Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ತಿಳಿ ವಿಜ್ಞಾನ
  5. ಭಾರತೀಯ ವೃಕ್ಷ ಪ್ರಭೇದದಲ್ಲೊಂದು ಅಚ್ಚರಿ:...

ಭಾರತೀಯ ವೃಕ್ಷ ಪ್ರಭೇದದಲ್ಲೊಂದು ಅಚ್ಚರಿ: ಕಾಂಡದಿಂದ ನೀರು ಚಿಮ್ಮುವ ಮರ

ಆರ್. ಬಿ. ಗುರುಬಸವರಾಜಆರ್. ಬಿ. ಗುರುಬಸವರಾಜ28 April 2024 9:24 AM IST
share
ಭಾರತೀಯ ವೃಕ್ಷ ಪ್ರಭೇದದಲ್ಲೊಂದು ಅಚ್ಚರಿ: ಕಾಂಡದಿಂದ ನೀರು ಚಿಮ್ಮುವ ಮರ
ಸಂಪೂರ್ಣವಾಗಿ ಬೆಳೆದ ಮರದಿಂದ ಕನಿಷ್ಠ ನಾಲ್ಕರಿಂದ ಆರು ಲೀಟರ್ ನೀರು ಸಂಗ್ರಹಿಸಬಹುದು. ಕುಡುಗೋಲು ಅಥವಾ ಇನ್ನಾವುದೇ ಹರಿತ ಸಾಧನದಿಂದ ಕಾಂಡದಲ್ಲಿನ ಲ್ಯಾಟರಲ್ ರಿಡ್ಜ್‌ಗೆ ಒಂದು ಸಣ್ಣ ರಂಧ್ರವನ್ನು ಮಾಡಿದರೆ ಸಾಕು ನೀರು ವೇಗವಾಗಿ ಚಿಮ್ಮುತ್ತದೆ. ಕರಗಿದ ಫೈಟೊಕೆಮಿಕಲ್‌ಗಳಿಂದಾಗಿ ಸ್ವಲ್ಪ ಸುವಾಸನೆ ಮತ್ತು ಕಿತ್ತಳೆ-ಹಳದಿ ಬಣ್ಣ ಇರುವುದನ್ನು ಹೊರತುಪಡಿಸಿದರೆ ಈ ನೀರು ಕುಡಿಯಲು ಯೋಗ್ಯವಾಗಿದೆ. ಹಾಗಾಗಿ ಬುಡಕಟ್ಟು ಜನರು ಬೇಸಿಗೆಯಲ್ಲಿ ಈ ಮರದ ತೊಗಟೆಯನ್ನು ಕತ್ತರಿಸಿ ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಾರೆ.

ಕಾಂಡದಿಂದ ನೀರು ಚಿಮ್ಮುವ ಮರವನ್ನು ಎಂದಾದರೂ ನೋಡಿದ್ದೀರಾ? ಎಂದು ಯಾರನ್ನಾದರೂ ಕೇಳಿದರೆ ಬಹುತೇಕರು ಇಲ್ಲ ಎನ್ನುತ್ತಾರೆ. ಅಂತಹ ವಿದ್ಯಮಾನಗಳ ಬಗ್ಗೆ ನಮಗೆ ಸ್ಥಳೀಯ ಜ್ಞಾನವಿಲ್ಲದ ಹೊರತು ನಾವು ನಿಜ ಜೀವನದಲ್ಲಿ ಅಂತಹ ಮರವನ್ನು ನೋಡುವ ಸಾಧ್ಯತೆ ತೀರಾ ಕಡಿಮೆ. ಇತ್ತೀಚೆಗೆ ಮರದ ತೊಗಟೆಯನ್ನು ಕತ್ತರಿಸಿದ ನಂತರ ನೀರು ಹರಿದು ಹೊರಬರುವ ವೀಡಿಯೊ ಎಲ್ಲೆಡೆ ವೈರಲ್ ಆಗಿತ್ತು. ಈ ಕುರಿತು ಅನೇಕರು ಇದು ನಿಜವೇ? ಮರಗಳಲ್ಲಿ ಇಷ್ಟು ಪ್ರಮಾಣದ ನೀರನ್ನು ಹಿಡಿದುಕೊಳ್ಳಲು ಸಾಧ್ಯವೇ? ಎಂದು ಕೇಳಿದ್ದರು. ಈ ಕುರಿತು ಮಾಹಿತಿ ಹುಡುಕಿ ಹೊರಟಾಗ ಅಚ್ಚರಿಯ ಅಂಶಗಳು ಗೋಚರಿಸಿದವು. ಅವುಗಳನ್ನು ಇಲ್ಲಿ ಹಂಚಿಕೊಂಡಿದ್ದೇನೆ.

ಭಾರತೀಯ ವೃಕ್ಷ ಪ್ರಭೇದವು ಅನೇಕ ಅಚ್ಚರಿಗಳನ್ನು ತನ್ನೊಡಲಲ್ಲಿ ಅಡಗಿಸಿಕೊಂಡಿದೆ. ಆದರೆ ನಾವು ಅವುಗಳನ್ನು ಪತ್ತೆ ಹಚ್ಚದೆ ಕಡಿದು ಹಾಕುತ್ತೇವೆ. ಕೆಲ ಮರಗಳು ತನ್ನ ಕಾಂಡದಲ್ಲಿ ನೈಸರ್ಗಿಕ ನೀರಿನ ಸಂಗ್ರಹವನ್ನು ಹೊಂದಿವೆ. ಇದರ ಹಿಂದಿರುವ ವಿಜ್ಞಾನ ಮತ್ತು ಕುತೂಹಲಕಾರಿ ಸಂಗತಿಗಳು ನಮ್ಮನ್ನು ಅಚ್ಚರಿಗೊಳಿಸುತ್ತದೆ. ಪ್ರಸಕ್ತ ವೈರಲ್ ಆಗಿರುವ ವೀಡಿಯೊ ನಮ್ಮ ನೆರೆಯ ಆಂಧ್ರಪ್ರದೇಶದ ಅರಣ್ಯ ಇಲಾಖೆಯ ಸಿಬ್ಬಂದಿ ಮಾಡಿರುವುದಾಗಿದೆ. ಕೊಂಡ ರೆಡ್ಡಿ ಬುಡಕಟ್ಟಿನ ಜನರ ಸ್ಥಳೀಯ ಜ್ಞಾನವನ್ನು ದೃಢೀಕರಿಸಲು ಆಂಧ್ರಪ್ರದೇಶದ ಅರಣ್ಯ ಇಲಾಖೆಯು ಪಾಪಿಕೊಂಡ ರಾಷ್ಟ್ರೀಯ ಉದ್ಯಾನವನದಲ್ಲಿ ನಡೆಸಿದ ಪ್ರಯೋಗದ ಭಾಗವಾಗಿ ವೀಡಿಯೊ ಮಾಡಲಾಗಿತ್ತು.

ಪ್ರಯೋಗಾರ್ಥವಾಗಿ ಬುಡಕಟ್ಟಿನ ಜನರು ಹೇಳಿದ ಮರದ ತೊಗಟೆಯನ್ನು ಕತ್ತರಿಸಲಾಯಿತು. ಅವರ ಹೇಳಿಕೆಯಂತೆ ಆ ಮರದ ಕಾಂಡದಿಂದ ನಳದಿಂದ ಬರುವಂತೆ ನೀರು ಸುರಿಯುವುದನ್ನು ವೀಡಿಯೊದಲ್ಲಿ ಕಾಣಬಹುದು. ಭಾರತೀಯ ಲಾರೆಲ್ ಹೆಸರಿನ ಮರವು ಹೀಗೆ ನೀರನ್ನು ತನ್ನ ಕಾಂಡದಲ್ಲಿ ಸಂಗ್ರಹ ಮಾಡಿಕೊಂಡಿರುತ್ತದೆ ಎಂಬುದು ಬುಡಕಟ್ಟು ಜನರ ಜ್ಞಾನವಾಗಿದೆ. ಬೇಸಿಗೆಯ ದಿನಗಳಲ್ಲಿ ಬುಡಕಟ್ಟಿನ ಜನರು ಈ ಮರದ ತೊಗಟೆಯನ್ನು ಕತ್ತರಿಸಿ ಅದರಿಂದ ಬರುವ ನೀರನ್ನು ಕುಡಿದು ತಮ್ಮ ದಾಹ ಇಂಗಿಸಿಕೊಳ್ಳುತ್ತಿದ್ದರು. ಇದು ತಲೆತಲಾಂತರದಿಂದ ನಡೆದು ಬಂದ ಸಂಗತಿಯಾಗಿದೆ.

ಟರ್ಮಿನಾಲಿಯಾ ಟೊಮೆಂಟೋಸಾ ಎಂಬುದು ಭಾರತೀಯ ಲಾರೆಲ್ ಮರದ ವೈಜ್ಞಾನಿಕ ಹೆಸರಾಗಿದೆ. ಇದು ಕಾಂಬ್ರೆಟೇಸಿ ಕುಟುಂಬದ ಸದಸ್ಯ ಆಗಿದ್ದು, ಎಲೆ ಉದುರುವ ಕಾಡುಗಳಲ್ಲಿ ಕಂಡುಬರುವ ದೊಡ್ಡ ಮರವಾಗಿದೆ.

ಇದೊಂದು ಆಲಂಕಾರಿಕ ಮರವಾಗಿದ್ದು, ದಪ್ಪವಾದ ಸಿಪ್ಪೆಯನ್ನು ಹೊಂದಿರುತ್ತದೆ. ನಯವಾದ ತಿಳಿ ಬೂದು ತೊಗಟೆ ಮತ್ತು ಹೊಳೆಯುವ ಹಸಿರು ಲ್ಯಾನ್ಸಿಲೇಟ್ ಎಲೆಗಳನ್ನು ಹೊಂದಿರುತ್ತದೆ. ಇದರ ದಪ್ಪ ಎಲೆಗಳು ವಿವಿಧ ಪಕ್ಷಿ ಪ್ರಭೇದಗಳಿಗೆ ಅತ್ಯುತ್ತಮವಾದ ಆವಾಸಸ್ಥಾನವನ್ನು ಸೃಷ್ಟಿಸುತ್ತವೆ. ತೊಗಟೆ ಸುತ್ತಲೂ ಅಂಜೂರದಂತಹ ಹಣ್ಣುಗಳು ಪಕ್ಷಿಗಳಿಗೆ ಆಹಾರವಾಗಿವೆ.

ನವೆಂಬರ್‌ನಿಂದ ಫೆಬ್ರವರಿವರೆಗೆ ಇದರ ಎಲೆಗಳು ಉದುರಲು ಪ್ರಾರಂಭವಾಗುತ್ತವೆ. ಆಗ ಅದರ ತೊಗಟೆಯಲ್ಲಿ ಬಿರುಕು ಉಂಟಾಗುತ್ತವೆ. ಬಿರುಕು ಬಿಟ್ಟ ತೊಗಟೆಯಿಂದ ಮರವನ್ನು ಸುಲಭವಾಗಿ ಗುರುತಿಸಬಹುದು. ಇದು ಮರಗಳಿಗೆ ಮೊಸಳೆಯ ಚರ್ಮದ ನೋಟವನ್ನು ನೀಡುವುದರಿಂದ ಸ್ಥಳೀಯರು ಇದನ್ನು ಮೊಸಳೆ ತೊಗಟೆ ಮರ ಎಂದು ಕರೆಯುತ್ತಾರೆ.

ಭಾರತೀಯ ಲಾರೆಲ್ ಜಾತಿಯ ಎಲ್ಲಾ ಮರಗಳು ಕಾಂಡದಲ್ಲಿ ನೀರನ್ನು ಸಂಗ್ರಹಿಸಲು ಸಾಧ್ಯವಿಲ್ಲ. ಶೇ.5 ರಿಂದ 10ರಷ್ಟು ಮರಗಳು ಮಾತ್ರ ಕಾಂಡದಲ್ಲಿ ನೀರನ್ನು ಸಂಗ್ರಹಿಸುವುದನ್ನು ಗಮನಿಸಲಾಗಿದೆ. ಇವು ಹೆಚ್ಚಾಗಿ ಹಳೆಯ ಮರಗಳಾಗಿರುತ್ತವೆ. ನೀರನ್ನು ಶೇಖರಿಸುವ ಮರಗಳು ನೆಲದಿಂದ 5ರಿಂದ 10 ಅಡಿ ಎತ್ತರದ ತಮ್ಮ ಕಾಂಡದೊಳಗೆ ಎರಡರಿಂದ ಮೂರು ಅಡಿ ಉದ್ದ ಮತ್ತು ಅರ್ಧ ಅಡಿ ದಪ್ಪವಿರುವ ಲ್ಯಾಟರಲ್ ರಿಡ್ಜ್‌ನ್ನು ಅಭಿವೃದ್ಧಿಪಡಿಸಿಕೊಂಡಿರುತ್ತವೆ. ಲ್ಯಾಟರಲ್ ರಿಡ್ಜ್ ಎಂಬುದು ಕಾಂಡದಲ್ಲಿ ನೀರಿನ ಉಪಸ್ಥಿತಿಯನ್ನು ತಿಳಿಸುವ ಪದವಾಗಿದ್ದು, ಆಗಸ್ಟ್ 2004ರ ಜರ್ನಲ್ ಕರೆಂಟ್ ಸೈನ್ಸ್‌ನಲ್ಲಿ ಮೊದಲ ಬಾರಿಗೆ ಬಳಸಲಾಗಿತ್ತು.

ಸಂಪೂರ್ಣವಾಗಿ ಬೆಳೆದ ಮರದಿಂದ ಕನಿಷ್ಠ ನಾಲ್ಕರಿಂದ ಆರು ಲೀಟರ್ ನೀರು ಸಂಗ್ರಹಿಸಬಹುದು. ಕುಡುಗೋಲು ಅಥವಾ ಇನ್ನಾವುದೇ ಹರಿತ ಸಾಧನದಿಂದ ಕಾಂಡದಲ್ಲಿನ ಲ್ಯಾಟರಲ್ ರಿಡ್ಜ್‌ಗೆ ಒಂದು ಸಣ್ಣ ರಂಧ್ರವನ್ನು ಮಾಡಿದರೆ ಸಾಕು ನೀರು ವೇಗವಾಗಿ ಚಿಮ್ಮುತ್ತದೆ. ಕರಗಿದ ಫೈಟೊಕೆಮಿಕಲ್‌ಗಳಿಂದಾಗಿ ಸ್ವಲ್ಪ ಸುವಾಸನೆ ಮತ್ತು ಕಿತ್ತಳೆ-ಹಳದಿ ಬಣ್ಣ ಇರುವುದನ್ನು ಹೊರತುಪಡಿಸಿದರೆ ಈ ನೀರು ಕುಡಿಯಲು ಯೋಗ್ಯವಾಗಿದೆ. ಹಾಗಾಗಿ ಬುಡಕಟ್ಟು ಜನರು ಬೇಸಿಗೆಯಲ್ಲಿ ಈ ಮರದ ತೊಗಟೆಯನ್ನು ಕತ್ತರಿಸಿ ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಾರೆ.

ಕ್ಸೈಲೆಮ್ ಮೂಲಕ ನೀರು ಮೇಲ್ಮುಖವಾಗಿ ಸಸ್ಯದ ಎಲ್ಲಾ ಭಾಗಗಳಿಗೂ ಹರಿಯುತ್ತದೆ ಎಂಬುದು ನಮಗೆಲ್ಲ ತಿಳಿದ ಅಂಶ. ಕ್ಸೈಲೆಮ್ ಮೂಲಕ ಎಲ್ಲಾ ಭಾಗಗಳಿಗೆ ಸಾಗಿ ಹೆಚ್ಚಾದ ನೀರನ್ನು ಟರ್ಮಿನಾಲಿಯಾ ಟೊಮೆಂಟೋಸಾ ಸಸ್ಯಗಳು ಲ್ಯಾಟರಲ್ ರಿಡ್ಜ್‌ನಲ್ಲಿ ಸಂಗ್ರಹಿಸುತ್ತವೆ. ಟರ್ಮಿನಾಲಿಯಾ ಟೊಮೆಂಟೋಸಾ ಮರಗಳ ಕಾಂಡದಲ್ಲಿ ಆಂತರಿಕ ನೀರಿನ ಸಂಗ್ರಹವು ಬರ ಪರಿಸ್ಥಿತಿಗಳಲ್ಲಿ ಬದುಕಲು ಹೊಂದಿಕೊಳ್ಳುವ ತಂತ್ರವಾಗಿದೆ.

ಟರ್ಮಿನಾಲಿಯಾ ಟೊಮೆಂಟೋಸಾ ಮರವು ಭಾರತ, ನೇಪಾಳ, ಬಾಂಗ್ಲಾದೇಶ, ಮ್ಯಾನ್ಮಾರ್, ಥಾಯ್ಲೆಂಡ್, ಲಾವೋಸ್, ಕಾಂಬೋಡಿಯಾ ಮತ್ತು ವಿಯೆಟ್ನಾಂ ಸೇರಿದಂತೆ ಆಗ್ನೇಯ ಏಶ್ಯಕ್ಕೆ ಸ್ಥಳೀಯ ಮರವಾಗಿದೆ. ಕಾಂಡದ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವು ಹಲವಾರು ವಿಶಿಷ್ಟ ಲಕ್ಷಣಗಳಲ್ಲಿ ಪ್ರಮುಖವಾಗಿದೆ.

ದೊಡ್ಡ ಮರಗಳು ಕಾಂಡದ ತಳದಿಂದ ಟ್ರಾನ್‌ಸ್ಪಿರೇಷನ್ ಮತ್ತು ಸಾಪ್ ನೀರಿನ ಹರಿವಿನ ನಡುವೆ ಗಮನಾರ್ಹ ತೊಂದರೆಯನ್ನು ಅನುಭವಿಸಬಹುದು. ಟ್ರಾನ್‌ಸ್ಪಿರೇಷನ್ ಎನ್ನುವುದು ಎಲೆಗಳ ಸ್ಟೊಮಾಟಾ ಮೂಲಕ ಸಸ್ಯಗಳಿಂದ ನೀರನ್ನು ಕಳೆದುಕೊಳ್ಳುವ ಪ್ರಕ್ರಿಯೆಯಾಗಿದೆ ಮತ್ತು ಸಸ್ಯವನ್ನು ತಂಪಾಗಿಸುವ ಕಾರ್ಯವಿಧಾನವಾಗಿ ಕಾರ್ಯನಿರ್ವಹಿಸುತ್ತದೆ. ಟ್ರಾನ್‌ಸ್ಪಿರೇಷನ್ ಸಂಭವಿಸಿದಾಗ ಮರದ ಕಾಂಡದೊಳಗೆ ನೀರಿನ ಕೊರತೆ ಉಂಟಾಗುತ್ತದೆ. ಸಾಪ್ ನೀರಿನ ಮೇಲ್ಮುಖ ಹರಿವಿನಿಂದ ಈ ಕೊರತೆಯನ್ನು ಸರಿದೂಗಿಸುತ್ತದೆ. ಆದರೂ ದೊಡ್ಡ ಮರಗಳಲ್ಲಿ ಟ್ರಾನ್‌ಸ್ಪಿರೇಷನ್ ಮತ್ತು ಸಾಪ್ ನೀರಿನ ಹರಿವಿನ ನಡುವಿನ ವಿಳಂಬ ಅವಧಿಯು ದೀರ್ಘವಾಗಿರುತ್ತದೆ.

ಬೇಸಿಗೆಯಲ್ಲಿ ವೇಗವಾದ ಟ್ರಾನ್ಸ್‌ಪಿರೇಶನ್ ದರದ ಕಾರಣದಿಂದಾಗಿ ಸಸ್ಯಗಳ ಎಲೆ ಮತ್ತು ಕಾಂಡಗಳಲ್ಲಿ ಗುಳ್ಳೆಕಟ್ಟುವಿಕೆಗೆ ಕಾರಣವಾಗುತ್ತದೆ. ಇದು ಸಸ್ಯದ ನೀರಿನ ಸಮತೋಲನದ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ. ಏಕೆಂದರೆ ಗುಳ್ಳೆಕಟ್ಟುವಿಕೆ ಕ್ಸೈಲೆಮ್ ಕೋಶಗಳ ಜಲಸಂಚಾರವನ್ನು ಕಡಿಮೆ ಮಾಡುತ್ತದೆ.

ಟರ್ಮಿನಾಲಿಯಾ ಟೊಮೆಂಟೋಸಾ ಮರವು ಈ ಎಲ್ಲಾ ವಿದ್ಯಮಾನಗಳನ್ನು ಅನುಭವಿಸಿಯೂ ಕಾಂಡದಲ್ಲಿ ನೀರನ್ನು ಸಂಗ್ರಹಿಸಿಕೊಳ್ಳುತ್ತಿರುವುದು ಅಚ್ಚರಿ ಎನಿಸುತ್ತದೆ. ಕಾಂಡದೊಳಗೆ ನೀರನ್ನು ಹೊಂದಿರುವುದು ಇದೊಂದೇ ಜಾತಿಯ ಮರವಲ್ಲ. ಏಸರ್ ಸ್ಯಾಕರಮ್, ಪಾಪ್ಯುಲಸ್ ಸಿಮೋನಿ, ಪಿಸಿಯಾ ಮರಿಯಾನಾ, ಕ್ವೆರ್ಕಸ್ ಲ್ಯುಕೋಟ್ರಿಕೋಫೊರಾ, ಥುಜಾ ಆಕ್ಸಿಡೆಂಟಲಿಸ್ ಮತ್ತು ಟ್ಸುಗಾ ಕ್ಯಾನಡೆನ್ಸಿಸ್‌ನಂತಹ ದೊಡ್ಡ ಮರಗಳು ತಮ್ಮ ಕಾಂಡದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯವನ್ನು ಹೊಂದಿವೆ. ಈ ಮರಗಳಲ್ಲದೆ ಅಡಾನ್ಸೋನಿಯಾ ಎಸ್ಪಿ ಅಥವಾ ಮಡಗಾಸ್ಕರ್‌ನಲ್ಲಿರುವ ಬಾಬಾಬ್, ಅಲೋಕಾಸುವಾರಿನಾ ಡೆಕೈಸ್ನಿಯಾನಾ (ಆಸ್ಟ್ರೇಲಿಯನ್ ಮರುಭೂಮಿ ಓಕ್), ಮತ್ತು ಗೆಟೋನಿಯಾ ಫ್ರೋರಿಬಂಡಾ (ಉಕ್ಷಿ)ನಂತಹ ಪೊದೆಗಳೂ ಕಾಂಡದಲ್ಲಿ ಅಲ್ಪಪ್ರಮಾಣದ ನೀರನ್ನು ಹೊಂದಿರುತ್ತವೆ.

ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಕೆಲವು ಸಸ್ಯಗಳು ಮಾತ್ರ ಏಕೆ ಕಾಂಡದಲ್ಲಿ ನೀರನ್ನು ಸಂಗ್ರಹಿಸುತ್ತವೆ ಎಂಬ ಪ್ರಶ್ನೆ ಕಾಡುತ್ತಿರಬಹುದು. ಮರಗಳು ನೀರನ್ನು ಮೂರು ವಿಭಿನ್ನ ವಿಭಾಗಗಳಲ್ಲಿ ಸಂಗ್ರಹಿಸುತ್ತವೆ. ಅವುಗಳೆಂದರೆ ಸಪ್ವುಡ್, ಕೋಶ ಗೋಡೆಗಳು ಮತ್ತು ಇಂಟರ್ ಸೆಲ್ಯುಲಾರ್ ಜಾಗಗಳು. ಎಲ್ಲಾ ವಿಭಾಗಗಳು ಟ್ರಾನ್ಸ್‌ಪಿರೇಶನ್‌ಗೆ ನೇರವಾಗಿ ಕನೆಕ್ಟ್ ಆಗಿರುವುದಿಲ್ಲ.

ಟರ್ಮಿನಾಲಿಯಾ ಟೊಮೆಂಟೋಸಾದಂತಹ ಪ್ರಭೇದಗಳು ತಮ್ಮ ಕಾಂಡದಲ್ಲಿ ನೈಸರ್ಗಿಕ ನೀರಿನ ಸಂಗ್ರಹ ಹೊಂದಿರಲು ಕಾರಣವೆಂದರೆ ಅದರಲ್ಲಿನ ಸಪ್ವುಡ್, ಕೋಶ ಗೋಡೆಗಳು ಮತ್ತು ಇಂಟರ್ ಸೆಲ್ಯುಲಾರ್ ಜಾಗಗಳಂತಹ ಆಂತರಿಕ ನೀರಿನ ಸಂಗ್ರಹ ವಿಭಾಗಗಳು ಹೆಚ್ಚಿನ ಉಸಿರಾಟದಿಂದ ಉಂಟಾಗುವ ಗುಳ್ಳೆಕಟ್ಟುವಿಕೆ ಮತ್ತು ಎಂಬಾಲಿಸಮ್ (ಕ್ಸೈಲೆಮ್ ನಾಳಗಳಲ್ಲಿ ಅನಿಲ ಗುಳ್ಳೆಗಳ ರಚನೆ)ಗೆ ಸರಿದೂಗಿಸುವುದರಿಂದ ಆಗಿದೆ. ಆದರೆ ಉಳಿದ ಎಲ್ಲಾ ಮರದ ಜಾತಿಗಳು ಸಮರ್ಥ ಜಲ ವಾಹಕತೆಯನ್ನು ನಿರ್ವಹಿಸಲು ಆಂತರಿಕ ಶೇಖರಣಾ ವಿಭಾಗಗಳಿಂದ ನೀರನ್ನು ಸೆಳೆಯುವ ಸಾಮರ್ಥ್ಯವನ್ನು ಹೊಂದಿಲ್ಲ. ಟರ್ಮಿನಾಲಿಯಾ ಟೊಮೆಂಟೋಸಾ ಮೃದುವಾದ ಕಾಂಡವನ್ನು ಹೊಂದಿದ ಮರವಾಗಿದೆ. ಗಟ್ಟಿಯಾದ ಕಾಂಡವನ್ನು ಹೊಂದಿದ ಮರಗಳಿಗೆ ಹೋಲಿಸಿದರೆ ಭಾರತೀಯ ಲಾರೆಲ್ ಹೆಚ್ಚು ನೀರನ್ನು ಸಂಗ್ರಹಿಸುತ್ತದೆ. ವಿಶೇಷತೆ ಹೊಂದಿದ ಇಂತಹ ಇನ್ನಷ್ಟು ಮರಗಳನ್ನು ಅರಣ್ಯ ಇಲಾಖೆಯು ಬೆಳೆಸುವತ್ತ ಚಿತ್ತ ಹರಿಸಿದರೆ ಒಳಿತಲ್ಲವೇ?

share
ಆರ್. ಬಿ. ಗುರುಬಸವರಾಜ
ಆರ್. ಬಿ. ಗುರುಬಸವರಾಜ
Next Story
X