ಉತ್ತರಾಖಂಡದ ವಿನಾಶ

ವಿಪತ್ತುಗಳು ಹೆಚ್ಚಾಗಿ ಸಂಭವಿಸುತ್ತಿದ್ದರೂ, ಉತ್ತರಾಖಂಡವನ್ನು ಆಳುವವರು ಪ್ರಕೃತಿ ಮತ್ತು ಸಮಾಜ ಎರಡಕ್ಕೂ ನಿಷ್ಪ್ರಯೋಜಕವಾದ ಯೋಜನೆಗಳಿಂದ ಲಾಭ ಪಡೆಯುತ್ತಲೇ ಇದ್ದಾರೆ. ಡೆಹ್ರಾಡೂನ್‌ನಲ್ಲಿರುವ ಬಿಂದಾಲ್ ಮತ್ತು ರಿಸ್ಪಾನಾ ನದಿಗಳ ತಳದಲ್ಲಿ 10 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾದ ಎರಡು ಎತ್ತರದ ಹೆದ್ದಾರಿಗಳನ್ನು ನಿರ್ಮಿಸುವ ಯೋಜನೆಯನ್ನು ಗಮನಿಸಬೇಕು. ಹೇಳದೇ ಇದ್ದರೂ, ಮುಖ್ಯ ಉದ್ದೇಶ, ಪ್ರವಾಸಿಗರ ಕಾರುಗಳು ಬಯಲು ಪ್ರದೇಶದಿಂದ ಡೆಹ್ರಾಡೂನ್‌ಗೆ ಪ್ರವೇಶಿಸಿದ ನಂತರ ಮಸ್ಸೂರಿಗೆ ವೇಗವಾಗಿ ಸಾಗಲು ಅನುಕೂಲ ಮಾಡಿಕೊಡುವುದು. ಪ್ರಸ್ತುತ 6,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಈ ಯೋಜನೆಯು ಹಲವಾರು ನಕಾರಾತ್ಮಕ ಲಕ್ಷಣಗಳನ್ನು ಹೊಂದಿದೆ.
ಉತ್ತರಾಖಂಡ ರಾಜ್ಯ ನವೆಂಬರ್ 9, 2000ದಂದು ಸ್ಥಾಪನೆಯಾಯಿತು. ಅದಾದ ಸ್ವಲ್ಪ ಸಮಯದ ನಂತರ, ರಾಜ್ಯದ ಗಿರಿಧಾಮವಾದ ಮಸ್ಸೂರಿಯಲ್ಲಿ ಭಾಷಣಕ್ಕಾಗಿ ನನ್ನನ್ನು ಕೇಳಿದಾಗ, ನಾನು ಅದಕ್ಕೆ ಒಪ್ಪಿಕೊಂಡೆ. ಏಕೆಂದರೆ ನಾನು ಡೆಹ್ರಾಡೂನ್‌ನ ಹೊರವಲಯದಲ್ಲಿ ಹುಟ್ಟಿ ಬೆಳೆದಿದ್ದೆ. ಅದು ಕೆಳಗಿನ ಕಣಿವೆಯಲ್ಲಿರುವ ಪಟ್ಟಣ. ಮಸ್ಸೂರಿ ತಲುಪಿದ ನಂತರ ನಾನು ಹತ್ತಿರದ ಸಾರ್ವಜನಿಕ ಕರೆ ಬೂತ್‌ಗೆ ಹೋದೆ (ಆಗ ಯಾವುದೇ ಸೆಲ್ ಫೋನ್‌ಗಳು ಇರಲಿಲ್ಲ). ಹೊಸದಾಗಿ ರೂಪುಗೊಂಡ ರಾಜ್ಯದ ಇನ್ನೊಂದು ತುದಿಯಲ್ಲಿರುವ ನೈನಿತಾಲ್‌ನಲ್ಲಿ ವಾಸಿಸುತ್ತಿದ್ದ ಇತಿಹಾಸಕಾರ ಶೇಖರ್ ಪಾಠಕ್ ಅವರಿಗೆ ಕರೆ ಮಾಡಿದೆ. ಅವರು ಫೋನ್ ಎತ್ತಿದಾಗ, ‘‘ನಾನು ನಿಮ್ಮೊಂದಿಗೆ ನಮ್ಮ ರಾಜ್ಯದಿಂದ ಮಾತನಾಡುತ್ತಿದ್ದೇನೆ’’ ಎಂದು ಅಭಿಮಾನದಿಂದ ಹೇಳಿದ್ದೆ.
ನಾನು ಈಗ ಬೆಂಗಳೂರಿನಲ್ಲಿ ನೆಲೆಸಿದ್ದರೂ, ನಾನು ಪ್ರೌಢಾವಸ್ಥೆಗೆ ಬಂದು ನನ್ನ ಮೊದಲ ಸಂಶೋಧನೆ ಮಾಡಿದ ಪ್ರದೇಶದೊಂದಿಗೆ ನಿಕಟ ಸಂಪರ್ಕ ಉಳಿಸಿಕೊಂಡಿದ್ದೇನೆ. ಉತ್ತರ ಪ್ರದೇಶದ ಬೆಟ್ಟದ ಜಿಲ್ಲೆಗಳಿಂದ ರಾಜ್ಯ ರಚನೆಗಾಗಿ ನಡೆದ ಜನಪ್ರಿಯ ಆಂದೋಲನವನ್ನು ನಾನು ಗಮನಿಸಿದ್ದೆ ಮತ್ತು ಅದರ ಅಂತಿಮ ಯಶಸ್ಸನ್ನು ಕೂಡ ಸಂಭ್ರಮಿಸಿದ್ದೆ. 1971ರಲ್ಲಿ ಪೂರ್ಣ ಪ್ರಮಾಣದ ರಾಜ್ಯವಾಗಿ ರಚನೆಯಾದಾಗ ಹಿಮಾಚಲ ಪ್ರದೇಶದ ಜನರಿಗೆ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿ ಗಮನಾರ್ಹವಾಗಿತ್ತು. ಹಾಗೆಯೇ ಉತ್ತರಾಖಂಡದ ಜನರು ತಮ್ಮದೇ ಆದ ರಾಜ್ಯವನ್ನು ಹೊಂದುವುದರಿಂದ ಪ್ರಯೋಜನ ಪಡೆಯುತ್ತಾರೆ ಎಂದು ಆಶಿಸಲಾಗಿತ್ತು. ತಮ್ಮ ಸಾಂಸ್ಕೃತಿಕ ಹಿನ್ನೆಲೆಯ ಬಗ್ಗೆ ಹೇಳಿಕೊಂಡ ರಾಜಕಾರಣಿಗಳು ತಮ್ಮ ಆಶಯಗಳು ಮತ್ತು ಆಕಾಂಕ್ಷೆಗಳನ್ನು ಹಂಚಿಕೊಂಡಿದ್ದರು (ಉತ್ತರ ಪ್ರದೇಶದ ರಾಜಕಾರಣಿಗಳು ವಿರಳವಾಗಿ ಹಾಗೆ ಮಾಡಿದ್ದರು).
ಇನ್ನು ಕೆಲವು ವಾರಗಳಲ್ಲಿ ಉತ್ತರಾಖಂಡ ತನ್ನ ಸ್ಥಾಪನೆಯ ಇಪ್ಪತ್ತೈದನೇ ವಾರ್ಷಿಕೋತ್ಸವ ಆಚರಿಸಲಿದೆ. ಈ ಸಮಯದಲ್ಲಿ ಕಾಂಗ್ರೆಸ್ ಹತ್ತು ವರ್ಷಗಳ ಕಾಲ ಅಧಿಕಾರ ನಡೆಸಿದೆ. ಭಾರತೀಯ ಜನತಾ ಪಕ್ಷ ಹದಿನೈದು ವರ್ಷಗಳ ಕಾಲ ಅಧಿಕಾರದಲ್ಲಿದೆ. ನಿಸ್ಸಂದೇಹವಾಗಿ ಮುಖ್ಯಮಂತ್ರಿ ಮತ್ತು ಅವರ ಸರಕಾರವು ಒಂದು ದೊಡ್ಡ ತಮಾಷೆಯನ್ನು ನಡೆಸುತ್ತದೆ. ಆದರೆ ವಾಸ್ತವದಲ್ಲಿ ಆಚರಿಸಲು ಹೆಚ್ಚಿನದೇನೂ ಇರುವುದಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಸರಕಾರಗಳು ತಮ್ಮ ಮತದಾರರ ಜೀವನ ಮಟ್ಟವನ್ನು ಹೆಚ್ಚಿಸಲು ಯಾವುದೇ ಕ್ರಮ ಕೈಗೊಂಡಿಲ್ಲ. ಅದೇ ರೀತಿ ಶಿಕ್ಷಣ, ಆರೋಗ್ಯ, ಮಹಿಳಾ ಸುರಕ್ಷತೆ ಮತ್ತು ಜೀವನೋಪಾಯ ಭದ್ರತೆಯಂಥ ಪ್ರಮುಖ ಕ್ಷೇತ್ರಗಳನ್ನು ನಿರ್ಲಕ್ಷಿಸಿವೆ. 2017ರಿಂದ ಅಧಿಕಾರದಲ್ಲಿರುವ ಬಿಜೆಪಿ, ಹಿಂದೂ ಬಹುಸಂಖ್ಯಾತತೆಯನ್ನು ಆಕ್ರಮಣಕಾರಿಯಾಗಿ ಉತ್ತೇಜಿಸುತ್ತಿದೆ. ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುತ್ತಿದೆ ಮತ್ತು ಹಿಂದೆ ಅಂತರ್ ಧರ್ಮೀಯ ಸಂಘರ್ಷ ಕಡಿಮೆಯಿದ್ದ ಪ್ರದೇಶದಲ್ಲಿ ಭಯ ಮತ್ತು ಬೆದರಿಕೆಯ ವಾತಾವರಣವನ್ನು ಸೃಷ್ಟಿಸಿದೆ. ಗಣರಾಜ್ಯದ ಇತರ ಕೆಲವು ರಾಜ್ಯಗಳಂತೆ, ಹಿಂದುತ್ವ ತಮ್ಮ ಮತದಾರರಿಗೆ ಈ ಮತ್ತು ಭವಿಷ್ಯದ ಪೀಳಿಗೆಗೆ ಘನತೆ ಮತ್ತು ಸುರಕ್ಷಿತ ಜೀವನ ಒದಗಿಸಲು ಅಸಮರ್ಥರಾಗಿರುವ ಅಥವಾ ಇಷ್ಟವಿಲ್ಲದ ರಾಜಕಾರಣಿಗಳು ಜನರಿಗೆ ನೀಡುವ ಅಫೀಮು ಆಗಿಬಿಟ್ಟಿದೆ.
ಈ ನಡುವೆ, ಕೇಂದ್ರದ ನೆರವಿನೊಂದಿಗೆ ಉತ್ತರಾಖಂಡದ ಎಲ್ಲ ರಾಜ್ಯ ಸರಕಾರಗಳು, ಕಳಪೆ ವಿನ್ಯಾಸದ ರಸ್ತೆಗಳು, ದುರುದ್ದೇಶಪೂರಿತ ಅಣೆಕಟ್ಟುಗಳು ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುತ್ತೇವೆ ಎಂದು ಹೇಳಿಕೊಂಡು ವಾಸ್ತವವಾಗಿ ವಿನಾಶಕ್ಕೆ ಕಾರಣವಾಗುವ ಇತರ ದೊಡ್ಡ ಯೋಜನೆಗಳನ್ನು ತರುವ ಮೂಲಕ ಬೆಟ್ಟಗಳ ಮೇಲೆ ಕ್ರೂರ ದಾಳಿ ನಡೆಸಿವೆ. ಈ ಯೋಜನೆಗಳಲ್ಲಿ ಚಾರ್ ಧಾಮ್ ಹೆದ್ದಾರಿ ಅತ್ಯಂತ ಅಪಾಯಕಾರಿಯಾಗಿದೆ. ಸುಪ್ರೀಂ ಕೋರ್ಟ್, ಅದು ಉಂಟುಮಾಡುತ್ತಿರುವ ಹಾನಿಯ ನಿರಾಕರಿಸಲಾಗದ ವೈಜ್ಞಾನಿಕ ಪುರಾವೆಗಳನ್ನು ತೋರಿಸಿದ್ದರೂ, ಅದನ್ನು ವಿನಾಶಕಾರಿ ಹಾದಿಯಲ್ಲಿ ಮುಂದುವರಿಯಲು ಅವಕಾಶ ಮಾಡಿಕೊಟ್ಟಿದ್ದು ದುರಂತವಾಗಿ ಉಳಿದಿದೆ.
ಒಂದು ಅಂದಾಜಿನ ಪ್ರಕಾರ, 2000 ಇಸವಿಯಲ್ಲಿ ಸ್ಥಾಪನೆಯಾದಾಗಿನಿಂದ ಉತ್ತರಾಖಂಡವು ಅಭಿವೃದ್ಧಿ ಯೋಜನೆಗಳು ಎಂದು ಕರೆಯಲಾಗುವ ಹೆದ್ದಾರಿಗಳು, ಅಣೆಕಟ್ಟುಗಳು, ಗಣಿಗಳು, ಸರಕಾರಿ ಪಟ್ಟಣಗಳು ಮುಂತಾದವುಗಳಿಂದಾಗಿ ಸುಮಾರು 50,000 ಹೆಕ್ಟೇರ್ ಸಮೃದ್ಧ ನೈಸರ್ಗಿಕ ಅರಣ್ಯವನ್ನು ಕಳೆದುಕೊಂಡಿದೆ. ಇವುಗಳಿಂದ ಸ್ಥಳೀಯ ಜನರಿಗೆ ಯಾವುದೇ ಪ್ರಯೋಜನವಿಲ್ಲ. ಒಂದು ಹೆಕ್ಟೇರ್ ನೈಸರ್ಗಿಕ ಅರಣ್ಯವು 3,000 ಮರಗಳನ್ನು ಹೊಂದಿದೆ ಎಂದು ಒಬ್ಬರು ಸಂಪ್ರದಾಯಬದ್ಧವಾಗಿ ಅಂದಾಜಿಸಿದರೆ, ಉತ್ತರಾಖಂಡ ರಾಜ್ಯ ಸ್ಥಾಪನೆಯಾದಾಗಿನಿಂದ ಸರಕಾರ ಸರಿಸುಮಾರು 150 ಮಿಲಿಯನ್ ಮರಗಳನ್ನು ನಾಶಪಡಿಸಿರಬಹುದು. ಈ ವಿನಾಶದ ಆರ್ಥಿಕ ಮತ್ತು ಪರಿಸರ ವೆಚ್ಚಗಳು ಎಣಿಸಲಾಗದಂಥವು.
ಹಿಮಾಲಯವು ಸುಂದರವಾದ ಆದರೆ ದುರ್ಬಲವಾದ ಪರಿಸರ ವ್ಯವಸ್ಥೆಯಾಗಿದ್ದು, ಇದು ಭೂಕಂಪನ ವಲಯದಲ್ಲಿದೆ ಮತ್ತು ಸ್ಥಳೀಯ ಹಳ್ಳಿಯ ಆರ್ಥಿಕತೆಯನ್ನು ಉಳಿಸಿಕೊಳ್ಳಲು ಮಾತ್ರವಲ್ಲದೆ ಮಣ್ಣಿನ ಸವೆತ ಮತ್ತು ಪ್ರವಾಹದಿಂದ ರಕ್ಷಿಸಲು ಸಮೃದ್ಧ ಅರಣ್ಯ ಪ್ರದೇಶವು ಅಗತ್ಯವಾಗಿರುತ್ತದೆ. ಉತ್ತರಾಖಂಡದ ಪರ್ವತಗಳನ್ನು ಕಾಂಕ್ರಿಟ್ ಮಾಡಿ ಪಳಗಿಸಲು ಪ್ರಯತ್ನಿಸುವ ಮೂಲಕ, ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಲವಾರು ದುರಂತ, ಅವಘಡಗಳಿಗೆ ಕಾರಣವಾಗಿವೆ. ಅವುಗಳಲ್ಲಿ ಧರಾಲಿಯಲ್ಲಿ ನಡೆದ ಘಟನೆ ತೀರಾ ಇತ್ತೀಚಿನದು. ಇತ್ತೀಚಿನ ವರ್ಷಗಳಲ್ಲಿ ಭೂಕುಸಿತಗಳು, ಪ್ರವಾಹಗಳು ಮತ್ತು ಅಂಥ ಘಟನೆಗಳಿಂದ ಉಂಟಾದ ಸಾವುಗಳು ಮತ್ತು ಆರ್ಥಿಕ ಹಾನಿ ತೀವ್ರವಾಗಿ ಹೆಚ್ಚಾಗಿದೆ. ಇದು ಅಪಾರ ಜೀವ ಮತ್ತು ಜೀವನೋಪಾಯದ ನಷ್ಟಕ್ಕೆ ಕಾರಣವಾಗಿದೆ. ಈ ವಿಪತ್ತುಗಳನ್ನು ಆಳುವ ರಾಜಕಾರಣಿಗಳು (ಮತ್ತು ಮಾಧ್ಯಮಗಳಲ್ಲಿ ಅವರ ಕೈಗೊಂಬೆಗಳು) ಕುತಂತ್ರದಿಂದ ನೈಸರ್ಗಿಕ ವಿಪತ್ತುಗಳು ಎಂದು ಕರೆಯುತ್ತಾರೆ. ಆದರೆ ವಾಸ್ತವವಾಗಿ ಅವು ಸಂಪೂರ್ಣವಾಗಿ ಮಾನವ ನಿರ್ಮಿತವಾಗಿದ್ದು, ರಸ್ತೆಗಳು, ಅಣೆಕಟ್ಟುಗಳು, ರೆಸಾರ್ಟ್‌ಗಳು ಇತ್ಯಾದಿಗಳ ಈ ಅಜಾಗರೂಕ ವಿಸ್ತರಣೆಯನ್ನು ಅನುಮೋದಿಸಿದ ರಾಜಕಾರಣಿಗಳು, ಗುತ್ತಿಗೆದಾರರು, ಅಧಿಕಾರಶಾಹಿಯ ಸಂಬಂಧದಿಂದ ಸಾಧ್ಯವಾಗಿದೆ.
ಈ ವಿಪತ್ತುಗಳು ಹೆಚ್ಚಾಗಿ ಸಂಭವಿಸುತ್ತಿದ್ದರೂ, ಉತ್ತರಾಖಂಡವನ್ನು ಆಳುವವರು ಪ್ರಕೃತಿ ಮತ್ತು ಸಮಾಜ ಎರಡಕ್ಕೂ ನಿಷ್ಪ್ರಯೋಜಕವಾದ ಯೋಜನೆಗಳಿಂದ ಲಾಭ ಪಡೆಯುತ್ತಲೇ ಇದ್ದಾರೆ. ಡೆಹ್ರಾಡೂನ್‌ನಲ್ಲಿರುವ ಬಿಂದಾಲ್ ಮತ್ತು ರಿಸ್ಪಾನಾ ನದಿಗಳ ತಳದಲ್ಲಿ 10 ಕಿಲೋಮೀಟರ್‌ಗಳಿಗಿಂತ ಹೆಚ್ಚು ಉದ್ದವಾದ ಎರಡು ಎತ್ತರದ ಹೆದ್ದಾರಿಗಳನ್ನು ನಿರ್ಮಿಸುವ ಯೋಜನೆಯನ್ನು ಗಮನಿಸಬೇಕು. ಹೇಳದೇ ಇದ್ದರೂ, ಮುಖ್ಯ ಉದ್ದೇಶ, ಪ್ರವಾಸಿಗರ ಕಾರುಗಳು ಬಯಲು ಪ್ರದೇಶದಿಂದ ಡೆಹ್ರಾಡೂನ್‌ಗೆ ಪ್ರವೇಶಿಸಿದ ನಂತರ ಮಸ್ಸೂರಿಗೆ ವೇಗವಾಗಿ ಸಾಗಲು ಅನುಕೂಲ ಮಾಡಿಕೊಡುವುದು. ಪ್ರಸ್ತುತ 6,000 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಅಂಕಿ ಅಂಶ ಖಂಡಿತವಾಗಿಯೂ ಹೆಚ್ಚಾಗುತ್ತದೆ. ಈ ಯೋಜನೆಯು ಹಲವಾರು ನಕಾರಾತ್ಮಕ ಲಕ್ಷಣಗಳನ್ನು ಹೊಂದಿದೆ. ಇದು ಕಾನೂನುಬದ್ಧವಾಗಿ ನಿರ್ಮಿಸಲಾದ ಸಾವಿರಾರು ಮನೆಗಳನ್ನು ಕೆಡವಲು ಮತ್ತು ಭಾರೀ ಕೊರೆಯುವಿಕೆಯ ಮೂಲಕ ಇತರ ರಚನೆಗಳ ಕುಸಿತಕ್ಕೆ ಕಾರಣವಾಗುತ್ತದೆ. ಇದು ಬೃಹತ್ ಮಣ್ಣಿನ ಸವೆತಕ್ಕೆ ಕಾರಣವಾಗುತ್ತದೆ ಮತ್ತು ಈ ಅನಗತ್ಯ ಹೆದ್ದಾರಿಗಳನ್ನು ಬೆಂಬಲಿಸಲು ನಿರ್ಮಿಸಲಾದ ದೊಡ್ಡ ಕಂಬಗಳಿಂದ ನೈಸರ್ಗಿಕ ನೀರಿನ ಕಾಲುವೆಗಳಿಗೆ ಅಡಚಣೆಯಾಗುವುದರಿಂದ ಹಠಾತ್ ಪ್ರವಾಹದ ಅಪಾಯ ಹೆಚ್ಚಾಗುತ್ತದೆ. ನಾಗರಿಕರ ಗುಂಪಿನ ಹೇಳಿಕೆಯ ಪ್ರಕಾರ, ಹಲವಾರು ಸಾವಿರ ಕೋಟಿ ರೂಪಾಯಿಗಳ ಬೃಹತ್ ವೆಚ್ಚ ಮತ್ತು ಸಾರ್ವಜನಿಕ ಜೀವನವನ್ನು ಅಸ್ತವ್ಯಸ್ತಗೊಳಿಸುವ ಈ ಮೆಗಾ ಯೋಜನೆ ಸರಕಾರಿ ಒಪ್ಪಂದಗಳಿಂದ ಯಾವಾಗಲೂ ಲಾಭ ಪಡೆಯುವವರಿಗೆ ನೇರವಾಗಿ ಮತ್ತು ಪರೋಕ್ಷವಾಗಿ ಕಾರು ತಯಾರಕರು ಮತ್ತು ಡೀಲರ್‌ಗಳಿಗೆ ಪ್ರಯೋಜನವನ್ನು ನೀಡುತ್ತದೆ ಎಂದು ಡೆಹ್ರಾಡೂನ್‌ನ ಜನರು ಭಾವಿಸುತ್ತಾರೆ. ಈ ಯೋಜನೆಗಾಗಿ ಕೆಡವಬೇಕಾದ ಮನೆಗಳನ್ನು ಗುರುತಿಸುವುದು ಈಗಾಗಲೇ ಪ್ರಾರಂಭವಾಗಿದ್ದರೂ, ಇಡೀ ಯೋಜನೆಯನ್ನು ಇನ್ನೂ ರಹಸ್ಯವಾಗಿಡಲಾಗಿದೆ ಎಂದು ಅದು ಹೇಳುತ್ತದೆ.
ಡೆಹ್ರಾಡೂನ್‌ನ ನಿವಾಸಿಯಾಗಿರುವ ವಾಸ್ತುಶಿಲ್ಪಿ ಭಾರತಿ ಜೈನ್, ಈ ಎತ್ತರದ ಹೆದ್ದಾರಿಗಳನ್ನು ನಿರ್ಮಿಸಲು ಬಿಂದಾಲ್ ಮತ್ತು ರಿಸ್ಪಾನಾ ನದಿಗಳಿಂದ ಲಕ್ಷಾಂತರ ಘನ ಮೀಟರ್ ಮಣ್ಣನ್ನು ಅಗೆಯಲಾಗುತ್ತದೆ, ಆದರೆ ಅದನ್ನು ವಿಲೇವಾರಿ ಮಾಡಲು ಯಾವುದೇ ಸುರಕ್ಷಿತ ಮಾರ್ಗವಿಲ್ಲ ಎಂದು ಎಚ್ಚರಿಸಿದ್ದಾರೆ. ಅಗೆದ ವಸ್ತುಗಳನ್ನು ನದಿಗಳ ಉದ್ದಕ್ಕೂ ಸುರಿಯಲಾಗುತ್ತದೆ ಎಂದು ಅವರು ಹೇಳುತ್ತಾರೆ. ತಳದ ಮಟ್ಟ ಏರುತ್ತದೆ. ಪ್ರವಾಹದ ಅಪಾಯ ಹೆಚ್ಚಾಗುತ್ತದೆ. ಕಾಂಕ್ರಿಟ್ ಮಾಡಿದರೆ, ಜಲಚರಗಳಿಗೆ ಅಡಚಣೆಯಾಗುತ್ತದೆ. ಈ ನದಿಗಳು ಕೇವಲ ಕಾಲೋಚಿತ ಚರಂಡಿಗಳಲ್ಲ, ಅವು ನಮ್ಮ ಅಂತರ್ಜಲವನ್ನು ಮರುಪೂರಣ ಮಾಡುವ ರಕ್ತನಾಳಗಳಾಗಿವೆ. ಅವುಗಳನ್ನು ತಡೆಯುವ ಮೂಲಕ, ನಾವು ಮಳೆಗಾಲದಲ್ಲಿ ಪ್ರವಾಹ ಮತ್ತು ಬೇಸಿಗೆಯಲ್ಲಿ ಬರಗಾಲದ ಅಪಾಯವನ್ನು ಎದುರಿಸುತ್ತೇವೆ ಎಂದು ಹೇಳುತ್ತಾರೆ. ಅವರು ಹೇಳುವಂತೆ, ಡೆಹ್ರಾಡೂನ್ ಈಗಾಗಲೇ ಅಂತರ್ಜಲ ಮಟ್ಟ ಕುಸಿತವನ್ನು ಎದುರಿಸುತ್ತಿದೆ. ಖಃಇಅ (ರಿಸ್ಪಾನಾ ಬಿಂದಾಲ್ ಎಲಿವೇಟೆಡ್ ಕಾರಿಡಾರ್) ನಮಗೆ ತಾತ್ಕಾಲಿಕ ಸಂಚಾರ ಬೈಪಾಸ್ ನೀಡಬಹುದು. ಆದರೆ ಅದು ನಮ್ಮ ನೀರಿನ ಸುರಕ್ಷತೆ ಮತ್ತು ಪರಿಸರ ಸಮತೋಲನದಂಥ ಹೆಚ್ಚು ಅಮೂಲ್ಯವಾದದ್ದನ್ನು ಕಸಿದುಕೊಳ್ಳುತ್ತದೆ. ದೀರ್ಘಾವಧಿಯ ಬದುಕುಳಿಯುವಿಕೆಯನ್ನು ಬಲಿಗೊಟ್ಟು ಅಲ್ಪಾವಧಿಯ ಲಾಭ ಪಡೆಯುವ ಅಗತ್ಯವಿದೆಯೇ ಎಂದು ಈ ಕಣಿವೆಯ ನಿವಾಸಿಗಳು ನಿರ್ಧರಿಸಬೇಕಿದೆ.
ಡೆಹ್ರಾಡೂನ್‌ನಲ್ಲಿ ಇತ್ತೀಚೆಗೆ ನಡೆದ ಸಾರ್ವಜನಿಕ ಸಮೀಕ್ಷೆಯು ಈ ಯೋಜನೆಯ ಹಾನಿಕಾರಕ ಪರಿಣಾಮಗಳ ಬಗ್ಗೆ ನಾಗರಿಕರಲ್ಲಿ ಆಳವಾದ ಮತ್ತು ಬೆಳೆಯುತ್ತಿರುವ ಅಸಮಾಧಾನವನ್ನು ತೋರಿಸಿದೆ. ದಿಲ್ಲಿ-ಡೆಹ್ರಾಡೂನ್ ಎಕ್ಸ್ ಪ್ರೆಸ್‌ವೇಯನ್ನು ಏಕಕಾಲದಲ್ಲಿ ಯೋಜಿಸಲಾಗುತ್ತಿರುವಂತೆ, ಕಣಿವೆಯ ಅಪಾಯದಲ್ಲಿರುವ ನದಿಗಳ ಮೇಲಿರುವ ಈ ಹೆದ್ದಾರಿಗಳು ನಿವಾಸಿಗಳಿಗೆ ಸಹಾಯ ಮಾಡುವ ಉದ್ದೇಶದವಾಗಿಲ್ಲ. ಆದರೆ ಮಸ್ಸೂರಿಯ ಗಿರಿಧಾಮಕ್ಕೆ ಹೋಗಲು ಬಯಸುವ ಪ್ರವಾಸಿಗರಿಗೆ ಸಹಾಯ ಮಾಡುವ ಉದ್ದೇಶವನ್ನು ಹೊಂದಿವೆ. ಡೆಹ್ರಾಡೂನ್ ನಾಗರಿಕರಿಗೆ ಅಲ್ಪಾವಧಿಯ ಸಾಮಾಜಿಕ ಪ್ರಯೋಜನಗಳು ನಗಣ್ಯವಾಗಿರುತ್ತವೆ, ಆದರೆ ದೀರ್ಘಾವಧಿಯ ಪರಿಸರ ಮತ್ತು ಸಾಮಾಜಿಕ ವೆಚ್ಚಗಳು ಬಹಳ ದೊಡ್ಡದಾಗಿರುತ್ತವೆ. ಅವು ಪ್ರವಾಸಿಗರಿಗೆ ಹೇಗೆ ಪ್ರಯೋಜನವನ್ನು ನೀಡುತ್ತವೆ ಎಂಬುದು ಸ್ಪಷ್ಟವಾಗಿಲ್ಲ. ಈ ಯೋಜನೆಯನ್ನು ಜಾರಿಗೆ ತಂದರೆ, ಪ್ರತಿದಿನ ಸಾವಿರಾರು ಹೆಚ್ಚುವರಿ ಕಾರುಗಳು ಮತ್ತು ಬಸ್‌ಗಳು ಮಸ್ಸೂರಿಗೆ ಪ್ರವೇಶಿಸುತ್ತವೆ. ಈ ಒಳಹರಿವನ್ನು ಹೇಗೆ ನಿರ್ವಹಿಸಲಾಗುತ್ತದೆ? ಇದು ಯಾವ ರೀತಿಯ ಟ್ರಾಫಿಕ್ ಜಾಮ್ ಅನ್ನು ಸೃಷ್ಟಿಸುತ್ತದೆ? ಈ ವಾಹನಗಳನ್ನು ತಾತ್ಕಾಲಿಕವಾಗಿ ಇರಿಸಲು ಉತ್ತರಾಖಂಡ ಸರಕಾರವು ಪರ್ವತದ ಇಳಿಜಾರಿನಲ್ಲಿ ಹತ್ತು ಅಂತಸ್ತಿನ ಪಾರ್ಕಿಂಗ್ ಸ್ಥಳಗಳ ಸರಣಿಯನ್ನು ನಿರ್ಮಿಸಲು ಯೋಜಿಸುತ್ತಿದೆಯೇ?
ಉತ್ತರಾಖಂಡವನ್ನು ಬೇರೆಯವರಿಗಿಂತ ಚೆನ್ನಾಗಿ ಬಲ್ಲ ಶೇಖರ್ ಪಾಠಕ್, ‘‘ಪ್ರವಾಸೋದ್ಯಮವನ್ನು ಹೆಚ್ಚು ಸೌಮ್ಯ, ನಿಧಾನ, ಪ್ರಕೃತಿ ಮತ್ತು ಮಾನವ ಸಮುದಾಯವನ್ನು ಗೌರವಿಸುವ ತೀರ್ಥಯಾತ್ರೆಯಂತೆ ಮಾಡುವ ಗುರಿಯನ್ನು ನಾವು ಹೊಂದಿರಬೇಕು. ಆದರೆ ಇಂದಿನ ಸರಕಾರಗಳು ಪ್ರವಾಸೋದ್ಯಮದಂಥ ತೀರ್ಥಯಾತ್ರೆಯನ್ನು ಜೋರಾಗಿ, ಹೆಚ್ಚು ಆಕ್ರಮಣಕಾರಿ, ಪ್ರಕೃತಿ ಮತ್ತು ಮಾನವ ಸಮುದಾಯವನ್ನು ಹೆಚ್ಚು ವಿನಾಶಕಾರಿಯನ್ನಾಗಿ ಮಾಡಲು ಬಯಸುತ್ತವೆ’’ ಎಂದು ಹೇಳಿದ್ದಾರೆ. ಖಂಡಿತವಾಗಿಯೂ, ಪ್ರವಾಸೋದ್ಯಮವನ್ನು ತೀರ್ಥಯಾತ್ರೆಯಂತೆ ಮರುವಿನ್ಯಾಸಗೊಳಿಸುವುದು ಪ್ರಸ್ತುತ ಉತ್ತರಾಖಂಡವನ್ನು ಆಳುತ್ತಿರುವ ರಾಜಕಾರಣಿಗಳು ಮತ್ತು ಅಧಿಕಾರಿಗಳ ಪ್ರಮುಖ ಆದ್ಯತೆಯಾಗಿರಬೇಕು. ಎರಡನೆಯ ಮತ್ತು ಬಹುಶಃ ಇನ್ನೂ ಮುಖ್ಯವಾದ ಆದ್ಯತೆಯೆಂದರೆ ಉತ್ತಮ, ಸುರಕ್ಷಿತ ಮತ್ತು ಹೆಚ್ಚು ಕೈಗೆಟುಕುವ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಡೆಸುವುದು ಮತ್ತು ಉತ್ತರಾಖಂಡದ ನಿವಾಸಿಗಳಿಗೆ ಸುಸ್ಥಿರ ಆರ್ಥಿಕ ಭವಿಷ್ಯವನ್ನು ಸುಗಮಗೊಳಿಸುವುದು. ಇನ್ನೂ ಸ್ವಲ್ಪವೂ ಈಡೇರದ ಉದಾತ್ತ ಆಕಾಂಕ್ಷೆಗಳೊಂದಿಗೆ ರಚಿಸಲಾದ ರಾಜ್ಯದ ಜನರಿಗಾಗಿ ರಾಜಕಾರಣಿಗಳು ಮಾಡಬೇಕಾದ ಕನಿಷ್ಠ ಋಣಸಂದಾಯ ಅದು.







