Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಕಸ್ತೂರಿರಂಗನ್ ವರದಿ: ಪರಿಸರ ನಾಶದ...

ಕಸ್ತೂರಿರಂಗನ್ ವರದಿ: ಪರಿಸರ ನಾಶದ ಬಂಡವಾಳಶಾಹಿ ಮೂಲವನ್ನೇಕೆ ಪ್ರಶ್ನಿಸುವುದಿಲ್ಲ?

ಶಿವಸುಂದರ್ಶಿವಸುಂದರ್23 Sept 2026 10:55 AM IST
share
ಕಸ್ತೂರಿರಂಗನ್ ವರದಿ: ಪರಿಸರ ನಾಶದ ಬಂಡವಾಳಶಾಹಿ ಮೂಲವನ್ನೇಕೆ ಪ್ರಶ್ನಿಸುವುದಿಲ್ಲ?

ಕರ್ನಾಟಕದ ವಿಧಾನಸಭೆಯಲ್ಲಿ ಕಳೆದ ಎರಡು ದಿನಗಳಿಂದ ಕಸ್ತೂರಿರಂಗನ್ ವರದಿಯ ಬಗ್ಗೆ ಚರ್ಚೆ ನಡೆಸಿ ಕೆಲವು ತೋರಿಕೆಯ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೂ ಆಡಳಿತಾರೂಢ ಕಾಂಗ್ರೆಸ್ ಅಥವಾ ವಿರೋಧ ಪಕ್ಷ ಬಿಜೆಪಿ ದೇಶವನ್ನು ಮತ್ತು ಆದಿವಾಸಿಗಳನ್ನು ಬಂಡವಾಳಶಾಹಿ ದಾಳಿಯಿಂದ ರಕ್ಷಿಸುವ ಮತ್ತು ಆದಿವಾಸಿ ರಕ್ಷಿತ ಪರಿಸರವಾದವನ್ನು ಮುಂದಿಡುವ ಯಾವ ಚರ್ಚೆಯನ್ನೂ ಮಾಡಲಿಲ್ಲ. ಕರ್ನಾಟಕದ ವಿಧಾನಸಭೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತಿರುವುದು ಆದಿವಾಸಿಗಳ, ರೈತಾಪಿಗಳ ರಕ್ಷಣೆಗಲ್ಲ. ಬದಲಿಗೆ ಬಂಡವಾಳಶಾಹಿಗಳಿಗೆ ಗಾಡ್ಗೀಳ್ ವರದಿಯಷ್ಟು ಅಲ್ಲವಾದರೂ ಅಲ್ಪಸ್ವಲ್ಪ ತಡೆಯುಂಟು ಮಾಡುವುದನ್ನು ತಡೆಗಟ್ಟುವುದಕ್ಕೆ.

ಕಸ್ತೂರಿರಂಗನ್ ವರದಿಯ ಬಗ್ಗೆ ಯಾವುದು ಜನಪರ ನಿಲುವು? ಕಸ್ತೂರಿರಂಗನ್ ವರದಿ ಜಾರಿಯಾದರೆ ಪರಿಸರ, ಸಣ್ಣ ರೈತಾಪಿ ಮತ್ತು ಆದಿವಾಸಿಗಳ ಹಿತಾಸಕ್ತಿ ರಕ್ಷಣೆಯಾಗುತ್ತದೆಯೇ? ಅಥವಾ ಅಭಿವೃದ್ಧಿಯ ಹೆಸರಲ್ಲಿ ಪಶ್ಚಿಮ ಘಟ್ಟವನ್ನು ಸೂರೆ ಹೊಡೆಯಲು ಹೊಂಚುಹಾಕುತ್ತಿರುವ ಹಾಗೂ ಈಗಾಗಲೇ ಸೂರೆ ಹೊಡೆಯುತ್ತಿರುವ ಬಂಡವಾಳಶಾಹಿಗಳ ಹಿತಾಸಕ್ತಿಯ ರಕ್ಷಣೆಯಾಗುತ್ತದೆಯೇ?

ಇದೊಂದು ಪ್ರಶ್ನೆ ಕಗ್ಗಂಟಾಗಿ ಬದಲಾಗಿರುವುದಕ್ಕೆ ಹಲವಾರು ಕಾರಣಗಳಿವೆ.

ಏಕೆಂದರೆ ಕಸ್ತೂರಿರಂಗನ್ ಸಮಿತಿ 2013ರಲ್ಲಿ ರಚಿಸಿದ್ದೇ 2011ರಲ್ಲಿ ಮಾಧವ ಗಾಡ್ಗೀಳ್ ಸಮಿತಿ ಇಡೀ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ, ಶೇ. 90ರಷ್ಟು ಪ್ರದೇಶದಲ್ಲಿ ಬಂಡವಾಳಶಾಹಿಯ ಸುಲಿಗೆಯನ್ನು ನಿಷೇಧಿಸುವ ವರದಿಯನ್ನು ನೀಡಿದ್ದಕ್ಕೆ.

ಕಸ್ತೂರಿರಂಗನ್ ವರದಿಯು ಪಶ್ಚಿಮ ಘಟ್ಟದ ಶೇ. 37ರಷ್ಟು ಅರಣ್ಯ ಭಾಗವನ್ನು ಮಾತ್ರ ಪರಿಸರ ಸೂಕ್ಷ್ಮ ಪ್ರದೇಶವೆಂದು ಘೋಷಿಸಿ, ಅಲ್ಲಿ ಹಾನಿಕರ ಕೈಗಾರಿಕಾ ಚಟುವಟಿಕೆಗಳನ್ನು ನಿಷೆೇಧಿಸಿತು. ಹೀಗಾಗಿ ಇದು ಗಾಡ್ಗೀಳ್ ವರದಿಗೆ ಹೋಲಿಸಿದರೆ ಹೆಚ್ಚು ಬಂಡವಾಳಶಾಹಿಗಳ ಪರವಾದ ವರದಿಯೇ ಆಗಿದೆ. ಆದರೂ ಅದನ್ನು ಸಾಮಾನ್ಯ ಜನರ ಜೊತೆಗೆ ಉದ್ಯಮಿಗಳು ವಿರೋಧಿಸುತ್ತಿರುವುದೇಕೆ?

ಕಸ್ತೂರಿರಂಗನ್ ವರದಿಯ ಏಳನೇ ಕರಡಿನ ಬಗ್ಗೆ ಸೆಪ್ಟಂಬರ್ 27ರ ಒಳಗೆ ತಮ್ಮ ಅಭಿಪ್ರಾಯವನ್ನು ತಿಳಿಸಬೇಕೆಂದು ಕಡ್ಡಾಯ ಮಾಡಿರುವುದೇ ಕೇಂದ್ರದ ಬಿಜೆಪಿ ಸರಕಾರ. ಅಷ್ಟು ಮಾತ್ರವಲ್ಲ. ದೇಶಾದ್ಯಂತ ಕಾಡು, ಖನಿಜ, ನೀರು, ನೆಲ ಎಲ್ಲವನ್ನು ಶರವೇಗದಲ್ಲಿ ಅದಾನಿಯಂತಹ ಕ್ರೋನಿ ಬಂಡವಾಳಶಾಹಿಗಳಿಗೆ ಪರಭಾರೆ ಮಾಡುತ್ತಿರುವುದೇ ಬಿಜೆಪಿ ಸರಕಾರ. ಹಾಗಿದ್ದರೂ ಪರಿಸರ ರಕ್ಷಣೆಯ ಹೆಸರಿನಲ್ಲಿ ಬಿಜೆಪಿ ಕಸ್ತೂರಿ ರಂಗನ್ ವಿರೋಧಿಸುವ ನಾಟಕವಾಡುತ್ತಿರುವುದೇಕೆ?

ಹಾಗೆಯೇ ರೈತಾಪಿಯ ಹಿತಾಸಕ್ತಿಯನ್ನು ಗಣನೆಗೇ ತೆಗೆದುಕೊಳ್ಳದೆ ಬಿಡದಿ, ಬಳಾರಿ, ಕೊಪ್ಪಳವನ್ನು ಒಳಗೊಂಡಂತೆ ರಾಜ್ಯಾದ್ಯಂತ ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿರುವ ರಾಜ್ಯದ ಡಿಕೆಶಿ ನೇತೃತ್ವದ ಕಾಂಗ್ರೆಸ್ ಸರಕಾರ ಈಗ ರೈತರ ಹಿತಾಸಕ್ತಿಯ ನೆಪವನ್ನು ಮುಂದಿಟ್ಟುಕೊಂಡು ಕಸ್ತೂರಿರಂಗನ್ ವರದಿ ವಿರೋಧಿ ನಿಲುವನ್ನು ತೆಗೆದುಕೊಳ್ಳಲು ವಿಶೇಷ ಅಧಿವೇಶನವನ್ನೇ ಕರೆದಿರುವುದೇಕೆ?

ಪಶ್ಚಿಮ ಘಟ್ಟದಲ್ಲಿ ಕುದುರೆಮುಖ ಗಣಿಗಾರಿಕೆ, ಕುದುರೆಮುಖ ನ್ಯಾಷನಲ್ ಪಾರ್ಕ್ ಇತ್ಯಾದಿ ಜನವಿರೋಧಿ ಹಾಗೂ ಬಂಡವಾಳಶಾಹಿ ಪರ ಯೋಜನೆಗಳ ವಿರುದ್ಧ ನಿರಂತರವಾಗಿ ಹೋರಾಡುತ್ತಾ ಪರಿಸರವನ್ನು ಮತ್ತು ಅಲ್ಲಿನ ರೈತಾಪಿಗಳ ಬದುಕನ್ನು ಕಾಪಾಡಿಕೊಂಡಿರುವ ಮಲೆನಾಡಿನ ಜನತೆ ‘ಪರಿಸರ ಪರ-ಕೈಗಾರಿಕಾ ವಿರೋಧಿ’ ಎಂಬ ಹಣೆಪಟ್ಟಿ ಹೊತ್ತಿರುವ ಕಸ್ತೂರಿರಂಗನ್ ವರದಿಯನ್ನು ವಿರೋಧಿಸುತ್ತಿರುವುದೇಕೆ?

ಮೇಲ್ನೋಟಕ್ಕೆ ವೈರುಧ್ಯಗಳಂತೆ ಕಾಣುವ ಈ ವಿದ್ಯಮಾನಗಳು ಪರಿಸರ ರಕ್ಷಣೆಯ ಕಾಳಜಿಯ ಹೆಸರಿನಲ್ಲೇ ಪಶ್ಚಿಮ ಘಟ್ಟಗಳನ್ನು ಬಂಡವಾಳಶಾಹಿಗಳ ವಶಕ್ಕೆ ನೀಡಿ ಅಲ್ಲಿನ ಜನರ ಮತ್ತು ಪರಿಸರದ ಸರ್ವನಾಶ ಮಾಡುವ ಪ್ರಭುತ್ವ ಹಾಗೂ ಜಾಗತಿಕ ಕಾರ್ಪೊರೇಟ್ ಕುತಂತ್ರಗಳನ್ನು ಹೊಂದಿವೆ.

ಪರಿಸರ ನಾಶ ಮಾಡುವ ಬಂಡವಾಳಶಾಹಿಗಳು ಪರಿಸರ ರಕ್ಷಕರೇ?

ಪಶ್ಚಿಮ ಘಟ್ಟ ಪ್ರದೇಶವು ಅಪಾರ ಜೀವ ವೈವಿಧ್ಯ ಮತ್ತು ಅಪಾರ ಖನಿಜ ಸಂಪತ್ತನ್ನು ಹೊಂದಿರುವ ಭಾರತದ ಅಪರೂಪದ ಅರಣ್ಯ ಸಂಪತ್ತಾಗಿದ್ದು ಮೊದಲಿಂದಲೂ ದೇಶೀಯ ಹಾಗೂ ವಿದೇಶೀಯ ಕಾರ್ಪೊರೇಟ್‌ಗಳು ಅದನ್ನು ಸೂರೆ ಹೊಡೆಯುತ್ತಲೇ ಬಂದಿದ್ದಾರೆ. ಅದರ ವಿರುದ್ಧ ಹೋರಾಡುತ್ತಾ ಕಾಡನ್ನು ಕಾಯುತ್ತಾ ಬಂದಿರುವರು ಕಾಡನ್ನೇ ಆಧರಿಸಿ ಜೀವನವನ್ನು ರೂಪಿಸಿಕೊಂಡಿರುವ ಸ್ಥಳೀಯ ಆದಿವಾಸಿಗಳು ಮತ್ತು ಸಣ್ಣ ಪುಟ್ಟ ರೈತರು. ಬ್ರಿಟಿಷರ ಕಾಲದಿಂದಲೂ ಈ ವಲಯದಲ್ಲಿ ದೊಡ್ಡ ದೊಡ್ಡ ಪ್ಲಾಂಟೇಷನ್ ಉದ್ಯಮಗಳಿದ್ದು ಅವರ ಪ್ರಧಾನ ಆಸಕ್ತಿ ಒತ್ತುವರಿಯೇ ವಿನಾ ಅರಣ್ಯ ರಕ್ಷಣೆಯೆಂದೂ ಆಗಿರಲಿಲ್ಲ. ಈ ವಲಯದ ದೊಡ್ಡ ದೊಡ್ಡ ಪ್ಲಾಂಟರುಗಳು, ಕ್ವಾರಿ ಒಡೆಯರು, ವಿವಿಧ ಬಗೆಯ ಮಾಫಿಯಾ ಹಾಗೂ ಇನ್ನಿತರ ಆಳುವ ವರ್ಗಗಳೇ ಇಲ್ಲಿನ ಆಳುವ ಪಕ್ಷಗಳ ಪೋಷಕರು. ಹೀಗಾಗಿ ಈ ಯಾವ ಪಕ್ಷಗಳು ಪರಿಸರವನ್ನು ಮತ್ತು ಆದಿವಾಸಿಗಳ ಬದುಕನ್ನು ಸರ್ವನಾಶ ಮಾಡುತ್ತಿದ್ದ ಗಣಿಗಾರಿಕೆ ಅಥವಾ ನ್ಯಾಷನಲ್ ಪಾರ್ಕ್ ಯೋಜನೆಗಳ ವಿರುದ್ಧ ಸೊಲ್ಲೆತ್ತಲಿಲ್ಲ.

ಕಳೆದ ನೂರು ವರ್ಷಗಳಲ್ಲಿ ಸುಲಿಗೆಕೋರ ದೇಶೀಯ ಮತ್ತು ಜಾಗತಿಕ ಬಂಡವಾಳಶಾಹಿಗಳು ಹೆಚ್ಚೆಚ್ಚು ಲಾಭದ ದುರಾಸೆಯಿಂದ ಮಾನವನ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಅರಣ್ಯವನ್ನು ಒಳಗೊಂಡಂತೆ ಇಡೀ ಭೂಮಂಡಲವನ್ನೇ ಬಗೆದು ಬಗೆದು ಲೂಟಿ ಮಾಡುತ್ತಿದ್ದಾರೆ. ಅದರ ದುಷ್ಪರಿಣಾಮವನ್ನು ಈಗ ಇಡೀ ಜಗತ್ತು ಅನುಭವಿಸುತ್ತಿದೆ. ಇದಕ್ಕೆ ಕಾರಣ ಮಾನವನ ದುರಾಸೆ ಎಂದು ದುರುದ್ದೇಶಪೂರ್ವಕವಾಗಿ ಇಡೀ ಮಾನವ ಕುಲದ ಮೇಲೆ ಆರೋಪಿಸಲಾಗುತ್ತಿದೆ. ದುರಾಸೆಯಿರಲಿ ಆಸೆಯನ್ನು ಪಡದ ದಾರುಣ ಪರಿಸ್ಥಿತಿಯಲ್ಲಿ ಅನುದಿನದ ಹೊಟ್ಟೆಪಾಡಿಗೆ ಹೋರಾಡುತ್ತಿರುವ ಶೇ. 90ರಷ್ಟು ಮಾನವ ಕುಲ, ಬಂಡವಾಳಶಾಹಿ ವರ್ಗ ಸೃಷ್ಟಿಸಿರುವ ಈ ಅನಾಹುತಕ್ಕೆ ಕಾರಣರಲ್ಲ. ಆದರೆ ಕನಿಷ್ಠ ಶುದ್ಧ ಗಾಳಿ, ನೀರು ಕೂಡ ತುಟ್ಟಿಯಾಗುತ್ತಿರುವ ಈ ಜಾಗತಿಕ ಸಂದರ್ಭದಲ್ಲಿ ಈ ಪರಿಸರ ತುರ್ತುಸ್ಥಿತಿಗೆ ಬಲಿಯಾಗುತ್ತಿರುವವರು ಮಾತ್ರ ಅವರೇ ಆಗಿದ್ದಾರೆ.

ಆದರೆ ಇರುವುದೊಂದೇ ಭೂಮಿ. ಹೀಗಾಗಿ ಜಾಗತಿಕ ತಾಪಮಾನ ಏರಿಕೆ, ಕ್ಷಾಮ-ಡಾಮರ, ಪ್ರವಾಹ-ಕಾಳ್ಗಿಚ್ಚುಗಳು, ಪ್ರಾಕೃತಿಕ ವಿಕೋಪಗಳು, ಜೀವ ವೈವಿಧ್ಯ ನಾಶಗಳು, ಇತ್ಯಾದಿಗಳ ಭೌಗೋಳಿಕ ದುಸ್ಥಿತಿಯ ಪರಿಣಾಮ ಶೇ.1ರಷ್ಟು ವಿಲಾಸಿ ವರ್ಗಕ್ಕೂ ಇದರ ಬಿಸಿ ಮುಟ್ಟುತ್ತಿದೆ. ಪ್ರಾಕೃತಿಕ ತುರ್ತುಸ್ಥಿತಿಗಳಿಂದ ಬಚಾವಾಗಲು ಈ ವರ್ಗ ಒಂದು ಕಡೆ ಬಂಕರ್ ಇತ್ಯಾದಿಗಳನ್ನು, ಮಂಗಳ ಗ್ರಹಕ್ಕೆ ವಲಸೆ ಹೋಗುವಂತಹ ಪಲಾಯನ ಮಾರ್ಗಗಳನ್ನು ಹುಡುಕಿಕೊಳ್ಳುತ್ತಿದೆ. ಮತ್ತೊಂದು ಕಡೆ ತನ್ನ ಲಾಭಕ್ಕೆ ಕಿಂಚಿತ್ತ್ತೂ ಮುಕ್ಕು ಬರದಂತೆ ಪರಿಸರ ರಕ್ಷಿಸುವ ಜವಾಬ್ದಾರಿಗಳನ್ನು ಬಡಪ್ರಪಂಚದ ಮೇಲೆ ಮತ್ತು ಬಡವರ ಮೇಲೆ ವರ್ಗಾಯಿಸುವ ಬೃಹತ್ ಕುತಂತ್ರಗಳನ್ನು ಹೆಣೆದಿದೆ.

ಪರಿಸರ ರಕ್ಷಣೆ ಎಂಬುದೂ ಬಂಡವಾಳಶಾಹಿ ಉದ್ಯಮ!

ಅದರ ಭಾಗವಾಗಿಯೇ ಜಾಗತಿಕ ಮಟ್ಟದಲ್ಲಿ ಬಂಡವಾಳಶಾಹಿ ಪ್ರಭುತ್ವ ಮತ್ತು ಅವರ ಪೋಷಕ ದೊಡ್ಡ ಕಾರ್ಪೊರೇಟ್ ಬಂಡವಾಳಶಾಹಿಗಳ ನೇತೃತ್ವದಲ್ಲಿ ಅವರ ವರ್ಗ ಹಿತಾಸಕ್ತಿಗೆ ಧಕ್ಕೆ ಬಾರದ ರೀತಿಯಲ್ಲಿ ಜಾಗತಿಕ ಪರಿಸರ ರಕ್ಷಣೆಯ ಉದ್ಯಮ ಪ್ರಾರಂಭವಾಗಿದೆ. ಇದು ಕಾರ್ಪೊರೇಟ್ ವರ್ಗದ ಲೂಟಿಯ ಹಿತಾಸಕ್ತಿಗೆ ಧಕ್ಕೆ ಬಾರದಂತೆ, ಪರಿಸರ ರಕ್ಷಣೆಯ ನಾಟಕವಾಡುವ ಪರಿಸರವಾದವನ್ನು ಹುಟ್ಟುಹಾಕಿದೆ. ಇವು ಹೆಚ್ಚೆಂದರೆ ಕೆಂಪು ಬಂಡವಾಳಶಾಹಿಗಳಿಗೆ ಹಸಿರುಡುಗೆ ತೊಡಿಸಿ ಹಸಿರು ಬಂಡವಾಳಶಾಹಿ ಮಾಡುವ, ಕೊಲೆಗಡುಕ ಬಂಡವಾಳಶಾಹಿ ಆರ್ಥಿಕ-ರಾಜಕೀಯ ವ್ಯವಸ್ಥೆಯನ್ನು ಪ್ರಶ್ನಿಸದೆ ತಾಂತ್ರಿಕ ಮತ್ತು ತಂತ್ರಜ್ಞಾನದ ಪರ್ಯಾಯಗಳನ್ನು ಅನ್ವೇಷಿಸುವ ವಂಚಕ ಮಾರ್ಗಗಳನ್ನು ಮುಂದಿಡುತ್ತಾ ಬಂದಿವೆ.

ಈ ಹುನ್ನಾರದಲ್ಲಿ ಎರಡು ಪ್ರಮುಖ ಅಂಶಗಳಿವೆ.

ಮೊದಲನೆಯದು ಅದು ಯಾವತ್ತೂ ಪರಿಸರ ನಾಶಕ್ಕೆ ಕಾರಣವಾದ ಬಂಡವಾಳಶಾಹಿ ವ್ಯವಸ್ಥೆಯನ್ನು ಗುರಿಮಾಡಿಕೊಳ್ಳುವುದಿಲ್ಲ ಮತ್ತು ಅದರ ಲಾಭಕ್ಕೆ ಅಡ್ಡಿಯುಂಟು ಮಾಡುವುದಿಲ್ಲ.

ಎರಡನೆಯದಾಗಿ ಅದು ಪರಿಸರ ರಕ್ಷಣೆಯ ಜವಾಬ್ದಾರಿಯನ್ನು ಬಡಪ್ರಪಂಚದ ಮೇಲೆ ಬಡವರು ಹಾಗೂ ಆದಿವಾಸಿಗಳ ಮೇಲೆ ವರ್ಗಾಯಿಸುತ್ತದೆ.

ಮೂರನೆಯದಾಗಿ ಅದು ಅರಣ್ಯ ಮತ್ತು ಆದಿವಾಸಿಗಳ ನಡುವೆ ಇರುವ ಸಾವಯವ ಸಂಬಂಧವನ್ನು ಕಡಿದು ಪರಸ್ಪರ ಅನಾಥರಾಗಿಸುತ್ತದೆ.

ಹೀಗಾಗಿ ಪರಿಸರ ಎಂದರೇನು? ರಕ್ಷಣೆ ಎಂದರೆನು? ಮತ್ತು ಯಾರಿಂದ ರಕ್ಷಣೆ ಎಂಬ ಪ್ರಶ್ನೆಗಳಿಗೆ ಬಂಡವಾಳಶಾಹಿ ಮತ್ತು ಬಂಡವಾಳಶಾಹಿ ಪೋಷಿತ ಪ್ರಭುತ್ವ ಉತ್ತರಗಳು ಜನಪರ ಹಾಗೂ ಭೂಮಿ ಪರ ಉತ್ತರವಲ್ಲ.

ಕಳೆದ ಶತಮಾನದ ಅಂತ್ಯಭಾಗದ ಹೊತ್ತಿಗೆ ಜಗತ್ತಿನ ಪರಿಸರ ಪರಿಸ್ಥಿತಿ ಗಂಭೀರವಾಗಿತ್ತು. ಜಾಗತಿಕವಾಗಿ ಪರಿಸರ ರಕ್ಷಣೆ ಇತ್ಯಾದಿಗಳು ಬಂಡವಾಳಶಾಹಿ ವಿರೋಧಿ ಚಳವಳಿಯ ಭಾಗವಾಗುತ್ತಿತ್ತು. ಇದನ್ನು ಕೂಡಲೇ ಗ್ರಹಿಸಿದ ಪ್ರಭುತ್ವಗಳು ಇಡೀ ಚಳವಳಿ ಬಂಡವಾಳಶಾಹಿ ವಿರೋಧಿಯಾಗದೆ ಕೇವಲ ಅದರ ಚೌಕಟ್ಟಿನಲ್ಲೇ ಬಂಡವಾಳಶಾಹಿ ಸ್ನೇಹಿ-ಪರಿಸರ ಸ್ನೇಹಿ ಮಾರ್ಗಗಳನ್ನು ಹುಡುಕುವಂತೆ ಮಾಡುವ ಜಾಗತಿಕ ಸಂಸ್ಥೆಗಳನ್ನು ಮತ್ತು ಪ್ರಕ್ರಿಯೆಗಳನ್ನು ಹುಟ್ಟುಹಾಕಿದವು.

ಹೀಗಾಗಿ 1992ರಲ್ಲಿ ಬ್ರೆಝಿಲ್‌ನಲ್ಲಿ ಸಭೆ ಸೇರಿದ ಸರಕಾರಗಳು ಪರಿಸರವನ್ನು, ಭೂಮಿಯನ್ನು ರಕ್ಷಿಸಲು ಅನೌಪಚಾರಿಕವಾಗಿ ತೀರ್ಮಾನಿಸಿದವು. ಅಲ್ಲಿಂದಾಚೆಗೆ ಪ್ರತಿವರ್ಷ ಸಭೆ ಸೇರುತ್ತಾ ಜಾಗತಿಕ ತಾಪಮಾನ ಕಡಿಮೆ ಮಾಡಲು ಹಾಗೂ ಕಾರ್ಬನ್ ಉಗಿ ಉತ್ಪನ್ನಗಳನ್ನು ಕಡಿಮೆ ಮಾಡಲು, ಬಡಪ್ರಪಂಚದಲ್ಲಿ ಕಾಡು ಕಡಿತ ಕಡಿಮೆ ಮಾಡಲು ಒತ್ತಡ ಹೇರಿದವು. ಆದರೆ ಜಾಗತಿಕವಾಗಿ ಶೇ. 80ಕ್ಕಿಂತ ಹೆಚ್ಚು ಗ್ರೀನ್ ಹೌಸ್ ಅನಿಲಗಳನ್ನು ಉತ್ಪನ್ನ ಮಾಡುತ್ತಿರುವ ಯಾವ ದೇಶಗಳೂ ತಮ್ಮ ಕೈಗಾರಿಕಾ ಚಟುವಟಿಕೆಗಳನ್ನು ಕಿಂಚಿತ್ತು ಕಡಿಮೆ ಮಾಡಲು ಒಪ್ಪಲಿಲ್ಲ. ಒಪ್ಪುತ್ತಿಲ್ಲ.

ಈ ಜಾಗತಿಕ ಹಿನ್ನೆಲೆಯ ಭಾಗವಾಗಿ ಭಾರತದಲ್ಲೂ ಬಂಡವಾಳಶಾಹಿ-ದೊಡ್ಡ ಭೂಮಾಲಕ ಪೋಷಿತ ಸರಕಾರಗಳು 1980-90ರಿಂದ ತಥಾಕಥಿತ ಪರಿಸರ ಸಂರಕ್ಷಣಾ ಯೋಜನೆಗಳನ್ನು ಪ್ರಾರಂಭಿಸಿದವು.

ಗಾಡ್ಗೀಳ್ ವರದಿಯನ್ನು ಸಡಿಲಗೊಳಿಸಲೆಂದೇ ಕಸ್ತೂರಿರಂಗನ್ ವರದಿ

ಭಾರತದಲ್ಲಿ ಬ್ರಿಟಿಷರು ಸೃಷ್ಟಿಸಿದ ಅರಣ್ಯ ಇಲಾಖೆಯ ಕಾನೂನುಗಳನ್ನೇ ಮುಂದುವರಿಸಿದ ಸ್ವತಂತ್ರ ಭಾರತವು 1980ರ ನಂತರದಲ್ಲಿ ಅರಣ್ಯ ಪರಿಸರದ ಅಂತರ್ಗತ ಭಾಗವಾಗಿರುವ ಆದಿವಾಸಿಗಳನ್ನು ಕೃತಕವಾಗಿ ಪರಿಸರ ಮತ್ತು ಪರಿಸರ ರಕ್ಷಣೆಯ ವ್ಯಾಖ್ಯಾನದಿಂದ ಹೊರಗಿಡುತ್ತಾ ಬಂದವು. ಅರಣ್ಯವನ್ನು ಪೊರೆಯುವ ಮತ್ತು ಅರಣ್ಯವನ್ನು ಆಧರಿಸಿ ಬದುಕು ಕಟ್ಟಿಕೊಂಡಿರುವ ಆದಿವಾಸಿಗಳನ್ನು ಮತ್ತು ಅವರ ಬದುಕನ್ನು ಪರಿಸರ ರಕ್ಷಣೆಯ ಹೆಸರಲ್ಲಿ ಹೊರದಬ್ಬಲು ಪ್ರಾರಂಭಿಸಿದವು. ಅರಣ್ಯಗಳ ಜೀವ ವೈವಿಧ್ಯಗಳನ್ನು ಆಧರಿಸಿದ ಆರ್ಥಿಕತೆಗಳು ವೇಗವಾಗಿ ಬೆಳೆಯುತ್ತಿದ್ದಂತೆ ಜಾಗತಿಕ ಬಂಡವಾಳಶಾಹಿ ವ್ಯವಸ್ಥೆ ಅರಣ್ಯಗಳನ್ನು ಕೇವಲ ಖನಿಜ ನಿಕ್ಷೇಪಗಳಾಗಿ ಮಾತ್ರವಲ್ಲದೆ, ಜೀವ ವೈವಿಧ್ಯಗಳ ನಿಕ್ಷೇಪಗಳನ್ನಾಗಿಯೂ ಪರಿಗಣಿಸಲಾರಂಭಿಸಿದವು. ಅದರ ಭಾಗವಾಗಿಯೇ ಪರಿಸರ ರಕ್ಷಣೆಯ ಹೆಸರಲ್ಲಿ ಹೊಸ ಬಂಡವಾಳಶಾಹಿ ಅಗತ್ಯದ ಭಾಗವಾಗಿ ನ್ಯಾಷನಲ್ ಪಾರ್ಕ್ ಇತ್ಯಾದಿಗಳು ಬಡವಿಶ್ವದಲ್ಲಿ ಹೆಚ್ಚುತ್ತ ಹೋದವು. ಮತ್ತೊಂದು ಕಡೆ ಪಶ್ಚಿಮ ಘಟ್ಟಗಳಂತಹ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗಂಭೀರವಾದ ಅಪಾಯಕ್ಕೆ ಗುರಿ ಮಾಡತೊಡಗಿದವು.

ಈ ಹಿನ್ನೆಲೆಯಲ್ಲಿ 2010ರಲ್ಲಿ ಯುಪಿಎ ಸರಕಾರವು ಪಶ್ಚಿಮ ಘಟ್ಟವನ್ನು ಉಳಿಸುವ ಘೋಷಿತ ಉದ್ದೇಶದೊಂದಿಗೆ ಪ್ರಖ್ಯಾತ ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ಅವರ ನೇತೃತ್ವದಲ್ಲಿ ಒಂದು ಉನ್ನತ ಮಟ್ಟದ ಸಮಿತಿಯನ್ನು ನೇಮಿಸಿತು. ಅದು 2011ರಲ್ಲಿ ತನ್ನ ವರದಿಯನ್ನು ನೀಡಿತು. ಆದರೆ ಅದು ಸರಕಾರದ ನಿರೀಕ್ಷೆಗಳಿಗೆ ವಿರುದ್ಧವಾಗಿ ಇಡೀ ಪಶ್ಚಿಮ ಘಟ್ಟವನ್ನು ಪರಿಸರ ಸೂಕ್ಷ್ಮ ಪ್ರದೇಶ (ESA)ವನ್ನಾಗಿ ಘೋಷಿಸಿಬಿಟ್ಟಿತು ಹಾಗೂ ಹಾನಿಕರ ಕೈಗಾರಿಕೋದ್ಯಮಗಳಿಗೆ ಗಂಭೀರವಾದ ನಿಷೇಧವನ್ನೊಡ್ಡುವ ಪ್ರಸ್ತಾವವನ್ನು ಮಾಡಿತು. ಆದರೆ ಈ ವರದಿಯಲ್ಲೂ ಪರಿಸರ ರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರ ಮತ್ತು ಸಣ್ಣ ರೈತಾಪಿಯ ಉಳಿವಿನ ಬಗ್ಗೆ ಸ್ಪಷ್ಟವಾದ ಉಲ್ಲೇಖವೇನೂ ಇರಲಿಲ್ಲ. ಆದರೆ ಇಡೀ ಪ್ರದೇಶದ ಪರಿಸರ ರಕ್ಷಣೆ ಮತ್ತು ನಿರ್ವಹಣೆಯಲ್ಲಿ ಗ್ರಾಮಸಭೆಗಳಿಗೆ ಮತ್ತು ಸ್ಥಳೀಯ ನಿವಾಸಿಗಳ ಪಾತ್ರಕ್ಕೆ ಸರಕಾರಿ ಅಧಿಕಾರಿಗಳಿಗಿಂತ ಹೆಚ್ಚಿನ ಹಾಗೂ ನಿರ್ಣಾಯಕ ಪಾತ್ರವಿರಬೇಕೆಂಬ ಮಹತ್ತರ ಸಲಹೆಯನ್ನು ನೀಡಿತ್ತು.

ಸಹಜವಾಗಿಯೇ ಇದು ಬಂಡವಾಳಶಾಹಿಗಳ, ಗಣಿ ಉದ್ಯಮಿಗಳ, ಕ್ವಾರಿ ಉದ್ಯಮಿಗಳ ಹಾಗೂ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಯಿತು. ಹೀಗಾಗಿ ದೇಶಾದ್ಯಂತ ಗಾಡ್ಗೀಳ್ ವರದಿಯ ವಿರುದ್ಧ ಅಪಾರ ಪ್ರತಿರೋಧವನ್ನು ಉಂಟು ಮಾಡಲಾಯಿತು.

ಅದಕ್ಕೆ ‘ಕೂಡಲೇ’ ಪ್ರತಿಸ್ಪಂದಿಸಿದ ಅದೇ ಯುಪಿಎ ಸರಕಾರ ಅದನ್ನು ಪರಿಷ್ಕರಿಸಲು ಇಸ್ರೋದ ಮಾಜಿ ಮುಖ್ಯಸ್ಥ ಮತ್ತು ಬಾಹ್ಯಾಕಾಶ ವಿಜ್ಞಾನಿ ಕಸ್ತೂರಿರಂಗನ್ ನೇತೃತ್ವದಲ್ಲಿ ಮತ್ತೊಂದು ಸಮಿತಿಯನ್ನು ನೇಮಿಸಿತು. ಅದು ಶೇ. 63ರಷ್ಟು ಪಶ್ಚಿಮ ಘಟ್ಟವನ್ನು ಮಾನವ ವಲಯವೆಂದೂ, ಶೇ. 37ರಷ್ಟು ಭೂ ಭಾಗವನ್ನು ಪ್ರಾಕೃತಿಕ ವಲಯವೆಂದೂ ನಿಗದಿ ಮಾಡಿತು. ಅವೆಲ್ಲವನ್ನೂ ಆಕಾಶದಿಂದಲೇ ಅಳತೆ ಮಾಡಿತು ಮತ್ತು ಪ್ರಾಕೃತಿಕ ವಲಯದಲ್ಲಿ ಎಲ್ಲಾ ಬಗೆಯ ಹಾನಿಕರ ಕೈಗಾರಿಕಾ ಚಟುವಟಿಕೆಗಳನ್ನು ನಿಷೇಧಿಸಿತು ಹಾಗೂ ಪರಿಸರ ಮತ್ತು ಅರಣ್ಯ ನಿರ್ವಹಣೆಯಲ್ಲಿ ಗಾಡ್ಗೀಳ್ ವರದಿಗೆ ತದ್ವಿರುದ್ಧವಾಗಿ ಅಧಿಕಾರಶಾಹಿಗೆ ಹೆಚ್ಚಿನ ಹಾಗೂ ನಿರ್ಣಾಯಕ ಪಾತ್ರವನ್ನು ವರ್ಗಾಯಿಸಿತ್ತು ಹಾಗೂ ಈ ವರದಿಯಲ್ಲೂ ಕೂಡ ಪರಿಸರ ರಕ್ಷಣೆಯಲ್ಲಿ ಆದಿವಾಸಿಗಳ ಪಾತ್ರವನ್ನು ನಿರಾಕರಿಸಲಾಯಿತು. ಮಾತ್ರವಲ್ಲದೆ ಪರಿಸರ ರಕ್ಷಣೆಯ ಹೆಸರಲ್ಲಿ ಅರಣ್ಯ ಇಲಾಖೆ ಕೊಡುತ್ತಿರುವ ಮತ್ತು ಕೊಡಬಹುದಾದ ಕಿರುಕುಳವನ್ನು ನಿಯಂತ್ರಿಸುವ ಯಾವ ಪ್ರಸ್ತಾವವೂ ಅದರಲ್ಲಿಲ್ಲ. ವಾಸ್ತವದಲ್ಲಿ ಕಸ್ತೂರಿರಂಗನ್ ವರದಿಯನ್ನು ಒಪ್ಪಿಕೊಂಡರೆ ಇನ್ನಷ್ಟು ಬಲಿಷ್ಠಗೊಳ್ಳುವ ಅರಣ್ಯ ಅಧಿಕಾರಶಾಹಿ ಆದಿವಾಸಿಗಳನ್ನು ಮತ್ತು ರೈತಾಪಿಯನ್ನು ಎರಡನೇ ದರ್ಜೆ ಪ್ರಜೆಗಳಂತೆ ಕಂಡು ಕಿರುಕುಳ ಹೆಚ್ಚಿಸುವುದರಲ್ಲಿ ಸಂಶಯವಿಲ್ಲ. ಹೀಗಾಗಿ ಆದಿವಾಸಿಗಳು ಮತ್ತು ರೈತಾಪಿಗಳು ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೀದಿಗಿಳಿದಿದ್ದಾರೆ.

ಮತ್ತೊಂದು ಕಡೆ ಶೇ. 67ರಷ್ಟು ಪಶ್ಚಿಮ ಘಟ್ಟವು ಬಂಡವಾಳಶಾಹಿ ಕೈಗಾರಿಕೋದ್ಯಮಕ್ಕೆ ತೆರೆದುಕೊಂಡಿದ್ದರೂ ಉಳಿದಂತೆ ಅದು ನಿಗದಿಪಡಿಸಿರುವ ನಿಷೇಧಗಳು ಜಾಗತಿಕ ಮತ್ತು ಸ್ಥಳೀಯ ಬಂಡವಾಳಶಾಹಿ ಆಸಕ್ತಿಗಳಿಗೆ ಪೂರಕವಾಗಿಲ್ಲ. ಗಾಡ್ಗೀಳ್ ವರದಿಯಂತೆ ಗ್ರಾಮಸಭೆಗಳಿಗೆ ಅಧಿಕಾರ ಕೊಡುವ ಅವಕಾಶವಿಲ್ಲದೆ ತಾವೇ ನಿಯಂತ್ರಿಸುವ ಪ್ರಭುತ್ವದ ಅರಣ್ಯ ಇಲಾಖೆಗೆ ಅಧಿಕಾರ ಇರುವುದನ್ನು ಉದ್ಯಮಿಗಳು ಸ್ವಾಗತಿಸಿದರೂ, ಅಪರೂಪದ ಖನಿಜ ಆರ್ಥಿಕತೆ, ಡೀಪ್ ಫಾರೆಸ್ಟ್ ಟೂರಿಸಂ, ಮರಳು ಗಣಿಗಾರಿಕೆ, ಕ್ವಾರಿಯಂತಹ ಸ್ಥಳೀಯ ಉದ್ಯಮಗಳಿಗೂ ಕಸ್ತೂರಿ ರಂಗನ್ ವರದಿ ಅಡ್ಡಿ! ಆದ್ದರಿಂದ ಉದ್ಯಮಿಗಳು ಮತ್ತು ಅವರ ಪೋಷಿತ ಪಕ್ಷಗಳು ರಂಗನ್ ವರದಿಯನ್ನು ವಿರೋಧಿಸುತ್ತಿವೆ.

ಸಮಾಜವಾದಿ ಪರಿಸರವಾದ ಬೇಕು

ಕರ್ನಾಟಕದ ವಿಧಾನ ಸಭೆಯಲ್ಲಿ ಕಳೆದ ಎರಡು ದಿನಗಳಿಂದ ಕಸ್ತೂರಿರಂಗನ್ ವರದಿಯ ಬಗ್ಗೆ ಚರ್ಚೆ ನಡೆಸಿ ಕೆಲವು ತೋರಿಕೆಯ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಆದರೂ ಆಡಳಿತಾರೂಢ ಕಾಂಗ್ರೆಸ್ ಅಥವಾ ವಿರೋಧ ಪಕ್ಷ ಬಿಜೆಪಿ ದೇಶವನ್ನು ಮತ್ತು ಆದಿವಾಸಿಗಳನ್ನು ಬಂಡವಾಳಶಾಹಿ ದಾಳಿಯಿಂದ ರಕ್ಷಿಸುವ ಮತ್ತು ಆದಿವಾಸಿ ರಕ್ಷಿತ ಪರಿಸರವಾದವನ್ನು ಮುಂದಿಡುವ ಯಾವ ಚರ್ಚೆಯನ್ನೂ ಮಾಡಲಿಲ್ಲ. ಕರ್ನಾಟಕದ ವಿಧಾನಸಭೆ ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುತ್ತಿರುವುದು ಆದಿವಾಸಿಗಳ, ರೈತಾಪಿಗಳ ರಕ್ಷಣೆಗಲ್ಲ. ಬದಲಿಗೆ ಬಂಡವಾಳಶಾಹಿಗಳಿಗೆ ಗಾಡ್ಗೀಳ್ ವರದಿಯಷ್ಟು ಅಲ್ಲವಾದರೂ ಅಲ್ಪಸ್ವಲ್ಪ ತಡೆಯುಂಟು ಮಾಡುವುದನ್ನು ತಡೆಗಟ್ಟುವುದಕ್ಕೆ.

ಹೀಗಾಗಿ ಇರುವ ಮಾರ್ಗವಿಷ್ಟೇ.

ಸದ್ಯಕ್ಕೆ ರಂಗನ್ ವರದಿಯಲ್ಲಿರುವ ಆದಿವಾಸಿ ಮತ್ತು ರೈತಾಪಿ ವಿರೋಧಿ ಅಂಶಗಳನ್ನು ವಿರೋಧಿಸುತ್ತಾ, ಕೇರಳಂನಲ್ಲಿ ಮಾಡಿದಂತೆ ತಳಮಟ್ಟದ ಮಾನವ ವಲಯಗಳನ್ನು ಗುರುತಿಸಿ ಹೊರಗಿಡಲು ಒತ್ತಾಯಿಸುತ್ತಲೇ, ಪರಿಸರ ಚಳವಳಿಯನ್ನು ಬಂಡವಾಳಶಾಹಿ ದಾಳಿಯಿಂದ ಭೂಮಿಯನ್ನು ಉಳಿಸುವ ಚಳವಳಿಯಾಗಿ ಬಂಡವಾಳಶಾಹಿ ವಿರೋಧಿ ಸಮಾಜವಾದಿ, ಪರಿಸರಭಾಗಿ ಚಳವಳಿಯಾಗಿಸುವುದೊಂದೇ ದಾರಿ!

(ಅಂಕಣಕಾರರು ಹಿರಿಯ ಚಿಂತಕರು)

Tags

Kasturirangan reportdestruction
share
ಶಿವಸುಂದರ್
ಶಿವಸುಂದರ್
Next Story
X