ಪ್ರಧಾನಿಗಳೇ, ಉದ್ಯೋಗ, ಆದಾಯಗಳು ಏರದಿದ್ದರೂ, ಬಡತನ ಮಾತ್ರ ಶೇ. 5ಕ್ಕೆ ಇಳಿಯಿತೇ?

ಭಾಗ- 1
ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರಕಾರಕ್ಕೆ ಹನ್ನೊಂದನೇ ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ಭಕ್ತಗಣ ಮೋದಿಯವರು ಅವತರಿಸಿದ ಮೇಲೆ ಹೇಗೆ ಭಾರತ ಒಂದು ದೇಶವಾಯಿತು ಮತ್ತು ವಿಶ್ವಗುರುವಾಯಿತು ಎಂಬ ಕರ್ಕಶ ಭಜನೆ ಶುರುವಿಟ್ಟುಕೊಂಡಿದ್ದಾರೆ. ಪಹಲ್ಗಾಮ್ ದಾಳಿಗೆ ಕಾರಣರಾದವರನ್ನು ಬಂಧಿಸುವುದಿರಲಿ ಪ್ರಶ್ನೆಯನ್ನೇ ಯಾರೂ ಎತ್ತದಂತೆ ‘ಆಪರೇಶನ್ ಸಿಂಧೂರ’ ಅನ್ನು ಪ್ರಶ್ನೆಗಳ ಮೇಲೂ ಪಾಕಿಸ್ತಾನದ ಮೇಲೂ ಪ್ರಾರಂಭಿಸಲಾಯಿತು. ಆದರೆ ದಿಢೀರನೆ ಅದನ್ನು ನಿಲ್ಲಿಸಿದ್ದು ಏಕೆ ಎಂದು ಜನರು ಕೇಳುವ ಮುನ್ನವೇ ಬೆನ್ನುಮೂಳೆ ಇಲ್ಲದ ವಿರೋಧ ಪಕ್ಷಗಳ ನಾಯಕರನ್ನು ಜೊತೆಮಾಡಿ ವಿದೇಶಗಳಿಗೆ ಕಳಿಸಿ ಅವರಿಂದಲೇ ಆಪರೇಷನ್ ಸಿಂಧೂರದ ವಿಜಯ ಗಾಥೆ ಹಾಡಿಸುತ್ತಿದ್ದಾರೆ. ಹೀಗಾಗಿ ಮೋದಿ ಸರಕಾರ ಆಪರೇಷನ್ ಸಿಂಧೂರವನ್ನು ಆಪರೇಶನ್ ಬಿಹಾರ್‌ಗೆ ಬಳಸಿಕೊಳ್ಳುತ್ತಿದ್ದರೂ, ಮೋದಿ ಸುಳ್ಳಿನ ಪ್ರಚಾರದಲ್ಲಿ ಪಾಲ್ಗೊಂಡು ಅದಕ್ಕೆ ಮಾನ್ಯತೆ ಒದಗಿಸಿರುವ ವಿರೋಧ ಪಕ್ಷಗಳು ಕಕ್ಕಾಬಿಕ್ಕಿಯಾಗಿವೆ. ಸೋತರೆ ಗೆದ್ದವೆಂದೂ, ಸಾವನ್ನೂ, ಬಲಿದಾನಗಳನ್ನೂ ತನ್ನ ನರೆಟಿವ್‌ಗೆ ತಕ್ಕಂತೆ ಹೆಣೆಯುವ ಮೋದಿ ಪರಿವಾರ ಇದೀಗ ಅದೇ ರೀತಿ ತಮ್ಮ ಮತ್ತೊಂದು ಸೋಲನ್ನೂ ಮಹಾನ್ ಗೆಲುವೆಂಬ ಪ್ರಚಾರದಲ್ಲಿ ತೊಡಗುತ್ತಿದೆ.
ಮೋದಿಯವರ ನೇತೃತ್ವದ ಕಳೆದ ಹನ್ನೊಂದು ವರ್ಷಗಳಲ್ಲಿ ಭಾರತದ ಅಭಿವೃದ್ಧಿ ಗತಿ ಹಿಂದಿನ ಯುಪಿಎ ಸರಕಾರದ ಕಾಲಕ್ಕಿಂತ ಕಡಿಮೆಯಾಯಿತು. ದೇಶದ ಅಭಿವೃದ್ಧಿ ದರ ಕುಸಿದರೂ ಏನು ಅಭಿವೃದ್ಧಿಯಾಯಿತೋ ಅದರ ದೊಡ್ಡ ಪಾಲನ್ನು ಅಂಬಾನಿ-ಆದಾನಿ ನೇತೃತ್ವದಲ್ಲಿ ಈ ದೇಶದ ಶೇ. 1ರಷ್ಟು ಜನ ಕಸಿದರೇ ವಿನಾ ಉಳಿದ ಶೇ.99ರಷ್ಟು ಜನರ ಬದುಕಿನಲ್ಲಿ ಮಾರ್ಪಾಡು ಬರಲಿಲ್ಲ. ಅದಕ್ಕಿಂತ ಹೆಚ್ಚಾಗಿ ದೇಶದ ತಳಸ್ತರದ ಶೇ. 50ರಷ್ಟು ಜನರ ಬದುಕು, ಬಡತನ ಮತ್ತು ಬವಣೆಗಳು ಈ ಹನ್ನೊಂದು ವರ್ಷಗಳಲ್ಲಿ ತೀವ್ರವಾಗಿ ಹೆಚ್ಚಾಯಿತು.
ಆದರೂ ಇದೀಗ ವಿಶ್ವಬ್ಯಾಂಕ್ ಜೂನ್ 7ರಂದು ಮೋದಿ ಅವಧಿಯಲ್ಲಿ ದೇಶದ ಬಡತನ ತೀವ್ರವಾಗಿ ಇಳಿದಿದೆಯೆಂದೂ, ಇಂದು ದೇಶದಲ್ಲಿ ಕೇವಲ ಶೇ. 5.3ರಷ್ಟು ಜನ ಮಾತ್ರ ಬಡತನ ರೇಖೆಗಿಂತ ಕೆಳಗಿದ್ದಾರೆಂದೂ ಹೇಳಿದೆ. ಈ ಅವಧಿಯಲ್ಲಿ ಸುಮಾರು 25 ಕೋಟಿಗೂ ಹೆಚ್ಚು ಬಡವರನ್ನು ಮೋದಿ ಸರಕಾರ ಅತಿ ಬಡತನದಿಂದ ಮೇಲೆತ್ತಿದೆಯೆಂದು ಕೆಲವು ಅಂಕಿಅಂಶಗಳನ್ನು ಹೇಳಿದೆ. ಮೋದಿ ಸರಕಾರಕ್ಕೆ ಹನ್ನೊಂದು ವರ್ಷಗಳು ತುಂಬುತ್ತಿರುವ ಹೊತ್ತಿನಲ್ಲಿ ತುಂಬಾ ಯೋಜಿತವಾಗಿ ಈ ಹೇಳಿಕೆಯನ್ನು ಬಿಡುಗಡೆ ಮಾಡಲಾಗಿದೆ.
ಇದೇ ಬಗೆಯ ಹೇಳಿಕೆಯನ್ನು ಸರಕಾರದ ನೀತಿ ಆಯೋಗದ ಮುಖ್ಯಸ್ಥರು 2024 ಜನವರಿಯಲ್ಲಿ, ಅಂದರೆ 2024ರ ಲೋಕಸಭಾ ಚುನಾವಣೆಗೆ ಕೇವಲ ಕೆಲವು ತಿಂಗಳು ಮುಂಚೆ ಘೋಷಿಸಿದ್ದರು. ಅವರ ಪ್ರಕಾರ 2011-2022ರ ಅವಧಿಯಲ್ಲಿ ಭಾರತದ ಬಹುಆಯಾಮ ಬಡತನ ಸೂಚ್ಯಂಕ-Multi Dimensional Poverty Index-ಶೇ. 29ರಿಂದ ಶೇ.11ಕ್ಕೆ ಅಂದರೆ ಶೇ. 18ರಷ್ಟು ಇಳಿದುಬಿಟ್ಟಿದೆ. ಇದರ ಎಲ್ಲಾ ಶ್ರೇಯಸ್ಸು ಮೋದಿ ಸರಕಾರಕ್ಕೆ ದಕ್ಕಬೇಕು ಎಂದು ಘೋಷಿಸಿದ್ದರು. ಅದಾದ ಮರು ತಿಂಗಳಲ್ಲಿ, ಎಂದರೆ 2024ರ ಫೆಬ್ರವರಿಯಲ್ಲಿ ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಆರ್ಗನೈಸೇಶನ್ (ಎನ್‌ಎಸ್‌ಒ) ತಾನು 2022-23ರಲ್ಲಿ ನಡೆಸಿದ ಕುಟುಂಬವಾರು ಬಳಕೆ ವೆಚ್ಚ ಸರ್ವೇ (Household Consumption Expenditure Survey- HCES)-2022-23ರ ಸಮಗ್ರ ವರದಿಯನ್ನು ಪ್ರಕಟಿಸದೆ ಕೇವಲ ಕ್ರೋಡೀಕೃತ ಅಂಕಿಅಂಶಗಳನ್ನಷ್ಟೇ ಪ್ರಕಟಿಸಿತು. ಅದನ್ನು ಆಧರಿಸಿ ಮತ್ತೊಮ್ಮೆ ಸರಕಾರದ ನೀತಿ ಆಯೋಗದ ಮುಖ್ಯಸ್ಥ ಬಿ.ವಿ.ಆರ್. ಸುಬ್ರಹ್ಮಣ್ಯಂ ಅವರು ಭಾರತದಲ್ಲಿ ಬಡತನ ತೀವ್ರವಾಗಿ ಕುಸಿದಿದೆಯೆಂದೂ, ಈಗ ಭಾರತದಲ್ಲಿ ಬಡತನ ರೇಖೆಗಿಂತ ಕೆಳಗಿರುವರ ಸಂಖ್ಯೆ ಶೇ. 5ಕ್ಕಿಂತ ಕೆಳಗಿಳಿದೆಯೆಂದು ಘೋಷಿಸಿಬಿಟ್ಟರು. ಆದರೆ ಈ ಸುಳ್ಳು ಜನರು ಅನುಭವಿಸುತ್ತಿರುವ ಬಡತನದ ಸತ್ಯವನ್ನು ಮರೆಸುವಷ್ಟು ಭ್ರಾಮಕವಾಗಿರಲಿಲ್ಲವಾದ್ದರಿಂದ ಇದರ ಪ್ರಭಾವ 2024ರ ಚುನಾವಣೆಯ ಮೇಲೆ ಆಗಲಿಲ್ಲ.
ಇದೀಗ ಬಿಹಾರ ಚುನಾವಣೆಯು ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಭಾರತದಲ್ಲಿ ಮತ್ತೊಮ್ಮೆ ಪವಾಡ ಸದೃಶವಾಗಿ ಬಡವರು ಮಾಯವಾಗಿದ್ದಾರೆ.
ಬಡವರು ಹೆಚ್ಚುತ್ತಿದ್ದರೂ ಬಡತನ ಇಳಿಯುವ ಪವಾಡ!
ಇದು ನಿಜವೇ? ಒಂದು ಕಡೆ 2011ರಲ್ಲಿ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 122 ದೇಶಗಳಲ್ಲಿ ಭಾರತವು 67ನೇ ಸ್ಥಾನದಲ್ಲಿದ್ದರೆ, ಮೋದಿ ಕಾಲಘಟ್ಟದಲ್ಲಿ ಭಾರತವು 2016ರಲ್ಲಿ 97ಕ್ಕೆ ಕುಸಿದು 2024ರಲ್ಲಿ 105ನೇ ಸ್ಥಾನಕ್ಕೆ ಕುಸಿದಿದೆ. ಹಾಗಿದ್ದಲ್ಲಿ ಹಸಿವಿನ ಹೆಚ್ಚಳಕ್ಕೂ ಬಡತನಕ್ಕೂ ಸಂಬಂಧವೇ ಇಲ್ಲವೇ?
ಇದೇ ಮೋದಿ ಸರಕಾರ ಬೇರೆಬೇರೆ ಸಂದರ್ಭಗಳಲ್ಲಿ ನಡೆಸಿರುವ ಕಾರ್ಮಿಕರ ಕೂಲಿ-ಸಂಬಳ-ಆದಾಯಗಳ ಹೆಚ್ಚಳದ ಅಧ್ಯಯನದ ಪ್ರಕಾರ ಭಾರತದಲ್ಲಿ ಸ್ವ ಉದ್ಯೋಗ, ದಿನಗೂಲಿ ಹಾಗೂ ತಿಂಗಳ ಸಂಬಳ ಮಾಡುವ ಕಾರ್ಮಿಕರ ನೈಜ ವೇತನ ಹೆಚ್ಚಾಗುವುದಿರಲಿ ಸ್ಥಗಿತಗೊಂಡಿದೆ ಅಥವಾ ಕುಸಿದಿದೆ. ಆದರೆ ಮತ್ತೊಂದು ಕಡೆ 2011ಕ್ಕೆ ಹೋಲಿಸಿದಲ್ಲಿ ಹಣದುಬ್ಬರ ಆಕಾಶ ಮುಟ್ಟಿದೆ. ಎಂದರೆ 2010ರಲ್ಲಿ ನೂರು ರೂಪಾಯಿ ಕೂಲಿ ಪಡೆಯುತ್ತಿದ್ದವರಿಗೆ ಈಗ 300 ರೂ. ಸಿಗುತ್ತಿದ್ದರೂ, 2010ರಲ್ಲಿ ಖರೀದಿಸಬಹುದಾಗಿದ್ದಷ್ಟು ನಿತ್ಯಾವಶ್ಯಕತೆಗಳನ್ನು ಖರೀದಿಸಲು ಸಾಧ್ಯವಿಲ್ಲ. ಹಾಗಿದ್ದಲ್ಲಿ ಆದಾಯ ಸ್ಥಗಿತಗೊಂಡಿದ್ದರೂ ಬಡತನ ಕಡಿಮೆಯಾಗುವುದೇ?
ಸರಕಾರದ ಇತರ ಅಂಕಿಅಂಶಗಳೇ ಹೇಳುವಂತೆ, ಮೋದಿ ಸರಕಾರ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುವುದಿರಲಿ, ಇದ್ದ ಉದ್ಯೋಗಗಳನ್ನು ಕಸಿಯುತ್ತಿದೆ. ಖಾಸಗೀಕರಣದ ಮೂಲಕ, ಯಾಂತ್ರೀಕರಣದ ಮೂಲಕ, ಕೃಷಿಯ ಕಾರ್ಪೊರೇಟೀಕರಣದ ಮೂಲಕ. ಉದ್ಯೋಗವಿಲ್ಲದಿದ್ದರೂ, ಆದಾಯಗಳು ಸ್ಥಗಿತ ಅಥವಾ ಕಡಿಮೆಯಾಗಿದ್ದರೂ, ಬಡತನದ ದರ ಮತ್ತು ಬಡವರ ಪ್ರಮಾಣ ಮಾತ್ರ ಕುಸಿಯುವ ಪವಾಡ ಹೇಗೆ ಸಾಧ್ಯ?
ಈ ಕಣ್ಕಟ್ಟನ್ನು ಅರ್ಥ ಮಾಡಿಕೊಳ್ಳಬೇಕೆಂದರೆ ಭಾರತದಲ್ಲಿ ಬಡತನದ ರೇಖೆಯನ್ನು ಅಳೆಯುವ ಇತಿಹಾಸ ಮತ್ತು ಅಂಕಿಅಂಶಗಳನ್ನು ಒಂದಷ್ಟು ಅರಿಯುವ ಅಗತ್ಯವಿದೆ.
ಬಂಡವಾಳಶಾಹಿಯ ಪೋಷಣೆ ವರ್ಸಸ್ ಬಡತನದ ನಿವಾರಣೆ
ಅಸಲು ಬಡತನ ಎಂದರೇನು? ಬಡತನ ನಿವಾರಣೆ ಹೇಗೆ ಸಾಧ್ಯ?
ಬಡತನವೆಂಬುದು ಕೇವಲ ಹಸಿವಿನ ಪ್ರಶ್ನೆಯಲ್ಲ. ಹಸಿವನ್ನು ನೀಗಿಸಿಕೊಳ್ಳಲು ಬೇಕಾದ ಸಾಮರ್ಥ್ಯದ ಕೊರತೆ. ಬಡತನವನ್ನು ನೀಗಿಸಿಕೊಳ್ಳುವ ಸಾಮರ್ಥ್ಯವು ಆದಾಯವನ್ನು ಗಳಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಆದಾಯವನ್ನು ಗಳಿಸುವ ಸಾಮರ್ಥ್ಯವು ಸಂಪನ್ಮೂಲದ ಲಭ್ಯತೆ/ಒಡೆತನವನ್ನು ಆಧರಿಸಿರುತ್ತದೆ. ಹೀಗಾಗಿ ಸಾರದಲ್ಲಿ ಅದು ಭೌತಿಕ, ಸಾಂಸ್ಕೃತಿಕ ಮತ್ತು ಭೌತಿಕ ಬಂಡವಾಳ/ಸಂಪನ್ಮೂಲಗಳ ಮೇಲಿನ ಒಡೆತನದ ಪ್ರಶ್ನೆಯೇ ಆಗಿರುತ್ತದೆ.
ಬಡತನವನ್ನು ಸಾಮಾನ್ಯವಾಗಿAbsolute-ಬಡತನ (ಅಥವಾ ಅಮಾನವೀಯ ಬಡತನ ಎಂದು ಕರೆಯಬಹುದು) ಮತ್ತು Relative- ಸಾಪೇಕ್ಷ ಬಡತನ ಎಂದು ವರ್ಗೀಕರಿಸುತ್ತಾರೆ. ಅಮಾನವೀಯ ಬಡತನವೆಂದರೆ ಮನುಷ್ಯರು ಕನಿಷ್ಠ ಘನತೆಯಿಂದ ಬದುಕಲು ಬೇಕಾದ ಸೇವೆ ಮತ್ತು ಸರಕುಗಳನ್ನು ಗಳಿಸಲಾಗದ ಪರಿಸ್ಥಿತಿ ಎಂದು ವಿವರಿಸಲಾಗುತ್ತದೆ. ಸಾಪೇಕ್ಷ ಬಡತನವೆಂದರೆ ಒಂದು ದೇಶದಲ್ಲಿ ಆ ಕಾಲಘಟ್ಟದ ಸರಾಸರಿ ಜೀವನ ಮಟ್ಟಕ್ಕಿಂತ ಕಡಿಮೆ ಇರುವ ಸ್ಥಿತಿ. ಅಂದರೆ ಇವೆರಡೂ ಕೂಡ ಸಂಪನ್ಮೂಲಗಳ ಅಭಿವೃದ್ಧಿ ಮತ್ತು ಸಮಾನ ಹಂಚಿಕೆಯ ಪ್ರಶ್ನೆಯೇ ಆಗಿರುತ್ತದೆ. ಸಂಪನ್ಮೂಲಗಳನ್ನು ಜನರಲ್ಲಿ ಸಮಾನವಾಗಿ ಹಂಚಿಕೆ ಮಾಡುವಂತಹ ಮತ್ತು ಆ ಹಂಚಿಕೆಯನ್ನು ಆಧರಿಸಿ ಒಳಗೊಳ್ಳುವ ಆರ್ಥಿಕತೆ ಇದ್ದಾಗ ಅರ್ಥಾತ್ ಸಮಾಜವಾದಿ ವ್ಯವಸ್ಥೆ ಇದ್ದಾಗ ಅಮಾನವೀಯ ಬಡತನ ಮತ್ತು ಸಾಪೇಕ್ಷ ಬಡತನಗಳೆರಡೂ ಕಡಿಮೆಯಾಗುತ್ತಾ ಹೋಗುತ್ತದೆ. ಹಲವರಿಂದ ಕಸಿದು ಕೆಲವರು ಮಾತ್ರ ಬೆಳೆಯುವ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಅಭಿವೃದ್ಧಿಯ ಲಾಭಗಳು ಉಳ್ಳವರಿಂದ ತೊಟ್ಟಿಕ್ಕುತ್ತಾ ಇಲ್ಲದವರಿಗೆ ಹರಿಯುವ ಬಂಡವಾಳಶಾಹಿ ಬಡತನ ನಿವಾರಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ. 1991ರ ನಂತರದಲ್ಲಿ ಕಲ್ಯಾಣ ಪ್ರಭುತ್ವಗಳು ಜನಕಲ್ಯಾಣದ ಸೋಗನ್ನೂ ಕಳಚಿ ಸಂಪೂರ್ಣವಾಗಿ ಕಾರ್ಪೊರೇಟ್ ಲಾಭ ಗಳಿಕೆಯ ಸಾಧನವಾಗಿದೆ. ಲಾಭವನ್ನು ಮಾತ್ರ ಸೂರೆ ಹೊಡೆಯುವ ನವ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯಲ್ಲಿ ಆದಾಯ ಮತ್ತು ಅಭಿವೃದ್ಧಿಯು ತೊಟ್ಟಿಕ್ಕುವುದು ಕಡಿಮೆಯಾಗುತ್ತಾ, ಸಮಾಜದಲ್ಲಿ ಹಾಹಾಕಾರ ಹುಟ್ಟುಹಾಕುತ್ತಿದೆ. ಈ ಸಂದರ್ಭದಲ್ಲಿ ಮತ್ತೆ ಪ್ರಭುತ್ವಗಳೇ ಬಡತನದ ದಾರುಣತೆಯನ್ನು ಕಡಿಮೆ ಮಾಡುವ ಕೆಲವು ಸುರಕ್ಷಾ ಕ್ರಮಗಳನ್ನು-ಸೇಫ್ಟಿ ನೆಟ್- ಅನುಸರಿಸಲು ಪ್ರಾರಂಭಿಸಿದವು. ಅದೂ ಕೂಡ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗುತ್ತಾ ಇದೆ. ಇನ್ನು ಸಾಪೇಕ್ಷ ಬಡತನ ಅನಿವಾರ್ಯವೆಂದೇ ಎಲ್ಲಾ ಬಂಡವಾಳಶಾಹಿ ದೇಶಗಳು ಭಾವಿಸುತ್ತವೆ.
ಹೀಗಾಗಿ ಬಡತನ ನಿವಾರಣೆಯೆಂಬುದು ಹಸಿವು-ಆದಾಯಗಳ ಆರ್ಥಿಕ ಪ್ರಶ್ನೆಗಳಲ್ಲ. ಅದು ಯಾವ ಬಗೆಯ ರಾಜಕೀಯ ಆರ್ಥಿಕ ವ್ಯವಸ್ಥೆಯಲ್ಲಿದ್ದೇವೆ ಎಂಬ ರಾಜಕೀಯ-ತಾತ್ವಿಕ ಪ್ರಶ್ನೆಗಳು. ಆದ್ದರಿಂದ ಬಡತನವೂ ರಾಜಕೀಯ ಮತ್ತು ತಾತ್ವಿಕ ಪ್ರಶ್ನೆಯಾಗಿಯೇ ವಿಶ್ಲೇಷಿಸಬೇಕು. ಅದಕ್ಕೆ ಮಾನದಂಡ ನಿರ್ದಿಷ್ಟ ವ್ಯವಸ್ಥೆ ಸಮಾಜವಾದಿಯೋ ಅಥವಾ ಬಂಡವಾಳಶಾಹಿ ವ್ಯವಸ್ಥೆಯ ಮೃದು-ಉಗ್ರ ಸ್ವರೂಪಗಳೋ ಎಂಬುದು ಅತಿ ಮುಖ್ಯ.
ಭಾರತೀಯ ಬಡತನ - ಬಂಡವಾಳವಾದಿ ಉಗುಳು- ಸಮಾಜವಾದಿ ಬೊಗಳು
ಸ್ವಾತಂತ್ರ್ಯ ಹೋರಾಟದ ಕಾಲದಿಂದಲೂ ಭಾರತದ ಬಡತನವನ್ನು ಹೇಗೆ ನಿವಾರಿಸಬೇಕು ಮತ್ತು ಭಾರತದ ಬಡತನವನ್ನು ಹೇಗೆ ಮಾಪನ ಮಾಡಬೇಕು ಎಂಬ ಚರ್ಚೆ ನಡೆಯುತ್ತಾ ಬಂದಿದೆ. ದಾದಾಭಾಯಿ ನವರೋಜಿ ಅವರು 1901ರಲ್ಲಿ ತಮ್ಮ ‘Poverty and Un-British Rule in India’ ಎಂಬ ಪುಸ್ತಕದಲ್ಲಿ ಬಡವರು ಬದುಕುಳಿಯಲು ವರ್ಷಕ್ಕೆ ತಲಾವಾರು 6ರಿಂದ 35 ರೂ. ಅದಾಯದ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದರು. ನಂತರ ಸುಭಾಶ್ ಚಂದ್ರ ಬೋಸರು ಕಾಂಗ್ರೆಸ್ ಅಧ್ಯಕ್ಷರಾಗಿದ್ದಾಗ 1938ರಲ್ಲಿ ನೆಹರೂ ನೇತೃತ್ವದಲ್ಲಿ ರಚಿಸಿದ ಯೋಜನಾ ಆಯೋಗವು ಬಡತನ ರೇಖೆಯು ತಿಂಗಳಿಗೆ ರೂ. 15ರಿಂದ 25 ಎಂದು ಅಂದಾಜಿಸಿತ್ತು. ಇವೆರಡೂ ಕೂಡ ಅಮಾನವೀಯ ಬಡತನವನ್ನು ನಿವಾರಿಸುವ ಚಿಂತನೆಗಳ ಭಾಗವಾಗಿತ್ತೇ ವಿನಾ ಸಾಪೇಕ್ಷ ಬಡತನವನ್ನೂ ಅರ್ಥಾತ್ ಬಡತನದ ಮೂಲವಾದ ಸಂಪನ್ಮೂಲದ ಅಸಮಾನ ವಿತರಣೆಯ ರಾಜಕೀಯ ಪ್ರಶ್ನೆಯನ್ನು ತಮ್ಮ ರಾಜಕೀಯ ಆಯ್ಕೆಯ ಭಾಗವಾಗಿ ಕೈಬಿಟ್ಟಿದ್ದವು. ಇದಕ್ಕೆ ಕಮ್ಯುನಿಸ್ಟರು ಮತ್ತು ಅಂಬೇಡ್ಕರ್ ಅವರು ಮಾತ್ರ ಅಪವಾದವಾಗಿದ್ದರು.
ಸ್ವಾತಂತ್ರ್ಯೋತ್ತರ ಭಾರತವು ಕಲ್ಯಾಣದ ರಾಜ್ಯದ ಹೆಸರಿನಲ್ಲಿ ಅನುಸರಿಸಿದ್ದು ಬಂಡವಾಳಶಾಹಿ ಸಾರ ಮತ್ತು ಸಮಾಜವಾದಿ ಮಂತ್ರವಿರುವ ವ್ಯವಸ್ಥೆಯನ್ನೇ. ಆದ್ದರಿಂದಲೇ ಆಸ್ತಿ ಮಾಡುವ ಹಕ್ಕು ಮೂಲಭೂತ ಹಕ್ಕಾದರೂ ಭಾರತದ ಸಂವಿಧಾನದಲ್ಲಿ ಸಂಪನ್ಮೂಲ ವಿತರಣೆಯು ಮೂಲಭೂತ ಹಕ್ಕಾಗಲಿಲ್ಲ. ಇದರ ನಡುವೆಯೂ ಎಲ್ಲಾ ಸರಕಾರಗಳು ಬಡತನಕ್ಕೆ ಕಾರಣವಾದ ಊಳಿಗಮಾನ್ಯ ಮತ್ತು ಬಂಡವಾಳಶಾಹಿ ವ್ಯವಸ್ಥೆಯನ್ನು ಉಳಿಸಿಕೊಂಡೇ ಬಡತನದ ದಾರುಣತೆಯನ್ನು ಕಡಿಮೆ ಮಾಡಲು ಪ್ರಯತ್ನಗಳನ್ನು ಘೋಷಿಸಿದವು.
ಇಂತಹ ಯೋಜನೆಗಳು ಸಹಜವಾಗಿಯೇ ಅತ್ಯಲ್ಪ ಸಂಪನ್ಮೂಲವನ್ನು ಅತಿ ಅವಶ್ಯಕ ಜನರಿಗೆ ಮಾತ್ರ ವಿತರಿಸಬೇಕಾದ ಸ್ವರೂಪವನ್ನು ಹೊಂದಿದ್ದವು. ಹೀಗಾಗಿ ಬಡತನವನ್ನು ಬಡವರಲ್ಲದವರಿಂದ ಪ್ರತ್ಯೇಕಿಸುವ ಒಂದು ಬಡತನದ ರೇಖೆಯ ಅನ್ವೇಷಣೆ ಅತ್ಯಗತ್ಯವಾಯಿತು. ಸಾಮಾನ್ಯವಾಗಿ ಇದನ್ನು ನಿಗದಿ ಮಾಡಲು ರಚಿಸಲಾದ ಎಲ್ಲಾ ಸಮಿತಿಗಳು ಮನುಷ್ಯ ಜೀವದೊಂದಿಗೆ ಉಳಿಯಲು ಬೇಕಾದ ಶಕ್ತಿಯನ್ನು ಪೂರೈಸುವ ಆಹಾರವನ್ನು ಗಳಿಸಿಕೊಳ್ಳಲು ಬೇಕಾದಷ್ಟು ಆದಾಯವಿದೆಯೇ ಎಂಬುದನ್ನು ಮಾತ್ರ ಪರಿಗಣಿಸಿತು.
ಬಡತನ ರೇಖೆ-ಬದುಕುಳಿಯಲು ಎಷ್ಟು ವೆಚ್ಚ ಮಾಡಬೇಕು?
1962ರಿಂದಲೂ ಭಾರತದ ಯೋಜನ ಅಯೋಗವು ಭಾರತದ ಬಡತನದ ಲಕ್ಷಣ ರೇಖೆಯನ್ನು ಕಾಲಕಾಲಕ್ಕೆ ನಿಗದಿ ಮಾಡುತ್ತಿದೆ. ಇದರಲ್ಲಿ 1972ರ ದಾಂಡೇಕರ್ ಸಮಿತಿ, 1979ರ ಅಲಘ್ ಸಮಿತಿಗಳು ಬಡವರು ಬದುಕುಳಿಯಲು ಬೇಕಿರುವ 2,250 ಕ್ಯಾಲರಿ ಶಕ್ತಿಯನ್ನು ಗಳಿಸಿಕೊಳ್ಳಲು ಬೇಕಾದ ವೆಚ್ಚವನ್ನು ಆಧರಿಸಿ ಬಡತನ ರೇಖೆಯನ್ನು ನಿಗದಿ ಪಡಿಸಿದ್ದವು. 1993ರಲ್ಲಿ ಲಕ್ಡಾವಾಲ ಸಮಿತಿಯು ಬಡವರು ಬದುಕುಳಿಯಲು ಬೇಕಾದ ಸರಕುಗಳ ಬಾಸ್ಕೆಟ್‌ನಲ್ಲಿ ಇನ್ನಷ್ಟು ಸರಕುಗಳನ್ನು ಸೇರಿಸಿ ಗ್ರಾಹಕ ಸೂಚ್ಯಂಕದ ಆಧಾರದಲ್ಲಿ ವೆಚ್ಚವನ್ನು ಅಳೆಯಬೇಕೆಂದು ಸಲಹೆ ಮಾಡಿತು.
2005ರಲ್ಲಿ ತೆಂಡುಲ್ಕರ್ ಸಮಿತಿ ಜನರ ಬದಲಾದ ಬಳಕೆ ಪ್ರವೃತ್ತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಹಣದುಬ್ಬರವನ್ನು ಗಮನದಲ್ಲಿಟ್ಟುಕೊಂಡಿತು. ಅದರ ಜೊತೆಗೆ ಶಿಕ್ಷಣ ಮತ್ತು ಆರೋಗ್ಯಕ್ಕೆ ಮಾಡಬೇಕಾದ ಖಾಸಗಿ ವೆಚ್ಚವನ್ನು ಸೇರಿಸಿತು. ಇವೆಲ್ಲವನ್ನೂ ಒಟ್ಟು ಮಾಡಿ 2006ರಲ್ಲಿ ತೆಂಡುಲ್ಕರ್ ಸಮಿತಿಯು ಹಳ್ಳಿಗಳಲ್ಲಿ ತಿಂಗಳಿಗೆ 446 ರೂ. ಮತ್ತು ನಗರಗಳಲ್ಲಿ 578 ರೂ.ಗಳನ್ನು ಬಡತನ ರೇಖೆಯೆಂದು ತೀರ್ಮಾನಿಸಿತು. ಅಂದರೆ ದಿನಕ್ಕೆ ಸರಾಸರಿ, ಅವತ್ತಿನ ದರಗಳಲ್ಲಿ 20 ರೂ. ಆವತ್ತಿನಿಂದ ಇತ್ತೀಚಿನವರೆಗೆ ಅದನ್ನೇ ಬಡತನದ ಪ್ರಮಾಣವನ್ನು ಅಳೆಯಲು ಬಳಸಿಕೊಳ್ಳಲಾಗಿತ್ತು. ಆದರೆ ತೆಂಡುಲ್ಕರ್ ನಿಗದಿ ಪಡಿಸಿದ ಮಾನದಂಡಗಳ ಬಗ್ಗೆ ಅತಿಯಾದ ವಿಮರ್ಶೆ ಬಂದಾಗ ರಂಗರಾಜನ್ ಸಮಿತಿಯನ್ನು ನೇಮಿಸಲಾಯಿತು. ಅದು ಹಳ್ಳಿಗಳಲ್ಲಿ ಪ್ರತೀ ದಿನ 32 ರೂ. ವೆಚ್ಚವನ್ನು ಮತ್ತು ನಗರಗಳಲ್ಲಿ ಪ್ರತೀ ದಿನ 47 ರೂ. ವೆಚ್ಚವನ್ನು ಬಡತನ ರೇಖೆಯೆಂದು ತೀರ್ಮಾನಿಸಿತು. ಇದರಿಂದಾಗಿ ಭಾರತದಲ್ಲಿ ಬಡತನದ ಪ್ರಮಾಣವು ತೆಂಡುಲ್ಕರ್ ವರದಿಯನ್ನು ಆಧರಿಸಿ ಮಾಡಿದ ಪ್ರಮಾಣಕ್ಕಿಂತ ಶೇ. 15ರಷ್ಟು ಹೆಚ್ಚಿದೆಯೆಂದು ಸಾಬೀತಾಯಿತು. ಉದಾಹರಣೆಗೆ 2011ರಲ್ಲಿ ತೆಂಡುಲ್ಕರ್ ವರದಿಯ ಪ್ರಕಾರ ಭಾರತದ ಬಡವರ ಪ್ರಮಾಣ ಶೇ. 22 ಆಗುತ್ತದೆ. ಆದರೆ ರಂಗರಾಜನ್ ವರದಿ ಅನುಸರಿಸಿದರೆ ಶೇ. 30 ಆಗುತ್ತದೆ. ಆದರೆ ರಂಗರಾಜನ್ ಮಾನದಂಡಗಳನ್ನು ಸರಕಾರ ಅನುಸರಿಸುತ್ತಿಲ್ಲ.