‘ಆವರಣ’ ಎಂಬ (ವಿ)ಕೃತಿ ದ್ವೇಷದ ಅನಾವರಣ, ಸತ್ಯದ ವಿಕ್ಷೇಪ

ಹಿಟ್ಲರ್ ಇಡೀ ಜಗತ್ತಿಗೆ ಮಾತ್ರವಲ್ಲದೆ ತನ್ನದೇ ಜರ್ಮನರಿಗೆ ತಂದಿಟ್ಟ ದುರ್ಗತಿ, ಚಾರಿತ್ರಿಕ ಅವಮಾನ ಎಲ್ಲವೂ ಇತಿಹಾಸದಲ್ಲಿ ಸಮೃದ್ಧವಾಗಿ ದಾಖಲಾಗಿದೆ. ಹಾಗೆಯೇ ಹಿಟ್ಲರ್ ಅಧಿಕಾರಕ್ಕೆ ಬರಲು ಕಾರಣವಾದ ಮೋಹಕ ಆದರೆ ಭಯಾನಕ ಸುಳ್ಳುಗಳ ಸಾಹಿತ್ಯ ಮತ್ತು ಸಂಸ್ಕೃತಿಗಳ ಪಾತ್ರವೂ ಸಹ.
ವಾಸ್ತವದಲ್ಲಿ ಸಮಾಜ ವಿನಾಶಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಬೆಂಬಲವಿಲ್ಲದೆ ಹಿಟ್ಲರ್‌ನಂತಹವರೊಬ್ಬರು ಹುಟ್ಟುತ್ತಲೇ ಇರಲಿಲ್ಲ.
ಹೇಗೆ ಅಪಾರವಾದ ಶ್ರಮ, ವಿಜ್ಞಾನ-ತಂತ್ರಜ್ಞಾನ ಇದ್ದರೂ ಸಮೂಹ ವಿನಾಶಿ ಶಸ್ತ್ರಾಸ್ತ್ರಗಳು ಜಗತ್ತಿಗೆ ಮಾರಕವೋ ಹಾಗೆಯೇ ಅಪಾರ ಅಧ್ಯಯನ, ಮೋಹಕ ಕುಸುರಿ, ಕಥನ ಕೌಶಲ್ಯ ಉಳ್ಳ ಸಮಾಜ ವಿನಾಶಿ ಮನುವಾದಿ ಸಾಹಿತ್ಯವೂ ಕೂಡ ಮಾನವೀಯ ಮೌಲ್ಯಗಳುಳ್ಳ ಸಮಾಜಕ್ಕೆ ಮಾರಕವೇ.
ಭಾಗ - 1
ಪ್ರಸ್ತುತ ಭಾರತದ ಸಂದರ್ಭವನ್ನು ದ್ವೇಷೋನ್ಮೋದಿ ಹಿಟ್ಲರ್‌ನ ಜರ್ಮನಿಯ ಸಂದರ್ಭಕ್ಕೆ ಹೋಲಿಸಬಹುದಲ್ಲವೇ?
ಹಿಟ್ಲರ್ ಇಡೀ ಜಗತ್ತಿಗೆ ಮಾತ್ರವಲ್ಲದೆ ತನ್ನದೇ ಜರ್ಮನರಿಗೆ ತಂದಿಟ್ಟ ದುರ್ಗತಿ, ಚಾರಿತ್ರಿಕ ಅವಮಾನ ಎಲ್ಲವೂ ಇತಿಹಾಸದಲ್ಲಿ ಸಮೃದ್ಧವಾಗಿ ದಾಖಲಾಗಿದೆ. ಹಾಗೆಯೇ ಹಿಟ್ಲರ್ ಅಧಿಕಾರಕ್ಕೆ ಬರಲು ಕಾರಣವಾದ ಮೋಹಕ ಆದರೆ ಭಯಾನಕ ಸುಳ್ಳುಗಳ ಸಾಹಿತ್ಯ ಮತ್ತು ಸಂಸ್ಕೃತಿಗಳ ಪಾತ್ರವೂ ಸಹ.
ವಾಸ್ತವದಲ್ಲಿ ಸಮಾಜ ವಿನಾಶಿ ಸಾಹಿತ್ಯ ಮತ್ತು ಸಂಸ್ಕೃತಿಗಳ ಬೆಂಬಲವಿಲ್ಲದೆ ಹಿಟ್ಲರ್‌ನಂತಹವರೊಬ್ಬರು ಹುಟ್ಟುತ್ತಲೇ ಇರಲಿಲ್ಲ.
ಹೇಗೆ ಅಪಾರವಾದ ಶ್ರಮ, ವಿಜ್ಞಾನ-ತಂತ್ರಜ್ಞಾನ ಇದ್ದರೂ ಸಮೂಹ ವಿನಾಶಿ ಶಸ್ತ್ರಾಸ್ತ್ರಗಳು ಜಗತ್ತಿಗೆ ಮಾರಕವೋ ಹಾಗೆಯೇ ಅಪಾರ ಅಧ್ಯಯನ, ಮೋಹಕ ಕುಸುರಿ, ಕಥನ ಕೌಶಲ್ಯ ಉಳ್ಳ ಸಮಾಜ ವಿನಾಶಿ ಮನುವಾದಿ ಸಾಹಿತ್ಯವೂ ಕೂಡ ಮಾನವೀಯ ಮೌಲ್ಯಗಳುಳ್ಳ ಸಮಾಜಕ್ಕೆ ಮಾರಕವೇ.
ಇರಲಿ. ಇತ್ತೀಚೆಗೆ ತಮ್ಮ ಇಳಿಪ್ರಾಯದಲ್ಲಿ ನಿಧನರಾದ ಎಸ್.ಎಲ್. ಭೈರಪ್ಪನವರು ತಮ್ಮ ಕಥನ ಪ್ರತಿಭೆಯಿಂದ ಕಾದಂಬರಿ ಕ್ಷೇತ್ರದಲ್ಲಿ ಅಪಾರ ಹೆಸರು ಮತ್ತು ಓದುಗರನ್ನು ಪಡೆದವರು.
ಆದರೂ ಅವರ ‘ಗೃಹಭಂಗ’ ಕಾದಂಬರಿಯನ್ನು ಹೊರತು ಪಡಿಸಿದರೆ, ಅವರ ಮೊದಲ ಕಾದಂಬರಿ ಧರ್ಮಶ್ರೀಯಿಂದ ಹಿಡಿದು ಬಹುಪಾಲು ಎಲ್ಲಾ ಕಾದಂಬರಿಗಳು ಮನುಷ್ಯತ್ವ ವಿರೋಧಿ ಮನುವಾದಿ ಬ್ರಾಹ್ಮಣ್ಯ ಸಿದ್ಧಾಂತದ ಶ್ರೇಷ್ಠತೆ ಮತ್ತು ಅದನ್ನು ಉಲ್ಲಂಘಿಸುವ ಮೌಲ್ಯಗಳ ಪತನವನ್ನು ಪ್ರತಿಪಾದಿಸುವಂತಹವೇ ಆಗಿವೆ.
ಅವರ ಕೊನೆಕೊನೆಯ ಕಾದಂಬರಿಗಳಂತೂ, ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ಸಂಘ ಪರಿವಾರದ ಅತ್ಯಂತ ಅಗ್ಗದ ಪ್ರಚಾರ ಸಾಹಿತ್ಯವಾಗಿತ್ತು.
ಒಬ್ಬ ಮನುಷ್ಯನ ಸಾಹಿತ್ಯ ದರ್ಶನಕ್ಕೂ, ಜೀವನ ದರ್ಶನಕ್ಕೂ ಮೂಲಭೂತ ವ್ಯತ್ಯಾಸವಿರುವುದಿಲ್ಲ ಎಂಬುದನ್ನು ಕೊನೆಯ ಕೆಲ ವರ್ಷಗಳ ಅವರ ಸಾರ್ವಜನಿಕ ನಿಲುವುಗಳೂ ಸಾಬೀತು ಪಡಿಸುತ್ತಿತ್ತು.
ಈ ಸಾಲಿಗೆ ಸೇರುವ ಅವರ ಕಾದಂಬರಿ ‘ಆವರಣ’ವು 2007ರಲ್ಲಿ ಬಿಡುಗಡೆಯಾಯಿತು. ಹಿಂದುತ್ವವಾದಿ ದ್ವೇಷ ರಾಜಕಾರಣವೂ ಕರ್ನಾಟಕದಲ್ಲಿ ವಿಸ್ತರಿಸುತ್ತಾ ಕನ್ನಡ ಸಮಾಜವನ್ನು ವ್ಯಾಪಕವಾಗಿ ಆವರಿಸುತ್ತಿದ್ದ ಸಂದರ್ಭವದು. ಹೀಗಾಗಿ ಅತ್ಯಂತ ಕಳಪೆಯಾಗಿದ್ದರೂ ಸಂಘಿ ರಾಜಕೀಯ ಮೌಲ್ಯದ ಉಗ್ರ ಪ್ರತಿಪಾದನೆ ಮಾಡುವ ‘ಆವರಣ’ ಕನ್ನಡ ಓದುಗ ಸಮುದಾಯದಲ್ಲಿ ಬಿಸಿಬಿಸಿ ಚರ್ಚೆಯನ್ನು ಹುಟ್ಟುಹಾಕಿತ್ತು.
ಆಗ ಗೌರಿ ಲಂಕೇಶರು ತಮ್ಮ ಪತ್ರಿಕೆಯಲ್ಲಿ ಆವರಣದ ಬಗ್ಗೆ ಹಲವಾರು ವಿಮರ್ಶಾತ್ಮಕ ಬರಹಗಳನ್ನು ಪ್ರಕಟಿಸಿದ್ದಲ್ಲದೆ, ಮತ್ತಷ್ಟು ವಿಮರ್ಶೆಗಳನ್ನು ಸಂಗ್ರಹಿಸಿ ತಮ್ಮ ಪ್ರಕಾಶನದಿಂದ ‘ಆವರಣ ಎಂಬ (ವಿ)ಕೃತಿ’ ಎಂಬ ವಿಮರ್ಶಾ ಲೇಖನಗಳ ಸಂಗ್ರಹವನ್ನು ಪ್ರಕಟಿಸಿದ್ದರು.
ಆ ಸಂಗ್ರಹಕ್ಕೆ ನಾನು ‘ದ್ವೇಷದ ಅನಾವರಣ ಮತ್ತು ಸತ್ಯದ ವಿಕ್ಷೇಪ’ ಎಂಬ ಶೀರ್ಷಿಕೆಯಲ್ಲಿ ಒಂದು ವಿಮರ್ಶೆಯನ್ನು ಬರೆದಿದ್ದೆ. ಹೊಸ ಓದುಗರಿಗೆ ಇಂದಿನ ಅಂಕಣದಲ್ಲಿ ಮತ್ತೊಮ್ಮೆ ಆ ಲೇಖನ..
ಕೊಲೆಯಲ್ಲೂ ಕಲೆಯನ್ನು ಕಾಣಬೇಕೆನ್ನುವ, ಸಾಹಿತ್ಯಿಕ ಪ್ರತಿಭೆಯನ್ನು-ಸಾಹಿತ್ಯದ ಸೈದ್ಧಾಂತಿಕ ಸಾರದಿಂದ ಬೇರ್ಪಡಿಸಿ ಬೆರಗಾಗುವ, ಸಾಹಿತಿಯ ಬರಹವನ್ನು ಸಾಹಿತಿಯ ಬದುಕಿನಿಂದ ಬೇರ್ಪಡಿಸಿ ನೋಡಬೇಕೆನ್ನುವ, ಸಾಹಿತಿಯ ಸಾಹಿತ್ಯ ದರ್ಶನವು-ಅವರ ಜೀವನ ದರ್ಶನದ ಉತ್ಪತ್ತಿ ಎಂಬುದನ್ನು ಒಪ್ಪಿಕೊಳ್ಳದ ಕನ್ನಡದ ಬಹುಪಾಲು ಉದಾರವಾದಿ ವಿದ್ವತ್ ಲೋಕವೇ ಮನುಷ್ಯ ವಿರೋಧಿ ಸಾಹಿತ್ಯಕ್ಕೆ, ಅಂತಹ ಸಾಹಿತಿಗಳಿಗೆ ಮತ್ತು ಆ ಮೂಲಕ ಅವರ ರಾಜಕೀಯಕ್ಕೆ ಇತಿಹಾಸದಲ್ಲೂ ಮತ್ತು ವರ್ತಮಾನದಲ್ಲೂ ಮನ್ನಣೆ ದಕ್ಕಲು ಕಾರಣರಾದೆ ಎನ್ನುವುದು ಕನ್ನಡ ಸಂದರ್ಭದ ಕಟು ವಾಸ್ತವ.
ಹೀಗಾಗಿಯೂ ‘ಆವರಣ’ ನೆನಪನ್ನು ಮಾಡಬೇಕೆನಿಸಿತು.
ದ್ವೇಷದ ಅನಾವರಣ, ಸತ್ಯದ ವಿಕ್ಷೇಪ
ವಾಸ್ತವವಾಗಿ ಭೈರಪ್ಪನವರ ‘ಆವರಣ’ ಒಂದು ಕಾದಂಬರಿಯೂ ಅಲ್ಲ, ಒಂದು ಸಾಹಿತ್ಯ ಕೃತಿಯೂ ಅಲ್ಲ. ಏಕೆಂದರೆ ಸಾಹಿತ್ಯಕ್ಕೆ ಕೆಲವು ಆದರ್ಶಗಳಿವೆ. ಕಾದಂಬರಿ ಪ್ರಕಾರವು ಸಿದ್ಧಾಂತ ರಹಿತವಾಗಿ ಇರಲು ಸಾಧ್ಯವಿಲ್ಲವಾದರೂ ಅದು ಮೂಲಭೂತವಾಗಿ ಮನುಷ್ಯ ಸಂಬಂಧಗಳ ಅನ್ವೇಷಣೆಯಾಗಿದೆ. ಮನುಷ್ಯ ಸಂಬಂಧಗಳು ಭಾವನಾತ್ಮಕವಾದರೂ ಅದರ ಏರುಪೇರುಗಳ ಆಳದಲ್ಲಿ ಅಧಿಕಾರ ಸಂಬಂಧಗಳು ಅಡಗಿರುತ್ತವಾದ್ದರಿಂದ ಅಂತರ್ಗಾಮಿನಿಯಾಗಿ ಕಾದಂಬರಿಕಾರನ ಸಿದ್ಧಾಂತ ಹರಿಯುತ್ತದೆ. ಆದರೆ ಅಂತಿಮವಾಗಿ ಒಂದು ಶ್ರೇಷ್ಠ ಕಾದಂಬರಿ ಓದುಗನ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಪ್ರಪಂಚವನ್ನು ಇನ್ನೊಂದು ಹೆಜ್ಜೆ ಮೇಲಕ್ಕೆ ಕೊಂಡೊಯ್ಯುತ್ತದೆ. ಭೈರಪ್ಪನವರು ಆ ಉದ್ದೇಶವಿಲ್ಲದೆ ಬರೆದ ‘ಗೃಹಭಂಗ’ ಕಾದಂಬರಿ ಕಾದಂಬರಿಕಾರನ ಉದ್ದೇಶವನ್ನು ಮೀರಿ ಸ್ವಲ್ಪಮಟ್ಟಿಗೆ ಆ ಕೆಲಸವನ್ನು ಮಾಡುತ್ತದೆ. ಆದರೆ ಒಂದು ಕಾದಂಬರಿಯ ಉದ್ದೇಶವೇ ಒಂದು ದ್ವೇಷ ಸಿದ್ಧಾಂತದ ಪ್ರಚಾರವಾದಾಗ ಮತ್ತು ಅದರ ಪ್ರತೀ ಪಾತ್ರ, ಪ್ರತೀ ಪದ, ಪ್ರತೀ ಘಟನೆ ಅತ್ಯಂತ ಏಕಪಕ್ಷೀಯವಾಗಿ ಒಂದು ಜನಾಂಗದ ಮೇಲೆ ದ್ವೇಷ ಸಾಧಿಸುವುದಕ್ಕೆ ರಚಿತವಾದಾಗ ಅದನ್ನು ಕಾದಂಬರಿ ಪ್ರಕಾರಕ್ಕೆ ಸೇರಿಸುವುದು ಕಷ್ಟ. ಏಕೆಂದರೆ ಇಲ್ಲಿ ಕಾದಂಬರಿ ಪ್ರಕಾರ ನಿಮಿತ್ತ.... ಮಿಕ್ಕಿದ್ದೆಲ್ಲಾ ಹುರುಳಿಲ್ಲದ ಪ್ರಚಾರ.
ಈ ಪುಸ್ತಕ ಇತಿಹಾಸದ ವಸ್ತುವನ್ನು ಹೊಂದಿದೆ. ವಸ್ತು ಮಾತ್ರವಲ್ಲ, ಇತಿಹಾಸದ ಸತ್ಯಾಸತ್ಯತೆಯ ಬಗ್ಗೆ ತಥಾಕಥಿತ ಸತ್ಯಾಸತ್ಯತೆಗಳನ್ನು ಆಧರಿಸಿ ಪುಸ್ತಕದುದ್ದಕ್ಕೂ ವಾಗ್ವಾದಗಳಿವೆ. ಹಾಗೂ ಬಹಳ ಸುಲಭವಾಗಿ ಎದುರಾಳಿಯ ಅಂದರೆ ಸಂಘಪರಿವಾರದ್ದಲ್ಲದ ವಾದ ಸೋತು ಶರಣಾಗುತ್ತದೆ. ಅಂದ ಮಾತ್ರಕ್ಕೆ ಈ ಪುಸ್ತಕವನ್ನು ಒಂದು ಇತಿಹಾಸ ಕಥನವೆಂಬಂತೆ ವಿಶ್ಲೇಷಿಸಲೂ ಸಾಧ್ಯವಿಲ್ಲ. ಏಕೆಂದರೆ ಆ ಬಗೆಯ ಗಂಭೀರ ವಿಶ್ಲೇಷಣೆ ಮಾಡಲು ಎರಡು ಬಗೆಯ ವಾದಗಳಲ್ಲಿ ಇರುವ ಸತ್ಯದ ನಿಷ್ಕರ್ಷೆಯ ಮಾನದಂಡಗಳನ್ನು ಚರ್ಚೆಗೊಡ್ಡಬೇಕು. ಆದರೆ ಇಲ್ಲಿ ಪ್ರತಿವಾದ ಮತ್ತು ಪ್ರತಿವಾದಿಗಳೆಲ್ಲಾ ಕುತಂತ್ರಿಗಳೆಂದೇ ಚಿತ್ರಿತವಾಗುತ್ತವೆ. ಇದರಲ್ಲಿ ಚಿತ್ರಿತವಾಗಿರುವ ಐತಿಹಾಸಿಕ ಸಂಗತಿಗಳೇ ಪರಮಸತ್ಯ ಎಂದು ಪ್ರತಿಪಾದಿಸಲು ಕಾದಂಬರಿಕಾರರು ಪುಸ್ತಕದ ಅಂತ್ಯದಲ್ಲಿ ತಾವು ಪರಿಶೀಲಿಸಿರುವ ಐತಿಹಾಸಿಕ 50 ಉದ್ಗ್ರಂಥಗಳ ಪಟ್ಟಿಯನ್ನೇ ಕೊಡುತ್ತಾರೆ. ಆದರೆ ಅವೆಲ್ಲವೂ ಸಂಘ ಪರಿವಾರದ ಮತ್ತು ಅದರ ಸುತ್ತಮುತ್ತಲಲ್ಲಿರುವ ಇತಿಹಾಸಕಾರರ ಪುಸ್ತಕಗಳೇ ವಿನಃ ಶಾಸ್ತ್ರಕ್ಕೂ ಸಂಘ ಪರಿವಾರವಲ್ಲದವರ ಒಂದು ಪುಸ್ತಕವೂ ಇಲ್ಲ ಮತ್ತು ಕಥನದಲ್ಲೂ ಎಲ್ಲಿಯೂ ಇತರರು ಕೇಳುತ್ತಿರುವ ಮತ್ತು ಸಂಘಪರಿವಾರವು ಉತ್ತರಿಸಲಾಗದ ಐತಿಹಾಸಿಕತೆಯನ್ನು ಬಿಟ್ಟು ಕೇವಲ ನಂಬಿಕೆಗಳಿಗೇ ಜೋತು ಬೀಳುತ್ತಿರುವ ವಾದಗಳನ್ನೇ ಮುಂದಿಡಲಾಗುತ್ತದೆ. ಹೀಗಾಗಿ ಪುಸ್ತಕದ ವಾದ ಪ್ರತಿಭೆ ಒಬ್ಬ ಉನ್ಮತ್ತ ಹೈಸ್ಕೂಲ್ ಚರ್ಚಾಪಟುವಿಗಿಂತ ಹೆಚ್ಚಿನ ಮಟ್ಟದ್ದಾಗಿಲ್ಲ. ಹೀಗಾಗಿ ಪುಸ್ತಕವನ್ನೂ, ಅದು ಹೇಳುತ್ತಿರುವ ಐತಿಹಾಸಿಕತೆಯನ್ನೂ ಗಮನದಲ್ಲಿಟ್ಟುಕೊಂಡು ಒಂದು ಇತಿಹಾಸ ಪಠ್ಯವನ್ನಾಗಿಯೂ ಓದಲು, ವಿಶ್ಲೇಷಿಸಲು ಆಗುವುದಿಲ್ಲ.
ಹೀಗಾಗಿಯೇ ಭೈರಪ್ಪನವರ ಈ ‘ಆವರಣ’ ಸಂಘ ಪರಿವಾರದ ಒಂದು ಅಗ್ಗದ ಪ್ರಚಾರ ಸಾಹಿತ್ಯ ಮಾತ್ರವಾಗಿದೆ. ಕಾದಂಬರಿಯ ಮುನ್ನುಡಿಯಲ್ಲಿ ಭೈರಪ್ಪನವರು ತಾವು ಏಕೆ ಈ ಪುಸ್ತಕಕ್ಕೆ ‘ಆವರಣ’ ಎಂದು ಹೆಸರಿಟ್ಟೆ ಎಂದು ವಿವರಿಸುತ್ತಾ ‘‘ಸತ್ಯವನ್ನು ಮರೆಮಾಚುವ ಕಾರ್ಯಕ್ಕೆ ಆವರಣವೆಂದು, ಅಸತ್ಯವನ್ನು ಬಿಂಬಿಸುವ ಕಾರ್ಯಕ್ಕೆ ವಿಕ್ಷೇಪವೆಂದೂ ಹೆಸರು. ವ್ಯಕ್ತಿಯ ಮಟ್ಟದಲ್ಲಿ ನಡೆಯುವ ಈ ಕ್ರಿಯೆಯನ್ನು ಅವಿದ್ಯೆಯೆಂದೂ ಸಮೂಹ ಅಥವಾ ಜಗತ್ತಿನ ಮಟ್ಟದಲ್ಲಿ ನಡೆಯುವ ಕ್ರಿಯೆಯನ್ನು ಮಾಯೆ’’ ಎಂದು ಕರೆಯುತ್ತಾರೆ. ಭೈರಪ್ಪನವರ ಪ್ರಕಾರ ಆವರಣ ಕಾದಂಬರಿಯ ಕಾಲಘಟ್ಟವಾದ ಮುಸ್ಲಿಮರು ಈ ದೇಶವನ್ನು ಆಳಿದ ಕಾಲಘಟ್ಟದ ಸತ್ಯವನ್ನು ಪ್ರಗತಿಪರರು ಮತ್ತು ಹುಸಿ ಸೆಕ್ಯುಲರ್‌ವಾದಿಗಳು ಮುಚ್ಚಿಬಿಟ್ಟಿದ್ದಾರೆ, ಅದನ್ನು ಅನಾವರಣಗೊಳಿಸುವುದೇ ಈ ಕಾದಂಬರಿಯ ಧ್ಯೇಯ. ಅಂದರೆ ಮುಸ್ಲಿಮರು ಮತ್ತು ಅವರ ಧರ್ಮವಾದ ಇಸ್ಲಾಮ್ ಮೂಲಭೂತವಾಗಿ ಮಾನವ ವಿರೋಧಿಯಾದುದು ಮತ್ತು ಅದು ಮೂಲಭೂತವಾಗಿ ಪರಮಾರ್ಥಮುಖಿಯಾಗಿಯೂ ಜನಪರವಾಗಿಯೂ ಇದ್ದ ಹಿಂದೂ ಧರ್ಮದ ಮೇಲೆ, ಹಿಂದೂ ಧರ್ಮೀಯರ ಮೇಲೆ ದಾಳಿ ಮಾಡಿ ಕಡು ಭೀಕರ ಅತ್ಯಾಚಾರ ಮಾಡಿತು. ಆದರೆ ಇಂದಿನ ರಾಜಕಾರಣಿಗಳು ಈ ಇತಿಹಾಸವನ್ನು ತಮ್ಮ ವೋಟು ರಾಜಕೀಯಕ್ಕಾಗಿ ಮರೆಮಾಚುತ್ತಿದ್ದಾರೆ. ಇದು ಈ ಪುಸ್ತಕದಲ್ಲಿ ಅವರು ಪ್ರತಿಪಾದಿಸುವ ಸತ್ಯ. ಅಷ್ಟು ಮಾತ್ರವಲ್ಲ, ಭೈರಪ್ಪನವರು ತಮ್ಮ ಈ ದ್ವೇಷಪೂರಿತ ಕಥನಕ್ಕೆ ಪೊಳ್ಳು ಆದರ್ಶದ ಮುಖವಾಡವನ್ನು ತೊಡಿಸುತ್ತಾರೆ. ‘‘ಮುಸ್ಲಿಮ್ ಸಮಾಜಕ್ಕೆ ತಿದ್ದಿಕೊಳ್ಳುವ ಅವಕಾಶವನ್ನೇ ಕೊಡುತ್ತಿಲ್ಲ. ತಿದ್ದಿಕೊಳ್ಳುವ ಮೊದಲು ತಪ್ಪಿನ ಅರಿವಾಗಬೇಕಲ್ಲವೇ? ಇತಿಹಾಸದ ಸತ್ಯ ದರ್ಶನವಾಗದೆ ತಿದ್ದಿಕೊಳ್ಳುವುದೆಂತು?’’ (ಪು. 247) ಎಂದು ಹಿಂದುತ್ವವಾದಿಗಳು ತೋಡಿರುವ ಪಾತಳಿಯಲ್ಲಿ ಮುಸ್ಲಿಮರನ್ನು ದೂಡಿ ಮತ್ತೆ ತಾವೇ ಅವರನ್ನು ಚಾರಿತ್ರಿಕ ಪಾತಳಿಯಿಂದ ಮೇಲೆತ್ತುವುದಕ್ಕಾಗಿಯೇ ಅವರ ಮೇಲೆ ದಾಳಿ ಮಾಡುತ್ತಿದ್ದೇವೆಂಬ ಅತ್ಯಂತ ಕುಟಿಲವಾದ ಬ್ರಾಹ್ಮಣಿಕೆಯ ತಂತ್ರವನ್ನು ಪ್ರಯೋಗಿಸುತ್ತಾರೆ. ತಮ್ಮ ಅಂತರಾಳದಲ್ಲಿರುವ ಈ ಜನಾಂಗೀಯ ದ್ವೇಷದ ಆವರಣವನ್ನು ಮತ್ತು ಸತ್ಯದ ವಿಕ್ಷೇಪವನ್ನು ಸತ್ಯದ ಅನಾವರಣ ಎಂದು ಪ್ರತಿಪಾದಿಸಲು ಭೈರಪ್ಪನವರು ಅತ್ಯಂತ ಚಾಣಕ್ಯತನದಿಂದ ಸಂಘಪರಿವಾರದ ಸಿದ್ಧಾಂತವನ್ನು ಕಾದಂಬರಿಯ ಎರಕದಲ್ಲಿ ಕೊಡುವ ಪ್ರಯತ್ನ ನಡೆಸಿದ್ದಾರೆ. ಅದಕ್ಕಾಗಿ ತಮಗೆ ಸಿದ್ಧಿಸಿರುವ ಕಾದಂಬರಿ ಶೈಲಿಯನ್ನು ದುಡಿಸಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ.
ಈ ಪುಸ್ತಕವನ್ನು ಓದಿ ಕೆಳಗಿಟ್ಟ ಮೇಲೆ ಒಬ್ಬ ಅರೆಸ್ಸೆಸಿಗನ ಮನಸ್ಸಿನಲ್ಲಿ ಇನ್ನೂ ಹೆಚ್ಚು ಮುಸ್ಲಿಮ್ ದ್ವೇಷ ಮೂಡುತ್ತದೆ. ಪ್ರಜ್ಞಾವಂತ ಓದುಗನ ಮನಸ್ಸಿನಲ್ಲಿ ಭೈರಪ್ಪನವರ ಕೀಳುತಂತ್ರದ ಬಗ್ಗೆ ಅಸಹ್ಯ ಮೂಡುತ್ತದೆ. ಇವೆರಡೂ ಅಲ್ಲದ ಓದುಗನಿಗೆ ಕಾದಂಬರಿ ತಂತ್ರದಲ್ಲಿ ಬಳಸಲಾಗಿರುವ ಹುಸಿ ವೈಚಾರಿಕತೆ ಮತ್ತು ಕೋಟ್ ಮಾಡಲಾಗಿರುವ ಸಂಘಪರಿವಾರದ ಏಕಪ್ರಕಾರದ ಇತಿಹಾಸ ಪಠ್ಯಗಳು ಭೈರಪ್ಪನವರು ಹೇಳುತ್ತಿರುವ ಕಥೆ ಕಲ್ಪನೆಯಲ್ಲ ಸತ್ಯ ಎಂಬ ಭಾವನೆಯನ್ನೂ ಬೀರುವ ಅಪಾಯವಿದೆ. ಆದರೆ ಅದಕ್ಕೆ ಭೈರಪ್ಪನವರು ಒದಗಿಸುವ ಐತಿಹಾಸಿಕ ಪುರಾವೆಗಳಿಗಿಂತ (ಅವು ಯಾವುವೂ ಪುರಾವೆಗಳೆಂದು ಸಾಬೀತೇ ಆಗಿಲ್ಲ ಎಂಬುದು ಬೇರೆ ಮಾತು) ಹಿಂದೂ ಸಮಾಜೋತ್ಸವ ಇನ್ನಿತರ ಹೆಸರಲ್ಲಿ ಸಂಘಪರಿವಾರ ಮುಸ್ಲಿಮ್ ಸಮುದಾಯದ ಬಗ್ಗೆ ಸೃಷ್ಟಿಸಿರುವ ಪೂರ್ವಾಗ್ರಹ ಮತ್ತು ದ್ವೇಷಗಳ ಕಾರಣ.
ಇಂತಹ ಸಂದರ್ಭದಲ್ಲಿ ಸಾಹಿತ್ಯದ ‘ಈ ಹೊಸ ಪ್ರಚಾರ ಪ್ರಕಾರದಲ್ಲಿ’ ಭೈರಪ್ಪನವರು ಅನುಸರಿಸಿರುವ ಹುಸಿ ಕಾದಂಬರಿ ತಂತ್ರ ಪುರಾಣವನ್ನೇ ಇತಿಹಾಸವೆಂದು ಪ್ರತಿಪಾದಿಸುವ ಸಂಘಪರಿವಾರದ ಕುತಂತ್ರದಂತೆ ಇದೆ. ಭೈರಪ್ಪನವರು ಎಷ್ಟೇ ಸಮರ್ಥ ಕಾದಂಬರಿಕಾರರಾಗಿದ್ದರೂ ಇಲ್ಲಿ ಅವರ ಉದ್ದೇಶವೇ ದ್ವೇಷದ ಸಿದ್ಧಾಂತದ ಪ್ರತಿಪಾದನೆಯಾಗಿರುವುದರಿಂದ ಪುಸ್ತಕದುದ್ದಕ್ಕೂ ಪೆನ್ನಿಗಿಂತಲೂ ಹೆಚ್ಚು ಲಾಠಿಯನ್ನೇ ಬಳಸಿದ್ದಾರೆ. ಹೀಗಾಗಿ ಇಲ್ಲಿ ಬರುವ ಪಾತ್ರಗಳೆಲ್ಲಾ ಕಾರ್ಡ್ ಬೋರ್ಡ್ ಪಾತ್ರಗಳೇ. ಅತ್ಯಂತ ಗಟ್ಟಿ ಪಾತ್ರವಾಗಿರುವ ರಜಿಯಾ ಅಲಿಯಾಸ್ ಲಕ್ಷ್ಮಿ ಸಹ ನೈಜತೆಯಿಲ್ಲದ ಭಾವಾವೇಶದಿಂದ ಉದ್ದಕ್ಕೂ ಭಾಷಣ ಮಾಡುತ್ತಿರುತ್ತಾಳೆ. ಆದ್ದರಿಂದಲೇ 270 ಪುಟಗಳಷ್ಟಿರುವ ಈ ಕಾದಂಬರಿಯ ಕಥೆಯ ಬಗ್ಗೆ ಕೆಲವು ಸಾಲುಗಳಿಗಿಂತ ಹೆಚ್ಚೇನೂ ಹೇಳಲಿಕ್ಕಿಲ್ಲ.
ಲಕ್ಷ್ಮಿ ಎಂಬ ಒಕ್ಕಲಿಗ ಕುಟುಂಬದ ಗಾಂಧಿವಾದಿ ತಂದೆಯ ಮಗಳು ಪುಣೆಯಲ್ಲಿ ಸಿನೆಮಾ ಕಲೆಯ ಬಗ್ಗೆ ಅಧ್ಯಯನ ಮಾಡುತ್ತಾ ಅಮೀರ್ ಎಂಬ ಮುಸ್ಲಿಮ್ ಒಬ್ಬನಲ್ಲಿ ಅನುರಕ್ತಳಾಗಿ ಮದುವೆ ಆಗುತ್ತಾಳೆ. ಗಾಂಧಿವಾದಿ ತಂದೆ ಸಹ ಅದಕ್ಕೆ ವಿರೋಧ ವ್ಯಕ್ತ ಪಡಿಸುತ್ತಾನೆ. ಆದರೆ ಅವರಿಬ್ಬರಿಗೂ ಗುರುವಾಗಿದ್ದ ಒಬ್ಬ ಆಷಾಢಭೂತಿ, ವಿಷಯಲಂಪಟ
ಮಾರ್ಕ್ಸ್‌ವಾದಿ ಪ್ರೊಫೆಸರ್ ಶಾಸ್ತ್ರಿ ಇವರಿಬ್ಬರಿಗೂ ಪ್ರೋತ್ಸಾಹಿಸಿ ಮದುವೆ ಮಾಡಿಸುತ್ತಾನೆ ಮತ್ತು ಅಮೀರ್‌ನ ಮನೆಯವರ ಒತ್ತಾಯದ ಮೇರೆಗೆ ಲಕ್ಷ್ಮೀ ಮತಾಂತರಗೊಳ್ಳುವುದು ಸರಿಯೆಂದು ಸಮರ್ಥಿಸುತ್ತಾನೆ. ಹೀಗೆ ಲಕ್ಷ್ಮೀ ರಜಿಯಾ ಆದರೂ ಅವಳೊಳಗೆ ಇದನ್ನು ಒಪ್ಪದ ಬಿರುಕು ಇದ್ದೇ ಇರುತ್ತದೆ. ಇದು ಅವರಪ್ಪ ತೀರಿಕೊಂಡ ನಂತರ ಹಳ್ಳಿಗೆ ವಾಪಸ್ ಹೋಗಿ ನೆಲೆ ನಿಂತ ಮೇಲೆ ಇನ್ನೂ ಹೆಚ್ಚಾಗುತ್ತದೆ. ಅಲ್ಲಿ ಅವರಪ್ಪ ದೇಶ ವಿದೇಶದಿಂದ ಇಸ್ಲಾಮ್ ಬಗ್ಗೆ, ಭಾರತದಲ್ಲಿ ಮುಸ್ಲಿಮರ ಆಳ್ವಿಕೆಯ ಬಗ್ಗೆ ತರಿಸಿಟ್ಟುಕೊಂಡ ಪುಸ್ತಕಗಳ ಗ್ರಂಥಾಲಯವೇ ಇರುತ್ತದೆ. (ಆದರೆ ಆಶ್ಚರ್ಯವೆಂದರೆ ಈ ಗಾಂಧಿವಾದಿಯ ಗ್ರಂಥ ಭಂಡಾರದಲ್ಲಿ ಒಬ್ಬ ಗಾಂಧಿವಾದಿ ಇತಿಹಾಸಕಾರನ ಪುಸ್ತಕವೂ ಇರದಿರುವುದು..!) ಅದನ್ನು ವರ್ಷಗಟ್ಟಲೇ ಓದುತ್ತಾ ಕೂರುವ ರಜಿಯಾ ಮತ್ತೆ ಲಕ್ಷ್ಮೀ ಮಾತ್ರವಲ್ಲ, ಆರೆಸ್ಸೆಸ್ ಲಕ್ಷ್ಮೀ ಯಾಗಿಬಿಡುತ್ತಾಳೆ. ತನ್ನ ಗಂಡನಿಂದ ತಲಾಖ್‌ಗೆ ಗುರಿಯಾದರೂ ಹೆದರದೆ ಅಧ್ಯಯನ ಮುಂದುವರಿಸಿ ಪುಸ್ತಕ ಬರೆದು ಸರಕಾರದ ಕೆಂಗಣ್ಣಿಗೂ ಗುರಿಯಾಗುತ್ತಾಳೆ.
ಇಷ್ಟು ಇದರ ಕಥೆ, ಇನ್ನು ಉಳಿದ ಪುಟಗಳೆಲ್ಲಾ ಪ್ರಬಂಧಗಳ ರೂಪದಲ್ಲಿರುವ ಅಥವಾ ಭಾಷಣಗಳ ರೂಪದಲ್ಲಿರುವ ವಾಗ್ವಾದಗಳು ಅಥವಾ ಲಕ್ಷ್ಮೀಯ ಸ್ವಗತಗಳು... ಹಿಂದುತ್ವವಾದಿ ಇತಿಹಾಸಕಾರರ ಪುಸ್ತಕದ ಮಾತುಗಳು. ಇದರ ಜೊತೆಜೊತೆಗೆ ಕಾದಂಬರಿಯಲ್ಲಿ ಲಕ್ಷ್ಮೀ ಬರೆಯುವ ಔರಂಗಜೇಬನ ಕಾಲದಲ್ಲಿ ಒಬ್ಬ ಹಿಂದೂ ಯುವರಾಜನ ಮೇಲೆ ನಡೆದ ಅತ್ಯಾಚಾರದ ಉಪಕಥನವೂ ಇದೆ. ಈ ಕಥನವು ಸಮಕಾಲೀನವಾಗಿ ಲಕ್ಷ್ಮೀ ನಡೆಸುವ ಸತ್ಯಾನ್ವೇಷಣೆಯ ಭಾಗವಾಗಿ ಬಂದುಬಿಡುವುದರಿಂದ ಈ ಕಥನವೂ ಇತಿಹಾಸದ ತುಣುಕೆಂದೇ ತೋರಿಸುವ ಕುತಂತ್ರವನ್ನು ಭೈರಪ್ಪನವರು ನೇಯ್ದಿದ್ದಾರೆ. ಆ ಯುವರಾಜ ಮುಸ್ಲಿಮರ ವಿರುದ್ಧದ ಸಮರದಲ್ಲಿ ಶಿವಾಜಿಯನ್ನು ಸೇರುತ್ತಾನೆ ಮತ್ತು ಆ ಕಾದಂಬರಿ ಪ್ರಕಟ ಮಾಡಿದ್ದಕ್ಕೆ ಲಕ್ಷ್ಮೀ ಸರಕಾರದ ಕೆಂಗಣ್ಣಿಗೆ ಗುರಿಯಾಗುತ್ತಾಳೆ. ಕಾದಂಬರಿ ನಿಷೇಧಕ್ಕೊಳಗಾಗುತ್ತದೆ. (ಭೈರಪ್ಪನವರು ತಮ್ಮ ಪುಸ್ತಕಕ್ಕೆ ಇವೆಲ್ಲ ಆಗಬೇಕೆಂದು ಆಶಿಸುತ್ತಿದ್ದಾರೆ. ಆ ಮೂಲಕ ಹಿಂದುತ್ವದ ಕಾರಣಕ್ಕೆ ಹುತಾತ್ಮರಾಗುವ ಆಶಯವನ್ನು ಅವರು ಹೊಂದಿರಬಹುದು.) ಇನ್ನುಳಿದ ಪಳಿದ ಕಥೆ ಅಂಥ ಏನಾದರೂ ಇದ್ದರೆ ಅದು ಶಾಸ್ತಿಯೆಂಬ ಮಾರ್ಕ್ಸ್‌ವಾದಿ ಪ್ರೊಫೆಸರೊಬ್ಬನ ಲಂಪಟತನವನ್ನು ತೋರಿಸಲು ಖರ್ಚಾಗುತ್ತದೆ.







