Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ನೆಲದನಿ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಮಾಹಿತಿ ಮಾರ್ಗದರ್ಶನ
    • ಆರೋಗ್ಯ
    • ಓ ಮೆಣಸೇ
    • ಕೃತಿ ಪರಿಚಯ
    • ಝಲಕ್
    • ಬುಡಬುಡಿಕೆ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಕಾಲಮಾನ
  5. ಬಹುತ್ವದ ಏಕನಾದ

ಬಹುತ್ವದ ಏಕನಾದ

ರಾಮಚಂದ್ರ ಗುಹಾರಾಮಚಂದ್ರ ಗುಹಾ20 Oct 2026 9:52 AM IST
share
ಬಹುತ್ವದ ಏಕನಾದ

ಇತರ ಯಾವುದೇ ಕ್ಷೇತ್ರಕ್ಕಿಂತ ಹೆಚ್ಚಾಗಿ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬದುಕಿದ್ದಾರೆ, ಕೆಲಸ ಮಾಡಿದ್ದಾರೆ, ಶ್ರಮಿಸಿದ್ದಾರೆ ಮತ್ತು ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಶ್ರೇಷ್ಠ ಹಿಂದೂ ಸಂಗೀತಗಾರರು, ಮುಸ್ಲಿಮ್ ಉಸ್ತಾದ್‌ಗಳ ಬಳಿ ಪಡೆದ ತರಬೇತಿಗೆ ಅಪಾರ ಋಣಿಯಾಗಿದ್ದಾರೆ. ಉದಾಹರಣೆಗೆ, ಕೇಸರಬಾಯಿ ಕೇರ್ಕರ್ ಅವರ ಪಾಲಿಗೆ ಅಲ್ಲಾದಿಯಾ ಖಾನ್ ಅವರ ಮಹತ್ವವೇನೆಂದು ಅಥವಾ ರವಿಶಂಕರ್ ಅವರ ಪಾಲಿಗೆ ಅಲ್ಲಾವುದ್ದೀನ್ ಖಾನ್ ಅವರ ಮಹತ್ವವೇನೆಂದು ಯೋಚಿಸಿ ನೋಡಿ. ಇನ್ನೊಂದೆಡೆ, ಮುಸ್ಲಿಮ್ ಸಂಗೀತ ಪರಂಪರೆಯ ಮೇಲೆ ಹಿಂದೂ ಪ್ರಭಾವವೂ ಎದ್ದು ಕಾಣುತ್ತದೆ.

ಸುಮಾರು ಇಪ್ಪತ್ತು ವರ್ಷಗಳ ಕೆಳಗೆ, ಶೈಕ್ಷಣಿಕ ಸಮ್ಮೇಳನವೊಂದಕ್ಕಾಗಿ ನಾನು ಲಾಹೋರ್‌ನಲ್ಲಿದ್ದೆ. ಅಲ್ಲಿ ನನಗೆ ಶಾಸ್ತ್ರೀಯ ಸಂಗೀತಗಾರನಾಗಲು ಹಂಬಲಿಸುತ್ತಿದ್ದ ಒಬ್ಬ ಯುವಕ ಪರಿಚಯವಾದ. ಆತ ಕರಾಚಿಯಲ್ಲಿರುವ ತನ್ನ ಗುರುಗಳ ಬಳಿ ಸಂಗೀತ ಕಲಿಯಲು ಪ್ರತೀ ವಾರವೂ ಹೋಗುತ್ತಿದ್ದ. ನನಗೆ ಸ್ವತಃ ಹಾಡಲು ಬರುವುದಿಲ್ಲವಾದರೂ, ಹಿಂದೂಸ್ತಾನಿ ಸಂಗೀತದ ಬಗ್ಗೆ ಬಾಲ್ಯದಿಂದಲೂ ಅಪಾರ ಪ್ರೀತಿ. ಪಾಕಿಸ್ತಾನದ ಈ ಪ್ರತಿಭಾವಂತ ಗಾಯಕನಿಂದ ಒಂದು ವಿಷಯ ತಿಳಿದು ನನಗೆ ಆಶ್ಚರ್ಯವಾಯಿತು. ಅವನ ಗುರುಗಳು ಒಂದು ನಿರ್ದಿಷ್ಟ ರಾಗವನ್ನು ಉಲ್ಲೇಖಿಸುತ್ತಾ, ಅದು ಹಿಂದೂಗಳಿಗೆ ಸೇರಿದ್ದು ಎಂದು ಲಘುವಾಗಿ ಅಥವಾ ಕೀಳಾಗಿ ಮಾತನಾಡುತ್ತಿದ್ದರಂತೆ. ಭಾರತದ ಶಾಸ್ತ್ರೀಯ ಸಂಗೀತಗಾರರಲ್ಲಿ ಇಂತಹ ಭೇದಭಾವಗಳಿಲ್ಲ ಎಂದು ಆ ಯುವಕನಿಗೆ ಹೇಳಲು ನನಗೆ ಮನಸ್ಸಾಗಲಿಲ್ಲ. ಅಲ್ಲದೆ, ಆ ಯುವಕ ಮೆಚ್ಚಿಕೊಂಡಿದ್ದ ಗಾಯಕಿ ರೋಷನಾರಾ ಬೇಗಂ ಅವರು ಪಾಕಿಸ್ತಾನಕ್ಕೆ ತೆರಳಿದ ನಂತರವೂ ಶಂಕರ ಮತ್ತು ದುರ್ಗಾ ರಾಗಗಳನ್ನು ಹಾಡುತ್ತಿದ್ದರು. ಇವು ಹಿಂದೂ ದೇವತೆಗಳ ಹೆಸರನ್ನು ಹೊಂದಿದ್ದರೂ, ಅವರು ಅದನ್ನು ಮುಂದುವರಿಸಿದ್ದರು. ಸಲಾಮತ್ ಅಲಿ ಖಾನ್ ಅವರು ಹಾಡಿದ ‘ನದಿಯಾ ಕಿನಾರೆ ಮೋರಾ ಗಾಂವ್’ ಎಂಬ ಗೀತೆಯ ಬಗ್ಗೆಯೂ ನಾನು ಹೇಳಬಹುದಿತ್ತು. ಪಾಕಿಸ್ತಾನದಲ್ಲೇ ನೆಲೆಸಿದ್ದ ಸಲಾಮತ್ ಅಲಿ ಖಾನ್, ಆ ಠುಮ್ರಿಯು ಕೃಷ್ಣನ ಮೇಲಿನ ರಾಧೆಯ ಪ್ರೀತಿಯನ್ನು ಆಧರಿಸಿದೆ ಎಂದು ವಿವರಿಸಿದ್ದರು. ರೋಷನಾರಾ ಮತ್ತು ಸಲಾಮತ್ ಇಬ್ಬರೂ ದೇಶ ವಿಭಜನೆಗೂ ಮುನ್ನವೇ ಜನಿಸಿದವರು ಎಂಬುದು ನಿಜ. ಆ ಕಾಲದಲ್ಲಿ, ವಿಭಜನೆಯಾಗದ ಭಾರತದ ಸಂಗೀತ ಸಂಸ್ಕೃತಿಯಲ್ಲಿ, ವಿವಿಧ ಧರ್ಮಗಳ ನಡುವೆ ವಿಚಾರಗಳು ಮತ್ತು ಕಲಾತ್ಮಕ ಅಂಶಗಳ ಮುಕ್ತ ವಿನಿಮಯ ಸಹಜವಾಗಿತ್ತು.

ಲಾಹೋರ್‌ನಲ್ಲಿ ನಡೆದ ಆ ಸಂಭಾಷಣೆಯು ನನಗೆ ಮತ್ತೆ ನೆನಪಾದದ್ದು, ಈಗ ಪ್ರಧಾನ ಮಂತ್ರಿಗಳ ಸ್ಮಾರಕ ಗ್ರಂಥಾಲಯ ಎಂದು ಕರೆಯಲ್ಪಡುವ ಸ್ಥಳದಲ್ಲಿರುವ ಗಾಂಧೀಜಿಯವರ ದಾಖಲೆಗಳ ಬೃಹತ್ ಸಂಗ್ರಹವನ್ನು ಅಧ್ಯಯನ ಮಾಡುತ್ತಿದ್ದಾಗ. ಗಾಂಧೀಜಿಯವರ ಈ ದಾಖಲೆಗಳು ಹೆಚ್ಚಾಗಿ ಸ್ವಾತಂತ್ರ್ಯ ಹೋರಾಟಗಾರರಾಗಿ ಮತ್ತು ಸಮಾಜ ಸುಧಾರಕರಾಗಿ ಅವರು ಮಾಡಿದ ಕೆಲಸಗಳಿಗೆ ಸಂಬಂಧಿಸಿವೆ. ಆದರೆ, ಆಶ್ಚರ್ಯಕರವೆಂಬಂತೆ ಅಲ್ಲಿ ಶಾಸ್ತ್ರೀಯ ಸಂಗೀತಕ್ಕೆ ಸಂಬಂಧಿಸಿದ ಒಂದು ಕಡತವೂ ನನಗೆ ಸಿಕ್ಕಿತು. 1944ರ ನವೆಂಬರ್‌ನಲ್ಲಿ, ಖ್ಯಾತ ಹಿಂದೂಸ್ತಾನಿ ಗಾಯಕ ಓಂಕಾರನಾಥ ಠಾಕೂರ್ ಅವರು ಗಾಂಧೀಜಿಯವರಿಗೆ ಪತ್ರ ಬರೆದು, ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ (ಬಿಎಚ್‌ಯು) ಸಂಗೀತ ವಿಭಾಗವೊಂದನ್ನು ಪ್ರಾರಂಭಿಸಲು ಸಹಾಯ ಕೋರಿದ್ದರು. ಗಾಂಧೀಜಿಯವರಿಗೆ ಬರೆದ ಪತ್ರದಲ್ಲಿ ಠಾಕೂರ್, ಪ್ರಸ್ತಾವಿತ ಈ ಹೊಸ ವಿಭಾಗದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತದ ವಿವಿಧ ಶೈಲಿಗಳ ವ್ಯವಸ್ಥಿತ ಅಧ್ಯಯನವನ್ನು ಕೈಗೊಳ್ಳಬಹುದು. ಈ ಶೈಲಿಗಳನ್ನು ಆಯ್ಕೆ ಮಾಡುವಾಗ ಯಾವುದೇ ಧಾರ್ಮಿಕ ಅಥವಾ ಜನಾಂಗೀಯ ಭೇದಭಾವವಿರುವುದಿಲ್ಲ ಎಂದಿದ್ದರು. ಭಾರತೀಯ ಸಾಂಸ್ಕೃತಿಕ ಸ್ವರೂಪದಲ್ಲಿ ಸಂಗೀತವು ವಹಿಸುವ ಪ್ರಮುಖ ಸ್ಥಾನ ಮತ್ತು ಭಾರತೀಯ ನಾಗರಿಕತೆಯಲ್ಲಿ ಬೆರೆತಿರುವ ವಿವಿಧ ಪ್ರವೃತ್ತಿಗಳನ್ನು ಒಗ್ಗೂಡಿಸುವ ಶಕ್ತಿಯಾಗಿ ಅದಕ್ಕಿರುವ ಮಹತ್ತರ ಮೌಲ್ಯವು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. ಠಾಕೂರ್ ಅವರು ಈ ಹೊಸ ಕೆಲಸಕ್ಕೆ ಗಾಂಧೀಜಿಯವರ ಆಶೀರ್ವಾದವನ್ನು ಬಯಸಿದ್ದರು ಮತ್ತು ಇದಕ್ಕಾಗಿ ನಿಧಿ ಸಂಗ್ರಹಿಸಲು ಅವರ ಸಹಾಯವನ್ನೂ ಕೋರಿದ್ದರು.

ಈ ಕಡತದಲ್ಲಿ ದಕ್ಷಿಣ ಭಾರತದ ಸಂಗೀತಗಾರರೊಬ್ಬರ ಪತ್ರವೂ ಇತ್ತು. ಅವರು ಠಾಕೂರ್ ಅವರ ಪ್ರಸ್ತಾವವನ್ನು ಇನ್ನಷ್ಟು ವಿಸ್ತರಿಸಿ ವಿವರಿಸಿದ್ದರು. ಅವರೇ ವಯಲಿನ್ ವಾದಕ ಪರೂರ್ ಸುಂದರಂ ಅಯ್ಯರ್. ಮೂಲತಃ ಕೇರಳದವರಾದ ಮತ್ತು ಕರ್ನಾಟಕ ಸಂಗೀತ ಪದ್ಧತಿಯಲ್ಲಿ ತರಬೇತಿ ಪಡೆದಿದ್ದ ಸುಂದರಂ ಅಯ್ಯರ್, ವಿಷ್ಣು ದಿಗಂಬರ ಪಲುಸ್ಕರ್ ಅವರು ಸ್ಥಾಪಿಸಿದ್ದ ಪ್ರಸಿದ್ಧ ಸಂಗೀತ ಶಾಲೆಯಲ್ಲಿ ಪಾಠ ಮಾಡಲು ಮುಂಬೈಗೆ ತೆರಳಿದ್ದರು. ಅಯ್ಯರ್ ಅವರ ಸಹೋದ್ಯೋಗಿಗಳಲ್ಲಿ ಓಂಕಾರನಾಥ ಠಾಕೂರ್ ಮತ್ತು ನಾರಾಯಣ ರಾವ್ ಖಾರೆ ಕೂಡ ಇದ್ದರು. ಖಾರೆ ನಂತರ ಗಾಂಧೀಜಿಯವರ ಸಾಬರಮತಿ ಆಶ್ರಮವನ್ನು ಸೇರಿಕೊಂಡರು ಮತ್ತು ಅಲ್ಲಿ ಅನೌಪಚಾರಿಕವಾಗಿ ಸಂಗೀತ ನಿರ್ದೇಶಕರಾಗಿ ಕಾರ್ಯನಿರ್ವಹಿಸಿದರು.

ಮುಂಬೈಗೆ ತೆರಳಿದ ನಂತರ ಸುಂದರಂ ಅಯ್ಯರ್ ಹಿಂದೂಸ್ತಾನಿ ಶೈಲಿಯಲ್ಲೂ ವಯಲಿನ್ ನುಡಿಸಲು ಪ್ರಾರಂಭಿಸಿದರು. ಇಂತಹ ಪ್ರಯತ್ನ ಈ ಹಿಂದೆ ಎಂದೂ ನಡೆದಿರಲಿಲ್ಲ. ಗಾಂಧೀಜಿಯವರಿಗೆ ಅವರು ಬರೆದ ಪತ್ರದಲ್ಲಿ (ದಿನಾಂಕ: 7 ನವೆಂಬರ್ 1944), ತಮ್ಮ ವೈವಿಧ್ಯಮಯ ಆಸಕ್ತಿಗಳು ಮತ್ತು ಹಿನ್ನೆಲೆಯ ಬಗ್ಗೆ ವಿವರಿಸಿದ್ದರು. ಅಲ್ಲದೆ, 1927ರಲ್ಲಿ ಕಾಂಗ್ರೆಸ್ ಅಧಿವೇಶನಕ್ಕಾಗಿ ಗಾಂಧೀಜಿಯವರು ಮದ್ರಾಸ್‌ಗೆ ಬಂದಿದ್ದಾಗ, ತಾನು ತನ್ನ ವಯಲಿನ್ ವಾದನದ ಮೂಲಕ ಅವರಿಗೆ ಮನರಂಜನೆ ನೀಡುವ ಅವಕಾಶವನ್ನು ಪಡೆದಿದ್ದೆ ಎಂಬುದನ್ನು ನೆನಪಿಸಿದ್ದರು. ಸ್ವಾತಂತ್ರ್ಯ ಚಳವಳಿಯ ನಾಯಕರಾದ ಗಾಂಧೀಜಿಯವರಲ್ಲಿ ಈ ಹೊಸ ಯೋಜನೆಯನ್ನು ಬೆಂಬಲಿಸುವಂತೆ ಅವರು ಕೋರಿದ್ದರು. ಏಕೆಂದರೆ, ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವಿವಿಧ ಸಂಗೀತ ಸಮ್ಮೇಳನಗಳ ಸಾರ್ಥಕ ಮುಕ್ತಾಯವೆಂಬಂತೆ, ಭಾರತಕ್ಕಾಗಿ ಒಂದು ಸುಸಜ್ಜಿತ ಸಂಗೀತ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವುದು ಅತ್ಯಂತ ಸೂಕ್ತವಾದ ಕೆಲಸವಾಗುತ್ತದೆ ಎಂದು ಅವರು ಪ್ರತಿಪಾದಿಸಿದ್ದರು.

ತಮ್ಮ ಆಶೀರ್ವಾದವಿದ್ದರೆ ಯಾವುದೇ ಯೋಜನೆಯೂ ಖಂಡಿತವಾಗಿಯೂ ದೊಡ್ಡ ಯಶಸ್ಸನ್ನು ಕಾಣುತ್ತದೆ ಎಂದು ಸುಂದರಂ ಅಯ್ಯರ್ ಗಾಂಧೀಜಿಯವರಿಗೆ ಹೇಳಿದ್ದರು. ಜೊತೆಗೆ, ಹಿಂದೂ-ಮುಸ್ಲಿಮ್‌ಏಕತೆಯನ್ನು ಮೂಡಿಸುವಲ್ಲಿ ಸಂಗೀತವು ಅತ್ಯಂತ ಪ್ರಬಲವಾದ ಮಾಧ್ಯಮವಾಗಿರುವುದರಿಂದ, ಸಂಗೀತವನ್ನು ಉನ್ನತ ಮಟ್ಟದಲ್ಲಿಯೂ ಪ್ರೋತ್ಸಾಹಿಸಬೇಕಾದ ಅಗತ್ಯದ ಬಗ್ಗೆ ನಾನು ಪದೇ ಪದೇ ಹೇಳಬೇಕಾಗಿಲ್ಲ ಎಂದು ಅವರು ವಿಶೇಷವಾಗಿ ಒತ್ತಿ ಹೇಳಿದ್ದರು. ಮುಸ್ಲಿಮ್ ಮತ್ತು ಹಿಂದೂ ಸಂಗೀತಗಾರರು ನೈಮತ್ ಖಾನ್ (ಇವರು ಸದಾರಂಗ್ ಎಂದೇ ಹೆಚ್ಚು ಪ್ರಸಿದ್ಧರು), ಕಬೀರ, ತುಳಸಿದಾಸ ಮತ್ತು ಮೀರಾಬಾಯಿ ಅವರ ರಚನೆಗಳನ್ನು, ಯಾವುದೇ ರೀತಿಯ ವಿವಾದಗಳಿಗೆ ಎಡೆಗೊಡದೆಯೇ ಒಟ್ಟಾಗಿ ಹಾಡುತ್ತಾರೆ ಎಂಬುದನ್ನೂ ಅವರು ಉಲ್ಲೇಖಿಸಿದ್ದರು.

ಸುಂದರಂ ಅಯ್ಯರ್ ಅವರ ಪತ್ರದಲ್ಲಿ ಕೊನೆಯದಾಗಿ ಈ ಮನವಿಯಿತ್ತು: ‘ಮಹಾತ್ಮಾಜಿ ಶೀಘ್ರದಲ್ಲೇ ಸಂಗೀತ ವಿಶ್ವವಿದ್ಯಾನಿಲಯವನ್ನು ಪ್ರಾರಂಭಿಸಿ ನಮ್ಮ ಅಮರ ಮತ್ತು ಅಮೂಲ್ಯವಾದ ಸಂಗೀತ ಸಂಪತ್ತಿನ ಘನತೆಯನ್ನು ಎತ್ತಿಹಿಡಿಯುತ್ತಾರೆ ಎಂದು ನಾನು ಆಶಿಸುತ್ತೇನೆ. ಈ ವಿಶ್ವವಿದ್ಯಾನಿಲಯವು ಪ್ರಾರಂಭವಾದ ಕೂಡಲೇ ಹಿಂದೂ-ಮುಸ್ಲಿಮ್ ಏಕತೆಯು ಎಲ್ಲೆಡೆ ಹರಡುತ್ತದೆ ಮತ್ತು ನಾವು ಬಹುಕಾಲದಿಂದ ಕಾಯುತ್ತಿದ್ದ ಸ್ವರಾಜ್ಯವು ನಮಗೆ ಲಭಿಸುತ್ತದೆ’.

ಠಾಕೂರ್ ಅವರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ವಿವಿಧ ಅಂಶಗಳನ್ನು ಒಗ್ಗೂಡಿಸುವ ಮಾಧ್ಯಮ ಎಂದು ಸಾಮಾನ್ಯವಾಗಿ ಬಣ್ಣಿಸಿದ್ದರೆ, ಸುಂದರಂ ಅಯ್ಯರ್ ಅವರು ಅದನ್ನು ಹಿಂದೂ-ಮುಸ್ಲಿಮ್ ಏಕತೆಯನ್ನು ಸಾಧಿಸುವ ಪ್ರಮುಖ ಸಾಧನವೆಂದು ಸ್ಪಷ್ಟವಾಗಿ ಪ್ರತಿಪಾದಿಸಿದ್ದರು. ಇಲ್ಲಿ ಅವರು ತಮ್ಮ ಸ್ವಂತ ಅನುಭವವನ್ನು ಆಧರಿಸಿ ಮಾತನಾಡುತ್ತಿದ್ದರು (ಅವರು ಕಿರಾಣ ಘರಾನಾದ ಉಸ್ತಾದ್ ಅಬ್ದುಲ್ ಕರೀಮ್ ಖಾನ್ ಅವರ ಆಪ್ತ ಸ್ನೇಹಿತರಾಗಿದ್ದರು ಮತ್ತು ಅವರ ದೊಡ್ಡ ಅಭಿಮಾನಿಯೂ ಆಗಿದ್ದರು). ಜೊತೆಗೆ, ಭಾರತದ ಈ ಎರಡು ಪ್ರಮುಖ ಧಾರ್ಮಿಕ ಸಮುದಾಯಗಳ ನಡುವೆ ಸಾಮರಸ್ಯದ ಸಂಬಂಧವಿರಬೇಕೆಂಬುದು ಗಾಂಧಿಯವರ ಹೃದಯಕ್ಕೆ ಅತ್ಯಂತ ಹತ್ತಿರವಾದ ವಿಷಯವಾಗಿತ್ತು ಎಂಬುದು ಕೂಡ ಅವರಿಗೆ ತಿಳಿದಿತ್ತು. ದುರದೃಷ್ಟವಶಾತ್, ಅಯ್ಯರ್ ಅವರ ಮಾತುಗಳಿಗೆ ಗಾಂಧಿಯವರು ಪ್ರತಿಕ್ರಿಯಿಸಿದ ದಾಖಲೆಗಳಿಲ್ಲ. ಆದರೆ, ಠಾಕೂರ್ ಅವರಿಗೆ ಗಾಂಧಿಯವರು ಸಂಕ್ಷಿಪ್ತವಾಗಿ ಉತ್ತರಿಸಿದ್ದರು. ಅದರಲ್ಲಿ ಅವರು, ರಾಜಕೀಯ ಪ್ರೋತ್ಸಾಹವನ್ನಾಗಲಿ ಅಥವಾ ಕಾರ್ಪೊರೇಟ್ ನಿಧಿಗಳನ್ನಾಗಲಿ ಬಳಸುವ ಬದಲು, ಶಾಂತಿನಿಕೇತನ ಮಾದರಿಯನ್ನು ಅನುಸರಿಸಿ, ಸಂಸ್ಥೆಯೊಳಗೆ ಸಂಗೀತವು ಸಹಜವಾಗಿ ವಿಕಸನಗೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದರು.

ಗಾಂಧಿಯವರು 1948ರಲ್ಲಿ ನಿಧನರಾದರು. ಅದರ ಎರಡು ವರ್ಷಗಳ ನಂತರ ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ವಿಭಾಗವೊಂದನ್ನು ಸ್ಥಾಪಿಸಲಾಯಿತು. ಓಂಕಾರನಾಥ ಠಾಕೂರ್ ಅವರು ಇದರ ಮುಖ್ಯಸ್ಥರಾಗಿದ್ದರು. ಅತ್ತ ಮದ್ರಾಸ್ ವಿಶ್ವವಿದ್ಯಾನಿಲಯದಲ್ಲಿ ಸುಂದರಂ ಅಯ್ಯರ್ ಅವರು ಸಂಗೀತ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು. ಅವರ ಮಗ ಮತ್ತು ಶಿಷ್ಯ ಎಂ.ಎಸ್. ಗೋಪಾಲಕೃಷ್ಣನ್ ಅವರು ಕರ್ನಾಟಕ ಮತ್ತು ಹಿಂದೂಸ್ತಾನಿ ಎರಡೂ ಶೈಲಿಗಳಲ್ಲಿ ನುಡಿಸಲು ಪ್ರಾರಂಭಿಸಿದ್ದರು. ಆಗಾಗ ಅವರು ತಮ್ಮ ತಂದೆಯ ಸ್ನೇಹಿತ ಓಂಕಾರನಾಥ ಠಾಕೂರ್ ಅವರಿಗೆ ಸಾಥ್ ನೀಡುತ್ತಿದ್ದರು. ಇದೇ ಸಮಯದಲ್ಲಿ, ಮೂಲತಃ ಕರ್ನಾಟಕ ಸಂಗೀತ ಪರಂಪರೆಯಲ್ಲಿ ತರಬೇತಿ ಪಡೆದಿದ್ದ ಮತ್ತೊಬ್ಬ ಪ್ರತಿಭಾವಂತ ಯುವ ಪಿಟೀಲು ವಾದಕರು ಠಾಕೂರ್ ಅವರ ಶಿಷ್ಯರಾಗಲು ಬನಾರಸ್‌ಗೆ ತೆರಳಿದರು. ಅವರೇ ಎನ್. ರಾಜಂ. ಎಂಭತ್ತರ ಹರೆಯದಲ್ಲೂ ಈಗಲೂ ಸಂಗೀತ ಪ್ರದರ್ಶನ ನೀಡುತ್ತಿರುವ ಇವರು, ಪ್ರಸ್ತುತ ಜೀವಂತವಾಗಿರುವ ಶ್ರೇಷ್ಠ ಶಾಸ್ತ್ರೀಯ ವಾದ್ಯ ಸಂಗೀತಗಾರರಲ್ಲಿ ಒಬ್ಬರು ಎಂದು ಪರಿಗಣಿಸಲ್ಪಡುತ್ತಾರೆ.

ಬನಾರಸ್‌ನಲ್ಲಿ ನೆಲೆಸಿದ್ದ ತಮಿಳು ಮೂಲದ ರಾಜಂ ಅವರು, ಬನಾರಸ್‌ನವರೇ ಆದ ಬಿಸ್ಮಿಲ್ಲಾ ಖಾನ್ ಅವರೊಂದಿಗೆ ಕೆಲವು ಸ್ಮರಣೀಯ ಯುಗಳ ವಾದನಗಳನ್ನು ಪ್ರಸ್ತುತಪಡಿಸಿದ್ದಾರೆ. ಯೂಟ್ಯೂಬ್‌ನಲ್ಲಿ ಲಭ್ಯವಿರುವ ಇವರ ಪ್ರದರ್ಶನಗಳು, ಹಿಂದೂ-ಮುಸ್ಲಿಮ್ ಏಕತೆಯನ್ನು ಬೆಸೆಯುವಲ್ಲಿ ಸಂಗೀತವು ಎಷ್ಟು ಪ್ರಬಲ ಶಕ್ತಿಯಾಗಿದೆ ಎಂಬುದಕ್ಕೆ ಅತ್ಯುತ್ತಮ ನಿದರ್ಶನಗಳಾಗಿವೆ. ಶಹನಾಯಿಗೆ ಕರ್ನಾಟಕ ಸಂಗೀತ ಪದ್ಧತಿಯಲ್ಲಿ ‘ನಾದಸ್ವರ’ ಸಮಾನವಾದ ವಾದ್ಯವಾಗಿದ್ದರೆ, ದಕ್ಷಿಣ ಭಾರತದಲ್ಲಿ ಬಿಸ್ಮಿಲ್ಲಾ ಖಾನ್ ಅವರಿಗೆ ಬಹುತೇಕ ಸಮಾನವಾದ ವ್ಯಕ್ತಿತ್ವ ಹೊಂದಿದ್ದವರು ಶೇಕ್ ಚಿನ್ನ ಮೌಲಾನಾ. ಇವರು ಶ್ರೀರಂಗಂನಂತಹ ದೇವಾಲಯ ಪಟ್ಟಣದಲ್ಲಿ ನೆಲೆಸಿ ಸಂಗೀತ ಸೇವೆ ಸಲ್ಲಿಸುತ್ತಿದ್ದರು. ಇದು ಪರೂರ್ ಸುಂದರಂ ಅಯ್ಯರ್ ಅವರು ಗಾಂಧಿಯವರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದ, ಸಂಸ್ಕೃತಿಗಳ ಸಮ್ಮಿಲನ ಪರಿಕಲ್ಪನೆಗೆ ಮತ್ತೊಂದು ನಿದರ್ಶನವಾಗಿದೆ.

ಇತರ ಯಾವುದೇ ಕ್ಷೇತ್ರಕ್ಕಿಂತ ಹೆಚ್ಚಾಗಿ, ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೆ ಬದುಕಿದ್ದಾರೆ, ಕೆಲಸ ಮಾಡಿದ್ದಾರೆ, ಶ್ರಮಿಸಿದ್ದಾರೆ ಮತ್ತು ಸೃಜನಶೀಲ ಕೃತಿಗಳನ್ನು ರಚಿಸಿದ್ದಾರೆ. ಅನೇಕ ಶ್ರೇಷ್ಠ ಹಿಂದೂ ಸಂಗೀತಗಾರರು, ಮುಸ್ಲಿಮ್ ಉಸ್ತಾದ್‌ಗಳ ಬಳಿ ಪಡೆದ ತರಬೇತಿಗೆ ಅಪಾರ ಋಣಿಯಾಗಿದ್ದಾರೆ. ಉದಾಹರಣೆಗೆ, ಕೇಸರಬಾಯಿ ಕೇರ್ಕರ್ ಅವರ ಪಾಲಿಗೆ ಅಲ್ಲಾದಿಯಾ ಖಾನ್ ಅವರ ಮಹತ್ವವೇನೆಂದು ಅಥವಾ ರವಿಶಂಕರ್ ಅವರ ಪಾಲಿಗೆ ಅಲ್ಲಾವುದ್ದೀನ್ ಖಾನ್ ಅವರ ಮಹತ್ವವೇನೆಂದು ಯೋಚಿಸಿ ನೋಡಿ. ಇನ್ನೊಂದೆಡೆ, ಮುಸ್ಲಿಮ್ ಸಂಗೀತ ಪರಂಪರೆಯ ಮೇಲೆ ಹಿಂದೂ ಪ್ರಭಾವವೂ ಎದ್ದು ಕಾಣುತ್ತದೆ. ಆಗ್ರಾ ಘರಾನಾದ ದಿಗ್ಗಜರಾದ ಶರಾಫತ್ ಮತ್ತು ಲತಫತ್ ಹುಸೇನ್ ಖಾನ್ ಅವರು ಯಮನ್ ರಾಗದಲ್ಲಿ ಪ್ರಸ್ತುತಪಡಿಸಿದ ಒಂದು ರಚನೆಯಲ್ಲಿ ‘ದರ್ಶನ ದೇವೋ ಶಂಕರ ಮಹಾದೇವ’ ಎಂಬ ಸಾಲು ಬರುತ್ತದೆ. ಇಲ್ಲಿ ಮುಸ್ಲಿಮ್ ಗಾಯಕರು, ಭಕ್ತರು ಹಿಂದೂ ದೇವರಾದ ಶಿವನನ್ನು ಉದ್ದೇಶಿಸಿ, ಅವನ ದಿವ್ಯ ಪ್ರಭೆಯ ದರ್ಶನವನ್ನು ತಮಗೆ ಕರುಣಿಸುವಂತೆ ಪ್ರಾರ್ಥಿಸುತ್ತಾರೆ. ಹಾಗಿದ್ದರೂ, ಭಾರತದ ವಿಭಜನೆಯು ನಮ್ಮ ಸಂಗೀತ ಪರಂಪರೆಯಲ್ಲಿದ್ದ ವಿಶಾಲವಾದ, ಎಲ್ಲರನ್ನೂ ಒಳಗೊಳ್ಳುವ ಮತ್ತು ವಿವಿಧ ಸಂಸ್ಕೃತಿಗಳ ಸಮ್ಮಿಲನವನ್ನು ಪ್ರತಿಬಿಂಬಿಸುವ ಗುಣಕ್ಕೆ ತೀವ್ರ ಹಾನಿಯುಂಟುಮಾಡಿತು. ಈ ಹಾನಿಯು ಪಾಕಿಸ್ತಾನದಲ್ಲಿ ಮೊದಲು ಗೋಚರಿಸಿತು ಮತ್ತು ಅಲ್ಲಿಯೇ ಹೆಚ್ಚು ಕಾಲ ಉಳಿದುಕೊಂಡಿತು. ಇದೇ ಕಾರಣಕ್ಕೆ, ಅಲ್ಲಿನ ಯುವ ಗಾಯಕರಿಗೆ ರೋಷನಾರಾ ಬೇಗಂ ಮತ್ತು ಸಲಾಮತ್ ಅಲಿ ಖಾನ್ ಅವರ ಸಂಗೀತದಲ್ಲಿರುವ ಹಿಂದೂ ಎಂದು ಕರೆಯಬಹುದಾದ ವಿಷಯಗಳ ಬಗ್ಗೆ ಅರಿವಿಲ್ಲ. ಅಲ್ಲದೆ, ಇದೇ ಕಾರಣದಿಂದಲೇ ಬಡೆ ಗುಲಾಮ್ ಅಲಿ ಖಾನ್ ಅವರು ಪಾಕಿಸ್ತಾನವನ್ನು ತೊರೆದು 1950ರ ದಶಕದಲ್ಲಿ ಭಾರತಕ್ಕೆ ಮರಳಲು ನಿರ್ಧರಿಸಿದರು. 1947ರ ನಂತರ, ಪಾಕಿಸ್ತಾನದಲ್ಲಿ ಸಾರ್ವಜನಿಕವಾಗಿ ಸಕ್ರಿಯರಾಗಿದ್ದ ಹಿಂದೂ ಅಥವಾ ಸಿಖ್ ಸಂಗೀತಗಾರರು ಬಹುತೇಕ ಇಲ್ಲದಂತಾದರು. ಇದಕ್ಕೆ ವಿರುದ್ಧವಾಗಿ, ಹಿಂದೂ ಬಹುಸಂಖ್ಯಾತ ಭಾರತದಲ್ಲಿ ನೂರಾರು ಸಂಖ್ಯೆಯಲ್ಲಿಲ್ಲದಿದ್ದರೂ, ಡಝನ್‌ಗಟ್ಟಲೆ ಅತ್ಯುತ್ತಮ ಮುಸ್ಲಿಮ್ ಮತ್ತು ಸಿಖ್ ಸಂಗೀತಗಾರರು ಅಪಾರ ಮೆಚ್ಚುಗೆಯೊಂದಿಗೆ ಪ್ರದರ್ಶನಗಳನ್ನು ನೀಡುತ್ತಿದ್ದರು. ಅವರಲ್ಲಿ ಅನೇಕರಿಗೆ ಹಿಂದೂ ಶಿಷ್ಯರೂ ಇದ್ದರು.

ಆದರೆ, ಆತ್ಮತೃಪ್ತಿಗೆ ಇಲ್ಲಿ ಯಾವುದೇ ಅವಕಾಶವಿಲ್ಲ. ಬಾಲಿವುಡ್ ಈಗ ಬಹುತೇಕ ಮೋದಿ ಆಡಳಿತದ ಬಹುಸಂಖ್ಯಾತವಾದಕ್ಕೆ ಶರಣಾಗಿದೆ. ಲತಾ ಮಂಗೇಶ್ಕರ್ ಅವರ ‘ಅಲ್ಲಾ ತೇರೋ ನಾಮ್, ಈಶ್ವರ್ ತೇರೋ ನಾಮ್’ (1961ರ ಚಲನಚಿತ್ರ; ಸಾಹಿತ್ಯ: ಸಾಹಿರ್ ಲುಧಿಯಾನ್ವಿ, ಸಂಗೀತ: ಜೈದೇವ್) ಹಾಡಿನಲ್ಲಿರುವಂತಹ ಮಾಂತ್ರಿಕ ಅನುರಣನವನ್ನು ಹೊಂದಿರುವ ಹಾಡೊಂದನ್ನು ಇಂದಿನ ಕಾಲದಲ್ಲಿ ರಚಿಸಬಹುದು ಅಥವಾ ಹಾಡಬಹುದೆಂದು ಊಹಿಸಿಕೊಳ್ಳಲಾದರೂ ಸಾಧ್ಯವಿದೆಯೇ? ಅಲ್ಲದೆ, ಶಾಸ್ತ್ರೀಯ ಸಂಗೀತವನ್ನು ಕೇವಲ ಹಿಂದೂ ಚೌಕಟ್ಟಿನಲ್ಲಿ ಮಾತ್ರ ನೋಡುವಂತೆ ಮಾಡುವ ಕೆಲವು ಕುತಂತ್ರದ ಪ್ರಯತ್ನಗಳೂ ನಡೆಯುತ್ತಿವೆ. ಬನಾರಸ್‌ನ ಪ್ರಖ್ಯಾತ ಠುಮ್ರಿ ಗಾಯಕರೊಬ್ಬರ ಸಂಗೀತ ಕಚೇರಿಯನ್ನು ಕೇಳುತ್ತಿದ್ದಾಗ, ಅವರು ವಿವಿಧ ಖಾನ್ ಸಾಹೇಬರ (ಮುಸ್ಲಿಮ್ ಸಂಗೀತಗಾರರ) ಬಗ್ಗೆ ಅವಹೇಳನಕಾರಿ ಟೀಕೆಗಳನ್ನು ಮಾಡಿದ್ದನ್ನು ಕೇಳಿ ನನಗೆ ಆಘಾತವಾಯಿತು. ಬಹುಶಃ ಇದು ಅವರ ಮೇಲ್ಜಾತಿ ಹಿಂದೂ ಹಿನ್ನೆಲೆಗೆ ಸಂಬಂಧಿಸಿರಬಹುದು. ಕರ್ನಾಟಕ ಸಂಗೀತದ ಹಲವು ಕಲಾವಿದರು ಬಹಿರಂಗವಾಗಿಯೇ ಪ್ರಧಾನ ಮಂತ್ರಿ ಮತ್ತು ಅವರ ಹಿಂದೂ ಮೊದಲು (Hindu-first) ಸಿದ್ಧಾಂತವನ್ನು ಪ್ರತಿಪಾದಿಸುವ ಪಕ್ಷದೊಂದಿಗೆ ಗುರುತಿಸಿಕೊಂಡಿದ್ದಾರೆ. ಸಂಗೀತ ವಿದ್ವಾಂಸರೊಬ್ಬರು ನನಗೆ ತಿಳಿಸಿದ ಪ್ರಕಾರ, ಭಾರತದಲ್ಲಿ ಶಾಸ್ತ್ರೀಯ ಗಾಯಕರಿಗೆ ಸಿಗುವ ಸರಕಾರಿ ಪ್ರೋತ್ಸಾಹವು ಈಗ ಕಲಾವಿದರ ಧಾರ್ಮಿಕ ಗುರುತಿನೊಂದಿಗೆ ಮತ್ತು ಆಡಳಿತಾರೂಢ ಪಕ್ಷದ ಸಿದ್ಧಾಂತದೊಂದಿಗೆ ಗುರುತಿಸಿಕೊಳ್ಳಲು ಅವರು ತೋರಿಸುವ ಸಿದ್ಧತೆಯೊಂದಿಗೆ ನಿಕಟವಾಗಿ ಬೆಸೆದುಕೊಂಡಿದೆ.

ಇವೆಲ್ಲವೂ ಕೇವಲ ಆರಂಭಿಕ ಸೂಚನೆಗಳಷ್ಟೇ ಆಗಿರಲಿ ಎಂದು ಆಶಿಸೋಣ. ರಾಜಕೀಯ ಮತ್ತು ಸರಕಾರದ ವ್ಯಾಪ್ತಿಯನ್ನು ಮೀರಿ, ಹಿಂದೂಸ್ತಾನಿ ಮತ್ತು ಕರ್ನಾಟಕ ಸಂಗೀತ ಕಲಾವಿದರು ಇಂತಹ ಪ್ರವೃತ್ತಿಗಳನ್ನು ಮತ್ತು ಪ್ರಲೋಭನೆಗಳನ್ನು ವಿರೋಧಿಸುತ್ತಾರೆ ಎಂದು ನಂಬೋಣ. ನಮ್ಮ ಶಾಸ್ತ್ರೀಯ ಸಂಗೀತವು ಭಾರತೀಯ ನಾಗರಿಕತೆಯ ಅತ್ಯುನ್ನತ ಸಾಧನೆಯಾಗಿದೆ. ಅಂತಹ ಸಂಗೀತದ ಸಹಜವಾದ ಬಹುತ್ವದ ಮತ್ತು ಸಮ್ಮಿಲನಶೀಲ ಗುಣಲಕ್ಷಣವು, ಹಿಂದುತ್ವದ ಧ್ರುವೀಕರಣದ ವಿಷಕ್ಕೆ ಬಲಿಯಾದರೆ ಅದು ಅತ್ಯಂತ ದುರಂತದ ಸಂಗತಿಯಾಗುತ್ತದೆ..

(ಅಂಕಣಕಾರರು ಭಾರತೀಯ ಇತಿಹಾಸಕಾರ ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾಜಿ ಆಡಳಿತಾಧಿಕಾರಿ)

Tags

PluralityClassical MusicHindusMuslims
share
ರಾಮಚಂದ್ರ ಗುಹಾ
ರಾಮಚಂದ್ರ ಗುಹಾ
Next Story
X