Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಮಾನ
  5. ಕಾಶ್ಮೀರಿಗಳಿಗೆ ನ್ಯಾಯ

ಕಾಶ್ಮೀರಿಗಳಿಗೆ ನ್ಯಾಯ

ರಾಮಚಂದ್ರ ಗುಹಾರಾಮಚಂದ್ರ ಗುಹಾ26 July 2025 11:24 AM IST
share
ಕಾಶ್ಮೀರಿಗಳಿಗೆ ನ್ಯಾಯ
ಭಾರತೀಯರು ತಮ್ಮದೇ ಆದ ಪ್ರಕರಣವನ್ನು ಹೆಚ್ಚು ಪ್ರಬಲ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ಮತ್ತು ತಾವು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಮೌಲ್ಯಗಳಿಗೆ ಹೆಚ್ಚು ಯೋಗ್ಯರೆನ್ನಿಸಿಕೊಳ್ಳಲು, ಜಮ್ಮು-ಕಾಶ್ಮೀರದ ಜನರಿಗೆ ಸರಕಾರಗಳು ಸತತವಾಗಿ ನೀಡಿದ ಭರವಸೆಗಳನ್ನು ಈಡೇರಿಸುವುದು ಆಗಬೇಕಿತ್ತು. ಆ ಸಮಯ ಕಳೆದಿದೆ. ರಾಜ್ಯ ಸ್ಥಾನಮಾನವನ್ನು ಮರಳಿಸುವುದು ಮತ್ತು ಅದನ್ನು ತಕ್ಷಣವೇ ಮಾಡುವುದು ಅಗತ್ಯವಾದ ಮೊದಲ ಹೆಜ್ಜೆಯಾಗಿದೆ. ಅದೇ ಸಮಯದಲ್ಲಿ, ಕಾಶ್ಮೀರ ಮತ್ತು ಕಾಶ್ಮೀರಿಗಳು ಭಾರತ ಗಣರಾಜ್ಯದ ಭಾಗವೆಂದು ಸರಿಯಾಗಿ, ಗೌರವಯುತವಾಗಿ ಭಾವಿಸಲು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.

ಸುಮಾರು ಹತ್ತು ವರ್ಷಗಳ ಹಿಂದೆ ಆಗಸ್ಟ್ 2015ರಲ್ಲಿ ನಾನು ಕಾಶ್ಮೀರ ಕಣಿವೆಗೆ ಭೇಟಿ ನೀಡಿದ್ದೆ. ವಿವಿಧ ಕ್ಷೇತ್ರಗಳ ಜನರೊಂದಿಗೆ ಮಾತನಾಡಿದೆ. ಅವರಲ್ಲಿ ಒಬ್ಬರು ಪತ್ರಕರ್ತ ಶುಜಾತ್ ಬುಖಾರಿ. ಜನವರಿ 2015ರಲ್ಲಿ ನಾನು ದಿಲ್ಲಿಯ ಪುಸ್ತಕದಂಗಡಿಯಲ್ಲಿ ಬುಖಾರಿಯವರನ್ನು ಭೇಟಿಯಾಗಿದ್ದೆ. ಅವರು ತಮ್ಮ ತವರು ರಾಜ್ಯಕ್ಕೆ ಭೇಟಿ ನೀಡುವಂತೆ ನನ್ನನ್ನು ಒತ್ತಾಯಿಸಿದ್ದರು. ವರ್ಷದ ಕೊನೆಯಲ್ಲಿ ನಾನು ಶ್ರೀನಗರಕ್ಕೆ ಹೋದಾಗ, ಕಾಶ್ಮೀರದ ಇತಿಹಾಸ ಮತ್ತು ವರ್ತಮಾನದ ಬಗ್ಗೆ ನಾವು ದೀರ್ಘ ಚರ್ಚೆ ನಡೆಸಿದೆವು. ನಾನು ಹೊರಡಲು ಸಿದ್ಧವಾದಾಗ, ದಶಕಗಳಿಂದ ಕಾಶ್ಮೀರಿಗಳಿಗೆ ನೀಡಿದ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸದೆ ಬಿಟ್ಟಿದ್ದ ಭಾರತ ಸರಕಾರಕ್ಕಿಂತ ಭಿನ್ನವಾಗಿ, ನಾನು ಅವರಿಗೆ ಕೊಟ್ಟಿದ್ದ ಮಾತನ್ನು ಉಳಿಸಿಕೊಂಡದ್ದರ ಬಗ್ಗೆ ಬುಖಾರಿ ತಮಾಷೆಯಿಂದ ಹೇಳಿದ್ದರು.

ಜೂನ್ 2018ರಲ್ಲಿ, ಶುಜಾತ್ ಬುಖಾರಿ ಅವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದರು. ಅವರು ಯಾರು ಮತ್ತು ಉದ್ದೇಶಗಳೇನಿದ್ದವು ಎಂಬುದು ಇನ್ನೂ ತಿಳಿದಿಲ್ಲ. ಅದರ ಮುಂದಿನ ವರ್ಷ, ಭಾರತ ಸರಕಾರ 370ನೇ ವಿಧಿಯನ್ನು ರದ್ದುಗೊಳಿಸಿತು. ಈ ಮೂಲಕ, ಜನರ ಆಯ್ಕೆಯಲ್ಲದ ರಾಜ್ಯಪಾಲರು ಜಮ್ಮು-ಕಾಶ್ಮೀರದ ಜನರ ಪ್ರಜಾಪ್ರಭುತ್ವದ ಇಚ್ಛೆಯನ್ನು ಪ್ರತಿನಿಧಿಸುವವರಾದರು. ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ, ಪೂರ್ಣ ಪ್ರಮಾಣದ ಗಣತಂತ್ರ ರಾಜ್ಯವನ್ನು ಕೇವಲ ಕೇಂದ್ರಾಡಳಿತ ಪ್ರದೇಶದ ಮಟ್ಟಕ್ಕೆ ಇಳಿಸಲಾಯಿತು. ಆನಂತರ ಗೃಹ ಸಚಿವಾಲಯ ಬಿಜೆಪಿ ನಿಷ್ಠರನ್ನು ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಿತು.

370ನೇ ವಿಧಿಯನ್ನು ರದ್ದುಗೊಳಿಸುವುದು ಜಮ್ಮು-ಕಾಶ್ಮೀರದ ಜನರಿಗೆ ನೀಡಿದ ಸಾಂವಿಧಾನಿಕ ಭರವಸೆಗೆ ಮಾಡಿದ ದ್ರೋಹವಾಗಿತ್ತು. ಆದರೂ, ಅದು ಸಂಪೂರ್ಣ ಅನಿರೀಕ್ಷಿತವಾಗಿರಲಿಲ್ಲ. ಏಕೆಂದರೆ, ಹೊಸದಿಲ್ಲಿಯಲ್ಲಿ ಅಧಿಕಾರದಲ್ಲಿದ್ದದ್ದು ಕಾಂಗ್ರೆಸ್ ಆಗಿರಲಿಲ್ಲ, ಬಿಜೆಪಿಯಾಗಿತ್ತು. 370ನೇ ವಿಧಿಯನ್ನು ರದ್ದುಗೊಳಿಸಬೇಕೆಂದು ಬಿಜೆಪಿ ಬಹಳ ಹಿಂದೆಯೇ ಪ್ರತಿಪಾದಿಸಿತ್ತು. ಕಾಯ್ದೆಯನ್ನು ರದ್ದುಗೊಳಿಸುವಾಗ, ಭಾರತ ಸರಕಾರ ಸಂಸತ್ತಿನಲ್ಲಿ ಹೊಸ ಭರವಸೆಯನ್ನು ನೀಡಿತು. ಜಮ್ಮು-ಕಾಶ್ಮೀರಕ್ಕೆ ಪೂರ್ಣ ರಾಜ್ಯ ಸ್ಥಾನಮಾನವನ್ನು ಮರಳಿ ಕೊಡುವ ಭರವಸೆ ಅದಾಗಿತ್ತು.

ಆ ಭರವಸೆಯನ್ನು ನೀಡಿ ಈಗ ಸುಮಾರು ಆರು ವರ್ಷಗಳು ಕಳೆದಿವೆ ಮತ್ತು ಅದನ್ನು ಈಡೇರಿಸುವ ಯಾವುದೇ ಲಕ್ಷಣವಿಲ್ಲ. ಈ ವಿಳಂಬವು ಅಧಿಕಾರಶಾಹಿ ನಿರಾಸಕ್ತಿಯಿಂದಲ್ಲ, ಬದಲಾಗಿ ದುರುದ್ದೇಶಪೂರಿತ ರಾಜಕೀಯ ಉದ್ದೇಶದಿಂದ ಕೂಡಿದೆ. ಬಿಹಾರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಗೆ ಮೋದಿ-ಶಾ ಸರಕಾರ ಕೇವಲ ಒಂದು ತಿಂಗಳು ಮಾತ್ರ ಮೀಸಲಿಟ್ಟಿತು. ಬಿಹಾರದ ಹತ್ತನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಚುನಾವಣೆಗಳನ್ನು ಆಯೋಜಿಸಲು ಅವರಿಗೆ ಐದು ವರ್ಷಗಳು ಬೇಕಾದವು. ಮುಸ್ಲಿಮ್ ಪ್ರಾಬಲ್ಯದ ಕಾಶ್ಮೀರವನ್ನು ಬದಿಗಿಟ್ಟು ಹಿಂದೂ ಪ್ರಾಬಲ್ಯದ ಜಮ್ಮುವಿಗೆ ಅನುಕೂಲಕರವಾದ ವಿಧಾನಸಭಾ ಕ್ಷೇತ್ರಗಳ ಮರುಹಂಚಿಕೆ ಮಾಡಲಾಯಿತು. ಕಾಶ್ಮೀರದಲ್ಲಿಯೇ, ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪೀಪಲ್ಸ್ ಡೆಮಾಕ್ರಟಿಕ್ ಪಕ್ಷಕ್ಕೆ (ಪಿಡಿಪಿ) ಪರ್ಯಾಯವಾಗಿ ಬಿಜೆಪಿ ಮೂರನೇ ಮತ್ತು ನಾಲ್ಕನೇ ಪಕ್ಷವನ್ನು ಉತ್ತೇಜಿಸಲು ಪ್ರಯತ್ನಿಸಿತು. ಕಾಶ್ಮೀರದೊಳಗಿನ ಪತ್ರಿಕಾ ಮಾಧ್ಯಮಗಳು ಬಾಯಿ ಮುಚ್ಚಿಕೊಂಡಿದ್ದವು. ಸ್ವತಂತ್ರ ಪತ್ರಕರ್ತರಿಗೆ ಪೊಲೀಸರು ಕಿರುಕುಳ ನೀಡಿದರು. ಅವರನ್ನು ಬಂಧಿಸಲಾಯಿತು ಅಥವಾ ಗಡಿಪಾರು ಮಾಡಲಾಯಿತು.

ಈ ಸಂದರ್ಭದಲ್ಲಿ, ಚುನಾವಣಾ ಪ್ರಕ್ರಿಯೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಕುಶಲತೆಯಿಂದ ನಿರ್ವಹಿಸಲು ಬಿಜೆಪಿ ಮಾಡಿದ ಎಲ್ಲಾ ಪ್ರಯತ್ನಗಳು ವಿಫಲವಾದವು. ವಾಜಪೇಯಿ ಅವರ ಬಿಜೆಪಿಯ ಜೊತೆ ಮೈತ್ರಿ ಹೊಂದಿದ್ದ, ಆದರೆ ಮೋದಿಯವರ ಬಿಜೆಪಿಯನ್ನು ದ್ವೇಷಿಸುವ ಪಕ್ಷವಾದ ನ್ಯಾಷನಲ್ ಕಾನ್ಫರೆನ್ಸ್ ವಿಧಾನಸಭೆಯಲ್ಲಿ ಒಟ್ಟಾರೆ ಬಹುಮತವನ್ನು ಗಳಿಸಿತು. ಚುನಾವಣೆಗೆ ಹಲವು ತಿಂಗಳುಗಳ ಮೊದಲು ಸುಪ್ರೀಂ ಕೋರ್ಟ್, ಜಮ್ಮು-ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನವನ್ನು ಮರಳಿಸಲು ಹೇಳಿತ್ತು. ಆದರೆ ಫಲಿತಾಂಶಗಳು ಬಂದ ನಂತರ, ಬಿಜೆಪಿಯ ಜಮ್ಮು-ಕಾಶ್ಮೀರ ಘಟಕ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಬೇಕಾಯಿತು.

ಜಮ್ಮು ಮತ್ತು ಕಾಶ್ಮೀರದಲ್ಲಿ ಈಗ ಚುನಾಯಿತ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ಇದ್ದಾರೆ. ಒಂದು ಪ್ರಮುಖ ಸಾಂಕೇತಿಕ ನಡೆಯಲ್ಲಿ, ನ್ಯಾಷನಲ್ ಕಾನ್ಫರೆನ್ಸ್ ತನ್ನ ಏಕೈಕ ಹಿಂದೂ ಶಾಸಕನನ್ನು ಉಪಮುಖ್ಯಮಂತ್ರಿಯಾಗಿ ನೇಮಿಸಿದೆ. ಆದರೆ ಎಲ್ಲಾ ಪರಿಣಾಮಕಾರಿ ನಿರ್ಧಾರ ತೆಗೆದುಕೊಳ್ಳುವಿಕೆ ಕೇಂದ್ರದಿಂದ ನೇಮಕವಾಗಿರುವ ಲೆಫ್ಟಿನೆಂಟ್ ಗವರ್ನರ್ ಕೈಯಲ್ಲಿರುವುದರಿಂದ, ಮುಖ್ಯಮಂತ್ರಿ ಮತ್ತು ಅವರ ಸಂಪುಟವು ಜಮ್ಮು-ಕಾಶ್ಮೀರವನ್ನು ಶಾಂತಿ ಮತ್ತು ಸಮೃದ್ಧಿಯ ದಿಕ್ಕಿನಲ್ಲಿ ನಡೆಸುವುದಕ್ಕೆ ಹೆಚ್ಚಿನದೇನನ್ನೂ ಮಾಡುವುದು ಸಾಧ್ಯವಿಲ್ಲ.

ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ, ಉಮರ್ ಅಬ್ದುಲ್ಲಾ ಹೆಚ್ಚಾಗಿ ಮುಖಾಮುಖಿಯ ಬದಲು ಸಮನ್ವಯದ ಮಾರ್ಗವನ್ನು, ಗೌರವದ ಮಾರ್ಗವನ್ನು ಆರಿಸಿಕೊಂಡರು. ಅವರು ಲೆಫ್ಟಿನೆಂಟ್ ಗವರ್ನರ್ ಅವರನ್ನು ನೇರವಾಗಿ ಟೀಕಿಸಲು ಹೋಗಲಿಲ್ಲ. ಆದರೆ ರಾಜ್ಯ ಸ್ಥಾನಮಾನವನ್ನು ಮರಳಿಸುವಂತೆ ಕೇಂದ್ರ ಸರಕಾರವನ್ನು ನಯವಾಗಿ ಕೇಳಿಕೊಂಡರು. ಆದರೂ, ಈ ತಿಂಗಳ ಆರಂಭದಲ್ಲಿ ಅಬ್ದುಲ್ಲಾ ಲೆಫ್ಟಿನೆಂಟ್ ಗವರ್ನರ್ ಅವರನ್ನು ನೇರವಾಗಿ ಎದುರಿಸಬೇಕಾಯಿತು. ಜುಲೈ 13, 1931ರಂದು, ಮಹಾರಾಜ ಹರಿ ಸಿಂಗ್ ಅವರ ನಿರಂಕುಶ ಆಡಳಿತದ ವಿರುದ್ಧ ಪ್ರತಿಭಟಿಸುತ್ತಿದ್ದ ಸುಮಾರು 21 ಕಾಶ್ಮೀರಿಗಳನ್ನು ಕೊಂದಾಗಿನಿಂದ ಜುಲೈ 13ನ್ನು ಕಣಿವೆಯಲ್ಲಿ ಹುತಾತ್ಮರ ದಿನವಾಗಿ ಆಚರಿಸಲಾಗುತ್ತದೆ. 1948ರಲ್ಲಿ ಮಹಾತ್ಮಾ ಗಾಂಧಿಯವರ ಹತ್ಯೆಯಾದ ಜನವರಿ 30ರಂದು ಭಾರತದ ಇತರ ಭಾಗಗಳಲ್ಲಿ ಹುತಾತ್ಮರ ದಿನ ಎಂದು ಗುರುತಿಸಲಾಗುತ್ತದೆ. ಆದರೆ, ಕಳೆದ ಜುಲೈ 13ರಂದು, ಹುತಾತ್ಮರ ದಿನವನ್ನು ಆಚರಿಸದಂತೆ ಲೆಫ್ಟಿನೆಂಟ್ ಗವರ್ನರ್ ನಿಷೇಧಿಸಿದರು. ಜುಲೈ 13ರಂದು ಪೊಲೀಸರು ಮುಖ್ಯಮಂತ್ರಿಯ ಮನೆಯನ್ನು ಸುತ್ತುವರಿದಿದ್ದರು. ಮರುದಿನ ಮುಖ್ಯಮಂತ್ರಿ ಹುತಾತ್ಮರ ಸಮಾಧಿಗೆ ಗೌರವ ಸಲ್ಲಿಸುವ ಮೂಲಕ ಲೆಫ್ಟಿನೆಂಟ್ ಗವರ್ನರ್ ಅವರನ್ನು ಧಿಕ್ಕರಿಸಿದರು.

ಆಗಸ್ಟ್ 5, 2019ರವರೆಗೆ, ಜುಲೈ 13 ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕ ರಜಾದಿನವಾಗಿತ್ತು. ಆದರೆ, ರಾಜ್ಯ ಕೇಂದ್ರಾಡಳಿತ ಪ್ರದೇಶವಾದ ನಂತರ ಅದನ್ನು ರಜಾದಿನಗಳ ಪಟ್ಟಿಯಿಂದ ತೆಗೆದುಹಾಕಲಾಯಿತು. ಬದಲಾಗಿ, ಮಹಾರಾಜ ಹರಿ ಸಿಂಗ್ ಅವರ ಜನ್ಮದಿನವನ್ನು ಸಾರ್ವಜನಿಕ ರಜಾದಿನವನ್ನಾಗಿ ಮಾಡಲಾಯಿತು. ಇದು ದ್ವೇಷದ ಕೃತ್ಯವಾಗಿತ್ತು ಮತ್ತು ಬಹುಶಃ ಬಹುಸಂಖ್ಯಾತರ ಉದ್ದೇಶವೂ ಆಗಿತ್ತು. ಸಮಾಧಿ ಸ್ಥಳಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದ ನಂತರ, ಉಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದರು: ‘‘ಜುಲೈ 13ರ ಹತ್ಯಾಕಾಂಡ ನಮ್ಮ ಜಲಿಯನ್ ವಾಲಾಬಾಗ್. ಬ್ರಿಟಿಷರ ವಿರುದ್ಧವಿದ್ದ ಜನರು ತಮ್ಮ ಪ್ರಾಣವನ್ನೇ ಅರ್ಪಿಸಿದರು. ಕಾಶ್ಮೀರವನ್ನು ಬ್ರಿಟಿಷ್ ಪರಮಾಧಿಕಾರದ ಅಡಿಯಲ್ಲಿ ಆಳಲಾಗುತ್ತಿತ್ತು. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಎಲ್ಲಾ ವಿಧಗಳಿಂದ ಹೋರಾಡಿದ ನಿಜವಾದ ವೀರರನ್ನು ಇಂದು ಅವರು ಮುಸ್ಲಿಮರಾಗಿದ್ದರಿಂದ ಮಾತ್ರ ಖಳನಾಯಕರನ್ನಾಗಿ ಬಿಂಬಿಸಲಾಗುತ್ತಿದೆ ಎಂಬುದು ಎಷ್ಟು ನಾಚಿಕೆಗೇಡಿನ ಸಂಗತಿ’’ ಇಲ್ಲಿ ಉಲ್ಲೇಖಿಸಲಾದ ಮೊದಲ ವಾಕ್ಯ ಸ್ವಲ್ಪಮಟ್ಟಿಗೆ ಉತ್ಪ್ರೇಕ್ಷೆಯಿಂದ ಕೂಡಿದ್ದರೂ, ಇತರ ವಾಕ್ಯಗಳು ನಿಜವೆಂದು ಕಾಣುತ್ತದೆ. 1857ರಿಂದ 1947ರವರೆಗೆ, ಎಲ್ಲಾ ಮಹಾರಾಜರು ಮತ್ತು ನವಾಬರು ಬಹುತೇಕ ಬ್ರಿಟಿಷರ ಹೊಗಳುಭಟ್ಟರಾಗಿದ್ದರು ಮತ್ತು ರಾಜಪ್ರಭುತ್ವದ ಭಾರತದ ಮಾನದಂಡಗಳ ಪ್ರಕಾರ, ಹರಿ ಸಿಂಗ್ ಒಬ್ಬ ಸಂಪೂರ್ಣ ನಿರಂಕುಶಾಧಿಕಾರಿಯಾಗಿದ್ದ. ಆದರೆ, ಆತ ಹಿಂದೂ ಆಗಿದ್ದ ಮತ್ತು ಅವನ ಸರ್ವಾಧಿಕಾರಿ ಆಡಳಿತವನ್ನು ಪ್ರತಿಭಟಿಸುವವರು ಹೆಚ್ಚಾಗಿ ಮುಸ್ಲಿಮರಾಗಿದ್ದರು ಎಂಬುದು ಜಮ್ಮು-ಕಾಶ್ಮೀರದಲ್ಲಿ ಸಾರ್ವಜನಿಕ ರಜಾದಿನಗಳ ಪಟ್ಟಿಯ ಪರಿಷ್ಕರಣೆಯ ಹಿಂದಿನ ಕಾರಣವಾಗಿರಬಹುದು.

ರಾಜ್ಯ ಸ್ಥಾನಮಾನ ನೀಡಲು ನಿರಾಕರಿಸುವುದು ಮೋದಿ-ಶಾ ಸರಕಾರ ನೀಡಿದ ಗಂಭೀರ ಭರವಸೆಗೆ ದ್ರೋಹವಾಗಿದೆ. ಆದರೂ ಕಾಶ್ಮೀರಿಗಳ ಮೇಲಿನ ದೌರ್ಜನ್ಯವು ಈ ವಿಷಯವನ್ನು ಮೀರಿದ್ದಾಗಿದೆ. ಆದರೆ ಈ ದೌರ್ಜನ್ಯಕ್ಕೆ ಸರಕಾರದ ಹೊರಗಿನ ಭಾರತೀಯರೂ ಹೊಣೆಗಾರರಾಗಿರುತ್ತಾರೆ. ಆಗಸ್ಟ್ 12, 2019ರಂದು, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ, ಜಮ್ಮು-ಕಾಶ್ಮೀರದಲ್ಲಿ ಸರಣಿ ಹೂಡಿಕೆಗಳನ್ನು ಮಾಡಲು ತಮ್ಮ ಸಮೂಹ ವಿಶೇಷ ಕಾರ್ಯಪಡೆಯನ್ನು ಸ್ಥಾಪಿಸಲಿದೆ ಎಂದು ಭರವಸೆ ನೀಡಿದರು. ಅದು ಇನ್ನೂ ನಡೆಯುವ ಯಾವುದೇ ಲಕ್ಷಣಗಳಿಲ್ಲ. ಇತರ ಭಾರತೀಯ ಕಂಪೆನಿಗಳು ಸಹ ಏನನ್ನೂ ಮಾಡಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕೈಗಾರಿಕಾ ಹೂಡಿಕೆಗಳು ವಿರಳವಾಗಿದ್ದು, ಅತ್ಯುತ್ತಮ ಮತ್ತು ಪ್ರತಿಭಾವಂತರ ವಲಸೆ ಹೆಚ್ಚುತ್ತಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ಪತ್ರಿಕೆಯ ಇತ್ತೀಚಿನ ವರದಿಯಲ್ಲಿ ಹೇಳಲಾಗಿದೆ. ಕಾಶ್ಮೀರದ ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ಯುವ ವೃತ್ತಿಪರರು, ಪದವೀಧರರು ಮತ್ತು ಶಾಲಾ ವಿದ್ಯಾರ್ಥಿಗಳು ಸಹ ನಿಧಾನವಾಗಿ ಮನೆಯಿಂದ ಮಾತ್ರವಲ್ಲ, ಭರವಸೆಯಿಂದ ದೂರ ಸರಿಯುತ್ತಿದ್ದಾರೆ ಎಂದು ಆ ವರದಿ ದಾಖಲಿಸುತ್ತದೆ.

ಭಾರತೀಯ ಮಾಧ್ಯಮಗಳ ತಪ್ಪು ಕೂಡ ಇಲ್ಲಿದೆ. ನನ್ನ ಅನುಭವದಲ್ಲಿ, ಜಮ್ಮು-ಕಾಶ್ಮೀರದ ಬಗ್ಗೆ ಅತ್ಯಂತ ವಿಶ್ವಾಸಾರ್ಹ ಮಾಹಿತಿಯು ಸ್ಥಳೀಯ ವರದಿಗಾರರಿಂದ ಮಾತ್ರ ಬರುತ್ತದೆ. ಆದರೆ ಅವರು ಸಾಮಾನ್ಯವಾಗಿ ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರದ ಪತ್ರಿಕೆಗಳು ಮತ್ತು ವೆಬ್‌ಸೈಟ್‌ಗಳಿಗೆ ಬರೆಯುತ್ತಾರೆ. ಕಾಶ್ಮೀರದ ವಿಷಯದಲ್ಲಿ, ವಿಶೇಷವಾಗಿ ಎನ್‌ಸಿಆರ್‌ನಲ್ಲಿರುವ ಗೋದಿ ಮೀಡಿಯಾದ ದಡ್ಡತನ ಸಂಪೂರ್ಣವಾಗಿ ಕಾಣಿಸುತ್ತದೆ. ಕೇಂದ್ರ ಸರಕಾರವನ್ನು ಕೆಟ್ಟದಾಗಿ ತೋರಿಸಬಹುದಾದ ವರದಿಗಳನ್ನು ಪತ್ರಿಕೆಗಳು ನಿಗ್ರಹಿಸುತ್ತವೆ ಮತ್ತು ದೂರದರ್ಶನ ವಾಹಿನಿಗಳು ಸುಳ್ಳುಗಳನ್ನು ಸಕ್ರಿಯವಾಗಿ ಪ್ರಸಾರ ಮಾಡುತ್ತವೆ. ಗಡಿಯಾಚೆಯಿಂದ ಶೆಲ್ ದಾಳಿಯಲ್ಲಿ ಸಾವನ್ನಪ್ಪಿದ ಪೂಂಚ್‌ನ ಶಾಂತಿಪ್ರಿಯ ಭಾರತೀಯ ನಾಗರಿಕನನ್ನು ಪಾಕಿಸ್ತಾನಿ ಭಯೋತ್ಪಾದಕ ಎಂದು ರಾಕ್ಷಸೀಕರಿಸಿದ್ದು ಇದಕ್ಕೊಂದು ಉದಾಹರಣೆ.

ಆಗಸ್ಟ್ 5, 2019ರಿಂದಲೂ ಕೇಂದ್ರ ಸರಕಾರವು ಕಾಶ್ಮೀರಿಗಳು ಸ್ವತಂತ್ರ ಮತ್ತು ಸ್ವಾಭಿಮಾನಿ ನಾಗರಿಕರಲ್ಲ, ಬದಲಾಗಿ ವಿಧೇಯ ಪ್ರಜೆಗಳಾಗಿರಬೇಕು ಎಂದು ಬಯಸುತ್ತದೆ ಎಂಬುದು, ಅದು ಮಾಡಿದ ಮತ್ತು ಮಾಡಿರದ ಎಲ್ಲದರಿಂದಲೂ ಸ್ಪಷ್ಟವಾಗಿದೆ. ದುರಂತವೆಂದರೆ, ಜನಸಾಮಾನ್ಯರು ಶೋಚನೀಯವಾಗಿ ದೊಡ್ಡ ಸಂಖ್ಯೆಯಲ್ಲಿ ಕಾಶ್ಮೀರದ ಜನರ ಕಡೆಗೆ ತಮ್ಮ ದ್ವೇಷವನ್ನು ಪ್ರದರ್ಶಿಸಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಇತರ ರಾಜ್ಯಗಳಲ್ಲಿನ ಕಾಶ್ಮೀರಿ ವಿದ್ಯಾರ್ಥಿಗಳನ್ನು ನಿಂದಿಸಿ ಕಾಲೇಜುಗಳಿಂದ ಹೊರಗಟ್ಟಲಾಯಿತು. ಪ್ರವಾಸಿಗರನ್ನು ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಕರೆದೊಯ್ಯಲು ಅನುಕರಣೀಯ ಧೈರ್ಯ ಮತ್ತು ಸಭ್ಯತೆ ತೋರಿದ ಕಾಶ್ಮೀರಿಗಳಿಗೆ ಒಂದು ಕೃತಜ್ಞತೆ ಹೇಳುವುದನ್ನೂ ಜನಸಾಮಾನ್ಯರು ಮರೆತರು. ಸಾಮಾಜಿಕ ಮಾಧ್ಯಮಗಳಲ್ಲಿ ಕಾಶ್ಮೀರಿಗಳನ್ನು ಸತತವಾಗಿ ಕೆಟ್ಟದಾಗಿ ಚಿತ್ರಿಸುವುದೇ ನಡೆಯಿತು. ಕಾಶ್ಮೀರಿಗಳನ್ನು ಅವರು ಮುಸ್ಲಿಮರಾಗಿರುವ ಕಾರಣದಿಂದಲೇ ವಿಶ್ವಾಸದ್ರೋಹಿಗಳು ಮತ್ತು ವಿಶ್ವಾಸಕ್ಕೆ ಅರ್ಹರಲ್ಲದವರು ಎಂದು ಹಲವಾರು ಹಿಂದೂಗಳು ಗೊತ್ತಿಲ್ಲದೆ ಅಥವಾ ಗೊತ್ತಿದ್ದೇ ಬಿಂಬಿಸುವ ಮನಸ್ಥಿತಿಯವರಾಗಿದ್ದಾರೆ.

ಕಾಶ್ಮೀರದ ವಿಷಯಕ್ಕೆ ಬಂದಾಗ ಪಾಕಿಸ್ತಾನವು ಒಂದು ಕಾಲದಲ್ಲಿ ದುರ್ಬಲವಾದ ಕಾನೂನು ಪ್ರಕರಣವನ್ನು ಹೊಂದಿದ್ದಿರಬಹುದು. ಆದರೆ ಭಯೋತ್ಪಾದಕರು ಮತ್ತು ಭಯೋತ್ಪಾದನೆ ಕುರಿತ ನಿರಂತರ ಮತ್ತು ಸಿನಿಕತನದ ಪ್ರಚಾರದಿಂದ, ಅದು ಬಹಳ ಹಿಂದೆಯೇ ಆ ಪ್ರದೇಶ ಮತ್ತು ಅದರ ಜನರ ಮೇಲಿನ ಯಾವುದೇ ಹಕ್ಕನ್ನು ಕಳೆದುಕೊಂಡಿದೆ. ಆದರೆ, ಭಾರತೀಯರು ತಮ್ಮದೇ ಆದ ಪ್ರಕರಣವನ್ನು ಹೆಚ್ಚು ಪ್ರಬಲ ಮತ್ತು ಹೆಚ್ಚು ವಿಶ್ವಾಸಾರ್ಹವಾಗಿಸಲು ಮತ್ತು ತಾವು ಎತ್ತಿಹಿಡಿಯುವುದಾಗಿ ಹೇಳಿಕೊಳ್ಳುವ ಮೌಲ್ಯಗಳಿಗೆ ಹೆಚ್ಚು ಯೋಗ್ಯರೆನ್ನಿಸಿಕೊಳ್ಳಲು, ಜಮ್ಮು-ಕಾಶ್ಮೀರದ ಜನರಿಗೆ ಸರಕಾರಗಳು ಸತತವಾಗಿ ನೀಡಿದ ಭರವಸೆಗಳನ್ನು ಈಡೇರಿಸುವುದು ಆಗಬೇಕಿತ್ತು. ಆ ಸಮಯ ಕಳೆದಿದೆ. ರಾಜ್ಯ ಸ್ಥಾನಮಾನವನ್ನು ಮರಳಿಸುವುದು ಮತ್ತು ಅದನ್ನು ತಕ್ಷಣವೇ ಮಾಡುವುದು ಅಗತ್ಯವಾದ ಮೊದಲ ಹೆಜ್ಜೆಯಾಗಿದೆ. ಅದೇ ಸಮಯದಲ್ಲಿ, ಕಾಶ್ಮೀರ ಮತ್ತು ಕಾಶ್ಮೀರಿಗಳು ಭಾರತ ಗಣರಾಜ್ಯದ ಭಾಗವೆಂದು ಸರಿಯಾಗಿ, ಗೌರವಯುತವಾಗಿ ಭಾವಿಸಲು ನಾವು ಇನ್ನೂ ಹೆಚ್ಚಿನದನ್ನು ಮಾಡಬೇಕಾಗಿದೆ.

share
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
Next Story
X