಚಂದ್ರರು, ಗುಪ್ತಾಗಳು, ಸಂವಿಧಾನದ ಮೇಲೆ ಪ್ರಮಾಣ ಮಾಡಿ ಸನಾತನವನ್ನು ಎತ್ತಿಹಿಡಿಯುವ ವ್ಯಾಸರು, ದೀಕ್ಷಿತರು -ಎಲ್ಲರೂ ನ್ಯಾ. ಕರ್ಣನ್ ನ್ಯಾಯಾಂಗದ ಮೇಲೆ ಮಾಡಿದ ಪ್ರತಿಯೊಂದು ಆರೋಪವನ್ನು ಅಕ್ಷರಶಃ ಸರಿಯೆಂದು ಸಾಬೀತು ಮಾಡಿರುವ ಪ್ರಭೃತಿಗಳೇ ಆಗಿದ್ದಾರೆ. ಆದರೂ ಶಿಕ್ಷೆಯಾದದ್ದು ಅಪರಾಧಿಗಳಿಗಲ್ಲ. ಅವರಲ್ಲೆರೂ ನಿವೃತ್ತರಾದ ನಂತರವೂ ನಿರುಮ್ಮುಳವಾಗಿದ್ದಾರೆ. ಆಷಾಢಭೂತಿ ನಾಗರಿಕ ಸಮಾಜದ ಐಕಾನ್‌ಗಳಾಗಿದ್ದಾರೆ.

ಆದರೆ ನ್ಯಾಯಾಧೀಶರಾಗಿದ್ದರೂ ಹೆದರದೆ ವಿಶಲ್ ಬ್ಲೋಯರ್ ರೀತಿ ಸಮಾಜಕ್ಕೆ ಎಚ್ಚರ ನೀಡಿದ ನ್ಯಾ. ಕರ್ಣನ್ ಶಿಕ್ಷೆಗೆ ಗುರಿಯಾದರು. ಸವರ್ಣೀಯ ಸಮಾಜವಂತೂ ಅವರ ನೆನಪನ್ನು ಯಶಸ್ವಿಯಾಗಿ ಅಳಿಸಿಹಾಕುತ್ತಿದೆ.

ಆದ್ದರಿಂದ ಕರ್ಣನ್ ಕಥೆಯನ್ನು, ಅವರು ಹಾಕಿದ ಸವಾಲನ್ನು, ಎತ್ತಿದ ಪ್ರಶ್ನೆಯನ್ನು ಮತ್ತೊಮ್ಮೆ ನಾಗರಿಕ ಸಮಾಜದ ಎದುರು ನಿಲ್ಲಿಸಬೇಕಿದೆ.

ಕರ್ಣನ್ ಏಕೆ ಸಹ್ಯವಾಗಲಿಲ್ಲ?

ಸುಪ್ರಿಂಕೋರ್ಟ್‌ನ ಸರ್ವಾಧಿಕಾರಿ ಧೋರಣೆಗೆ ಹಾಗೂ ಜಾತಿವಾದಿ ಮನಸ್ಸತ್ವಕ್ಕೆ ಕಲ್ಕತ್ತಾ ಹಾಗೂ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದ ದಲಿತ ನ್ಯಾಯಾಧೀಶ ಕರ್ಣನ್ ಅವರೂ ಬ್ರಾಹ್ಮಣಶಾಹಿ ನ್ಯಾಯಾಂಗಕ್ಕೆ ಮತ್ತು ಸಮಾಜಕ್ಕೆ ನುಂಗಲಾಗದ ತುತ್ತಾಗಿ ಉದ್ದಕ್ಕೂ ಸವಾಲೇ ಆಗಿದ್ದರು.

ಆದರೆ ಆ ಸವಾಲು ಮತ್ತು ಪ್ರತಿರೋಧ ನೇರ ಹಾಗೂ ಸರಳವಾಗಿರದೆ ಸ್ವಲ್ಪ ಸಂಕೀರ್ಣವಾಗಿತ್ತು. ಅದೇನೇ ಇದ್ದರೂ ಆ ಪ್ರತಿರೋಧದ ಸಾರವನ್ನು ಗ್ರಹಿಸದೆ ಹೋದ ಸುಪ್ರಿಂಕೋರ್ಟ್, ಮಾರಿಕೊಂಡ ಮಾಧ್ಯಮಗಳು ಹಾಗೂ ‘ನಾಗರಿಕ’(?) ಸಮಾಜ ಅದನ್ನು ಒಬ್ಬ ಮತಿಗೆಟ್ಟ ನ್ಯಾಯಾಧೀಶರ ಅರಾಜಕ ನಡೆಯೆಂದು ಪರಿಗಣಿಸಿತು. ಮಾತ್ರವಲ್ಲದೆ ಸುಪ್ರಿಂಕೋರ್ಟ್ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಒಬ್ಬ ಹಾಲಿ ನ್ಯಾಯಾಧೀಶರಿಗೆ ನ್ಯಾಯಾಂಗ ನಿಂದನೆಯ ಅಪರಾಧದ ಮೇಲೆ ಆರು ತಿಂಗಳು ಜೈಲುಶಿಕ್ಷೆಯನ್ನೂ ನೀಡಿತು.

ನಿಜ ನಾಗರಿಕ ಪ್ರಜ್ಞೆ ಪಡೆಯಲು ಭಾರತೀಯ ಸಮಾಜ ಈ ಪ್ರಶ್ನೆಗಳನ್ನು ಈಗಲಾದರೂ ಅದರ ಒಟ್ಟಾರೆ ಸಂಕೀರ್ಣತೆಯಲ್ಲಿ ಹಾಗೂ ಸಮಗ್ರತೆಯಲ್ಲಿ ಗ್ರಹಿಸುವ ಅಗತ್ಯವಿದೆ. ಅದಕ್ಕಾಗಿ ಮೊದಲು ಕರ್ಣನ್ ಪ್ರಕರಣದ ಸಂಕೀರ್ಣತೆಯನ್ನು ಗ್ರಹಿಸಬೇಕಾಗುತ್ತದೆ.

ಸರಳವಾದ ಆದರೆ ಸಂಕೀರ್ಣಗೊಂಡ ಕರ್ಣನ್ ಕಥೆ

1955ರಲ್ಲಿ ತಮಿಳುನಾಡಿನ ಸಣ್ಣ ಹಳ್ಳಿಯಲ್ಲಿ ದಲಿತ ಕುಟುಂಬದಲ್ಲಿ ಜನಿಸಿದ ಕರ್ಣನ್ ಅವರು 1983ರಲ್ಲಿ ಲಾ ಪದವಿಯನ್ನು ಪಡೆದು 25 ವರ್ಷಗಳ ಕಾಲ ಮದ್ರಾಸ್ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದ್ದರು. 2009ರಲ್ಲಿ ಅವರನ್ನು ಆಗಿನ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಗಂಗುಲಿಯವರು ಹೈಕೋರ್ಟ್‌ನ ಜಡ್ಜ್ ಮಾಡಲು ಸುಪ್ರಿಂಕೋರ್ಟ್‌ನ ಕೊಲಿಜಿಯಂಗೆ ಶಿಫಾರಸು ಮಾಡಿದರು. ಅದನ್ನು ಒಪ್ಪಿಕೊಂಡ ಆಗಿನ ಮುಖ್ಯ ನ್ಯಾಯಮೂರ್ತಿ ಕೆ.ಜೆ. ಬಾಲಕೃಷ್ಣನ್ ನೇತೃತ್ವದ ಕೊಲಿಜಿಯಂ ಅವರನ್ನು 2009ರಲ್ಲಿ ಹೈಕೋರ್ಟ್‌ನ ಜಡ್ಜ್ ಆಗಿ ನೇಮಿಸಿತು. ಅಲ್ಲಿ ಅವರು 2016ರ ತನಕ ಕಾರ್ಯನಿರ್ವಹಿಸಿದರು.

ಈ ಅವಧಿಯಲ್ಲಿ ಜಸ್ಟಿಸ್ ಕರ್ಣನ್ ಅವರು ಹೈಕೋರ್ಟ್‌ನ ಕೆಲವು ಜಡ್ಜ್ ಗಳ ಭ್ರಷ್ಟಾಚಾರದ ಬಗ್ಗೆ 2011ರಲ್ಲಿ ಒಂದು ಪತ್ರಿಕಾಗೋಷ್ಠಿಯನ್ನು ಮಾಡಿ ಒರಟಾದ ಭಾಷೆಯಲ್ಲಿ ಆರೋಪಗಳನ್ನು ಮಾಡಿದ್ದರು. ತಮ್ಮ ಜಾತಿ ಹಿನ್ನೆಲೆಯ ಕಾರಣಕ್ಕಾಗಿ ಮದ್ರಾಸ್ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು ತಮಗೆ ಮಹತ್ವದ ಕೇಸುಗಳನ್ನು ನೀಡುತ್ತಿಲ್ಲ ಎಂದು ಹಲವಾರು ಸಾರಿ ದೂರಿದ್ದರು. ಮಾತ್ರವಲ್ಲ ಹಲವಾರು ಬಾರಿ ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್ ಗಳಲ್ಲಿರುವ ಜಾತೀಯತೆ, ಸ್ವಜನ ಪಕ್ಷಪಾತದ ಬಗ್ಗೆ ಒರಟಾದ ಭಾಷೆಯಲ್ಲಿ ಎಲ್ಲರೆದುರು ಮಾತನಾಡಿದ್ದರು.

ಕೆಳಹಂತದ ಜಡ್ಜುಗಳ ಆಯ್ಕೆ ಮತ್ತು ನೇಮಕಾತಿ ವಿಷಯದಲ್ಲಿ ನಡೆಯುತ್ತಿದ್ದ ಪ್ರಕರಣದಲ್ಲಿ ತನ್ನನ್ನು ಏಕೆ ಸೇರಿಸಿಕೊಳ್ಳುತ್ತಿಲ್ಲ ಎಂದು ಬಹಿರಂಗವಾಗಿ ಆಕ್ಷೇಪಿಸಿದ್ದರು. ಇದೆಲ್ಲಕ್ಕೂ ತನ್ನ ಬಗ್ಗೆ ಇರುವ ಜಾತಿ ಪೂರ್ವಾಗ್ರಹವೇ ಕಾರಣ ಎಂದು ಅವರು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗೂ ದೂರಿತ್ತಿದ್ದರು.

ಆದರೆ ಅವರ ಆರೋಪದ ಬಗ್ಗೆ ವಿಚಾರಣೆ ನಡೆಸದ ಆಗಿನ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ಸಂಜಯ್ ಕೌಲ್ ಅವರು ಕರ್ಣನ್ ಅವರನ್ನು ಬೇರೆ ಕೋರ್ಟ್‌ಗೆ ವರ್ಗಾವಣೆ ಮಾಡಲು ಕೊಲಿಜಿಯಂ ಅನ್ನು ಕೋರಿಕೊಂಡರು. (ವಿಪರ್ಯಾಸವೆಂದರೆ ನಿವೃತ್ತರಾದ ನಂತರ ಸ್ವಯಂ ಕೌಲ್ ಅವರು ತಾವೇ ಹೇಗೆ ಸುಪ್ರೀಂಕೋರ್ಟ್‌ನಲ್ಲಿ ಈ ಬಗೆಯ ತಾರತಮ್ಯಕ್ಕೆ ಗುರಿಯಾದೆ ಎಂದು ‘With Out Fear Or Favour’ ಎಂಬ ಇತ್ತೀಚಿನ ಪುಸ್ತಕದಲ್ಲಿ ಪುಟಗಟ್ಟಲೆ ವಿವರಿಸಿದ್ದಾರೆ.)

ಅದರಂತೆ ಅವರನ್ನು ಕೊಲಿಜಿಯಂ ಕಲ್ಕತ್ತಾ ಹೈಕೋರ್ಟ್‌ಗೆ ವರ್ಗಾವಣೆ ಮಾಡಿತು. ಆದರೆ ಕರ್ಣನ್ ಅವರು ತಮ್ಮ ಅಧಿಕಾರವನ್ನು ಬಳಸಿ ವರ್ಗಾವಣೆಯನ್ನು ರದ್ದುಗೊಳಿಸುವ ಆದೇಶವನ್ನು ಮಾಡಿಕೊಂಡರು. ಆನಂತರ ಆಗಿನ ಸುಪ್ರಿಂಕೋರ್ಟ್ ಮುಖ್ಯನ್ಯಾಯಾಧೀಶ ಜಸ್ಟಿಸ್ ಖೇಹರ್ ಅವರು ಕರ್ಣನ್ ಅವರನ್ನು ತಮ್ಮ ಚೇಂಬರಿಗೆ ಕರೆಸಿ ಮನ ಒಲಿಸಿದ ನಂತರ ಅವರು ಕಲ್ಕತ್ತಾ ಹೈಕೋರ್ಟ್‌ಗೆ ಹೋದರು.

2016ರಲ್ಲಿ ಕೋಲ್ಕತ್ತಾ ಹೈಕೋರ್ಟ್‌ಗೆ ಹೋದ ನಂತರ ಜಸ್ಟಿಸ್ ಕರ್ಣನ್ ಅವರು ಸುಪ್ರೀಂಕೋರ್ಟ್‌ನ ಹಾಗೂ ಹೈಕೋರ್ಟ್‌ನ 32 ನ್ಯಾಯಾಧೀಶರು ಹೇಗೆ ಭ್ರಷ್ಟಾಚಾರದಲ್ಲಿ ನಿರತರಾಗಿದ್ದಾರೆ ಎಂದು ವಿವರಿಸುತ್ತಾ ಒಂದು ಸುದೀರ್ಘ ಹಾಗೂ ಗೋಪ್ಯ ಪತ್ರವನ್ನು ಪ್ರಧಾನಿಗಳಿಗೆ ಬರೆದು ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.

ಆದರೆ ಪ್ರಧಾನಿ ಮೋದಿ ಯಾವ ಕ್ರಮಗಳನ್ನು ತೆಗೆದುಕೊಳ್ಳದೆ ಅದನ್ನು ಯಥಾವತ್ ಸುಪ್ರಿಂಕೋರ್ಟ್‌ನ ಮುಖ್ಯನ್ಯಾಯಾಧೀಶ ಖೇಹರ್ ಅವರಿಗೆ ವರ್ಗಾಯಿಸಿದರು. ಖೇಹರ್ ಅವರು ಕರ್ಣನ್ ಅವರ ಆರೋಪಗಳ ಬಗ್ಗೆ ಯಾವುದೇ ಸ್ವತಂತ್ರ ತನಿಖೆಯನ್ನು ಮಾಡದೆ ದೇಶದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರಲ್ಲಿ ಒಬ್ಬರಾದ ಜಸ್ಟೀಸ್ ಕರ್ಣನ್ ಅವರ ಮೇಲೆ ಸ್ವಪ್ರೇರಿತವಾಗಿ ನ್ಯಾಯಾಂಗ ನಿಂದನೆಯ ಮೊಕದ್ದಮೆಯನ್ನು ಹೂಡಿದರು ಮತ್ತು ಅದರ ವಿಚಾರಣೆಗಾಗಿ ಸುಪ್ರಿಂಕೋರ್ಟ್‌ನ ಆಗಿನ ಏಳು ಹಿರಿಯ ನ್ಯಾಯಾಧೀಶರನ್ನೊಳಗೊಂಡ ಪೀಠವನ್ನು ರಚಿಸಿದರು.

ಈ ನಡೆಗೆ ಪ್ರತಿಕ್ರಿಯೆಯಾಗಿ ಜಸ್ಟೀಸ್ ಕರ್ಣನ್ ಅವರು ತಾವು ದಲಿತರಾಗಿದ್ದರಿಂದಲೇ ಈ ಬಗೆಯ ಅಪಮಾನಮಾಡಲಾಗುತ್ತಿದೆಯೆಂದು ಆರೋಪಿಸಿ ಆ ಏಳು ನ್ಯಾಯಾಧೀಶರ ಮೇಲೆ ಅಟ್ರಾಸಿಟಿ ಕಾಯ್ದೆಯಡಿ ದೂರು ದಾಖಲಿಸಿದರು.

ಇದಕ್ಕೆ ಪ್ರತಿಯಾಗಿ ಸುಪ್ರಿಂಕೋರ್ಟ್ ತನ್ನ ವ್ಯಾಪ್ತಿಯನ್ನು ಉಲ್ಲಂಘಿಸಿ ಕರ್ಣನ್ ಅವರ ಪೀಠಕ್ಕೆ ಯಾವುದೇ ಪ್ರಕರಣವನ್ನು ಸಲ್ಲಿಸಬಾರದೆಂದು ಕೋಲ್ಕತಾ ಹೈಕೋರ್ಟ್‌ಗೆ ತಾಕೀತು ಮಾಡಿತು ಹಾಗೂ ಕರ್ಣನ್ ಅವರ ಮಾನಸಿಕ ಸ್ಥಿತಿ ಸರಿ ಇದೆಯೇ ಎಂದು ಕಡ್ಡಾಯವಾಗಿ ಮೆಡಿಕಲ್ ಪರೀಕ್ಷೆ ಮಾಡಲು ಆದೇಶಿಸಿತು. ಇದಕ್ಕೆ ಪ್ರತಿಯಾಗಿ ಜಸ್ಟೀಸ್ ಕರ್ಣನ್ ಅವರು ಸುಪ್ರಿಂಕೋರ್ಟ್‌ನ ಏಳೂ ನ್ಯಾಯಾಧೀಶರನ್ನು ಅತ್ಯಾಚಾರ ಕಾಯ್ದೆಯಡಿ ಬಂಧಿಸಿ ತನ್ನ ಗೃಹ ಕಚೇರಿಗೆ ಹಾಜರು ಪಡಿಸಬೇಕೆಂದು ದಿಲ್ಲಿ ಪೊಲೀಸರಿಗೆ ಆದೇಶಿಸಿದರು.

ಸುಪ್ರಿಂಕೋರ್ಟ್ ಯಾವುದೇ ವಿಚಾರಣೆಯನ್ನು ಮಾಡದೆ ಕರ್ಣನ್ ಅವರ ಎಲ್ಲಾ ಆದೇಶಗಳನ್ನು ರದ್ದುಪಡಿಸಿತು ಹಾಗೂ ಕರ್ಣನ್ ಅವರ ಆದೇಶಗಳನ್ನು ಪತ್ರಿಕೆಯಲ್ಲಿ ಪ್ರಕಟಿಸಬಾರದೆಂದು ಮಾಧ್ಯಮಗಳಿಗೂ ಆದೇಶ ನೀಡಿ 2017ರ ಮೇ 9ರಂದು ನ್ಯಾಯಾಂಗ ನಿಂದನೆಯ ಆರೋಪದ ಮೇಲೆ ಕರ್ಣನ್ ಅವರಿಗೆ ಆರು ತಿಂಗಳು ಕಾಲ ಜೈಲು ಶಿಕ್ಷೆ ವಿಧಿಸಿತು.

ನಾಗರಿಕ ಸಮಾಜದ ಜಾತಿಗುರುಡು

ಈ ಇಡೀ ವಿದ್ಯಮಾನಗಳಲ್ಲಿ ಮಾಧ್ಯಮಗಳು ಹಾಗೂ ನಾಗರಿಕ ಸಮಾಜಕ್ಕೆ ಎದ್ದು ಕಂಡದ್ದು ಅಥವಾ ಪ್ರಧಾನವಾಗಿ ಕಂಡದ್ದು ಜಸ್ಟಿಸ್ ಕರ್ಣನ್ ಅವರ ಅರಾಜಕ ಹಾಗೂ ಅಸ್ಥಿಮಿತ ಪ್ರತಿಕ್ರಿಯೆಗಳು ಮಾತ್ರ.

ಕರ್ಣನ್ ಅವರ ಪ್ರತಿಕ್ರಿಯೆಗಳಲ್ಲಿ ಆ ಎರಡೂ ಅಂಶಗಳ ನೆರಳು ಇರಬಹುದಾದರೂ ಅವರನ್ನು ಆ ಅಂಚಿನ ಮನಸ್ಥಿತಿಗೆ ಸಾಂಸ್ಥಿಕವಾಗಿ ದೂಡಿದ್ದು ಸವರ್ಣೀಯ ನ್ಯಾಯಾಂಗವೇ ಅಲ್ಲವೇ?

ಒಂದು ಸಂಸ್ಥೆಯಾಗಿ ಮದ್ರಾಸ್ ಹೈಕೋರ್ಟ್ ಹಾಗೂ ಸುಪ್ರಿಂಕೋರ್ಟ್ ಕರ್ಣನ್ ವಿಷಯದಲ್ಲಿ ನಡೆದುಕೊಂಡ ಅರಾಜಕ ಹಾಗೂ ಸಂವಿಧಾನ ಬಾಹಿರ ಕ್ರಮಗಳಿಗೆ ಸಂಸತ್ತು, ಸರಕಾರ, ಸಮಾಜ ಹಾಗೂ ಮಾಧ್ಯಮಗಳು ಕುರುಡಾದದ್ದು ಹೇಗೆ ಮತ್ತು ಏಕೆ?

ಮೊದಲನೆಯದಾಗಿ ನ್ಯಾಯಾಧೀಶರ ಭ್ರಷ್ಟಾಚಾರದ ಬಗ್ಗೆ ಕರ್ಣನ್ ಅವರು ಮಾಡಿದ ಆರೋಪಗಳ ಬಗ್ಗೆ ಈವರೆಗೆ ಸುಪ್ರಿಂಕೋರ್ಟ್ ಒಂದು ಸ್ವತಂತ್ರ ಒಳ ತನಿಖೆಯನ್ನೂ ಕೂಡ ನಡೆಸದೆ ಅವೆಲ್ಲಾ ಕಪೋಲ ಕಲ್ಪಿತ ಆಪಾದನೆ ಹಾಗೂ ಆದರಿಂದ ನ್ಯಾಯಾಂಗ ನಿಂದನೆ ಎಂದು ಹೇಗೆ ತೀರ್ಮಾನಕ್ಕೆ ಬಂದಿತು?

ಹಾಗೆ ನೋಡಿದಲ್ಲಿ 2009ರಲ್ಲಿ ಪ್ರಖ್ಯಾತ ವಕೀಲ ಪ್ರಶಾಂತ್ ಭೂಷಣ್ ಅವರೂ ಸಹ ಹಿಂದಿನ 16 ಮುಖ್ಯ ನ್ಯಾಯಾಧೀಶರುಗಳಲ್ಲಿ ಅರ್ಧಕ್ಕಿಂತ ಹೆಚ್ಚಿನವರು ಭ್ರಷ್ಟರು ಎಂದು ಬರೆದಿದ್ದಾರೆ.

ಬಿಜೆಪಿಯ ಹಿರಿಯ ನಾಯಕ ಮತ್ತು ನಂತರದಲ್ಲಿ ಮೋದಿ ಸರಕಾರದಲ್ಲಿ ಕ್ಯಾಬಿನೆಟ್ ಮಂತ್ರಿಯೂ ಆದ ಅರುಣ್ ಜೇಟ್ಲಿಯವರು 2012ರಲ್ಲಿ ‘Pre-retirement judgements are influenced by post-retirement jobs’ (ನಿವೃತ್ತಿಯ ಪೂರ್ವದ ಆದೇಶಗಳು ನಿವೃತ್ತಿಯ ನಂತರದಲ್ಲಿ ದೊರೆಯುವ ಆಮಿಷಗಳ ಪ್ರಭಾವಕ್ಕೆ ಒಳಗಾಗಿರುತ್ತವೆ) ಎಂದು ಉನ್ನತ ನ್ಯಾಯಾಂಗದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರದ ಬಗ್ಗೆ ಸದನದಲ್ಲೇ ಬಹಿರಂಗವಾಗಿ ಟೀಕಿಸಿದ್ದರು.

ಅಷ್ಟು ಮಾತ್ರವಲ್ಲ. 2016ರ ಆಗಸ್ಟ್ 9ರಂದು ಅರುಣಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಾಲಿಕೋ ಫುಲ್ ಅವರು ಅಂದಿನ ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದ ಜಸ್ಟಿಸ್ ಖೇಹರ್ ಅವರು ಭ್ರಷ್ಟರಾಗಿರುವುದರಿಂದ ತನಗೆ ನ್ಯಾಯ ಸಿಗುವುದಿಲ್ಲ ಎಂದು ಬರೆದು ಆತ್ಮಹತ್ಯೆ ಮಾಡಿಕೊಂಡರು.

2021ರಲ್ಲಿ ಪ್ರತಿಷ್ಠಿತ ಸಿಂಗಾಪುರ್ ವಿಶ್ವವಿದ್ಯಾನಿಲಯದ ಸಂಶೋಧಕರಂತೂ ಭಾರತದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಸಾಂಸ್ಥಿಕವಾಗಿರುವ ಭ್ರಷ್ಟಾಚಾರದ ಬಗ್ಗೆ ‘Jobs for justice(s): Corruption in the Supreme Court of India’ ಎಂಬ ಹೆಸರಿನಲ್ಲಿ ವಿದ್ವತ್ಪೂರ್ಣ ಹಾಗೂ ಸಂಶೋಧನಾ ಪ್ರಬಂಧವನ್ನು ಬರೆದಿದ್ದರು. ಅದರ ಪ್ರಕಾರ ಸರಕಾರದ ಪರವಾಗಿ ತೀರ್ಪು ನೀಡುವ ಶೇ. 95ರಷ್ಟು ನ್ಯಾಯಾಧೀಶರು ನಂತರ ಸರಕಾರದಿಂದ ಒಂದಲ್ಲ ಒಂದು ಬಗೆಯ ಕೃಪೆಗೆ ಪಾತ್ರರಾಗಿರುತ್ತಾರೆ.

ಅದಕ್ಕೆ ವಿಶೇಷ ಸಂಶೋಧನೆಯ ಅಗತ್ಯವೂ ಇಲ್ಲ. ಬಾಬರಿ ಮಸೀದಿ ವಿಷಯದಲ್ಲಿ ಬಿಜೆಪಿ ಮತ್ತು ಸಂಘಿ ಸಿದ್ಧಾಂತದ ಪರವಾಗಿ ಅನ್ಯಾಯದ ತೀರ್ಪು ಕೊಟ್ಟ ನ್ಯಾಯಾಧೀಶರೆಲ್ಲ ನಿವೃತ್ತಿಯ ನಂತರ ರಾಜ್ಯಸಭಾ ಸದಸ್ಯರು, ರಾಜ್ಯಪಾಲರು, ಅತಿಲಾಭ ತರುವ ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ನ್ಯಾಯಮಂಡಳಿಯ ಸದಸ್ಯರೂ ಆಗಿ ನೇಮಕವಾದರು.

ತೀರಾ ಇತ್ತೀಚೆಗೆ ನ್ಯಾ. ಅಗರ್ವಾಲ್ ಅವರ ಮನೆಯಲ್ಲಿ ಸಿಕ್ಕ ಕಂತೆ ಕಂತೆ ಕರೆನ್ಸಿಗಳೂ ಸಹ ಕರ್ಣನ್ ಆರೋಪಕ್ಕೆ ಪುರಾವೆಯನ್ನೇ ಕೊಟ್ಟಿವೆಯಲ್ಲವೇ?

ಹೀಗಾಗಿ ಕರ್ಣನ್ ಅವರ ಆರೋಪ ಬುನಾದಿ ರಹಿತವಾದದ್ದೇನಲ್ಲ ಮತ್ತು ಅವರು ತಮ್ಮ ಆರೋಪಗಳನ್ನು ಸಂವಿಧಾನ ಬಾಹಿರವಾಗಿಯೂ ಮಾಡಲಿಲ್ಲ. ನ್ಯಾಯಾಧೀಶರ ಬಗ್ಗೆ ಕ್ರಮ ತೆಗೆದುಕೊಳ್ಳಬಹುದಾದ ಅಧಿಕಾರ ಇರುವ ಸಂಸತ್ತಿನ ಆಳುವ ಪಕ್ಷದ ನಾಯಕನಾದ ಪ್ರಧಾನಿಗೆ ಪತ್ರ ಬರೆದರು. ಆದರೆ ಆ ಪ್ರಧಾನಿ ಅದರ ಬಗ್ಗೆ ಕ್ರಮ ತೆಗೆದುಕೊಳ್ಳದೆ ಯಾರ ಮೇಲೆ ಆರೋಪ ಇತ್ತೋ ಅವರಿಗೇ ವರ್ಗಾಯಿಸಿದರು. ಈ ವಿಷಯದ ಬಗ್ಗೆ ನಾಗರಿಕ ಸಮಾಜ ಕುರುಡಾದದ್ದು ಏಕೆ?

ಎರಡನೆಯದಾಗಿ: ಹೈಕೋರ್ಟ್‌ನ ನ್ಯಾಯಾಧೀಶರೊಬ್ಬರು ಸುಪ್ರಿಂಕೋರ್ಟ್ ನ ನ್ಯಾಯಾಧೀಶರನ್ನು ಬಂಧಿಸಲು ಆದೇಶಿಸುವುದು ಅತಿರೇಕದ ಕ್ರಮ. ಅದೂ ಅಪರಾಧಗಳು ಸಾಬೀತಾಗುವ ಮೊದಲೇ.

ಇಲ್ಲಿ ಕರ್ಣನ್ ಅವರು ತಪ್ಪೆಸಗಿದ್ದಾರೆ. ಆದರೆ ಅದಕ್ಕಿಂತ ದೊಡ್ಡ ತಪ್ಪನ್ನು ಸುಪ್ರಿಂಕೋರ್ಟ್ ಎಸಗಿದೆ. ಸಂವಿಧಾನದ 129 ಮತ್ತು 142ರ ಕಲಂಗಳ ಪ್ರಕಾರ ಹೈಕೋರ್ಟ್ ಮತ್ತು ಸುಪ್ರಿಂಕೋರ್ಟ್‌ಗಳೆರಡೂ ಸಾಂವಿಧಾನಿಕವಾಗಿ ಸಮಾನಸ್ಥಾಯಿ ಇರುವ ಕೋರ್ಟ್‌ಗಳಾಗಿವೆ. ನ್ಯಾಯಿಕ ವಿಷಯಗಳಲ್ಲಿ ಸುಪ್ರಿಂಕೋರ್ಟ್ ಅಂತಿಮವಾದರೂ ಸಾಂವಿಧಾನಿಕವಾಗಿ ಹೈಕೋರ್ಟ್ ಗಳು ಸುಪ್ರಿಂಕೋರ್ಟ್‌ಗಳ ಅಧೀನವಲ್ಲ. ಅಲ್ಲದೆ ಸಾಂವಿಧಾನಿಕವಾಗಿ ಒಬ್ಬ ಹೈಕೋರ್ಟ್ ಅಥವಾ ಸುಪ್ರಿಂಕೋರ್ಟ್ ನ್ಯಾಯಾಧೀಶರನ್ನು ಪದಚ್ಯುತಿ ಮಾಡುವ ಅಧಿಕಾರ ಸಂಸತ್ತಿಗೆ ಮಾತ್ರ ಇದೆ. ಸುಪ್ರೀಂ ಕೋರ್ಟ್‌ಗೂ ಆ ಅಧಿಕಾರ ಇಲ್ಲ.

ಹಾಗಿರುವಾಗ ಕರ್ಣನ್ ವಿಷಯದಲ್ಲಿ ಅವರಿಗೆ ಯಾವುದೇ ಪ್ರಕರಣಗಳನ್ನು ವರ್ಗಾಯಿಸಬಾರದೆಂಬ ಅಧಿಕಾರಚ್ಯುತಿ ಆದೇಶವನ್ನು ಯಾವ ಕಾನೂನಿನಡಿಯಲ್ಲಿ ಆದೇಶಿಸಿತು? ಸಂವಿಧಾನದ ಯಾವ ಕಲಮಿನ ಆಧಾರದಲ್ಲಿ ಹೈಕೋರ್ಟ್ ನ ನ್ಯಾಯಧೀಶರೊಬ್ಬರ ಮೇಲೆ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ದಾಖಲಿಸಿದ್ದು ಮಾತ್ರವಲ್ಲದೆ ಏಳು ಜನರ ಪೀಠವನ್ನು ರಚಿಸಿತು?

ಇವೆಲ್ಲವೂ ಅಸಾಂವಿಧಾನಿಕ ಮಾತ್ರವಲ್ಲ, ಅತ್ಯಂತ ದೀರ್ಘಕಾಲೀನ ದುಷ್ಪರಿಣಾಮ ಬೀರುವ ಕ್ರಮವಾಗಿದೆ. ಇದು ಸುಪ್ರಿಂಕೋರ್ಟ್‌ನ ಸಾಂಸ್ಥಿಕ ಅರಾಜಕತೆಯಾಗಿದೆ. ಇದು ಒಬ್ಬ ವ್ಯಕ್ತಿಯಾಗಿ ಜಸ್ಟಿಸ್ ಕರ್ಣನ್ ಅವರ ವ್ಯಕ್ತಿಗತ ಅರಾಜಕತೆಗಿಂದ ಹೆಚ್ಚು ಖಂಡನಾರ್ಹವಾದದ್ದು.

ನಾಗರಿಕ ಸಮಾಜ ಈ ವಿಷಯಕ್ಕೆ ಕುರುಡಾದದ್ದು ಹೇಗೆ?

ಒಂದೇ ಬಗೆಯ ತಪ್ಪಿಗೆ ಎರಡೆರಡು ಮಾನದಂಡಗಳು ತರವೇ?ಏಕೆ? ಇಲ್ಲಿ ತಪ್ಪು ಒಂದೇ ಇದ್ದರೂ ಶಿಕ್ಷೆ ಭಿನ್ನವಾಗಿದ್ದಕ್ಕೆ ಕಾರಣ ಕರ್ಣನ್ ಅವರ ಸಾಮಾಜಿಕ ಹಿನ್ನೆಲೆಯ ಬಗ್ಗೆ ಇದ್ದ ಸಾಂಸ್ಥಿಕ ಅಸಹನೆ ಮತ್ತು ತಿರಸ್ಕಾರವೇ ಅಲ್ಲವೇ?

ಮೂರನೆಯದಾಗಿ: ಕರ್ಣನ್ ಅವರು 2011ರಲ್ಲಿ ತಮ್ಮ ಸಹೋದ್ಯೋಗಿಗಳ ವಿರುದ್ಧ ಸಂಪ್ರದಾಯಗಳನ್ನು ಮೀರಿ ಪತ್ರಿಕಾಗೋಷ್ಠಿಯನ್ನು ಮಾಡಿದರು. ಅದನ್ನು ಅತಿರೇಕ ಎನ್ನಲಾಯಿತು. ಮತಿಗೇಡಿತನ ಎನ್ನಲಾಯಿತು.

2018ರ ಜನವರಿ 12ರಂದು ಸುಪ್ರಿಂಕೋರ್ಟ್‌ನ ನಾಲ್ವರು ಹಿರಿಯ ನ್ಯಾಯಾಧೀಶರು ತಮ್ಮ ಸಹೋದ್ಯೋಗಿ ನ್ಯಾಯಾಧೀಶರ ನಡೆಯಿಂದ ದೇಶವೇ ಆಪತ್ತಿನಲ್ಲಿದೆ ಎಂದು ಪತ್ರಿಕಾಗೋಷ್ಠಿ ಮಾಡಿದರು. ಅದನ್ನು ಮಾತ್ರ ನಾಗರಿಕ ಸಮಾಜ ಅತ್ಯಗತ್ಯ ನ್ಯಾಯಿಕ ಬಂಡಾಯವೆಂದು ಪರಿಗಣಿಸಿತು. ಎರಡು ಪತ್ರಿಕಾ ಗೋಷ್ಠಿಗಳ ವಸ್ತು ನ್ಯಾಯಾಂಗದ ಭ್ರಷ್ಟಾಚಾರವೇ ಆಗಿತ್ತು. ಅದರೂ ಒಂದನ್ನು ಸಹಜವಾಗಿ ಒಪ್ಪಿಕೊಂಡ ನಾಗರಿಕ ಸಮಾಜ ಮತ್ತೊಂದನ್ನೂ ಮಾತ್ರ ಏಕೆ ಅತಿರೇಕದ ಶಿಷ್ಟಾಚಾರಗಳ ಅರಿವಿಲ್ಲದ ಮತಿಗೇಡಿತನವೆಂದು ಪರಿಗಣಿಸಿತು?

ಹಾಗೆ ನೋಡಿದಲ್ಲಿ ನ್ಯಾಯಾಂಗ ಭ್ರಷ್ಟಾಚಾರದ ಬಗ್ಗೆ ಕರ್ಣನ್ ನಿರಂತರತೆ ಮತ್ತು ಸ್ಥಿಮಿತತೆಯನ್ನು ಕಾದುಕೊಂಡಿದ್ದಾರೆ.

ಆದರೆ ರಂಜನ್ ಗೊಗೊಯಿರಂತಹ ನ್ಯಾಯಾಧೀಶರು ಅಧಿಕಾರ ಹಾಗೂ ಇನ್ನಿತರ ಫೇವರ್‌ಗಳು ಸಿಕ್ಕ ಕೂಡಲೇ ಅಸ್ಥಿಮಿತತೆ ತೋರಿದ್ದಾರೆ. ಆದರೂ ನಾಗರಿಕ ಸಮಾಜ ಕರ್ಣನ್ ಅವರ ಬಗ್ಗೆ ವ್ಯಗ್ರವಾಗಿರುವಷ್ಟು ಗೊಗೊಯಿ ಬಗ್ಗೆ ಏಕೆ ವ್ಯಗ್ರವಾಗುವುದಿಲ್ಲ?

ನಾಲ್ಕನೆಯದಾಗಿ: ಕರ್ಣನ್ ಅವರು ತಮ್ಮ ಬೆಂಚಿಗೆ ಬರಬೇಕಾದ ಪ್ರಕರಣವನ್ನು ಬೇರೊಂದು ಬೆಂಚಿಗೆ ವರ್ಗಾಯಿಸಿದ್ದರ ಬಗ್ಗೆ ಶಿಷ್ಟಾಚಾರಗಳನ್ನು ಮೀರಿ ಬಹಿರಂಗವಾಗಿ ಆಕ್ಷೇಪಿಸಿದರು. ಇದೂ ಕೂಡ ಅತಿರೇಕದ ಕ್ರಮವೇ.

ಆದರೆ 2018ರಲ್ಲಿ ಆಗಿನ ಸುಪ್ರಿಂಕೋರ್ಟ್‌ನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ಅವರು ಮತ್ತೊಬ್ಬ ಹಿರಿಯ ನ್ಯಾಯಾಧೀಶ ಚಲಮೇಶ್ವರ್ ವಿಚಾರಣೆ ನಡೆಸುತ್ತಿದ್ದ ಪ್ರಕರಣವನ್ನು ಊಟದ ಬಿಡುವಿನಲ್ಲಿ ರದ್ದುಮಾಡಿದರು. ಏಕೆಂದರೆ ಆಗಿನ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ ತನ್ನ ‘ಮಾಸ್ಟರ್ ಆಫ್ ದಿ ರೋಸ್ಟರ್’ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಮೋದಿ ಸರಕಾರದ ವಿರುದ್ಧದ ಎಲ್ಲಾ ಪ್ರಕರಣಗಳನ್ನು ಮೋದಿ ಭಕ್ತ ಅರುಣ್ ಮಿಶ್ರಾ ಅವರ ಅತಿ ಜೂನಿಯರ್ ಬೆಂಚಿಗೆ ವರ್ಗಾಯಿಸುತ್ತಿದ್ದರು. ಅದನ್ನು ವಿರೋಧಿಸಿಯೇ ಸುಪ್ರೀಂನ ನಾಲ್ವರು ಅತಿ ಹಿರಿಯ ನ್ಯಾಯಾಧೀಶರು ಬಹಿರಂಗ ಪತ್ರಿಕಾಗೋಷ್ಠಿ ಮಾಡಿದ್ದಲ್ಲವೇ?

ಇತ್ತೀಚೆಗೆ ನ್ಯಾ. ಸಂಜಯ್ ಕೌಲ್ ಅವರು ಕೂಡ ಮುಖ್ಯ ನ್ಯಾಯಾಧೀಶ ಚಂದ್ರಚೂಡ್ ಮೋದಿ ಸರಕಾರವನ್ನು ಮೆಚ್ಚಿಸಲು ಹೇಗೆ ತಮ್ಮ ಪೀಠದ ಮುಂದಿದ್ದ ಮೋದಿ ಸರಕಾರದ ವಿರೋಧಿ ಪ್ರಕರಣಗಳನ್ನು ವರ್ಗಾಯಿಸುತ್ತಿದ್ದರು ಎಂದು ಬರೆದುಕೊಂಡಿಲ್ಲವೇ?

ಮುಖ್ಯ ನ್ಯಾಯಾಧೀಶರಾದ ಮೇಲೆ ನ್ಯಾ. ರಂಜನ್ ಗೊಗೊಯಿ ಅಂತೂ ಮಹಿಳಾ ಸಹೋದ್ಯೋಗಿ ಒಬ್ಬರು ತನ್ನ ಮೇಲೆ ಮಾಡಿದ ಆರೋಪದ ವಿಚಾರಣೆಯನ್ನು ತಾನೇ ನಡೆಸಿದರು.

ನಮ್ಮ ನಾಗರಿಕ ಸಮಾಜ ಇವೆಲ್ಲವನ್ನೂ ಕೂಡಾ ಮತಿಗೇಡಿತನ, ಅಧಿಕಾರ ದುರುಪಯೋಗ ಸತತ ನ್ಯಾಯಾಂಗ ನಿಂದನೆಯ ಕ್ರಮಗಳಿಗೆ ಉದಾಹರಣೆಯನ್ನಾಗಿ ಪರಿಗಣಿಸಲಿಲ್ಲ. ಏಕೆ?

ಪ್ರಜಾತಾಂತ್ರಿಕ ನೈತಿಕತೆ ಮತ್ತು ಪ್ರತಿರೋಧದ ಬ್ರಾಹ್ಮಣ್ಯ

ಹೌದು. ಕರ್ಣನ್ ಅವರ ಪ್ರತಿರೋಧವು ನೇರ ಹಾಗೂ ಸರಳವಾಗಿಲ್ಲ. ಏಕೆಂದರೆ ಇಲ್ಲಿ ಕರ್ಣನ್ ಕೂಡಾ ಅಧಿಕಾರಯುತ ನ್ಯಾಯಾಧೀಶರೇ ಆಗಿದ್ದು ತಮಗಿಂತ ಹೆಚ್ಚಿನ ಅಧಿಕಾರವನ್ನು ಹೊಂದಿರುವ ಸುಪ್ರಿಂಕೋರ್ಟ್‌ನ ಸಾಂಸ್ಥಿಕ ಅಹಂಕಾರಕ್ಕೆ ಹಾಗೂ ಜಾತಿ ಪೂರ್ವಗ್ರಹಗಳನ್ನು ಹೊಂದಿದ್ದ ನಾಗರಿಕ ಸಮಾಜದ ಮನಸ್ಥಿತಿಗೆ ಸವಾಲು ಹಾಕಿದ್ದರು. ಆ ಪ್ರಕ್ರಿಯೆಯಲ್ಲಿ ಹೈಕೋರ್ಟ್‌ನ ಜಡ್ಜುಗಳಿಗೆ ತರವಲ್ಲದ ರೀತಿಯಲ್ಲಿ ನಡವಳಿಕೆ ಹಾಗೂ ಆದೇಶಗಳನ್ನು ನೀಡಿದ್ದರು ಎಂದೇ ಇಟ್ಟುಕೊಳ್ಳೋಣ.

ಆದರೆ ಸಾರದಲ್ಲಿ ಅವರ ಪ್ರತಿರೋಧ ನ್ಯಾಯಿಕ ಅಧಿಕಾರದ ಪ್ರಜಾತಾಂತ್ರೀಕರಣಕ್ಕಾಗಿಯೇ ಇತ್ತು. ಹೀಗಾಗಿ ಅದಕ್ಕೆ ಪ್ರಜಾತಾಂತ್ರಿಕ ನೈತಿಕತೆ ಇದೆ. ಅದನ್ನು ಕಾಣದೆ ಅವರ ನಡೆಗಳಲ್ಲಿ ಕೇವಲ ವಿವೇಚನೆ ಇಲ್ಲದ ನಡವಳಿಕೆ ಮತ್ತು ಅಸಂಬದ್ಧ ಆದೇಶಗಳನ್ನು ಮಾತ್ರ ಗುರುತಿಸುವುದು ಪ್ರತಿರೋಧದ ಬ್ರಾಹ್ಮಣ್ಯವಾಗುತ್ತದೆ.

ಎಲ್ಲಕ್ಕಿಂತ ಮಿಗಿಲಾಗಿ ‘ಸಭ್ಯ, ಸವರ್ಣೀಯ’ ನ್ಯಾಯಾಧೀಶರುಗಳು ತಮ್ಮ ಸ್ವಾರ್ಥಕ್ಕೆ, ಅಧಿಕಾರಕ್ಕೆ, ದ್ವೇಷ ಸಿದ್ಧಾಂತಕ್ಕೆ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಾಗ ಹುಟ್ಟದ ಅಸಹನೆ ಮತ್ತು ಆಕ್ರೋಶಗಳು, ದಲಿತ ನ್ಯಾಯಾಧೀಶ ಕರ್ಣನ್ ಅವರು ಕೆಲವೊಮ್ಮೆ ಅತಿರೇಕ ಎನ್ನಬಹುದಾದರೂ ನ್ಯಾಯಿಕ ಮೌಲ್ಯಗಳಿಗಾಗಿ ನಡೆಸಿದ ಸಂಘರ್ಷದ ಬಗ್ಗೆ ಮಾತ್ರ ವ್ಯಕ್ತವಾಗುವುದರ ಹಿಂದಿನ ಮನಸ್ಥಿತಿ ಯಾವುದು?

(ಅಂಕಣಕಾರರು ಹಿರಿಯ ಚಿಂತಕರು)

Tags

Justice KarnancasteSocietyJudiciary
share
ಶಿವಸುಂದರ್
ಶಿವಸುಂದರ್

ಕರ್ನಾಟಕದ ಪ್ರಗತಿಪರ ಚಿಂತಕ, ಬರಹಗಾರ, ಹೋರಾಟಗಾರ

Next Story
X