ಸ್ನೇಹಿತರು ಮತ್ತು ಐಕಾನ್ಗಳು

ಬಿರೇನ್ ದಾಸ್, ಚಿರಂಜೀವ್ ಸಿಂಗ್ ಮತ್ತು ಅರುಂಧತಿ ನಾಗ್
ಭಾರತದ ಉಳಿದ ಭಾಗವು ಬೆಂಗಳೂರಿನ ಜನರನ್ನು ಹೊಗಳುವಾಗ, ಅವರು ಸಾಮಾನ್ಯವಾಗಿ ನಗರದ ಐಟಿ, ಬಿಟಿಯವರು ಅಥವಾ ಅದರ ಕ್ರಿಕೆಟಿಗರ ಬಗ್ಗೆ ಯೋಚಿಸುತ್ತಾರೆ. ಈ ಅಂಕಣದಲ್ಲಿ ಕಾಣಿಸಿಕೊಂಡಿರುವವರಿಗೆ ಆ ರೀತಿಯ ಸೆಲೆಬ್ರಿಟಿಗಳ ಸಂಪತ್ತು ಮತ್ತು ಖ್ಯಾತಿಯ ಕೊರತೆಯಿದೆ. ಆದರೆ ನನಗೆ, ಯಾವುದೇ ರೀತಿಯಲ್ಲಿ ಅವರು ಈ ನಗರದ ಚೈತನ್ಯವನ್ನು ಬಹುಶಃ ಆಳವಾದ ಮತ್ತು ಹೆಚ್ಚು ಶಾಶ್ವತವಾದ ರೀತಿಯಲ್ಲಿ ಸಾಕಾರಗೊಳಿಸುವವರಾಗಿದ್ದಾರೆ.
ಪೂರ್ವಜರನ್ನು ಗಮನಿಸಿದರೆ, ನಾನು ಬೆಂಗಳೂರಿನಲ್ಲಿ ನಾಲ್ಕನೇ ತಲೆಮಾರಿನವನು. ನನ್ನ ತಂದೆಯ ಮುತ್ತಜ್ಜ 19ನೇ ಶತಮಾನದಲ್ಲಿ ತಂಜಾವೂರು ಜಿಲ್ಲೆಯ ಒಂದು ಹಳ್ಳಿಯಿಂದ ವಕೀಲರಾಗಲು ಇಲ್ಲಿಗೆ ಬಂದರು. ಅವರ ಮಕ್ಕಳು ಮತ್ತು ಮೊಮ್ಮಕ್ಕಳು ಈ ಪಟ್ಟಣದಲ್ಲಿ ಬೆಳೆದು ಶಿಕ್ಷಣ ಪಡೆದರು. ಅವರಲ್ಲಿ ನನ್ನ ತಂದೆ ಸೈಂಟ್ ಜೋಸೆಫ್ ಕಾಲೇಜಿನಲ್ಲಿ ಮತ್ತು ನಂತರ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಅಧ್ಯಯನ ಮಾಡಿದರು. ನನ್ನ ತಾಯಿಯ ಕಡೆಯಿಂದ, ನಗರದೊಂದಿಗಿನ ಸಂಪರ್ಕ 1962ರಷ್ಟು ಹಿಂದಿನದು. ಆಕೆಯ ಪೋಷಕರು ನಿವೃತ್ತಿ ನಂತರ ಇಲ್ಲಿ ನೆಲೆಸಿದಾಗ ಶುರುವಾದದ್ದು.
ಬೆಂಗಳೂರಿನೊಂದಿಗಿನ ನನ್ನ ಕುಟುಂಬ ಸಂಪರ್ಕವು ಹೀಗೆ ನೂರೈವತ್ತು ವರ್ಷ ಹಳೆಯದು. ಆದರೂ, ನಾನು ಡೆಹ್ರಾಡೂನ್ನಲ್ಲಿ ಬೆಳೆದೆ. ಆದರೆ ಪ್ರತೀ ಎರಡು ವರ್ಷಗಳಿಗೊಮ್ಮೆ ಬೇಸಿಗೆಯಲ್ಲಿ ಅಜ್ಜಿ, ಚಿಕ್ಕಪ್ಪ ಮತ್ತು ಚಿಕ್ಕಮ್ಮ ಮತ್ತು ಸೋದರಸಂಬಂಧಿಗಳೊಂದಿಗೆ ಸಮಯ ಕಳೆಯಲು ಬರುತ್ತಿದ್ದೆ. ನನ್ನ ಹೆಂಡತಿ (ತಮಿಳು ಮೂಲದವರು) ಬೆಂಗಳೂರಿನಲ್ಲಿ ತನ್ನ ಬಾಲ್ಯವನ್ನು ಕಳೆದಿದ್ದರೂ, ನಾವು ಇಲ್ಲಿ ವಾಸಿಸಲು ಸ್ಥಳಾಂತರಗೊಂಡದ್ದು 1995ರಲ್ಲಿಯೇ. ಹೀಗೆ ನಾನು ಈಗ ಮೂವತ್ತು ವರ್ಷಗಳಿಂದ ನಿರಂತರ ನೆಲೆಸಿರುವ ಬಗ್ಗೆ ಹೇಳಿಕೊಳ್ಳಬಲ್ಲೆ. ಈ ಅವಧಿಯಲ್ಲಿ ನಗರವು ಕೆಲವು ಆಳವಾದ ರೂಪಾಂತರಗಳಿಗೆ ಒಳಗಾಗಿದೆ. ಅದರಲ್ಲಿ (ಬ್ಯಾಂಗಲೋರ್ ಎಂಬುದರಿಂದ ಬೆಂಗಳೂರು ಎಂದಾಗಿರುವ) ಅದರ ಹೆಸರಿನಲ್ಲಿನ ಬದಲಾವಣೆಯು ತೀರಾ ದೊಡ್ಡದೇನಲ್ಲ. ಮತ್ತೊಂದೆಡೆ, ಸಮಶೀತೋಷ್ಣ ಹವಾಮಾನ, ಲಾಲ್ಬಾಗ್ ಮತ್ತು ಕಬ್ಬನ್ ಪಾರ್ಕ್ನ ವೈಭವಗಳು ಮತ್ತು ಅದರ ಪುಸ್ತಕ ಮಳಿಗೆಗಳ ಗುಣಮಟ್ಟ ಮತ್ತು ವೈವಿಧ್ಯತೆಯಂತಹ ಕೆಲವು ವಿಷಯಗಳು ಸ್ಥಿರವಾಗಿ ಉಳಿದಿವೆ ಮತ್ತು ಬಹುಶಃ, ನಗರದ ಬಹುಪಾಲು ನಿವಾಸಿಗಳ ಸ್ವಾಗತಾರ್ಹ ಮತ್ತು ಜನಾಂಗೀಯವಲ್ಲದ ಸ್ವಭಾವವೂ ಹಾಗೆಯೇ ಉಳಿದಿದೆ.
ಬೆಂಗಳೂರಿಗನಾದ ಈ ಮೂರು ದಶಕಗಳನ್ನು ಸಂಭ್ರಮಿಸಲು, ನಾನು ಈ ಅಂಕಣವನ್ನು ಈ ನಗರದ ಮೂವರು ಗಮನಾರ್ಹ ನಿವಾಸಿಗಳಿಗೆ ಮೀಸಲಿಡುತ್ತೇನೆ. ಆಗ ಕಲ್ಕತ್ತಾ ಎಂದು ಕರೆಯಲ್ಪಡುತ್ತಿದ್ದ ನಗರದಿಂದ ಇಲ್ಲಿಗೆ ಬಂದ ಒಬ್ಬ ವ್ಯಕ್ತಿಯ ಬಗ್ಗೆ ಮೊದಲು ಹೇಳಬೇಕು. ಅವರ ಹೆಸರು ಬಿರೇನ್ ದಾಸ್. ಅವರು ಪ್ರಸಿದ್ಧ ಮಿಠಾಯಿ ವ್ಯಾಪಾರಿಗಳ ಕುಟುಂಬಕ್ಕೆ ಸೇರಿದವರು. 1970ರ ದಶಕದ ಆರಂಭದಲ್ಲಿ, ಕೆ.ಸಿ. ದಾಸ್ ಮತ್ತು ಕಂಪೆನಿಯನ್ನು ನಡೆಸುತ್ತಿದ್ದ ಅವರ ತಂದೆ, ಪಶ್ಚಿಮ ಬಂಗಾಳ ಸರಕಾರವು ಹಾಲಿನ ಪೂರೈಕೆಯ ಮೇಲೆ ಕಟ್ಟುನಿಟ್ಟಿನ ನಿಯಂತ್ರಣವನ್ನು ಹೊಂದಿರುವುದರಿಂದ, ರಾಜ್ಯದ ಹೊರಗೆ ಒಂದು ಮಳಿಗೆಯನ್ನು ತೆರೆಯುವುದು ಬುದ್ಧಿವಂತಿಕೆ ಎಂದು ಯೋಚಿಸಿದರು. ಆದ್ದರಿಂದ ಇಪ್ಪತ್ತರ ದಶಕದ ಅಂತ್ಯದಲ್ಲಿ ಬಿರೇನ್ ಅವರನ್ನು ಚರ್ಚ್ಸ್ಟ್ರೀಟ್ ಮತ್ತು ಸೈಂಟ್ ಮಾರ್ಕ್ಸ್ ರಸ್ತೆಯ ಮೂಲೆಯಲ್ಲಿ ಆರಂಭದಿಂದಲೂ ಇರುವ ಕೆ.ಸಿ. ದಾಸ್ ಅವರ ಬೆಂಗಳೂರು ಶಾಖೆಯನ್ನು ಪ್ರಾರಂಭಿಸಲು ಮತ್ತು ನಡೆಸಲು ಕಳುಹಿಸಲಾಯಿತು. (ಅದು ಇನ್ನೂ ಪ್ರಮುಖ ಅಂಗಡಿಯಾಗಿದೆ, ಆದರೂ ಬೆಂಗಳೂರಿನಲ್ಲಿ ಬೇರೆಡೆ ಒಂದು ಡಝನ್ ಶಾಖೆಗಳನ್ನು ತೆರೆಯಲಾಗಿದೆ.)
ನಾನು 1995ರಲ್ಲಿ ಈ ನಗರಕ್ಕೆ ಸ್ಥಳಾಂತರಗೊಳ್ಳುವ ಹೊತ್ತಿಗೆ, ಬಿರೇನ್ ದಾಸ್ ಇಲ್ಲಿ ಎರಡು ದಶಕಗಳಿಂದ ಇದ್ದರು ಮತ್ತು ಇನ್ನೂ ಹೆಚ್ಚು ಕಾಲವಾಗಿತ್ತು. ನಾನು ಅವರನ್ನು ಕಬ್ಬನ್ ಪಾರ್ಕ್ನಲ್ಲಿ ಆಗೀಗ ನೋಡುತ್ತಿದ್ದೆ. ಚುರುಕಾಗಿ ನಡೆಯುತ್ತಿದ್ದರು. ಸ್ವಲ್ಪ ಸಮಯದ ನಂತರ ನಾನು ಅವರನ್ನು ಕೆಲವು ಬಂಗಾಳಿ ವಿಜ್ಞಾನಿಗಳ ಸೌಜನ್ಯದಿಂದ ಭೇಟಿಯಾಗುವುದು ಸಾಧ್ಯವಾಯಿತು. ಅವರು ನನ್ನನ್ನು ಬಿರೇನ್ ದಾಸ್ ಆಯೋಜಿಸಿದ್ದ ಸಂಗೀತ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದರು. ಅದರಲ್ಲಿ ಅದ್ಭುತ ಪ್ರತಿಭಾನ್ವಿತ ಗಾಯಕ ವೆಂಕಟೇಶ್ ಕುಮಾರ್ ಭಾಗವಹಿಸಿದ್ದರು. ಕಬ್ಬನ್ ಪಾರ್ಕ್ನಲ್ಲಿ ಭೇಟಿಯಾದಾಗ ಅಥವಾ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ದೊಡ್ಡ ಸಂಗೀತ ಕಚೇರಿಗಳ ಮೊದಲು ಅಥವಾ ಚರ್ಚ್ ಸ್ಟ್ರೀಟ್ನ ಕೆಳಗೆ ಅವರ ಸ್ವಂತ ಅಪಾರ್ಟ್ಮೆಂಟ್ನಲ್ಲಿ ಅವರು ವಾಸಿಸುತ್ತಿದ್ದ ಹೊತ್ತಲ್ಲಿ ನಾವು ಮಾತನಾಡಲು ಶುರು ಮಾಡಿದ ಮೇಲೆ ಬಹುಬೇಗ ಅವರು ನನಗೂ ಬಿರೇನ್ದಾ ಆದರು. ಅವರ ಸೌಮ್ಯತೆ ಮತ್ತು ಬೆಚ್ಚಗಿನ ಸ್ನೇಹಕ್ಕೆ ನಾನು ಭಾವುಕನಾದೆ. ಪೂಜೆ, ಔತಣಗಳು ಮತ್ತು ಸಂಗೀತ ಬೈಠಕ್ಗಳಿಗೆ ಆಹ್ವಾನಿಸುತ್ತಿದ್ದರು. ಅಪರೂಪದ ಸಂಶೋಧನಾ ಸಾಮಗ್ರಿಗಳ ಉಡುಗೊರೆಯಂತಹ ಹೇಳಲಾಗದ ಉದಾರತೆ ತೋರಿಸುತ್ತಿದ್ದರು.
1972ರಲ್ಲಿ ಬಿರೇನ್ ದಾಸ್ ಬೆಂಗಳೂರಿನವರಾದಾಗ, ಚಿರಂಜೀವ್ ಸಿಂಗ್ ಈ ನಗರವನ್ನು ಹಲವಾರು ವರ್ಷಗಳಿಂದ ತಿಳಿದಿದ್ದರು. ಅವರು ಇನ್ನೂ ದೂರದಿಂದ, ಪಂಜಾಬ್ನಿಂದ ಭಾರತೀಯ ಆಡಳಿತ ಸೇವೆಯ ಕರ್ನಾಟಕ ಕೇಡರ್ಗೆ ಸೇರಲು ಬಂದಿದ್ದರು. ಅವರ ಮೊದಲ ನಿಯೋಜನೆಗಳಲ್ಲಿ ಒಂದಾದ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಚೇರಿಯಲ್ಲಿ, ಈ ಪೇಟ ಧರಿಸಿದ ಸಿಖ್ ಮಲಬಾರ್ನ ಪಿ.ಕೆ. ಶ್ರೀನಿವಾಸನ್ ಅವರೊಂದಿಗೆ ಕೆಲಸ ಮಾಡುವಾಗ ಗೋವಾದ ಕೆಥೊಲಿಕ್ ಆಗಿದ್ದ ಕ್ರಿಸ್ಟೋಫರ್ ಲಿನ್ ಅವರಿಗೆ ವರದಿ ಮಾಡಿಕೊಂಡರು. ಅದು ಮೈಸೂರಿನ (ಆಗ ರಾಜ್ಯವನ್ನು ಹಾಗೆ ಕರೆಯಲಾಗುತ್ತಿತ್ತು) ಚೈತನ್ಯವಾಗಿತ್ತು ಮತ್ತು ಅದು ಯಾವಾಗಲೂ ಕರ್ನಾಟಕದ ಚೈತನ್ಯವಾಗಿಯೂ ಉಳಿಯಲಿ.
ನಂತರದ ವರ್ಷಗಳಲ್ಲಿ, ಚಿರಂಜೀವ್ ಸಿಂಗ್ ಕರ್ನಾಟಕದಾದ್ಯಂತ ಅಸಾಧಾರಣ ಬುದ್ಧಿವಂತ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಪ್ರಸಿದ್ಧರಾದರು. ಅವರು ರಾಜ್ಯಾದ್ಯಂತ ಸೇವೆ ಸಲ್ಲಿಸಿದರು. ಅವರು ಹೋದಲ್ಲೆಲ್ಲಾ, ಎಲ್ಲಾ ಜಾತಿಗಳು ಮತ್ತು ಸಮುದಾಯಗಳ ನಡುವೆ ಸ್ನೇಹಿತರನ್ನು ಮಾಡಿಕೊಂಡರು. ಅದೇ ಸಮಯದಲ್ಲಿ ಕನ್ನಡದ ವಿದ್ವಾಂಸರಾದರು. ಈ ಭಾಷೆಯ ಬಗ್ಗೆ ಆಳವಾದ ಜ್ಞಾನವಿದ್ದಂತೆ, ಜರ್ಮನ್ ಮತ್ತು ಫ್ರೆಂಚ್ ಭಾಷೆಯಲ್ಲೂ ನಿರರ್ಗಳತೆ ಹೊಂದಿದ್ದರು ಮತ್ತು ಬಾಂಗ್ಲಾ ಭಾಷೆಯನ್ನು ಓದುವ ಜ್ಞಾನವೂ ಇತ್ತು. ಆ ಇತರ ಭಾಷೆಗಳ ಜ್ಞಾನವನ್ನು ಅವರು ಪಡೆದುಕೊಂಡಾಗಲೂ, ಅವರು ತಮ್ಮ ಸ್ಥಳೀಯ ಪಂಜಾಬಿಯಲ್ಲಿ ಕಾವ್ಯವನ್ನು ಪ್ರಕಟಿಸುತ್ತಿದ್ದರು. ಸಿಂಗ್ ಶಾಸ್ತ್ರೀಯ ಸಂಗೀತ ಮತ್ತು ಕಲೆಗಳ ಪರಿಣತರಾಗಿದ್ದರು ಮತ್ತು ಯುನೆಸ್ಕೋಗೆ ಭಾರತದ ಅತ್ಯುತ್ತಮ ರಾಯಭಾರಿಯಾಗಿದ್ದರು. ತಮ್ಮ ನಿವೃತ್ತಿಯಲ್ಲಿ, ಅವರು ನಗರದ ಅಲಯನ್ಸ್ ಫ್ರಾಂಚೈಸ್ ಅನ್ನು ಚಾತುರ್ಯದಿಂದ ಮುನ್ನಡೆಸಿದರು. ಪಂಜಾಬಿಯಲ್ಲಿ ಕಾವ್ಯ ಪ್ರಕಟಿಸಿದರು ಮತ್ತು ಕನ್ನಡದಲ್ಲಿ ಪತ್ರಿಕೆಯ ಅಂಕಣ ಬರೆಯುವ ಕೆಲಸವನ್ನು ಸಹ ವಹಿಸಿಕೊಂಡರು.
ಚಿರಂಜೀವ್ ಸಿಂಗ್ ಕರ್ನಾಟಕದ ಅತ್ಯಂತ ಪ್ರೀತಿಯ ಸರಕಾರಿ ಅಧಿಕಾರಿಯಾಗಿರಬಹುದು. ಅವರು ಮೂಲತಃ ಈ ರಾಜ್ಯದವರಲ್ಲ. ಅವರ ವೃತ್ತಿಜೀವನದ ಮಧ್ಯಭಾಗದಲ್ಲಿ ನಡೆದ ಒಂದು ಘಟನೆ ಸ್ಪಷ್ಟವಾಗಿದೆ. ಜೂನ್ 1984ರಲ್ಲಿ, ಇಂದಿರಾ ಗಾಂಧಿಯವರ ಸರಕಾರವು ಸ್ವರ್ಣಮಂದಿರದ ಮೇಲೆ ದಾಳಿ ಮಾಡಿದ ನಂತರ, ಅವರು ತಮ್ಮ ಪ್ರತಿಭಟನೆಯನ್ನು ದಾಖಲಿಸಲು ಕರ್ನಾಟಕದ ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೆ ಸಿಖ್ ನಿವಾಸಿಗಳ ಗುಂಪಿನೊಂದಿಗೆ ಸೇರಿಕೊಂಡರು. ಇದು ದಿಲ್ಲಿಯಲ್ಲಿರುವ ನೇತಾ ಮತ್ತು ಬಾಬುಗಳನ್ನು ಕೆರಳಿಸಿತು. ಅವರು ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಗೆ ಅಧಿಕೃತ ಪತ್ರವನ್ನು ಬರೆದರು. ಸಿಂಗ್ ಅವರನ್ನು ವಜಾಗೊಳಿಸಬೇಕು ಅಥವಾ ಕನಿಷ್ಠ ಪಕ್ಷ ತೀವ್ರವಾಗಿ ಖಂಡಿಸಬೇಕು ಎಂದು ಒತ್ತಾಯಿಸಿದರು. ಅದಕ್ಕೆ ಹೆಗಡೆ, ‘‘ಸಾರ್ವಜನಿಕ ಸೇವಕರೂ ಸಹ ನಾಗರಿಕರು, ಅವರು ಸಂವಿಧಾನದಿಂದ ಖಾತರಿಪಡಿಸಲಾದ ವಾಕ್ ಸ್ವಾತಂತ್ರ್ಯವನ್ನು ಹೊಂದಿದ್ದಾರೆ’’ ಎಂದು ಸ್ಪಷ್ಟವಾಗಿ ಉತ್ತರಿಸಿದ್ದರು. ಇದಲ್ಲದೆ, ಈ ಅಧಿಕಾರಿಯ ಬಗ್ಗೆ ತುಂಬಾ ಗೌರವವಿತ್ತು. ಮುಖ್ಯಮಂತ್ರಿ ಅವರನ್ನು ತಮ್ಮ ಸರಕಾರ ಮತ್ತು ರಾಜ್ಯದ ಮಹತ್ವದ ವ್ಯಕ್ತಿ ಎಂದು ಪರಿಗಣಿಸಿದ್ದರು. ಆದ್ದರಿಂದ ಅವರನ್ನು ಶಿಕ್ಷಿಸಲಿಲ್ಲ ಅಥವಾ ವಜಾಗೊಳಿಸಲಿಲ್ಲ. ಬದಲಿಗೆ ಅವರನ್ನು ಪ್ರೀತಿಯಿಂದಲೇ ನೋಡಿಕೊಳ್ಳಲಾಯಿತು.
ಅರುಂಧತಿ ರಾವ್ ಈ ನಗರಕ್ಕೆ ಬಂದವರಲ್ಲಿ ನಾನು ಹೇಳುವ ಮೂವರಲ್ಲಿ ಕೊನೆಯವರು. ಸ್ವತಃ ದಿಲ್ಲಿಯಲ್ಲಿ ಬೆಳೆದರು. ಮರಾಠಿ ಅವರ ಮಾತೃಭಾಷೆ. ರಂಗಭೂಮಿಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡರು ಮತ್ತು ಈ ಕ್ಷೇತ್ರದಲ್ಲಿಯೇ ಶಂಕರ್ ನಾಗ್ ಅವರನ್ನು ಭೇಟಿಯಾದ ಬಳಿಕ ಅವರನ್ನು ಪ್ರೀತಿಸುತ್ತಿದ್ದರು. ಅವರು 1980ರಲ್ಲಿ ವಿವಾಹವಾದರು. ಶಂಕರ್ ಕನ್ನಡಿಗನಾಗಿದ್ದರಿಂದ, ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ನಟಿಸಲು ಬೆಂಗಳೂರಿಗೆ ತೆರಳಿದರು. ಅವರ ವೈಯಕ್ತಿಕ ವೃತ್ತಿಜೀವನವು ಖ್ಯಾತಿ ಪಡೆಯಿತು. ಆದರೆ ಒಂದು ದಶಕದ ವೈವಾಹಿಕ ಆನಂದ ಮತ್ತು ವೃತ್ತಿಪರ ಯಶಸ್ಸಿನ ನಂತರ, ಶಂಕರ್ ರಸ್ತೆ ಅಪಘಾತದಲ್ಲಿ ನಿಧನರಾದರು. ಅರುಂಧತಿ, ಧೈರ್ಯದಿಂದಲೇ ಶಂಕರ್ ನಾಗ್ ಅವರ ಪರಂಪರೆ ಮತ್ತು ಸ್ಮರಣೆಯನ್ನು ಜೀವಂತವಾಗಿಡುವ ಸಾರ್ವಜನಿಕ ಸಂಸ್ಥೆಯನ್ನು ರಚಿಸಲು ಹೊರಟರು. ಒಂದು ದಶಕದಿಂದ ನಿಧಿಗಳನ್ನು ಸಂಗ್ರಹಿಸುವುದು, ಒಂದು ಸ್ಥಳವನ್ನು ಹುಡುಕುವುದು ಮತ್ತು ಅದರ ಕಟ್ಟಡ ಮತ್ತು ವಿನ್ಯಾಸವನ್ನು ಯೋಜಿಸುವ ಮೂಲಕ, ರಂಗಶಂಕರವು 2004ರಲ್ಲಿ ತನ್ನ ಬಾಗಿಲು ತೆರೆಯಿತು. ಗಣರಾಜ್ಯದ ಎಲ್ಲಾ ಭಾಷೆಗಳಲ್ಲಿ ಸಾವಿರಾರು ನಾಟಕಗಳನ್ನು ಆಯೋಜಿಸಿದ ಎರಡು ದಶಕಗಳಲ್ಲಿ, ಪ್ರಸಿದ್ಧರು ಮಾತ್ರವಲ್ಲದೆ, ಯುವ ಮತ್ತು ಅಪರಿಚಿತ ನಟರು ಮತ್ತು ನಿರ್ದೇಶಕರನ್ನು ಇದು ಒಳಗೊಂಡಿದೆ. ನಗರದ ಸಾಂಸ್ಕೃತಿಕ ಜೀವನಕ್ಕೆ ಅದರ ಕೊಡುಗೆ ಅಪಾರ.
ರಂಗ ಶಂಕರವನ್ನು ಪೋಷಿಸುತ್ತಿದ್ದರೂ, ಅರುಂಧತಿ ನಾಗ್ ಒಬ್ಬ ನಟಿಯಾಗಿ ತಮ್ಮ ಜೀವನವನ್ನು ಮುಂದುವರಿಸಿದ್ದಾರೆ. ಹಿಂದಿ, ಕನ್ನಡ, ಇಂಗ್ಲಿಷ್, ಮರಾಠಿ, ಗುಜರಾತಿ ಮತ್ತು ಉರ್ದು ಭಾಷೆಗಳಲ್ಲಿ ಸಮಾನ ಭರವಸೆಯೊಂದಿಗೆ ತೊಡಗಿಸಿಕೊಂಡಿದ್ದಾರೆ. ಅವರು ಅಸಾಧಾರಣ ಪ್ರತಿಭೆಯನ್ನು ಹೊಂದಿದ್ದಾರೆ. ಇತ್ತೀಚೆಗೆ ನಾನು ಅವರೊಂದಿಗೆ ನಡೆಸಿದ ಸಂದೇಶ ವಿನಿಮಯವನ್ನು ಇಲ್ಲಿ ಹೇಳಿಕೊಳ್ಳಬಹುದು. ನಿಕೊ ಸ್ಲೇಟ್ ಬರೆದ ಕಮಲಾದೇವಿ ಚಟ್ಟೋಪಾಧ್ಯಾಯ ಅವರ ಜೀವನ ಚರಿತ್ರೆಯನ್ನು ಓದುವಾಗ, ಕಮಲಾದೇವಿಯವರ ಈ ಹೇಳಿಕೆ ನನಗೆ ಕಾಣಿಸಿತು: ‘ಚಲನಚಿತ್ರ ನಟನೆ ನನ್ನನ್ನು ಆಕರ್ಷಿಸುವಲ್ಲಿ ವಿಫಲವಾಯಿತು, ಆದರೆ ನಾಟಕ ರಂಗಭೂಮಿ ನನ್ನಲ್ಲಿ ಉತ್ಕಟ ಉತ್ಸಾಹ ತುಂಬಿತು; ಸ್ಟುಡಿಯೋದಲ್ಲಿ ನಟನೆಯು ಸ್ಪಂದಿಸುವ ಪ್ರೇಕ್ಷಕರೊಂದಿಗೆ ಬೆಚ್ಚಗಿನ ಸೂಕ್ಷ್ಮ ಸಂವಹನವಿಲ್ಲದೆ ಶೂನ್ಯದಲ್ಲಿ ಪ್ರದರ್ಶನ ನೀಡುವಂತೆ ತೋರುತ್ತಿತ್ತು.’
ನಾನು ಈ ಉಲ್ಲೇಖವನ್ನು ಅರುಂಧತಿಗೆ ಕಳುಹಿಸಿದೆ. ಅವರು ಉತ್ತರಿಸಿದರು: ‘ಇದು ನಾನು ರಂಗಭೂಮಿಯಲ್ಲಿ ಮುಳುಗಿರುವ 50 ವರ್ಷಗಳ ದೃಢ ನಂಬಿಕೆಯೊಂದಿಗೆ ಧ್ವನಿಸುತ್ತದೆ ಮತ್ತು ಅನುಮಾನವೇ ಇಲ್ಲ!’ ಅಲ್ಲದೆ, ಅವರು ಹೀಗೆ ಹೇಳಿದರು: ‘ನಾನು ಕಮಲಾದೇವಿಯ ಚೇಲಾಗಳಲ್ಲಿ ಒಬ್ಬಳಾಗಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತಿತ್ತು!’
ಭಾರತದ ಉಳಿದ ಭಾಗವು ಬೆಂಗಳೂರಿನ ಜನರನ್ನು ಹೊಗಳುವಾಗ, ಅವರು ಸಾಮಾನ್ಯವಾಗಿ ನಗರದ ಐಟಿ, ಬಿಟಿಯವರು ಅಥವಾ ಅದರ ಕ್ರಿಕೆಟಿಗರ ಬಗ್ಗೆ ಯೋಚಿಸುತ್ತಾರೆ. ಈ ಅಂಕಣದಲ್ಲಿ ಕಾಣಿಸಿಕೊಂಡಿರುವವರಿಗೆ ಆ ರೀತಿಯ ಸೆಲೆಬ್ರಿಟಿಗಳ ಸಂಪತ್ತು ಮತ್ತು ಖ್ಯಾತಿಯ ಕೊರತೆಯಿದೆ. ಆದರೆ ನನಗೆ, ಯಾವುದೇ ರೀತಿಯಲ್ಲಿ ಅವರು ಈ ನಗರದ ಚೈತನ್ಯವನ್ನು ಬಹುಶಃ ಆಳವಾದ ಮತ್ತು ಹೆಚ್ಚು ಶಾಶ್ವತವಾದ ರೀತಿಯಲ್ಲಿ ಸಾಕಾರಗೊಳಿಸುವವರಾಗಿದ್ದಾರೆ. ಬಿರೇನ್ ದಾಸ್ ಮತ್ತು ಅರುಂಧತಿ ನಾಗ್ ಬೆಂಗಳೂರಿನ ಸಾಮಾಜಿಕ ಜೀವನವನ್ನು ಶ್ರೀಮಂತಗೊಳಿಸುವ ಸಂಸ್ಥೆಗಳನ್ನು ನಿರ್ಮಿಸಿದ್ದಾರೆ. ಆದರೆ ಚಿರಂಜೀವ್ ಸಿಂಗ್ ಅವರು ಹಲವಾರು ವಿಭಿನ್ನ ಕ್ಷೇತ್ರಗಳಲ್ಲಿ ಕೊಡುಗೆ ನೀಡಿದ್ದಾರೆ. ಅವರನ್ನು ಸ್ವತಃ ಒಂದು ಸಂಸ್ಥೆಯೆಂದು ಪರಿಗಣಿಸಬಹುದು. ಪ್ರತಿಯೊಬ್ಬರೂ ನನಗೆ ಸ್ನೇಹಿತರು ಮತ್ತು ಐಕಾನ್ ಆಗಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ, ನನ್ನ ನಗರ ಮತ್ತು ನಮ್ಮ ದೇಶದ ಅತ್ಯಂತ ಪ್ರಶಂಸನೀಯ ಗುಣಲಕ್ಷಣಗಳನ್ನು ಪ್ರತಿನಿಧಿಸುತ್ತಾರೆ.







