ಎಸ್‌ಐಆರ್ ರದ್ದಾಗಲಿ-ಗಣರಾಜ್ಯ ಉಳಿಯಲಿ
ಕರ್ನಾಟಕದ ‘ಎಸ್‌ಐಆರ್ ಸಂತ್ರಸ್ತರು’- 1.50 ಕೋಟಿ!

ಮೋದಿ ಸರಕಾರವನ್ನು ಅಲುಗಾಡಿಸುವಂತೆ ಜನತೆಯ ಬೀದಿ ಚಳವಳಿಯಾಗದೆ, ಬೀದಿಯಲ್ಲಿ ಜನಶಕ್ತಿ ಪ್ರಭುತ್ವ ಶಕ್ತಿಯನ್ನು ಎದುರುಗೊಳ್ಳುವಷ್ಟು ಜನಪ್ರಜ್ಞೆ ಮತ್ತು ಜನಸಂಘಟನೆಯಾಗದೆ ಕರ್ನಾಟಕದ 1.5 ಕೋಟಿ ಜನಕ್ಕೆ ಭವಿಷ್ಯವಿಲ್ಲ. ಹೀಗಾಗಿ ಜನಸಂಘಟನೆಗಳು ತಮ್ಮ ತಮ್ಮ ಮಿತಿಗಳಲ್ಲಿ ಸಂತ್ರಸ್ತ ಜನರನ್ನು ಸಂಘಟಿಸುವ ಮತ್ತು ಸುದೀರ್ಘ ಸಂಘರ್ಷಕ್ಕೆ ಸಿದ್ಧವಾಗುವುದನ್ನು ಬಿಟ್ಟು ಕರ್ನಾಟಕವನ್ನು ಉಳಿಸಲು ಬೇರೆ ಯಾವುದೇ ದಾರಿಯಿಲ್ಲ.
ಕರ್ನಾಟಕದ ಎಸ್‌ಐಆರ್‌ನ ಕರಡು ಪಟ್ಟಿ ಬಿಡುಗಡೆಯಾಗಿ ಒಂದು ಹಂತಕ್ಕೆ ಬಂದು ತಲುಪಿದೆ. ಎಲ್ಲಾ ಜನಸಂಘಟನೆಗಳ ಸತತ ಮತ್ತು ಪ್ರಾಮಾಣಿಕ ಹೋರಾಟಗಳ ನಂತರವೂ ಈಗ ಕರ್ನಾಟಕದಲ್ಲಿ : ASDDO - 1.07 ಕೋಟಿ, ಮ್ಯಾಪಿಂಗ್ ಆಗದವರು - 23.45 ಲಕ್ಷ, ಲಾಜಿಕಲ್ ಡಿಸ್ಕ್ರಿಪೆನ್ಸಿ -20.35 ಲಕ್ಷ ಹೀಗೆ ಒಟ್ಟು ಕರ್ನಾಟಕದ 1.50 ಕೋಟಿ ಮತದಾರರು ಎಸ್‌ಐಆರ್ ಬಾಧಿತರಾಗಲಿದ್ದಾರೆ.
ಅಂದರೆ 2025ರಲ್ಲಿ ನೋಂದಾಯಿತ ಮತದಾರರಾಗಿದ್ದವರಲ್ಲಿ ಶೇ. 27.27 ಮತದಾರರು ಈಗ ಎಸ್‌ಐಆರ್ ಸಂತ್ರಸ್ತರು.
ಎಸ್‌ಐಆರ್ ಸಂತ್ರಸ್ತರಾದ 1.50 ಕೋಟಿ ಜನರಲ್ಲಿ 43 ಲಕ್ಷ ಜನರು ದಾಖಲೆ ಕೊಟ್ಟು ಸಾಬೀತು ಮಾಡಿಕೊಳ್ಳಲು ಕನಿಷ್ಠ ನೋಟಿಸ್ ಆದರೂ ಪಡೆಯಲಿದ್ದಾರೆ. ಆದರೆ ಉಳಿದ 1.07 ಕೋಟಿ ಜನರಿಗೆ ಯಾವ ನೋಟಿಸ್ ಕೂಡ ಬರುವುದಿಲ್ಲ.
ನೋಟಿಸ್ ಪಡೆಯುವ 43 ಲಕ್ಷ ಮತದಾರರಲ್ಲಿ ಬಹುಪಾಲು ಜನರು ಮತ್ತು 1.07 ಕೋಟಿ ASDDO ಸಂತ್ರಸ್ತರು ಇದೀಗ ಆಯೋಗ ಸೂಚಿಸಿರುವ 11 ದಾಖಲೆಗಳಲ್ಲಿ ಒಂದನ್ನು ಕೊಟ್ಟು ತಮ್ಮ ನಾಗರಿಕತ್ವ ಸಾಬೀತು ಪಡಿಸಿಕೊಳ್ಳಬೇಕಾದ ಅಪಾಯವನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಆಧಾರ್ ಮಾತ್ರ ಸಾಲುವುದಿಲ್ಲ ಎಂದು ಸಿಇಒ ಸ್ಪಷ್ಟ ಪಡಿಸಿದ್ದಾರೆ.
ನಿಜ ASDDO ಎಷ್ಟು?
ಎಲ್ಲಾ ಅರ್ಹ ಮತದಾರರನ್ನು ಒಳಗೊಳ್ಳುವುದಕ್ಕಿಂತ ದುರ್ಬಲ ಹಾಗೂ ದಮನಿತ ಮತದಾರರನ್ನು ಅನರ್ಹಗೊಳಿಸಿ ಹೊರದಬ್ಬುವ ಉದ್ದೇಶದಿಂದಲೇ ಚುನಾವಣಾ ಆಯೋಗವು ಎಸ್‌ಐಆರ್ ನಡೆಸುತ್ತಿದೆ ಮತ್ತು ಅದರ ಭಾಗವಾಗಿಯೇ ASDDO ಎಂಬ ವರ್ಗೀಕರಣವನ್ನು ಮತ್ತು ನಿರ್ವಚನವನ್ನು ರಾಜ್ಯದಿಂದ ರಾಜ್ಯಕ್ಕೆ ವಿಸ್ತರಿಸಲಾಗುತ್ತಿದೆ.
1. Others ಅಥವಾ Othering?
ಉದಾಹರಣೆಗೆ ಈವರೆಗೆ ಎಸ್‌ಐಆರ್ ನಡೆದಿರುವ 13 ರಾಜ್ಯಗಳಲ್ಲಿ Others ಎಂಬ ವರ್ಗೀಕರಣವೇ ಇಲ್ಲ ಮತ್ತು ಈಗ ಕರ್ನಾಟಕವನ್ನು ಒಳಗೊಂಡಂತೆ ಎಸ್‌ಐಆರ್ ನಡೆಯುತ್ತಿರುವ 16 ರಾಜ್ಯಗಳಲ್ಲಿ Others ವರ್ಗೀಕರಣವಿದ್ದು ಅವರು ಯಾರು ಎಂಬ ಬಗ್ಗೆ ಈವರೆಗೆ ಚುನಾವಣಾ ಆಯೋಗ ಸ್ಪಷ್ಟೀಕರಣ ನೀಡಿಲ್ಲ.
ಕರ್ನಾಟಕ ಈ Others ಪಟ್ಟಿಯಲ್ಲಿ ಈಗಾಗಲೇ 3.83 ಲಕ್ಷದಷ್ಟು ಜನರನ್ನು ಸೇರಿಸಲಾಗಿದೆ. ಇವರಿಗೆ ನೋಟಿಸನ್ನೇ ಕೊಡದೆ, ಅವರ ಅಹವಾಲನ್ನು ಮತ್ತು ಸಮಜಾಯಿಷಿಗಳನ್ನು ಕೇಳದೆ ಅಂತಿಮ ಮತಪಟ್ಟಿಯಿಂದ ಹೊರದಬ್ಬುವ ಅಧಿಕಾರವನ್ನು ಸ್ಥಳೀಯ ಇಆರ್‌ಒಗಳಿಗೆ ನೀಡಲಾಗಿದೆ. ಹೀಗಾಗಿ ಈ 3.83 ಲಕ್ಷ ಜನರು ತಮ್ಮದಲ್ಲದ ಕಾರಣಕ್ಕೆ ಹೊರದಬ್ಬಿಸಿಕೊಳ್ಳುವ ಸಂತ್ರಸ್ತರೇ ಆಗಿರುತ್ತಾರೆ. ಸುಪ್ರೀಂ ಕೋರ್ಟಿನ ತೀರ್ಪು ಬಂದ ಮೇಲೆ ಆಯೋಗದ ಅಧಿಕಾರಿಗಳು ಈ Others ಸಂಭಾವ್ಯ ಅನುಮಾನಿತ ವಿದೇಶೀಯರೇ ಆಗಿರುತ್ತಾರೆ ಎಂಬ ಸೂಚನೆಯನ್ನು ನೀಡಿದ್ದರು. ಆ ಸಂಭಾವ್ಯತೆಯನ್ನು ಸರಿಯಾಗಿ ಪರಿಶೀಲಿಸಿ ಹೊರ ಹಾಕುವ ಅಧಿಕಾರವನ್ನು ಆಯೋಗ ವಿಸ್ತರಿಸಿಕೊಂಡಿದೆ.
ಮ್ಯಾಪಿಂಗ್ ನೋಟಿಸ್‌ನ ನಂತರದ ಅಹವಾಲು ಆಲಿಕೆ ಹಂತದಲ್ಲಿ ಇಆರ್‌ಒ ಅಹವಾಲು ಕೇಳಬಹುದು ಅಥವಾ;
‘‘For Electors classified as Others, The ERO/ AERO is perimitted to Mark elector as FOUND OK or 'Found Not Eligible Directly' or ERO/ AERO can schedule hearing also’’
ಅಂದರೆ Others ಎಂದು ಯಾರನ್ನಾದರೂ ಘೋಷಿಸುವ ಮತ್ತು ಅವರ ಅಹವಾಲನ್ನೇ ಕೇಳದೆಯೇ ನೇರವಾಗಿ ಅನರ್ಹ ಎಂದು ಪಟ್ಟಿಯಿಂದ ಕಿತ್ತು ಹಾಕುವ ಅಧಿಕಾರವನ್ನು ಇಆರ್‌ಒಗೆ ನೀಡಲಾಗಿದೆ.
ಮ್ಯಾಪಿಂಗ್ ಆಗಿದ್ದರೂ, ಯಾವುದೇ Logical Discrpeancy ಇರದಿದ್ದರೂ ಒಬ್ಬ ವ್ಯಕ್ತಿ ಅನುಮಾನಾಸ್ಪದ ಹೇಗಾಗುತ್ತಾರೆ? ಈಗಾಗಲೇ Others ಎಂದು ಘೋಷಿಸಿರುವ 4 ಲಕ್ಷ ಜನರನ್ನು ಬಲವಂತದಿಂದ ಪಟ್ಟಿಯಿಂದ ಹೊರ ಹಾಕಲು ಈ ವಿವೇಚನಾಧಿಕಾರ ಕೊಡಲಾಗಿದೆಯೇ? ಅಹವಾಲನ್ನು ಕೇಳಿಯೇ ತೀರ್ಪು ನೀಡಬೇಕೆಂಬ ಸಹಜ ನ್ಯಾಯದ ನಿಯಮಗಳು (Principles Natural Justice) ನಿರಾಕರಿಸುವ ಅಧಿಕಾರವನ್ನು ಆಯೋಗಕ್ಕೆ ಕೊಟ್ಟಿದ್ದು ಯಾರು?
ಎಸ್‌ಐಆರ್ ಒಳಗೆ ಹೇಗಾದರೂ ಹೆಚ್ಚಿನ ನ್ಯಾಯ ಒದಗಿಸಬಹುದೇ ಎಂಬ ಪ್ರಯತ್ನಗಳನ್ನು ನಡೆಯುತ್ತಿರುವಾಗಲೇ ಚುನಾವಣಾ ಆಯೋಗ ಗಳಿಗೆಗೊಂದು ಹೊಸ ಸರ್ವಾಧಿಕಾರಿ-ಅಪ್ರಜಾತಾಂತ್ರಿಕ ನಿಯಮ ಸೃಷ್ಟಿಸುತ್ತಾ ಎಸ್‌ಐಆರ್ ಪ್ರಕ್ರಿಯೆಯನ್ನು ಹೆಚ್ಚೆಚ್ಚು ಆಕ್ರಮಣಕಾರಿಯನ್ನಾಗಿಸುತ್ತಿದೆ.
ಪ. ಬಂಗಾಳ ಹಾಗೂ ಇನ್ನಿತರ ರಾಜ್ಯಗಳ ಅನುಭವವನ್ನು ನೋಡಿದರೆ ಅವರು ಭಾರತೀಯರೇ ಆದ ಬಡಪಾಯಿ ಮುಸ್ಲಿಮರೇ ಆಗಿರುವ ಸಂಭಾವ್ಯತೆ ಹೆಚ್ಚು. ಹೀಗಾಗಿ ಇದು Othering ವರ್ಗೀಕರಣವೇ ಹೊರತು Others ಅಲ್ಲ.
ಆದ್ದರಿಂದ ಈ 3.83 ಲಕ್ಷ ಜನರು ತಮ್ಮದಲ್ಲದ ಕಾರಣಕ್ಕೆ ಹೊರದಬ್ಬಿಸಿಕೊಳ್ಳುವ ಸಂತ್ರಸ್ತರೇ ಆಗಿರುತ್ತಾರೆ.
2. Dead ಮತು್ತ Duplicate: ಬದುಕಿಯೂ ಸತ್ತವರೆಷ್ಟು?
ಕರ್ನಾಟಕದ 1.07 ಕೋಟಿ ASDDOದಲ್ಲಿ Dead ಪಟ್ಟಿಯಲ್ಲಿ 16.39 ಲಕ್ಷ ಇದ್ದಾರೆ. ಚುನಾವಣಾ ಆಯೋಗವು 2025ರ ಮತಪಟ್ಟಿಯನ್ನು ಆಧರಿಸಿ 5.54 ಕೋಟಿ enumeration ಫಾರ್ಮ್‌ಗಳನ್ನು ಮುದ್ರಿಸಿತ್ತು. ಅಂದರೆ ಅಷ್ಟು ಜನ ಜೀವಂತ ನೋದಾಯಿತ ಮತದಾರರು ಇದ್ದಾರೆ ಎಂಬ ಊಹೆಯ ಆಧಾರದಲ್ಲಿ. ಹೀಗಾಗಿ 2026ರ ಜುಲೈ ತಿಂಗಳಲ್ಲಿ ಎಸ್‌ಐಆರ್ ನಡೆಯುವಾಗ 2025ರ ನಂತರ ಸತ್ತವರು ಮಾತ್ರ ಅದರಲ್ಲಿ Dead ಪಟ್ಟಿಯಲ್ಲಿ ವರ್ಗೀಕರಣಗೊಳ್ಳಬೇಕಿತ್ತು.
ಕರ್ನಾಟಕದ ಸರಾಸರಿ ಮರಣದ ದರ ವರ್ಷಕ್ಕೆ 4.5 ಲಕ್ಷ. ಹೀಗಾಗಿ Dead ಪಟ್ಟಿಯಲ್ಲಿ ಅಷ್ಟು ಮಾತ್ರ ಇರಬೇಕಿತ್ತು. ಆದರೆ ಅದು ಕೇವಲ ಈ ವರ್ಷ ಸತ್ತವರಲ್ಲ ಅದಕ್ಕೆ ಮುಂಚಿನಿಂದಲೂ ತೀರಿಹೋದವರು. ಯಾರ ಹೆಸರನ್ನು ತೆಗೆದು ಹಾಕಿಲ್ಲವೋ ಅವೆಲ್ಲವೂ ಆ ಪಟ್ಟಿಯಲ್ಲಿ ಸೇರುತ್ತದೆ ಎಂಬುದು ಆಯೋಗದ ವಾದ. ಆದರೆ 2024ರಲ್ಲಿ ಒಮ್ಮೆ 7.5 ಲಕ್ಷದಷ್ಟು ಕ್ರೋಡೀಕೃತ ಸಾವಿನ ಸಂಖ್ಯೆಯನ್ನು ತೆಗೆದುಹಾಕಲಾಗಿತ್ತು. ಹೀಗಾಗಿ Dead ಪಟ್ಟಿಯಲ್ಲಿ ಹೆಚ್ಚೆಂದರೆ 5-6 ಲಕ್ಷ ಇರುವುದು ಸಹಜವೇ ಹೊರತು 16 ಲಕ್ಷವಲ್ಲ.
ಬಿಹಾರ ಮತ್ತು ಇತರ ರಾಜ್ಯಗಳಲ್ಲೂ ಸತ್ತವರೆಂದು ವರ್ಗೀಕರಣಗೊಂಡ ಹಲವರು ಜೀವಂತ ದೇಹದೊಂದಿಗೆ ಕೋರ್ಟಿನ ಮೆಟ್ಟಿಲೇರಿದ್ದರು. ಕರ್ನಾಟಕದಲ್ಲೂ ಈಗಾಗಲೇ ಸತ್ತವರೆಂದು ವರ್ಗೀಕೃತರಾದ ಹಲವರು ಜೀವಂತವಾಗಿರುವ ಪ್ರಕರಣ ವರದಿಯಾಗುತ್ತಿದೆ.
ಆದ್ದರಿಂದ Absent ಲೆಕ್ಕದಲ್ಲಿರುವ 16 ಲಕ್ಷ ಜನರಲ್ಲಿ 6-7 ಲಕ್ಷ ಸರಿಯಾದ ಡಿಲಿಷನ್ ಆಗಿರಬಹುದಷ್ಟೆ. ಉಳಿದ 10 ಲಕ್ಷ ಜನರು ‘ಅನುಮಾನಿತ ಸತ್ತವರು’ ಅಥವಾ ಸರಿಯಾದ ಪರಿಶೀಲನೆ ಇಲ್ಲದೆ ಆಯೋಗದಿಂದ ಸಾಯಿಸಲ್ಪಟ್ಟವರೇ ಆಗಿರುತ್ತಾರಲ್ಲವೇ?
ಇನ್ನು Duplicate ಮತದಾರರ ಪ್ರಶ್ನೆ. ಇದು ಮತಪಟ್ಟಿಯ ಶುದ್ಧೀಕರಣದ ವಿಷಯದಲ್ಲಿ ಅತ್ಯಂತ ಗಂಭೀರವಾದ ಪ್ರಶ್ನೆ. ಆದರೆ ಇದೇ ವಿಷಯದಲ್ಲಿ ಆಯೋಗದ್ದು ಅತ್ಯಂತ ಬೇಜವಾಬ್ದಾರಿ ಮತ್ತು ಪಕ್ಷಪಾತಿ ವರ್ತನೆ. ಬಿಜೆಪಿ ಗೆದ್ದು ಬಂದಿರುವ ರಾಜ್ಯಗಳಲ್ಲಿ ಎಸ್‌ಐಆರ್ ನಂತರವೂ ಲಕ್ಷ ಲಕ್ಷ Duplicate ಮತದಾರರು ಉಳಿದುಕೊಂಡಿರುವುದು ಸಾಕ್ಷ್ಯ ಸಮೇತ ಸಾಬೀತಾಗಿರುವುದು ಅದಕ್ಕೆ ಪುರಾವೆ. ಇನ್ನು Duplicate ಮತದಾರರನ್ನು ಪತ್ತೆ ಹಚ್ಚಲು ತಾನೇ ಪರಿಚಯಿಸಿದ ಸಾಫ್ಟ್‌ವೇರ್ ಅನ್ನು ತಾನೇ ನಿಗೂಢವಾಗಿ ಕೈಬಿಟ್ಟಿದ್ದು ಇನ್ನೊಂದು ಪುರಾವೆ. ಹೀಗಾಗಿ ಆಯೋಗದ Duplicate ಅಂಕಿಅಂಶಗಳು ಪ್ರಶ್ನಾರ್ಹ.
ಕರ್ನಾಟಕದಲ್ಲಿ Duplicate ಪಟ್ಟಿಯಲ್ಲಿ 7.09 ಲಕ್ಷ ಮತದಾರರಿದ್ದಾರೆ.
ಇದಲ್ಲದೆ ಇನೊಂದು ಮುಖ್ಯ ಅಂಶವಿದೆ. ಈಗಾಗಲೇ ಎರಡು ಕಡೆ ಒಂದೇ ಹೆಸರಿನ ಮತದಾರರಿದ್ದರೆ ಯಾವ ವಿಳಾಸದ ಮತವನ್ನು ಉಳಿಸಿಕೊಳ್ಳುತ್ತೀರಿ ಎಂಬ ನೋಟಿಸ್‌ಗಳು ಎಸ್‌ಐಆರ್ ಪೂರ್ವದಲ್ಲೇ ನೀಡಲಾಗಿತ್ತು.
ಇಲ್ಲಿಯೂ ಜನರ ಅರಿವು, ಉತ್ತರದಾಯಿತ್ವವಿಲ್ಲದ ಫ್ಯೂಡಲ್ ಜಿಲ್ಲೆಗಳಲ್ಲಿ ಮೂರು ಬಾರಿ Absent ಮನೆಗಳಿಗೆ ಭೇಟಿ ಕೊಟ್ಟಿರುವುದು ಕಡಿಮೆ. ಹೀಗಾಗಿ ಕರ್ನಾಟಕದಲ್ಲಿ Absent ಎಂದು ವರ್ಗೀಕೃತವಾದ 15.17 ಲಕ್ಷ ಜನರು ನಿಜಕ್ಕೂ ಅಬ್ಸೆನ್ಟೇ ಆಗಿದ್ದರೆ ಅವರು ಪ್ರೆಸೆಂಟ್ ಆಗಿರುವುದು ಎಲ್ಲಿ ಎಂಬ ಪ್ರಶ್ನೆ ಉಳಿಯುತ್ತದೆ.
ಅದರಲ್ಲಿ ಸರಿಯಾದ ಅಂಕಿಅಂಶಗಳೇ ಎಂದಿಟ್ಟುಕೊಂಡರೂ ವಿಶೇಷವಾಗಿ ವಲಸೆ ಕಾರ್ಮಿಕರು ಮತ್ತು ಮಹಿಳೆಯರು ಎರಡು ಕಡೆಯೂ ಮತದಾರರಾಗಿದ್ದರೆ ಅದು Duplicate ವರ್ಗೀಕರಣದಲ್ಲಿ ಈಗಾಗಲೇ ಪರಿಗಣಿಸಿ ಆಗಿರುತ್ತದೆ. ಹಾಗಿದ್ದ ಮೇಲೆ ಈ Premanently Shifted ವರ್ಗೀಕರಣದ ಕಥೆಯೇನು?
3. Premanently Shifted ಎಂಬ ಸುಳ್ಳು
ಎಸ್‌ಐಆರ್ ನಡೆಯುತ್ತಿರುವ ಎಲಾ ರಾಜ್ಯಗಳಲ್ಲೂ ಒಟ್ಟು ASDDOದಲ್ಲಿ Premanently Shifted- ಶಾಶ್ವತ ಸ್ಥಳಾಂತರಗೊಂಡ ವರ್ಗದ ಪ್ರಮಾಣ ಸಂಖ್ಯೆ ಶೇ. 50-70ರಷ್ಟಿದೆ.
ಕರ್ನಾಟಕದಲ್ಲೂ 1.07 ಕೋಟಿ ASDDOದಲ್ಲಿ Premanently Shifted ಸಂಖ್ಯೆ 65.45 ಲಕ್ಷ. ಅಂದರೆ ಶೇ. 60!
ಈ ವರ್ಗದಲ್ಲಿ ಹೆಚ್ಚಿನ ಜನರಿರುವುದಕ್ಕೆ ಕಾರಣ ವಲಸೆ. ಆದರೆ ಈ ವರ್ಗಕ್ಕೆ ಒಳಪಟ್ಟವರು ತಮ್ಮ ಮೂಲಸ್ಥಾನದಲ್ಲಿ ಮತ್ತು ವಲಸೆ ಬಂದ ರಾಜ್ಯಗಳಲ್ಲೂ ಹೆಸರು ಉಳಿಸಿಕೊಂಡಿದ್ದರೆ ಅದು ಂbseಟಿಣ ಅಥವಾ Duplicateನಲ್ಲಿ ಈಗಾಗಲೇ ಲೆಕ್ಕಕ್ಕೆ ಬಂದಿರುತ್ತದೆ. ಆದ್ದರಿಂದ Premanently Shifted ಹೆಚ್ಚಿರುವುದಕ್ಕೆ ಮತ್ತೊಮ್ಮೆ ಅದೇ ಕಾರಣ-ತರ್ಕ ನೀಡುವುದು ಅಸಮಂಜಸ ಮಾತ್ರವಲ್ಲ ದುರುದ್ದೇಶಪೂರ್ವಕ.
ಇನ್ನು ಕೆಲವು ಅಧ್ಯಯನಗಳು ಕರ್ನಾಟಕದಲ್ಲಿ ಮತದಾರರ ಪ್ರಮಾಣದ ಏರಿಕೆಯು ರಾಜ್ಯದ ಸರಾಸರಿ ಜನಸಂಖ್ಯೆಯ ವಯಸ್ಕರ ಏರಿಕೆಗಿಂತ ಶೇ. 9 ಹೆಚ್ಚಿದೆಯಾದ್ದರಿಂದ ಆಯೋಗದ Shifted ವರ್ಗೀಕರಣದ ಸಂಖ್ಯೆ ಬಹುಪಾಲು ಸರಿ ಎಂದು ಪ್ರತಿಪಾದಿಸುತ್ತವೆ.
ಆದರೆ ಸೆನ್ಸಸ್ ಅಂಕಿಅಂಶಗಳು Adult population growth rateನಲ್ಲಿ ಬೆಂಗಳೂರಲ್ಲಿ 2012ರಿಂದ ಆಗಿರುವ ಅಸಾಮಾನ್ಯ ಒಳ ವಲಸೆ ದರವನ್ನು ಪರಿಗಣಿಸಿಲ್ಲ. 2014-24ರ ಅವಧಿಯಲ್ಲಿ ಕರ್ನಾಟಕದ ಜನಸಂಖ್ಯೆ ಏರಿಕೆ ಶೇ. 17 ಆಗಿದ್ದರೆ ಬೆಂಗಳೂರಿನ ಏರಿಕೆ ಶೇ. 26. ಅಂದರೆ 19 ಲಕ್ಷ ಹೆಚ್ಚುವರಿ ಜನರು ಬೆಂಗಳೂರು ಸೇರಿದ್ದಾರೆ.
ಇವರು ವಯಸ್ಕರೇ ಆಗಿರುತ್ತರಾದ್ದರಿಂದ ಇವರು ವೋಟರ್‌ಗಳಾಗುತ್ತಾರೆ. ಆದರೆ ವಯಸ್ಕ ಜನಸಂಖ್ಯೆಯ ಸಹಜ ದರ ಏರಿಕೆಯ ಗಣಿತ ಈ ಅಸಹಜ ಬೆಳವಣಿಗೆಯನ್ನು ಹಿಡಿದಿಡುವುದಿಲ್ಲ
ಮೇಲಾಗಿ ಕರ್ನಾಟಕದ ಒಟ್ಟಾರೆ ಜನಸಂಖ್ಯೆ ಏರಿಕೆ ಅರ್ಥಾತ್ ಸರಾಸರಿ ಜನನ ದರ ಕಡಿಮೆಯಾಗುತ್ತಿದೆ. ಆದರೆ 18 ವರ್ಷ ತಲುಪುವವರ ಸಂಖ್ಯೆ ಏರುತ್ತಲೇ ಇದೆ.
ಜೊತೆಗೆ 2011ಕ್ಕೆ ಹೋಲಿಸಿದರೆ ವಯಸ್ಕರಾದವರು ವೋಟರ್ ಆಗಿ ನೋಂದಾಯಿಸಿಕೊಳ್ಳುವ ಪ್ರಮಾಣ ಹೆಚ್ಚಿದೆ.
ಈ ಮೂರು ಕಾರಣಗಳಿಂದ ಕರ್ನಾಟಕದ 6.7 ಕೋಟಿ ಜನಸಂಖ್ಯೆಯ ಶೇ. 75 adult population ಎನ್ನುವ ಸಿದ್ಧ ಸೂತ್ರ ತಪ್ಪಾಗುತ್ತದೆ. ಅದು ಶೇ. 80 ಅಂತಾದರೆ 5.34 ಕೋಟಿ ಅರ್ಹ ಮತದಾರರು ಎಂದೇ ಆಗುತ್ತದೆ..
ASDDOನಲ್ಲೂ ವಲಸೆಗೆ ಕೊಡುಗೆ ನೀಡುವ ಕರ್ನಾಟಕದ ಭಾಗಗಳು ಮತ್ತು ಬಿಹಾರ ಹಾಗೂ ಇತರ ರಾಜ್ಯಗಳಲ್ಲೂASDDO ಹೆಚ್ಚಿರುವುದು, ಅದರಲ್ಲೂ Premanently Shifted ಜಾಸ್ತಿ ಇರುವುದು ಈ ವಿಷಯವನ್ನೇ ಸಾಬೀತು ಮಾಡುತ್ತದೆ.
ಉದಾಹರಣೆಗೆ ಆಯೋಗವು ಆಗಸ್ಟ್ 19ರಂದು ಬಿಡುಗಡೆ ಮಾಡಿರುವ ವರದಿಯಲ್ಲಿ ಕರ್ನಾಟಕದ 224 ಕ್ಷೇತ್ರಗಳASDDO ವಿವರಗಳಿವೆ. ಅದರಲ್ಲಿ ಬೆಂಗಳೂರಿನ 28 ಹಾಗೂ ಬೆಂಗಳೂರಿಗೆ ಅತಿ ಹೆಚ್ಚು ವಲಸೆ ಹೋಗುವ ಕಲಬುರಗಿ, ರಾಯಚೂರು, ಯಾದಗಿರಿ ಮತ್ತು ಕೊಪ್ಪಳದ ಅಸೆಂಬ್ಲಿ ಕ್ಷೇತ್ರಗಳಲ್ಲಿ ASDDO ಸಂಖ್ಯೆ ಶೇ. 25-30ರಷ್ಟಿದೆ.
ಅವರು ತಮ್ಮ ಊರುಗಳಲ್ಲಿಯೂ Premanently Shifted ಮತ್ತು ಬೆಂಗಳೂರಿನಲ್ಲೂ Premanently Shifted! ಹಾಗಾದರೆ ಅವರ ಅಸ್ತಿತ್ವ ಎರಡೂ ಕಡೆಯೂ ಇಲ್ಲ ಎಂದಾದರೆ ಅವರು ಶಿಫ್ಟ್ ಆಗಿದ್ದು ಎಲ್ಲಿಗೆ? ನರಕಕ್ಕೇ?
ಹೀಗಾಗಿ ಈ ವರ್ಗೀಕರಣವೇ ಸಮಸ್ಯಾತ್ಮಕ.
ಈ ಎಲ್ಲಾ ಕಾರಣಗಳಿಂದ ASDDO ಎಂದು ವರ್ಗೀಕೃತರಾದವರಲ್ಲಿ ಶೇ. 80-90ರಷ್ಟು ಅಂದರೆ 85-95 ಲಕ್ಷ ಮತದಾರರು ಅರ್ಹ ಮತದಾರರೇ. ಇದರ ಜೊತೆಗೆ ಎಸ್‌ಐಆರ್ ಪ್ರಕ್ರಿಯೆಯ ಅತ್ಯಂತ ದುರುದ್ದೇಶ ಪೂರಿತ ಪ್ರಕ್ರಿಯೆಯಾದ ಮ್ಯಾಪಿಂಗ್ ಆಗದ ಅಥವಾ ಲಾಜಿಕಲ್ ಡಿಸ್ಕ್ರಿಪೆನ್ಸಿಗೆ ಗುರಿಯಾದ 45 ಲಕ್ಷ ಮತದಾರರು. ಒಟ್ಟು ಸೇರಿ ಕರ್ನಾಟಕದಲ್ಲಿ 1.30 ಕೋಟಿ ಜನರು ಅಪಾಯವನ್ನು ಎದುರಿಸುತ್ತಿದ್ದಾರೆ.
ಆದರೆ ದೇಶಾದ್ಯಂತ ASDDO ಎಂದು ವರ್ಗೀಕೃತರಾದವರಲ್ಲಿ ಶೇ. 15-20 ರಷ್ಟು ಮತದಾರರು ಮಾತ್ರ ಅಂತಿಮಪಟ್ಟಿಯಲ್ಲಿ ಸ್ಥಾನ ಪಡೆಯುವಂತಾಯಿತು. ಉಳಿದವರು ತಮ್ಮ ಅಸ್ತಿತ್ವವನ್ನು ಸಾಬೀತುಪಡಿಸಲು ಆಗಲೇ ಇಲ್ಲ.
ಪ. ಬಂಗಾಳದಲ್ಲಿ ಕೇಂದ್ರದ ಜೊತೆ ಆಳುವ ಸರಕಾರ ಮತ್ತು ಅಲ್ಲಿನ ಜನತೆ ರಾಜಿರಹಿತ ಸಂಘರ್ಷದಲ್ಲಿ ತೊಡಗಿದರೂ, ತಮಿಳುನಾಡಿನಂತಹ ಕಡೆ ಡಿಎಂಕೆಯಂತಹ ಪಕ್ಷಗಳು ಸಕ್ರಿಯರಾಗಿ ಜನರಿಗೆ ಸಹಕರಿಸಿದರೂ, ಅಲ್ಲಿ ಕೊನೆಗೂ ASDDOದಲ್ಲಿ ವರ್ಗೀಕರಿಸಿದ್ದ ಶೇ. 15-20 ಜನರನ್ನು ಮಾತ್ರ ಬಚಾವು ಮಾಡಲು ಸಾಧ್ಯವಾಯಿತು.
ಆದರೆ ಕರ್ನಾಟಕದಲ್ಲಿ ಜನಸಂಘಟನೆಗಳು ಸರಕಾರ ಮತ್ತು ಆಯೋಗದ ಮೇಲೆ ನಿರತಂತರ ಒತ್ತಡ ಹೇರಲು ಪ್ರಯತ್ನಿಸಿವೆ. ಆದರೆ ಇದರ ಬಗ್ಗೆ ಜನರಲ್ಲಿ ಅರಿವು ಸಾಕಷ್ಟು ಇನ್ನೂ ಮೂಡಿಲ್ಲವಾದ್ದರಿಂದ ಗಮನಾರ್ಹ ಬದಲಾವಣೆ ತರುವಂತೆ ಮಿಲಿಟೆಂಟ್ ಸಂಘರ್ಷವೇನೂ ನಡೆಯಲಿಲ್ಲ. ಇನ್ನು ಇಲ್ಲಿಯ ಕಾಂಗ್ರೆಸ್ ಸರಕಾರ ಮತ್ತು ಪಕ್ಷ ಎರಡೂ ಉಡಾಫೆ ಹಾಗೂ ಉದಾಸೀನವೇ.. ಹೀಗಿರುವಾಗ ಬೇರೆ ರಾಜ್ಯಗಳಲ್ಲಿ ಆಗದ್ದು ನಮ್ಮ ರಾಜ್ಯದಲ್ಲಿ ಪವಾಡ ಸದೃಶವಾಗಿ ಆಗುವುದಿಲ್ಲ.
ಹೀಗಾಗಿ ಕರ್ನಾಟಕದಲ್ಲೂ ಹೊರದಬ್ಬಲ್ಪಟ್ಟ 1.07 ಕೋಟಿ ಅರ್ಹ ಮತದಾರರಲ್ಲಿ ಶೇ.20-25ರಷ್ಟು ಮಾತ್ರ ಮರಳಬಹುದು. ಉಳಿದವರಿಗಾಗಿ ಹೋರಾಟ ಮುಂದುವರಿಯಬೇಕು.
ಹೀಗಾಗಿ 1.07 ಕೋಟಿ ASDDOದಲ್ಲಿ ಶೇ. 80ರಷ್ಟು ಡಿಲಿಶನ್ ಸರಿಯಾಗಿದೆ ಎಂಬ ವಿಶ್ಲೇಷಣೆ ಅವೈಜ್ಞಾನಿಕ ಮಾತ್ರವಲ್ಲ ಆಯೋಗದ ದುರುದ್ದೇಶದ ಪರೋಕ್ಷ ಸಮರ್ಥಕ ಕೂಡ ಆಗಿಬಿಡುತ್ತದೆ.
ಎಸ್‌ಐಆರ್‌ನಿಂದ ಪತ್ತೆ ಹಚ್ಚಲಾದ ಅಕ್ರಮ ವಿದೇಶಿಯರೆಷ್ಟು?
ಎಲ್ಲಕ್ಕಿಂತ ಮುಖ್ಯವಾಗಿ ಎಸ್‌ಐಆರ್ ಮಾಡಲು ಆಯೋಗ ಕೊಟ್ಟ ಕಾರಣವೇ ಕಾನೂನು ಬಾಹಿರವಾಗಿ ಭಾರತದಲ್ಲಿ ನುಸುಳಿರುವ ವಿದೇಶಿ ಮತದಾರರನ್ನು ಪತ್ತೆ ಹಚ್ಚುವುದು. ಆದರೆ ಎಸ್‌ಐಆರ್ ಮುಗಿದಿರುವ 13 ರಾಜ್ಯಗಳಲ್ಲಿ ಪತ್ತೆ ಹಚ್ಚಲಾದ ವಿದೇಶಿ ಮತದಾರರೆಷ್ಟು? ಈವರೆಗೆ ಎಸ್‌ಐಆರ್‌ನಿಂದ ಒಬ್ಬ ವಿದೇಶಿ ಮತದಾರರನ್ನೂ ಪತ್ತೆ ಹಚ್ಚಿಲ್ಲ.
ಆ ಪ್ರಶ್ನೆಗಳಿಗೆ ಸಿಎಒ ಜ್ಞಾನೇಶ್ ಕುಮಾರ್ ಎಲ್ಲಿಯೂ ಉತ್ತರ ಕೊಟ್ಟಿಲ್ಲ. ಕರ್ನಾಟಕದ ಸಿಎಒ ಅನ್ಬು ಕುಮಾರ್ ಆ ಪ್ರಶ್ನೆಗಳನ್ನು ಕೇಳಿದರೆ ಕೈ ಮುಗಿದು ಉತ್ತರ ನಿರಾಕರಿಸುತ್ತಾರೆ.
ಸುಪ್ರೀಂ ಕೋರ್ಟ್ ತನ್ನ ಮೇ 27ರ ತೀರ್ಪಿನಲ್ಲಿ ಎಸ್‌ಐಆರ್ ಮುಗಿದ ನಾಲ್ಕು ವಾರದೊಳಗೆ ಅನುಮಾನಿತ ವಿದೇಶೀಯರ ಪಟ್ಟಿಯನ್ನು ಗೃಹ ಇಲಾಖೆಯ ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಬೇಕೆಂದು ಆದೇಶಿಸಿದೆ ಮತ್ತು ನಂತರ ಯಾವುದೇ ಚುನಾವಣೆಗಳನ್ನು ಅನುಮಾನಿತ ನಾಗರಿಕರ ಬಗ್ಗೆ ಸಕ್ಷಮ ಪ್ರಾಧಿಕಾರ ನಾಗರಿಕತೆಯನ್ನು ನಿರ್ಧರಿಸಿದ ಹೊರತು ನಡೆಸಬಾರದು ಎಂದು ಆದೇಶ ನೀಡಿದೆ.
ಹಾಗಿದ್ದರೂ ಯಾವ ಎಸ್‌ಐಆರ್ ಮುಗಿದ ರಾಜ್ಯಗಳೂ ಅನುಮಾನಿತ ವಿದೇಶೀಯರ ಪಟ್ಟಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿಲ್ಲವೇಕೆ? ಅದರ ಬಗ್ಗೆ ದೇಶಭಕ್ತ ಬಿಜೆಪಿಗಳೂ ಮತ್ತು ಸಂಘಿಗಳು ಹುಯಿಲೆಬ್ಬಿಸಿಲ್ಲವೇಕೆ?
ವಿಷಯ ಸ್ಪಷ್ಟ. ಎಸ್‌ಐಆರ್ ನೆಪ. ಅದರ ಮೂಲಕ ಹಿಂದುತ್ವಕ್ಕೆ ಮತ್ತು ಕಾರ್ಪೊರೇಟ್ ಆರ್ಥಿಕತೆಗೆ ಬೇಡದ ದಲಿತ-ದಮನಿತ ಮೂಲ ಭಾರತೀಯರಿಗೆ ನಾಗರಿಕತ್ವ ನಿರಾಕರಿಸಿ ಎರಡನೇ ದರ್ಜೆ ಪ್ರಜೆಗಳನ್ನಾಗಿ ಮಾಡುವುದೇ ಎಸ್‌ಐಆರ್ ಉದ್ದೇಶ.
ಹೀಗಾಗಿ ಎಸ್‌ಐಆರ್ ಎಂಬುದು ಮತಪಟ್ಟಿ ಶುದ್ಧೀಕರಣ ಪ್ರಕ್ರಿಯೆಯೆಂಬ ಸಬೂಬೇ ಸುಳ್ಳು. ಆದ್ದರಿಂದ ಎಸ್‌ಐಆರ್ ವಿಶ್ಲೇಷಣೆಯು ಶುದ್ಧೀಕರಣದ ನೆಲೆಗಟ್ಟಿನಲ್ಲಿ ಮಾಡುವುದು ಅಡಗಿರುವ ಮತ್ತು ಬಯಲಾಗಿರುವ ಅದರ ಹುಸಿಗಳನ್ನು ಅರ್ಥೈಸುವಲ್ಲಿ ವಿಫಲವಾಗುವ ಅವಕಾಶಗಳು ಹೆಚ್ಚು.
ಎಸ್‌ಐಆರ್ ಆಧರಿಸಿ ನಡೆಯಲಿದೆ ಸಾಲು ಸಾಲು ಆಕ್ರಮಣಗಳು- NPR-NRC, ಡಿಲಿಮಿಟೇಶನ್!
ಏಕೆಂದರೆ ಈ ಎಸ್‌ಐಆರ್ ಮೋದಿ ಸರಕಾರ ಮುಂದೆ ನಡೆಸಲಿರುವ ಸಾಲು ಸಾಲು ಆಕ್ರಮಣಗಳ ಮೊದಲ ಪ್ರಧಾನ ಪ್ರಹಾರ. ಎಸ್‌ಐಆರ್ ಅನ್ನು ತರಾತುರಿಯಲ್ಲಿ ನಡೆಸುತ್ತಿರುವುದೇ ಮುಂದಿನ ವರ್ಷದ ಸೆನ್ಸಸ್‌ಗೆ ಮುಂಚೆ ಮಾಡಿ ಮುಗಿಸಲಿಕ್ಕೆ. ಸೆನ್ಸಸ್ ಜೊತೆಗೆ NPR ನಡೆಯಲಿದೆ. ಆನಂತರ ಎಸ್‌ಐಆರ್ ವಿವರಗಳನ್ನು ಬಳಸಿ ಓಖಅ ನಡೆಯಲಿದೆ. ಅದು ಎಸ್‌ಐಆರ್‌ನಲ್ಲಿ ಬಚಾವಾದವರನ್ನು ಗುರಿಯಾಗಿಸಿಕೊಳ್ಳಲಿದೆ.
ಆನಂತರ ಅಳಿದುಳಿವ ಜನಸಂಖ್ಯೆಯನ್ನು ಆಧರಿಸಿ ಡಿಲಿಮಿಟೇಶನ್ ನಡೆದು ಉತ್ತರ ಭಾರತದ ಹಿಂದಿ ಬೆಲ್ಟಿನ ಪ್ರಾತಿನಿಧ್ಯ ಹೆಚ್ಚಾಗಲಿದೆ.
ಮುಂದಿನ ವರ್ಷ ಅಕ್ರಮ ವಲಸೆಯಿಂದ ಆಗಿರುವ ಧಾರ್ಮಿಕ ಹಾಗೂ ಸಾಮಾಜಿಕ ಪರಿಣಾಮಗಳ ಆಯೋಗ ತನ್ನ ವರದಿ ನೀಡಲಿದೆ. ಅದನ್ನು ಆಧರಿಸಿ ಮೋದಿ-ಶಾ ಅಲ್ಪಸಂಖ್ಯಾತರ ಮೇಲೆ ತನ್ನ ಮತ್ತೊಂದು ಆಕ್ರಮಣ ಪ್ರಾರಂಭಿಸಲಿದೆ.
ಇದೆಲ್ಲಕ್ಕೂ ಎಸ್‌ಐಆರ್ ಬುನಾದಿಯಾಗಲಿದೆ. ಈ ಒಟ್ಟು ಚಿತ್ರಣವನ್ನು ಬಿಟ್ಟು ಎಸ್‌ಐಆರ್ ಅನ್ನು ಕೇವಲ ಶುದ್ಧೀಕರಣ ಮಾನದಂಡದಿಂದ ನೋಡುವುದು ಅಪರಾಧವಾಗುತ್ತದೆ. ಜನಸಂಘಟನೆಗಳು ತಮ್ಮ ಪ್ರಯತ್ನದಿಂದ ಎಸ್‌ಐಆರ್‌ನಿಂದ ಖಂಡಿತವಾಗಿಯೂ ಒಂದೆರಡು ಲಕ್ಷ ಜನರನ್ನು ಬಚಾವು ಮಾಡಿರಬಹುದು. ಅದು ಶ್ಲಾಘನೀಯ ವಿಷಯವೇ. ಆದರೆ.. ಎದುರಿಗಿರುವ ಅಪಾಯದ ಪ್ರಮಾಣಕ್ಕೆ ಹೋಲಿಸಿದರೆ?
ಮುಂದೇನು?
1.07 ಕೋಟಿ ASDDO ಸಂತ್ರಸ್ತರಿಗೆ ಮಾಹಿತಿ ತಲುಪಿಸಿ ಅವರೆಲ್ಲರನ್ನೂ ಒಳಗೊಳ್ಳುವ ಬೃಹತ್ ಅಭಿಯಾನವಾಗಬೇಕು. ಹಾಗೆಯೇ ನೋಟಿಸ್ ಪಡೆದ ನಾಗರಿಕರು ಸೂಕ್ತ ದಾಖಲೆ ನೀಡಲು ಬೇಕಾದ ದಾಖಲೆಗಳನ್ನು ಜೋಡಿಸಿಕೊಳ್ಳಲು ಸಮಯ ಬೇಕು. ಇವೆಲ್ಲಕ್ಕೂ ಆರೆಂಟು ತಿಂಗಳಾದರೂ ಬೇಕು. ಆದರೆ ಅದಕ್ಕೆ ಆಯೋಗ ಸಮಯ ಕೊಟ್ಟಿರುವುದೇ ಒಂದು ವಾರ! ಹೀಗಾಗಿ ಅದಕ್ಕಾಗಿ ಹೋರಾಟ ಮುಂದುವರಿಯಬೇಕು.
ಇನ್ನು ದಾಖಲೆಗಳ ವಿಷಯಕ್ಕೆ ಬರುವುದಾದರೆ ಕರ್ನಾಟಕ ಸರಕಾರ Permanent Residence Cetificate (PRC) ನೀಡುವ ಪ್ರಕ್ರಿಯೆ ಪ್ರಾರಂಭಿಸಿದೆ. ಆದರೆ ಅದನ್ನು ಆಯೋಗವು ಪರಿಗಣಿಸುವುದೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಏಕೆಂದರೆ ಮತದಾರರು ಕೊಡುವ ಪ್ರತಿಯೊಂದು ದಾಖಲೆಯನ್ನು DEO ಪ್ರತ್ಯೇಕವಾಗಿ ಪರಿಗಣಿಸುತ್ತದೆಂದು ಹೇಳಿದೆ.
ಇವೆಲ್ಲವೂ ಎಸ್‌ಐಆರ್‌ನ ಒಳಗಡೆ ಪ್ರಜಾತಾಂತ್ರಿಕ ಸುಧಾರಣೆ ಸಾಧ್ಯವಿಲ್ಲವೆಂದೂ, ರಾಜ್ಯದ ಮಧ್ಯಪ್ರವೇಶಕ್ಕೆ ಅವಕಾಶವಿಲ್ಲವೆಂದೂ, ಎಸ್‌ಐಆರ್ ರದ್ದಾಗದೆ ಎಸ್‌ಐಆರ್ ಸಂತ್ರಸ್ತರ ಉಳಿವು ಸಾಧ್ಯವಿಲ್ಲವೆಂದು ಮತ್ತೊಮ್ಮೆ ಸಾಬೀತು ಪಡಿಸುತ್ತದೆ. ಅದಕ್ಕೆ ಕಾರಣಗಳಿವೆ :
ಪ್ರಜಾ ಪ್ರತಿನಿಧಿ ಕಾಯ್ದೆಯ 13ಸಿಸಿ ಸೆಕ್ಷನ್ ಪ್ರಕಾರ
ಮತಪಟ್ಟಿ ತಯಾರಿ ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮುಖ್ಯ ಚುನಾವಣಾ ಅಧಿಕಾರಿಯನ್ನು ಒಳಗೊಂಡಂತೆ ಎಲ್ಲಾ ಚುನಾವಣಾ ಅಧಿಕಾರಿಗಳು ಈ ಅವಧಿಯಲ್ಲಿ ಸಂಪೂರ್ಣವಾಗಿ ಕೇಂದ್ರಚುನಾವಣಾ ಆಯೋಗದ ನಿಯಂತ್ರಣ, ಉಸ್ತುವಾರಿ ಮತ್ತು ಶಿಸ್ತಿಗೆ ಒಳಪಟ್ಟಿರುತ್ತಾರೆ.
ಹೀಗಾಗಿ ಮೋದಿ ಸರಕಾರವನ್ನು ಅಲುಗಾಡಿಸುವಂತೆ ಜನತೆಯ ಬೀದಿ ಚಳವಳಿಯಾಗದೆ, ಬೀದಿಯಲ್ಲಿ ಜನಶಕ್ತಿ ಪ್ರಭುತ್ವ ಶಕ್ತಿಯನ್ನು ಎದುರುಗೊಳ್ಳುವಷ್ಟು ಜನಪ್ರಜ್ಞೆ ಮತ್ತು ಜನಸಂಘಟನೆಯಾಗದೆ ಕರ್ನಾಟಕದ 1.5 ಕೋಟಿ ಜನಕ್ಕೆ ಭವಿಷ್ಯವಿಲ್ಲ. ಹೀಗಾಗಿ ಜನಸಂಘಟನೆಗಳು ತಮ್ಮ ತಮ್ಮ ಮಿತಿಗಳಲ್ಲಿ ಸಂತ್ರಸ್ತ ಜನರನ್ನು ಸಂಘಟಿಸುವ ಮತ್ತು ಸುದೀರ್ಘ ಸಂಘರ್ಷಕ್ಕೆ ಸಿದ್ಧವಾಗುವುದನ್ನು ಬಿಟ್ಟು ಕರ್ನಾಟಕವನ್ನು ಉಳಿಸಲು ಬೇರೆ ಯಾವುದೇ ದಾರಿಯಿಲ್ಲ.
ಆದರೆ ಎಸ್‌ಐಆರ್‌ಗೆ ತೊಡಿಸಿರುವ ಮುಖವಾಡಗಳಿಂದಾಗಿ ಸದ್ಯಕ್ಕೆ ದೊಡ್ಡ ಪ್ರಮಾಣದ ಜನಪ್ರತಿರೋಧವೂ ಹುಟ್ಟಿಬರುತ್ತಿಲ್ಲ. ಹೀಗಾಗಿ ಜನಸಂಘಟನೆಗಳ ಇಂದಿನ ಪರಿಸ್ಥಿತಿಯಲ್ಲಿ ಬೃಹತ್ ಎಸ್‌ಐಆರ್ ವಿರೋಧಿ ಜನಬಂಡಾಯ ಕಷ್ಟ ಸಾಧ್ಯ.
ಅದು ಇನ್ನೂ ಸುದೀರ್ಘದ ದಾರಿ. ಆದರೂ...ಅದೊಂದೇ ದಾರಿ! ಅಲ್ಲವೇ...?






