ಹೊಸ ದೃಷ್ಟಿ

ಜೀವನದಲ್ಲಿ ನಿಜವಾದ ಹೊಸತನವು ಕ್ಯಾಲೆಂಡರ್ ಬದಲಾಗುವುದರಿಂದಲ್ಲ; ನಾವು ನೋಡುವ ದೃಷ್ಟಿ ಬದಲಾಗುವುದರಿಂದ ಹೊಸತನ ಎಂಬುದು ಹುಟ್ಟುತ್ತದೆ. ಮನಸ್ಸು ಹಳೆಯ ನೆನಪುಗಳು, ತಪ್ಪುಗಳು, ಅಪರಾಧಭಾವ, ನಿರಾಶೆಗಳು ಮತ್ತು ತೀರ್ಪುಗಳಿಂದ ತುಂಬಿಕೊಂಡಿದ್ದರೆ, ಇಂದಿನ ಕ್ಷಣವೂ ಕೂಡಾ ಹಳೆಯದಾಗಿ ಕಾಣುತ್ತದೆ. ಆದರೆ ಅದೇ ಮನಸ್ಸು ಹೊಸ ದೃಷ್ಟಿಯನ್ನು ಅಳವಡಿಸಿಕೊಂಡರೆ, ಹಳೆಯ ಸಂಬಂಧವೂ ಹೊಸದಾಗಿ ಉಸಿರಾಡುತ್ತದೆ.
ಸಂಬಂಧಗಳಲ್ಲಿ ನಾವು ಮಾಡುವ ಸಾಮಾನ್ಯ ತಪ್ಪೆಂದರೆ- ಹಳೆಯ ತಪ್ಪುಗಳನ್ನು ಇಂದಿನ ವ್ಯಕ್ತಿಯ ಮೇಲೆ ಹೇರುವುದು. ‘‘ಅವನು ಆಗ ಹೀಗೇ ಮಾಡಿದ’’, ‘‘ಅವಳು ಯಾವತ್ತೂ ಹಾಗೇ’’ ಎಂಬ ತೀರ್ಮಾನಗಳು, ಸಂಬಂಧವನ್ನು ಜೀವಂತವಾಗಿರಲು ಬಿಡುವುದಿಲ್ಲ. ವ್ಯಕ್ತಿ ಪ್ರತಿದಿನ ಬದಲಾಗುತ್ತಾನೆ; ಆದರೆ ನಮ್ಮ ದೃಷ್ಟಿ ಬದಲಾಗದೆ ಇದ್ದರೆ, ನಾವು ಆ ಬದಲಾವಣೆಯನ್ನು ನೋಡಲಾರದೆ ಹೋಗುತ್ತೇವೆ. ಹೊಸ ಮನೋಭಾವ ಎಂದರೆ- ಇಂದಿನ ವ್ಯಕ್ತಿಯನ್ನು ಇಂದಿನ ಕ್ಷಣದಲ್ಲಿ ನೋಡುವ ಧೈರ್ಯ. ನಾವೇ ಕೊಟ್ಟಿರುವ ಹಣೆಪಟ್ಟಿಗಳನ್ನು ನಾವೇ ಬದಲಿಸಲು ಒಳಗಿನ ಮನಸ್ಸಿಗೆ ಅಹಮಿನ ಸಮಸ್ಯೆ, ಜೊತೆಗೆ ರೂಢಿ. ಈಗಾಗಲೇ ಆಗಿರುವ ರೂಢಿಯ ಪ್ರಕಾರ ಹೋಗುವುದಕ್ಕೆ, ಚಿಂತಿಸುವುದಕ್ಕೆ, ನೋಡುವುದಕ್ಕೆ ಪ್ರಯತ್ನ ಬೇಕಿರುವುದಿಲ್ಲ, ಶ್ರಮ ಬೇಡುವುದಿಲ್ಲ. ನಾವು ಕೊಟ್ಟಿರುವ ಹಣೆಪಟ್ಟಿಯ ಜೊತೆಗೆ ನಮ್ಮ ಗುರುತನ್ನೇ ತಗಲಿಸಿರುವುದರಿಂದ ನಾವಿತ್ತ ಹಣೆಪಟ್ಟಿಯನ್ನು ನಾವೇ ಕಿತ್ತೊಗೆಯುವುದು ನಮ್ಮ ಐಡೆಂಟಿಟಿಯನ್ನೇ ಕಿತ್ತೊಗೆವಷ್ಟು ಕಷ್ಟವಾಗುತ್ತದೆ. ಹಾಗೆಯೇ ನಮ್ಮನ್ನು ನಾವೇ ಧಿಕ್ಕರಿಸಿಕೊಂಡು ಸೋತಂತ ಅನುಭವ ಬಹಳಷ್ಟು ಮಂದಿಗೆ. ಇದೇ ಅವರಿಗೆ ಹಳೆಯ ಹಣೆಪಟ್ಟಿಗಳಿಂದಾಚೆಗೆ ನೋಡುವ ಸಮಸ್ಯೆ. ಇದು ಬರಿಯ ವ್ಯಕ್ತಿಗತ ಸಂಬಂಧ ಮಾತ್ರವಲ್ಲ. ಸಮೂಹ ಮತ್ತು ಸಮುದಾಯಗಳಲ್ಲಿಯೂ ಕೂಡಾ ಸಮಾಜದಲ್ಲಿ ಕಾಣುತ್ತಿರುತ್ತೇವೆ.
ಸ್ವತಃ ನಮ್ಮನ್ನು ನೋಡುವುದಲ್ಲಿಯೂ ಇದೇ ಸಮಸ್ಯೆ. ನಾವು ನಮ್ಮನ್ನು ಹಳೆಯ ವಿಫಲತೆಗಳ ಹೆಸರಿನಿಂದಲೇ ಕರೆದುಕೊಳ್ಳುತ್ತೇವೆ. ‘‘ನಾನು ಅಂಥವನು’’, ‘‘ನನಗೆ ಇದು ಆಗುವುದಿಲ್ಲ’’ ಎಂಬ ಸ್ವಯಂತೀರ್ಪುಗಳು ಮನಸ್ಸನ್ನು ಕುಗ್ಗಿಸುತ್ತವೆ. ಹೊಸ ದೃಷ್ಟಿಯ ಮನೋಭಾವ ಎಂದರೆ, ‘ನಾನು ನನ್ನ ಹಿಂದಿನ ತಪ್ಪು ಅಲ್ಲ; ನಾನು ಕಲಿಯುತ್ತಿರುವ ವ್ಯಕ್ತಿ’ ಎಂದು ಒಪ್ಪಿಕೊಳ್ಳುವುದು. ಈ ಒಪ್ಪಿಗೆಯಲ್ಲೇ ಮನಸ್ಸಿನ ಹೊಸತನ ಹುಟ್ಟುತ್ತದೆ.
ಹಳೆಯ ಸಮಸ್ಯೆಗಳು ಹೊಸ ದೃಷ್ಟಿಯನ್ನು ಬೇಡುತ್ತವೆ. ಸಮಸ್ಯೆ ಎಂದರೆ ಅದು ಶಾಶ್ವತ ಸತ್ಯವಲ್ಲ; ಅದು ಒಂದು ಸಂದರ್ಭಕ್ಕೆ ನಮ್ಮ ಪ್ರತಿಕ್ರಿಯೆ ಮಾತ್ರ. ಅದೇ ಸಮಸ್ಯೆಯನ್ನು ಪ್ರತಿಸಾರಿ ಒಂದೇ ರೀತಿಯಲ್ಲಿ ನೋಡಿದರೆ, ಪರಿಹಾರವೂ ಅದೇ ರೀತಿಯಲ್ಲಿ ಸಿಲುಕುತ್ತದೆ. ಆದರೆ ಪ್ರಶ್ನೆಯನ್ನು ಬದಲಿಸಿದರೆ ‘‘ಇದರಲ್ಲಿ ನಾನು ಏನು ಕಲಿಯಬಹುದು?’’, ‘‘ಇದು ನನಗೆ ಏನು ಹೇಳುತ್ತಿದೆ?’’ ಕೂಡಲೇ ಉತ್ತರಗಳ ದಿಕ್ಕು ಬದಲಾಗುತ್ತದೆ. ಸಮಸ್ಯೆಯನ್ನು ಶತ್ರುವಾಗಿ ಅಲ್ಲದೆ ಸಂದೇಶವಾಗಿ ನೋಡಲು ಶುರು ಮಾಡಿದಾಗ, ಮನಸ್ಸು ಹಗುರಾಗುತ್ತದೆ.
ಹೊಸ ಮನೋಭಾವ ಎಂದರೆ ತಪ್ಪುಗಳನ್ನು ಮರೆತುಬಿಡುವುದು ಅಲ್ಲ; ಅವುಗಳನ್ನು ಹೊತ್ತುಕೊಂಡು ನಡೆಯದಿರುವುದು, ಅದರಿಂದ ಕಲಿಯುವುದು. ತೀರ್ಪುಗಳನ್ನು ಪಕ್ಕಕ್ಕೆ ಬಿಸಾಡುವುದು ಎಂದರೆ ಅಜಾಗರೂಕತೆ ಅಲ್ಲ; ಅದು ಜಾಗೃತಿಯ ಉನ್ನತ ರೂಪ. ನಾವು ತೀರ್ಪು (ಜಡ್ಜ್‌ಮೆಂಟ್) ಕಡಿಮೆ ಮಾಡಿದಷ್ಟೂ, ಅರ್ಥಮಾಡಿಕೊಳ್ಳುವ ಶಕ್ತಿ ಹೆಚ್ಚುತ್ತದೆ. ಅರ್ಥಮಾಡಿಕೊಂಡ ಮನಸ್ಸು ಮಾತ್ರ ಹೊಸತನವನ್ನು ಅನುಭವಿಸಬಲ್ಲದು.
ಪ್ರತಿದಿನ ಬೆಳಗ್ಗೆ ಒಂದು ಸರಳ ಪ್ರಶ್ನೆ ನಮ್ಮ ಮನಸ್ಸಿಗೆ ಹಾಕಿಕೊಳ್ಳೋಣ.
‘‘ಇಂದು ನಾನು ಯಾರನ್ನೂ, ನನ್ನನ್ನೂ ಸೇರಿಸಿ, ಹಳೆಯ ಲೇಬಲ್‌ಗಳಿಂದ ನೋಡದೆ ಇದ್ದರೆ ಹೇಗಿರುತ್ತದೆ?’’ ಈ ಪ್ರಶ್ನೆಯಲ್ಲೇ ಹೊಸ ಜೀವನದ ಬೀಜ ಇದೆ.
ಹೊಸತನ ಎಂದರೆ ಹೊರಗಿನ ಬದಲಾವಣೆ ಅಲ್ಲ.
ಹೊಸತನ ಎಂದರೆ ಒಳಗಿನ ದೃಷ್ಟಿಯ ಶುದ್ಧೀಕರಣ.
ಅದು ನಡೆದ ದಿನದಿಂದಲೇ, ಜೀವನ ಹೊಸದಾಗಿ ಕಾಣಿಸುತ್ತದೆ.
ನಮ್ಮದೇ ಆಲೋಚನೆಗಳು, ಭಾವನೆಗಳು ಮತ್ತು ದೃಷ್ಟಿಕೋನಗಳು ಮಗ್ಗುಲು ಬದಲಿಸಿದರೆ ಮನಸ್ಸಿಗೆ ತಾಜಾತನ ತರುತ್ತದೆ.
ಶತಶತಮಾನಗಳ ಹಿಂದಿನ ದೋಷಗಳನ್ನು ಇಂದು ತಂದು ಮುಂದಕ್ಕೆ ಸುರಿದುಕೊಂಡು ಘರ್ಷಣೆಗೆ ಇಳಿಯುವ ಜನರು ತಮ್ಮ ಮನೆಯಲ್ಲಿಯೂ ಕೂಡಾ ತಮ್ಮ ವ್ಯಕ್ತಿಗತ ಸಂಬಂಧಗಳನ್ನು ಹೊಸತಾಗಿ ನೋಡುತ್ತಾ ಸುಧಾರಿಸಿಕೊಳ್ಳಲು ಯತ್ನಿಸುವುದಿಲ್ಲ.
ಮನಸ್ಸು ಎಂಬುದು ಮನೆಯಲ್ಲಿಯೂ ಅದೇ ಇರುತ್ತದೆ, ಹೊರಗೆಯೂ ಅದೇ ಇರುತ್ತದೆ. ದೇಹ ಬೇರೆ ಬೇರೆ ಬಟ್ಟೆಗಳನ್ನು ತೊಡುವಂತೆ ಮನಸ್ಸು ವಿಷಯಗಳನ್ನು ಬದಲಾಯಿಸುತ್ತದೆಯೇ ಹೊರತು ಮನಸ್ಥಿತಿ ತನ್ನದೇ ಆದ ರಚನೆಯಲ್ಲಿ ಇರುತ್ತದೆ. ನಾವು ಪ್ರಯತ್ನ ಮಾಡಬೇಕಿರುವುದು ಆ ರಚನೆಯನ್ನೇ ಬದಲಿಸುವ ಅಥವಾ ಪುನರ್ ರಚಿಸುವ ಬಗ್ಗೆ.







