ಸಾಮಂತರಾಗಿ ಅಥವಾ ಸರ್ವನಾಶವಾಗಿ!: ನವ ಹಿಟ್ಲರ್ ಟ್ರಂಪ್‌ನ ಹೊಸ ಯುದ್ಧ ಘೋಷಣೆಯೇ?

ಟ್ರಂಪ್ ಹೇಳುತ್ತಿರುವಂತೆ ವೆನೆಝುವೆಲಾದಲ್ಲಿ ಅತ್ಯಂತ ಮಾರಕವಾದ Fentanyl ಮಾದಕ ಡ್ರಗ್ಸ್ ಉತ್ಪಾದಿಸುತ್ತಿತ್ತೇ? ಈವರೆಗೆ ಅಮೆರಿಕ ಅದಕ್ಕೆ ಯಾವುದೇ ಸಾಕ್ಷಿ ನೀಡಿಲ್ಲ ಅಥವಾ ಟ್ರಂಪ್ ಹೇಳುವಂತೆ ಮಡುರೊ ಅವರು ‘ಟ್ರೆನ್ ಡಿ ಆರಗುವ’ ಎಂಬ ಗ್ಯಾಂಗ್ ನಡೆಸುತ್ತಿದ್ದರೆ? ಅದನ್ನು ಅಮೆರಿಕದ ಜಸ್ಟೀಸ್ ಇಲಾಖೆ ಈವರೆಗೆ ಹೆಸರಿಸಿಲ್ಲ ಅಥವಾ ಅಮೆರಿಕ ಹೇಳುವಂತೆ ಮಡುರೊ ಅವರು ‘ಡಿ ಲೋಸ್ ಸೋಲೆಸ್’ ಎಂಬ ಕಾರ್ಟೆಲ್ ನಡೆಸುತ್ತಿದ್ದರೆ? ಅಂಥ ಒಂದು ಕಾರ್ಟೆಲ್ ಅಸ್ತಿತ್ವದಲ್ಲೇ ಇಲ್ಲವೆಂದು ಡ್ರಗ್ ಮಾರ್ಕೆಟ್ ಪಂಡಿತರು ಜಾಗತಿಕ ಮಾಧ್ಯಮಗಳೆದುರು ಹೇಳಿದ್ದಾರೆ.
ಹೊಸ ವರ್ಷ ಪ್ರಾರಂಭವಾಗುತ್ತಿದ್ದಂತೆ ಟ್ರಂಪ್ ನೇತೃತ್ವದ ಸಾಮ್ರಾಜ್ಯಶಾಹಿ ಅಮೆರಿಕ ಜಗತ್ತಿನ ಮೇಲೆ ತನ್ನ ಆಕ್ರಮಣವನ್ನು ಪ್ರಾರಂಭಿಸಿದೆ. ಜನವರಿ 3ರ ಮಧ್ಯರಾತ್ರಿ ಸ್ವತಂತ್ರ ಸಾರ್ವಭೌಮಿ ದೇಶವಾಗಿರುವ ವೆನೆಝುವೆಲಾ ದೇಶದ ಮೇಲೆ ಬಾಂಬ್ ದಾಳಿಗಳನ್ನು ನಡೆಸಿ ಅದರ ಚುನಾಯಿತ ಅಧ್ಯಕ್ಷ, ಯುನೈಟೆಡ್ ಸೋಷಿಯಲಿಸ್ಟ್ ಪಾರ್ಟಿ ಆಫ್ ವೆನೆಝುವೆಲಾದ ನಿಕೋಲಸ್ ಮಡುರೊ ಮತ್ತವರ ಮಡದಿ ಸಿಲಿಯಾ ಫ್ಲೋರ್ಸ್ ಅವರನ್ನು ಅಮೆರಿಕಕ್ಕೆ ಹೊತ್ತೊಯ್ದಿದೆ.
ಅಮೆರಿಕದ ಈ ಕ್ರಮವು ವಿಶ್ವಸಂಸ್ಥೆಯ ಆರ್ಟಿಕಲ್ 2ರ ಸ್ಪಷ್ಟ ಉಲ್ಲಂಘನೆಯಾಗಿದ್ದರೂ ವಿಶ್ವಸಂಸ್ಥೆ ಮಾಮೂಲಿ ಖಂಡನಾ ಹೇಳಿಕೆಯನ್ನು ಬಿಟ್ಟು ಯಾವುದೇ ಕ್ರಮ ತೆಗೆದುಕೊಳ್ಳಲು ಮುಂದಾಗಿಲ್ಲ. ಅದು ಸಾಧ್ಯವೂ ಇಲ್ಲ. ಏಕೆಂದರೆ ವಿಶ್ವಸಂಸ್ಥೆಯ ಭದ್ರತಾ ಮಂಡಲಿಯ ಶಾಶ್ವತ ಸದಸ್ಯನಾಗಿರುವ ಅಮೆರಿಕ ಯಾವುದೇ ನಿರ್ಧಾರವನ್ನು ವೀಟೊ ಮಾಡಿ ತಿರಸ್ಕರಿಸುವ ಅಧಿಕಾರವನ್ನು ಹೊಂದಿದೆ ಹಾಗೂ ವಿಶ್ವಸಂಸ್ಥೆಯನ್ನೇ ಬೀದಿಪಾಲು ಮಾಡುವಷ್ಟು ರಾಜಕೀಯ, ಸೈನಿಕ ಮತ್ತು ಹಣಕಾಸು ಅಧಿಕಾರವನ್ನು ಹೊಂದಿದೆ ಹಾಗೂ ‘‘ಅಮೆರಿಕದ ಹಿತಾಸಕ್ತಿಯು ಜಗತ್ತಿನ ಯಾವುದೇ ಹಿತಾಸಕ್ತಿಗಿಂತ ಮುಖ್ಯ’’ ಎಂದು ಘಂಟಾಘೋಷವಾಗಿ ಘೋಷಿಸಿದೆ. ಉಳಿದ ದೇಶಗಳಿಗೆ ಮಾತ್ರ ಜಾಗತಿಕ ಹಿತಾಸಕ್ತಿ ಮತ್ತು ಪ್ರಜಾತಂತ್ರದ ಪಾಠ ಮಾಡುತ್ತಿದೆ.
ಮಡುರೊ ಅವರನ್ನು ಸೆರೆಹಿಡಿದ ನಂತರ ಟ್ರಂಪ್ ವೆನೆಝುವೆಲಾದಲ್ಲಿ ‘ಒಳ್ಳೆಯ ಸರಕಾರ ಅಧಿಕಾರಕ್ಕೆ ಬರುವವರೆಗೆ ತಾವೇ ವೆನೆಝುವೆಲಾದ ಆಡಳಿತ ನಡೆಸುವುದಾಗಿ’ ಘೋಷಿಸಿದ್ದಾರೆ. ಇದು ಅದರ ಸಾಮ್ರಾಜ್ಯಶಾಹಿ ದುರಹಂಕಾರದ ಪರಮಾವಧಿಯಾಗಿದೆ ಮಾತ್ರವಲ್ಲ. ನಾವು ಎಂತಹ ರಾಜಕೀಯ ಸಂದರ್ಭದಲ್ಲಿ ಬದುಕುತ್ತಿದ್ದೇವೆ ಎಂಬುದಕ್ಕೂ ಪುರಾವೆಯಾಗಿದೆ. ಒಳ್ಳೆಯ ಸರಕಾರ ಎಂದರೆ ಅಮೆರಿಕದ ಗುಲಾಮಿ ಮಾಡುವ ಸರಕಾರ ಎಂದೇ ಅರ್ಥ.
ಮಡುರೊ ಬಂಧನಕ್ಕೆ ಡ್ರಗ್ಸ್ ಕಾರ್ಟೆಲ್ ಸಂಬಂಧ ಕಾರಣವೇ?
ಅಸಲು ಅಮೆರಿಕ ಈ ಕಾರ್ಯಾಚರಣೆ ಮಾಡಿದ್ದಕ್ಕೆ ಕಾರಣವೇನು?
ಟ್ರಂಪ್ ಹೇಳುತ್ತಿರುವಂತೆ ವೆನೆಝುವೆಲಾದಲ್ಲಿ ಅತ್ಯಂತ ಮಾರಕವಾದ Fentanyl ಮಾದಕ ಡ್ರಗ್ಸ್ ಉತ್ಪಾದಿಸುತ್ತಿತ್ತೇ? ಈವರೆಗೆ ಅಮೆರಿಕ ಅದಕ್ಕೆ ಯಾವುದೇ ಸಾಕ್ಷಿ ನೀಡಿಲ್ಲ ಅಥವಾ ಟ್ರಂಪ್ ಹೇಳುವಂತೆ ಮಡುರೊ ಅವರು ‘ಟ್ರೆನ್ ಡಿ ಆರಗುವ’ ಎಂಬ ಗ್ಯಾಂಗ್ ನಡೆಸುತ್ತಿದ್ದರೆ? ಅದನ್ನು ಅಮೆರಿಕದ ಜಸ್ಟೀಸ್ ಇಲಾಖೆ ಈವರೆಗೆ ಹೆಸರಿಸಿಲ್ಲ ಅಥವಾ ಅಮೆರಿಕ ಹೇಳುವಂತೆ ಮಡುರೊ ಅವರು ‘ಡಿ ಲೋಸ್ ಸೋಲೆಸ್’ ಎಂಬ ಕಾರ್ಟೆಲ್ ನಡೆಸುತ್ತಿದ್ದರೆ? ಅಂಥ ಒಂದು ಕಾರ್ಟೆಲ್ ಅಸ್ತಿತ್ವದಲ್ಲೇ ಇಲ್ಲವೆಂದು ಡ್ರಗ್ ಮಾರ್ಕೆಟ್ ಪಂಡಿತರು ಜಾಗತಿಕ ಮಾಧ್ಯಮಗಳೆದುರು ಹೇಳಿದ್ದಾರೆ.
ಹಾಗಿದ್ದಲ್ಲಿ ಬೇರೇನು ಕಾರಣ? ಡ್ರಗ್ಸ್ ಅನ್ನು ಮಟ್ಟಹಾಕಬೇಕು ಮತ್ತು ಅದರ ಅಂತರ್‌ರಾಷ್ಟ್ರೀಯ ವ್ಯವಹಾರ ನಿಲ್ಲಿಸಬೇಕು ಎಂಬ ಸದುದ್ದೇಶದ ಅತ್ಯುತ್ಸಾಹವೇ? ಅಸಲು ಡ್ರಗ್ಸ್ ನಿಯಂತ್ರಣ ಮಾಡಬೇಕೆಂಬ ಉದ್ದೇಶವಾದರೂ ಅಮೆರಿಕಕ್ಕೆ ಇತ್ತೇ? ಇದೆಯೇ?
ಅಮೆರಿಕದ ಅದರಲ್ಲೂ ಟ್ರಂಪ್‌ನ ಇತಿಹಾಸ ಗಮನಿಸಿದ ಯಾರಿಗೂ ಅಮೆರಿಕಕ್ಕೆ ಡ್ರಗ್ಸ್ ನಿಯಂತ್ರಣ ಮಾಡಬೇಕೆಂಬ ಉದ್ದೇಶವಿದೆ ಎಂದು ಅನಿಸಲು ಕಾರಣವೇ ಇಲ್ಲ. ಒಂದೆರಡು ಉದಾಹರಣೆಗಳನ್ನು ನೋಡೋಣ.
ಬಿನ್ ಲಾದೆನ್‌ಗೆ ಆಶ್ರಯ ಕೊಟ್ಟ ಕಾರಣಕ್ಕೆ ತಾಲಿಬಾನೀಯರ ಆಡಳಿತದಡಿಯಲ್ಲಿದ್ದ ಅಫ್ಘಾನಿಸ್ತಾನವನ್ನು ಅಮೆರಿಕ 2001ರಲ್ಲಿ ಆಕ್ರಮಿಸಿತು. ತಾಲಿಬಾನ್ ಆಡಳಿತವನ್ನು ಕಿತ್ತೊಗೆದು ಅಮೆರಿಕ ಸ್ನೇಹಿ ಸರಕಾರವನ್ನು ಸ್ಥಾಪಿಸಲು ಸಹಾಯ ಮಾಡುವ ನೆಪದಲ್ಲಿ 2001-2021ರ ತನಕ ಅಫ್ಘಾನಿಸ್ತಾನವನ್ನು ಆಕ್ರಮಿಸಿಕೊಂಡಿತ್ತು. ಅಮೆರಿಕದ ಪ್ರಕಾರ ತಾಲಿಬಾನಿಯರ ಅಫ್ಘಾನಿಸ್ತಾನ ಮಾದಕ ವಸ್ತುಗಳ ಬೃಹತ್ ಉತ್ಪಾದಕ.
ಹಾಗಿದ್ದಲ್ಲಿ 2001-2021ರ ನಡುವಿನ ಇಪ್ಪತ್ತು ವರ್ಷಗಳಲ್ಲಿ ಅಮೆರಿಕ ಈ ಮಾದಕ ಉತ್ಪಾದಕ ವ್ಯವಸ್ಥೆಯನ್ನು ನಾಶಗೊಳಿಸಿತೇ? ಇಲ್ಲವೇ ಇಲ್ಲ. ಬದಲಿಗೆ ಅದನ್ನು ಹೆಚ್ಚು ಮಾಡಿತು. ಹಾಗೆ ನೋಡಿದರೆ ಆ ಇಪ್ಪತ್ತು ವರ್ಷಗಳಲ್ಲಿ ಅಲ್ಲಿ ಬೃಹತ್ ಡ್ರಗ್ ಕಾರ್ಟೆಲ್‌ಗಳನ್ನು ನಡೆಸಿದ್ದೇ ಅಮೆರಿಕ. ಅದರ ಆರ್ಥಿಕ ಫಲಾನುಭವಿಗಳಲ್ಲಿ ಅಮೆರಿಕದ ಉನ್ನತ ಸೇನಾಧಿಕಾರಿಗಳು, ಡೆಮಾಕ್ರಟ್‌ಗಳು ಮತ್ತು ರಿಪಬ್ಲಿಕನ್ನರು, ಉದ್ಯಮಿಗಳು ಇದ್ದಾರೆ... ಅಂತಿಮವಾಗಿ ಅಮೆರಿಕ ಅದೇ ತಾಲಿಬಾನಿಗಳಿಗೆ ಆಡಳಿತ ಹಸ್ತಾಂತರ ಮಾಡಿ ಹಿಂದೆಗೆಯಿತು.
ಇದೇ ಟ್ರಂಪ್ ಸರಕಾರ ಡ್ರಗ್ ಮಾಫಿಯಾ ಶಿಕ್ಷಿತ ಅಪರಾಧಿ ಹೊಂಡುರಾಸ್‌ನ ಮಾಜಿ ಅಧ್ಯಕ್ಷ ಹೆರ್ನಾಂಡಿಝ್‌ನ್ನು ಅಪ್ಪಿಕೊಂಡಿರುವ ರೀತಿಯನ್ನು ನೋಡಿದರೆ ಡ್ರಗ್ಸ್ ನಿಯಂತ್ರಣದ ಬಗ್ಗೆ ಅಮೆರಿಕದ ಸೋಗಲಾಡಿ ಹುಸಿ ನೀತಿ ಇನ್ನಷ್ಟು ಸ್ಪಷ್ಟವಾಗುತ್ತದೆ.
ಮಡುರೊಗೆ ಬಂಧನ-ಹೊಂಡುರಾಸ್ ಅಧ್ಯಕ್ಷನಿಗೆ ಕ್ಷಮಾದಾನ!
ವೆನೆಝುವೆಲಾದ ಅಧ್ಯಕ್ಷ ಮಡುರೊ ಅವರನ್ನು ಪದಚ್ಯುತಗೊಳಿಸಿ ಬಂಧಿಸಿರುವುದಕ್ಕೆ ಅಮೆರಿಕ ಕೊಡುತ್ತಿರುವ ಕಾರಣವೇನು?
ಅಧ್ಯಕ್ಷ ಮಡುರೊ ಅವರು ಅಮೆರಿಕದೊಳಗೂ ಕಾರ್ಯಾಚರಣೆ ಮಾಡುತ್ತಿದ್ದ ಅಂತರ್‌ರಾಷ್ಟ್ರೀಯ ಡ್ರಗ್ ಕಾರ್ಟೆಲ್ ಒಂದನ್ನು ಪೋಷಿಸುತ್ತಿದ್ದರು. ಅದು ಅಮೆರಿಕದ ರಾಷ್ಟ್ರೀಯ ಭದ್ರತೆಗೆ ಆತಂಕ ಕಾರಿಯಾಗಿದ್ದರಿಂದ ಅವರನ್ನು ಪದಚ್ಯುತಗೊಳಿಸಿ ಅಮೆರಿಕದಲ್ಲಿ ವಿಚಾರಣೆ ಎದುರಿಸಲು ಕರೆತರಲಾಗಿದೆ ಎಂದು ಟ್ರಂಪ್ ಸಬೂಬು ನೀಡುತ್ತಿದ್ದಾರೆ.
ಆದರೆ ಡ್ರಗ್ ಕಾರ್ಟೆಲ್‌ಗಳನ್ನು ತಡೆಯುವುದೇ ಟ್ರಂಪ್ ಕಾರ್ಯಾಚರಣೆಯ ಉದ್ದೇಶವಾಗಿದ್ದರೆ ಇದೇ ಕಾರಣದಿಂದ ಬಂಧಿಸಲ್ಪಟ್ಟಿದ್ದ, ಅಪರಾಧಿ ಎಂದು ಸಾಬೀತಾಗಿ ಅಮೆರಿಕದ ನ್ಯಾಯಾಲಯದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಹೊಂಡುರಾಸ್‌ನ ಮಾಜಿ ಅಧ್ಯಕ್ಷ ಜುವಾನ್ ಒರ್ಲ್ಯಾಂಡೊ ಹೆರ್ನಾಂಡಿಝ್ ಅವರನ್ನು ಅಧ್ಯಕ್ಷ ಟ್ರಂಪ್ ಕ್ಷಮಾದಾನ ಕೊಟ್ಟು ಬಿಡುಗಡೆ ಮಾಡಿದ್ದೇಕೆ?
ಜುವಾನ್ ಒರ್ಲ್ಯಾಂಡೊ ಹೆರ್ನಾಂಡಿಝ್ ಅವರು 2014-2022ರ ತನಕ ಎರಡು ಬಾರಿ ಹೊಂಡುರಾಸ್‌ನ ಅಧ್ಯಕ್ಷರಾಗಿದ್ದರು. ಎರಡನೇ ಬಾರಿ ಅಧ್ಯಕ್ಷರಾದಾಗ ಅವರ ಮೇಲೆ ಡ್ರಗ್ ಕಾರ್ಟೆಲ್‌ಗಳಿಗೆ ಪೋಷಣೆ ಮಾಡುತ್ತಿರುವ ಬಗ್ಗೆ ಗಂಭೀರವಾದ ಆರೋಪ ಬಂದಿತ್ತು. ಅದೇ ಕಾರಣಕ್ಕೆ 2021ರಲ್ಲಿ ಅಮೆರಿಕ ಅವರ ವೀಸಾವನ್ನು ರದ್ದು ಮಾಡಿತು. 2022ರ ಫೆಬ್ರವರಿಯಲ್ಲಿ ಅಮೆರಿಕ ಅದೇ ಕಾರಣಕ್ಕಾಗಿ ಆತನನ್ನು ತನ್ನ ದೇಶದಲ್ಲಿ ವಿಚಾರಣೆ ಎದುರಿಸಲು ಹಸ್ತಾಂತರಿಸಬೇಕೆಂದು ಒತ್ತಡ ಹೇರಿದರು. 2022 ಎಪ್ರಿಲ್‌ನಲ್ಲಿ ಹೊಂಡುರಾಸ್‌ನ ಈ ಮಾಜಿ ಅಧ್ಯಕ್ಷ ಅಮೆರಿಕಕ್ಕೆ ಹಸ್ತಾಂತರಗೊಂಡರು. 2024ರ ಜೂನ್‌ನಲ್ಲಿ ವಿಚಾರಣೆ ಮುಗಿದು ಆತನ ಅಪರಾಧಗಳು ಸಾಬೀತಾಯಿತು ಮತ್ತು ಅಮೆರಿಕದ ನ್ಯಾಯಾಲಯ ಆತನಿಗೆ 45 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ವಿಧಿಸಿತು.
ಆದರೆ ಈ ಕಥೆಯಲ್ಲಿ ದೊಡ್ಡ ತಿರುವು ಬಂದದ್ದು 2025ರ ಜನವರಿಯಲ್ಲಿ ಟ್ರಂಪ್ ಅಮೆರಿಕದ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ಮೇಲೆ.
ಡ್ರಗ್ ಕಾರ್ಟೆಲ್‌ಗಳ ಮೇಲೆ ಯುದ್ಧ ಸಾರಿರುವೆ ಎಂದು ಕೊಚ್ಚಿಕೊಳ್ಳುವ ಈ ಟ್ರಂಪ್ 2025ರ ಡಿಸೆಂಬರ್ 2ರಂದು ಡ್ರಗ್ ವ್ಯಾಪಾರದ ಪೋಷಣೆಯ ಅಪರಾಧ ಸಾಬೀತಾಗಿ ಶಿಕ್ಷೆ ಅನುಭವಿಸುತ್ತಿದ್ದ ಹೊಂಡುರಾಸ್ ಅಧ್ಯಕ್ಷ ಹೆರ್ನಾಂಡಿಝ್‌ಗೆ ಸಂಪೂರ್ಣ ಕ್ಷಮಾದಾನ ಕೊಟ್ಟು ಬಿಡುಗಡೆ ಮಾಡುತ್ತಾರೆ ಮತ್ತು ಅದಕ್ಕೆ ಪ್ರಧಾನ ಕಾರಣ ಹೊಂಡುರಾಸ್‌ನಲ್ಲಿ ಅಮೆರಿಕ ಪರವಾದ ಬಲಪಂಥೀಯ ಸರಕಾರ ಚುನಾವಣೆಯಲ್ಲಿ ಗೆಲ್ಲುವ ಅವಕಾಶಗಳಿರುವಾಗ ಹೆರ್ನಾಂಡಿಝ್‌ಗೆ ಮತ್ತೊಮ್ಮೆ ಜನಸೇವೆಗೆ ಅವಕಾಶ ಕಲ್ಪಿಸಿಕೊಡುವುದಂತೆ!
ಇದರ ಹಿಂದೆ ಏನೆಲ್ಲಾ ಒಪ್ಪಂದಗಳು ಆಗಿರಬಹುದೆಂಬುದು ಯಾರು ಬೇಕಾದರೂ ಊಹೆ ಮಾಡಿರಬಹುದು. ಹಾಗೆಯೇ ಹೊಂಡುರಾಸ್‌ನ ಭವಿಷ್ಯವನ್ನು.
ಅದೇನೇ ಇರಲಿ ಈ ಉದಾಹರಣೆಯು ವೆನೆಝುವೆಲಾದ ಅಧ್ಯಕ್ಷ ಮಡುರೊ ಅವರನ್ನು ಬಂಧಿಸಿರುವುದು ಡ್ರಗ್ ಕಾರಣಕ್ಕಂತೂ ಅಲ್ಲವೇ ಅಲ್ಲ ಎಂಬುದನ್ನು ಸ್ಪಷ್ಟವಾಗಿ ಸಾಬೀತು ಮಾಡುತ್ತದೆ.
ಮಡುರೊ ಬಂಧನ: ಸಾಮ್ರಾಜ್ಯಶಾಹಿ ಆರ್ಥಿಕ, ರಾಜಕೀಯ ಹಿತಾಸಕ್ತಿ
ಹಾಗಿದ್ದಲ್ಲಿ ಟ್ರಂಪ್ ವೆನೆಝುವೆಲಾದ ಮೇಲೆ ದಾಳಿ ಮಾಡಿ ಅದರ ಅಧ್ಯಕ್ಷನನ್ನು ಅಮೆರಿಕಕ್ಕೆ ಸಾಗ ಹಾಕಿದ್ದೇಕೆ?
ಅದಕ್ಕೆ ಸ್ಪಷ್ಟ ಕಾರಣವನ್ನು ಸ್ವಯಂ ಟ್ರಂಪ್ ಮಹಾಶಯರೇ ಪರೋಕ್ಷವಾಗಿ ನೀಡುತ್ತಾ ಬಂದಿದ್ದಾರೆ. ತುತ್ತೂರಿ ಮಾಧ್ಯಮಗಳಿಗೆ ಅದು ಕಾಣಬೇಕಷ್ಟೇ. ಉದಾಹರಣೆಗೆ ಕೆಲವೇ ದಿನಗಳ ಹಿಂದೆ ಡಿಸೆಂಬರ್ 15ರಂದು ಟ್ರಂಪ್ ತಮ್ಮ ಒಂದು ಟ್ವೀಟ್‌ನಲ್ಲಿ:
‘‘ವೆನೆಝುವೆಲಾ ಅಮೆರಿಕಕ್ಕೆ ಸೇರಿದ್ದ ಭೂಮಿ ಮತ್ತು ತೈಲವನ್ನು ಹಿಡಿದುಕೊಂಡಿದೆ. ನಾವು ಮಡುರೊ ಅವರನ್ನು ಪದಚ್ಯುತಗೊಳಿಸಿ ನಮ್ಮ ಸಂಪತ್ತನ್ನು ನಾವು ಮರಳಿ ಪಡೆಯುತ್ತೇವೆ. ಅದಕ್ಕಾಗಿ ಇಂದಿನಿಂದ ವೆನೆಝುವೆಲಾ ತೈಲ ಸಾಗಾಟದ ಮೇಲೆ ಸಂಪೂರ್ಣ ದಿಗ್ಬಂಧನ ವಿಧಿಸಿಸುತ್ತಿದ್ದೇವೆ’’ ಎಂದು ತನ್ನ ಸಾಮ್ರಾಜ್ಯಶಾಹಿ ಪಿಪಾಸೆಯನ್ನು ಅತ್ಯಂತ ಸ್ಪಷ್ಟವಾಗಿ ಘೋಷಿಸಿಕೊಂಡಿದ್ದರು.
(https://x.com/marcorubio/status/2001084013050548470/photo/1)
ಹೀಗಾಗಿ ತಾನು ಯುದ್ಧ ನಿಲ್ಲಿಸುವ ಶಾಂತಿದೂತ ಎಂಬ ಟ್ರಂಪ್‌ನ ಹೇಳಿಕೆ ಎಷ್ಟು ಹಾಸ್ಯಾಸ್ಪದವೋ, ವೆನೆಝುವೆಲಾದಲ್ಲಿ ಪ್ರಜಾತಂತ್ರ ಸ್ಥಾಪಿಸಲು ಆ ದೇಶದ ಅಧ್ಯಕ್ಷರನ್ನು ಬಂಧಿಸಲಾಯಿತು ಎಂಬ ಹೇಳಿಕೆಯೂ ಅದಕ್ಕಿಂತ ಹೆಚ್ಚು ಹಾಸ್ಯಾಸ್ಪದ. ಇದನ್ನು ಸ್ವಸ್ಥ ಮನಸ್ಸಿನ ಅಮೆರಿಕನ್ನರೇ ನಂಬುವುದಿಲ್ಲ.
ವೆನೆಝುವೆಲಾ ದೇಶವು ಸ್ಪೇನ್ ವಸಾಹತುಶಾಹಿಗಳಿಂದ ಬಿಡುಗಡೆಯಾದ ಮೇಲೆ ಅಮೆರಿಕನ್ ಸಾಮ್ರಾಜ್ಯಶಾಹಿಗಳ ನವವಸಾಹತುಶಾಹಿ ಶೋಷಣೆಗೆ ಒಳಪಟ್ಟಿತು. ಅಮೆರಿಕ ವೆನೆಝುವೆಲಾದಲ್ಲಿ ತನ್ನ ಚೇಲಾ ಸರಕಾರಗಳನ್ನು ಸ್ಥಾಪಿಸಿಕೊಂಡು ಅಲ್ಲಿನ ಖನಿಜ ಸಂಪತ್ತನ್ನು ಲೂಟಿ ಮಾಡುತ್ತಿತ್ತು. ಆದರೆ ವೆನೆಝುವೆಲಾದಲ್ಲಿ ಅಪಾರ ತೈಲ ಸಂಪತ್ತು ಪತ್ತೆಯಾದ ಮೇಲೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಅಮೆರಿಕ ವೆನೆಝುವೆಲಾದ ರಾಜಕೀಯ ಮತ್ತು ತೈಲ ಸಂಪತ್ತಿನ ತನ್ನ ಒಡೆತನವನ್ನು ಸಾಧಿಸಿಕೊಳ್ಳತೊಡಗಿತು. ಇದರಿಂದಾಗಿ ವೆನೆಝುವೆಲಾದಲ್ಲಿ ಅಮೆರಿಕದ ದಲ್ಲಾಳಿಗಳಾದ ಹಲವಾರು ಬಂಡವಾಳಶಾಹಿಗಳು ಬಿಲಿಯನಾಧೀಶರಾಗಿ ಬೆಳೆದರು, ಅಮೆರಿಕನ್ ಪರ ರಾಜಕಾರಣಿಗಳು, ಸೇನಾಧಿಕಾರಿಗಳು ಅಪಾರ ಭ್ರಷ್ಟಾಚಾರ ಮಾಡುತ್ತಾ ಕೋಟ್ಯಧಿಪತಿಗಳಾಗಿ ಕೊಬ್ಬಿದರು. ಆದರೆ ಅಪಾರ ಸಂಪತ್ತಿದ್ದರೂ ವೆನೆಝುವೆಲಾದ ಜನತೆ ಮಾತ್ರ ಅಮೆರಿಕದ ಈ ನವವಸಾಹತು ಶೋಷಣೆಯಿಂದಾಗಿ ಅತ್ಯಂತ ಬಡತನದಲ್ಲಿ ಮತ್ತು ಅತಂತ್ರದಲ್ಲೇ ಬದುಕುವಂತಾಗಿತ್ತು.
ಅಮೆರಿಕನ್ ವಿರೋಧಿ ಜನಕ್ರಾಂತಿ ಮತ್ತು ಜನನಾಯಕ ಚಾವೆಝ್
ಆದರೆ 1990ರ ದಶಕದಲ್ಲಿ ಇಡೀ ಲ್ಯಾಟಿನ್ ಅಮೆರಿಕ ದೇಶಗಳಲ್ಲಿ ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರುದ್ಧ ಬೃಹತ್ ಜನಾಂದೋಲನಗಳು ಹುಟ್ಟಿಕೊಂಡವು. ಅದರ ಭಾಗವಾಗಿಯೇ ವೆನೆಝುವೆಲಾದ ಹ್ಯೂಗೊ ಚಾವೆಝ್ ನೇತೃತ್ವದ ಯುನೈಟೆಡ್ ಸೋಷಿಯಲಿಸ್ಟ್ ಪಾರ್ಟಿ ಆಫ್ ವೆನೆಝುವೆಲಾದ ಜನಚಳವಳಿಯು ಅಮೆರಿಕ ಚೇಲಾ ಕಾರ್ಪೊರೇಟ್ ಪಕ್ಷವನ್ನು ಚುನಾವಣೆಯಲ್ಲಿ ಸೋಲಿಸಿ 1999ರಲ್ಲಿ ಅಧಿಕಾರಕ್ಕೆ ಬಂದಿತು. 1999-2013ರ ತನಕ ಚಾವೆಝ್ ಅಧಿಕಾರದಲ್ಲಿದ್ದರೆ, ಆ ನಂತರದಲ್ಲಿ ಆತನ ಶಿಷ್ಯ ಮಡುರೊ 2026ರಲ್ಲಿ ಅಮೆರಿಕ ಬಂಧಿಸುವವರೆಗೂ ಅಧಿಕಾರದಲ್ಲಿದ್ದರು.
ಈ 27 ವರ್ಷಗಳಲ್ಲಿ ಸೋಷಿಯಲಿಸ್ಟ್ ಪಕ್ಷವು ವೆನೆಝುವೆಲಾದ ತೈಲ ಮತ್ತು ಇತರ ಸಂಪತ್ತನ್ನು ರಾಷ್ಟ್ರೀಕರಣ ಮಾಡಿತು. OPECಯ ಅಧ್ಯಯನದ ಪ್ರಕಾರ ಜಗತ್ತಿನ ಶೇ. 19ರಷ್ಟು ತೈಲ ಸಂಪನ್ಮೂಲ ವೆನೆಝುವೆಲಾದಲ್ಲಿದೆ ಹಾಗೂ ಅದನ್ನು ಅಂತರ್‌ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಿ ಬಂದ ಲಾಭದಿಂದ ಮೊತ್ತ ಮೊದಲ ಬಾರಿಗೆ ಸಾಮಾನ್ಯ ಜನರ ಆಹಾರ, ಶಿಕ್ಷಣ, ವಸತಿ ಮತ್ತು ಆರೋಗ್ಯದಂಥ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿತು. ಈ ಕಾರಣಕ್ಕಾಗಿಯೇ ಅ ಪಕ್ಷವನ್ನು ಸಾಮಾನ್ಯ ದುಡಿಯುವ ಜನರು ಸತತವಾಗಿ ಅಧಿಕಾರಕ್ಕೆ ತಂದಿದ್ದರು.
ಇದರ ಜೊತೆಗೆ ಚಾವೆಝ್ ಮತ್ತು ಮಡುರೊ ಅವರು ಅಮೆರಿಕದ ಎಲ್ಲಾ ಹಂಗುಗಳಿಂದ ಹೊರಬರಲು ಜಾಗತಿಕವಾಗಿ ಅಮೆರಿಕಕ್ಕೆ ಸೆಡ್ಡು ಹೊಡೆಯುತ್ತಿರುವ ದೇಶಗಳಾದ ಚೀನಾ, ರಶ್ಯ, ಇರಾನ್, ಕ್ಯೂಬಾ, ಉತ್ತರ ಕೊರಿಯಾ ಇನ್ನಿತರ ದೇಶಗಳೊಂದಿಗೆ ರಾಜಕೀಯ ಮೈತ್ರಿ ಮಾಡಿಕೊಂಡರು. ಮಡುರೊ ಕಾಲದಲ್ಲಿ ವೆನೆಝುವೆಲಾ ತನ್ನ ಅಂತರ್‌ರಾಷ್ಟ್ರೀಯ ತೈಲ ವಹಿವಾಟನ್ನು ಡಾಲರ್ ಬದಲಿಗೆ ಚೀನಾದ ಯುವನ್ ಕರೆನ್ಸಿಯಲ್ಲಿ ಮಾಡಲು ಪ್ರಾರಂಭಿಸಿ ಅಮೆರಿಕದ ಹಣಕಾಸು ಹಾಗೂ ರಾಜಕೀಯ ಆಧಿಪತ್ಯಕ್ಕೂ ಪೆಟ್ಟುಕೊಟ್ಟಿತು.
ಈ ಎಲ್ಲಾ ರಾಜಕೀಯ, ಆರ್ಥಿಕ ಮತ್ತು ಜಾಗತಿಕ ಸ್ವರೂಪದ ಕಾರಣಗಳಿಂದ ವೆನೆಝುವೆಲಾದ ಹಳೆ ರಾಜಕರಾಣಿಗಳು, ಸೇನಾಧಿಕಾರಿಗಳು, ಮೇಲ್ ಮಧ್ಯಮವರ್ಗ, ಬಂಡವಾಳಶಾಹಿಗಳು, ಅವರ ಮಾಧ್ಯಮಗಳು ಮತ್ತು ಅಮೆರಿಕದ ಡೆಮಾಕ್ರಟ್ ಹಾಗೂ ರಿಪಬ್ಲಿಕನ್ ಅಧ್ಯಕ್ಷರುಗಳು ಒಂದಾಗಿ ಚಾವೆಝ್ ವಿರುದ್ಧ ಸಂಚು ನಡೆಸಿ ಹಲವಾರು ಬಾರಿ ಕ್ಷಿಪ್ರ ದಂಗೆ ನಡೆಸಲು ಮತ್ತು ಚಾವೆಝ್ ಅವರನ್ನು ಕೊಲ್ಲಲು ಪ್ರಯತ್ನಿಸುತ್ತಲೇ ಬಂದಿತ್ತು. ಅದನ್ನು ಚಾವೆಝ್ ಮತ್ತು ಮಡುರೊ ಉಕ್ಕಿನ ಪಾದದಿಂದ ಹತ್ತಿಕ್ಕಿದಾಗ ಅದರ ವಿರುದ್ಧ ಡ್ರಗ್ಸ್ ಕಾರ್ಟೆಲ್ ಎಂಬ ಪ್ರಚಾರವನ್ನು ಶುರುವಿಟ್ಟುಕೊಂಡಿತು. ಅದರ ಅಂತಿಮ ಅಧ್ಯಾಯ ಮೊನ್ನೆಯ ಮಡುರೊ ಬಂಧನ. ಡ್ರಗ್ ಇತ್ಯಾದಿಗಳೆಲ್ಲಾ ಹುಸಿ ಕಾರಣಗಳು ಅಷ್ಟೆ.
ಪ್ರಜಾತಂತ್ರದ ಮುಸುಕಿನಲ್ಲಿ ಅಮೆರಿಕದ ರಕ್ತಸಿಕ್ತ ಸಾಮ್ರಾಜ್ಯಶಾಹಿ ಇತಿಹಾಸ
1950ರಿಂದಲೂ ಅಮೆರಿಕ ದಕ್ಷಿಣ ಅಮೆರಿಕದ ಎಲ್ಲಾ ದೇಶಗಳನ್ನು ತನ್ನ ಪರೋಕ್ಷ ವಸಾಹತುವಾಗಿ ಮಾಡಿಕೊಳ್ಳಲು ಪ್ರಯತ್ನಿಸುತ್ತಲೇ ಇದೆ. ಅದಕ್ಕೆ ಅಡ್ಡಿಯಾಗಿರುವ ಆಳ್ವಿಕೆಗಳ ವಿರುದ್ಧ ಸಿಐಎ ಮೂಲಕ ದಂಗೆಗಳನ್ನು ಪ್ರಚೋದಿಸುವುದು, ತನ್ನ ವಿರೋಧಿ ಅಧ್ಯಕ್ಷರ ಹತ್ಯೆ ಮಾಡುವುದು, ಆ ಜಾಗದಲ್ಲಿ ತನ್ನ ಚೇಲಾಗಳನ್ನು ನೇಮಕಗೊಳ್ಳುವಂತೆ ಮಾಡುವುದು ಅದು ಅನುಸರಿಸುತ್ತ ಬಂದಿರುವ ಸಾಮ್ರಾಜ್ಯಶಾಹಿ ಕುತಂತ್ರಗಳು. ಅಮೆರಿಕದ ಈ ಸಾಮ್ರಾಜ್ಯ ಶಾಹಿ ಆಕ್ರಮಣಗಳಿಗೆ ದೊಡ್ಡ ಇತಿಹಾಸವೇ ಇದೆ.
ಹಾಗೆ ನೋಡಿದರೆ ಯುರೋಪ್‌ನ ಬಿಳಿಯರು ಎರಡು ಕೋಟಿ ಅಮೆರಿಕದ ಮೂಲ ನಿವಾಸಿಗಳನ್ನು ನರಮೇಧ ನಡೆಸಿ ಅವರ ಗೋರಿಗಳ ಮೇಲೆ ಬಿಳಿ ಅಮೆರಿಕನ್ ಚಕ್ರಾಧಿಪತ್ಯ ಕಟ್ಟಿದರು. ನಂತರ ಕೋಟಿ ಕೋಟಿ ಆಫ್ರಿಕನ್ ಕಪ್ಪು ಜನರನ್ನು ಗುಲಾಮರನ್ನಾಗಿಸಿಕೊಂಡು ಅವರ ಶ್ರಮದ ಮೇಲೆ ತಮ್ಮ ಸಾಮ್ರಾಜ್ಯ ವಿಸ್ತರಣೆ ಪ್ರಾರಂಭಿಸಿದರು. ಅವರ ಮೊದಲ ಗುರಿ ಉತ್ತರದ ಕೆನಡಾ ಮತ್ತು ದಕ್ಷಿಣ ಅಮೆರಿಕಗಳೇ ಆಗಿತ್ತು.
ಎರಡು ಮಹಾಯುದ್ಧಗಳಲ್ಲಿ ಬ್ರಿಟನ್ ಮತ್ತು ಫ್ರಾನ್ಸ್‌ನಂತಹ ಇತರ ಸಾಮ್ರಾಜ್ಯಶಾಹಿಗಳು ಬಲಹೀನವಾದ ಅವಕಾಶ ಬಳಸಿಕೊಂಡು ಇಡೀ ಪಶ್ಚಿಮ ಗೋಳದಲ್ಲಿ ಅಮೆರಿಕದ ಆಧಿಪತ್ಯವೇ ಮುಂದುವರಿಯಬೇಕೆಂಬ ಮುನ್ರೋ ಸಿದ್ಧಾಂತವನ್ನು ಪ್ರಬಲವಾಗಿ ಜಾರಿ ಮಾಡಲು ಪ್ರಾರಂಭಿಸಿತು.
1952ರಲ್ಲಿ ಗ್ವಾಟೆಮಾಲಾದ ಸಮಾಜವಾದಿ ಅಧ್ಯಕ್ಷರನ್ನು, 1953ರಲ್ಲಿ ಇರಾನ್‌ನ ರಾಷ್ಟ್ರೀಯವಾದಿ ಅಧ್ಯಕ್ಷ ಮುಸಾದಿಕ್, 1971ರಲ್ಲಿ ಚಿಲಿಯ ಸಮಾಜವಾದಿ ಅಧ್ಯಕ್ಷ ಅಲೆಂದೆ, 1968ರಲ್ಲಿ ಕಾಂಗೋದ ಲೂಮುಂಬ, 1984ರಲ್ಲಿ ಬುರ್ಕಿನೋ ಫಾಸೋದ ಪ್ರಖ್ಯಾತ ಅಧ್ಯಕ್ಷ ತಾಮಸ್ ಸಂಕರ ಹಾಗೂ ಇನ್ನಿತರರನ್ನು ಅಮೆರಿಕದ ಸಿಐಎ ಕೊಂದು ಹಾಕಿತು.
ಇದಲ್ಲದೆ 1958ರಿಂದ ಕ್ಯೂಬಾದ ಕಮ್ಯುನಿಸ್ಟ್ ನಾಯಕ ಕ್ಯಾಸ್ಟ್ರೋ ಮೇಲೆ ಮತ್ತು ರಾಷ್ಟ್ರೀಯವಾದಿ, ಸಮಾಜವಾದಿ ಅರಬ್, ಆಫ್ರಿಕನ್ ಮತ್ತು ಏಶ್ಯನ್ ನಾಯಕರ ಮೇಲೆ ಸತತ ಹತ್ಯಾ ಪ್ರಯತ್ನಗಳನ್ನು ನಡೆಸಿತು.
1982ರಲ್ಲಿ ಗ್ರೆನೆಡಾದ ಅಧ್ಯಕ್ಷರನ್ನು ಡ್ರಗ್ಸ್ ಹೆಸರಲ್ಲಿ ಬಂಧಿಸಿತು. 1990-2003ರಲ್ಲಿ, ತನ್ನ ವಿಸ್ತರಣೆಗೆ ಸಹಾಯ ಮಾಡದ ಇರಾಕ್ ಮೇಲೆ 2011ರಲ್ಲಿ ಲಿಬಿಯಾದ ಮೇಲೆ ದಾಳಿ ಮಾಡಿ ಆ ದೇಶಗಳನ್ನು ಚಿಂದಿ ಚಿಂದಿ ಮಾಡಿತು. ಇಂಡೋನೇಶ್ಯದಲ್ಲಿ ಸರ್ವಾಧಿಕಾರಿ ಸುಹಾರತೋಗೆ ಬೆಂಬಲಿಸುತ್ತ ಲಕ್ಷಾಂತರ ಕಮ್ಯುನಿಸ್ಟರ ಕಗ್ಗೊಲೆ ಮಾಡಿಸಿತು. ಇನ್ನು ಆಫ್ರಿಕಾದಲ್ಲತೂ ನಿರಂತರ ಹಿಂಸಾತ್ಮಕ ಅರಾಜಕತೆ ಪೋಷಿಸುತ್ತಾ ತನ್ನ ಆರ್ಥಿಕ ಬೇಳೆ ಬೇಯಿಸಿಕೊಳ್ಳುತ್ತಲೇ ಇದೆ.
ಇತ್ತೀಚಿನ ದಶಕಗಳಲ್ಲಿ ಅಮೆರಿಕ ಆಧಿಪತ್ಯದ ವಿರುದ್ಧ ಚೀನಾ ಮತ್ತು ರಶ್ಯ ಪರ್ಯಾಯ ಶಕ್ತಿ ಕೇಂದ್ರವಾಗುತ್ತಿದೆ. ಅದರ ಜೊತೆಗೆ ಸಹಕರಿಸುತ್ತಿರುವ ದ. ಅಮೆರಿಕದ ವೆನೆಝುವೆಲಾ, ಬ್ರೆಝಿಲ್, ಇರಾನ್‌ಗಳಲ್ಲಿನ ರಾಜಕೀಯ ನಾಯಕತ್ವವನ್ನು ಕಿತ್ತೊಗೆಯುವುದು ಅಮೆರಿಕ ಅನುಸರಿಸುತ್ತಿರುವ ಸದ್ಯದ ನೀತಿ. ವೆನೆಝುವೆಲಾದ ಬೆಳವಣಿಗೆಗಳ ಹಿಂದಿರುವ ಮತ್ತೊಂದು ಕಾರಣವದು.
ವೆನೆಝುವೆಲಾದ ಅಮೆರಿಕ ಪೋಷಿತ ರಾಜಕೀಯ ನಾಯಕಿ ಮಚಾದೋಗೆ ನೊಬೆಲ್ ಶಾಂತಿ ಪ್ರಶಸ್ತಿ ಕೊಟ್ಟಿದ್ದು, ಅದನ್ನು ಆಕೆ ಟ್ರಂಪ್‌ಗೆ ಸಮರ್ಪಿಸಿದ್ದು ಅಮೆರಿಕ ರಚಿಸಿರುವ ವೆನೆಝುವೆಲಾ ಮರುವಸಾಹತೀಕರಣ ನಾಟಕದ ಭಾಗಗಳೇ ಆಗಿತ್ತು. ವೆನೆಝುವೆಲಾದಲ್ಲಿ ಹೊಸ ನಾಯಕರು ಅಧಿಕಾರ ರೂಪುಗೊಳ್ಳುವವರೆಗೆ ಆ ದೇಶದ ತೈಲ ಮತ್ತು ರಾಜಕೀಯದ ನಿರ್ವಹಣೆ ತಾವೇ ಮಾಡುತ್ತೇವೆ ಎಂದು ಟ್ರಂಪ್ ಘೋಷಿಸಿರುವ ಧ್ವನ್ಯರ್ಥವೂ ಟ್ರಂಪ್ ಚೇಲಾಗಳೇ ಅಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬುದೇ ಆಗಿದೆ.
ಇಸ್ರೇಲ್ ಮಾಡುತ್ತಿರುವ ಫೆಲೆಸ್ತೀನ್‌ನ ಸರ್ವನಾಶಕ್ಕೆ ಮತ್ತು ಲೆಬನಾನ್, ಸಿರಿಯಾಗಳಲ್ಲಿ ಅಮೆರಿಕದಂತೆ ಇಸ್ರೇಲ್ ಕೂಡ ನಡೆಸುತ್ತಿರುವ ಕಾನೂನು ಬಾಹಿರ ಸೈನಿಕ ಕಾರ್ಯಾಚರಣೆಗಳಿಗೆ ಅಮೆರಿಕ ಪ್ರೋತ್ಸಾಹ, ಬೆಂಬಲ, ರಕ್ಷಣೆ ಕೊಡುತ್ತಿದೆಯಷ್ಟೇ. ಅದಕ್ಕೂ ಪ್ರಧಾನ ಕಾರಣ ಆ ಭೂಭಾಗದಲ್ಲಿ ಇರಾನ್‌ನ ಪ್ರಭಾವ ತಗ್ಗಿಸಿ, ಇರಾನ್‌ನ ಇಸ್ಲಾಮಿಕ್ ಗಣರಾಜ್ಯದ ಮೇಲೆ ಮುತ್ತಿಗೆ ಹಾಕುವುದು.
ಸಾಮಂತರಾಗಿ ಇಲ್ಲವೇ ಸರ್ವನಾಶವಾಗಿ!
ಒಟ್ಟಿನಲ್ಲಿ ಜಗತ್ತಿನ 200 ದೇಶಗಳೂ ಅಮೆರಿಕದ ಸಾಮಂತ ರಾಷ್ಟ್ರಗಳಾಗಬೇಕು ಅಥವಾ ಸರ್ವನಾಶವಾಗಬೇಕು. ಇದು ಟ್ರಂಪ್ ಅಮೆರಿಕದ ನವಸಾಮ್ರಾಜ್ಯಶಾಹಿ ನೀತಿ.
ಭಾರತದ ಮೋದಿ, ಪಾಕಿಸ್ತಾನದ ಮುನೀರ್ ಟ್ರಂಪ್ ಸಾಮ್ರಾಜ್ಯದ ಹೊಸ ನಿಷ್ಠಾವಂತ ಸಾಮಂತರಾಗಿದ್ದಾರೆ..
ಆದರೆ ಸಾಮಂತ ಗಣದಲ್ಲೂ ಗುಲಾಮಗಿರಿ ಮಾಡುವ ಸಾಮಂತರನ್ನು ಮಾತ್ರ ಟ್ರಂಪ್ ಅಮೆರಿಕ ಸಹಿಸುತ್ತದೆ. ವಿಶ್ವಗುರು ಎಂದು ಕೊಚ್ಚಿಕೊಳ್ಳುವ 56 ಇಂಚಿನೆದೆಯ ಮೋದಿ ಭಾರತ ಅಮೆರಿಕದ ಈ ನಗ್ನ ಸಾಮ್ರಾಜ್ಯಶಾಹಿ ಆಕ್ರಮಣವನ್ನು ಮೃದುವಾಗಿಯೂ ಖಂಡಿಸುವ ಧೈರ್ಯ ತೋರಿಲ್ಲ. ಪಕ್ಕದ ಶ್ರೀಲಂಕಾದ ಜೆವಿಪಿ ಸರಕಾರ ನಮಗಿಂತ ಸೇನೆ, ಆರ್ಥಿಕತೆಯಲ್ಲಿ ಎಷ್ಟೂ ಹಿಂದೆ ಇದ್ದರೂ ಅಮೆರಿಕದ ಈ ನಗ್ನ ಸಾಮ್ರಾಜ್ಯಶಾಹಿ ಆಕ್ರಮಣವನ್ನು ಸ್ಪಷ್ಟ ಮಾತುಗಳಲ್ಲಿ ಮತ್ತು ದಿಟ್ಟವಾಗಿ ಖಂಡಿಸಿದೆ.
ಮೋದಿಯ ಭಾರತ ತನ್ನ ಪುಕ್ಕಲು ಮತ್ತು ಅಮೆರಿಕನ್ ಗುಲಾಮಿ ನೀತಿಗಳಿಂದಾಗಿ ಭಾರತಕ್ಕೆ ಅವಮಾನವನ್ನೇ ಮಾಡುತ್ತಿದೆ.
ಹೀಗಾಗಿ ಭಾರತವು ಒಂದು ಸ್ವಾಭಿಮಾನಿ ಮತ್ತು ಸ್ವಾವಲಂಬಿ ಭಾರತವಾಗಿ ಉಳಿಯಬೇಕೆಂದರೆ ನಿಜವಾದ ರಾಷ್ಟ್ರಭಕ್ತರೆಲ್ಲರೂ ಮೋದಿಯವರ ಅಮೆರಿಕನ್ ಗುಲಾಮಗಿರಿಯನ್ನು ತಿರಸ್ಕರಿಸಿ ವೆನೆಝುವೆಲಾ ಜನತೆಯ ಸಾರ್ವಭೌಮತೆಯ ಜೊತೆಗೆ ನಿಲ್ಲಬೇಕಿದೆ. ಅಮೆರಿಕನ್ ಸಾಮ್ರಾಜ್ಯಶಾಹಿಯ ವಿರುದ್ಧ ಧ್ವನಿ ಎತ್ತಬೇಕಿದೆ. ವಿಶ್ವಸಂಸ್ಥೆಯ ಪಕ್ಷಪಾತವನ್ನು ವಿರೋಧಿಸಬೇಕಿದೆ.
ಅದೇ ಸಮಯದಲ್ಲಿ ಅಮೆರಿಕವನ್ನು ಮಣಿಸಲು ಮುಂದೊಡಗು ತೆಗೆದುಕೊಳ್ಳದ ಬಲಿಷ್ಠ ಚೀನಾ ಮತ್ತು ರಶ್ಯಗಳ ರಾಷ್ಟ್ರೀಯ ಸ್ವಾರ್ಥ, ವಿಸ್ತರಣಾವಾದಿ ವ್ಯೆಹತಂತ್ರಗಳನ್ನು ಅವರ ಪರಿಣಾಮ ಶೂನ್ಯ ಪ್ರತಿರೋಧವನ್ನೂ ಪ್ರಶ್ನಿಸಬೇಕಿದೆ.







