ಎಎಪಿ ಬಗ್ಗೆ ಮತ್ತೊಮ್ಮೆ ಮೆಚ್ಚುಗೆ

2018ರ ಬೋರ್ಡ್ ಪರೀಕ್ಷೆಗಳಲ್ಲಿ, ದಿಲ್ಲಿ ಸರಕಾರಿ ಶಾಲೆಗಳು ಶೇ. 96 ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದವು ಇದು ಕಳೆದ ಇಪ್ಪತ್ತೊಂದು ವರ್ಷಗಳಲ್ಲಿಯೇ ಅತ್ಯುತ್ತಮವಾಗಿತ್ತು. ಗಮನಾರ್ಹವಾಗಿ, ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದವು. ಆದರೆ ಈ ಸ್ಪಷ್ಟವಾದ ಸಂಖ್ಯಾತ್ಮಕ ಫಲಿತಾಂಶಗಳನ್ನು ಮೀರಿ, ಸುಧಾರಣೆಗಳು ಇಡೀ ಶಾಲಾ ಅನುಭವವನ್ನು ಹೆಚ್ಚು ಆನಂದದಾಯಕವಾಗಿಸಿದ್ದವು. ಅಲ್ಲದೆ, ಮಕ್ಕಳು, ಶಿಕ್ಷಕರು ಮತ್ತು ಪೋಷಕರಿಗೆ ಒತ್ತಡ ಕಡಿಮೆಯಿರುವಂತೆ ಮಾಡಿದ್ದವು.
ಆಮ್ ಆದ್ಮಿ ಪಕ್ಷದಿಂದ ಏಳು ರಾಜ್ಯಸಭಾ ಸದಸ್ಯರು ಬಿಜೆಪಿಗೆ ಪಕ್ಷಾಂತರಗೊಂಡಿರುವುದಕ್ಕೆ ಮೂರು ರೀತಿಯ ಪ್ರತಿಕ್ರಿಯೆಗಳಿವೆ. ಮೊದಲನೆಯದು, ಪಕ್ಷಾಂತರಿಗಳನ್ನು ಗುರಿಯಾಗಿರಿಸಿಕೊಂಡಿದ್ದು, ಅವರನ್ನು ನಾಚಿಕೆಯಿಲ್ಲದ ಅವಕಾಶವಾದಿಗಳೆಂದು ಪರಿಗಣಿಸಲಾಗುತ್ತಿದೆ. ಎರಡನೆಯದು, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್ ಅವರನ್ನು ಗುರಿಯಾಗಿರಿಸಿಕೊಂಡಿದ್ದು, ಅವರು ತಮ್ಮ ಸುತ್ತಲೂ ತಮ್ಮ ಆರಾಧಕರನ್ನು ಇಟ್ಟುಕೊಳ್ಳಲು ನೋಡಿದರು ಮತ್ತು ಇದನ್ನು ಮಾಡುವಾಗ ಅನೇಕ ಸಮರ್ಥ ವ್ಯಕ್ತಿಗಳನ್ನು ತಮ್ಮ ಪಕ್ಷದಿಂದ ಓಡಿಸಿದರು ಎಂದು ಹೇಳಲಾಗುತ್ತದೆ. ಮೂರನೆಯದು, ಹಿಂದುತ್ವದ ಯಾವುದೇ ಸಂವೇದನಾಶೀಲ ವಿರೋಧಿ ಮೊದಲಿಗೆ ಎಎಪಿಗೆ ಮತ ಹಾಕಬಾರದಿತ್ತು ಎಂಬ ವಾದವನ್ನು ಮುಂದಿಡುತ್ತದೆ. ಏಕೆಂದರೆ ಈ ಪಕ್ಷವು ತನ್ನ ಬೇರುಗಳನ್ನು ಹೊಂದಿದ್ದ ಭ್ರಷ್ಟಾಚಾರ ವಿರೋಧಿ ಆಂದೋಲನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘ ಬೆಂಬಲಿಸಿತ್ತು ಮತ್ತು ದಿಲ್ಲಿಯ ಮುಖ್ಯಮಂತ್ರಿಯಾಗಿ ಕೇಜ್ರಿವಾಲ್ ಪದೇ ಪದೇ ತಮ್ಮ ಹಿಂದೂ ರುಜುವಾತುಗಳನ್ನು ಪ್ರದರ್ಶಿಸಿದರು. ಮತ್ತು ಶಾಹೀನ್‌ಬಾಗ್‌ನಲ್ಲಿ ಧಾರ್ಮಿಕ ತಾರತಮ್ಯದ ವಿರುದ್ಧದ ಅಹಿಂಸಾತ್ಮಕ ಪ್ರತಿಭಟನಾಕಾರರನ್ನು ಭೇಟಿ ಮಾಡಲಿಲ್ಲ.
ಈ ಪ್ರತಿಯೊಂದು ಟೀಕೆಗಳೂ ಸರಿಯಾಗಿಯೇ ಇವೆ. ಪಕ್ಷಾಂತರಿಗಳು ನೈತಿಕ ಅಥವಾ ಸೈದ್ಧಾಂತಿಕ ದೃಢನಿಶ್ಚಯಕ್ಕಿಂತ ಭಯ ಅಥವಾ ದುರಾಸೆಯಿಂದ ಪ್ರೇರಿತರಾಗಿರುವಂತೆ ಕಾಣುತ್ತಿದೆ. ಪಕ್ಷದಲ್ಲಿರುವ ಇತರರು ಹೆಚ್ಚು ಗಮನ ಸೆಳೆಯುವುದು ಕೇಜ್ರಿವಾಲ್ ಅವರಲ್ಲಿ ಅಸುರಕ್ಷತೆಯ ಭಾವನೆಗೆ ಕಾರಣವಾಗುತ್ತದೆ ಮತ್ತು ಆಡಳಿತ ಪಕ್ಷದ ಅಪಾಯಕಾರಿ ಬಹುಸಂಖ್ಯಾತವಾದದ ವಿರುದ್ಧ ನಿಲ್ಲುವಲ್ಲಿ ಎಎಪಿ ದೃಢವಾಗಿಲ್ಲ. ಅದೇನೇ ಇದ್ದರೂ, ಅನೇಕರಿಗೆ ಈಗ ಎದುರಿಸುತ್ತಿರುವ ಅಸ್ತಿತ್ವವಾದದ ಬಿಕ್ಕಟ್ಟು ಪರಪೀಡಾನಂದದ ಭಾವನೆಯನ್ನು ಪ್ರೇರೇಪಿಸುತ್ತದೆ. ತಿರಸ್ಕಾರವನ್ನು ಉಂಟುಮಾಡುತ್ತದೆ. ಆದರೆ ಈ ಲೇಖಕನಿಗೆ ಇದು ಒಂದು ನಿರ್ದಿಷ್ಟ ದುಃಖವನ್ನು ಉಂಟುಮಾಡುತ್ತದೆ. ಏಕೆಂದರೆ ಎಎಪಿ ತನ್ನ ಅಸ್ತಿತ್ವದ ಹದಿಮೂರೂವರೆ ವರ್ಷಗಳಲ್ಲಿ ಭಾರತೀಯ ಪ್ರಜಾಪ್ರಭುತ್ವವನ್ನು ಬಲಪಡಿಸಲು ಸಹಾಯ ಮಾಡಿದ ಕೆಲಸಗಳಿವೆ.
ಎಎಪಿಯನ್ನು ಹೆಚ್ಚು ದಯೆಯಿಂದ ನೋಡಲು ಒಂದು ಕಾರಣವೆಂದರೆ, ಅದರ ಹಿಂದಿನ ಚುನಾವಣಾ ಯಶಸ್ಸಿನ ಸ್ವರೂಪ. ಯಾವುದೇ ಬಲವಾದ ಬಂಡವಾಳ ಅಥವಾ ಸಾಂಸ್ಥಿಕ ಮೂಲಸೌಕರ್ಯವಿಲ್ಲದ, ಸಂಪೂರ್ಣವಾಗಿ ಹೊಸದಾದ ಒಂದು ಪಕ್ಷವು ದಿಲ್ಲಿಯಲ್ಲಿ ಸತತ ಎರಡು ಚುನಾವಣೆಗಳನ್ನು ಗೆಲ್ಲುವುದು ಅತ್ಯಂತ ಪ್ರಭಾವಶಾಲಿ ಸಾಧನೆಯಾಗಿದೆ. ಅದರ ಗೆಲುವಿನ ಮಟ್ಟವು ದಿಗ್ಭ್ರಮೆಗೊಳಿಸುವಂತಿತ್ತು. 2015ರಲ್ಲಿ 70 ಸ್ಥಾನಗಳಲ್ಲಿ 67 ಮತ್ತು 2020ರಲ್ಲಿ 70ರಲ್ಲಿ 62. ಇದಲ್ಲದೆ, ಅದು ದಿಲ್ಲಿಯಲ್ಲಿ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಾಬಲ್ಯ ಹೊಂದಿದ್ದ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಸೋಲಿಸಿತು. ನಂತರ 2022ರಲ್ಲಿ ಎಎಪಿ ಪಂಜಾಬ್‌ನಲ್ಲಿಯೂ ಅಧಿಕಾರಕ್ಕೆ ಬಂತು. ಡೇವಿಡ್ v/s ಗೋಲಿಯಾತ್ ಶೈಲಿಯ ಈ ಹ್ಯಾಟ್ರಿಕ್ ಗೆಲುವುಗಳು ನಮ್ಮ ಪ್ರಜಾಪ್ರಭುತ್ವ ಇತಿಹಾಸದಲ್ಲಿ ಅಭೂತಪೂರ್ವವಾಗಿದ್ದು, ಭಾರತೀಯ ರಾಜಕೀಯ ಜಗತ್ತಿನಲ್ಲಿ ಹಣ ಮತ್ತು ಸ್ನಾಯುಬಲವೇ ಯಾವಾಗಲೂ ಮೇಲುಗೈ ಸಾಧಿಸುವುದಿಲ್ಲ ಎಂದು ಭಾವಿಸುವವರಿಗೆ ಇದು ಸಮರ್ಥನೆಯನ್ನು ನೀಡಿತು.
ದಿಲ್ಲಿಯಲ್ಲಿ ಅಧಿಕಾರದಲ್ಲಿದ್ದಾಗ ಎಎಪಿ ನಡೆಸಿದ ಆಡಳಿತದ ದಾಖಲೆಯು, ಎಎಪಿಯನ್ನು ಮೆಚ್ಚಿಕೊಳ್ಳಲು ಮತ್ತೊಂದು ಮತ್ತು ಇನ್ನೂ ಮುಖ್ಯವಾದ ಕಾರಣವಾಗಿದೆ. ಶಾಲಾ ಶಿಕ್ಷಣವನ್ನು ಸುಧಾರಿಸುವಲ್ಲಿ ಅದರ ಪ್ರಭಾವಶಾಲಿ ಕೆಲಸವನ್ನು ನಾನು ವಿಶೇಷವಾಗಿ ಉಲ್ಲೇಖಿಸುತ್ತೇನೆ. 2015ರಲ್ಲಿ ಅಧಿಕಾರಕ್ಕೆ ಬಂದ ನಂತರ, ಎಎಪಿ ಈ ವಲಯಕ್ಕೆ ಹಣಕಾಸಿನ ಹಂಚಿಕೆಯನ್ನು ದ್ವಿಗುಣಗೊಳಿಸಿತು ಮತ್ತು ಶಾಲಾ ಮೂಲಸೌಕರ್ಯವನ್ನು ಸುಧಾರಿಸುವತ್ತ ಸಾಗಿತು. ಹೊಸ ಶಾಲೆಗಳು ಮತ್ತು ತರಗತಿ ಕೊಠಡಿಗಳನ್ನು ನಿರ್ಮಿಸಲಾಯಿತು ಮತ್ತು ಅಸ್ತಿತ್ವದಲ್ಲಿರುವ ಕಟ್ಟಡಗಳ ನಿರ್ವಹಣೆಯನ್ನು ಆಮೂಲಾಗ್ರವಾಗಿ ಸುಧಾರಿಸಲಾಯಿತು. ಶಾಲಾ ಪ್ರಾಂಶುಪಾಲರಿಗೆ ಅಧಿಕಾರ ನೀಡಲಾಯಿತು. ದೊಡ್ಡ ವಿವೇಚನಾ ಬಜೆಟ್ ನೀಡಲಾಯಿತು ಮತ್ತು ಶೈಕ್ಷಣಿಕ ಅಧಿಕಾರಶಾಹಿಯ ಆಶಯಗಳ ಮೇಲೆ ಕಡಿಮೆ ಅವಲಂಬನೆ ಕಂಡಿತು.
ಎಎಪಿಯ ಶೈಕ್ಷಣಿಕ ಸುಧಾರಣೆಗಳು ಸಾರ್ವಜನಿಕ ಶಾಲೆಗಳಿಗೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡುವ ಮತ್ತು ಕಲಿಕೆಯ ಫಲಿತಾಂಶಗಳನ್ನು ಸುಧಾರಿಸಲು ಶಿಕ್ಷಕರನ್ನು ಪ್ರೇರೇಪಿಸುವ ಗುರಿಯನ್ನು ಹೊಂದಿದ್ದವು. ಯಾಮಿನಿ ಅಯ್ಯರ್ ತಮ್ಮ Lessons in State Capacity from Delhi’s Schools ಪುಸ್ತಕದಲ್ಲಿ ಬರೆದಿರುವಂತೆ, ಈ ಬೋಧನಾ ಕಾರ್ಯಕ್ರಮವು ಎಲ್ಲಾ ವಿದ್ಯಾರ್ಥಿಗಳಲ್ಲಿ ಓದುವುದು, ಬರೆಯುವುದು, ಅಂಕಗಣಿತದಲ್ಲಿ ಬಲವಾದ ಅಡಿಪಾಯವನ್ನು ನಿರ್ಮಿಸುವುದು ಮತ್ತು ಪ್ರಸ್ತುತ ಕಲಿಕಾ ಮಟ್ಟಗಳು ಮತ್ತು ಅವರ ವರ್ಗದ ಶೈಕ್ಷಣಿಕ ಬೇಡಿಕೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿತ್ತು. ಈ ಗುರಿಗಳನ್ನು ಸಾಧಿಸಲು, ಕಲಿಕೆಯ ಮಟ್ಟಗಳಿಗೆ ಅನುಗುಣವಾಗಿ ತರಗತಿಗಳನ್ನು ಮೂರು ಸಮೂಹಗಳಾಗಿ ಮರುಸಂಘಟಿಸಲಾಯಿತು. ಹೊಸ ಆವಿಷ್ಕಾರಗಳಲ್ಲಿ ಈ ಕಾರ್ಯಕ್ರಮಗಳನ್ನು ಜಾರಿಗೆ ತರಲೆಂದೇ ವಿಶೇಷವಾಗಿ ಆಯ್ಕೆ ಮಾಡಿದ ಮಾರ್ಗದರ್ಶಕ ಶಿಕ್ಷಕರ ವರ್ಗ, ಕಿರಿಯ ವಿದ್ಯಾರ್ಥಿಗಳಿಗೆ ಬೇಸಿಗೆ ಶಿಬಿರಗಳು ಮತ್ತು ಓದುವ ಮೇಳಗಳು, ಹೊಸ ಪಠ್ಯಪುಸ್ತಕಗಳ ತಯಾರಿಕೆ ಮತ್ತು ವಿದ್ಯಾರ್ಥಿಗಳು ಗುಂಪು ಚರ್ಚೆಗಳಲ್ಲಿ ತೊಡಗಿಸಿಕೊಳ್ಳುವ ಜೀವನ ಪಾಠದ ಕಥೆಗಳ ಆಧಾರಿತ ಸಂತೋಷ ಪಠ್ಯಕ್ರಮ ಸೇರಿವೆ. ಈ ವಿಭಿನ್ನ ಆದರೆ ಪೂರಕ ನಾವೀನ್ಯತೆಗಳನ್ನು ಹೇಗೆ ಕಾರ್ಯಗತಗೊಳಿಸಲಾಯಿತು ಮತ್ತು ಬೋಧನೆ ಮತ್ತು ಕಲಿಕೆಯ ಪರಿಸರದಲ್ಲಿ ಅವು ಪರಿಣಾಮ ಬೀರಲು ಸಾಧ್ಯವಾದ ಬದಲಾವಣೆಗಳನ್ನು ಅಯ್ಯರ್ ಅವರ ಪುಸ್ತಕವು ವಿವರವಾಗಿ ದಾಖಲಿಸುತ್ತದೆ. ಅವರ ವಿವರಣೆಯು ಯೋಜನೆಯ ಟೀಕಾಕಾರರ ಕಡೆ ಸರಿಯಾದ ಗಮನವನ್ನು ನೀಡುತ್ತದೆ. ಅದೇನೇ ಇದ್ದರೂ, ದಿಲ್ಲಿಯಲ್ಲಿ ಎಎಪಿ ಆನುವಂಶಿಕವಾಗಿ ಪಡೆದ ಶಿಕ್ಷಣ ವ್ಯವಸ್ಥೆಯು ‘ಮುಳುಗುವ ಹಡಗು’ ಎಂದು ಸ್ಪಷ್ಟಪಡಿಸುತ್ತದೆ. ಹೊಸ ಸರಕಾರವು ಅದನ್ನು ಹೊಸ ದಿಕ್ಕಿನಲ್ಲಿ ಮುನ್ನಡೆಸುವಾಗ ಸ್ಥಿರಗೊಳಿಸಲು ಸಾಧ್ಯವಾಯಿತು. ಎಎಪಿಯ ಸುಧಾರಣೆಗಳ ಪ್ರಾಥಮಿಕ ಸಾಧನೆ ಎಂದರೆ, ಶಿಕ್ಷಣ ವ್ಯವಸ್ಥೆಯೊಳಗೆ ಹೊಸ ಶಬ್ದಕೋಶವನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ಪರಿಚಯಿಸುವುದು ಎಂದು ಅವರು ಬರೆಯುತ್ತಾರೆ. 2016ರಿಂದ 2020ರ ಅವಧಿಯಲ್ಲಿ ದಿಲ್ಲಿಯ ಶಿಕ್ಷಣ ಕ್ಷೇತ್ರದಲ್ಲಿ ಏನು ಮಾಡಲಾಗಿದೆಯೋ ಅದು, ನಾವು ರಾಜ್ಯದಲ್ಲಿ ಹೂಡಿಕೆ ಮಾಡಿ ಅದರ ಪ್ರಜಾಸತ್ತಾತ್ಮಕ ಪ್ರೇರಣೆಯನ್ನು ಕಾಪಾಡಿಕೊಂಡರೆ ಏನು ಮಾಡಬಹುದು ಎಂಬುದರ ಕುರಿತು ಹೆಚ್ಚು ಆಶಾದಾಯಕ ನೋಟವನ್ನು ನೀಡುತ್ತದೆ ಎಂದು ಅಯ್ಯರ್ ಬರೆಯುತ್ತಾರೆ.
ಈ ಸುಧಾರಣೆಗಳ ಹಿಂದಿನ ಪ್ರಮುಖ ಪ್ರೇರಕರು ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ. ಸಿಸೋಡಿಯಾ ಅವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಶಿಕ್ಷಣ ತಜ್ಞರೊಬ್ಬರು, ಈ ವಲಯದ ಬಗೆಗಿನ ಅವರ ದೃಷ್ಟಿಕೋನದಲ್ಲಿ ನಾಲ್ಕು ವೈಶಿಷ್ಟ್ಯಗಳು ಗುರುತಿಸಲ್ಪಟ್ಟಿವೆ ಎಂದು ನನಗೆ ಹೇಳಿದರು. ಮೊದಲನೆಯದಾಗಿ, ಅವರಿಗೆ ಶಿಕ್ಷಕರ ಬಗ್ಗೆ ನಿಜವಾದ ಮೆಚ್ಚುಗೆ ಮತ್ತು ಗೌರವವಿತ್ತು. ಎರಡನೆಯದಾಗಿ, ಪೋಷಕರು ಮತ್ತು ಅವರ ಮಕ್ಕಳು ಅಧ್ಯಯನ ಮಾಡಿದ ಶಾಲೆಗಳ ನಡುವೆ ಬಲವಾದ ಸಂಪರ್ಕವನ್ನು ಬೆಳೆಸಲು ಸಚಿವರು ಪ್ರಯತ್ನಿಸಿದರು. ಮೂರನೆಯದಾಗಿ, ಶಾಲೆಗಳು ಎಲ್ಲಕ್ಕಿಂತ ಹೆಚ್ಚಾಗಿ ಮಕ್ಕಳ ಮೇಲೆ ಗಮನಹರಿಸಬೇಕು, ಹಿಂದುಳಿದಿದ್ದವರನ್ನು ಪೋಷಿಸಬೇಕು, ಅವರಿಗೆ ಬೆಳೆಯಲು ಅವಕಾಶಗಳನ್ನು ಒದಗಿಸಬೇಕು ಎಂದು ಅವರು ಒತ್ತಾಯಿಸಿದರು. ನಾಲ್ಕನೆಯದಾಗಿ, ಪಠ್ಯಕ್ರಮ ಮತ್ತು ಸಂಪೂರ್ಣ ಶೈಕ್ಷಣಿಕ ಪ್ರಕ್ರಿಯೆಯನ್ನು ಮಾನವೀಯಗೊಳಿಸಲು ಅವರು ಶ್ರದ್ಧೆಯಿಂದ ಕೆಲಸ ಮಾಡಿದರು. ಅವರದು ಶಿಕ್ಷಣಕ್ಕೆ ನಿರ್ವಹಣಾ ಅಥವಾ ತಾಂತ್ರಿಕ ವಿಧಾನವಲ್ಲ, ಬದಲಾಗಿ ಜನ ಕೇಂದ್ರಿತ ವಿಧಾನವಾಗಿತ್ತು. ಶಾಲಾ ವ್ಯವಸ್ಥೆಯಲ್ಲಿನ ಪ್ರಮುಖ ಪಾಲುದಾರರಾದ ಶಿಕ್ಷಕರು, ಪೋಷಕರು ಮತ್ತು ಮಕ್ಕಳ ಬಗ್ಗೆ ಸರಿಯಾದ ಗಮನ ಹರಿಸುತ್ತಿದ್ದರು.
ನಾನು ಐದನೇ ವೈಶಿಷ್ಟ್ಯವನ್ನು ಸೇರಿಸುತ್ತೇನೆ: ಭಾರತೀಯ ರಾಜಕಾರಣಿಗಳಲ್ಲಿ ಈ ಕ್ಷೇತ್ರದ ಅತ್ಯುತ್ತಮ ವಿದ್ವಾಂಸರು ಮತ್ತು ಸರಕಾರೇತರ ಸಂಸ್ಥೆಗಳಿಂದ ಸಲಹೆ ಕೇಳುವ ಮತ್ತು ಸ್ವೀಕರಿಸುವ ಇಚ್ಛಾಶಕ್ತಿ ಬಹಳ ಅಪರೂಪ. ಇಂಥ ಸನ್ನಿವೇಶದಲ್ಲಿ ಸಿಸೋಡಿಯಾ ಅಪರೂಪದ ರಾಜಕಾರಣಿ. ಅವರು ಸುಲಭವಾಗಿ ಸಂಪರ್ಕಿಸಬಹುದಾದವರಾಗಿದ್ದರು. ಅವರು ಕ್ಷೇತ್ರದಲ್ಲಿ ಕಾಣಿಸುತ್ತಿದ್ದರು. ನಿಯಮಿತವಾಗಿ ಶಾಲೆಗಳಿಗೆ ಭೇಟಿ ನೀಡುತ್ತಿದ್ದರು. ಶಿಕ್ಷಕರು ಮತ್ತು ಪ್ರಾಂಶುಪಾಲರೊಂದಿಗೆ ಸಭೆಗಳನ್ನು ನಡೆಸುತ್ತಿದ್ದರು. ಇದಲ್ಲದೆ, ಅವರು ಶಿಕ್ಷಣದ ಬಗ್ಗೆ ಅಷ್ಟೇ ಉತ್ಸಾಹ ಹೊಂದಿರುವ ತಂಡವನ್ನು ತಮ್ಮ ಸುತ್ತಲೂ ನಿರ್ಮಿಸಿಕೊಂಡರು.
2018ರ ಬೋರ್ಡ್ ಪರೀಕ್ಷೆಗಳಲ್ಲಿ, ದಿಲ್ಲಿ ಸರಕಾರಿ ಶಾಲೆಗಳು ಶೇ. 96 ಉತ್ತೀರ್ಣ ಶೇಕಡಾವಾರು ಪ್ರಮಾಣವನ್ನು ಹೊಂದಿದ್ದವು ಇದು ಕಳೆದ ಇಪ್ಪತ್ತೊಂದು ವರ್ಷಗಳಲ್ಲಿಯೇ ಅತ್ಯುತ್ತಮವಾಗಿತ್ತು. ಗಮನಾರ್ಹವಾಗಿ, ಸರಕಾರಿ ಶಾಲೆಗಳು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸಿದವು. ಆದರೆ ಈ ಸ್ಪಷ್ಟವಾದ ಸಂಖ್ಯಾತ್ಮಕ ಫಲಿತಾಂಶಗಳನ್ನು ಮೀರಿ, ಸುಧಾರಣೆಗಳು ಇಡೀ ಶಾಲಾ ಅನುಭವವನ್ನು ಹೆಚ್ಚು ಆನಂದದಾಯಕವಾಗಿಸಿದ್ದವು. ಅಲ್ಲದೆ, ಮಕ್ಕಳು, ಶಿಕ್ಷಕರು ಮತ್ತು ಪೋಷಕರಿಗೆ ಒತ್ತಡ ಕಡಿಮೆಯಿರುವಂತೆ ಮಾಡಿದ್ದವು.
ಈ ಶೈಕ್ಷಣಿಕ ಸುಧಾರಣೆಗಳು 2020ರ ನಂತರ ಹಿನ್ನಡೆಯನ್ನು ಅನುಭವಿಸಿದವು. ಇದಕ್ಕೆ ಕಾರಣ, ಕೋವಿಡ್ ಸಾಂಕ್ರಾಮಿಕ ರೋಗ ಎಂಬುದು ಒಂದು ಕಾರಣವಾದರೆ, ಆ ವರ್ಷ ಎಎಪಿಯ ಮರುಚುನಾವಣೆಯು ಬಿಜೆಪಿ ನೇತೃತ್ವದ ಕೇಂದ್ರ ಸರಕಾರವನ್ನು ಅದರ ವಿರುದ್ಧ ಇನ್ನಷ್ಟು ದೃಢವಾಗಿ ನಿಲ್ಲಿಸಿತ್ತೆಂಬುದು ಮತ್ತೊಂದು ಕಾರಣ. 2022ರಲ್ಲಿ ಶಾಲಾ ಮೂಲಸೌಕರ್ಯವನ್ನು ಸುಧಾರಿಸುವಲ್ಲಿ ಶಿಕ್ಷಣ ಸಚಿವರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಲೋಕೋಪಯೋಗಿ ಸಚಿವ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಯಿತು. 2023ರಲ್ಲಿ ಸಿಸೋಡಿಯಾ ಅವರನ್ನು ಜೈಲಿಗೆ ಕಳುಹಿಸಲಾಯಿತು ಮತ್ತು 2024ರಲ್ಲಿ ಮುಖ್ಯಮಂತ್ರಿಯನ್ನು ಜೈಲಿಗೆ ಹಾಕಲಾಯಿತು. ಕೇಂದ್ರ ಸರಕಾರದ ಈ ಕೃತ್ಯಗಳು ರಾಜಕೀಯ ಪೈಪೋಟಿ ಮತ್ತು ಸೇಡಿನ ಮನೋಭಾವದಿಂದ ಪ್ರೇರಿತವಾಗಿವೆ ಮತ್ತು ಇದರ ಒಂದು ಪರಿಣಾಮವೆಂದರೆ ಎಎಪಿ ಈ ಹಿಂದೆ ನಶಿಸಿ ಹೋಗಿದ್ದ ಸಾರ್ವಜನಿಕ ಶಾಲಾ ವ್ಯವಸ್ಥೆಯನ್ನು ಸುಧಾರಿಸಲು ಪ್ರಯತ್ನಿಸುತ್ತಿದ್ದ ದೂರದೃಷ್ಟಿಯ ಸುಧಾರಣೆಗಳ ನಿಧಾನಗತಿ.
ಅಧಿಕಾರದಲ್ಲಿದ್ದಾಗ, ಎಎಪಿ ಸಾರ್ವಜನಿಕ ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಪ್ರಯತ್ನಿಸಿತು. ಐಐಟಿ ದಿಲ್ಲಿಯ ಸಂಶೋಧಕರು 2019ರಲ್ಲಿ ನಡೆಸಿದ ಕ್ಷೇತ್ರ ಅಧ್ಯಯನವು ಹೀಗೆ ಹೇಳುತ್ತದೆ: ‘‘ನಮ್ಮ ಮೌಲ್ಯಮಾಪನದ ಆಧಾರದ ಮೇಲೆ, ಮೊಹಲ್ಲಾ ಚಿಕಿತ್ಸಾಲಯಗಳು ಪ್ರಾಥಮಿಕ ಆರೋಗ್ಯ ಸೇವೆಯ ಪ್ರವೇಶ ಮತ್ತು ಕೈಗೆಟುಕುವಿಕೆಯಲ್ಲಿ ಸಮಾನತೆಯ ವಿಷಯದಲ್ಲಿ ಉತ್ತಮ ಫಲಿತಾಂಶವನ್ನು ನೀಡುತ್ತಿವೆ. ಈ ಚಿಕಿತ್ಸಾಲಯಗಳು ಹೆಚ್ಚಾಗಿ ಕಳಪೆ ಮೂಲಸೌಕರ್ಯ ಹೊಂದಿರುವ ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ನೆಲೆಗೊಂಡಿರುವುದರಿಂದ, ಅವು ಆರೋಗ್ಯ ಸೇವೆಗಳಿಗೆ ಉತ್ತಮ ಭೌಗೋಳಿಕ ಪ್ರವೇಶವನ್ನು ಖಚಿತಪಡಿಸುತ್ತಿವೆ. ಈ ಚಿಕಿತ್ಸಾಲಯಗಳು ಪ್ರಯಾಣ ಮತ್ತು ಚಿಕಿತ್ಸೆಯನ್ನು ಪಡೆಯಲು ಕಾಯುವ ಸಮಯ ಮತ್ತು ವೆಚ್ಚಗಳನ್ನು ಸಹ ಕಡಿಮೆ ಮಾಡುತ್ತಿವೆ.’’
ಕೇಂದ್ರ ಸರಕಾರದ ನಿರಂತರ ಹಗೆತನದ ನಡುವೆಯೂ ಆರೋಗ್ಯ ಮತ್ತು ಶಿಕ್ಷಣದಲ್ಲಿ ಎಎಪಿಯ ಕೆಲಸಗಳು ನಡೆದವು. ಗೃಹ ಸಚಿವ ಅಮಿತ್ ಶಾ ಅವರು ಲೆಫ್ಟಿನೆಂಟ್ ಗವರ್ನರ್ ಕಚೇರಿಯನ್ನು ಅಸ್ತ್ರವನ್ನಾಗಿ ಬಳಸಿಕೊಂಡು ನಗರದಲ್ಲಿ ದೈನಂದಿನ ಆಡಳಿತವನ್ನು ನಿಷ್ಕ್ರಿಯಗೊಳಿಸಲು ಹೆಚ್ಚಿನ ಸಮಯ ಕೆಲಸ ಮಾಡಿದರು. ಪಂಜಾಬ್‌ನಲ್ಲಿ ಎಎಪಿ ಅಧಿಕಾರಕ್ಕೆ ಬಂದ ನಂತರ ಈ ದ್ವೇಷ ಮತ್ತಷ್ಟು ತೀವ್ರಗೊಂಡಿತು. ನಂತರ ಬಿಜೆಪಿ ಈ ಹೊಸ ಪಕ್ಷವನ್ನು ಉತ್ತರ ಭಾರತದಲ್ಲಿ ತಮ್ಮ ರಾಜಕೀಯ ಪ್ರಾಬಲ್ಯಕ್ಕೆ ದೀರ್ಘಕಾಲೀನ ಬೆದರಿಕೆಯಾಗಿ ನೋಡಲಾರಂಭಿಸಿತು ಮತ್ತು ಅದರ ಪ್ರಮುಖ ನಾಯಕರನ್ನು ಬಂಧಿಸಲು ಪ್ರಾರಂಭಿಸಿತು.
ಎಎಪಿ ಸ್ಪರ್ಧಿಯಲ್ಲದ ನಾಲ್ಕು ರಾಜ್ಯಗಳಲ್ಲಿನ ಚುನಾವಣೆಗಳ ಸಮಯದಲ್ಲಿ ನಾನು ಇದನ್ನು ಬರೆಯುತ್ತಿದ್ದೇನೆ. ಬಿಜೆಪಿ ಹಿಂದೂ ಹೆಮ್ಮೆಯ ಬಗ್ಗೆ ಮಾತನಾಡುತ್ತದೆ ಮತ್ತು ಆರ್ಥಿಕ ಕೊಡುಗೆಗಳನ್ನು ನೀಡುತ್ತದೆ. ಟಿಎಂಸಿ ಮತ್ತು ಡಿಎಂಕೆ ಪ್ರಾದೇಶಿಕ ಹೆಮ್ಮೆಯ ಬಗ್ಗೆ ಮಾತನಾಡುತ್ತವೆ ಮತ್ತು ಆರ್ಥಿಕ ಕೊಡುಗೆಗಳನ್ನು ನೀಡುತ್ತವೆ. ಪ್ರಚಾರದ ಹಾದಿಯಲ್ಲಿ ಶಿಕ್ಷಣ ಮತ್ತು ಆರೋಗ್ಯ ನೀತಿಗಳು ಅಷ್ಟೇನೂ ಗೋಚರಿಸುವುದಿಲ್ಲ. ಆದರೂ ಉತ್ತಮ ಶಾಲೆಗಳು ಮತ್ತು ಆಸ್ಪತ್ರೆಗಳು ನಾಗರಿಕರ ದೀರ್ಘಕಾಲೀನ ಸಂತೋಷಕ್ಕೆ ಖಂಡಿತವಾಗಿಯೂ ಕೆಲವು ರೂಪಾಯಿಗಳನ್ನು ಹೊಂದಿರುವುದಕ್ಕಿಂತ ಅಥವಾ ಇನ್ನೊಬ್ಬರ ವೆಚ್ಚದಲ್ಲಿ ಒಬ್ಬರ ಧರ್ಮವನ್ನು ಉನ್ನತೀಕರಿಸುವುದಕ್ಕಿಂತ ಹೆಚ್ಚು ಮುಖ್ಯವಾಗಿವೆ.






