ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಕಾಯ್ದೆ-2025: ಅಸ್ಪೃಶ್ಯ ಅಲೆಮಾರಿಗಳ ಗಾಯಕ್ಕೆ ಖಾರ ಸವರಿದ ಕಾಂಗ್ರೆಸ್!

ಅಲೆಮಾರಿಗಳಿಗೆ ಅನ್ಯಾಯ ಮಾಡುವುದಿಲ್ಲವೆಂದು ಹೋರಾಟಗಾರರಿಗೆ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಬೆಳಗಾವಿಯಲ್ಲಿ ಭರವಸೆ ಕೊಡುತ್ತಲೇ ಬಂದಿದ್ದ ಕಾಂಗ್ರೆಸ್ ಸರಕಾರ ಅಂತಿಮವಾಗಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕೊಡುವುದಿರಲಿ ಅವರನ್ನು ಸಾಪೇಕ್ಷವಾಗಿ ಇತರ ಪರಿಶಿಷ್ಟ ಜಾತಿಗಳಿಗಿಂತ ಮುಂದುವರಿದ ಸಮುದಾಯಗಳೆಂದು ಎಲ್ಲಾ ಆಯೋಗಗಳು ಪರಿಗಣಿಸಿದ್ದ ಲಂಬಾಣಿ, ಭೋವಿ, ಕೊರಮ, ಕೊರಚರೊಂದಿಗೆ ಸೇರಿಸಿ ಈ ಹಿಂದಿನ ಯಾವ ಸರಕಾರಗಳೂ ಬಗೆಯದ ದ್ರೋಹ ಬಗೆದಿದೆ.
ಅನುಸೂಚಿತ ಜಾತಿಗಳ ಉಪ-ವರ್ಗೀಕರಣ ಮಸೂದೆ-2025ಕ್ಕೆ ಕರ್ನಾಟಕ ವಿಧಾನಸಭೆ ಒಪ್ಪಿಗೆಯನ್ನು ನೀಡಿ ಕಾಯ್ದೆಯಾಗಿಸಿದೆ.
ಪರಿಶಿಷ್ಟ ಸಮುದಾಯದೊಳಗಿನ ಮರು ವರ್ಗೀಕರಣಕ್ಕಾಗಿ ಕರ್ನಾಟಕದಲ್ಲಿ ಬಾಧಿತ ಸಮುದಾಯಗಳು 35 ವರ್ಷಗಳಿಂದ ನಡೆಸುತ್ತಿದ್ದ ಹೋರಾಟ ಒಂದು ತಾರ್ಕಿಕ ಅಂತ್ಯ ಮುಟ್ಟಿದೆ. ಆದರೆ ಒಳಮೀಸಲಾತಿಯ ಉದ್ದೇಶವೇ ಶೋಷಿತರಲ್ಲೇ ಶೋಷಿತರ ಹಿತ ಕಾಯುವುದಾಗಿದ್ದರೂ ಕಾಂಗ್ರೆಸ್ ಸರಕಾರದ ಈ ಕಾಯ್ದೆ ಶೋಷಿತರಲ್ಲೇ ಸಾಪೇಕ್ಷವಾಗಿ ಮುಂದುವರಿದವರ ಒತ್ತಡಕ್ಕೂ ಮಣಿದು ಸಂಪೂರ್ಣ ನ್ಯಾಯವನ್ನೇನೂ ಒದಗಿಸಿಲ್ಲ.
ಇದರ ಜೊತೆಗೆ ಭಡ್ತಿ, ಅನುದಾನ ಮತ್ತು ಅರ್ಹ ಅಭ್ಯರ್ಥಿ ಇಲ್ಲದಿದ್ದರೂ ಆಯಾ ವರ್ಗಗಳಲ್ಲೇ ಹುದ್ದೆಗಳನ್ನು ಮುಂದುವರಿಸುವ ವಿಷಯಗಳಲ್ಲಿ ಆಸ್ಪಷ್ಟತೆ ಮುಂದುವರಿದಿದೆ.
ಸದನದಲ್ಲಿ ಒಳಮೀಸಲಾತಿ ಚರ್ಚೆ: ಯಾರೂ ಬದ್ಧರಾದವರಲ್ಲ!
ಬೆಳಗಾವಿ ಅಧಿವೇಶನದಲ್ಲಿ ಮೀಸಲಾತಿ ಮತ್ತು ಒಳಮೀಸಲಾತಿಯ ಬಗ್ಗೆ ನಡೆದ ಚರ್ಚೆಗಳೂ ಸಹ ವಿರೋಧಿ ಬಿಜೆಪಿಯ ಸೋಗಲಾಡಿತನ ಮತ್ತು ಕಾಂಗ್ರೆಸ್‌ನ ಅವಕಾಶವಾದಿತನಗಳೆರಡನ್ನೂ ಬಯಲಿಗೆಳೆದವು.
ಒಳಮೀಸಲಾತಿ ಚರ್ಚೆಯ ವಿಷಯ ಬಂದಾಗ ಸದಾಶಿವ ಆಯೋಗಕ್ಕೆ ಯಾರು ಹೆಚ್ಚು ಬದ್ಧರು ಎಂಬ ಚರ್ಚೆ ನಡೆದಾಗ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ಜನರಿಗೆ ಸುಳ್ಳು ಹೇಳಿದವು. ಸದಾಶಿವ ಆಯೋಗವನ್ನು ಕಾಂಗ್ರೆಸ್-ಜೆಡಿಎಸ್ ಸರಕಾರ 2004ರಲ್ಲಿ ನೇಮಕ ಮಾಡಿದರೂ ಅದು ವರದಿ ಕೊಟ್ಟಿದ್ದು 2012ರಲ್ಲಿ ಬಿಜೆಪಿ ಸರಕಾರಕ್ಕೆ. ಆದರೆ ಅಷ್ಟರಲ್ಲಾಗಲೇ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ ಪರಿಶಿಷ್ಟರ ಮೀಸಲಾತಿಯ ಒಳವರ್ಗೀಕರಣ ಸಲ್ಲದು ಮತ್ತು ಅದನ್ನು ಮಾಡುವ ಶಾಸನಾತ್ಮಕ ಅಧಿಕಾರ ರಾಜ್ಯ ಸರಕಾರಗಳಿಗಿಲ್ಲ ಎಂದು ತೀರ್ಪು ಕೊಟ್ಟಿದ್ದು. ಇದನ್ನು ಗಣನೆಗೆ ತೆಗೆದುಕೊಂಡಿದ್ದ ಸದಾಶಿವ ಆಯೋಗವೂ ಕೂಡ ಒಳಮೀಸಲಾತಿಯು ಜಾರಿಯಾಗಬೇಕೆಂದರೆ ಸಂವಿಧಾನದ ಅರ್ಟಿಕಲ್ 341 ಕ್ಕೆ ಸೂಕ್ತ ತಿದ್ದುಪಡಿ ತರಬೇಕೆಂದು ಶಿಫಾರಸು ಮಾಡಿತ್ತು.
ಸದಾಶಿವ ಆಯೋಗ ಜಾರಿ
-ಇಬ್ಬರದೂ ವಂಚನೆಯ ಭರವಸೆಗಳೇ
ಅಂದರೆ ಸಂವಿಧಾನಕ್ಕೆ ತಿದ್ದುಪಡಿ ತರದೇ ಅಥವಾ ಐದಕ್ಕಿಂತ ಹೆಚ್ಚು ನ್ಯಾಯಾಧೀಶರ ಮತ್ತೊಂದು ಸಾಂವಿಧಾನಿಕ ಪೀಠ 2004ರ ಸುಪ್ರೀಂ ತೀರ್ಪನ್ನು ರದ್ದು ಮಾಡದೆ ರಾಜ್ಯಗಳಲ್ಲಿ ಯಾವುದೇ ಸರಕಾರ ಅಧಿಕಾರಕ್ಕೆ ಬಂದರೂ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡಲು ಸಾಧ್ಯವೇ ಇರಲಿಲ್ಲ.
ಆದರೂ 2012ರ ನಂತರದಲ್ಲೂ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಪೈಪೋಟಿಯಲ್ಲಿ ತಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿ ಜಾರಿಗೆ ತರುವುದಾಗಿ ಸುಳ್ಳು ಭರವಸೆಗಳನ್ನು ಕೊಡುತ್ತಲೇ ಹೋದರು. ಈ ದ್ರೋಹದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡಕ್ಕೂ ಸಮಪಾಲಿದೆ.
ಆದರೆ 2014ರ ನಂತರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರಕ್ಕೆ ಒಳಮೀಸಲಾತಿಗೆ ಬೇಕಾದ ಎಲ್ಲಾ ಸಂಖ್ಯಾ ಬಲವಿತ್ತು. ಆದರೂ ಅದು ಸಂವಿಧಾನ ತಿದ್ದುಪಡಿಗೆ ಮುಂದಾಗಲಿಲ್ಲ.
ಅದಕ್ಕೆ ತದ್ವಿರುದ್ಧವಾಗಿ ಮೇಲ್ಜಾತಿ ಮಧ್ಯಮವರ್ಗಕ್ಕೆ ಸಂವಿಧಾನ ಬಾಹಿರವಾಗಿ ಆರ್ಥಿಕ ಆಧಾರಿತ ಮೀಸಲಾತಿ (ಇಡಬ್ಲ್ಯುಎಸ್) ನೀಡಲು ಅನುಕೂಲವಾಗುವಂತೆ ಸಂವಿಧಾನ ತಿದ್ದುಪಡಿ ಮಾಡಲು ತನ್ನ ಸಂಖ್ಯಾಬಲವನ್ನು ಬಳಸಿಕೊಂಡಿತು. ಹೀಗಾಗಿ ಪರಿಶಿಷ್ಟ ಸಮುದಾಯಗಳಿಗೆ ಒಳಮೀಸಲಾತಿ ನೀಡದೇ ವಂಚಿಸಿದ್ದರಲ್ಲಿ ಇಬ್ಬರದ್ದೂ ಪಾಲಿದ್ದರೂ ಬಿಜೆಪಿಯ ದ್ರೋಹದ ಪಾಲು ಹೆಚ್ಚಿನದ್ದು.
ಹಾಗೆಯೇ ಮೀಸಲಾತಿ ಮತ್ತು ಇಡಬ್ಲ್ಯುಎಸ್ ಮೀಸಲಾತಿ ವಿಷಯದಲ್ಲಿ ನಡೆದ ಚರ್ಚೆಯಲ್ಲಿ ಬಿಜೆಪಿ ತನ್ನ ಅಪಾಯಕಾರಿ ಸಂವಿಧಾನ ವಿರೋಧಿ ಧೋರಣೆಯನ್ನು ಪ್ರದರ್ಶಿಸಿದರೆ ಕಾಂಗ್ರೆಸ್ ತನ್ನ ರಾಜಕೀಯ ಅವಕಾಶವಾದಿತನವನ್ನು ಮರೆಮಾಚಲು ಪ್ರಯತ್ನಿಸಿತು.
ಇಡಬ್ಲ್ಯುಎಸ್ ಎಂಬ ಸಂವಿಧಾನ ದ್ರೋಹ- ಬಿಜೆಪಿ, ಕಾಂಗ್ರೆಸ್ ಎರಡೂ ದೋಷಿಗಳೇ!
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸದನದಲ್ಲಿ ಪ್ರತಿಪಾದಿಸಿದಂತೆ ಭಾರತದ ಸಂವಿಧಾನಕ್ಕೆ ಮೊದಲ ತಿದ್ದುಪಡಿಯ ಮೂಲಕ ಸೇರಿಸಲ್ಪಟ್ಟ 15 (4) ಹಾಗೂ 16 (4) ಕಲಂಗಳು ಈ ದೇಶದಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮಾತ್ರ ಆದ್ಯತೆಯ ಮೇರೆಯ ಮೀಸಲಾತಿ ಕಲ್ಪಿಸಬೇಕೆಂದು ನಿರ್ದೇಶಿಸುತ್ತದೆ. ಆರ್ಥಿಕವಾಗಿ ಮಾತ್ರ ಹಿಂದುಳಿದವರಿಗಲ್ಲ.
ಆದರೆ 2019ರಲ್ಲಿ ಮೋದಿ ಸರಕಾರ ತನ್ನ ಸಂಖ್ಯಾಬಲವನ್ನು ಬಳಸಿಕೊಂಡು ಸಂವಿಧಾನಕ್ಕೆ 103ನೇ ತಿದ್ದುಪಡಿ ತಂದು ಸಂವಿಧಾನದ ಆಶಯಕ್ಕೆ ತದ್ವಿರುದ್ಧವಾದ ಆರ್ಥಿಕ ಆಧಾರಿತ ಮೀಸಲಾತಿ ಕಲ್ಪಿಸಿತು. ಸಂವಿಧಾನಕ್ಕೆ ದ್ರೋಹ ಬಗೆಯಿತು. 2021ರಲ್ಲಿ ಸುಪ್ರೀಂನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠ 3:2 ಬಹುಮತದಲ್ಲಿ ಆ ಇಡೀ ತಿದ್ದುಪಡಿಯನ್ನು ಎತ್ತಿಹಿಡಿಯಿತು. ಹೀಗಾಗಿ ಈಗ ಅದೇ ಸಂವಿಧಾನ.
ಆದರೆ ಈ ಸಂವಿಧಾನ ತಿದ್ದುಪಡಿಯನ್ನು ಸಂಸತ್‌ನಲ್ಲಿ ಮಂಡಿಸಿದಾಗ ಕಾಂಗ್ರೆಸ್ ಕೂಡ ಅದನ್ನು ಸ್ವಾಗತಿಸಿತ್ತು. ಬಿಎಸ್‌ಪಿ ಮತ್ತು ಆಪ್ ಪಕ್ಷಗಳೂ ಬೆಂಬಲಿಸಿ ಈ ಸಂವಿಧಾನ ದ್ರೋಹಕ್ಕೆ ಸಹಕರಿಸಿದವು!
ಅಲೆಮಾರಿಗಳ ಗಾಯಕ್ಕೆ ಖಾರ ಸವರಿದ ಕಾಂಗ್ರೆಸ್
ಎಲ್ಲಕ್ಕಿಂತ ಹೆಚ್ಚಾಗಿ ನಾಗಮೋಹನ್ ದಾಸ್ ವರದಿಯಂತೆ ಪರಿಶಿಷ್ಟ ಸಮುದಾಯಗಳಲ್ಲೇ ಅತ್ಯಂತ ಹಿಂದುಳಿದ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಶಿಫಾರಸು ಮಾಡಲಾಗಿದ್ದ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿಯನ್ನೂ ಈ ಕಾಯ್ದೆ ನಿರಾಕರಿಸಿ 6:6:5 ಸೂತ್ರದನ್ವಯ ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯವನ್ನು, ಪರಿಶಿಷ್ಟರಲ್ಲೇ ಇತರರಿಗಿಂತ ಹೆಚ್ಚು ಮುಂದುವರಿದಿರುವ, ನಾಗಮೋಹನ್ ದಾಸ್ ಆಯೋಗದ ಭಾಷೆಯಲ್ಲಿ ಹೇಳುವುದಾದರೆ ‘ಕಡಿಮೆ ಹಿಂದುಳಿದಿರುವ’ ಲಂಬಾಣಿ, ಭೋವಿ, ಕೊರಮ, ಕೊರಚ ಗುಂಪಿಗೆ ಸೇರಿಸಿರುವುದನ್ನು ಕಾಯ್ದೆಬದ್ಧಗೊಳಿಸಿದೆ.
ಇದು ಕಾಂಗ್ರೆಸ್‌ನ ಕಾಯ್ದೆ ಮಾಡಿರುವ ಪರಮ ಅನ್ಯಾಯ. ಹಾಗೆ ನೋಡಿದರೆ, ಕೇವಲ ನಾಗಮೋಹನ್ ದಾಸ್ ಆಯೋಗ ಮಾತ್ರವಲ್ಲ ಈ ಹಿಂದಿನ ಸದಾಶಿವ ಆಯೋಗ ಅಥವಾ ಬಿಜೆಪಿ ಸರಕಾರ ಚುನಾವಣೆಗೆ ಮುನ್ನ ಅವಸರವಾಗಿ ಅವಕಾಶವಾದಿತನದಿಂದ ಮಾಡಿದ ಮಾಧುಸ್ವಾಮಿ ಸಮಿತಿಯೂ ಸಹ ಪರಿಶಿಷ್ಟರಲ್ಲೇ ಅತ್ಯಂತ ಹಿಂದುಳಿದ ಸಮುದಾಯವೆಂದು ಅಸ್ಪಶ್ಯ ಅಲೆಮಾರಿಗಳನ್ನು ಪರಿಗಣಿಸಿತ್ತು. ಆ ಕಾರಣದಿಂದಲೇ ಅವರಿಗೆ ಸದಾಶಿವ ಆಯೋಗ, ಮಾಧುಸ್ವಾಮಿ ಸಮಿತಿ ಮತ್ತು ನಾಗಮೋಹನ್ ದಾಸ್ ಆಯೋಗಗಳೆಲ್ಲವೂ ಪ್ರತ್ಯೇಕ ಮೀಸಲಾತಿ ಕಲ್ಪಿಸಿತ್ತು.
ಆದರೆ ಅಲೆಮಾರಿಗಳಿಗೆ ಅನ್ಯಾಯ ಮಾಡುವುದಿಲ್ಲವೆಂದು ಹೋರಾಟಗಾರರಿಗೆ ಬೆಂಗಳೂರಲ್ಲಿ, ದಿಲ್ಲಿಯಲ್ಲಿ, ಬೆಳಗಾವಿಯಲ್ಲಿ ಭರವಸೆ ಕೊಡುತ್ತಲೇ ಬಂದಿದ್ದ ಕಾಂಗ್ರೆಸ್ ಸರಕಾರ ಅಂತಿಮವಾಗಿ ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಕೊಡುವುದಿರಲಿ ಅವರನ್ನು ಸಾಪೇಕ್ಷವಾಗಿ ಇತರ ಪರಿಶಿಷ್ಟ ಜಾತಿಗಳಿಗಿಂತ ಮುಂದುವರಿದ ಸಮುದಾಯಗಳೆಂದು ಎಲ್ಲಾ ಆಯೋಗಗಳು ಪರಿಗಣಿಸಿದ್ದ ಲಂಬಾಣಿ, ಭೋವಿ, ಕೊರಮ, ಕೊರಚರೊಂದಿಗೆ ಸೇರಿಸಿ ಈ ಹಿಂದಿನ ಯಾವ ಸರಕಾರಗಳೂ ಬಗೆಯದ ದ್ರೋಹ ಬಗೆದಿದೆ.
ಬೆಳಗಾವಿ ಅಧಿವೇಶನ ಮುಗಿಯುವ ಮುನ್ನಾ ದಿನ ಸಮಾಜ ಕಲ್ಯಾಣ ಮಂತ್ರಿಗಳಾದ ಎಚ್.ಸಿ. ಮಹದೇವಪ್ಪನವರು ‘ಕರ್ನಾಟಕ ಅನುಸೂಚಿತ ಜಾತಿಗಳ ಉಪ ವರ್ಗೀಕರಣ ವಿಧೇಯಕ - 2025’ ಮಂಡಿಸುತ್ತಾ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಕೊಡದಿರಲು ಕೊಟ್ಟ ಏಕೈಕ ಕಾರಣ ಶೇ. 1ರಷ್ಟು ಮೀಸಲಾತಿಯಿಂದ ಹೆಚ್ಚು ಪ್ರಯೋಜನ ಸಿಗಲಾರದು ಎಂಬುದು ಮಾತ್ರ. ಆದರೆ ಅದಕ್ಕಾಗಿ ಪರಿಶಿಷ್ಟರಲ್ಲೇ ಹೆಚ್ಚು ಮುಂದುವರಿದಿರುವ ಗ್ರೂಪ್ ‘ಸಿ’ ಜೊತೆ ಏಕೆ ಸೇರಿಸಲಾಯಿತು ಎಂಬುದಕ್ಕಾಗಲೀ ಅಥವಾ ಹೆಚ್ಚಿನ ಮೀಸಲಾತಿ ಒದಗಿಸುವುದೇ ಕಾರಣವಾಗಿದ್ದಲ್ಲಿ ಏಕೆ ಗ್ರೂಪ್ ‘ಸಿ’ಗಿಂತ ಶೇ.1 ಹೆಚ್ಚು ಮೀಸಲಾತಿ ಪಡೆದುಕೊಂಡಿರುವ ಮತ್ತು ಸಾಮಾಜಿಕವಾಗಿ ಅಲೆಮಾರಿಗಳ ಸ್ಥಿತಿಗತಿಗಳೊಂದಿಗೆ ಹೆಚ್ಚು ಸಾಮ್ಯತೆ ಹೊಂದಿರುವ ಮಾದಿಗ ಸಂಬಂಧಿತ ಸಮುದಾಯಗಳಿರುವ ಗ್ರೂಪ್ ‘ಎ’ಗಾಗಲೀ ಅಥವಾ ಹೊಲೆಯ ಸಂಬಂಧಿತ ಸಮುದಾಯಗಳಿರುವ ಗ್ರೂಪ್ ‘ಬಿ’ಗಾಗಲೀ ಸೇರಿಸಲಿಲ್ಲ ಎಂಬುದರ ಬಗ್ಗೆ ಯಾವುದೇ ಸಮರ್ಥನೆ ನೀಡಲಿಲ್ಲ. ಕಾಯ್ದೆಯಲ್ಲೂ ಅದರ ಬಗ್ಗೆ ಯಾವುದೇ ಸಮರ್ಥನೆಗಳಿಲ್ಲ.
ಸರಕಾರವು ಹೈಕೋರ್ಟ್‌ನಲ್ಲಿ ಅಲೆಮಾರಿಗಳು ಸಲ್ಲಿಸಿರುವ ದಾವೆಗೆ ಆಕ್ಷೇಪ ಸಲ್ಲಿಸುತ್ತಾ ಇಡೀ ನಾಗಮೋಹನ್ ದಾಸ್ ಸಮಿತಿಯನ್ನೇ ನಿರಾಕರಿಸುವ ರೀತಿಯಲ್ಲಿ ಮಾಡಿರುವ ಪ್ರತಿವಾದದಲ್ಲಿ ಮಾತ್ರ ಇದಕ್ಕೆ ಅತ್ಯಂತ ದ್ರೋಹಪೂರಿತ ಸಮರ್ಥನೆಗಳನ್ನು ನೀಡಿದೆ.
‘ಸಿ’ ವರ್ಗದೊಳಗೊಂದು ಒಳ ಮೀಸಲಾತಿ- ಮತ್ತೊಂದು ನಯವಂಚನೆ ಇಷ್ಟಾದರೂ ಸರಕಾರ ತಾನು ಅಲೆಮಾರಿಗಳ ಹಿತ ಕಾದಿದ್ದೇನೆ ಎಂದು ತೋರಿಸಿಕೊಳ್ಳಲು ಕಾಯ್ದೆಯಲ್ಲಿರುವ 3(iii), 9ನೇ ಪರಿಚ್ಛೇದಗಳ ಉದಾಹರಣೆ ನೀಡುತ್ತಿದೆ.
ಆದರೆ ಅದು ಮತ್ತೊಂದು ಬಗೆಯ ನಯವಂಚನೆಯೇ ಆಗಿದೆ.
ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಕಾಯ್ದೆ-2025ರ ಸೆಕ್ಷನ್ 3 (iii) ಪ್ರಕಾರ:
‘‘ಪರಂತು ಅನುಸೂಚಿತ ಜಾತಿಗಳ ಪ್ರವರ್ಗ ‘ಸಿ’ ಪಟ್ಟಿಯ ಸಂದರ್ಭದಲ್ಲಿ ಮೇಲಿನ ಕೋಷ್ಟಕದ ಕ್ರಮ ಸಂಖ್ಯೆ 10, 15, 36, 37ರಲ್ಲಿ ನಮೂದಿಸಿದ ಅಂದರೆ ಜಾತಿ ಸಂಕೇತ 17, 23, 53, ಮತ್ತು 54 (ಭೋವಿ, ಲಂಬಾಣಿ, ಕೊರಚ ಮತ್ತು ಕೊರಮ ಸಂಬಂಧಿತ ಜಾತಿಗಳು-ಲೇ) ಇವುಗಳನ್ನು ಹೊರತುಪಡಿಸಿ 59 ಜಾತಿಗಳಿಗಾಗಿ ಪ್ರತೀ ಐದು ಹುದ್ದೆ ಅಥವಾ ಸ್ಥಾನಗಳಲ್ಲಿ ಕನಿಷ್ಠ ಒಂದನ್ನು ಪ್ರವರ್ಗ ‘ಸಿ’ಯೊಳಗೆ ಮೀಸಲಿರಿಸತಕ್ಕದ್ದು...’’ ಎಂದು ಆದೇಶಿಸಿದೆ.
ಇದರಿಂದ ಅಲೆಮಾರಿಗಳ ಗಾಯಕ್ಕೆ ಉಪ್ಪು ಸವರಿದಂತಾಗಿದೆ. ಏಕೆಂದರೆ:
1. ‘ಸಿ’ ವರ್ಗದಲ್ಲಿರುವ ಇತರ (ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ)ಜಾತಿಗಳನ್ನು ಬಿಟ್ಟು ಐದನೇ ಸ್ಥಾನ 59 ಅಲೆಮಾರಿ ಜಾತಿಗಳಿಗೆ ದಕ್ಕಬೇಕು ಎನ್ನುವುದರ ತರ್ಕ (rationale) ಏನು? ಈ 59 ಅಲೆಮಾರಿ ಜಾತಿಗಳು ‘ಸಿ’ ವರ್ಗದಲ್ಲಿರುವ ಲಂಬಾಣಿ, ಭೋವಿ, ಕೊರಮ ಮತ್ತು ಕೊರಚ ಜಾತಿಗಳಿಗಿಂತ ಭಿನ್ನ ಅಥವಾ ಹಿಂದುಳಿದವು ಎನ್ನುವುದು ಮಾತ್ರ ಅದಕ್ಕೆ ಕಾರಣವಾಗಬೇಕು. ಹಾಗಿದ್ದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಶೇ. 1 ಮೀಸಲಾತಿ ನೀಡದೆ ‘ಸಿ’ ವರ್ಗದಲ್ಲಿ ಸೇರಿಸಿದ್ದೇಕೆ?
ಕಾರಣ ಸ್ಪಷ್ಟ. ‘ಸಿ’ ವರ್ಗದಲ್ಲಿನ ಜಾತಿಗಳಿಗೆ ಶೇ. 4 ಮೀಸಲಾತಿ ಕೊಟ್ಟಿದ್ದಕ್ಕೆ ಉಂಟಾಗಿದ್ದ ಅಸಮಾಧಾನವನ್ನು ನಿವಾರಿಸಲು ಅಲೆಮಾರಿಗಳನ್ನು ‘ಸಿ’ ವರ್ಗದಲ್ಲಿ ವಿಲೀನಗೊಳಿಸಿ ‘ಸಿ’ ವರ್ಗದ ಮೀಸಲಾತಿಯನ್ನು ಶೇ. 5ಕ್ಕೆ ಏರಿಸಿ ಸಂತುಷ್ಟಗೊಳಿಸುವ ಪ್ರಯತ್ನ ಮಾಡಲಾಗಿದೆ.
ಅಂದರೆ ಅಲೆಮಾರಿಗಳನ್ನು ಬಲಿಗೊಟ್ಟು ‘ಸಿ’ ವರ್ಗವನ್ನು ಸಂತುಷ್ಟೀಕರಿಸುವ ಪ್ರಯತ್ನವನ್ನು ಮಾಡಲಾಗಿದೆ. ಇದನ್ನು ‘ಸಿ’ ವರ್ಗದಲ್ಲಿನ ಜಾತಿಗಳು ಕೇಳಿರಲಿಲ್ಲ.
2. ‘ಸಿ’ ವರ್ಗದಲ್ಲಿ ನಾಲ್ಕು ಅಭ್ಯರ್ಥಿಗಳು ತುಂಬಿದ ಮೇಲೆ ಐದನೇ ಸ್ಥಾನವಿದ್ದರೆ ಮಾತ್ರ ಅದು ಅಲೆಮಾರಿಗಳಿಗೆ ದಕ್ಕುತ್ತದೆ. ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಇದ್ದಿದ್ದರೆ ಒಂದು ಸ್ಥಾನ ಇದ್ದರೂ ರೋಸ್ಟರ್ ಪ್ರಕಾರ ಅಲೆಮಾರಿಗಳಿಗೆ ದಕ್ಕುತ್ತಿತ್ತು.
3. ಅಥವಾ ‘ಸಿ’ ವರ್ಗದಲ್ಲಿ ಮೀಸಲಾತಿ ತುಂಬುವಾಗ ಶೇ. 1ರಷ್ಟು ಅಲೆಮಾರಿ ಮೀಸಲಾತಿಯನ್ನು ತುಂಬಿದ ನಂತರವೇ ಉಳಿದ ಜಾತಿಗಳ ಮೀಸಲಾತಿ ತುಂಬಬೇಕು ಎಂಬ ನಿಯಮವಿದ್ದರೂ ಹೆಚ್ಚು ಅನ್ಯಾಯ ವಾಗುತ್ತಿರಲಿಲ್ಲ. ಆದರೆ ಅದಕ್ಕೆ ಪ್ರಾಯಶಃ ‘ಸಿ’ ವರ್ಗದ ಜಾತಿಗಳು ಒಪ್ಪುತ್ತಿರಲಿಲ್ಲ!
4. ಎಲ್ಲಕ್ಕಿಂತ ಮುಖ್ಯವಾಗಿ ಮತ್ತೊಂದು ಮಹಾ ನ್ಯಾಯ ಈ ಕಾಯ್ದೆಯಲ್ಲಿದೆ:
ಕರ್ನಾಟಕ ಅನುಸೂಚಿತ ಜಾತಿಗಳ (ಉಪ-ವರ್ಗೀಕರಣ) ಕಾಯ್ದೆ-2025ರ ಸೆಕ್ಷನ್ 3(iii) ರ ಮುಂದುವರಿದ ಪ್ರಕರಣದ ಪ್ರಕಾರ:
‘‘ಮತ್ತು ಪರಂತು ಪ್ರವರ್ಗ ‘ಸಿ’ಯಲ್ಲಿನ ಈ 59 ಜಾತಿಗಳಡಿ ಯಾವುದೇ ಅರ್ಹ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಅಂತಹ ಹುದ್ದೆಗಳು ಮತ್ತು ಸ್ಥಾನಗಳನ್ನು ಮೇಲೆ ಹೇಳಿದ ನಾಲ್ಕು (ಅಂದರೆ ಕ್ರಮ ಸಂಖ್ಯೆ 10, 15, 36 ಮತ್ತು 37) ಜಾತಿಗಳಿಂದ ಭರ್ತಿ ಮಾಡತಕ್ಕದ್ದು’’
ಅಲೆಮಾರಿಗಳ ಇಂದಿನ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಗಮನಿಸಿದಾಗ ಇದು ಅತ್ಯಂತ ದೊಡ್ಡ ಅನ್ಯಾಯವಾಗಿದೆ.
ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ಇದ್ದಿದ್ದರೆ ಈ ವರ್ಷ ಆ ವರ್ಗದಲ್ಲಿ ಅರ್ಹ ಅಭ್ಯರ್ಥಿ ಇಲ್ಲದಿದ್ದರೆ ಅದು ಮುಂದಿನ ವರ್ಷಕ್ಕೆ ಕ್ಯಾರಿ ಆಗುತ್ತಿತ್ತು. ಅತ್ಯಂತ ಹಿಂದುಳಿದ ಅಲೆಮಾರಿ ಸಮುದಾಯಗಳಿಗೆ ಈ ರಕ್ಷಣೆ ಅತ್ಯಗತ್ಯವಾಗಿತ್ತು.
ಆದರೆ ಕಾಂಗ್ರೆಸ್ ಸರಕಾರದ ಕಾಯ್ದೆಯು ಒಂದು ವೇಳೆ ಅಲೆಮಾರಿ ಜಾತಿಗಳಲ್ಲಿ ಅರ್ಹ ಅಭ್ಯರ್ಥಿ ಇಲ್ಲದಿದ್ದರೆ ಅದು ‘ಸಿ’ ವರ್ಗದ ಇತರರ ಪಾಲಾಗುತ್ತದೆ.
ಹೀಗಾಗಿ ಈ ಸೆಕ್ಷನ್ ಮೂಲಕ ಕಾಂಗ್ರೆಸ್ ಸರಕಾರ ಅಲೆಮಾರಿಗಳಿಗೆ ಎಡಗೈಯಲ್ಲಿ ಮೀಸಲಾತಿಯನ್ನು ಕೊಟ್ಟ ನಾಟಕವಾಡಿ ಬಲಗೈಯಲ್ಲಿ ಅನಾಮತ್ತು ಕಿತ್ತುಕೊಂಡಿದೆ.
5. ಇವೆಲ್ಲವನ್ನೂ ಮೀರಿಸುವಂತೆ ಮತ್ತೊಂದು ದೊಡ್ಡ ದ್ರೋಹವನ್ನು ಕಾಂಗ್ರೆಸ್ ಸರಕಾರ ಅಲೆಮಾರಿಗಳಿಗೆ ಮಾಡಿದೆ.
ಅಸ್ಪಶ್ಯ ಅಲೆಮಾರಿಗಳು ಸರಕಾರ 6:6:5 ಸೂತ್ರವನ್ನು ರದ್ದುಗೊಳಿಸಬೇಕೆಂದು ಹೈಕೋರ್ಟ್‌ನಲ್ಲಿ ಹೂಡಿದ್ದ ದಾವೆಗೆ ಆಕ್ಷೇಪಗಳನ್ನು ಸಲ್ಲಿಸಿರುವ ಸರಕಾರ ಆ ಪ್ರಕ್ರಿಯೆಯಲ್ಲಿ ನ್ಯಾ. ನಾಗಮೋಹನ್ ದಾಸ್ ಆಯೋಗದ ವರದಿ, ಅನುಸರಿಸಿದ ಮಾನದಂಡಗಳೇ ಮೂಲಭೂತವಾಗಿ ತಪ್ಪೆಂದು ವಾದಿಸಿದೆ.
ಸರಕಾರದ ಪ್ರಕಾರ:
The Castes and the Sub Castes the petitioners belong are not socially backward than the castes and the subcastes under category D of the report of the Justice Nagmohandas Commission. Therefore the clubbing of the Castes and the Sub castes to which petitioners belong , with the said category D in the impugned Governments orders is in consonance with the principles and the basis of which internal reservation with in the scheduled castes is said to be permissible under the constitution as per the said decision of Honourable Apex Court:
ಅಂದರೆ ಸಾರವಿಷ್ಟೆ. ನಾಗಮೋಹನ್ ದಾಸ್ ವರದಿಯಲ್ಲಿ ಗ್ರೂಪ್ ‘ಎ’ಯಲ್ಲಿ ಸೇರಿಸಲ್ಪಟ್ಟಿದ್ದ 59 ಅಲೆಮಾರಿ ಜಾತಿಗಳು ಗ್ರೂಪ್ ‘ಡಿ’ಗೆ ಸೇರಿಸಲ್ಪಟ್ಟಿರುವ ಲಂಬಾಣಿ, ಭೋವಿ, ಕೊರಮ ಕೊರಚ ಸಂಬಂಧಿತ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿಲ್ಲ.
ಹೀಗಾಗಿ ಅಲೆಮಾರಿಗಳನ್ನು ಆ ಗುಂಪಿನಲ್ಲಿ ಸೇರಿಸಿರುವುದರಲ್ಲಿ ತಪ್ಪಿಲ್ಲ. ಹಾಗಿದ್ದ ಮೇಲೆ ‘ಸಿ’ ವರ್ಗದೊಳಗೆ ಮಾಡಿರುವ ವಿಂಗಡಣೆಗಳನ್ನಾದರೂ ಸರಕಾರ ಕೋರ್ಟ್‌ನ ಮುಂದೆ ಹೇಗೆ ಸಮರ್ಥಿಸಿಕೊಳ್ಳುತ್ತದೆ?
ಅದಕ್ಕೆ ಪೂರಕವಾಗಿ ಈ ಹಿಂದೆ ಬೆಂಗಳೂರಿನ ಪ್ರತಿಷ್ಠಿತ ಸಂಸ್ಥೆಯೊಂದು ನಾಗಮೋಹನ್ ದಾಸ್ ವರದಿಯ ಅಂಕಿಅಂಶಗಳನ್ನು ಆಧರಿಸಿಯೇ 101 ಜಾತಿಗಳ ಆರ್ಥಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಅಭಿವೃದ್ಧಿ ಸೂಚ್ಯಂಕವನ್ನು ಆಧರಿಸಿ ಕೊಟ್ಟಿದೆ ಎಂದು ಹೇಳಲಾಗುವ ಕೋಷ್ಟಕವನ್ನು ಹರಿಬಿಡಲಾಗಿದೆ. ಅದರ ಪ್ರಕಾರ ಅಲೆಮಾರಿಗಳ ಕೇವಲ ಕೆಲವೇ ಜಾತಿಗಳನ್ನು ಬಿಟ್ಟರೆ ಮಿಕ್ಕವೆಲ್ಲಾ ಹೊಲೆಯ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗಿಂತ ಮುಂದುವರಿದಿವೆ ಎಂದು ತೋರಿಸಲಾಗಿದೆ. ಅಷ್ಟು ಮಾತ್ರವಲ್ಲ. ಲಂಬಾಣಿ , ಭೋವಿ, ಕೊರಮ ಮತ್ತು ಕೊರಚ ಜಾತಿಗಳಿಗಿಂತ ಕೆಲವು ಹೊಲೆಯ ಮತ್ತು ಮಾದಿಗ ಜಾತಿಗಳು ಮುಂದುವರಿದಿವೆ ಎಂದು ತೋರಿಸಲಾಗಿದೆ.
ಇದು ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ:
ಅ) ನಾಗಮೋಹನ್ ದಾಸ್ ವರದಿಯಂತೆ ಸದಾಶಿವ ಆಯೋಗ ಮತ್ತು ಮಾಧುಸ್ವಾಮಿ ಸಮಿತಿ ಕೂಡ ಅಸ್ಪಶ್ಯ ಅಲೆಮಾರಿಗಳು ಅತ್ಯಂತ ಹಿಂದುಳಿದಿವೆಯೆಂದು ಪ್ರತ್ಯೇಕ ಮೀಸಲಾತಿ ಕೊಟ್ಟಿದ್ದವು. ಹಾಗಿದ್ದಲ್ಲಿ ಆ ಯಾವ ಆಯೋಗಕ್ಕೂ ಸಿಗದ ಮಾಹಿತಿ ಮತ್ತು ವಿಶ್ಲೇಷಣೆ ಈಗ ಮಾತ್ರ ಏಕೆ ಅನಧಿಕೃತವಾಗಿ ಚರ್ಚೆಯಾಗುತ್ತಿದೆ.
ಆ) ಕಾಂಗ್ರೆಸ್ ಸರಕಾರ ಆಗಸ್ಟ್ 19ರಂದು 6:6:5 ಸೂತ್ರ ಘೋಷಿಸಿ ಅಂತಿಮವಾಗಿ ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡಿಸುವಾಗಲೂ, ಹೈಕೋರ್ಟ್‌ನಲ್ಲಿ ಈ ಆಘಾತಕಾರಿ ಸುಳ್ಳು ವಾದವನ್ನು ಮಂಡಿಸಿದ ನಂತರವೂ ಕೂಡ ಅಲೆಮಾರಿಗಳು ಗ್ರೂಪ್ ‘ಸಿ’ಯಷ್ಟೇ ಮುಂದುವರಿದಿದ್ದಾರೆಂದು ಪ್ರತಿಪಾದಿಸಿಲ್ಲ. ಅಧಿವೇಶನದಲ್ಲಿ ಸಮಾಜ ಕಲ್ಯಾಣ ಮಂತ್ರಿ ಮಹದೇವಪ್ಪನವರು ಅಲೆಮಾರಿಗಳನ್ನು ಗ್ರೂಪ್ ‘ಸಿ’ಯಲ್ಲಿ ಸೇರಿಸಲು ಕೊಟ್ಟ ಏಕೈಕ ಕಾರಣ ಶೇ. 1ಕ್ಕಿಂತ ಶೇ.5 ಮೀಸಲಾತಿ ಸಿಗುವ ಪ್ರವರ್ಗ ಒಳ್ಳೆಯದು ಎಂಬುದು ಮಾತ್ರ.
ಆದರೆ ಅದು ಗ್ರೂಪ್ ‘ಸಿ’ಯಲ್ಲಿರುವ ಸಮುದಾಯಗಳು ತಮಗೆ ನಾಗಮೋಹನ್ ದಾಸ್ ಆಯೋಗವು ನೀಡಿದ ಶೇ. 4ರಷ್ಟು ಮೀಸಲಾತಿಯ ವಿರುದ್ಧ ತೋರಿದ ಆಕ್ರೋಶವನ್ನು ತಣ್ಣಗಾಗಿಸಲು ಶೇ.5 ಮೀಸಲಾತಿ ಕಲ್ಪಿಸಲು ಕಂಡುಕೊಂಡ ವಂಚನೆಯ ಮಾರ್ಗವಷ್ಟೇ ಆಗಿದೆ.
6. ಅದೇ ಕಾಯ್ದೆಯಲ್ಲಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಆಯೋಗಕ್ಕೆ ಒಂದು ಸೂಚನೆಯನ್ನು ಕೊಡಲಾಗಿದೆ. ಅದರ ಪ್ರಕಾರ ಆಯೋಗವು ಹೊಸ ಮಾಹಿತಿ ಮತ್ತು ದತ್ತಾಂಶಗಳು ದೊರಕುತ್ತಿದ್ದಂತೆ ಅದನ್ನು ಆಧರಿಸಿ ಒಳಮೀಸಲಾತಿ ವರ್ಗಗಳಲ್ಲಿ ಮೀಸಲಾತಿ ಪ್ರಮಾಣವನ್ನು ಬದಲಾಯಿಸುವ ಬಗ್ಗೆ ಸರಕಾರಕ್ಕೆ ಶಿಫಾರಸು ಮಾಡಲು ಸೂಚಿಸಲಾಗಿದೆ.
ಇದು ಮತ್ತೊಮ್ಮೆ ಮೂಗಿಗೆ ತುಪ್ಪ..ಅಲ್ಲಲ್ಲ.. ಖಾರ ಸವರುವ ಕ್ರಮ. ನ್ಯಾ. ದಾಸ್ ಆಯೋಗವು ಆಳವಾದ ಅಧ್ಯಯನ ಮತ್ತು ಅಂಕಿಅಂಶಗಳನ್ನು ಆಧರಿಸಿ ಅಲೆಮಾರಿಗಳು ಗ್ರೂಪ್ ‘ಡಿ’ಯಲ್ಲಿರುವ ಜಾತಿಗಳಿಗಿಂತ ಸಾಮಾಜಿಕವಾಗಿ ಹಿಂದುಳಿದಿದ್ದಾರೆ ಎಂದು ಸೂಚಿಸಿದ್ದಾಗಲೂ ಅದನ್ನು ಬಲಿಷ್ಠರ ಒತ್ತಡಕ್ಕೆ ಮಣಿದು ತಿರಸ್ಕರಿಸಿದ ಸರಕಾರ ಇನ್ನು ಮುಂದೆ ಯಾವತ್ತೋ ದೊರಕುವ ಅಂಕಿಅಂಶಗಳನ್ನು ಆಧರಿಸಿ ನ್ಯಾಯ ಒದಗಿಸುವುದೇ? ಅಸಲು ಅಂತಹ ಕ್ರಮಗಳಿಗೆ ಮುಂದಾಗುವುದೇ?
ಹೀಗಾಗಿ ವಿಷಯ ಸ್ಪಷ್ಟ. ಇದುವರೆಗೆ ಎಸ್‌ಸಿ ಸಮುದಾಯಗಳಲ್ಲೇ ಅತ್ಯಂತ ಹಿಂದುಳಿದ ಅಸ್ಪಶ್ಯ ಅಲೆಮಾರಿ ಸಮುದಾಯಗಳಿಗೆ ಶೇ. 1 ಮೀಸಲಾತಿಯನ್ನು ಕೊಡುವ ಬಗ್ಗೆ ಪೂರಕ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಎಂದು ಬೆಂಗಳೂರಿನಲ್ಲಿ ಮತ್ತು ದಿಲ್ಲಿಯಲ್ಲಿ ಕೊಟ್ಟ ಭರವಸೆಗಳೆಲ್ಲಾ ಹಸಿ ಸುಳ್ಳು.
ವಿಷಯ ಸ್ಪಷ್ಟ. ಕಾಂಗ್ರೆಸ್ ಸರಕಾರ ಈ ಕಾಯ್ದೆಯ ಮೂಲಕ ಅಲೆಮಾರಿಗಳಿಗೆ ‘ಸಿ’ ವರ್ಗದೊಳಗೆ ವಿಶೇಷ ಅವಕಾಶ ಕಲ್ಪಿಸಿದ್ದೇವೆ ಎಂದು ಮತ್ತೊಮ್ಮೆ ಸುಳ್ಳು ಹೇಳಿ ಅತ್ಯಂತ ಶೋಷಿತ ಅಸ್ಪಶ್ಯ ಅಲೆಮಾರಿ ಸಮುದಾಯವನ್ನು ಮತ್ತೊಮ್ಮೆ ವಂಚಿಸುತ್ತಿದೆ. ಗಾಯದ ಮೇಲೆ ಉಪ್ಪು ಸವರುತ್ತಿದೆ.
ಮತ್ತೊಂದು ಕಡೆ ಬೇರೆಲ್ಲಾ ವಿಷಯಗಳಿಗೆ ದೊಡ್ಡ ಗುಲ್ಲು, ಸಡ್ಡು, ಪ್ರತಿಭಟನೆ, ಸದನ ಬಹಿಷ್ಕಾರ ಎಲ್ಲಾ ಮಾಡುವ ವಿರೋಧ ಪಕ್ಷ ಬಿಜೆಪಿ ಅಲೆಮಾರಿಗಳಿಗೆ ಈ ಕಾಯ್ದೆ ಮಾಡುವ ಅನ್ಯಾಯವನ್ನು ನಾಮ್‌ಕಾವಾಸ್ಥೆ ಸರಕಾರದ ಗಮನಕ್ಕೆ ತಂದಂತೆ ಮಾಡಿ ಕಾಂಗ್ರೆಸ್ ಸರಕಾರದ ಅಲೆಮಾರಿ ವಿರೋಧಿ ಕಾಯ್ದೆ ಸರ್ವಾನುಮತದಿಂದ ಪಾಸು ಆಗಲು ಸಹಕರಿಸಿದೆ.
ಈಗಿರುವುದು ಒಂದೇ ದಾರಿ. ಹೈಕೋರ್ಟ್‌ನಲ್ಲಿ ಸರಕಾರದ ಕಾಯ್ದೆ ಹೇಗೆ ಒಳಮೀಸಲಾತಿಯ ಬಗ್ಗೆ ಸುಪ್ರೀಂ ಮಾರ್ಗದರ್ಶನವನ್ನು ಉಲ್ಲಂಘಿಸುತ್ತದೆ ಎಂದು ವಾದಿಸಿ ಹಕ್ಕು ಪಡೆಯುವುದು.
ಅದೇ ಸಮಯದಲ್ಲಿ ಅಲೆಮಾರಿಗಳಿಗೆ ಪ್ರತ್ಯೇಕ ಮತ್ತು ಹೆಚ್ಚುವರಿ ಮೀಸಲಾತಿ ನೀಡಲು, ಶೇ. 50ರ ಮೇಲ್ಮಿತಿಯನ್ನು ಮೀರಿ ಆಯಾ ಶೋಷಿತ ದಮನಿತ ವರ್ಗಗಳ ಜನಸಂಖ್ಯೆಗೆ ಅನುಸಾರವಾಗಿ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸಲು, ಸರಕಾರದ ಹುದ್ದೆಗಳನ್ನು ಹೆಚ್ಚಿಸಲು ಮತ್ತು ಎಲ್ಲಾ ಬ್ಯಾಕ್ ಲಾಗ್‌ಗಳನ್ನು ತುಂಬಲು, ಭಡ್ತಿ ಮತ್ತು ಅನುದಾನಗಳಲ್ಲೂ ಒಳಮೀಸಲು ನೀಡಲು, ಖಾಸಗೀಕರಣ ನಿಲ್ಲಿಸಲು ಮತ್ತು ಖಾಸಗಿಯಲ್ಲೂ ಮೀಸಲು ಮತ್ತು ಒಳಮೀಸಲು ನೀಡಲು ಹಾಗೂ ಎಲ್ಲಾ ಶೋಷಿತ ದಮನಿತ ಸಮುದಾಯದ ಎಲ್ಲ ಜನರಿಗೂ ಸಾಮಾಜಿಕ ನ್ಯಾಯ ದಕ್ಕಲು ದೇಶದ ಸಂಪತ್ತಿನ ಸಮಾನ ಹಂಚಿಕೆಯಾಗಬೇಕೆಂದು ಎಲ್ಲಾ ಶೋಷಿತರೂ ಒಟ್ಟಾಗಿ ಬೀದಿ ಸಮರಕ್ಕೆ ಮುಂದಾಗಬೇಕು. ಅಪಾಯಕಾರಿ ಬಿಜೆಪಿ ಮತ್ತು ಅಧಿಕಾರದಾಹಿ ಕಾಂಗ್ರೆಸ್‌ಗಳಾಚೆ ದಮನಿತ ಜನರ ಒಗ್ಗಟ್ಟನ್ನು ಸಾಧಿಸಬೇಕು.
ಬೇರೆ ದಾರಿ ಏನಿದೆ ಅಲ್ಲವೇ?







