ವಂದೇ ಮಾತರಂ -150 : ಜನಗಣದ ಭಾರತ ಮಾತೆಗಾಗಿಯೋ? ಗಣವೇಷದ ಹಿಂದೂ ಮಾತೆಗಾಗಿಯೋ?

‘ಜನಗಣಮನ’ ಮತ್ತು ‘ವಂದೇ ಮಾತರಂ’ಗಳು ಎರಡು ವಿಭಿನ್ನ ಭಾರತದ ಕನಸಿನ ಆದರ್ಶಗಳೂ ಆಗಿವೆ. ‘ಜನಗಣಮನ’ ಎಲ್ಲರನ್ನೂ ಒಳಗೊಳ್ಳುವ, ಸಾಮಾಜಿಕ ನ್ಯಾಯವುಳ್ಳ ಜನತಂತ್ರದ ಆಶಯ ಗೀತೆಯಾಗಿದ್ದರೆ, ‘ವಂದೇ ಮಾತರಂ’ ಸಂಘಪರಿವಾರ ಮತ್ತು ಮೋದಿ ಸರಕಾರ ಬಯಸುವ ದ್ವೇಷ ಆಧಾರದ ಬ್ರಾಹ್ಮಣೀಯ ಹಿಂದೂ ಬಂಡವಾಳಶಾಹಿ-ಪಾಳೆಗಾರಿ ಭಾರತವಾಗಿದೆ. ಇಂದು ಬಿಜೆಪಿ ಮತ್ತು ಸಂಘಪರಿವಾರ ‘ವಂದೇ ಮಾತರಂ’ ಮೂಲಕ ‘ಜನಗಣಮನ’ದ ಮೇಲೆ ಮಾಡುತ್ತಿರುವ ದಾಳಿಯ ಹಿಂದಿರುವ ರಾಜಕಾರಣವೂ ಅದೇ ಆಗಿದೆ.
ಈವರ್ಷ-2025ಕ್ಕೆ ಬಂಗಾಳದ ಹಿಂದೂ ರಾಷ್ಟ್ರವಾದಿ ಕವಿ-ಸಾಹಿತಿ ಬಂಕಿಮ ಚಂದ್ರ ಚಟರ್ಜಿ ವಿರಚಿತ ‘ವಂದೇಮಾತರಂ’ ಅನ್ನು ಬರೆದು 150 ವರ್ಷಗಳಾಗುತ್ತವೆ. ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಎಂಬುದು ದೇಶಭಕ್ತರ ಘೋಷಣೆಯೇ ಆಗಿದ್ದರೂ ಬಂಕಿಮಚಂದ್ರರ ‘ವಂದೇ ಮಾತರಂ’ ಹಾಡಿನ ಪೂರ್ಣ ಪಠ್ಯ ಮತ್ತು ಆ ಹಾಡು ಇರುವ ‘ಆನಂದ ಮಠ’ ಕಾದಂಬರಿ ಮುಸ್ಲಿಮ್ ದ್ವೇಷಿ ಮತ್ತು ಬ್ರಿಟಿಷ್ ಪರ ಕಥನದ ಪಠ್ಯ. ಹೀಗಾಗಿ 1937ರಲ್ಲಿ ಆ ಹಾಡಿನ ಮೊದಲೆರಡು ಚರಣಗಳನ್ನು ಮಾತ್ರ ಹಾಡಬೇಕೆಂದು ನೆಹರೂ-ಪಟೇಲ್ ಮತ್ತು ಸುಭಾಷ್ ಚಂದ್ರ ಬೋಸ್ ಹಾಗೂ ಇನ್ನಿತರ ಕಾಂಗ್ರೆಸ್ ನಾಯಕತ್ವ ಸಮಿತಿ ಸರ್ವ ಸಮ್ಮತಿಯಿಂದ ತೀರ್ಮಾನಿಸಿತ್ತು. ಅದನ್ನೇ 1950ರ ನವೆಂಬರ್ 24ರಂದು ಸಂವಿಧಾನ ಸಭೆಯ ಅಧ್ಯಕ್ಷರಾಗಿದ್ದ ಬಾಬು ರಾಜೇಂದ್ರ ಪ್ರಸಾದರು ಅಧ್ಯಕ್ಷೀಯ ಹೇಳಿಕೆಯಾಗಿ ಘೋಷಿಸಿದರು. ಹಾಗೂ ಸಂವಿಧಾನ ಸಭೆ ಒಕ್ಕೊರಲಿನಿಂದ ಮಾನವತಾವಾದಿ-ರಾಷ್ಟ್ರವಾದಿ ಗುರುದೇವ ರವೀಂದ್ರನಾಥ್ ಟಾಗೋರ್ ವಿರಚಿತ ‘ಜನಗಣಮನ’ವನ್ನು ರಾಷ್ಟ್ರಗೀತೆಯಾಗಿ ಘೋಷಿಸಿತು.
ಹೀಗಾಗಿ ಒಂದು ಅರ್ಥದಲ್ಲಿ ‘ಜನಗಣಮನ’ ಅಥವಾ ‘ವಂದೇ ಮಾತರಂ’ ಎಂಬ ಆಯ್ಕೆ ಭಾರತವು ಮುಸ್ಲಿಮ್ ದ್ವೇಷಿ ಹಿಂದೂ ರಾಷ್ಟ್ರವಾಗಬೇಕೋ ಅಥವಾ ಸರ್ವಜನಾಂಗದ ಶಾಂತಿಯ ತೋಟವಾಗಬೇಕೋ ಎಂಬ ರಾಜಕೀಯ ಆಯ್ಕೆಯ ಪ್ರಶ್ನೆಯೂ ಆಗಿದೆ. ಮೋದಿ ಸರಕಾರ ಅಧಿಕಾರಕ್ಕೆ ಬಂದಮೇಲೆ ಭಾರತವನ್ನು ಬ್ರಾಹ್ಮಣೀಯ ಹಿಂದೂ ರಾಷ್ಟ್ರ ಮಾಡುವ ಬೃಹತ್ ಹುನ್ನಾರದ ಭಾಗವಾಗಿ ‘ವಂದೇ ಮಾತರಂ’ನ 150ನೇ ವರ್ಷವನ್ನು ಇದೇ ದುರುದ್ದೇಶದಿಂದ ಸಂಭ್ರಮಿಸುತ್ತಿದೆ. ಮತ್ತು ಇಡೀ ವರ್ಷ ದೇಶಾದ್ಯಂತ ಸಂಭ್ರಮಾಚರಣೆಯನ್ನು ನಡೆಸಲು ಮೋದಿ ಸರಕಾರ ಮತ್ತು ಬಿಜೆಪಿ ಸಜ್ಜಾಗಿವೆ. ಅದೇ ಸಮಯದಲ್ಲಿ ಉತ್ತರ ಕನ್ನಡದ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಭಾರತದ ರಾಷ್ಟ್ರಗೀತೆಯಾಗಿರುವ ರವೀಂದ್ರನಾಥ್ ಟಾಗೋರ್ ವಿರಚಿತ ‘ಜನಗಣಮನ’ವು ಬ್ರಿಟಿಷ್ ದೊರೆ ಜಾರ್ಜ್ -5ರ ಸ್ವಾಗತಕ್ಕೆ ಬರೆದ ಗೀತೆಯೆಂದು ಹೀಯಾಳಿಸುತ್ತಾ, ಅಸಲಿ ರಾಷ್ಟ್ರಗೀತೆ ‘ವಂದೇ ಮಾತರಂ’ ಆಗಬೇಕಿತ್ತೆಂದು ಹೇಳಿಕೆ ನೀಡಿ ಬಿಜೆಪಿಯ ಅಸಲಿ ಉದ್ದೇಶವನ್ನು ಬಯಲುಗೊಳಿಸಿದ್ದಾರೆ. ಅದರ ವಿರುದ್ಧ ತೀವ್ರವಾದ ಟೀಕೆ ವ್ಯಕ್ತವಾಗುತ್ತಿದ್ದಂತೆ ಆ ಹೇಳಿಕೆಗೆ ಅವರು ತೋರಿಕೆಯ ವಿಷಾದ ವ್ಯಕ್ತಪಡಿಸಿದ್ದರೂ ಬಿಜೆಪಿ ಮತ್ತು ಸಂಘಿಗಳು ಈ ಅಪಪ್ರಚಾರವನ್ನೇನೂ ನಿಲ್ಲಿಸಿಲ್ಲ. ಮುಂದಿನ ವರ್ಷ ಪ. ಬಂಗಾಳದಲ್ಲಿ ಚುನಾವಣೆ ನಡೆಯಲಿದ್ದು ಟಾಗೋರರು ಬಂಗಾಳಿಗಳ ಅಸ್ಮಿತೆಯ ಪ್ರತೀಕವೂ ಆಗಿರುವುದರಿಂದ ಸಂಘಿಗಳು ಕಾಗೇರಿಯವರ ತರ ನೇರ ದಾಳಿ ಮಾಡದೆ ಪರೋಕ್ಷವಾಗಿ ಟಾಗೋರರ ‘ಜನಗಣಮನ’ ಮತ್ತು ಅದರ ಹಿಂದಿನ ಎಲ್ಲರನ್ನೂ ಒಳಗೊಳ್ಳುವ ‘ಭಾರತ ರಾಷ್ಟ್ರೀಯತೆ’ಯ ವಿರುದ್ಧ ಯುದ್ಧ ಸಾರಿದ್ದಾರೆ.
ಮತ್ತೊಂದು ಕಡೆ ಪ್ರಧಾನಿ ನರೇಂದ್ರಮೋದಿಯವರು ‘ವಂದೇ ಮಾತರಂ-150’ ಆಚರಣೆಯನ್ನು ಉದ್ಘಾಟಿಸುತ್ತಾ ‘‘1937ರಲ್ಲಿ ವಂದೇಮಾತರಂ ಗೀತೆಯ ಕೆಲವು ಪ್ರಮುಖ ಸಾಲುಗಳನ್ನು ಕೈಬಿಟ್ಟಿದ್ದು ದೇಶವಿಭಜನೆಯ ಬೀಜ ಬಿತ್ತಲು ಕಾರಣವಾಯಿತು. ಅಂತಹ ವಿಭಜಕ ಮನಸ್ಥಿತಿ ದೇಶಕ್ಕೆ ಇನ್ನೂ ಸವಾಲಾಗಿ ಉಳಿದಿದೆ. 1937ರಲ್ಲಿ ‘ವಂದೇ ಮಾತರಂ’ನ ಆತ್ಮದ ಒಂದು ಭಾಗವನ್ನು ಬೇರ್ಪಡಿಸಲಾಯಿತು. ರಾಷ್ಟ್ರ ನಿರ್ಮಾಣದ ಮಹಾಮಂತ್ರ ಎನಿಸಿರುವ ಗೀತೆಗೆ ಈ ಅನ್ಯಾಯ ಏಕೆ ಮಾಡಲಾಯಿತು ಎಂಬುದನ್ನು ಈ ಪೀಳಿಗೆ ಅರ್ಥಮಾಡಿಕೊಳ್ಳಬೇಕಿದೆ’’ ಎಂದು ಬಿಜೆಪಿಯ ಉದ್ದೇಶವನ್ನು ಸ್ಪಷ್ಟಪಡಿಸಿದ್ದಾರೆ. ಅದರ ಮುಂದುವರಿಕೆಯಾಗಿ ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಬಿಜೆಪಿ ಸರಕಾರಗಳು ತಮ್ಮತಮ್ಮ ರಾಜ್ಯಗಳ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಲ್ಲಿ ‘ವಂದೇ ಮಾತರಂ’ ಹಾಡುವುದನ್ನು ಕಡ್ಡಾಯಗೊಳಿಸುವುದಾಗಿ ಘೋಷಿಸಿವೆ.
ಹೀಗಾಗಿ ಇಂದು ‘ಜನಗಣಮನ’ದ ಬಗ್ಗೆ ಕಾಗೇರಿಯಂತಹವರ ಆಕ್ಷೇಪದ ಸತ್ಯಾಸತ್ಯತೆಯನ್ನು ಮತ್ತು ಬಂಕಿಮ ಚಂದ್ರರ ‘ವಂದೇ ಮಾತರಂ’ ಗೀತೆ ಮತ್ತು ಅದನ್ನು ಒಳಗೊಂಡಿರುವ ‘ಆನಂದಮಠ’ ಕಾದಂಬರಿ ಮತ್ತದರ ಸಂದರ್ಭದ ಬಗ್ಗೆ ಕೂಲಂಕಷವಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ.
ಈ ವಿವಾದ ಹೊಸದೇನಲ್ಲ. ಈ ಹಿಂದೆಯೂ ಇಂತಹ ವಿವಾದವನ್ನು ಹುಟ್ಟುಹಾಕಿದಾಗ ಅದರ ಸತ್ಯಾಸತ್ಯತೆಯ ಬಗ್ಗೆ ಹಲವಾರು ವಿದ್ವತ್ಪೂರ್ಣ ಅಧ್ಯಯನಗಳು ನಡೆದಿವೆ. ಅವು ಸಾರ್ವಜನಿಕವಾಗಿ ಲಭ್ಯವೂ ಇವೆ.
ಉದಾಹರಣೆಗೆ ಆಸಕ್ತರು:
-ಬಂಗಾಳದ ವಿಶ್ವಭಾರತಿ-ಶಾಂತಿನಿಕೇತನದ ಮಾಜಿ ಉಪಕುಲಪತಿ ಹಾಗೂ ಭಾರತ ಸರಕಾರದ ಸಂಸ್ಕೃತಿ ಇಲಾಖೆಯ ಟಾಗೋರ್ ಫೆಲೋ ಕೂಡ ಆಗಿದ್ದ ಸಬ್ಯಸಾಚಿ ಭಟ್ಟಾಚಾರ್ಯ ಅವರ:
‘Vande Mataram- The Biography of a song’ ಎಂಬ ಪೆಂಗ್ವಿನ್ ಪ್ರಕಾಶನ 2003ರಲ್ಲಿ ಪ್ರಕಟಿಸಿದ ಕೃತಿ ಎಲ್ಲಾ ಮೂಲ ಆಕರಗಳನ್ನು ಆಧರಿಸಿದ ವಿದ್ವತ್ಪೂರ್ಣ ಕೃತಿಯಾಗಿದೆ.
-ಹಾಗೆಯೇ 2006ರಲ್ಲಿ ‘ಇಕಾನಮಿಕ್ ಆಂಡ್ ಪೊಲಿಟಿಕಲ್ ವೀಕ್ಲಿ’ ಎಂಬ ವಿದ್ವತ್ಪೂರ್ಣ ಅಕಾಡಮಿಕ್ ಸಾಪ್ತಾಹಿಕಕ್ಕೆ ಇತಿಹಾಸ ತಜ್ಞೆ ಪ್ರೊ. ತನಿಕಾ ಸರಕಾರ್ ಅವರು ಬರೆದಿರುವ ‘Birth of a Goddess, ‘Vande Mataram', Ananadmath and Hindu Nationhood’ ಎಂಬ ಸುದೀರ್ಘ ಲೇಖನವನ್ನೂ ಗಮನಿಸಬಹುದು. ಈ ಎರಡೂ ಲೇಖನಗಳಲ್ಲಿ ‘ಜನಗಣಮನ’ ಹಾಗೂ ‘ವಂದೇ ಮಾತರಂ’ ಎರಡೂ ಗೀತೆಗಳ ಇತಿಹಾಸದ ದಾಖಲೆಗಳಿವೆ.
ಹಾಗೆಯೇ ಆಸಕ್ತರು 1960ರಲ್ಲೇ ವೆಂಕಟಾಚಾರ್ಯ ಅವರು ಮಾಡಿರುವ ‘ಆನಂದಮಠ’ ಕಾದಂಬರಿಯ ಕನ್ನಡ ಅನುವಾದವನ್ನು ಕಣಜ ಅಂತರ್ಜಾಲದಲ್ಲಿ ಓದಬಹುದು. ಆ ನಂತರದಲ್ಲೂ ಅದರ ಮೂರು ಅನುವಾದಗಳು ಕನ್ನಡದಲ್ಲಿ ಬಂದಿವೆ.
‘ವಂದೇ ಮಾತರಂ’ ಮತ್ತು ‘ಆನಂದಮಠ’ದ ವಸ್ತು, ಕೋಮು ಕಥನ ಮತ್ತು ಸಂದರ್ಭದ ಬಗ್ಗೆ ಚರ್ಚಿಸುವ ಮುನ್ನ ‘ಜನಗಣಮನ’ದ ಬಗ್ಗೆ ಸಂಘಿಗಳು ನಡೆಸುತ್ತಿರುವ ಪ್ರಚಾರದ ಸತ್ಯಾಸತ್ಯತೆಗಳನ್ನು ಗಮನಿಸೋಣ.
‘ಜನಗಣಮನ’-ಬ್ರಿಟಿಷ್ ಸಾಮ್ರಾಟರ ಸ್ತುತಿಗೀತೆಯೇ?
ಈ ವಿಷಯದ ಬಗ್ಗೆ ಕಾಗೇರಿಯವರ ಮೋದಿ ವಾಟ್ಸ್‌ಆ್ಯಪ್ ವಿಶ್ವವಿದ್ಯಾನಿಲಯ ಪ್ರಯೋಜಿತ ಹೇಳಿಕೆ ಪ್ರಕಟವಾದ ನಂತರ ಆಂತರ್ಜಾಲದಲ್ಲಿ ಮತ್ತು ಇತರೆಡೆಗಳಲ್ಲಿ ಅದರ ಸುಳ್ಳನ್ನು ಬಯಲು ಪಡಿಸುವ ಹಲವಾರು ಮಾಹಿತಿಪೂರ್ಣ ಲೇಖನಗಳು ಪ್ರಕಟವಾಗಿವೆ. ಈ ಎಲ್ಲಾ ಪ್ರತಿದಾಳಿಗಳನ್ನು ಎದುರಿಸಲಾಗದೆ ಕಾಗೇರಿಯವರು ತಮ್ಮ ಹೇಳಿಕೆಯನ್ನು ಹಿಂದೆಗೆದುಕೊಂಡಿದ್ದಾರೆ. ಆದರೂ ಟಾಗೋರರ ಜೀವಿತಾವಧಿಯಿಂದ ಹಿಡಿದು ಈವರೆಗೆ ಸಂಘಿಗಳು ಮತ್ತು ಅದರ ಆಸುಪಾಸಿನವರು ಮತ್ತು ಅದರ ಪ್ರಭಾವಕ್ಕೆ ಒಳಗಾಗುವ ಮಾಹಿತಿ ಇರದ ಪ್ರಗತಿಪರರು ಪದೇ ಪದೇ ಎತ್ತುವ ಈ ಅಸಂಗತದ ಬಗ್ಗೆ ಸ್ಪಷ್ಟವಾಗಿ ತಿಳಿದುಕೊಳ್ಳುವ ಅಗತ್ಯವಿದೆ.
-ಜನಮನಗಣವನ್ನು ಬರೆದ ರವೀಂದ್ರನಾಥ ಟಾಗೋರರು ಈ ದೇಶ ಕಂಡ ಅತ್ಯಪರೂಪದ ವಿಶ್ವ ಮಾನವತವಾದಿ ಹಾಗೂ ಅಂತಃಕರಣದ ರಾಷ್ಟ್ರವಾದಿ. ಹಾಗೆ ನೋಡಿದರೆ ‘ವಂದೇ ಮಾತರಂ’ ನ ಮೊದಲೆರಡು ಚರಣಗಳಿಗೆ ಸಂಗೀತ ಸಂಯೋಜಿಸಿ 1896ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಿದವರೂ ಕೂಡ ಟಾಗೋರರೇ.
-1911ರಲ್ಲಿ ಕಿಂಗ್ ಜಾರ್ಜ್-5 ಭಾರತಕ್ಕೆ ಬರುವವರಿದ್ದರು. ಆಗ ಅವರ ಆಸ್ಥಾನದಲ್ಲಿದ್ದ ಸ್ನೇಹಿತರೊಬ್ಬರು ಟಾಗೋರರಿಗೆ ಒಂದು ಸ್ವಾಗತ ಗೀತೆಯನ್ನು ಬರೆಯಲು ಸಾಧ್ಯವೇ ಎಂದು ಕೇಳುವುದು ನಿಜ. ಆದರೆ ಟಾಗೋರರು ಸ್ವಾಗತ ಗೀತೆಯನ್ನು ಬರೆಯುವುದಿಲ್ಲ.
-ಬ್ರಿಟಿಷ್ ದೊರೆಯ ಸ್ವಾಗತ ಗೀತೆಯನ್ನು ಬರೆಯುವುದು ರಾಂಭುಜ್ ಚೌಧರಿ ಎಂಬ ಮತ್ತೊಬ್ಬ ಕವಿ-ಉಪಾಧ್ಯಾಯ. ಅದು ‘‘ಬಾದ್‌ಶಾ ಹಮಾರ, ಜಹಪನಾ ಹಮಾರ, ಸರಕಾರ್ ಜಾರ್ಜ್ ಪಂಚಮ್, ಶಹೆನ್ ಶಾ ಹಮಾರ’’ ಎಂದು ಬ್ರಿಟಿಷ್ ವಸಾಹತು ಶಾಹಿಯ ಸ್ತುತಿ ಮಾಡುತ್ತದೆ. ಅದನ್ನೂ ಕೂಡ 1911ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಗುತ್ತದೆ.
-ಆದರೆ ಅದೇ ಸಮಯದಲ್ಲಿ ‘ಬಾದ್‌ಶಾ’ ಗೀತೆಯ ಆಶಯಕ್ಕೆ ತದ್ವಿರುದ್ಧವಾದ ‘ಜನಗಣಮನ’ ಎಂಬ ಗೀತೆಯನ್ನು ಟಾಗೋರರು ಬರೆಯುತ್ತಾರೆ. ಅದು 5 ಚರಣಗಳನ್ನು ಹೊಂದಿದ್ದು ರಾಷ್ಟ್ರಗೀತೆಯಾಗಿ ನಾವು ಹಾಡುತ್ತಿರುವುದು ಮೊದಲ ಚರಣವನ್ನು ಮಾತ್ರ.
-‘ಜನಗಣಮನ’ ಗೀತೆಯಲ್ಲಿ ಅಖಂಡ ಭಾರತದ ಸಮತೋಲಿತ ಚಿತ್ರಣವನ್ನು ನೀಡುತ್ತಾ ಎಲ್ಲರನ್ನೂ ಒಳಗೊಂಡಿರುವ ಭಾರತವನ್ನು ಕಲ್ಪಿಸಿಕೊಳ್ಳಲಾಗಿದೆ ಮತ್ತು ಭಾರತದ ಸಾವಿರಾರು ವರ್ಷಗಳ ಇತಿಹಾಸದುದ್ದಕ್ಕೂ (ಬ್ರಿಟಿಷ್ ಕಾಲದಲ್ಲಿ ಮಾತ್ರವಲ್ಲ)ಭಾರತೀಯರನ್ನು ಮತ್ತು ಭಾರತದ ರಥವನ್ನು ಏರಿಳಿವುಗಳ ಹಾದಿಯಲ್ಲಿ ಪಥ ತಪ್ಪದಂತೆ ನಡೆಸಿಕೊಂಡು ಬಂದಿರುವ ಅಮೂರ್ತ ಶಕ್ತಿಯನ್ನು ‘ಭಾರತ ಭಾಗ್ಯ ವಿಧಾತ’ ಎಂದು ಕರೆದು ಜಯಕಾರ ಹಾಡಲಾಗಿದೆ. ಹೀಗಾಗಿ ಅದು ಬ್ರಿಟಿಷ್ ರಾಜನನ್ನು ಹೊಗಳಲು ಬರೆದ ಗೀತೆ ಎಂದು ಭಾವಿಸುವುದು ದುರುದ್ದೇಶದ ಪ್ರಚಾರದ ಭಾಗವಾಗಿದೆ. ಆದರೆ ಈ ಹಾಡನ್ನೂ ಕೂಡ 1911ರ ಕಾಂಗ್ರೆಸ್ ಅಧಿವೇಶನದಲ್ಲಿ ಹಾಡಲಾಯಿತು.
-ಆದರೆ ‘ಜನಗಣಮನ’ದಲ್ಲಿ ಬರುವ ಬರುವ ‘ಭಾಗ್ಯ ವಿಧಾತ’ ಬ್ರಿಟಿಷ್ ರಾಜನೇ, ಏಕೆಂದರೆ ಭಾರತವನ್ನು ಭಾರತ ಮಾತೆಯೆಂದು ಭಾವಿಸಿಕೊಳ್ಳಲಾಗುತ್ತದೆ, ಭಾಗ್ಯ ವಿಧಾತನೆಂದಲ್ಲ ಎಂಬ ಪ್ರಶ್ನೆ ಮತ್ತು ವಿವಾದ ಟಾಗೋರರ ಜೀವಿತಾವಧಿಯಲ್ಲೇ ಉಂಟಾಗಿತ್ತು. ಆದರೆ ಅದರ ಬಗ್ಗೆ ಟಾಗೋರರೇ 1912ರಲ್ಲೂ ಮತ್ತು ಆ ನಂತರ 1939ರಲ್ಲೂ ತುಂಬಾ ಸ್ಪಷ್ಟವಾಗಿ ವಿವರಣೆ ನೀಡಿದ್ದರು. ‘ಜನಗಣಮನ’ದ ನಾಲ್ಕನೇ ಚರಣದಲ್ಲಿ ಭಾರತವನ್ನು ಮಾತೆಯೆಂದೂ ಬಣ್ಣಿಸಲಾಗಿದೆ ಮತ್ತು ಟಾಗೋರರ ಭಾಗ್ಯ ವಿಧಾತ ಭಾರತವನ್ನು ಕೈಹಿಡಿದು ನಡೆಸುತ್ತಿರುವುದು ಸಾವಿರಾರು ವರ್ಷಗಳಿಂದ. ಅಂದರೆ ಬ್ರಿಟಿಷ್ ರಾಜನಿರಲಿ, ಬ್ರಿಟನ್ ಎಂಬುದು ಒಂದು ದೇಶವಾಗಿ ಹುಟ್ಟುವ ಮುಂಚಿನಿಂದಲೂ ಭಾಗ್ಯ ವಿಧಾತನಿದ್ದಾನೆ. ಹೀಗಾಗಿ ‘ಜನಗಣಮನ’ ಬ್ರಿಟಿಷ್ ದೊರೆಯ ಸ್ವಾಗತಕ್ಕಾಗಿ ಬರೆದದ್ದೇ ಎಂಬ ಪ್ರಶ್ನೆಗೆ ‘‘ಉತ್ತರಿಸುವುದೇ ಅಪಮಾನಕಾರಿ’’ ಎಂದು ಟಾಗೋರ್ 1939ರಲ್ಲಿ ಪುಲಿನ್ ಬಿಹಾರಿ ಸೇನ್ ಎಂಬುವರಿಗೆ ಬರೆದ ಪತ್ರದಲ್ಲಿ ಸ್ಪಷ್ಟ ಪಡಿಸುತ್ತಾರೆ.
ಹೆಚ್ಚಿನ ವಿವರಗಳಿಗೆ ಆಸಕ್ತರು ‘The Hindu’ ಪತ್ರಿಕೆಯಲ್ಲಿ ಅನಿರ್ಬನ್ ಭಟ್ಟಾಚಾರ್ಯ ಅವರು ಬರೆದಿರುವ ‘Tagore And That Song’ ಲೇಖನವನ್ನು ಈ ವಿಳಾಸದಲ್ಲಿ ಓದಬಹುದು:
(https://www.thehindu.com/opinion/open-page/tagore-and-that-song/article10886480.ece)
-‘ಜನಗಣಮನ’ದಲ್ಲಿ ಕೆಲವು ಭೌಗೋಳಿಕ ಹೆಸರುಗಳ ತಿದ್ದುಪಡಿ ಮಾಡಬೇಕೆಂಬ ಬಗ್ಗೆ ದಾಖಲಾದ ಅಹವಾಲಿನ ಬಗ್ಗೆ 2005ರಲ್ಲಿ ಭಾರತದ ಸುಪ್ರೀಂ ಕೋರ್ಟು ಕೂಡ ತನ್ನ ತೀರ್ಪಿನಲ್ಲಿ
‘‘ಟಾಗೋರರೇ ಸ್ಪಷ್ಟಪಡಿಸಿರುವಂತೆ ಐದು ಚರಣಗಳಲ್ಲಿ ಬರೆದಿರುವ ಈ ಹಾಡು ಭಾರತದ ದೈವವನ್ನು ಉದ್ದೇಶಿಸಿ ಬರೆಯಲಾಗಿದೆ. ಈ ಗೀತೆಯು ಹೇಗೆ ಭಾರತವು ವಿವಿಧ ಧರ್ಮ, ಭಾಷೆ, ಪ್ರದೇಶ ಮತ್ತು ಸಮುದಾಯಗಳ ಸಂಗಮವಾಗಿದೆ ಎಂಬುದನ್ನು ಹೇಳುತ್ತದೆ. ಈ ಗೀತೆಯು ವಿವಿಧತೆಗಳಲ್ಲಿ ಏಕತೆಯ ಸಂದೇಶವಾಗಿದೆ’’ ಎಂದು ತೀರ್ಪಿತ್ತಿದೆ.
(https://api.sci.gov.in/jonew/judis/27027.pdf)
-ರವೀಂದ್ರನಾಥ ಟಾಗೋರರು ಮಾನವತಾವಾದಿ ರಾಷ್ಟ್ರೀಯವಾದಿಗಳಾಗಿದ್ದರು. ಕಾಂಗ್ರೆಸ್‌ನಲ್ಲಿ ಇರದಿದ್ದರೂ ಅದರ ಹೋರಾಟದ ದಿಕ್ಕಿನ ಬಗ್ಗೆ ಸದಾ ಎಚ್ಚರಿಕೆಯ ವಿಮರ್ಶೆಗಳನ್ನು ಮಾಡುತ್ತಿದ್ದರು. ಅವರ ಸ್ವತಂತ್ರ ಭಾರತದ ಕಲ್ಪನೆ ಇನ್ನೂ ಸ್ಪಷ್ಟವಾಗಿ 1901ರಲ್ಲಿ ಅವರು ಬರೆದ
‘‘Where the mind is without fear
and the head is held high
Where knowledge is free…’’
ಎಂಬ ‘‘ಎಲ್ಲಿ ಮನಕೆ ಅಳುಕಿರದೋ, ಎಲ್ಲಿ ಮನಕೆ ಯಾವುದೇ ಅಡತಡೆಗಳಿರದೋ, ಎಲ್ಲಿ ಮತಧರ್ಮ, ಸಂಪ್ರದಾಯ ಕೊನೆಗೆ ಸಂಕುಚಿತ ರಾಷ್ಟ್ರೀಯತೆಗಳು ಮನುಷ್ಯರ ಸಾಮೂಹಿಕ ಒಳಿತು ಮತ್ತು ವಿಕಾಸಕ್ಕೆ ಅಡ್ಡಿಯಾಗದೋ ಅಂತಹ ಸ್ವಾತಂತ್ರ್ಯಕ್ಕೆ ಈ ದೇಶ ತೆರೆದುಕೊಳ್ಳಲಿ ಎಂಬ ವಿಶ್ವ ಮಾನವ ಆಶಯದಲ್ಲಿ ಸ್ಪಷ್ಟಗೊಳ್ಳುತ್ತದೆ. ವಾಸ್ತವದಲ್ಲಿ ಭಾರತದ ನಿಜವಾದ ರಾಷ್ಟ್ರಗೀತೆ ಈ ಕವನವಾಗಬೇಕಿತ್ತು. ಈಗಂತೂ ಈ ಕವನಗಳ ಆಶಯಗಳ ಮಾರ್ಗದರ್ಶನ ಹಿಂದೆಂದಿಗಿಂತಲೂ ಅಗತ್ಯವಿದೆ.
-ಟಾಗೋರರು 1905ರಲ್ಲಿ ಬ್ರಿಟಿಷರು ಮಾಡಿದ ಬಂಗಾಳ ವಿಭಜನೆಯ ವಿರುದ್ಧ ಸಕ್ರಿಯವಾಗಿ ತೊಡಗಿಕೊಂಡಿದ್ದರು. ಆ ಹೋರಾಟದಲ್ಲಿ ಬಂಕಿಮರ ‘ವಂದೇ ಮಾತರಂ’ನ ಮೊದಲೆರಡು ಚರಣಗಳನ್ನು ಹಾಡುತ್ತಿದ್ದರು. 1919ರಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ವಿರುದ್ಧ ಬ್ರಿಟಿಷ್ ಸರಕಾರ ತಮಗೆ ಕೊಟ್ಟಿದ್ದ ‘ನೈಟ್ ಹುಡ್’ ಪ್ರಶಸ್ತಿಯನ್ನು ವಾಪಸ್ ಮಾಡಿದ್ದರು. ಮೋದಿಯ ಪಿತಾಮಹರಾದ ಆರೆಸ್ಸೆಸ್ ಮತ್ತು ಸಾವರ್ಕರ್ ಅವರುಗಳು ಬ್ರಿಟಿಷರ ಗುಲಾಮಿತನ ಮಾಡುತ್ತಾ ಸಮಾಜದಲ್ಲಿ ಕೋಮು ದ್ವೇಷ ಬಿತ್ತುತ್ತಿದ್ದಾಗ, ಸಮಗ್ರ ಸ್ವಾತಂತ್ರ್ಯ ಆಶಯಗಳೊಂದಿಗೆ ಸ್ವಾತಂತ್ರ್ಯ ಹೋರಾಟದ ಜೊತೆಗಿದ್ದರು ಮತ್ತು ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಭಾವೈಕ್ಯಕ್ಕಾಗಿ ಶ್ರಮಿಸಿದ್ದರು.
- ಟಾಗೋರರಿಗೆ ರಾಷ್ಟ್ರವೆಂದರೆ ಅಲ್ಲಿನ ಜನ ಮತ್ತು ಸ್ವಾತಂತ್ರ್ಯವೆಂದರೆ ಜನರ ಬವಣೆಗಳ ವಿಮೋಚನೆಯೇ ಆಗಿತ್ತು. ಹೀಗಾಗಿ ‘ವಂದೇ ಮಾತರಂ’ ರೀತಿ ದೇಶವನ್ನು ಒಂದು ಧರ್ಮಕ್ಕೆ ಸೀಮಿತವಾಗಿ ಅಮೂರ್ತವಾಗಿ ಮಾತೆಯಾಗಿ ಭಾವನಾತ್ಮಕವಾಗಿ ಕಲ್ಪಿಸಿಕೊಂಡು, ಮೂರ್ತ ಜನರನ್ನು ಅವರ ಬವಣೆಗಳನ್ನು ಹಿಂದಕ್ಕೆ ಸರಿಸುವ ಬಗ್ಗೆ ತೀವ್ರವಾದ ವಿಮರ್ಶೆಯಿತ್ತು. ಇದು ಟಾಗೋರರು 1915ರಲ್ಲಿ ಬರೆದ ‘ಘರೇ ಭೈರೇ’ ಕಾದಂಬರಿಯಲ್ಲಿ ತುಂಬಾ ಸ್ಪಷ್ಟವಾಗಿ ಘೋಷಿತವಾಗುತ್ತದೆ.
-ಹೀಗಾಗಿ ‘ಜನಗಣಮನ’ ಮತ್ತು ‘ವಂದೇ ಮಾತರಂ’ಗಳು ಎರಡು ವಿಭಿನ್ನ ಭಾರತದ ಕನಸಿನ ಆದರ್ಶಗಳೂ ಆಗಿವೆ. ‘ಜನಗಣಮನ’ ಎಲ್ಲರನ್ನೂ ಒಳಗೊಳ್ಳುವ, ಸಾಮಾಜಿಕ ನ್ಯಾಯವುಳ್ಳ ಜನತಂತ್ರದ ಆಶಯ ಗೀತೆಯಾಗಿದ್ದರೆ, ‘ವಂದೇ ಮಾತರಂ’ ಸಂಘಪರಿವಾರ ಮತ್ತು ಮೋದಿ ಸರಕಾರ ಬಯಸುವ ದ್ವೇಷ ಆಧಾರದ ಬ್ರಾಹ್ಮಣೀಯ ಹಿಂದೂ ಬಂಡವಾಳಶಾಹಿ-ಪಾಳೆಗಾರಿ ಭಾರತವಾಗಿದೆ. ಇಂದು ಬಿಜೆಪಿ ಮತ್ತು ಸಂಘಪರಿವಾರ ‘ವಂದೇ ಮಾತರಂ’ ಮೂಲಕ ‘ಜನಗಣಮನ’ದ ಮೇಲೆ ಮಾಡುತ್ತಿರುವ ದಾಳಿಯ ಹಿಂದಿರುವ ರಾಜಕಾರಣವೂ ಅದೇ ಆಗಿದೆ.
ಆದ್ದರಿಂದಲೇ ‘ವಂದೇ ಮಾತರಂ’ಗೆ 150 ವರ್ಷ ತುಂಬುತ್ತಿರುವ ನೆಪದಲ್ಲಿ ಸಂಘಿಗಳು ಈ ಸಂದರ್ಭವನ್ನು ಬಳಸಿಕೊಂಡು ಇನ್ನೊಮ್ಮೆ ಈ ದೇಶದ ಸೌಹಾರ್ದ ಹಂದರದ ಮೇಲೆ ಸಾಂಸ್ಕೃತಿಕ ದಾಳಿ ಮಾಡಲು ಸಜ್ಜಾಗಿವೆ. ಹೀಗಾಗಿ ಸಂಘಿಗಳ ಬ್ರಾಹ್ಮಣೀಯ ಹಿಂದುತ್ವ ರಾಜಕಾರಣಕ್ಕೆ ಹೂರಣ ತುಂಬುವ ‘ವಂದೇ ಮಾತರಂ’ ಗೀತೆ, ‘ಆನಂದ ಮಠ’ ಕಾದಂಬರಿ ಮತ್ತು ಅದನ್ನು ಬರೆದ ಸಂದರ್ಭ ಕೂಲಂಕಷವಾಗಿ ಪರಿಶೀಲಿಸುವ ಅಗತ್ಯವಿದೆ.
‘ವಂದೇ ಮಾತರಂ’- ಗೀತೆಯ ಇತಿಹಾಸ
‘ವಂದೇ ಮಾತರಂ’ ಗೀತೆಯನ್ನು ಬರೆದದ್ದು ಬಂಗಾಳದ ಖ್ಯಾತ ಸಾಹಿತಿ ಮತ್ತು ಕವಿ ಬಂಕಿಮ ಚಂದ್ರ ಚಟರ್ಜಿಯವರು (1838-1894). 19ನೇ ಶತಮಾನದಲ್ಲಿ ಕೊನೆಯ ಭಾಗದಲ್ಲಿ ಅವರು ಬ್ರಿಟಿಷ್ ಆಡಳಿತದಲ್ಲಿ ಅಧಿಕಾರಿಯೂ ಆಗಿದ್ದರು. ಇವರ ಕಾಲಘಟ್ಟದಲ್ಲೇ ಬ್ರಿಟಿಷರು ಭಾರತದ ಮೊತ್ತ ಮೊದಲ ಜನಗಣತಿಯನ್ನು 1871ರಲ್ಲಿ ಮಾಡಿದರು. ಆ ಜನಗಣತಿಯಂತೆ ಬ್ರಿಟಿಷರ ಆಳ್ವಿಕೆಯಲ್ಲಿದ್ದ ಅವಿಭಜಿತ ಬಂಗಾಳ, ಬಿಹಾರ, ಜಾರ್ಖಂಡ್ ಇತ್ಯಾದಿಗಳಿದ್ದ ಬಂಗಾಳ ಪ್ರೆಸಿಡೆನ್ಸಿಯ ಜನಸಂಖ್ಯೆ ಏಳು ಕೋಟಿ. ‘ವಂದೇ ಮಾತರಂ’ ಹಾಡಿನ ಮೂರನೇ ಚರಣದಲ್ಲಿ ಬರುವ ‘‘ಏಳು ಕೋಟಿ ಕಂಠಗಳು ನಿನ್ನ ಸ್ತುತಿಯನ್ನು ಮಾಡುತ್ತವೆ’’ ಎಂಬ ವಾಕ್ಯದಿಂದಾಗಿ ಈ ಹಾಡನ್ನು 1872ರ ಸೆನ್ಸಸ್ ಅಂಕಿಅಂಶಗಳು ಬಂದ ನಂತರದಲ್ಲಿ ಬರೆದದ್ದು ಎಂದು ಇತಿಹಾಸಕಾರರು ಊಹಿಸುತ್ತಾರೆ. ಅರಬಿಂದೋ ಘೋಷ್ ಅವರು ‘ಈ ಗೀತೆಯನ್ನು 1875ರಲ್ಲಿ ಬರೆದದ್ದು’ ಎಂದು ಬರೆದಿದ್ದಾರೆ. ಅದನ್ನು ಆಧರಿಸಿಯೇ 2025ರಲ್ಲಿ ಅದರ 150ನೇ ವರ್ಷವನ್ನು ಮೋದಿ ಸರಕಾರ ಆಚರಿಸುತ್ತಿದೆ.
ಬಂಕಿಮ ಚಂದ್ರರ ಹತ್ತಿರದ ಸಂಬಂಧಿಗಳು ಮತ್ತು ಇತಿಹಾಸಕಾರರು ಬರೆದಿರುವ ಚರಿತ್ರೆಗಳು ಈಗ ಹಾಲಿ ಇರುವ 27 ಸಾಲುಗಳ ‘ವಂದೇ ಮಾತರಂ’ ಗೀತೆಯ ಮೊದಲ 12 ಸಾಲುಗಳನ್ನು ಬರೆದದ್ದು 1875ರಲ್ಲಿ ಎಂದು ಊಹಿಸಲಾಗಿದೆ. ಈ 12 ಸಾಲುಗಳು
‘‘ವಂದೇ ಮಾತರಂ ಸುಜಲಾಂ ಸುಫಲಾಂ
ಮಲಯಜ ಶೀತಲಾಂ, ಸಸ್ಯ ಶ್ಯಾಮಲಾಂ
ಶುಭ್ರ ಜ್ಯೋತ್ಸ್ನಾಂ ಪುಲಕಿತ ಯಾಮಿನೀಂ
ಫುಲ್ಲ ಕುಸುಮಿತ ಧ್ರುಮದಳ ಶೋಭಿನೀಂ...’’
ಎಂದು ಶುದ್ಧ ಸಂಸ್ಕೃತದಲ್ಲಿ ಭಾರತದ ಪ್ರಕೃತಿಯನ್ನು ಕಾವ್ಯಾತ್ಮಕವಾಗಿ ಮತ್ತು ಲಯಬದ್ಧವಾಗಿ ವರ್ಣಿಸುತ್ತವೆ. ಇದರಲ್ಲಿ ಯಾವುದೇ ಧಾರ್ಮಿಕ ಪೂರ್ವಗ್ರಹಗಳು ಕಾಣುವುದಿಲ್ಲ.
ಆ ನಂತರದಲ್ಲಿ ಬಂಕಿಮರು 1882ರಲ್ಲಿ ‘ಆನಂದ ಮಠ’ ಎಂಬ ಕಾದಂಬರಿಯನ್ನು ಬರೆಯುತ್ತಾರೆ. ಆ ಕಾದಂಬರಿಯ ಘಟನಾವಳಿ ಮತ್ತು ಪಾತ್ರ ಪೋಷಣೆಯ ಭಾಗವಾಗಿ ಮೇಲಿನ 12 ಸಾಲುಗಳ ಜೊತೆಗೆ ಹೊಸದಾಗಿ ಇನ್ನು 15 ಸಾಲುಗಳನ್ನು ಬರೆದು ಅದರಲ್ಲಿ ಸೇರಿಸುತ್ತಾರೆ.
ಜಗದ್ಧಾತ್ರಿಯಾದ ಮಾತೆ ದುರ್ಗೆಯಾಗುವ ರಾಜಕಾರಣ
ಮೊದಲ 12 ಸಾಲುಗಳಲ್ಲಿ ಭಾರತವು ಹಸನ್ಮುಖಿ ಕರುಣಾಮಯಿ ಧರ್ಮಾತೀತ ಜಗದ್ಧಾತ್ರಿಯಾಗಿ ಚಿತ್ರಿತವಾದರೆ ನಂತರ 15 ಸಾಲುಗಳಲ್ಲಿ ಆ ಮಾತೆಯು ಶತ್ರುವನ್ನು ಚೆಂಡಾಡಲು ಸಮರೋತ್ಸಾಹಿಯಾಗಿ ಕಾದಿರುವ ಕಾಳಿಯಾಗಿ ಮತ್ತು ದುರ್ಗೆಯಾಗಿ ಬದಲಾಗುತ್ತಾಳೆ. ಮೊದಲ 12 ಸಾಲುಗಳಲ್ಲಿ ಸಂಸ್ಕೃತ ಭಾಷೆಯನ್ನು ಬಿಟ್ಟರೆ ಬೇರೆ ಯಾವುದೇ ಧಾರ್ಮಿಕ ಚಿಹ್ನೆಗಳಿರುವುದಿಲ್ಲ. ಆದರೆ ನಂತರದ 15 ಸಾಲುಗಳಲ್ಲಿ ದುರ್ಗೆ, ಕಾಳಿ ಇನ್ನಿತ್ಯಾದಿ ಬ್ರಾಹ್ಮಣೀಯ ಹಿಂದೂ ದೇವತೆಗಳು ಅವತರಿಸುತ್ತಾರೆ.
ಮೂರು ಮತ್ತು ನಾಲ್ಕನೇ ಚರಣದಲ್ಲಂತೂ ಧಾರ್ಮಿಕ ಸಂಕೇತಗಳು ಇನ್ನು ಸ್ಪಷ್ಟವಾಗಿ ಬಂದು
‘‘ತುಮ್ ಹಿ ವಿದ್ಯಾ,
ತುಮ್ ಹಿ ಧರ್ಮಾ,
ತುಮ್ ಹಿ ಹೃದಿ,
ತುಮೀ ಮರ್ಮ’’ ಎಂದು ಸ್ಪಷ್ಟವಾಗಿ ಮಾತೆ ಸಕಲರ ಮಾತೆಯಲ್ಲದೆ ಉಗ್ರ ಬ್ರಾಹ್ಮಣೀಯ ಹಿಂದೂ ಮಾತೆಯಾಗುತ್ತಾಳೆ. ನಾಲ್ಕನೇ ಚರಣದಲ್ಲಂತೂ ನಿನ್ನಿಂದಲೇ ನಮ್ಮ ಶಕ್ತಿ ಮತ್ತು ಪ್ರತೀ ಮಂದಿರದಲ್ಲೂ ನಿನ್ನನ್ನೇ ನಾವು ನೋಡುತ್ತೇವೆ ಎಂದು ಸ್ತುತಿಸಲಾಗುತ್ತದೆ. ಧರ್ಮಾತೀತವಾದ ಮಾತೆ ಈ ರೀತಿ ನಿರ್ದಿಷ್ಟ ಧರ್ಮದ ಹಾಗೂ ದೇವಸ್ಥಾನಗಳ ಬಂದಿಯಾಗುತ್ತಾಳೆ.
ಎಲ್ಲಕ್ಕಿಂತ ಮುಖ್ಯವಾಗಿ ಈ ಮಾತೆ ಈಗ ಕರುಣಾಮಯಿಯಾಗಿ ಮಾತ್ರ ಉಳಿಯುವುದಿಲ್ಲ. ಈಗ ಮಾತೆ ‘‘ತ್ವಂ ಹಿ ದುರ್ಗಾ ದಶಪ್ರಹರಣ ಧಾರಿಣಿ’’ಯಾಗುತ್ತಾಳೆ. ಅಂದರೆ ಹತ್ತು ಯುದ್ಧಾಸ್ತ್ರಗಳನ್ನು ಹೊಂದಿರುವ ರಣಕಾಳಿಯಾಗುತ್ತಾಳೆ. ಶತ್ರು ಸಂಹಾರಕ್ಕೆ ಕಾತುರಳಾದ ಮಾತೆಯಾಗುತ್ತಾಳೆ.
ಹೀಗ ಹೊಸದಾಗಿ ಸೇರ್ಪಡೆಯಾದ 15 ಸಾಲುಗಳು ಧರ್ಮ ಸೂಚಕ ಮಾತ್ರವಲ್ಲ, ಕದನ ಸೂಚಕವೂ ಆಗಿ ಮಾರ್ಪಾಡಾಗುತ್ತದೆ. ಆದರೆ ಜಗದ್ಧಾತ್ರಿ ಮಾತೆ ಶತ್ರು ಸಂಹಾರಕ ದುರ್ಗಾ ದಶಪ್ರಹರಣ ಧಾರಿಣಿಯಾಗಿ ಮಾರ್ಪಾ ಡಾಗಿದ್ದು ಏಕೆ? ಈ ದುರ್ಗೆ ಸಂಹರಿಸಬೇಕೆಂದಿರುವ ಶತ್ರುಗಳು ಯಾರು?
ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ‘ಆನಂದ ಮಠ’ ಕಾದಂಬರಿಯನ್ನು ಮತ್ತು ಕಾದಂಬರಿಯ ಕಾಲದ ಸಂದರ್ಭವನ್ನು ಮತ್ತು ಕಾದಂಬರಿಕಾರರ ಸಂದರ್ಭವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.







