Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಂ 9
  5. ಎಸ್‌ಐಆರ್ ಬಗ್ಗೆ ಸುಪ್ರೀಂ ಅನ್ಯಾಯ

ಎಸ್‌ಐಆರ್ ಬಗ್ಗೆ ಸುಪ್ರೀಂ ಅನ್ಯಾಯ

ಶಿವಸುಂದರ್ಶಿವಸುಂದರ್3 Jun 2026 10:07 AM IST
share
ಎಸ್‌ಐಆರ್ ಬಗ್ಗೆ ಸುಪ್ರೀಂ ಅನ್ಯಾಯ

ನಾಗರಿಕತ್ವ ಎನ್ನುವುದು ಮತದ ಹಕ್ಕಿನ ವಿಚಾರವಲ್ಲ, ಬದಲಿಗೆ ಈ ದೇಶದ ರಾಜಕೀಯ ಸಮುದಾಯದ ಭಾಗವಾಗಲು ಅತ್ಯಗತ್ಯ ಎಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್ ನಾಗರಿಕತ್ವ ಎಂಬುದು ಜನರ ಅನಿರ್ಬಂಧಿತ ಹಕ್ಕಲ್ಲ. ಅದಕ್ಕೆ ಕೆಲವು ಷರತ್ತುಗಳಿವೆ ಮತ್ತು ಅದರ ಷರತ್ತುಗಳು ಸ್ಥಾಯಿಯಾಗಿರುವುದಿಲ್ಲ, ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಆದ್ದರಿಂದ ಒಮ್ಮೆ ನಾಗರಿಕತ್ವ ಸಾಬೀತಾದರೆ ಅದು ಶಾಶ್ವತ ಎಂದೇನೂ ಅಲ್ಲ ಎಂಬ ಮೋದಿ ಸರಕಾರದ ಅಪಾಯಕಾರಿ ವಾದವನ್ನು ಯಥಾವತ್ ಒಪ್ಪಿಕೊಂಡಿದೆ.

ಮೋದಿ ಸರಕಾರದ ಕೈಗೊಂಬೆ ಚುನಾವಣಾ ಆಯೋಗ ನಡೆಸುತ್ತಿರುವ ಎಸ್‌ಐಆರ್‌ನ ಸಾಂವಿಧಾನಿಕತೆಯ ಬಗ್ಗೆ ಮುಖ್ಯ ನ್ಯಾಯಾಧೀಶ ಸೂರ್ಯಕಾಂತ್ ಮತ್ತು ನ್ಯಾ. ಜಾಯಮಾಲ್ಯ ಬಾಗ್ಚಿಯವರ ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠ ಮೇ-27 ರಂದು ತನ್ನ ಅಂತಿಮ ತೀರ್ಪು ನೀಡಿದೆ.

ಅದರ ಪೂರ್ಣ ಪಠ್ಯವನ್ನು ಆಸಕ್ತರು ಈ ವಿಳಾಸದಲ್ಲಿ ಓದಬಹುದು:

https://api.sci.gov.in/supremecourt/2025/35785/ 35785_2025_1_1501_71617_Judgement_27-May-2026.pdf

ಈ ತೀರ್ಪು ಕೂಡ ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಸುಪ್ರೀಂ ಕೋರ್ಟ್ ನೀಡಿರುವ ಬಾಬರಿ ಮಸೀದಿ, ಕಾಶ್ಮೀರ, UAPA- ಜಾಮೀನು, EWS ಇನ್ನಿತ್ಯಾದಿ ತೀರ್ಪುಗಳಂತೆ....

...ಬಿಜೆಪಿ ಮತ್ತು ಸಂಘಪರಿವಾರದ ಸಂವಿಧಾನ ಹಾಗೂ ಪ್ರಜಾತಂತ್ರ ವಿರೋಧಿ ರಾಜಕೀಯ ಮತ್ತು ಸೈದ್ಹಾಂತಿಕ ಯೋಜನೆಗಳಿಗೆ ನ್ಯಾಯಿಕ ಸಮರ್ಥನೆ ನೀಡುವ ಅತ್ಯಂತ ಏಕಪಕ್ಷೀಯ ಹಾಗೂ ನ್ಯಾಯಿಕ ಲಜ್ಜೆ ಹಾಗೂ ಘನತೆಯೂ ಇಲ್ಲದ ತೀರ್ಪಾಗಿದೆ.

ಎಸ್‌ಐಆರ್ ಬಗ್ಗೆ ಸುಪ್ರೀಂ ತನ್ನ ತೀರ್ಪಿನಲ್ಲಿ ಕೊಟ್ಟಿರುವ ಸಮರ್ಥನೆಗಳು ಮೋದಿ ಕಾಲದಲ್ಲಿ ನ್ಯಾಯಾಂಗವು ತನ್ನ ಅವನತಿಯ ಮತ್ತೊಂದು ಪಾತಾಳವನ್ನು ಮುಟ್ಟಿದೆ ಎಂಬುದನ್ನು ಸಾಬೀತು ಮಾಡುತ್ತದೆ.

ಈ ಹಿನ್ನೆಲೆಯಲ್ಲಿ ಸುಪ್ರೀಂ ತೀರ್ಪಿನ ಒಂದು ಪ್ರಾಥಮಿಕ ವಿಶ್ಲೇಷಣೆ ಕೆಳಗಿದೆ:

ಸುಪ್ರೀಂ ಕೋರ್ಟ್‌ನ ಮುಂದೆ ಎಸ್‌ಐಆರ್ ಬಗ್ಗೆ ಈ ಕೆಲವು ಸಾಂವಿಧಾನಿಕ ಪ್ರಶ್ನೆಗಳಿದ್ದವು:

1) ಆಯೋಗ ನಡೆಸುತ್ತಿರುವ ಎಸ್‌ಐಆರ್‌ಗೆ ಸಾಂವಿಧಾನಿಕ ಮಾನ್ಯತೆ ಇದೆಯೇ? 2) ಎಸ್‌ಐಆರ್‌ನ ಉದ್ದೇಶಗಳು ಕಾನೂನು ಬದ್ಧವಾಗಿದೆಯೇ? 3) ಅದಕ್ಕಾಗಿ ಆಯೋಗವು ರೂಪಿಸಿರುವ ಪ್ರಕ್ರಿಯೆಗಳು ಉದ್ದೇಶಗಳ ಈಡೇರಿಕೆಗೆ ಪೂರಕವಾಗಿದೆಯೇ? 4) ಚುನಾವಣಾ ಆಯೋಗಕ್ಕೆ ನಾಗರಿಕತ್ವ ಪರಿಶೀಲನೆಯ ಅಧಿಕಾರವಿದೆಯೇ?

ಈ ನಾಲ್ಕು ಪ್ರಶ್ನೆಗಳ ಅಡಿಯಲ್ಲಿ:

ಅ) -ಎಸ್‌ಐಆರ್ ಜಾರಿಗೊಳಿಸಲು ಅನುಸರಿಸುವ ಕ್ರಮಗಳಿಂದ ಜನರಿಗೆ ದೊಡ್ಡ ಮಟ್ಟದ ಅನನುಕೂಲವುಂಟಾಗಿದೆಯೇ? ಆ)-ಎಸ್‌ಐಆರ್ ಜಾರಿಗೊಳಿಸಲು ನಿಗದಿಪಡಿಸಿರುವ ಸಮಯಾವಧಿ ಸೂಕ್ತವಾಗಿದೆಯೇ? ಇ) -ಎಸ್‌ಐಆರ್ ಅಲ್ಲದೆ ಬೇರೆ ಕಡಿಮೆ ಹಾನಿಯುಂಟು ಮಾಡಬಹುದಾದ ಇತರ ಕ್ರಮಗಳನ್ನು ಅನುಸರಿಸಬಹುದಿತ್ತೇ? ಎಂಬ ಇನ್ನಿತರ ಪ್ರಶ್ನೆಗಳನ್ನು ಸುಪ್ರೀಂ ತನ್ನ 124 ಪುಟಗಳ ತೀರ್ಪಿನಲ್ಲಿ ‘ಬಗೆಹರಿಸಿದೆ’!?

ಆದರೆ ಈ ಪ್ರತಿಯೊಂದು ವಿಷಯದಲ್ಲೂ ಅಹವಾಲುದಾರರು ಮುಂದಿಟ್ಟ ವಾದ, ಸಾಕ್ಷಿ ಮತ್ತು ಪುರಾವೆಗಳೆಲ್ಲವನ್ನೂ ತಿರಸ್ಕರಿಸಿದೆ ಮತ್ತು ಚುನಾವಣಾ ಆಯೋಗವು ಮುಂದಿಟ್ಟ ಎಲ್ಲಾ ಸಂವಿಧಾನ ವಿರೋಧಿ ಮತ್ತು ಕ್ಷುಲ್ಲಕ ವಾದಗಳನ್ನು ಸಂಪೂರ್ಣವಾಗಿ ಎತ್ತಿಹಿಡಿದಿದೆ.

ಎಲ್ಲಕ್ಕಿಂತ ಮುಖ್ಯವಾಗಿ ತನ್ನೆಲ್ಲಾ ನಿಲುವುಗಳಿಗೂ ಸುಪ್ರೀಂ ಕೋರ್ಟ್ ಈ ಹಿಂದೆಯೂ ಎಸ್‌ಐಆರ್ ಅನ್ನು ಕಾಲಕಾಲಕ್ಕೆ ನಡೆಸಲಾಗುತ್ತಿತ್ತು ಎಂಬ ಆಯೋಗದ ಸುಳ್ಳು ವಾದವನ್ನು ಅನಾಮತ್ತು ಒಪ್ಪಿಕೊಂಡಿದೆ.

ಎಸ್‌ಐಆರ್-ಸಂವಿಧಾನಿಕ ಉದ್ದೇಶಕ್ಕೆ ವಿರುದ್ಧವಿದ್ದರೂ ಸಂವಿಧಾನ ಮಾನ್ಯವೆಂದ ಸುಪ್ರೀಂ!

ಸಂವಿಧಾನದ ಆರ್ಟಿಕಲ್ 324, 325, 326, ಆಯೋಗಕ್ಕೆ ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಸಲು ಬೇಕಾದ ಅಧಿಕಾರವನ್ನು ಕೊಟ್ಟಿದೆ. ಅದರಲ್ಲಿ ಮತಪಟ್ಟಿ ತಯಾರಿಯೂ ಒಂದು. ಅದಲ್ಲದೆ ಕಾಲಕಾಲಕ್ಕೆ ಆ ಉದ್ದೇಶವನ್ನು ಸಾಧಿಸಲು ಕಾನೂನಿನ ಅಡಿಯಲ್ಲಿ ಹೊಸ ಕ್ರಮಗಳನ್ನು ಅನುಸರಿಸಲು ಆಯೋಗಕ್ಕೆ ಅಧಿಕಾರವಿದೆ ಎಂದು ಸುಪ್ರೀಂ ತೀರ್ಪು ಕೊಟ್ಟಿದೆ.

ಆರ್ಟಿಕಲ್ 327 ಆಯೋಗದ ಸ್ವಾತಂತ್ರ್ಯವು ಸಂಸತ್ತು ಮಾಡುವ ಕಾನೂನುಗಳಿಗೆ ಒಳಪಟ್ಟಿರಬೇಕು ಎಂದು ಹೇಳುತ್ತದೆ ಹಾಗೂ ಸಂಸತ್ತು ಈ ಬಗ್ಗೆ ಪ್ರಜಾಪ್ರತಿನಿಧಿ ಕಾಯ್ದೆ -1950 ಮತ್ತು ಅದಕ್ಕೆ 1956ರಲ್ಲಿ ಮಾಡಿದ ತಿದ್ದುಪಡಿಗಳು ಹಾಗೂ 1960ರ ಮತಪಟ್ಟಿ ಪರಿಷ್ಕರಣಾ ನಿಯಮಗಳು ಇವೆ.

ಆದರೆ ಅದು ಯಾವುದನ್ನೂ ಎಸ್‌ಐಆರ್ ಉಲ್ಲಂಘಿಸುತ್ತಿಲ್ಲ ಎಂದು ಸುಪ್ರೀಂ ಘೋಷಿಸಿಬಿಟ್ಟಿದೆ.

ಆದರೆ ಎಸ್‌ಐಆರ್ ಅಡಿಯಲ್ಲಿ ಈ ಹಿಂದೆ ಎಂದೂ ಮಾಡದಿದ್ದ ನಾಗರಿಕತ್ವ ಪರಿಶೀಲನೆ ನಡೆಯುತ್ತಿದ್ದು ಈ ಅಧಿಕಾರವನ್ನು ಪ್ರಜಾಪ್ರತಿನಿಧಿ ಕಾಯ್ದೆಯಾಗಲೀ, 1960ರ ನಿಯಮಗಳಾಗಲೀ ಆಯೋಗಕ್ಕೆ ಕೊಡುವುದಿಲ್ಲ ಎಂಬ ವಾದವನ್ನು ಅತ್ಯಂತ ಅಪಾಯಕಾರಿಯಾಗಿ ಸುಪ್ರೀಂ ಕೋರ್ಟ್ ತಳ್ಳಿ ಹಾಕಿದೆ.

ನಾಗರಿಕತ್ವ ಎನ್ನುವುದು ಮತದ ಹಕ್ಕಿನ ವಿಚಾರವಲ್ಲ, ಬದಲಿಗೆ ಈ ದೇಶದ ರಾಜಕೀಯ ಸಮುದಾಯದ ಭಾಗವಾಗಲು ಅತ್ಯಗತ್ಯ ಎಂದು ವ್ಯಾಖ್ಯಾನಿಸಿರುವ ಸುಪ್ರೀಂ ಕೋರ್ಟ್ ನಾಗರಿಕತ್ವ ಎಂಬುದು ಜನರ ಅನಿರ್ಬಂಧಿತ ಹಕ್ಕಲ್ಲ. ಅದಕ್ಕೆ ಕೆಲವು ಷರತ್ತುಗಳಿವೆ ಮತ್ತು ಅದರ ಷರತ್ತುಗಳು ಸ್ಥಾಯಿಯಾಗಿರುವುದಿಲ್ಲ, ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ. ಆದ್ದರಿಂದ ಒಮ್ಮೆ ನಾಗರಿಕತ್ವ ಸಾಬೀತಾದರೆ ಅದು ಶಾಶ್ವತ ಎಂದೇನೂ ಅಲ್ಲ ಎಂಬ ಮೋದಿ ಸರಕಾರದ ಅಪಾಯಕಾರಿ ವಾದವನ್ನು ಯಥಾವತ್ ಒಪ್ಪಿಕೊಂಡಿದೆ.

ಹೀಗಾಗಿ ಎಸ್‌ಐಆರ್ ಮಾತ್ರವಲ್ಲ ಅಂತಹ ಯಾವುದೇ ಪ್ರಕ್ರಿಯೆ ನಡೆಸುವ ಸಾಂವಿಧಾನಿಕ ಅಧಿಕಾರ ಆಯೋಗಕ್ಕಿದೆ ಎಂದು ಘೋಷಿಸಿದೆ.

ಆದರೆ ಸಂವಿಧಾನವು ಆಯೋಗಕ್ಕೆ ಕೊಟ್ಟಿರುವುದು ಮುಕ್ತ ಮತ್ತು ನಿಷ್ಪಕ್ಷ ಚುನಾವಣೆ ನಡೆಸಲು. ಆ ಸಾಂವಿಧಾನಿಕ ಕರ್ತವ್ಯಕ್ಕೆ ಎಸ್‌ಐಆರ್ ಪೂರಕವಾಗಿದೆಯೇ ಎಂದು ಸುಪ್ರೀಂ ಕೋರ್ಟ್ ಪರಿಶೀಲಿಸಬೇಕಿತ್ತು.

ಹಾಗೆಯೇ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ ೨೧ (೩) ಆಯೋಗವು ತನ್ನ ಕರ್ತವ್ಯವನ್ನು ನಿಭಾಯಿಸಲು ‘‘ತಾನು ಯಾವುದು ಸರಿಯೆಂದು ಪರಿಗಣಿಸುತ್ತದೋ’’ (Which ever it deems fit) ಅದನ್ನು ಮಾಡಲು ಅಧಿಕಾರ ಕೊಡುತ್ತದೆ. ಈ ಅಧಿಕಾರವು ಮುಕ್ತ ಮತ್ತು ನಿಷ್ಪಕ್ಷ ಚುನಾವಣೆ ನಡೆಸುವ ಮತ್ತು ಪ್ರತಿಯೊಬ್ಬ ಅರ್ಹ ಮತದಾರರನ್ನು ಒಳಗೊಳ್ಳುವ ಕರ್ತವ್ಯಕ್ಕೆ ಪೂರಕವಾಗಿದ್ದರೆ ಮಾತ್ರ ಆ ನಿಯಮಗಳು ಮಾನ್ಯವಾಗುತ್ತವೆ.

ಎಸ್‌ಐಆರ್ ಜಾರಿಯಾದ 13 ರಾಜ್ಯಗಳಲ್ಲಿ ಈಗಾಗಲೇ 7.5 ಕೋಟಿ ಜನರು ಚುನಾವಣಾ ಆಯೋಗದ ‘‘ದಾಖಲೆ ತೋರಿಸಿ ನಾಗರಿಕತ್ವ ಸಾಬೀತು ಪಡಿಸಿ’’ ಎಂಬ ಅಸಾಂವಿಧಾನಿಕ ನಿಯಮದಿಂದಾಗಿ ಮತದಾನದ ಹಕ್ಕು ಕಳೆದುಕೊಂಡಿದ್ದಾರೆ. ಅಂದರೆ ಆಯೋಗವು ಎಸ್‌ಐಆರ್ ಮಾಡುವ ಮೂಲಕ ಸಂವಿಧಾನ ತನಗೆ ಯಾವ ಕಾರಣಕ್ಕೆ ಅಧಿಕಾರವನ್ನು ಕೊಟ್ಟಿದೆಯೋ ಅದನ್ನು ಉಲ್ಲಂಘಿಸಿದೆ. ಆದ್ದರಿಂದ ಎಸ್‌ಐಆರ್ ಸಾಂವಿಧಾನಿಕವಾಗಿ ಅಮಾನ್ಯವೇ ಆಗಿದೆ. ಆದರೆ ಸುಪ್ರೀಂ ಕೋರ್ಟ್ ಮೊದಲಿಂದ ಕೊನೆಯವರೆಗೂ ಆಯೋಗದ ಅಧಿಕಾರವನ್ನು ಎತ್ತಿಹಿಡಿಯುವ ಏಕಪಕ್ಷೀಯತೆಯನ್ನು ಅನುಸರಿಸಿದೆ.

ಎಸ್‌ಐಆರ್‌ನ ಉದ್ದೇಶಗಳಿಗೆ ಕಾನೂನು ಮಾನ್ಯತೆ ಇಲ್ಲದಿದ್ದರೂ ಕ್ಲೀನ್ ಚಿಟ್?

2003ರ ನಂತರ ಈ ದೇಶದಲ್ಲಿ ಅಪಾರವಾದ ನಗರೀಕರಣ ಮತ್ತು ವಲಸೆ ನಡೆದಿದೆ ಹಾಗೂ 2003ರ ನಂತರ ದೇಶದಲ್ಲಿ ಎಸ್‌ಐಆರ್ ನಡೆಸಿಲ್ಲ. ಇದರಿಂದ ಮತಪಟ್ಟಿಯಲ್ಲಿ ದೋಷಗಳು, ಡುಪ್ಲಿಕೇಟ್‌ಗಳು ಹೆಚ್ಚಾಗಿವೆ. ಅದನ್ನು ತಡೆಯಲೆಂದೇ ಎಸ್‌ಐಆರ್ ಮಾಡಲಾಗುತ್ತಿದೆ ಎಂಬ ಆಯೋಗದ ವಾದವನ್ನು ಸುಪ್ರೀಂ ಮರು ಪ್ರಶ್ನೆ ಮಾಡದೆ ಒಪ್ಪಿಕೊಂಡಿದೆ. ಅದೇ ರೀತಿ 2003ರ ಹಿಂದೆ ಹತ್ತು ಬಾರಿ ಎಸ್‌ಐಆರ್ ನಡೆಸಲಾಗಿತ್ತೆಂಬ ಆಯೋಗದ ಸುಳ್ಳನ್ನೂ ಒಪ್ಪಿಕೊಂಡಿದೆ. ಏಕೆಂದರೆ ಈ ದೇಶದಲ್ಲಿ ಹತ್ತು ಬಾರಿ ನಡೆದಿರುವುದು Intenesive Revison (IR). ಅದರಲ್ಲಿ ಮತದಾರರ ಬಳಿ ಇರುವ ರೇಶನ್ ಕಾರ್ಡ್, ವೋಟರ್ ಕಾರ್ಡ್ ಮತ್ತು ಡ್ರೈವಿಂಗ್ ಲೈಸೆನ್ಸ್‌ಗಳನ್ನು ಕೂಡ ವಾಸ್ತವ್ಯ, ನಾಗರಿಕತೆ ಮತ್ತು ವಯಸ್ಸಿನ ಪುರಾವೆಯಾಗಿ ಪರಿಗಣಿಸಲಾಗುತ್ತಿತ್ತು. ವಿಶೇಷವಾಗಿ ದೂರು ಬಂದವರ ನಾಗರಿಕತ್ವವನ್ನು ಮಾತ್ರ ಹೆಚ್ಚಿನ ಪರಿಶೀಲನೆಗೆ ಒಳಪಡಿಸಲಾಗುತ್ತಿತ್ತು. ಅದು ಹೆಚ್ಚುತ್ತಿರುವ ನಗರೀಕರಣ ಮತ್ತು ವಲಸೆಯಿಂದ ಉಂಟಾಗಿರಬಹುದಾದ ದೋಷಗಳನ್ನು ಪತ್ತೆ ಹಚ್ಚಿ ಪರಿಹರಿಸಲು ಸಾಕಿತ್ತು.

ಅದಕ್ಕೆ ಪ್ರತಿಯಾಗಿ ಈಗಿನ ಎಸ್‌ಐಆರ್ ಪ್ರಕ್ರಿಯೆಯಲ್ಲಿ ದೇಶದ ಪ್ರತಿಯೊಬ್ಬರೂ ನಾಗರಿಕತ್ವವನ್ನು ಸಾಬೀತು ಪಡಿಸಿಕೊಳ್ಳಬೇಕು. ಈ ಪ್ರಕ್ರಿಯೆಯಲ್ಲಿ ಬಹುಪಾಲು ಅರ್ಹ ನಾಗರಿಕರ ಬಳಿ ಇರುವ ಯಾವ ದಾಖಲೆಗಳನ್ನು (ರೇಷನ್ ಕಾರ್ಡ್, ವೋಟರ್ ಕಾರ್ಡ್, ಬ್ಯಾಂಕ್ ಪಾನ್ ಕಾರ್ಡ್ ಇತ್ಯಾದಿ) ಆಯೋಗ ಮಾನ್ಯ ಮಾಡುವುದಿಲ್ಲ. ಬದಲಿಗೆ ಆಯೋಗ ಕೇಳುವ ಯಾವ ದಾಖಲೆಗಳೂ (ಪಾಸ್ ಪೋರ್ಟ್, ಆಸ್ತಿ ಪತ್ರ, ಜನನ ದಾಖಲೆ ಇತ್ಯಾದಿ) ಜನರ ಬಳಿ ಇಲ್ಲ. ಆದ್ದರಿಂದ ಎಸ್‌ಐಆರ್‌ನ ಉದ್ದೇಶ ಅರ್ಹ ಮತದಾರರನ್ನೂ ಹೊರದಬ್ಬುವ ಪ್ರಕ್ರಿಯೆಯೇ ವಿನಾ ಅನರ್ಹ ಮತದಾರರನ್ನು ಹೊರದಬ್ಬುವ ಪ್ರಕ್ರಿಯೆಯಲ್ಲ. ಹೀಗಾಗಿಯೂ ಎಸ್‌ಐಆರ್‌ನ ಉದ್ದೇಶಗಳಿಗೆ ಕಾನೂನು ಮಾನ್ಯವಲ್ಲ. ಆದರೆ ಸುಪ್ರೀಂ ಕೋರ್ಟ್ ಅಹವಾಲುದಾರರ ಈ ವಾದಗಳಿಗೆ ಯಾವ ಉತ್ತರವನ್ನೂ ಕೊಡದೆ ಆಯೋಗದ ವಾದವನ್ನು ಸಂಪೂರ್ಣವಾಗಿ ಪುರಸ್ಕರಿಸಿದೆ!

ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಸರಕಾರ ಮತ್ತು ಆಯೋಗ ಎಸ್‌ಐಆರ್ ಮಾಡಲು ಮುಂದಿಟ್ಟಿರುವ ಪ್ರಧಾನ ಕಾರಣವೇನೆಂದರೆ ಹೊರದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ನುಸುಳುತ್ತಿದ್ದಾರೆ. ಅಂತಹ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲು ಮತ್ತು ಹೊರಗಟ್ಟಲು ಎಸ್‌ಐಆರ್ ಅಗತ್ಯವಾಗಿದೆ ಎನ್ನುವುದು.

ಆದರೆ ಈವರೆಗೆ ಭಾರತಕ್ಕೆ ಎಷ್ಟು ಅಕ್ರಮ ವಲಸಿಗರು ಬಂದಿದ್ದಾರೆ ಎಂಬ ವರದಿಯೇ ಆಯೋಗದ ಬಳಿಯೂ ಇಲ್ಲ. ಮೋದಿ ಸರಕಾರದ ಬಳಿಯೂ ಇಲ್ಲ.

ಕಳೆದ ವಾರವಷ್ಟೇ ಭಾರತದಲ್ಲಿ ಅಕ್ರಮ ವಲಸಿಗರ ಪರಿಣಾಮವನ್ನು ಅಧ್ಯಯನ ಮಾಡಲು ಒಂದು ಆಯೋಗವನ್ನು ಕೇಂದ್ರ ರಚಿಸಿದೆ. ಅದು ಮುಂದಿನ ವರ್ಷ ವರದಿ ಕೊಟ್ಟರೂ ಕೊಡಬಹುದು! ಅಂದರೆ ಈಗಂತೂ ಯಾವುದೇ ಆಧಾರ ಇಲ್ಲದಿದ್ದರೂ ಅಕ್ರಮ ವಲಸಿಗರ ಭೂತದ ಬಗ್ಗೆ ಮೋದಿ ಸರಕಾರ ಮಾಡುತ್ತಿರುವ ವಾದವನ್ನು ಸುಪ್ರೀಂ ಕೋರ್ಟ್ ಯಾವುದೇ ಪುರಾವೆಯನ್ನು ಕೇಳದೆ ಒಪ್ಪಿಕೊಂಡಿದೆ.

ಆಷ್ಟೇ ಮುಖ್ಯವಾಗಿ ಎಸ್‌ಐಆರ್ ಮುಗಿದಿರುವ ರಾಜ್ಯಗಳಲ್ಲಿ ಎಸ್‌ಐಆರ್ ಮೂಲಕ ಎಷ್ಟು ಮಂದಿ ಅಕ್ರಮ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂಬ ವಿವರಗಳನ್ನೇ ಆಯೋಗ ಈವರೆಗೆ ಕೊಟ್ಟಿಲ್ಲ.

ಸುಪ್ರೀಂ ಕೋರ್ಟ್ ಅದನ್ನು ಕೇಳುವ ಗೋಜಿಗೂ ಹೋಗಿಲ್ಲ.

ಎಸ್‌ಐಆರ್ ಪ್ರಕ್ರಿಯೆಗಳು ಸೃಷ್ಟಿಸಿರುವ ಅನಾಹುತಗಳಿಗೆ ಉದ್ದೇಶಪೂರ್ವಕವಾಗಿ ಕುರುಡಾದ ಸುಪ್ರೀಂ!

ಬಿಹಾರವನ್ನು ಒಳಗೊಂಡು ಎಲ್ಲಾ ರಾಜ್ಯಗಳಲ್ಲೂ ಮೂರು-ನಾಲ್ಕು ತಿಂಗಳ ಅವಧಿಯಲ್ಲಿ ಈ ಎಸ್‌ಐಆರ್ ಪ್ರಕ್ರಿಯೆಯನ್ನು ಮುಗಿಸಲು ಹೊರಟಿರುವ ಆಯೋಗದ ತರಾತುರಿಯ ಬಗ್ಗೆ ಸುಪ್ರೀಂ ಮೌನ ವಹಿಸಿರುವುದು ಮಾತ್ರವಲ್ಲ, ಅದನ್ನು ಹಾಸ್ಯಾಸ್ಪದವಾಗಿ ಸಮರ್ಥಿಸಿಕೊಂಡಿದೆ ಹಾಗೂ ಚುನಾವಣೆಯ ನಾಮಪತ್ರ ಸಲ್ಲಿಕೆಯಾಗುವವರೆಗೂ ಎಸ್‌ಐಆರ್ ನಡೆಯುವುದರಿಂದ ಹಾನಿ ಇಲ್ಲವೆಂದು ಪ್ರತಿಪಾದಿಸಿದೆ.

ಅತ್ಯಂತ ಅಪಾಯಕಾರಿ ಮೋದಿ ಕುರುಡೆಂದರೆ ಆಯೋಗವು ಎಸ್‌ಐಆರ್‌ಗೆ ರೂಪಿಸಿರುವ ಪ್ರಕ್ರಿಯೆಯಿಂದ ಪ. ಬಂಗಾಳದ ಚುನಾವಣೆಯಲ್ಲಿ 27 ಲಕ್ಷ ಮತದಾರರು ತಮ್ಮದಲ್ಲದ ತಪ್ಪಿಗೆ ಮತದಾನದಿಂದ ವಂಚಿತರಾಗಿರುವ ಬಗ್ಗೆ ಸುಪ್ರೀಂ ಒಂದು ಷರಾ ಕೂಡ ಬರೆದಿಲ್ಲ. ಅಷ್ಟು ಮಾತ್ರವಲ್ಲ. ದೇಶಾದ್ಯಂತ ಈ ಪ್ರಕ್ರಿಯೆಯಲ್ಲಿ ಮೂಲ ಮತಪಟ್ಟಿಯಿಂದ ಶೇ. 10-20ರಷ್ಟು ಮತದಾರರು ಅಂದರೆ ಈವರೆಗೆ 7.5 ಕೋಟಿ ಮತದಾರರು ಹೊರದಬ್ಬಲ್ಪಟ್ಟಿದ್ದಾರೆ.

ಆದರೆ ಸುಪ್ರೀಂ ತನ್ನ ತೀರ್ಪಿನ 95ನೇ ಪ್ಯಾರಾದಲ್ಲಿ:

.. The post-exercise data placed on record does not disclose a level of disenfranchisement so widespread or systemic as to indicate a constitutional infirmity in the design of the exercise. ಎಂದು ಘೋಷಿಸಿದೆ.

(ಅಂದರೆ: ನಮ್ಮ ಮುಂದಿರುವ ದಾಖಲೆಗಳು ಅಹವಾಲುದಾರರು ಹೇಳುವಂತೆ ಎಸ್‌ಐಆರ್‌ನಿಂದ ದೊಡ್ಡ ಸಂಖ್ಯೆಯ ಮತದಾರರು ಮತದಾನದ ಹಕ್ಕನ್ನು ಕಳೆದುಕೊಂಡಿದ್ದಾರೆಂಬುದಾಗಲೀ, ಅದಕ್ಕೆ ಎಸ್‌ಐಆರ್ ಪ್ರಕ್ರಿಯೆಯಲ್ಲಿ ಮೂಲಭೂತವಾಗಿರುವ ದೋಷಗಳು ಕಾರಣ ಎಂಬುದಾಗಲೀ ಸಾಬೀತಾಗಿಲ್ಲ) ಇದಕ್ಕಿಂತ ಮೋದಿ ಕುರುಡು ಮತ್ತೊಂದಿರಲು ಸಾಧ್ಯವೇ?

ಆದರೂ ಸುಪ್ರೀಂ ಎಸ್‌ಐಆರ್ ಪ್ರಕ್ರಿಯೆಯಲ್ಲಿ ರಚಿಸಲಾಗಿರುವ ಮನವಿ, ಮೇಲ್ಮನವಿ ಇತ್ಯಾದಿಗಳು ಅತ್ಯಂತ ಸಕಾರಾತ್ಮಕವಾಗಿದೆ ಎಂದು ಆಯೋಗದ ಬೆನ್ನು ತಟ್ಟಿ ಮೋದಿ ನಿಷ್ಠೆಯನ್ನು ಸಾಬೀತು ಪಡಿಸಿಕೊಂಡಿದೆ. ಪ. ಬಂಗಾಳದಲ್ಲಿ ಈ ಪ್ರಕ್ರಿಯೆಗಳು ಅತ್ಯಂತ ಅಸಮರ್ಪಕವಾಗಿದೆ ಎಂದು ಅದಕ್ಕಾಗಿ ನೇಮಿಸಲ್ಪಟ್ಟಿದ್ದ ನಿವೃತ್ತ ಹೈಕೋರ್ಟ್ ನ್ಯಾಯಾಧೀಶರೇ ರಾಜೀನಾಮೆ ಕೊಟ್ಟಿದ್ದಾರೆ.

ಆಯೋಗದ ಅಪಾಯಕಾರಿ ನಾಗರಿಕತ್ವ ಪರಿಶೀಲನೆಯೂ ಸರಿಯಂತೆ!

ಎಸ್‌ಐಆರ್‌ನ ಅತ್ಯಂತ ಅಪಾಯಕಾರಿ ಕ್ರಮವಾಗಿರುವ ನಾಗರಿಕತ್ವ ಪರಿಶೀಲನೆಯನ್ನೂ ಸಹ ಸುಪ್ರೀಂ ಕುರುಡಾಗಿ ಎತ್ತಿ ಹಿಡಿದಿದೆ. 18 ವರ್ಷ ತುಂಬಿದ ಭಾರತೀಯ ನಾಗರಿಕರಿಗೆ ಮತದಾನದ ಹಕ್ಕು ಕೊಡುವಾಗ ಅವರ ಭಾರತೀಯತೆಯನ್ನು ಪ್ರಶ್ನಿಸುವ ಅಧಿಕಾರ ಆಯೋಗಕ್ಕಿದೆ ಎಂಬ ನೆಪದಲ್ಲಿ ಸುಪ್ರೀಂ ಎಸ್‌ಐಆರ್‌ನಲ್ಲಿ ನಾಗರಿಕತ್ವ ಪರಿಶೀಲನೆಯನ್ನು ಎತ್ತಿಹಿಡಿದಿದೆ.

ನಾಗರಿಕತ್ವದ ಬಗ್ಗೆ ಅಂತಿಮ ತೀರ್ಮಾನ ಮಾಡುವ ಅಧಿಕಾರ ಆಯೋಗಕ್ಕೆ ಇಲ್ಲವಾದರೂ, ಮತದಾನದ ಹಕ್ಕು ಕೊಡಬೇಕೇ ಬೇಡವೇ ಎಂಬ ತೀರ್ಮಾನ ತೆಗೆದುಕೊಳ್ಳುವ ಅಧಿಕಾರ ಆಯೋಗಕ್ಕಿದೆ ಎಂಬ ಸ್ವ ವೈರುಧ್ಯದ ತೀರ್ಪನ್ನು ಸುಪ್ರೀಂ ನೀಡಿದೆ.

ಆಯೋಗವು ಮತಪಟ್ಟಿಯಿಂದ ಹೊರಗಿಟ್ಟರೂ ಅವರ ನಾಗರಿಕತ್ವವು ಅಂತಿಮ ತೀರ್ಮಾನವಾಗುವುದು ಸೂಕ್ತ ಪ್ರಾಧಿಕಾರದ ವಿಚಾರಣೆಯ ಆನಂತರವೇ ಎಂಬ ಸಮಜಾಯಿಷಿಯನ್ನು ಕೊಟ್ಟಿದೆ.

ಆದರೆ ನಾಗರಿಕತ್ವದ ಪ್ರಮುಖ ಲಕ್ಷಣವೇ ದೇಶದ ರಾಜಕೀಯ ಸಮುದಾಯದ ಭಾಗವಾಗಿ ಮತದಾನ ಮಾಡುವುದು. ಆಯೋಗವು ಎಸ್‌ಐಆರ್ ಮೂಲಕ ಮಾಡುವುದು ಕೇವಲ ನಾಗರಿಕತ್ವ ಪರಿಶೀಲನೆ ಮಾತ್ರವಲ್ಲ. ಅದನ್ನು ಆಧರಿಸಿ ಕೋಟ್ಯಂತರ ಮತದಾರರನ್ನು ಅವರ ನಾಗರಿಕತ್ವದ ಅಂತಿಮ ತೀರ್ಮಾನ ಆಗುವ ಮೊದಲೇ ಮತದಾನದ ಹಕ್ಕಿನಿಂದ ಹೊರದಬ್ಬುವುದು ಸುಪ್ರೀಂಗೆ ಅನ್ಯಾಯ ಎಂದೇ ಅನಿಸಿಲ್ಲ.

ನಾಗರಿಕತ್ವ ನಿರಾಕರಣೆಯ ಬಗ್ಗೆ 1995ರಲ್ಲಿ ಸುಪ್ರೀಂನ ತ್ರಿಸದಸ್ಯ ಪೀಠ ಲಾಲ್ ಬಾಬು ಹುಸೇನ್ ಪ್ರಕರಣದಲ್ಲಿ ತೀರ್ಪು ನೀಡಿತ್ತು. ಅದರಲ್ಲಿ ನಾಗರಿಕತ್ವ ಮತ್ತು ಮತದಾನ ನಿರಾಕರಣೆಗಿರುವ ಸಂಬಂಧಗಳನ್ನು ಸ್ಪಷ್ಟಪಡಿಸಿತ್ತು ಹಾಗೂ ಹಿಂದಿನ ಚುನಾವಣೆಯಲ್ಲಿ ವೋಟು ಹಾಕಿದ್ದರೆ ಆ ವ್ಯಕ್ತಿಯ ನಾಗರಿಕತ್ವ ಸಾಬೀತಾಗಿರುವುದಕ್ಕೆ ಪುರಾವೆಯಾಗಿ ಪರಿಗಣಿಸಬೇಕೆಂದು ಆದೇಶಿಸಿತ್ತು.

ಆದರೆ ಆಯೋಗವು ಅದು ಕಾಲಕಾಲಕ್ಕೆ ಐಆರ್ ನಡೆಯುತ್ತಿದ್ದ ಕಾಲ. 2002ರ ನಂತರದ ಅವಧಿಗೆ ಅದು ಅನ್ವಯವಾಗಲ್ಲ ಎಂಬ ಕುತರ್ಕವನ್ನು ಮುಂದಿಟ್ಟರೆ ಸುಪ್ರೀಂ ಅದನ್ನು ಮಾನ್ಯ ಮಾಡಿದೆ.

ಒಟ್ಟಿನಲ್ಲಿ ಭಾರತದ ಜನರ ಮೇಲೆ ಮತ್ತು ಪ್ರಜಾತಂತ್ರದ ಮೇಲೆ ಮೋದಿ ನಡೆಸುತ್ತಿರುವ ದಾಳಿಗೆ ಎದುರಾಗಬಹುದಾದ ಎಲ್ಲಾ ನ್ಯಾಯಿಕ ಅಡೆತಡೆಗಳನ್ನು ಸುಪ್ರೀಂ ಈ ತೀರ್ಪಿನ ಮೂಲಕ ನಿವಾರಿಸಿಬಿಟ್ಟಿದೆ.

ಆದ್ದರಿಂದಲೇ ಈ ತೀರ್ಪು ಇದು ಸಂವಿಧಾನಕ್ಕೆ ಈವರೆಗೆ ಸುಪ್ರೀಂ ಮಾಡಿರುವ ಮಾಡಿರುವ ದ್ರೋಹಗಳಲ್ಲೇ ಅತ್ಯಂತ ಮಹಾ ದ್ರೋಹ.

ಆಯೋಗ ನಿಗದಿ ಪಡಿಸಿರುವ ದಾಖಲೆಗಳು ಅತ್ಯಂತ ಜನಸ್ನೇಹಿಯಂತೆ!

ಹಾಗೆಯೇ ನಾಗರಿಕತ್ವವನ್ನು ಸಾಬೀತು ಪಡಿಸಲು ಆಯೋಗ ನಿಗದಿ ಪಡಿಸಿರುವ ದಾಖಲೆಗಳು ಐಆರ್ ಪ್ರಕ್ರಿಯೆಯ ದಾಖಲೆಗಳಿಗಿಂತ ಜನಸ್ನೇಹಿಯಾಗಿವೆ ಎಂದು ಹಾಸ್ಯಾಸ್ಪದವಾಗಿ ಸಮರ್ಥಿಸಿಕೊಂಡಿದೆ.

ಅಷ್ಟು ಮಾತ್ರವಲ್ಲ ಜನರ ಬಳಿ ಆಯೋಗ ನಿಗದಿ ಪಡಿಸಿದ್ದ ದಾಖಲೆಗಳು ಇಲ್ಲದಿದ್ದ ಕಾರಣಕ್ಕೆ ತಾನು ಆಧಾರ್ ಅನ್ನು 12ನೇ ದಾಖಲೆಯಾಗಿ ಸೇರಿಸಿಕೊಳ್ಳಬೇಕೆಂಬ ಆದೇಶ ಕೊಡಬೇಕಾಗಿ ಬಂತು ಎಂಬುದನ್ನು ಕೂಡ ಪರಿಗಣಿಸದೆ ಸ್ವಯಂ ವೈರುಧ್ಯಗಳಿರುವ ಆದೇಶ ಹೊರಡಿಸಿದೆ.

ಇದೀಗ ಆಧಾರ್ ಬಗ್ಗೆಯೂ ಉಲ್ಟಾ ಹೊಡೆದಿರುವ ಸುಪ್ರೀಂ ಕೋರ್ಟ್ ಆಧಾರ್ ಏಕೈಕ ದಾಖಲೆಯಾಗಲಾರದೆಂದೂ ಹೇಳಿಬಿಟ್ಟಿದೆ. ಐಆರ್ ಪ್ರಕ್ರಿಯೆಯಲ್ಲಿ ಮಾನ್ಯವಾಗುತ್ತಿದ್ದ ರೇಷನ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಗಳನ್ನು ಸುಲಭವಾಗಿ ಫೋರ್ಜರಿ ಮಾಡಬಹುದು ಎಂಬ ಆಯೋಗದ ಕ್ಷುಲ್ಲಕ ವಾದವನ್ನು ಕೂಡ ಮರುಮಾತಿಲ್ಲದೆ ಮಾನ್ಯ ಮಾಡಿದೆ. ಆಧಾರ್, ರೇಶನ್ ಕಾರ್ಡ್ ಫೋರ್ಜರಿ ಮಾಡುವಂತೆ ಆಯೋಗ ನಿಗದಿಪಡಿಸಿರುವ ಎಲ್ಲಾ ಹನ್ನೊಂದು ದಾಖಲೆಗಳನ್ನು ಸುಲಭವಾಗಿ ಫೋರ್ಜರಿ ಮಾಡಲು ಸಾಧ್ಯ ಎಂದು ತಾನೇ ವಾದದ ಸಮಯದಲ್ಲಿ ಉಲ್ಲೇಖಿಸಿದ್ದನ್ನು ನಿಗೂಢವಾಗಿ ಮರೆತುಬಿಟ್ಟಿದೆ.

ಅಷ್ಟು ಮಾತ್ರವಲ್ಲ... ತನ್ನ ತೀರ್ಪಿನ 158ನೇ ಪ್ಯಾರಾದಲ್ಲಿ:

... The choice of proposed documents for verification of electoral rolls and their evidentiary standards necessarily falls within the discretionary domain of the Commission which may not be substituted subject to reasonableness.

ಯಾವ ದಾಖಲೆಗಳು ಬೇಕೆಂಬ ನಿಯಮವನ್ನು ರೂಪಿಸುವ ಆಯೋಗದ ಅಧಿಕಾರವನ್ನು ಎತಿಹಿಡಿದುಬಿಟ್ಟಿದೆ. ಅದೇ ರೀತಿ ಪ್ಯಾರಾ 153ರಲ್ಲಿ:

A perusal of the documentation framework suggests that the list of documents is indicative of materials that are ordinarily available to electors.

ಆಯೋಗವು ಸೂಚಿಸಿರುವ ದಾಖಲೆಗಳು ಸಾಮಾನ್ಯವಾಗಿ ಎಲ್ಲಾ ಮತದಾರರ ಬಳಿ ಇರುವಂತಹ ದಾಖಲೆಗಳೇ ಆಗಿವೆ ಎಂದು ಘೋಷಿಸಿಬಿಟ್ಟಿದೆ. ದಾಖಲೆಗಳಿಲ್ಲದ ಕಾರಣಕ್ಕೆ ಕೋಟ್ಯಂತರ ಜನ ಹೊರದಬ್ಬಲ್ಪಡುತ್ತಿದ್ದರೂ!

ಎಸ್‌ಐಆರ್‌ಗಿಂತ ಬೇರೆ ಪರ್ಯಾಯ ಸೂಚಿಸುವ ಅಧಿಕಾರ ಇಲ್ಲ!

ಸುಪ್ರೀಂ ತೀರ್ಪಿನಲ್ಲಿ ಮತ್ತು ಆಯೋಗದ ವಾದಗಳಲ್ಲಿ ಎಸ್‌ಐಆರ್ ಬಿಟ್ಟು ಬೇರೆ ಪ್ರಕ್ರಿಯೆ ಏಕೆ ಸಾಧ್ಯವಿರಲಿಲ್ಲ ಮತ್ತು ಎಸ್‌ಐಆರ್ ಮಾತ್ರ ಏಕೈಕ ಪರಿಹಾರ ಎಂಬ ಸಂದರ್ಭ ಭಾರತದಲ್ಲೇನಿತ್ತು ಎಂಬ ಬಗ್ಗೆ ಯಾವ ಸಕಾರಣ, ಸತರ್ಕ ವಾದಗಳನ್ನು ಆಯೋಗ ಮುಂದಿಟ್ಟಿರಲಿಲ್ಲ.

ಇಂಥ ಹಾನಿಕರ ಕ್ರಮಕ್ಕೆ ಬದಲಾಗಿ ಕಡಿಮೆ ಹಾನಿಕರವಾದ ಐಆರ್ ಅಥವಾ ಇತರ ಪರ್ಯಾಯ ಮಾರ್ಗಗಳ ಸಾಧ್ಯತೆ ಏಕೆ ಪರಿಶೀಲಿಸಿಲ್ಲ ಎಂಬ ಪ್ರಶ್ನೆಗೆ ಸುಪ್ರೀಂ ತನಗೆ ಅಂಥ ಪರ್ಯಾಯ ಸೂಚಿಸುವ ತಾಂತ್ರಿಕ ಸಾಮರ್ಥ್ಯವಿಲ್ಲ ಎಂದು ಹೇಳಿ ಕೈ ತೊಳೆದುಕೊಂಡಿದೆ.

ನಾಗರಿಕತ್ವದ ಪರಿಶೀಲನೆ ಇಲ್ಲದೆ ರಾಜ್ಯ ಸರಕಾರಗಳ ಪ್ರತ್ಯೇಕ ಮತಪಟ್ಟಿಗೂ ಅವಕಾಶವಿಲ್ಲ!

ಇದಿಷ್ಟು ಮಾತ್ರವಲ್ಲ. ಇದೀಗ ಎಸ್‌ಐಆರ್‌ನಲ್ಲಿ ದಾಖಲೆಗಳನ್ನು ಒದಗಿಸಲಾಗದೆ ದೇಶೀಯರಲ್ಲ ಎಂಬ ಅನುಮಾನಕ್ಕೆ ಗುರಿಯಾಗಿರುವವರ ಪಟ್ಟಿಯನ್ನು ಆಯೋಗ ನಾಲ್ಕು ವಾರಗಳ ಒಳಗಾಗಿ ಕೇಂದ್ರಕ್ಕೆ ಸಲ್ಲಿಸಬೇಕು.

ಕೇಂದ್ರದ ಸಕ್ಷಮ ಪ್ರಾಧಿಕಾರ ಅದರ ಬಗ್ಗೆ ಯಾವುದೇ ಲೋಕಸಭಾ, ಶಾಸನಸಭಾ ಅಥವಾ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಮುನ್ನ ಅವರ ನಾಗರಿಕತ್ವದ ಬಗ್ಗೆ ಅಂತಿಮ ತೀರ್ಮಾನ ತೆಗೆದುಕೊಳ್ಳಬೇಕೆಂದು ಆದೇಶಿಸಿದೆ.

ಅಂದರೆ ರಾಜ್ಯಗಳ ಸುಪರ್ದಿಯಲ್ಲಿರುವ ರಾಜ್ಯ ಆಯೋಗಗಳು ತನ್ನ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪ್ರತ್ಯೇಕ ಮತಪಟ್ಟಿಯನ್ನು ತಯಾರಿಸುವಂತಿಲ್ಲ.

ಎದ್ದೇಳು ಕರ್ನಾಟಕ ಇನ್ನಿತರ ಸಂಘಟನೆಗಳು ವಿರೋಧ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ರಾಜ್ಯ SECಯನ್ನು ಬಳಸಿ ಎಸ್‌ಐಆರ್ ಹಂಗಿಲ್ಲದ ಪರ್ಯಾಯ ಪಟ್ಟಿ ತಯಾರಿಸಿದರೆ ಅದು ಎಸ್‌ಐಆರ್‌ಗೆ counter ಆಗಬಹುದು ಎಂದು ಭಾವಿಸಿದ್ದರು. ಅದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಸುಪ್ರೀಂ ಕೋರ್ಟ್ ತಾನು ಮೋದಿ ರಕ್ಷಕನೇ ಹೊರತು ಸಂವಿಧಾನ ಅಥವಾ ಜನರಕ್ಷಕನಲ್ಲ ಎಂದು ಸಾಬೀತು ಮಾಡಿದೆ.

ಹೀಗಾಗಿ ಈ ತೀರ್ಪು ಮೋದಿ ಯುಗದಲ್ಲಿ ಸಂಭವಿಸುತ್ತಿರುವ ಭಾರತದ ನ್ಯಾಯಾಂಗದ ಅವನತಿಯಲ್ಲಿ ಮತ್ತೊಂದು ಅತ್ಯಂತ ಅಪಾಯಕಾರಿ ಮೈಲಿಗಲ್ಲು.

ಎಸ್‌ಐಆರ್ ವಿರೋಧಿಸಲು ಮತ್ತು ಸಂವಿಧಾನ ರಕ್ಷಿಸಲು ಈಗ ಜನರಿಗೆ ಉಳಿದಿರುವುದು ಬೀದಿ ಹೋರಾಟ, ಜನಸಂಘಟನೆ ಮತ್ತು ಜನರ ಏಕತೆ ಮಾತ್ರ.

Tags

Supreme CourtSIR
share
ಶಿವಸುಂದರ್
ಶಿವಸುಂದರ್
Next Story
X