ಪ್ರಚಾರಕ್ ಪ್ರಧಾನಿಗಳೇ, ಸ್ವಾತಂತ್ರ್ಯ ಹೋರಾಟದಲ್ಲಿ ಆರೆಸ್ಸೆಸ್ ಮತ್ತು ಸಾವರ್ಕರ್ ಕೊಡುಗೆಯೇನು?

ಕೇಂದ್ರದ ಪೆಟ್ರೋಲಿಯಂ ಇಲಾಖೆ ಸ್ವಾತಂತ್ರ್ಯ ದಿನದಂದು ಅಧಿಕೃತವಾಗಿ ಟ್ವೀಟ್ ಮಾಡಿದ ಚಿತ್ರ
ಮೋದಿ ಮಾಡಿದ ಭಾಷಣವು ಆರೆಸ್ಸೆಸ್ ಮತ್ತು ಸಾವರ್ಕರ್ ಬಗ್ಗೆ ಮತ್ತು ದೇಶದ ಸ್ವಾತಂತ್ರ್ಯದ ಪರಿಕಲ್ಪನೆಯ ಬಗ್ಗೆಯೇ ತಪ್ಪು ಪರಿಕಲ್ಪನೆಯನ್ನು ಹುಟ್ಟುಹಾಕುವ ಉದ್ದೇಶ ಹೊಂದಿದೆ. ಸುಳ್ಳು ಇತಿಹಾಸದ ಆಧಾರದಲ್ಲಿ ಪೊಳ್ಳು ಭವಿಷ್ಯವನ್ನು ಕಟ್ಟುವ ಅಪಾಯ ಹೊಂದಿದೆ.
ಹೀಗಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾವೈಕ್ಯ ಭಾರತ ನಿರ್ಮಾಣದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್ಗಳ ಅತ್ಯಂತ ವಿನಾಶಕಾರಿ ಪಾತ್ರವೇನಿತ್ತೆಂದು ಈಗಾಗಲೇ ಹಲವು ಬಾರಿ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿದೆ. ಅದರೆ ಈ ಸಂದರ್ಭದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್ಗಳಿಗೆ ದೇಶದ ಸ್ವಾತಂತ್ರ್ಯದ ಬಗ್ಗೆ ಏನು ಅಭಿಪ್ರಾಯವಿತ್ತು ಮತ್ತು ಅವರು ವಹಿಸಿದ ಪಾತ್ರವೇನು ಎಂಬುದನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತರುವ ಅಗತ್ಯವಿದೆ.
ಭಾಗ-1
ಕೆಂಪುಕೋಟೆಯಿಂದ ಸತತವಾಗಿ 12ನೇ ಸ್ವಾತಂತ್ರ್ಯ ದಿನದ ಭಾಷಣವನ್ನು ಮಾಡಿದ ಪ್ರಧಾನಿ ನರೇಂದ್ರ ಮೋದಿಯವರು ಈ ಬಾರಿ ಈವರೆಗೆ ಅವರು ಹಾಗೂ ಅವರ ಹಿಂದಿನ ಯಾವ ಪ್ರಧಾನಿಗಳೂ ಮಾಡದಿದ್ದ ಮಹಾ ಪ್ರಮಾದವೊಂದನ್ನು ಮಾಡಿದರು. ತಮ್ಮ ಭಾಷಣದಲ್ಲಿ ಪ್ರಧಾನಿ ಮೋದಿಯವರು ಆರೆಸ್ಸೆಸ್-ರಾಷ್ಟ್ರೀಯ ಸ್ವಯಂಸೇವಕ ಸಂಘವು ಹುಟ್ಟಿ ಈ ವರ್ಷ 100 ವರ್ಷವಾಗುತ್ತಿರುವುದನ್ನು ಗರ್ವದಿಂದ ನೆನಪಿಸಿಕೊಂಡು ಆ ಸಂಘಟನೆಯು ಭಾರತದ ಸ್ವಾತಂತ್ರ್ಯಕ್ಕೆ ಹಾಗೂ ರಾಷ್ಟ್ರ ನಿರ್ಮಾಣಕ್ಕೆ ಅಪಾರ ಕೊಡುಗೆಗಳನ್ನು ಕೊಟ್ಟಿದೆ ಎಂಬ ಹಸಿಸುಳ್ಳನ್ನು ರಾಷ್ಟ್ರಕ್ಕೆ ಹೇಳಿದರು. ತಮ್ಮ ಐತಿಹಾಸಿಕ 103 ನಿಮಿಷದ ಭಾಷಣದಲ್ಲಿ ಆರೆಸ್ಸೆಸ್ನ ಮತ್ತೊಂದು ಅಜೆಂಡಾ ಆಗಿರುವ ಅಕ್ರಮ ವಲಸಿಗರ ಹುಸಿ ಆತಂಕದ ಪ್ರಶ್ನೆಯನ್ನು ರಾಷ್ಟ್ರೀಯ ಸಮಸ್ಯೆ ಎಂಬಂತೆ ದೇಶದ ಮುಂದಿಟ್ಟರು.
ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನು ವಹಿಸದ, ಬದಲಿಗೆ ಬ್ರಿಟಿಷರ ಜೊತೆ ಕೈಜೋಡಿಸಿ ಸ್ವಾತಂತ್ರ್ಯ ಹೋರಾಟಕ್ಕೆ ದ್ರೋಹ ಬಗೆದ, ಸ್ವಾತಂತ್ರ್ಯಾನಂತರದ ಈ 79 ವರ್ಷಗಳಲ್ಲಿ ಉದ್ದಕ್ಕೂ ಭಾರತದ ಭಾವೈಕ್ಯ ಬುನಾದಿಯನ್ನು ಕೋಮು ದ್ವೇಷದಿಂದ, ಬಾಂಬ್ ಭಯೋತ್ಪಾದನೆಗಳಿಂದ ಬುಡಮೇಲು ಮಾಡುತ್ತಲೇ ಬರುತ್ತಿರುವ ಆರೆಸ್ಸೆಸ್ ಬಗ್ಗೆ ಅದರ ಪ್ರಚಾರಕರೇ ಆಗಿದ್ದ ಮೋದಿ ಕೂಡ ಕಳೆದ 11 ವರ್ಷಗಳ ಭಾಷಣಗಳಲ್ಲಿ ಪ್ರಸ್ತಾಪ ಮಾಡಿರಲಿಲ್ಲ.
ಹಾಗಿರುವಾಗ ಈಗ ಯಾಕೆ ಅದನ್ನು ‘ಗರ್ವ’ದಿಂದ ಪ್ರಸ್ತಾಪ ಮಾಡಿದರು?
ಮೋದಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ದೇಶವು ವಿನಾಶದೆಡೆಗೆ ದಾಪುಗಾಲು ಇಡುತ್ತಿದೆ. 12 ವರ್ಷಗಳ ತಮ್ಮ ಸುದೀರ್ಘ ಪ್ರಧಾನಮಂತ್ರಿಗಿರಿಯಲ್ಲಿ ಅವರ ಆಪ್ತ ಕ್ರೋನಿ ಬಂಡವಾಳಿಗರಾದ ಅದಾನಿ-ಅಂಬಾನಿಗಳಂತಹ 1,176 ಬಿಲಿಯನಾಧೀಶರು ಮಾತ್ರ ಅಮೃತಕಾಲವನ್ನು ಕಂಡರು. ಉಳಿದಂತೆ ಮೋದಿ ಅವಧಿಯಲ್ಲಿ ಭಾರತದ ಬಹುಜನರ ಹಸಿವು, ಬಡತನ, ಅಸಮಾನತೆ, ನಿರುದ್ಯೋಗ, ಅಪೌಷ್ಟಿಕತೆ, ವಸತಿಹೀನತೆ, ಆದಾಯ ಮತ್ತು ಆರೋಗ್ಯ ಕುಸಿತಗಳು ಪ್ರಪಾತವನ್ನು ಮುಟ್ಟಿವೆ.
ಹೆಚ್ಚುತ್ತಿರುವ ಜಾತಿ ದೌರ್ಜನ್ಯ ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಹೆಚ್ಚುತ್ತಿರುವ ಶಿಶು ಮರಣ, ಬಾಣಂತಿಯರ ಸಾವು, ಪ್ರಭುತ್ವ ಬೆಂಬಲಿತ ಕೋಮು ದ್ವೇಷದ ರಾಜಕಾರಣ, ಅಭಿವ್ಯಕ್ತಿ ಸ್ವಾತಂತ್ಯದ ಮೇಲಿನ ಹಲ್ಲೆ, ಅಮೆರಿಕದ ಗುಲಾಮಿ ವಿದೇಶಾಂಗ ನೀತಿ ಅನುಸರಿಸುತ್ತಿರುವುದರಿಂದ ಹೆಚ್ಚಾಗುತ್ತಿರುವ ಜಾಗತಿಕ ಏಕಾಂಗಿತನ, ಪಹಲ್ಗಾಮ್ ಭದ್ರತಾ ವೈಫಲ್ಯ ಇತ್ಯಾದಿ ಯಾವುದೇ ಸಮಸ್ಯೆಗಳು, ಆತಂಕಗಳು ಮತ್ತು ವೈಫಲ್ಯಗಳೇ ಮೋದಿ ಆಳ್ವಿಕೆಯ ವಾಸ್ತವಗಳು. ಆದರೆ ಅದನ್ನೇ ಸಾಧನೆಯೆಂದು ಜನರ ಮುಂದಿಟ್ಟರೆ ಜನರು ಸಂಪೂರ್ಣ ಒಪ್ಪುವುದಿಲ್ಲವೆಂಬ ಪಾಠವನ್ನು 2024ರ ಚುನಾವಣೆ ಫಲಿತಾಂಶ ಕಲಿಸಿದೆ. ಹೀಗಾಗಿ ಸಲ್ಲದ ಹೆಮ್ಮೆಗಳ ಇಲ್ಲದ ಆತಂಕಗಳ ನರೇಟಿವ್ ಕಟ್ಟಲು 12ನೇ ಸ್ವಾತಂತ್ರ್ಯ ಭಾಷಣದಲ್ಲಿ ಪ್ರಯತ್ನಿಸಿದ್ದಾರೆ. ಅದರ ಭಾಗವಾಗಿಯೇ ಆರೆಸ್ಸೆಸ್ ಮತ್ತು ಸಾವರ್ಕರ್ ಹಾಗೂ ನೆರೆ ದೇಶಗಳು ದುರುದ್ದೇಶಪೂರ್ವಕವಾಗಿ ಭಾರತದ ಜನಸಂಖ್ಯೆಯನ್ನು ಏರುಪೇರು ಮಾಡಲೆಂದೇ ಅಕ್ರಮ ವಲಸೆ ಮಾಡುತ್ತಿದ್ದಾರೆ. ನಮ್ಮ ಯುವಕರ ಬದುಕನ್ನು ಹಾಳು ಮಾಡುತ್ತಿದ್ದಾರೆ ಮತ್ತು ನಮ್ಮ ಸಹೋದರಿಯರನ್ನು ಮತ್ತು ತಾಯಂದಿರನ್ನು ಗುರಿಯಾಗಿರಿಸಿಕೊಂಡಿದ್ದಾರೆ ಎಂಬ ಪಕ್ಕಾ ಬಜರಂಗದಳದ ಸ್ಥಾನೀಯ ನಾಯಕನೊಬ್ಬನ ರೀತಿಯ ಕೋಮು ದ್ವೇಷಿ ಸ್ವಾತಂತ್ರ್ಯ ಭಾಷಣ.
ಇದರ ಜೊತೆಗೆ, ಕೇಂದ್ರದ ಪೆಟ್ರೋಲಿಯಂ ಇಲಾಖೆಯು ಸ್ವಾತಂತ್ರ್ಯ ದಿನದಂದು ಒಂದು ಚಿತ್ರವನ್ನು ಅಧಿಕೃತವಾಗಿ ಟ್ವೀಟ್ ಮಾಡಿತ್ತು. ಅದರಲ್ಲಿ ಆರೆಸ್ಸೆಸ್ನ ಮತ್ತು ‘ಹಿಂದೂ ರಾಷ್ಟ್ರ ಹಾಗೂ ಹಿಂದುತ್ವ’ ಫ್ಯಾಶಿಸ್ಟ್ ರಾಜಕಾರಣದ ಪಿತಾಮಹ ಮತ್ತು 1911ರ ನಂತರ ಜೀವನದುದ್ದಕ್ಕೂ ಭಾರತದ ಸ್ವಾತಂತ್ರ್ಯದ ವಿರುದ್ಧವಾಗಿ ಬ್ರಿಟಿಷರ ಜೊತೆ ಕೈಜೋಡಿಸಿದ್ದ ಸ್ವಾತಂತ್ರ್ಯ ದ್ರೋಹಿ ಸಾವರ್ಕರ್ ಚಿತ್ರವನ್ನು ಗಾಂಧಿ, ಸುಭಾಷ್ ಮತ್ತು ಭಗತ್ಸಿಂಗ್ರಿಗಿಂತಲೂ ಮೇಲಿರಿಸಲಾಗಿತ್ತು.
ಕಳೆದ 11 ವರ್ಷಗಳ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರೆಸ್ಸೆಸ್ ಮತ್ತು ಸಾವರ್ಕರ್ ಅವರುಗಳನ್ನು ಅಧಿಕೃತವಾಗಿ ಹೊಗಳದೇ ಇದ್ದುದ್ದನ್ನು ತನ್ನ 12ನೇ ಭಾಷಣದಲ್ಲಿ ಮಾಡಿರುವುದು ಆರೆಸ್ಸೆಸ್ ಮತ್ತು ಮೋದಿ ನೇತೃತ್ವದ ಬಿಜೆಪಿಯ ನಡುವೆ ನಡೆಯುತ್ತಿದ್ದ ಸಣ್ಣ ಆಂತರಿಕ ಸಂಘರ್ಷದ ಪರಿಣಾಮವೂ ಆಗಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಅಬ್ಬರಿಸಿ ಕೊಚ್ಚಿಕೊಂಡಷ್ಟು ಸೀಟುಗಳನ್ನು ಪಡೆಯದಿದ್ದರ ಹಿಂದೆ ಮೋದಿ ನೇತೃತ್ವ ಬಿಜೆಪಿ ಆರೆಸ್ಸೆಸ್ನ ಬಗ್ಗೆ ತೋರಿದ ಉದಾಸೀನವೂ ಒಂದು ಕಾರಣವಾಗಿತ್ತು. ಫಲಿತಾಂಶದ ನಂತರ ಮತ್ತೆ ಎರಡು ಬಣದ ನಡುವೆ ಉಂಟಾಗಿದ್ದ ಅಲ್ಪಕಾಲಿಕ ಹಾಗೂ ಅಲ್ಪಪ್ರಮಾಣದ ವೈಮನಸ್ಯ ಬಗೆಹರಿದಂತೆ ಕಾಣುತ್ತಿದೆ. ಅದೇ ಮೋದಿಯವರ ಭಾಷಣದಲ್ಲೂ, ಹೊಸ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಮೋದಿ ಭಕ್ತನಿಗಿಂತ ಆರೆಸ್ಸೆಸ್ ವ್ಯಕ್ತಿ ಆಯ್ಕೆಯಾಗಿರುವುದರಲ್ಲೂ ವ್ಯಕ್ತವಾಗುತ್ತಿದೆ.
ಅವರುಗಳ ನಡುವಿನ ಕೋಳಿಜಗಳ ಸುಖಾಂತ್ಯ ಕಂಡಿದ್ದರೂ ಮೋದಿ ಮಾಡಿದ ಭಾಷಣವು ಆರೆಸ್ಸೆಸ್ ಮತ್ತು ಸಾವರ್ಕರ್ ಬಗ್ಗೆ ಮತ್ತು ದೇಶದ ಸ್ವಾತಂತ್ರ್ಯದ ಪರಿಕಲ್ಪನೆಯ ಬಗ್ಗೆಯೇ ತಪ್ಪು ಪರಿಕಲ್ಪನೆಯನ್ನು ಹುಟ್ಟುಹಾಕುವ ಉದ್ದೇಶ ಹೊಂದಿದೆ. ಸುಳ್ಳು ಇತಿಹಾಸದ ಆಧಾರದಲ್ಲಿ ಪೊಳ್ಳು ಭವಿಷ್ಯವನ್ನು ಕಟ್ಟುವ ಅಪಾಯ ಹೊಂದಿದೆ.
ಹೀಗಾಗಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಮತ್ತು ಭಾವೈಕ್ಯ ಭಾರತ ನಿರ್ಮಾಣದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್ಗಳ ಅತ್ಯಂತ ವಿನಾಶಕಾರಿ ಪಾತ್ರವೇನಿತ್ತೆಂದು ಈಗಾಗಲೇ ಹಲವು ಬಾರಿ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿದೆ. ಆದರೆ ಈ ಸಂದರ್ಭದಲ್ಲಿ ಸಾವರ್ಕರ್ ಮತ್ತು ಆರೆಸ್ಸೆಸ್ಗಳಿಗೆ ದೇಶದ ಸ್ವಾತಂತ್ರ್ಯದ ಬಗ್ಗೆ ಏನು ಅಭಿಪ್ರಾಯವಿತ್ತು ಮತ್ತು ಅವರು ವಹಿಸಿದ ಪಾತ್ರವೇನು ಎಂಬುದನ್ನು ಮತ್ತೊಮ್ಮೆ ಸಾರ್ವಜನಿಕ ಚರ್ಚೆಗೆ ತರುವ ಅಗತ್ಯವಿದೆ.
ಸಾವರ್ಕರ್ ಸ್ವಾತಂತ್ರ್ಯವೀರನೇ?
ಅಥವಾ ಸ್ವಾತಂತ್ರ್ಯ ವಿರೋಧಿಯೇ?
ಸಾವರ್ಕರ್ ಪ್ರತಿಪಾದಕರು ಮತ್ತು ಅವರ ವಿರೋಧಿಗಳು ಇಬ್ಬರೂ ಕೂಡ ಸಾವರ್ಕರ್ ಅವರ ರಾಜಕೀಯ ಬದುಕನ್ನು ಎರಡು ಭಾಗಗಳನ್ನಾಗಿ ಅರ್ಥ ಮಾಡಿಕೊಂಡರೆ ವಿಷಯಕ್ಕೆ ಸ್ಪಷ್ಟತೆ ಬರುತ್ತದೆ.
ಸಾವರ್ಕರ್ ಅವರು 1911ರಲ್ಲಿ ಲಂಡನ್ನಲ್ಲಿ ಬಂಧನಕ್ಕೊಳಗಾಗುವ ತನಕ ಕ್ರಾಂತಿಕಾರಿ ಅಭಿನವ್ ಭಾರತ್ ಸಂಘಟನೆಯ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ಚಟುವಟಿಕೆಗಳಿಗೆ ತೆರೆಮರೆಯಲ್ಲಿ ರಾಜಕೀಯ ಮಾರ್ಗದರ್ಶನ ಮಾಡುತ್ತಿದ್ದರು. 1906ರಲ್ಲಿ ಅವರು ಲಂಡನ್ಗೆ ಹೋದಾಗ ಅಲ್ಲಿಯ ಇಂಡಿಯಾ ಹೌಸ್ನಲ್ಲಿ ಸಭೆ ಸೇರುತ್ತಿದ್ದ ಭಾರತದ ಕ್ರಾಂತಿಕಾರಿ ತರುಣರಿಗೆ ಬ್ರಿಟಿಷ್ ವಿರೋಧಿ ಬಂಡಾಯದ ದೀಕ್ಷೆ ಕೊಡುತ್ತಿದ್ದರು ಮತ್ತು ಅಲ್ಲಿಂದಲೇ ತಮ್ಮ ಮಹಾರಾಷ್ಟ್ರದ ಸ್ನೇಹಿತರಿಗೆ ಪಿಸ್ತೂಲು ಇತ್ಯಾದಿ ಸರಬರಾಜು ಮಾಡುತ್ತಿದ್ದರು.
ಆದರೆ ಈ ಪ್ರಕ್ರಿಯೆಯಲ್ಲಿ ಸೆರೆಯಾಗುತ್ತಿದ್ದ ಯಾರೂ ಸಾವರ್ಕರ್ ಹೆಸರು ಹೇಳುತ್ತಿರಲಿಲ್ಲ. ಉದಾಹರಣೆಗೆ, ಲಂಡನ್ನಲ್ಲಿ ಬ್ರಿಟಿಷ್ ಅಧಿಕಾರಿ ಕರ್ಜನ್ ವೈಲಿಯನ್ನು ಕೊಲ್ಲಲು ಮದನ್ಲಾಲ್ ಧಿಂಗಾನನ್ನು ಅಥವಾ 1948ರಲ್ಲಿ ಗಾಂಧಿಯನ್ನು ಕೊಲ್ಲಲು ನಾಥೂರಾಮ್ ಗೋಡ್ಸೆಯನ್ನು ಪ್ರೇರೇಪಿಸಿದ್ದು ಸಾವರ್ಕರ್ ಅವರೇ ಆದರೂ ಕೊಲೆಯಲ್ಲಿ ಅವರ ಪಾತ್ರದ ಬಗ್ಗೆ ಅವರಿಬ್ಬರೂ ಸಾಕ್ಷಿ ಹೇಳಲಿಲ್ಲ. ಆದರೆ 1909ರಲ್ಲಿ ಅಭಿನವ್ ಭಾರತ್ನ ಒಂದು ಗುಂಪು ಮಹಾರಾಷ್ಟ್ರದ ನಾಸಿಕ್ನಲ್ಲಿ ಬ್ರಿಟಿಷ್ ಮ್ಯಾಜಿಸ್ಟ್ರೇಟ್ ಎ.ಟಿ.ಎಂ. ಜಾಕ್ಸನ್ರನ್ನು ಕೊಂದುಹಾಕಿತು. ಅದಕ್ಕೆ ಬಳಸಲಾದ ಪಿಸ್ತೂಲು ಸಾವರ್ಕರ್ ಲಂಡನ್ನಿಂದ ಕಳಿಸಿದ್ದು ಎಂದು ಸಾಕ್ಷಿ ಸಿಕ್ಕಿತು. ಇದೊಂದು ಪ್ರಕರಣದಲ್ಲಿ ಮಾತ್ರ ಮೊದಲ ಬಾರಿಗೆ ಹಾಗೂ ಕೊನೆಯ ಬಾರಿಗೆ ಸಾಕ್ಷಿ ಸಮೇತ ಸಿಕ್ಕಿಬಿದ್ದ ಸಾವರ್ಕರ್ ಶಿಕ್ಷೆಗೆ ಗುರಿಯಾದರು.
ಅವರ ವಿಚಾರಣೆಯಲ್ಲಿ ಸಾವರ್ಕರ್ ಅವರು ಬ್ರಿಟಿಷ್ ಸಾಮ್ರಾಜ್ಯವನ್ನು ಹಿಂಸಾತ್ಮಕವಾಗಿ ಬುಡಮೇಲು ಮಾಡಬೇಕೆಂಬ ಆಶಯವನ್ನು ಹೊಂದಿದ್ದ ಅಭಿನವ್ ಭಾರತ್ ಗುಂಪಿನ ನಾಯಕ ಎಂದು ಸಾಬೀತಾಯಿತು. ಸಾಮಾನ್ಯವಾಗಿ ಬ್ರಿಟಿಷರು ಇಂತಹ ಕ್ರಾಂತಿಕಾರಿ ನಾಯಕರನ್ನು ಸೆರೆ ಹಿಡಿಯುವ ಮುನ್ನವೇ ಕೊಂದು ಹಾಕುತ್ತಿದ್ದರು ಅಥವಾ ಗಲ್ಲುಶಿಕ್ಷೆ ವಿಧಿಸುತ್ತಿದ್ದರು. ಆದರೆ ಸಾವರ್ಕರ್ ಅವರಿಗೆ 50 ವರ್ಷಗಳ ಶಿಕ್ಷೆ ವಿಧಿಸಿ ಆ ಕಾಲಕ್ಕೆ ಹಿಂಸಾತ್ಮಕ ದಾರಿ ಹಿಡಿದಿದ್ದ ಎಲ್ಲಾ ಕ್ರಾಂತಿಕಾರಿಗಳಿಗೆ ಕೊಡುತ್ತಿದ್ದ ಕರಿನೀರಿನ ಶಿಕ್ಷೆಯನ್ನು ಕೊಟ್ಟರು. ಅವರಿಗೆ ಮುಂಚೆಯೂ ಅಲ್ಲಿ ಸಾವಿರಾರು ಕ್ರಾಂತಿಕಾರಿ ಹೋರಾಟಗಾರರು ಹತ್ತಾರು ವರ್ಷ ಶಿಕ್ಷೆಗೆ ಗುರಿಯಾಗಿ ಒಂದೂ ಕ್ಷಮಾಪಣಾ ಪತ್ರ ಬರೆಯದೆ ಶಿಕ್ಷೆ ಮುಗಿಸಿ ಹೊರಬಿದ್ದಿದ್ದಾರೆ.
ಆದರೆ ಸಾವರ್ಕರ್ ಅವರಿಗೆ 50 ವರ್ಷ ಜೀವಾವಧಿ ಶಿಕ್ಷೆಯಾಗಿದ್ದರೂ ಅವರು ಅಲ್ಲಿ ಶಿಕ್ಷೆ ಅನುಭವಿಸಿದ್ದು ಕೇವಲ 10 ವರ್ಷಗಳು ಮಾತ್ರ. 1921ರಲ್ಲೇ ಅವರನ್ನು ಅಂಡಮಾನ್ನಿಂದ ಪುಣೆಯ ಯೆರವಾಡ ಜೈಲಿಗೆ ವರ್ಗಾಯಿಸಲಾಯಿತು. ಅದಾದ ಎರಡೇ ವರ್ಷದಲ್ಲಿ ಅವರಿಗೆ ಜೈಲಿನಿಂದ ಬಿಡುಗಡೆ ಮಾಡಿ ರತ್ನಗಿರಿಯ ಅವರ ಮನೆಯಲ್ಲಿ ಇರಲು ಅವಕಾಶ ಮಾಡಿಕೊಡಲಾಯಿತು. 1937ರಲ್ಲಿ ಅವರ ಮೇಲೆ ವಿಧಿಸಲಾಗಿದ್ದ ಎಲ್ಲ ನಿರ್ಬಂಧಗಳನ್ನು ಬ್ರಿಟಿಷರು ತೆಗೆದುಹಾಕಿದರು.
1923ರಲ್ಲಿ ರತ್ನಗಿರಿಯಲ್ಲಿ ಮನೆಗೆ ತೆರಳಿದ ನಂತರ ಬ್ರಿಟಿಷ್ ಸರಕಾರ ಮತ್ತೆ ಅವರನ್ನು ಯಾವತ್ತೂ ಬಂಧಿಸಲೇ ಇಲ್ಲ.
ಕಾರಣವಿಷ್ಟೆ. 1911ರಲ್ಲಿ ಬ್ರಿಟಿಷರು ಸಾವರ್ಕರ್ ಅವರನ್ನು ಬಂಧಿಸಿದಾಗ ಬ್ರಿಟಿಷ್ ವಿರೋಧಿ ಕ್ರಾಂತಿಕಾರಿ ನಾಯಕ ಎಂದುಕೊಂಡಿದ್ದರು. ಆದ್ದರಿಂದಲೇ ಅಂಡಮಾನ್ ಶಿಕ್ಷೆಯನ್ನೂ ಕೊಟ್ಟರು. ಆದರೆ ಯಾವಾಗ ಸಾವರ್ಕರ್ ಅವರು ಶಿಕ್ಷೆ ಪ್ರಾರಂಭಗೊಂಡ ಎರಡು ತಿಂಗಳಲ್ಲೇ ಶರಣಾಗತಿ ಪತ್ರಗಳನ್ನು ಬರೆಯಲು ಪ್ರಾರಂಭಿಸಿದರೋ, ಅಂಡಮಾನ್ ಜೈಲಿನಲ್ಲಿ ಬ್ರಿಟಿಷ್ ಅಧಿಕಾರಿಗಳ ಜೊತೆಗೆ ಕೈಜೋಡಿಸಿ ‘ಸನ್ನಡತೆ’ಯನ್ನೂ ತೋರಿ ಮತ್ತೆಂದೂ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧ ಧ್ವನಿ ಎತ್ತುವುದಿಲ್ಲ ಎಂಬುದನ್ನು ಸಾಬೀತುಪಡಿಸಿದರೋ, ಆಗ ಅವರನ್ನು ಬ್ರಿಟಿಷರು ಬಿಡುಗಡೆ ಮಾಡಿ ಗೃಹಬಂಧನದ ಸೌಕರ್ಯ ಒದಗಿಸಿಕೊಟ್ಟರು.
1923-37ರ ಅವಧಿಯಲ್ಲಿ ದೇಶದಲ್ಲಿ ನಡೆದ ಅಸಹಕಾರ ಚಳವಳಿ, ದಂಡಿ ಸತ್ಯಾಗ್ರಹ, ಸಂಪೂರ್ಣ ಸ್ವಾತಂತ್ರ್ಯ ಘೋಷಣೆ ಎಲ್ಲವನ್ನೂ ಸಾವರ್ಕರ್ ಅವರು ರತ್ನಗಿರಿಯಿಂದಲೇ ವಿರೋಧಿಸಿದ್ದು ಮಾತ್ರವಲ್ಲದೆ ಬ್ರಿಟಿಷರ ಪರವಾಗಿ ಹಿಂದೂ ಯುವಕರನ್ನು ಸಂಘಟಿಸುತ್ತಾರೆ. ಅಷ್ಟು ಮಾತ್ರವಲ್ಲ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅನುಕೂಲವಾಗುವಂತೆ ಹಿಂದೂ-ಮುಸ್ಲಿಮ್ ಕೋಮು ವಿಭಜನೆಯನ್ನೂ ಹುಟ್ಟುಹಾಕುತ್ತಾರೆ.
ಹೀಗೆ ತಮ್ಮ ಬ್ರಿಟಿಷರ ಪರವಾದ ಹಾಗೂ ಸ್ವಾತಂತ್ರ್ಯ ಹೋರಾಟಕ್ಕೆ ವಿರೋಧವಾದ ನಿಲುವುಗಳನ್ನು ತಮ್ಮ ನಡೆನುಡಿಗಳಿಂದ ಸಾಬೀತು ಪಡಿಸಿದಕ್ಕಾಗಿಯೇ ಇತರ ಕ್ರಾಂತಿಕಾರಿಗಳನ್ನು ಕೊಂದುಹಾಕಿದ, ಕಾಂಗ್ರೆಸ್ನಂಥ ಮಂದ ಸ್ವಾತಂತ್ರ್ಯವಾದಿಗಳನ್ನು ಜೈಲು ಶಿಕ್ಷೆಗೆ ದೂಡುತ್ತಿದ್ದ ಬ್ರಿಟಿಷ್ ಸರಕಾರ ಸಾವರ್ಕರ್ ಅವರನ್ನು ಮಾತ್ರ ಬಿಡುಗಡೆ ಮಾಡಿತು.
ಸಾವರ್ಕರ್- ಧರ್ಮಾಧಾರಿತ ದೇಶ ವಿಭಜನೆಯ ಮೊದಲ ಸೈದ್ಧಾಂತಿಕ ಪ್ರತಿಪಾದಕ
ದ್ವಿರಾಷ್ಟ್ರ ಸಿದ್ಧಾಂತವನ್ನು ಮೊದಲು ಮಂಡಿಸಿದ್ದು ಅಲಿಘರ್ ವಿಶ್ವವಿದ್ಯಾನಿಲಯದ ಸರ್ ಸಯ್ಯದ್ ಅಹ್ಮದ್ ಖಾನ್ರೇ ಹೊರತು ಸಾವರ್ಕರ್ ಅಲ್ಲ ಎಂಬ ವಾದವಿದೆ. ಸಾವರ್ಕರ್ ಮತ್ತು ಹಿಂದೂ ಮಹಾಸಭಾ ಕೊನೆಯವರೆಗೂ ಅಖಂಡ ಭಾರತಕ್ಕೆ ಹೋರಾಡುತ್ತಿದ್ದರು ಎಂಬ ಅಂತೆಕಂತೆಗಳು ಕಾಲಕಾಲಕ್ಕೆ ಹಿಂದುತ್ವ ವಾಟ್ಸ್ಆ್ಯಪ್ ಯುನಿವರ್ಸಿಟಿಯಲ್ಲಿ ಹರಿದಾಡುತ್ತಿರುತ್ತವೆೆ.
ಆದರೆ ಸಂಘಪರಿವಾರದವರು ಮಾನ್ಯ ಮಾಡುವ ಪ್ರಖ್ಯಾತ ಇತಿಹಾಸಕಾರ ಆರ್.ಸಿ. ಮಜುಂದಾರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ಹುಟ್ಟಿನ ಬಗ್ಗೆ ಹೀಗೆ ಹೇಳುತ್ತಾರೆ:
‘‘ದ್ವಿರಾಷ್ಟ್ರ ಸಿದ್ಧಾಂತದ ಸೃಷ್ಟಿಕರ್ತರು ಬಂಗಾಳ ಪ್ರಾಂತದ ನಭಾ ಗೋಪಾಲ್ ಅವರು. ಮುಸ್ಲಿಮ್ ಲೀಗ್ ಈ ಬಗ್ಗೆ ಪ್ರಸ್ತಾವ ಮಾಡುವ 50 ವರ್ಷಗಳ ಮುಂಚೆ ಅವರು ಭಾರತದಲ್ಲಿ ಹಿಂದೂ ಮತ್ತು ಮುಸ್ಲಿಮ್ ಎಂಬ ಎರಡು ರಾಷ್ಟ್ರಗಳಿವೆ ಎಂದು ಪ್ರತಿಪಾದಿಸಿದ್ದರು.’’ (Majumdar, R.C., Three Phases of India’s Struggle for Freedom)
ಅಂಬೇಡ್ಕರ್ ಅವರು ತಮ್ಮ ‘ಪಾಕಿಸ್ತಾನ ಅಥವಾ ಭಾರತದ ವಿಭಜನೆಯ ಪ್ರಶ್ನೆ’ ಎಂಬ ವಿದ್ವತ್ಪೂರ್ಣ ಬರಹದಲ್ಲಿ ಉಲ್ಲೇಖಿಸುವಂತೆ ಆರ್ಯ ಸಮಾಜದ ಭಾಯಿ ಪರಮಾನಂದ್ ಅವರು 1909ರ ಸುಮಾರಿನಲ್ಲೇ:
‘‘ಸಿಂಧ್ ಪ್ರಾಂತದ ಆಚೆಗಿರುವ ಪ್ರಾಂತಗಳನ್ನು ಅಫ್ಘಾನಿಸ್ತಾನ ಮತ್ತು ವಾಯವ್ಯ ಪ್ರಾಂತಗಳ ಜೊತೆ ಸೇರಿಸಿ ಮುಸಲ್ಮಾನ ಸಾಮ್ರಾಜ್ಯವನ್ನು ಸ್ಥಾಪಿಸಬೇಕು. ಅಲ್ಲಿರುವ ಹಿಂದೂಗಳು ಇಲ್ಲಿಗೂ, ಇಲ್ಲಿರುವ ಮುಸ್ಲಿಮರು ಅಲ್ಲಿಗೂ ಹೋಗಬೇಕು’’ ಎಂದು ಹೇಳುವ ಮೂಲಕ ಮುಸ್ಲಿಮ್ ಲೀಗ್, ಜಿನ್ನಾ, ಸಯ್ಯದ್ ಅಹ್ಮದ್ ಖಾನ್ ಅವರಿಗಿಂತಲೂ ಮುಂಚೆಯೇ ದ್ವಿರಾಷ್ಟ್ರ ಸಿದ್ಧಾಂತ ಪ್ರತಿಪಾದಿಸಿದ್ದರು.
ಅಷ್ಟು ಮಾತ್ರವಲ್ಲ. 1924ರಲ್ಲಿ ಆರ್ಯ ಸಮಾಜದ ಹಾಗೂ ಹಿಂದೂ ಮಹಾಸಭಾ ಹಿನ್ನೆಲೆಯ ಪ್ರಮುಖ ಕಾಂಗ್ರೆಸ್ ನಾಯಕರಾಗಿದ್ದ ಲಾಲಾ ಲಜಪತ್ ರಾಯ್ ಅವರು ಟ್ರಿಬ್ಯೂನ್ ಪತ್ರಿಕೆಗೆ 1924ರಲ್ಲಿ ಬರೆದ ಲೇಖನದಲ್ಲಿ:
‘‘ನನ್ನ ಸಲಹೆ ಏನೆಂದರೆ ಮುಸ್ಲಿಮರು ಹೆಚ್ಚಿರುವ ಪಶ್ಚಿಮ ಪಂಜಾಬನ್ನು ಮುಸ್ಲಿಮ್ ಆಡಳಿತದ ಪ್ರಾಂತವನ್ನಾಗಿಯೂ, ಸಿಖ್ಖರು ಹಾಗೂ ಹಿಂದೂಗಳು ಹೆಚ್ಚಿರುವ ಪೂರ್ವ ಪಂಜಾಬನ್ನು ಹಿಂದೂ ಆಡಳಿತದ ಪ್ರಾಂತವನ್ನಾಗಿಯೂ ವಿಭಜಿಸಬೇಕು.’’ ಎಂದು ಬಲವಾಗಿ ಪ್ರತಿಪಾದಿಸಿದ್ದರು.
ಹೀಗೆ ದ್ವಿರಾಷ್ಟ್ರ ಸಿದ್ಧಾಂತದ ಜನಕರು ಹಿಂದೂರಾಷ್ಟ್ರವಾದಿಗಳೇ ಆಗಿದ್ದಾರೆ.
ಹಾಗಿದ್ದಲ್ಲಿ ಸಾವರ್ಕರ್ ಅವರು ದ್ವಿರಾಷ್ಟ್ರ ಸಿದ್ಧಾಂತದ ವಿರುದ್ಧವಿದ್ದರೇ? ಇದರ ಬಗ್ಗೆ 1937ರಲ್ಲಿ ಅವರು ಹೀಗೆ ಬರೆಯುತ್ತಾರೆ:
‘‘ಭಾರತದ ಒಳಗೆ ಎರಡು ಪರಸ್ಪರ ವಿರುದ್ಧ ರಾಷ್ಟ್ರಗಳಿವೆ. ಕೆಲವು ಬಾಲಿಶ ರಾಜಕಾರಣಿಗಳು ಭಾರತ ಈಗಾಗಲೇ ಒಂದು ರಾಷ್ಟ್ರವಾಗಿದೆ ಎಂದು ಹೇಳುತ್ತಾರೆ. ಆದರೆ ಭಾರತ ಒಂದು ರಾಷ್ಟ್ರ ಅಲ್ಲವೇ ಅಲ್ಲ. ಬದಲಿಗೆ ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಮ್ ರಾಷ್ಟ್ರವೆಂಬ ಎರಡು ರಾಷ್ಟ್ರಗಳಿವೆ.’’
(ಸಾವರ್ಕರ್ ಸಮಗ್ರ ವಾಗ್ಮಯ, 6ನೇ ಸಂಪುಟ, ಪುಟ 296)
ಇದಾದ ನಂತರ ಜಿನ್ನಾ 1940ರಲ್ಲಿ ದ್ವಿರಾಷ್ಟ್ರ ಸಿದ್ಧಾಂತವನ್ನು ಮುಂದಿಟ್ಟಾಗ ಸಾವರ್ಕರ್ ಅವರು:
‘‘ಜಿನ್ನಾ ಅವರ ಹೇಳಿಕೆಯ ಜೊತೆ ನನಗೆ ಯಾವುದೇ ತಗಾದೆಯಿಲ್ಲ. ನಾವು ಹಿಂದೂಗಳು ಬೇರೆಯದೇ ಆದ ರಾಷ್ಟ್ರ. ಹಿಂದೂ ಮತ್ತು ಮುಸ್ಲಿಮ್ ಬೇರೆಬೇರೆ ರಾಷ್ಟ್ರಗಳೇ ಆಗಿದ್ದಾರೆ’’ ಎನ್ನುತ್ತಾರೆ.
ಈ ಬಗ್ಗೆ ಅಂಬೇಡ್ಕರ್ ಅವರು ತಮ್ಮ ‘ಪಾಕಿಸ್ತಾನ್..’ ಬರಹದಲ್ಲಿ ಹೀಗೆ ಹೇಳುತ್ತಾರೆ:
‘‘ವಿಚಿತ್ರವೆಂದರೆ ಭಾರತ ಒಂದು ರಾಷ್ಟ್ರವೋ ಎರಡು ರಾಷ್ಟ್ರವೋ ಎಂಬ ಸಿದ್ಧಾಂತದ ಬಗ್ಗೆ ಸಾವರ್ಕರ್ ಮತ್ತು ಜಿನ್ನಾ ಪರಸ್ಪರ ವಿರುದ್ಧವಾದುದನ್ನು ಹೇಳುತ್ತಿಲ್ಲ. ಬದಲಿಗೆ ಆ ವಿಷಯದಲ್ಲಿ ಅವರಿಬ್ಬರಿಗೂ ಸಂಪೂರ್ಣ ಸಹಮತಿ ಇದೆ. ಅವರಿಬ್ಬರಿಗೂ ಆ ವಿಷಯದಲ್ಲಿ ಸಮ್ಮತಿ ಇರುವುದು ಮಾತ್ರವಲ್ಲ, ಭಾರತದೊಳಗೆ ಹಿಂದೂ ರಾಷ್ಟ್ರ ಮತ್ತು ಮುಸ್ಲಿಮ್ ರಾಷ್ಟ್ರ ಎಂಬ ಎರಡು ರಾಷ್ಟ್ರಗಳಿವೆ ಎಂದು ಅವರಿಬ್ಬರೂ ಬಲವಾಗಿ ಪ್ರತಿಪದಿಸುತ್ತಾರೆ.’’ ಎಂದು ಬರೆಯುತ್ತಾರೆ.
ಈ ದ್ವಿರಾಷ್ಟ್ರ ಸಿದ್ಧಾಂತಕ್ಕೆ ಸಾವರ್ಕರ್ ಪರಿಹಾರ ಏನೆಂದರೆ ಭಾರತ ಹಿಂದೂ ರಾಷ್ಟ್ರವಾಗುವುದು. ಮುಸ್ಲಿಮರು ತಮ್ಮ ಪ್ರತ್ಯೇಕ ಅಸ್ತಿತ್ವವನ್ನೇ ಬಿಟ್ಟುಕೊಟ್ಟು ಹಿಂದೂ ರಾಷ್ಟ್ರದಲ್ಲಿ ಲೀನವಾಗುವುದು.
ಆದರೆ ಈ ಹಿಂದೂ ರಾಷ್ಟ್ರ ಮನುಸ್ಮತಿಯ ಆಧಾರದಲ್ಲಿ ಬ್ರಾಹ್ಮಣಶಾಹಿ ಪ್ರಜಾತಂತ್ರ ವಿರೋಧಿ ರಾಷ್ಟ್ರ. ಆದ್ದರಿಂದಲೇ ಅಂಬೇಡ್ಕರ್ ಅವರು ಅದೇ ಬರಹದಲ್ಲಿ:
‘‘ಭಾರತವು ಹಿಂದೂ ರಾಷ್ಟ್ರವಾಗುವುದೆಂದರೆ ಅದಕ್ಕಿಂತ ವಿಪತ್ತು ಮತ್ತೊಂದಿಲ್ಲ.’’ ಎಂದು ಎಚ್ಚರಿಸಿದ್ದರು.
ಸ್ವಾತಂತ್ರ್ಯ ವಿರೋಧಿ ಆರೆಸ್ಸೆಸ್!
ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ಅಧ್ಯಯನ ಮಾಡಿದವರಿಗೆ ಸಂಘಪರಿವಾರ ಹಾಗೂ ಸಾವರ್ಕರ್ರ ಹಿಂದೂ ಮಹಾ ಸಭಾ ಹೇಗೆ ಉದ್ದಕ್ಕೂ ಬ್ರಿಟಿಷರ ಜೊತೆ ಕೈಜೋಡಿಸಿ ಸ್ವತಂತ್ರ ಭಾರತದ ಮೇಲೆ ಹಿಂದುತ್ವದ ಹೆಸರಿನಲ್ಲಿ ಬ್ರಾಹ್ಮಣ್ಯದ ಹಾಗೂ ಭೂಮಾಲಕ ಮತ್ತು ಬಂಡವಾಳಶಾಹಿಗಳ ಆಧಿಪತ್ಯವನ್ನು ಮುಂದುವರಿಸಿಕೊಂಡು ಹೋಗಲು ಯತ್ನಿಸುತ್ತಿದ್ದರೆಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.
ರಾಷ್ಟ್ರೀಯ ಸ್ವಯಂಸೇವಕ ಸಂಘ-ಆರೆಸ್ಸೆಸ್ 1925ರ ವಿಜಯದಶಮಿ ದಿನದಂದು ನಾಗಪುರದಲ್ಲಿ ಸ್ಥಾಪಿತವಾಯಿತು. ಅದರ ಉದ್ದೇಶ ಬ್ರಿಟಿಷರನ್ನು ಭಾರತದಿಂದ ಓಡಿಸುವುದಾಗಿರಲಿಲ್ಲ. ಬದಲಿಗೆ ಹಿಂದೂ ಸಮಾಜವನ್ನು ಬ್ರಾಹ್ಮಣ್ಯದ ಆಧಾರದಲ್ಲಿ ಮರುಸಂಘಟಿಸುತ್ತಾ ಬ್ರಾಹ್ಮಣೀಯ ಹಿಂದೂ ರಾಷ್ಟ್ರವನ್ನು ಕಟ್ಟುವುದಾಗಿತ್ತು. ಅದರ ಸಂಸ್ಥಾಪಕ ಡಾ. ಹೆಡ್ಗೆವಾರ್ರಂತೂ ಬ್ರಿಟಿಷರ ವಿರುದ್ಧ ಹೋರಾಡುವುದೆಂದರೆ ಜೈಲಿಗೆ ಹೋಗುವುದಲ್ಲ ಎಂದು ಸ್ವಾತಂತ್ರ್ಯ ಹೋರಾಟವನ್ನೇ ತಿರಸ್ಕರಿಸಿದ್ದರು.







