Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಲಂಡನ್ ಡೈರಿ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಮಾನ
  5. ಮೊದಲ ಕ್ರಿಕೆಟ್ ಸೂಪರ್ ಸ್ಟಾರ್ ಸಿ.ಕೆ....

ಮೊದಲ ಕ್ರಿಕೆಟ್ ಸೂಪರ್ ಸ್ಟಾರ್ ಸಿ.ಕೆ. ನಾಯ್ಡು

ರಾಮಚಂದ್ರ ಗುಹಾರಾಮಚಂದ್ರ ಗುಹಾ29 Nov 2026 12:31 PM IST
share
ಮೊದಲ ಕ್ರಿಕೆಟ್ ಸೂಪರ್ ಸ್ಟಾರ್ ಸಿ.ಕೆ. ನಾಯ್ಡು

ಭಾರತೀಯ ಕ್ರಿಕೆಟ್ನ ಮೊದಲ ಸೂಪರ್ಸ್ಟಾರ್ ನಿಸ್ಸಂದೇಹವಾಗಿ ಸಿ.ಕೆ. ನಾಯ್ಡು ಅವರೇ ಆಗಿದ್ದರು. ನನ್ನ ‘A Corner of a Foreign Field’ ಎಂಬ ಪುಸ್ತಕದಲ್ಲಿ ನಾನು ಬರೆದಂತೆ, ಸಿ.ಕೆ. ನಾಯ್ಡು ಭಾರತದ ಮೊದಲ ಜನಪ್ರಿಯ ಕ್ರಿಕೆಟ್ ಹೀರೋ ಆಗಿದ್ದರು. ಅವರ ಜನಪ್ರಿಯತೆಯು ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಎಲ್ಲ ಗಡಿಗಳನ್ನು ಮೀರಿತ್ತು. ಅವರ ಸಾಧನೆಗಳನ್ನು ಗುರುತಿಸಲು ಒಬ್ಬ ವ್ಯಕ್ತಿಗೆ ಕ್ರಿಕೆಟ್ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಅಥವಾ ಜ್ಞಾನವಿರಬೇಕಾದ ಅಗತ್ಯವೇ ಇರಲಿಲ್ಲ. ನಾಯ್ಡು ಅವರ ಆಟದ ಪ್ರದರ್ಶನವು ಅತ್ಯಂತ ನಿಖರವಾದ ಸಮಯಪ್ರಜ್ಞೆಯಿಂದ ಕೂಡಿತ್ತು.

ಆಸ್ಟ್ರೇಲಿಯದ ಲೇಖಕ ಎಡ್ವರ್ಡ್ ಡಾಕರ್ ಅವರು 1976ರಲ್ಲಿ ಪ್ರಕಟಿಸಿದ ಪುಸ್ತಕದ ಹೆಸರು ‘ಹಿಸ್ಟರಿ ಆಫ್ ಇಂಡಿಯನ್ ಕ್ರಿಕೆಟ್’. ಮೂಲತಃ ಇಂಗ್ಲಿಷ್ ಆಟವಾಗಿದ್ದ ಕ್ರಿಕೆಟ್, ಭಾರತೀಯ ಉಪಖಂಡದಲ್ಲಿ ಹೇಗೆ ಬೇರೂರಿತು ಎಂಬುದನ್ನು ಈ ಪುಸ್ತಕವು ಅತ್ಯಂತ ಆಸಕ್ತಿದಾಯಕವಾಗಿ ವಿವರಿಸುತ್ತದೆ. ಈ ಪುಸ್ತಕವು ಸಿ.ಕೆ. ನಾಯ್ಡು ಅವರು ‘ಹಿಂದೂ’ ತಂಡದ ಪರವಾಗಿ, ಪ್ರವಾಸಿ ಎಂಸಿಸಿ ತಂಡದ ವಿರುದ್ಧ ಆಡಿದ ಐತಿಹಾಸಿಕ ಶತಕದ ವಿವರವಾದ ವರ್ಣನೆಯೊಂದಿಗೆ ಆರಂಭವಾಗುತ್ತದೆ. ಆ ಎಂಸಿಸಿ ತಂಡದಲ್ಲಿ ಇಂಗ್ಲೆಂಡ್ನ ಹಲವು ಟೆಸ್ಟ್ ಆಟಗಾರರು ಇದ್ದರು.

ನಾಯ್ಡು ಅವರ ಈ ಇನಿಂಗ್ಸ್ 1926ರ ಡಿಸೆಂಬರ್ 1ರಂದು ಬಾಂಬೆಯಲ್ಲಿ ನಡೆಯಿತು. ಹಿಂದಿನ ದಿನ ಪ್ರವಾಸಿ ತಂಡವು 361 ರನ್ಗಳನ್ನು ಕಲೆಹಾಕಿತ್ತು. ಇದರಲ್ಲಿ ಜಿ.ಎಫ್. ಅರ್ಲ್ ಅವರು 8 ಸಿಕ್ಸರ್ಗಳ ನೆರವಿನಿಂದ 130 ರನ್ಗಳ ಭರ್ಜರಿ ಆಟವಾಡಿದ್ದರು. ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ‘ಹಿಂದೂ’ ತಂಡವು 84 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಕ್ರೀಸ್ಗೆ ಬಂದ ನಾಯ್ಡು ಆಟದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ತೆಗೆದುಕೊಂಡರು. ಅತ್ಯಂತ ನಿಯಂತ್ರಿತ ಹಾಗೂ ಆಕ್ರಮಣಕಾರಿ ಆಟವಾಡಿದ ಅವರು, 11 ಸಿಕ್ಸರ್ಗಳೊಂದಿಗೆ 153 ರನ್ಗಳ ಭವ್ಯ ಇನಿಂಗ್ಸ್ ಕಟ್ಟಿದರು. ಮೊದಲ ಇನಿಂಗ್ಸ್ನಲ್ಲಿ ತಂಡವು ಎಂಟು ರನ್ಗಳ ಅಂತರದಿಂದ ಹಿನ್ನಡೆ ಅನುಭವಿಸಿದರೂ, ಈ ಇಂಗ್ಲಿಷ್ ಮೂಲದ ಆಟದಲ್ಲಿ ಭಾರತೀಯರೂ ಸಮರ್ಥವಾಗಿ ಸೆಣಸಬಲ್ಲರು ಎಂಬುದನ್ನು ನಾಯ್ಡು ಸಾಬೀತುಪಡಿಸಿದರು. ಎಡ್ವರ್ಡ್ ಡಾಕರ್ ಅವರು, ‘ಆ ದಿನದ ವಿಶೇಷತೆಯು ಪಂದ್ಯದ ಅಂತ್ಯದಲ್ಲಿ ಕಂಡುಬಂದ ಭಾವನಾತ್ಮಕ ದೃಶ್ಯದಲ್ಲಿತ್ತು. ಸಂಧ್ಯಾಕಾಲದ ಮಬ್ಬಿನಲ್ಲಿ ಪೆವಿಲಿಯನ್ ಹೊರಗೆ ಜನರು ಗುಂಪುಗೂಡಿದರು. ತಮ್ಮ ನಾಯಕನನ್ನು ಒಮ್ಮೆ ನೋಡಲು, ಅವರನ್ನು ಮುಟ್ಟಲು, ಹೂಮಾಲೆ ಹಾಕಿ ಗೌರವಿಸಲು ಮತ್ತು ಉಡುಗೊರೆಗಳನ್ನು ನೀಡಲು ಅವರು ತೀವ್ರ ಕುತೂಹಲದಿಂದ ಕಾಯುತ್ತಿದ್ದರು. ನಾಯ್ಡು ಜನರಿಗೆ ಅಂಥ ಸ್ಫೂರ್ತಿ ನೀಡಿದ್ದರು. ಅವರಿಗೆ ಅಂಥ ಅದ್ಭುತ ಕ್ಷಣಗಳನ್ನು ತೋರಿಸಿಕೊಟ್ಟಿದ್ದರು’ ಎಂದು ಬರೆದಿದ್ದಾರೆ.

ಸಿ.ಕೆ. ನಾಯ್ಡು ಅವರು ಪ್ರವಾಸಿ ಇಂಗ್ಲಿಷ್ ಆಟಗಾರರ ವಿರುದ್ಧ ಶತಕ ಬಾರಿಸಿದ ಸರಿಯಾಗಿ ಐವತ್ತು ವರ್ಷಗಳ ನಂತರ ಡಾಕರ್ ಅವರ ಪುಸ್ತಕ ಪ್ರಕಟವಾಯಿತು. ಈ ಐತಿಹಾಸಿಕ ಇನಿಂಗ್ಸ್ಗೆ 2026ರ ಡಿಸೆಂಬರ್ 1ರಂದು 100 ವರ್ಷಗಳು ತುಂಬುತ್ತವೆ. ಆ ದಿನ, ಭಾರತೀಯ ಕ್ರಿಕೆಟ್ನ ಇತಿಹಾಸವನ್ನು ಸಮರ್ಪಣಾ ಭಾವದಿಂದ ದಾಖಲಿಸುತ್ತಾ ಬಂದಿರುವ ಲೇಖಕ ಗುಲು ಎಝೆಕಿಯೆಲ್ ಅವರು, ‘Nayudu’s Knock: The Incredible Innings that Shaped Indian Cricket’ ಎಂಬ ಪುಸ್ತಕವನ್ನು ಪ್ರಕಟಿಸಲಿದ್ದಾರೆ. ತಮ್ಮ ಈ ಹೊಸ ಪುಸ್ತಕದ ಮುನ್ನುಡಿಯಲ್ಲಿ ಎಝೆಕಿಯೆಲ್, ‘ಇಂದು ಭಾರತೀಯ ಕ್ರಿಕೆಟ್ ಒಂದು ಬೃಹತ್ ಶಕ್ತಿಯಾಗಿ, ಅಪ್ರತಿಮ ಪ್ರಭಾವಶಾಲಿಯಾಗಿ ಬೆಳೆದಿದೆ. ಆದರೆ ಒಂದು ಶತಮಾನದ ಹಿಂದೆ-ಅಥವಾ ಕೇವಲ ಮೂವತ್ತು ವರ್ಷಗಳ ಹಿಂದೆಯೂ ಸಹ- ಸ್ಥಿತಿ ಹೀಗಿರಲಿಲ್ಲ. ಅಂದಿನಿಂದ ಇಂದಿನವರೆಗಿನ ಭಾರತೀಯ ಕ್ರಿಕೆಟ್ನ ಈ ಪಯಣಕ್ಕೆ ನಾಂದಿ ಹಾಡಿದವರು ಒಬ್ಬ ವ್ಯಕ್ತಿ ಮತ್ತು ಅವರ ಒಂದು ಅದ್ಭುತ ಇನಿಂಗ್ಸ್. ಆ ವ್ಯಕ್ತಿಗೂ ಮತ್ತು ಆ ರೋಮಾಂಚಕ ಇನಿಂಗ್ಸ್ಗೂ ನಾನು ಸಲ್ಲಿಸುವ ಗೌರವವಿದು’ ಎಂದು ಬರೆದಿದ್ದಾರೆ.

ನಾಯ್ಡುಸ್ ನಾಕ್ ಕೃತಿಯ ವಿಶೇಷತೆಗಳಲ್ಲಿ ಒಂದೆಂದರೆ, ಅದರಲ್ಲಿರುವ ಅಪರೂಪದ ಮತ್ತು ಅದ್ಭುತವಾದ ಚಿತ್ರಣಗಳು. ಲೇಖಕರು ಪತ್ತೆಹಚ್ಚಿದ ಮೂಲ ಸ್ಕೋರ್ಕಾರ್ಡ್ನ ಚಿತ್ರವೂ ಇದರಲ್ಲಿ ಸೇರಿದೆ. ಎಝೆಕಿಯೆಲ್ ಅವರು ಆ ಇನಿಂಗ್ಸ್ನ ಬಗ್ಗೆ, ನಾಯ್ಡು ಆಡಿದ ಹೊಡೆತಗಳ ಬಗ್ಗೆ ಮತ್ತು 33 ರನ್ಗಳಿದ್ದಾಗ ಇವಾರ್ಟ್ ಆಸ್ಟಿಲ್ ಅವರು ತಾವೇ ಎಸೆದ ಚೆಂಡನ್ನು ತಾವೇ ಹಿಡಿಯುವ ಅವಕಾಶವನ್ನು ಕೈಚೆಲ್ಲಿದಾಗ ನಾಯ್ಡು ಅವರಿಗೆ ಒಲಿದ ಅದೃಷ್ಟದ ಬಗ್ಗೆಯೂ ಅತ್ಯಂತ ಎದ್ದುಕಾಣುವಂಥ ವಿವರಣೆಯನ್ನು ನೀಡಿದ್ದಾರೆ. ‘ನಾಯ್ಡು ಬಾರಿಸಿದ 11 ಸಿಕ್ಸರ್ಗಳು (ಆಗ ಅದೊಂದು ವಿಶ್ವ ದಾಖಲೆಯಾಗಿತ್ತು) ಅಂತರ್ರಾಷ್ಟ್ರೀಯ ಮಟ್ಟದ ಬೌಲಿಂಗ್ ದಾಳಿಯ ವಿರುದ್ಧ ಮತ್ತು 70ರಿಂದ 80 ಮೀಟರ್ಗಳಷ್ಟು ಬೌಂಡರಿ ಅಂತರವಿರುವ ಮೈದಾನದಲ್ಲಿ ದಾಖಲಾದವು. ಇಂದಿನ ಟಿ20 ಕ್ರಿಕೆಟ್ನಲ್ಲಿರುವಂಥ, ಶಾಲಾ ಮಟ್ಟದ ಆಟಕ್ಕೆ ಸೀಮಿತವೆನಿಸುವ ಸಣ್ಣ ಬೌಂಡರಿಗಳಲ್ಲ’ ಎಂದು ಅವರು ಗಮನ ಸೆಳೆಯುತ್ತಾರೆ.

ಸಾಮಾನ್ಯವಾಗಿ, ಕಥಿಯಾವಾರ್ನ ರಾಜಕುಮಾರ ಕುಮಾರ್ ಶ್ರೀ ರಣಜಿತ್ ಸಿನ್ಹಜಿ ಅವರನ್ನು ಭಾರತದ ಮೊದಲ ಶ್ರೇಷ್ಠ ಕ್ರಿಕೆಟಿಗ ಎಂದು ಪರಿಗಣಿಸಲಾಗುತ್ತದೆ. ಆದರೆ, ನಾನು ಈ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಏಕೆಂದರೆ ರಣಜಿ ತಮ್ಮ ಸಂಪೂರ್ಣ ಕ್ರಿಕೆಟ್ ವೃತ್ತಿಜೀವನವನ್ನು ಇಂಗ್ಲೆಂಡ್ನಲ್ಲಿ ಮತ್ತು ಇಂಗ್ಲಿಷ್ ತಂಡಗಳ ಪರವಾಗಿಯೇ ಕಳೆದರು. ವಾಸ್ತವವಾಗಿ, 1911ರಲ್ಲಿ ಇಂಗ್ಲೆಂಡ್ಗೆ ಭೇಟಿ ನೀಡಿದ ಮೊದಲ ಆಲ್ ಇಂಡಿಯಾ ತಂಡದ ಪರವಾಗಿ 150 ವಿಕೆಟ್ಗಳನ್ನು ಪಡೆದ ಎಡಗೈ ಸ್ಪಿನ್ ಬೌಲರ್ ಪಾಲ್ವಂಕರ್ ಬಾಲೂ ಅವರೇ ಭಾರತದ ಮೊದಲ ವಿಶ್ವ ದರ್ಜೆಯ ಕ್ರಿಕೆಟಿಗರು. ಗಮನಾರ್ಹ ಸಂಗತಿಯೆಂದರೆ, ರಣಜಿ ಅವರು ಶ್ರೀಮಂತ ಹಾಗೂ ಸವಲತ್ತುಳ್ಳ ಹಿನ್ನೆಲೆಯಿಂದ ಬಂದವರು. ಆದರೆ ಬಾಲೂ ಅವರು ದಲಿತ ಕುಟುಂಬದಲ್ಲಿ ಜನಿಸಿದವರು. ತಮ್ಮ ಸಾಧನೆಗಳಿಗೆ ಮನ್ನಣೆ ಸಿಗುವ ಮೊದಲು ಅವರು ವರ್ಷಗಟ್ಟಲೆ ತ್ಯಾಗ ಮತ್ತು ಸಂಘರ್ಷಗಳನ್ನು ಎದುರಿಸಬೇಕಾಯಿತು. ಪಾಲ್ವಂಕರ್ ಬಾಲೂ ಅವರಿಗಿಂತ ಇಪ್ಪತ್ತು ವರ್ಷ ಕಿರಿಯವರಾಗಿದ್ದ ಮತ್ತು ಅವರೊಂದಿಗೆ ಆಡಿದ್ದ ಸಿ.ಕೆ. ನಾಯ್ಡು ಕೂಡ, ಈ ವಿಷಯದಲ್ಲಿ ಬಾಲೂ ಅವರೇ ಮೊದಲಿಗರು ಎಂಬುದನ್ನು ಒಪ್ಪಿಕೊಳ್ಳುತ್ತಿದ್ದರು.

ಹಾಗಿದ್ದರೂ, ಭಾರತೀಯ ಕ್ರಿಕೆಟ್ನ ಮೊದಲ ಸೂಪರ್ಸ್ಟಾರ್ ನಿಸ್ಸಂದೇಹವಾಗಿ ಸಿ.ಕೆ. ನಾಯ್ಡು ಅವರೇ ಆಗಿದ್ದರು. ನನ್ನ‘A Corner of a Foreign Field’ ಎಂಬ ಪುಸ್ತಕದಲ್ಲಿ ನಾನು ಬರೆದಂತೆ, ಸಿ.ಕೆ. ನಾಯ್ಡು ಭಾರತದ ಮೊದಲ ಜನಪ್ರಿಯ ಕ್ರಿಕೆಟ್ ಹೀರೋ ಆಗಿದ್ದರು. ಅವರ ಜನಪ್ರಿಯತೆಯು ಜಾತಿ, ವರ್ಗ, ಲಿಂಗ ಮತ್ತು ಧರ್ಮದ ಎಲ್ಲ ಗಡಿಗಳನ್ನು ಮೀರಿತ್ತು. ಅವರ ಸಾಧನೆಗಳನ್ನು ಗುರುತಿಸಲು ಒಬ್ಬ ವ್ಯಕ್ತಿಗೆ ಕ್ರಿಕೆಟ್ ಕ್ರೀಡೆಯ ಬಗ್ಗೆ ವಿಶೇಷ ಆಸಕ್ತಿ ಅಥವಾ ಜ್ಞಾನವಿರಬೇಕಾದ ಅಗತ್ಯವೇ ಇರಲಿಲ್ಲ. ನಾಯ್ಡು ಅವರ ಆಟದ ಪ್ರದರ್ಶನವು ಅತ್ಯಂತ ನಿಖರವಾದ ಸಮಯಪ್ರಜ್ಞೆಯಿಂದ ಕೂಡಿತ್ತು. 1926ರಲ್ಲಿ ಬಾಂಬೆಯಲ್ಲಿನ ಬಾಂಬೆ ಜಿಮ್ಖಾನಾ ಮೈದಾನದಲ್ಲಿ ಇಂಗ್ಲಿಷರ ವಿರುದ್ಧ ಇಂಥದೊಂದು ಇನಿಂಗ್ಸ್ ಆಡುವುದು, ಭಾರತೀಯರ ರಾಷ್ಟ್ರೀಯ ಹೆಮ್ಮೆಯ ಭಾವನೆಗಳನ್ನು ಬಡಿದೆಬ್ಬಿಸುವಂಥದ್ದಾಗಿತ್ತು. ನಾಯ್ಡು ಅವರ ವ್ಯಕ್ತಿತ್ವದ ಬಗ್ಗೆ ನಮಗೆ ತಿಳಿದಿರುವ ಸಂಗತಿಗಳನ್ನು ಗಮನಿಸಿದರೆ, ಬ್ರಿಟಿಷ್ ಆಳ್ವಿಕೆ ಅಥವಾ ಸ್ವರಾಜ್ಯದ ಕುರಿತು ಅವರಿಗೆ ಯಾವುದೇ ದೃಢವಾದ ನಿಲುವುಗಳಿದ್ದಂತೆ ಕಾಣುವುದಿಲ್ಲ. ಆದರೂ, ಬಹುಶಃ ಅವರ ಅರಿವಿಗೂ ಬಾರದಂತೆಯೇ, ಅವರು ದೇಶಪ್ರೇಮಿ ಭಾರತೀಯರೆಲ್ಲರಿಗೂ ಒಂದು ಆದರ್ಶಪ್ರಾಯ ವ್ಯಕ್ತಿಯಾಗಿ ರೂಪುಗೊಂಡರು.

ವರ್ಷಗಳ ಹಿಂದೆ, ಸಿ.ಕೆ. ನಾಯ್ಡು ಅವರ ಇನಿಂಗ್ಸ್ನ ನಂತರದ ದಿನಗಳಲ್ಲಿ ಬಾಂಬೆ ಪತ್ರಿಕೆಗಳ ಮೈಕ್ರೋಫಿಲ್ಮ್ಗಳನ್ನು ಪರಿಶೀಲಿಸುತ್ತಿದ್ದಾಗ, ಅವರ ಕೌಶಲ್ಯಗಳ ಬಗೆಗಿನ ಮೆಚ್ಚುಗೆ ಎಷ್ಟು ವ್ಯಾಪಕ ಮತ್ತು ಆಳವಾಗಿತ್ತು ಎಂಬುದಕ್ಕೆ ನನಗೆ ಸಾಕ್ಷ್ಯ ಸಿಕ್ಕಿತು. ನಾಯ್ಡು ಅವರು ಬ್ಯಾಟಿಂಗ್ನಲ್ಲಿ ತೋರಿದ ಅದ್ಭುತ ಪ್ರದರ್ಶನವನ್ನು ಮೆಚ್ಚಿ, ಪರೇಲ್ನ ಸಾರ್ವಜನಿಕರು - ವಿಶೇಷವಾಗಿ ಗಿರಣಿಗಳು ಹಾಗೂ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಗುಮಾಸ್ತರು ಮತ್ತು ಕಾರ್ಮಿಕರು - ಅವರಿಗೆ ಚಿನ್ನದ ಪದಕವೊಂದನ್ನು ನೀಡಲು ನಿರ್ಧರಿಸಿದರು. ಈ ಪದಕವನ್ನು ತಯಾರಿಸುವ ಜವಾಬ್ದಾರಿಯನ್ನು ನರೋತ್ತಮ್ ಭಾವೂ ಆಂಡ್ ಕಂಪೆನಿ ಎಂಬ ಆಭರಣ ಸಂಸ್ಥೆಗೆ ವಹಿಸಲಾಯಿತು. ಅಭಿಮಾನಿಗಳ ಮತ್ತೊಂದು ಗುಂಪು ಅವರಿಗೆ ಬೆಳ್ಳಿಯ ಬ್ಯಾಟ್ ಮತ್ತು ಸೈಡ್-ಕಾರ್ ಹೊಂದಿರುವ ಟ್ರಯಂಫ್ ಮೋಟರ್ಸೈಕಲ್ ಒಂದನ್ನು ಉಡುಗೊರೆಯಾಗಿ ನೀಡಿತು.

ನಾಯ್ಡು ಅವರ ಮೇಲಿನ ಈ ಅಭಿಮಾನವು ದೀರ್ಘಕಾಲದವರೆಗೆ ಉಳಿದುಕೊಂಡಿತ್ತು ಮತ್ತು ಅದು ಕೇವಲ ಬಾಂಬೆಗೆ ಮಾತ್ರ ಸೀಮಿತವಾಗಿರಲಿಲ್ಲ. 1933-34ರ ಚಳಿಗಾಲದಲ್ಲಿ ಡಗ್ಲಸ್ ಜಾರ್ಡಿನ್ ನೇತೃತ್ವದ ಎಂ.ಸಿ.ಸಿ. ತಂಡವು ಭಾರತ ಪ್ರವಾಸಕ್ಕೆ ಬಂದಾಗ, ಟೆಸ್ಟ್ ಸರಣಿಯಲ್ಲಿ ಭಾರತ ತಂಡದ ನಾಯಕರಾಗಿ ನಾಯ್ಡು ಇದ್ದರು. ಈ ಮೂರು ಟೆಸ್ಟ್ ಪಂದ್ಯಗಳಲ್ಲದೆ, ಅವರು ಪ್ರವಾಸಿ ತಂಡದ ವಿರುದ್ಧ ಇನ್ನೂ ಏಳು ಪಂದ್ಯಗಳನ್ನು ಆಡಿದರು. ಬನಾರಸ್, ದಿಲ್ಲಿ, ನಾಗಪುರ ಮತ್ತು ಸಿಕಂದರಾಬಾದ್ನಂತಹ ಪರಸ್ಪರ ದೂರವಿರುವ ಸ್ಥಳಗಳಲ್ಲಿ ನಡೆದ ಈ ಪಂದ್ಯಗಳಲ್ಲಿ, ನಾಯ್ಡು ಅವರ ಉಪಸ್ಥಿತಿಯಿಂದ ಪ್ರೇಕ್ಷಕರ ಸಂಖ್ಯೆ ಹೆಚ್ಚಾಗುತ್ತದೆ ಎಂದು ನಂಬಿದ್ದ ವಿವಿಧ ತಂಡಗಳ ಪರವಾಗಿ ಅವರು ಆಡಿದರು. ಭಾರತೀಯ ಆಟಗಾರನೊಬ್ಬ ಎಲ್ಲೆಡೆ ಕಾಣಿಸಿಕೊಳ್ಳುತ್ತಿದ್ದುದನ್ನು ಕಂಡು ಜಾರ್ಡಿನ್ ಬೆರಗಾದರು. ಆದರೆ ಅದೇ ಸಮಯದಲ್ಲಿ ಅವರಿಗೆ ಅಸಮಾಧಾನವೂ ಉಂಟಾಯಿತು. ಅವರು ಎದುರಾಳಿ ತಂಡವನ್ನು ಸಿ.ಕೆ. ನಾಯ್ಡು ಅವರ ಸಂಚಾರಿ ಸರ್ಕಸ್ ಎಂದು ಕರೆದರು.

ಭಾರತೀಯ ಜನರ ನಡುವೆ ಸಿ.ಕೆ. ನಾಯ್ಡು ಅವರ ಜನಪ್ರಿಯತೆಗೆ ಮತ್ತೊಂದು ಉದಾಹರಣೆ ಇಲ್ಲಿದೆ. 1937ರ ನವೆಂಬರ್ನಲ್ಲಿ, ಬಾಂಬೆಯಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ನಡೆದ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ, ಆತಿಥೇಯ ತಂಡದ ಪರ ಆಡಲು ಅವರನ್ನು ಆಯ್ಕೆ ಮಾಡಿರಲಿಲ್ಲ. ಮರು ತಿಂಗಳು ಅದೇ ನಗರದಲ್ಲಿ ಒಂದು ವಿಶೇಷ ಪಂದ್ಯವನ್ನು ಆಯೋಜಿಸಲಾಯಿತು. ಅದರಲ್ಲಿ ನಾಯ್ಡು ಅದ್ಭುತ ಶತಕವನ್ನು ಬಾರಿಸಿದರು. ಒಂದು ಪತ್ರಿಕೆ ಬರೆದಂತೆ, ಇದು ನಲ್ವತ್ತೆರಡರ ಹರೆಯದಲ್ಲೂ ಅವರು ಭಾರತದ ಅತ್ಯುತ್ತಮ ಯುವ ಆಟಗಾರರಿಗಿಂತಲೂ ಶ್ರೇಷ್ಠರಾಗಿದ್ದರು ಎಂಬುದನ್ನು ಸಾಬೀತುಪಡಿಸಿತು. ಇದಾದ ಸ್ವಲ್ಪ ಸಮಯದ ನಂತರ, ಖ್ಯಾತ ನಿರ್ದೇಶಕ ವಿ. ಶಾಂತಾರಾಮ್ ಅವರ ‘ದುನಿಯಾ ನಾ ಮಾನೆ’ ಎಂಬ ಹೊಸ ಚಲನಚಿತ್ರ ಬಿಡುಗಡೆಯಾಯಿತು. ತಮ್ಮ ನಿರ್ಮಾಣ ಸಂಸ್ಥೆ ನೀಡಿದ ಜಾಹೀರಾತೊಂದರಲ್ಲಿ ಶಾಂತಾರಾಮ್ ಅವರು ತಮ್ಮ ಚಿತ್ರದ ನಾಯಕಿಯನ್ನು ಈ ಮಹಾನ್ ಕ್ರಿಕೆಟಿಗನಿಗೆ ಹೋಲಿಸಿದರು. ಏಕೆಂದರೆ, ಇಬ್ಬರಿಗೂ ಇತರರಿಂದ ಅನ್ಯಾಯವಾಗಿತ್ತು ಮತ್ತು ಇಬ್ಬರೂ ತಮ್ಮ ಶ್ರೇಷ್ಠತೆಯನ್ನು ಸಾಬೀತುಪಡಿಸಿಕೊಂಡು ಹೊರಬಂದಿದ್ದರು. ಸುನಿಲ್ ಗವಾಸ್ಕರ್, ಕಪಿಲ್ ದೇವ್, ಸಚಿನ್ ತೆಂಡೂಲ್ಕರ್, ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿಯಂಥ ನಂತರದ ದಶಕಗಳಲ್ಲಿ ರಾಷ್ಟ್ರೀಯ ಕ್ರಿಕೆಟ್ ಐಕಾನ್ಗಳಾಗಿ ಹೊರಹೊಮ್ಮಿದ ಆಟಗಾರರಿಗೆ ಸಿ.ಕೆ. ನಾಯ್ಡು ಅವರು ಅಷ್ಟಾಗಿ ಗುರುತಿಸಲ್ಪಡದ ಮುಂಚೂಣಿಯ ವ್ಯಕ್ತಿಯಾಗಿದ್ದರು. ನಾಯ್ಡು ಅವರಿಗೆ ಹೋಲಿಸಿದರೆ, ಈ ಆಟಗಾರರು ಆರ್ಥಿಕ ಪ್ರತಿಫಲದ ವಿಷಯದಲ್ಲಿ ಹೆಚ್ಚು ಅದೃಷ್ಟಶಾಲಿಗಳಾಗಿದ್ದರು. ಆದರೂ, ಅವರೆಲ್ಲರಿಗೂ ದಾರಿ ಮಾಡಿಕೊಟ್ಟವರು ನಾಯ್ಡು ಅವರೇ ಆಗಿದ್ದರು.

ನಾಯ್ಡು ಅವರ ಬ್ಯಾಟಿಂಗ್ ಕೌಶಲ್ಯ ಮತ್ತು ಜನಪ್ರಿಯತೆಯನ್ನು ಎತ್ತಿ ತೋರಿಸುವ, ಅವರ ಸಮಕಾಲೀನರ ಕೆಲವು ಮಾತುಗಳನ್ನು ಉಲ್ಲೇಖಿಸುವ ಮೂಲಕ ನಾನು ಈ ಗೌರವ ನಮನವನ್ನು ಮುಕ್ತಾಯಗೊಳಿಸಲು ಬಯಸುತ್ತೇನೆ. ಮೊದಲನೆಯದಾಗಿ, ಹೆಸರನ್ನು ಬಹಿರಂಗಪಡಿಸದ ಒಬ್ಬ ಭಾರತೀಯ ಕ್ರಿಕೆಟ್ ಬರಹಗಾರರ ಮಾತುಗಳು ಇಲ್ಲಿವೆ:

‘ಭಾರತದ ಅನೇಕ ಪೆವಿಲಿಯನ್ಗಳು ಮತ್ತು ಕ್ಲಬ್ಹೌಸ್ಗಳಲ್ಲಿ ಒಬ್ಬ ಕ್ರಿಕೆಟಿಗನ ಭಾವಚಿತ್ರವಿದೆ. ಅದರಲ್ಲಿ ಅವರು ಬ್ಯಾಟ್ ಎತ್ತಿ ನೇರವಾಗಿ ನಿಂತಿದ್ದಾರೆ. ತಮ್ಮ ಕ್ಯಾಪ್ನ ಅಂಚಿನ ಕೆಳಗಿನಿಂದ ಎದುರಾಳಿ ಬೌಲರ್ನತ್ತ ಸವಾಲೆಸೆಯುವಂತೆ, ನಿನ್ನಿಂದ ಸಾಧ್ಯವಾದದ್ದನ್ನೆಲ್ಲಾ ಮಾಡು ಎಂದು ಹೇಳುವಂತಹ ದೃಢವಾದ ನೋಟವನ್ನು ಅವರು ಬೀರಿದ್ದಾರೆ. ಇದು ಆಟದ ಬಗ್ಗೆ ಸಿ.ಕೆ. ನಾಯ್ಡು ಹೊಂದಿದ್ದ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ. ನಾಯ್ಡು ಒಬ್ಬ ಅಪ್ರತಿಮ ಪ್ರತಿಭೆಯಾಗಿದ್ದರು. ಅವರ ಮುಂದೆ ಯಾರೂ ನಿಲ್ಲಲು ಸಾಧ್ಯವಿರಲಿಲ್ಲ. ಅವರು ಯಾವುದೇ ಬೌಲರ್ಗೆ ಮಣಿಯುತ್ತಿರಲಿಲ್ಲ. ಅವರು ಹಾಫ್-ವಾಲಿ ಎಸೆತವನ್ನು ಬಲವಾಗಿ ಹೊಡೆಯುತ್ತಿದ್ದರು ಮತ್ತು ಮರುಕ್ಷಣವೇ ಮಿಡಲ್ ಸ್ಟಂಪ್ ಮೇಲಿನ ಚೆಂಡನ್ನು ಫೈನ್-ಲೆಗ್ ಬೌಂಡರಿಯತ್ತ ತಳ್ಳಿಬಿಡುತ್ತಿದ್ದರು. ಅವರು ಕವರ್-ಡ್ರೈವ್ ಹೊಡೆದಾಗ, ಯಾರೋ ಅವರಿಗೆ ಕೀ ಕೊಟ್ಟು, ಇದ್ದಕ್ಕಿದ್ದಂತೆ ಸ್ಪ್ರಿಂಗ್ ಬಿಡುಗಡೆ ಮಾಡಿದಂತೆ ಭಾಸವಾಗುತ್ತಿತ್ತು. ಅವರು ತಮ್ಮ ಹಿಂದಿನ ಕಾಲಿನ ಮೇಲೆ ನಿಂತು, ಬೌಲರ್ನ ಪಕ್ಕದಲ್ಲೇ ಚೆಂಡನ್ನು ಜೋರಾಗಿ ಹೊಡೆಯುತ್ತಿದ್ದರು. ನಂತರ ಪಕ್ಕಕ್ಕೆ ಸರಿದು, ಫಸ್ಟ್ ಮತ್ತು ಸೆಕೆಂಡ್ ಸ್ಲಿಪ್ಗಳ ನಡುವೆ ಬ್ಯಾಕ್-ಕಟ್ ಹೊಡೆತವನ್ನು ಆಡುತ್ತಿದ್ದರು.’

1933-34ರಲ್ಲಿ ಪ್ರವಾಸದಲ್ಲಿದ್ದ ಎಂಸಿಸಿ ತಂಡದ ವಿರುದ್ಧ ನಾಯ್ಡು ಆಡಿದ ಪಂದ್ಯಗಳಲ್ಲಿ ಒಂದು, ಲಾಹೋರ್ನಲ್ಲಿ ಪಂಜಾಬ್ ಗವರ್ನರ್ಸ್ ಇಲೆವೆನ್ ಪರವಾಗಿತ್ತು. ಆ ಪಂದ್ಯದಲ್ಲಿ ಅವರು 116 ರನ್ಗಳನ್ನು ಗಳಿಸಿದರು, ಇದರಲ್ಲಿ ಹಲವು ಸಿಕ್ಸರ್ಗಳೂ ಸೇರಿದ್ದವು. ಆಗ ಲಾರೆನ್ಸ್ ಗಾರ್ಡನ್ಸ್ (ಈಗ ಬಾಗ್-ಎ-ಜಿನ್ನಾ) ಎಂದು ಕರೆಯಲ್ಪಡುತ್ತಿದ್ದ ಮೈದಾನದಲ್ಲಿ ಪ್ರೇಕ್ಷಕರ ಸಾಲಿನಲ್ಲಿ ಪೃಥ್ವಿರಾಜ್ ಎಂಬ ಯುವ ವಿಶ್ವವಿದ್ಯಾನಿಲಯ ಮಟ್ಟದ ಕ್ರಿಕೆಟಿಗನಿದ್ದ. ಅವನು ಇಂಗ್ಲಿಷ್ ತಂಡದ ವಿರುದ್ಧದ ಮುಂದಿನ ಪಂದ್ಯದಲ್ಲಿ ಆಡಬೇಕಿತ್ತು. ಆ ಪಂದ್ಯದ ಬಗ್ಗೆ ಅವನಲ್ಲಿದ್ದ ಕೊಂಚ ಆತಂಕವೂ, ತನ್ನ ಹೀರೋ ಬ್ಯಾಟಿಂಗ್ ಮಾಡುವುದನ್ನು ನೋಡಿದ ಕೂಡಲೇ ಮಾಯವಾಗಿ ಹೋಯಿತು. ಏಕೆಂದರೆ, ಪೃಥ್ವಿರಾಜ್ ನಂತರ ನೆನಪಿಸಿಕೊಂಡಂತೆ:

‘‘ನಾಯ್ಡು ಬಾರಿಸಿದ ಅದ್ಭುತ ‘ಸ್ಕ್ವೇರ್ ಹಿಟ್’ಗಳನ್ನು ಯಾರೂ ಮರೆಯಲು ಸಾಧ್ಯವಿಲ್ಲ. ತಮ್ಮ ಮಣಿಕಟ್ಟುಗಳನ್ನು ಲಘುವಾಗಿ ತಿರುಗಿಸಿ ಅವರು ಚೆಂಡನ್ನು ಬಾರಿಸಿದಾಗ, ಅದು ಆಕಾಶದತ್ತ ನುಗ್ಗಿ ಮೇಲಕ್ಕೆ ಮೇಲಕ್ಕೆ ಏರುತ್ತಾ ಹೋಯಿತು. ಬೌಂಡರಿ ಗೆರೆಯ ಬಳಿ ನಿಂತಿದ್ದ ಇಂಗ್ಲಿಷ್ ಫೀಲ್ಡರ್ಗಳು ಮೊದಲು ಚೆಂಡನ್ನು ಹಿಡಿಯಬಹುದೆಂದು ನಿರೀಕ್ಷಿಸಿದರು. ಆದರೆ ನಂತರ ಅದು ಆಕಾಶದಲ್ಲಿ ಮೇಲಕ್ಕೆ ಸಾಗುವುದನ್ನೇ ನೋಡುತ್ತಾ ನಿಂತರು. ಅದು ಕೇವಲ ಒಂದು ಸಣ್ಣ ಚುಕ್ಕೆಯಂತೆ ಕಾಣುವಷ್ಟು ಎತ್ತರಕ್ಕೆ ಏರಿ, ಬಹುತೇಕ ಕಣ್ಮರೆಯಾಯಿತು. ಆಮೇಲೆ ಒಂದು ವಕ್ರಪಥದಲ್ಲಿ ಸಾಗಿ, ರಸ್ತೆಯಾಚೆಗಿದ್ದ ಮರಗಳ ಆಚೆಗೆ, ಮಾಂಟ್ಗೊಮರಿ ಹಾಲ್ ಬಳಿ ಬಂದು ಬಿತ್ತು. ಇಂಥ ದೃಶ್ಯವನ್ನು ನಾನು ನನ್ನ ಜೀವನದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಮರುದಿನವೇ ನಾನು ಅಮೃತಸರದಲ್ಲಿ ಜಾರ್ಡಿನ್ ಅವರ ತಂಡದ ವಿರುದ್ಧ ಆಡಬೇಕಿತ್ತು. ನಾಯ್ಡು ನನ್ನ ಮನಸ್ಸಿನಲ್ಲಿದ್ದ ವಿದೇಶಿಯರ ಬಗೆಗಿನ ಎಲ್ಲ ಭಯವನ್ನೂ ಹೋಗಲಾಡಿಸಿದ್ದರು..’’

(ಅಂಕಣಕಾರರು ಭಾರತೀಯ ಇತಿಹಾಸಕಾರ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಆಡಳಿತಾಧಿಕಾರಿ)

Tags

cricketC.K. Nayudu
share
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
Next Story
X