Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಮಾನ
  5. ಸ್ವರಾಜ್ಯ: ಗಾಂಧಿ ಕಲ್ಪನೆ ಮತ್ತು...

ಸ್ವರಾಜ್ಯ: ಗಾಂಧಿ ಕಲ್ಪನೆ ಮತ್ತು ಪ್ರಸ್ತುತ ಸ್ಥಿತಿ

ರಾಮಚಂದ್ರ ಗುಹಾರಾಮಚಂದ್ರ ಗುಹಾ4 Oct 2026 10:00 AM IST
share
ಸ್ವರಾಜ್ಯ: ಗಾಂಧಿ ಕಲ್ಪನೆ ಮತ್ತು ಪ್ರಸ್ತುತ ಸ್ಥಿತಿ

ಸ್ವತಂತ್ರ ಭಾರತೀಯ ರಾಷ್ಟ್ರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಗಾಂಧಿಯವರು ಎಂದಿಗೂ ನೇರವಾಗಿ ಚಿಂತನೆ ನಡೆಸಿರಲಿಲ್ಲವಾದರೂ, ಈಗ ಜಾರಿಯಲ್ಲಿರುವ ದಂಡನಾತ್ಮಕ ಕಾನೂನುಗಳು ಮತ್ತು ಆಡಳಿತವನ್ನು ಟೀಕಿಸುವವರನ್ನು ವರ್ಷಗಟ್ಟಲೆ ಜೈಲಿನಲ್ಲಿಡಲು ಅವುಗಳ ವ್ಯಾಪಕ ದುರುಪಯೋಗದ ಬಗ್ಗೆ ಅವರು ಖಂಡಿತವಾಗಿಯೂ ನಿರಾಶೆಗೊಳ್ಳುತ್ತಿದ್ದರು ಎಂಬುದು ನಮಗೆ ಖಚಿತ. ಗೃಹ ಸಚಿವರು ಮತ್ತು ಪ್ರಧಾನ ಮಂತ್ರಿಗಳು, ಹಾಗೆಯೇ ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಮುಖ್ಯಮಂತ್ರಿಗಳು ಬಳಸುವ ವಿಭಜಕ ಭಾಷಣಗಳು ಅವರನ್ನು ತೀವ್ರವಾಗಿ ವಿಚಲಿತಗೊಳಿಸುತ್ತಿದ್ದವು.

ಮಹಾತ್ಮಾ ಗಾಂಧಿಯವರು ತಮ್ಮ ಜೀವನದ ಕೊನೆಯ ಮೂರು ದಶಕಗಳನ್ನು ಬ್ರಿಟಿಷ್ ವಸಾಹತುಶಾಹಿ ಆಳ್ವಿಕೆಯಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದರಲ್ಲಿ ಕಳೆದರು. ಈ ಅವಧಿಯಲ್ಲಿ ಅವರು ಆಗಾಗ, ಸ್ವತಂತ್ರ ಭಾರತವು ಹೇಗಿರಬೇಕು ಎಂಬುದರ ಕುರಿತು ಬರೆದರು ಅಥವಾ ಮಾತನಾಡಿದರು. ಆದರೆ, 1922ರ ಮಾರ್ಚ್‌ನಲ್ಲಿ ಅವರು ‘ಸ್ವರಾಜ್ಯ’ (ಸ್ವಯಂ-ಆಳ್ವಿಕೆ) ಕುರಿತು ಸಂಕ್ಷಿಪ್ತ ಹಾಗೂ ಅರ್ಥಪೂರ್ಣ ವ್ಯಾಖ್ಯಾನವೊಂದನ್ನು ನೀಡಿದರು. ಅದನ್ನು ಇಂದಿಗೂ ಪರಿಗಣಿಸುವುದು ಅಗತ್ಯವಾಗಿದೆ. ಅವರು ಹೀಗೆ ಹೇಳಿದರು:

ಅಸ್ಪಶ್ಯತೆಯ ನಿವಾರಣೆ, ಖಾದಿ ಉತ್ಪಾದನೆ, ಹಿಂದೂ-ಮುಸ್ಲಿಮ್ ಏಕತೆ ಮತ್ತು ಅಹಿಂಸೆಯ ಪಾಲನೆ -ಇವು ತಾತ್ಕಾಲಿಕ ಸ್ವರೂಪದ ಕ್ರಮಗಳಲ್ಲ. ಇವು ಸ್ವರಾಜ್ಯದ ಕಟ್ಟಡವು ಶಾಶ್ವತವಾಗಿ ನಿಲ್ಲಬೇಕಾದ ನಾಲ್ಕು ಸ್ತಂಭಗಳಾಗಿವೆ. ಇವುಗಳಲ್ಲಿ ಯಾವುದಾದರೂ ಒಂದನ್ನು ತೆಗೆದುಹಾಕಿದರೂ ಆ ಕಟ್ಟಡವು ಕುಸಿದುಬೀಳುತ್ತದೆ.

ಈ ಹೇಳಿಕೆಯನ್ನು ವಿಶ್ಲೇಷಿಸಿ, ಅದರ ನಾಲ್ಕು ಅಂಶಗಳನ್ನು ಪರಿಶೀಲಿಸೋಣ. ಅಸ್ಪಶ್ಯತೆಯ ನಿವಾರಣೆ ಎಂಬುದನ್ನು ಸಾಮಾಜಿಕ ನ್ಯಾಯದ ಸಾಧನೆಯ ವಿಶಾಲ ಅರ್ಥದಲ್ಲಿ ಗ್ರಹಿಸಬಹುದು. ಇದು ಸಹಜವಾಗಿಯೇ ಕೇವಲ ಜಾತಿ ಆಧಾರಿತ ಅಸಮಾನತೆಗಳನ್ನಷ್ಟೇ ಅಲ್ಲದೆ, ಲಿಂಗ ಆಧಾರಿತ ಅಸಮಾನತೆಗಳನ್ನೂ ಹೋಗಲಾಡಿಸುವುದರ ಬಗ್ಗೆ ಇದೆ. ನೆಹರೂ, ಪಟೇಲ್, ಬೋಸ್ ಮುಂತಾದ ಕಾಂಗ್ರೆಸ್‌ನ ಇತರ ಸವರ್ಣೀಯ ನಾಯಕರಿಗಿಂತ ಭಿನ್ನವಾಗಿ, ಅಸ್ಪಶ್ಯತೆಯ ಆಚರಣೆಯು ಸ್ವಾತಂತ್ರ್ಯಕ್ಕಾಗಿನ ಭಾರತದ ವಾದವನ್ನು ಹೇಗೆ ದುರ್ಬಲಗೊಳಿಸುತ್ತಿತ್ತು ಎಂಬುದರ ಬಗ್ಗೆ ಗಾಂಧಿಯವರಿಗೆ ಸ್ಪಷ್ಟ ಅರಿವಿತ್ತು. ಆದ್ದರಿಂದಲೇ ಅವರು ಅದನ್ನು ‘ಪಾಪ’ ಎಂದು ಕರೆದರು ಮತ್ತು ಅದನ್ನು ಆಚರಿಸುವವರನ್ನು ‘ಹಿಂದೂ ಧರ್ಮದ ಡಯರ್‌ಗಳು’ (ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆಸಿದ ಜನರಲ್ ಡಯರ್‌ನಂತೆ ಧರ್ಮಕ್ಕೆ ಕಳಂಕ ತರುವವರು) ಎಂದು ಬಣ್ಣಿಸಿದರು. ಗಾಂಧಿಯವರು ಮಹಿಳೆಯರ ವಿಮೋಚನೆಯ ಕಡೆಗೂ ಗಮನ ಹರಿಸಿದರು. 1917ರ ಭಾಷಣವೊಂದರಲ್ಲಿ ಅವರು ಹೇಳಿದಂತೆ, ಮಹಿಳೆ ಪುರುಷನ ಸಹಚರಿ, ಸಮಾನ ಬೌದ್ಧಿಕ ಸಾಮರ್ಥ್ಯಗಳನ್ನು ಹೊಂದಿರುವವಳು. ಪುರುಷನ ಚಟುವಟಿಕೆಗಳಲ್ಲಿ ಅತ್ಯಂತ ಸೂಕ್ಷ್ಮವಾದ ವಿವರಗಳಲ್ಲೂ ಭಾಗವಹಿಸುವ ಹಕ್ಕು ಅವಳಿಗಿದೆ ಮತ್ತು ಪುರುಷನಷ್ಟೇ ಸಮಾನ ಸ್ವಾತಂತ್ರ್ಯದ ಹಕ್ಕನ್ನೂ ಅವಳು ಹೊಂದಿದ್ದಾಳೆ. ನಂತರದ ದಶಕಗಳಲ್ಲಿ, ಗಾಂಧಿಯವರ ನೇತೃತ್ವದಲ್ಲಿ ಬ್ರಿಟಿಷ್ ಆಳ್ವಿಕೆಯ ವಿರುದ್ಧ ನಡೆದ ಸತ್ಯಾಗ್ರಹಗಳಲ್ಲಿ ಮಹಿಳೆಯರು ನಿರ್ಣಾಯಕ ಪಾತ್ರ ವಹಿಸಿದರು.

ಗಾಂಧಿಯವರ ಸಾಮಾಜಿಕ ಸುಧಾರಣಾ ಕಾರ್ಯಸೂಚಿಗೆ ಕೆಲವು ಮಿತಿಗಳಿದ್ದವು. ಅವರು ರೂಪಿಸಿದ ‘ಹರಿಜನ’ ಎಂಬ ಪದವು ಮೇಲರಿಮೆಯ ಅಥವಾ ಪೋಷಕ ಧೋರಣೆಯನ್ನು ಸೂಚಿಸುವಂತಿತ್ತು. ಈಗ ಅದನ್ನು ವಿವೇಕಯುತವಾಗಿ ‘ದಲಿತ’ ಎಂಬ ಪದದಿಂದ ಬದಲಾಯಿಸಲಾಗಿದೆ. ಹಾಗೆಯೇ, ಔಪಚಾರಿಕ ಆರ್ಥಿಕತೆಯಲ್ಲಿ ಮಹಿಳೆಯರ ಭಾಗವಹಿಸುವಿಕೆಯ ವಿಷಯದಲ್ಲಿ ಅವರು ಅಸ್ಪಷ್ಟ ನಿಲುವನ್ನು ಹೊಂದಿದ್ದರು. ಆದರೂ, ಜಾತಿ ಮತ್ತು ಲಿಂಗ ತಾರತಮ್ಯದ ಕುರಿತಾದ ಅವರ ಜಾಗರೂಕತೆಯ ವಿಷಯದಲ್ಲಿ, ಅವರು ತಮ್ಮ ಕಾಲದ ಬಹುತೇಕ ಇತರ ರಾಷ್ಟ್ರೀಯವಾದಿಗಳಿಗಿಂತ ಮುಂದಿದ್ದರು.

ಎರಡನೆಯದಾಗಿ, ಖಾದಿ ಉತ್ಪಾದನೆಯನ್ನು ಉತ್ತೇಜಿಸುವುದರ ಕುರಿತ ಗಾಂಧಿಯವರ ಕರೆಯನ್ನು ನೋಡೋಣ. ಆ ಕಾಲದಲ್ಲಿ ಮತ್ತು ನಂತರದ ದಿನಗಳಲ್ಲಿ, ಆರ್ಥಿಕ ಬೆಳವಣಿಗೆಗೆ ಕಾರಣವಾಗುವ ಆಧುನಿಕ ಕೈಗಾರಿಕಾ ಆರ್ಥಿಕತೆಯನ್ನು ತಿರಸ್ಕರಿಸುವ ಕ್ರಮವೆಂದು ಇದನ್ನು ಟೀಕಿಸಲಾಯಿತು. ಆದರೆ, ಈಗ ಹೆಚ್ಚು ಸ್ಪಷ್ಟವಾಗುತ್ತಿರುವಂತೆ, ಭಾರತದಲ್ಲಿ ಪ್ರಸ್ತುತ ಅನುಸರಿಸಲಾಗುತ್ತಿರುವ ಆರ್ಥಿಕ ಹಾದಿಯಲ್ಲಿ ಕೆಲವು ಸಮಸ್ಯೆಗಳಿವೆ. ಅವುಗಳೆಂದರೆ ಸಂಪತ್ತಿನ ಕೇಂದ್ರೀಕರಣ, ಬಹುಸಂಖ್ಯಾತ ಜನರಿಗೆ ಘನತೆಯುಳ್ಳ ಹಾಗೂ ಅರ್ಥಪೂರ್ಣ ಉದ್ಯೋಗಗಳನ್ನು ಸೃಷ್ಟಿಸುವಲ್ಲಿನ ವೈಫಲ್ಯ ಮತ್ತು ಪರಿಸರದ ವಿನಾಶ. ಈ ನಿಟ್ಟಿನಲ್ಲಿ, ಗಾಂಧಿಯವರ ಆರ್ಥಿಕ ಚಿಂತನೆಗಳು ಇಂದಿಗೂ ಪ್ರಸ್ತುತವಾಗಬಹುದು. ಅವರ ಖಾದಿ ಅಭಿಯಾನವು ಶ್ರಮದ ಘನತೆ ಹಾಗೂ ಸ್ಥಳೀಯ ಸ್ವಾವಲಂಬನೆಗೆ ಒತ್ತು ನೀಡಿತು. ಅಲ್ಲದೆ, ಪ್ರಕೃತಿ ಮತ್ತು ನೈಸರ್ಗಿಕ ಸಂಪನ್ಮೂಲಗಳ ವಿವೇಚನಾಪೂರ್ಣ ಬಳಕೆಯ ಮಹತ್ವದ ಬಗ್ಗೆ ಅವರು ಆಗಾಗ ಬರೆಯುತ್ತಿದ್ದರು. ಅನೇಕ ವಿಷಯಗಳಲ್ಲಿ ಗಾಂಧಿಯವರು ತಮ್ಮ ಕಾಲಕ್ಕಿಂತ ಮುಂದಿದ್ದ ಪರಿಸರವಾದಿಯಾಗಿದ್ದರು. ಅವರ ಆಲೋಚನೆಗಳು ನಮ್ಮ ಗಾಳಿ, ನೀರು ಮತ್ತು ಮಣ್ಣಿನ ಅವನತಿಯನ್ನು ತಡೆಯಲು ಹಾಗೂ ಹವಾಮಾನ ಬದಲಾವಣೆಯ ಸವಾಲನ್ನು ಎದುರಿಸಲು ನಮಗೆ ಸಹಾಯ ಮಾಡಬಲ್ಲವು.

ಈಗ ಗಾಂಧಿಯವರ ಸ್ವರಾಜ್ಯದ ಮೂರನೇ ಸ್ತಂಭವನ್ನು ಗಮನಿಸೋಣ. ಗಾಂಧಿಯವರು ಹಿಂದೂ-ಮುಸ್ಲಿಮ್ ಏಕತೆಯ ಮಹತ್ವವನ್ನು ಮುಖ್ಯವಾಗಿ ತಾವು ವಲಸೆ ಸಮುದಾಯದೊಂದಿಗೆ ಕಳೆದ ಅವಧಿಯ ಮೂಲಕ ಕಂಡುಕೊಂಡರು. ಅವರು ಮೂಲತಃ ಯೋಜಿಸಿದಂತೆ ಬಾಂಬೆಯಲ್ಲಿ ಯಶಸ್ವಿ ವಕೀಲರಾಗಿ ನೆಲೆಸಿದ್ದರೆ, ಅವರ ಕಕ್ಷಿದಾರರು ಮತ್ತು ಸ್ನೇಹಿತರು ಬಹುಶಃ ಹೆಚ್ಚಾಗಿ ಅಥವಾ ಸಂಪೂರ್ಣವಾಗಿ ಹಿಂದೂಗಳೇ ಆಗಿರುತ್ತಿದ್ದರು. ಆದರೆ ವಾಸ್ತವದಲ್ಲಿ, ಅವರು ಬಾಂಬೆ ಮತ್ತು ರಾಜಕೋಟ್ ಎರಡರಲ್ಲೂ ವಕೀಲರಾಗಿ ವಿಫಲರಾದರು ಮತ್ತು ನಂತರ ಇಬ್ಬರು ಗುಜರಾತಿ ಮುಸ್ಲಿಮ್ ವರ್ತಕರ ನಡುವಿನ ವಿವಾದವೊಂದನ್ನು ಬಗೆಹರಿಸಲು ಡರ್ಬನ್‌ಗೆ ತೆರಳಿದರು. ತರುವಾಯ, ಅವರು ಸಮುದಾಯದ ಕಾರ್ಯಕರ್ತರಾದಾಗ, ಪಾರ್ಸಿಗಳು, ಮುಸ್ಲಿಮರು ಮತ್ತು ತಮಿಳರು ತಮ್ಮ ಅತ್ಯಂತ ದೃಢ ಬೆಂಬಲಿಗರಲ್ಲಿ ಸೇರಿದ್ದಾರೆ ಎಂಬುದನ್ನು ಕಂಡುಕೊಂಡರು. ಇದು ಸುಸ್ಥಿರ ರಾಷ್ಟ್ರೀಯತೆಯನ್ನು ಕಟ್ಟುವಲ್ಲಿ ಧಾರ್ಮಿಕ ಹಾಗೂ ಭಾಷಾ ವೈವಿಧ್ಯದ ಮಹತ್ವದ ಬಗ್ಗೆ ಅವರಿಗೆ ಮನವರಿಕೆ ಮಾಡಿಕೊಟ್ಟಿತು.

1908ರ ನವೆಂಬರ್‌ನಲ್ಲಿ ಜೋಹಾನ್ಸ್‌ಬರ್ಗ್ ಜೈಲಿನಿಂದ ಕಳುಹಿಸಿದ ಸಂದೇಶವೊಂದರಲ್ಲಿ ಗಾಂಧಿಯವರು ಹೀಗೆ ಬರೆದರು: ದಕ್ಷಿಣ ಆಫ್ರಿಕಾದ ಶ್ವೇತವರ್ಣೀಯ ಆಡಳಿತಗಾರರ ವಿರುದ್ಧದ ಭಾರತೀಯರ ಹೋರಾಟವು ಹಿಂದೂಗಳು, ಮುಸ್ಲಿಮರು, ಪಾರ್ಸಿಗಳು, ಕ್ರೈಸ್ತರು, ಬಂಗಾಳಿಗಳು, ಮದ್ರಾಸಿಗಳು, ಗುಜರಾತಿಗಳು, ಪಂಜಾಬಿಗಳು ಮತ್ತು ಇತರರ ನಡುವೆ ಯಾವುದೇ ಭೇದಭಾವವನ್ನು ಮಾಡುವುದಿಲ್ಲ. ನಾವೆಲ್ಲರೂ ಭಾರತೀಯರು ಮತ್ತು ಭಾರತಕ್ಕಾಗಿ ಹೋರಾಡುತ್ತಿದ್ದೇವೆ. ಮುಂದಿನ ತಿಂಗಳು ಜೈಲಿನಿಂದ ಬಿಡುಗಡೆಯಾದ ನಂತರ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ಭಾರತೀಯರ ಸಭೆಯೊಂದರಲ್ಲಿ ಗಾಂಧಿಯವರು ಹೀಗೆ ಹೇಳಿದರು: ‘‘ಹಿಂದೂಗಳು ಮತ್ತು ಮುಸ್ಲಿಮರೆಂಬ ಎರಡೂ ಕಣ್ಣುಗಳು ಸುರಕ್ಷಿತವಾಗಿದ್ದರೆ, ನೀವು ಸಮೃದ್ಧಿಯನ್ನು ಕಾಣುತ್ತೀರಿ. ಆ ಎರಡೂ ಸಮುದಾಯಗಳು ಒಗ್ಗಟ್ಟಾಗಿದ್ದರೆ, ನೀವೇ ಭಾರತದ ಒಡೆಯರಾಗುತ್ತೀರಿ’’.

ಗಾಂಧಿಯವರು ಭಾರತದಲ್ಲಿನ ತಮ್ಮ ಕೆಲಸಗಳಲ್ಲೂ ಈ ನಂಬಿಕೆಗಳನ್ನು ಮುಂದುವರಿಸಿದರು. ಆದರೆ, ವಿವಿಧ ಧರ್ಮಗಳ ನಡುವೆ ಸಾಮರಸ್ಯವನ್ನು ಮೂಡಿಸಲು ಎಷ್ಟೇ ಪ್ರಯತ್ನಿಸಿದರೂ, ಉಪಖಂಡದ ವಿಭಜನೆಯನ್ನು ತಡೆಯುವಲ್ಲಿ ಅವರು ವಿಫಲರಾದರು. ಹಾಗಿದ್ದರೂ, 1947ರ ಆಗಸ್ಟ್ ನಂತರ ಭಾರತದಲ್ಲಿ ಉಳಿದುಕೊಂಡ ಮುಸ್ಲಿಮರನ್ನು ಸಮಾನ ನಾಗರಿಕರಂತೆ ಕಾಣುವಂತಾಗಬೇಕು ಎಂಬುದರ ಬಗ್ಗೆ ಅವರು ದೃಢನಿಶ್ಚಯ ಹೊಂದಿದ್ದರು. ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆಗಾಗಿ ಅವರು 1947ರ ಸೆಪ್ಟಂಬರ್‌ನಲ್ಲಿ ಕೋಲ್ಕತಾದಲ್ಲಿ ಮತ್ತು 1948ರ ಜನವರಿಯಲ್ಲಿ ಹೊಸದಿಲ್ಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದರು. ಈ ಎರಡು ಉಪವಾಸಗಳ ನಡುವೆ, 1947ರ ನವೆಂಬರ್ 15ರಂದು ಅಖಿಲ ಭಾರತ ಕಾಂಗ್ರೆಸ್ ಸಮಿತಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಅವರು ಸದಸ್ಯರಿಗೆ ಹೀಗೆ ಕರೆ ನೀಡಿದರು: ‘‘ಕಾಂಗ್ರೆಸ್‌ನ ಮೂಲಭೂತ ಸ್ವರೂಪಕ್ಕೆ ಬದ್ಧರಾಗಿರಿ ಮತ್ತು ಹಿಂದೂ ಹಾಗೂ ಮುಸ್ಲಿಮರನ್ನು ಒಂದಾಗಿಸಿ; ಏಕೆಂದರೆ, ಈ ಆದರ್ಶಕ್ಕಾಗಿ ಕಾಂಗ್ರೆಸ್ ಅರುವತ್ತು ವರ್ಷಗಳಿಗೂ ಹೆಚ್ಚು ಕಾಲ ಶ್ರಮಿಸಿದೆ’’.

ಹಿಂದೂ-ಮುಸ್ಲಿಮ್ ಏಕತೆಯ ಬಗೆಗಿನ ಈ ಬದ್ಧತೆಗಾಗಿ ಗಾಂಧಿಯವರು ತಮ್ಮ ಪ್ರಾಣವನ್ನೇ ತೆರಬೇಕಾಯಿತು. ಅವರ ಹಂತಕ ನಾಥೂರಾಮ್ ಗೋಡ್ಸೆ ವಿಚಾರಣೆ ನಡೆಯುತ್ತಿದ್ದಾಗ, ಆ ಪ್ರಕ್ರಿಯೆಯನ್ನು ನಿಕಟವಾಗಿ ಗಮನಿಸುತ್ತಿದ್ದವರಲ್ಲಿ ಬಾಂಬೆಯ ಸಂಪಾದಕ ಡಿ.ಎಫ್. ಕಾರಕ ಕೂಡ ಒಬ್ಬರಾಗಿದ್ದರು. 1949ರ ಅಕ್ಟೋಬರ್‌ನಲ್ಲಿ ‘ದಿ ಕರೆಂಟ್’ ಪತ್ರಿಕೆಯಲ್ಲಿ ಪ್ರಕಟವಾದ ಲೇಖನವೊಂದರಲ್ಲಿ ಕಾರಕ ಹೀಗೆ ಬರೆದಿದ್ದರು: ‘ಕೆಂಪು ಕೋಟೆಯ ಆವರಣದಲ್ಲಿ ನಡೆದ ಸುದೀರ್ಘ ವಿಚಾರಣೆಯ ಸಂದರ್ಭದಲ್ಲಿ, ಗೋಡ್ಸೆ ಹುಚ್ಚನಲ್ಲ ಎಂಬುದು ಸ್ಪಷ್ಟವಾಯಿತು. ಆತ ಒಬ್ಬ ಶಾಂತಚಿತ್ತದ, ಲೆಕ್ಕಾಚಾರದ ರಾಜಕೀಯ ಕಾರ್ಯಕರ್ತನಾಗಿದ್ದ ಮತ್ತು ಆರೆಸ್ಸೆಸ್‌ನ ತೀವ್ರಗಾಮಿ ಅನುಯಾಯಿಯಾಗಿದ್ದ. ಆರೆಸ್ಸೆಸ್‌ನ ಹಾದಿಗೆ ಅಡ್ಡಿಯಾಗಿದ್ದ ಏಕೈಕ ವ್ಯಕ್ತಿಯನ್ನು ಇಲ್ಲವಾಗಿಸಿದ್ದು ಸ್ಪಷ್ಟವಾಗಿಯೂ ಸಂಘದ ಉದ್ದೇಶವನ್ನು ಮುನ್ನಡೆಸುವ ಸಲುವಾಗಿಯೇ ಆಗಿತ್ತು. ಆದ್ದರಿಂದ, ಹಿಮಾಲಯದಿಂದ ಕೇಪ್ ಕೊಮೊರಿನ್ (ಕನ್ಯಾಕುಮಾರಿ)ವರೆಗೆ ಪ್ರಭಾವ ಬೀರಿದ್ದ ಹಾಗೂ ಕೋಮುರಹಿತ, ಜಾತ್ಯತೀತ ಮತ್ತು ಸ್ವತಂತ್ರ ರಾಷ್ಟ್ರದ ಆದರ್ಶಕ್ಕಾಗಿ ಉಸಿರಾಡಿ, ಬದುಕಿ ಮತ್ತು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ವ್ಯಕ್ತಿಯನ್ನು ಭಾರತೀಯ ರಂಗದಿಂದ ನಿರ್ಗಮಿಸುವಂತೆ ಮಾಡಿದ್ದು, ಗೋಡ್ಸೆ ಅರ್ಥೈಸಿಕೊಂಡಿದ್ದ ಆರೆಸ್ಸೆಸ್‌ನ ಸಿದ್ಧಾಂತವೇ ಆಗಿತ್ತು.

ಮತ್ತು ಈಗ ಅಂತಿಮವಾಗಿ, ಗಾಂಧಿಯವರ ತತ್ವಗಳ ಮತ್ತೊಂದು ಪ್ರಮುಖ ಆಧಾರಸ್ತಂಭವಾದ ಅಹಿಂಸೆಯ ಪಾಲನೆಯ ವಿಷಯಕ್ಕೆ ಬರೋಣ. ಹಿಂದೂ-ಮುಸ್ಲಿಮ್ ಸಾಮರಸ್ಯದ ವಿಷಯದಲ್ಲಿನಂತೆಯೇ, ಗಾಂಧಿಯವರು ತಮ್ಮ ಸಾರ್ವಜನಿಕ ಜೀವನದ ಆರಂಭಿಕ ಹಂತದಲ್ಲೇ ಈ ದೃಢ ನಂಬಿಕೆಯನ್ನು ತಲುಪಿದ್ದರು ಮತ್ತು ತಮ್ಮ ಜೀವನದ ಅಂತ್ಯದವರೆಗೂ ಅದನ್ನು ಪಾಲಿಸಿಕೊಂಡು ಬಂದರು. 1909ರ ಬೇಸಿಗೆಯಲ್ಲಿ, ದಕ್ಷಿಣ ಆಫ್ರಿಕಾದಲ್ಲಿನ ಭಾರತೀಯರ ಹಕ್ಕುಗಳ ಪರವಾಗಿ ವಾದಿಸಲು ಗಾಂಧಿಯವರು ಲಂಡನ್‌ಗೆ ಪ್ರಯಾಣ ಬೆಳೆಸಿದರು. ಅವರು ಅಲ್ಲಿಗೆ ತಲುಪುವ ಸ್ವಲ್ಪ ಸಮಯದ ಮೊದಲು, ಬ್ರಿಟಿಷ್ ಅಧಿಕಾರಿಯೊಬ್ಬರು ಅತಿಥಿಯಾಗಿ ಭಾಗವಹಿಸಿದ್ದ ಚಹಾ ಕೂಟವೊಂದರಲ್ಲಿ ಯುವ ಭಾರತೀಯನೊಬ್ಬನ ಗುಂಡೇಟಿಗೆ ಬಲಿಯಾದರು. ಈ ಘಟನೆಯಿಂದ ಗಾಂಧಿಯವರು ತೀವ್ರ ಆಘಾತಕ್ಕೊಳಗಾದರು ಮತ್ತು ಹೀಗೆ ಬರೆದರು: ‘ಇಂತಹ ಹಂತಕ ಕೃತ್ಯಗಳ ಪರಿಣಾಮವಾಗಿ ಬ್ರಿಟಿಷರು ದೇಶ ತೊರೆದರೂ, ಅವರ ಸ್ಥಾನದಲ್ಲಿ ಯಾರು ಆಳ್ವಿಕೆ ನಡೆಸುತ್ತಾರೆ? ಅದಕ್ಕೆ ಒಂದೇ ಉತ್ತರ: ಹಂತಕರು. ಹಂತಕರ ಆಳ್ವಿಕೆಯಿಂದ ಭಾರತಕ್ಕೆ ಏನೂ ಸಿಗುವುದಿಲ್ಲ. ಅವರು ಕಪ್ಪುವರ್ಣೀಯರೇ ಆಗಿರಲಿ ಅಥವಾ ಬಿಳಿಯರೇ ಆಗಿರಲಿ, ಅದರಿಂದ ಏನೂ ವ್ಯತ್ಯಾಸವಾಗುವುದಿಲ್ಲ’.

ಇಪ್ಪತ್ತು ವರ್ಷಗಳ ನಂತರ, ಸ್ವತಃ ಭಾರತದಲ್ಲಿಯೇ ಗಾಂಧಿಯವರು ‘ಬಾಂಬ್ ಸಂಸ್ಕೃತಿ’ ಎಂದು ತಾವು ಕರೆದಿದ್ದ ಒಂದು ಪ್ರವೃತ್ತಿಯನ್ನು ಎದುರಿಸಬೇಕಾಯಿತು. ಬಿಳಿಯ ಅಧಿಕಾರಿಗಳನ್ನು ಕೊಲ್ಲುವುದೇ ಬ್ರಿಟಿಷರನ್ನು ಭಾರತದಿಂದ ಹೊರಹಾಕಲು ಅತ್ಯುತ್ತಮ, ಅತ್ಯಂತ ತ್ವರಿತ ಮತ್ತು ವಾಸ್ತವವಾಗಿ ಏಕೈಕ ಮಾರ್ಗವೆಂದು ದೃಢವಾಗಿ ನಂಬಿದ್ದ ಯುವ ಕ್ರಾಂತಿಕಾರಿಗಳು ಇದನ್ನು ಅನುಸರಿಸುತ್ತಿದ್ದರು. ಭಾರತದ ಯುವಜನತೆಗೆ ಗಾಂಧಿಯವರು ಹೀಗೆ ಹೇಳಿದರು: ‘ಒಬ್ಬಂಟಿ ಸಾಹಸ ಕೃತ್ಯಗಳಿಂದ ರಾಷ್ಟ್ರದ ಸ್ವಾತಂತ್ರ್ಯವನ್ನು ಗೆಲ್ಲಲು ಸಾಧ್ಯವಿಲ್ಲ. ಬದಲಾಗಿ, ಸ್ವಾತಂತ್ರ್ಯದ ದೇವಾಲಯಕ್ಕೆ ಹತ್ತಾರು ಸಾವಿರ ಪುರುಷರು ಮತ್ತು ಮಹಿಳೆಯರು, ಯುವಕರು ಮತ್ತು ವೃದ್ಧರ ತಾಳ್ಮೆಯುತ, ಬುದ್ಧಿವಂತ ಮತ್ತು ರಚನಾತ್ಮಕ ಪ್ರಯತ್ನದ ಅಗತ್ಯವಿದೆ’. ಸಶಸ್ತ್ರ ಕ್ರಾಂತಿಗಳಿಂದ ಜಗತ್ತು ಬೇಸತ್ತಿದೆ ಎಂದು ನಂಬಿದ್ದ ಗಾಂಧಿಯವರು, ವೀರ ಹಾಗೂ ತ್ಯಾಗಶೀಲ ಕ್ರಾಂತಿಕಾರಿಯ ಎದುರು ತಲೆ ಎತ್ತಿ ನಿಲ್ಲಲು ಹಿಂಜರಿಯುತ್ತಿರಲಿಲ್ಲ. ಏಕೆಂದರೆ, ನಿರಪರಾಧಿಗಳ ರಕ್ತದ ಕಲೆಗಳಿಲ್ಲದ ಅಹಿಂಸಾತ್ಮಕ ವ್ಯಕ್ತಿಗಳ ಸಮಾನ ಮಟ್ಟದ ಶೌರ್ಯ ಮತ್ತು ತ್ಯಾಗವನ್ನು ಅವರ ಮುಂದೆ ಒಡ್ಡಬಲ್ಲೆ ಎಂಬ ವಿಶ್ವಾಸ ಅವರಿಗಿತ್ತು.

ಒಂದು ಶತಮಾನದ ನಂತರ ಸ್ವರಾಜ್ಯದ ಈ ನಾಲ್ಕು ಸ್ತಂಭಗಳು ಯಾವ ಸ್ಥಿತಿಯಲ್ಲಿವೆ? ಸ್ವತಂತ್ರ ಭಾರತೀಯ ರಾಷ್ಟ್ರದ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಗಾಂಧಿಯವರು ಎಂದಿಗೂ ನೇರವಾಗಿ ಚಿಂತನೆ ನಡೆಸಿರಲಿಲ್ಲವಾದರೂ, ಈಗ ಜಾರಿಯಲ್ಲಿರುವ ದಂಡನಾತ್ಮಕ ಕಾನೂನುಗಳು ಮತ್ತು ಆಡಳಿತವನ್ನು ಟೀಕಿಸುವವರನ್ನು ವರ್ಷಗಟ್ಟಲೆ ಜೈಲಿನಲ್ಲಿಡಲು ಅವುಗಳ ವ್ಯಾಪಕ ದುರುಪಯೋಗದ ಬಗ್ಗೆ ಅವರು ಖಂಡಿತವಾಗಿಯೂ ನಿರಾಶೆಗೊಳ್ಳುತ್ತಿದ್ದರು ಎಂಬುದು ನಮಗೆ ಖಚಿತ. ಗೃಹ ಸಚಿವರು ಮತ್ತು ಪ್ರಧಾನ ಮಂತ್ರಿಗಳು, ಹಾಗೆಯೇ ಅಸ್ಸಾಂ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳ ಮುಖ್ಯಮಂತ್ರಿಗಳು ಬಳಸುವ ವಿಭಜಕ ಭಾಷಣಗಳು ಅವರನ್ನು ತೀವ್ರವಾಗಿ ವಿಚಲಿತಗೊಳಿಸುತ್ತಿದ್ದವು. ಮತ್ತೊಂದೆಡೆ, ಸಿಎಎ ವಿರೋಧಿ ಪ್ರತಿಭಟನೆಗಳು, ರೈತರ ಚಳವಳಿ, ಪರಿಸರ ಚಳವಳಿ ಮತ್ತು ಇತ್ತೀಚಿನ ವಿದ್ಯಾರ್ಥಿ ಚಳವಳಿಗಳಲ್ಲಿ ಕಂಡುಬಂದ ಅಹಿಂಸೆಯ ಬಗೆಗಿನ ತತ್ವಬದ್ಧತೆಯನ್ನು ಅವರು ಖಂಡಿತವಾಗಿಯೂ ಮೆಚ್ಚುತ್ತಿದ್ದರು. ದಲಿತರು ಮತ್ತು ಮಹಿಳೆಯರಿಗೆ ಸಮಾನ ಹಕ್ಕುಗಳು, ಅಲ್ಪಸಂಖ್ಯಾತರಿಗೆ ಸಮಾನ ಹಕ್ಕುಗಳು, ನ್ಯಾಯಯುತ ಹಾಗೂ ಸುಸ್ಥಿರವಾದ ಆರ್ಥಿಕ ಮಾದರಿ ಹಾಗೂ ಮಾತು ಮತ್ತು ಕೃತಿಯಲ್ಲಿ ಅಹಿಂಸೆಯನ್ನು ಪಾಲಿಸುವುದು -ಇವು ಸ್ವಾತಂತ್ರ್ಯದ ಅತ್ಯಗತ್ಯ ಷರತ್ತುಗಳಾಗಿವೆ. ಇಂದಿನ ಭಾರತದಲ್ಲಿ, ಈ ನಾಲ್ಕು ಸ್ತಂಭಗಳೂ ಶಿಥಿಲಗೊಂಡಿವೆ. ಸರಕಾರದ ಹಾಗೂ ಅನೇಕ ಸಂದರ್ಭಗಳಲ್ಲಿ ಸ್ವತಃ ನಾಗರಿಕರ ಕ್ರಮಗಳಿಂದಾಗಿ ಇವೆಲ್ಲವೂ ದುರ್ಬಲಗೊಂಡಿವೆ. ಗಾಂಧೀಜಿಯವರು ಕಲ್ಪಿಸಿಕೊಂಡಿದ್ದ ‘ಸ್ವರಾಜ್ಯ’ದ ಕಟ್ಟಡವು ಇನ್ನೂ ಸಂಪೂರ್ಣವಾಗಿ ಕುಸಿದುಬಿದ್ದಿಲ್ಲವಾದರೂ, ಅದು ಬಲವಾಗಿ ಅಥವಾ ಸ್ಥಿರವಾಗಿ ಉಳಿದಿಲ್ಲ.

(ಅಂಕಣಕಾರರು ಭಾರತೀಯ ಇತಿಹಾಸಕಾರ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಆಡಳಿತಾಧಿಕಾರಿ)

Tags

SwarajvisionMahatma Gandhi
share
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
Next Story
X