ಚಪ್ಪಾಳೆಯ ಜಾಲ

ಮನುಷ್ಯರು ವೈಯಕ್ತಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ, ವ್ಯವಸ್ಥೆಯಲ್ಲಾಗಲೀ ವ್ಯವಹರಿಸುವಾಗ ಅದೆಲ್ಲವೂ ಮನಸ್ಸಿನ ಆಧಾರದ ಮೇಲೆಯೇ ನಡೆಯುವುದು ಎಂಬುದನ್ನು ನಾವು ಮರೆಯುವಂತಿಲ್ಲ. ಈಗಾಗಲೇ ರೂಪುಗೊಂಡಿರುವ ಮನಸ್ಥಿತಿಯು ತನ್ನದೇ ಮತ್ತು ಇತರ ಮನಸ್ಸುಗಳ ರೂಪಾಂತರಕ್ಕೆ ಪ್ರಚೋದನೆ ಮತ್ತು ಪ್ರೇರಣೆಗಳನ್ನು ನೀಡುತ್ತಿರುತ್ತದೆ. ವ್ಯಕ್ತಿಯು ತನ್ನ ಕ್ರಿಯೆ ಮತ್ತು ಪ್ರತಿಕ್ರಿಯೆಗಳ ಆಧಾರದಲ್ಲಿ ಮನಸ್ಸಿನ ರೂಪಾಂತರದ ಪ್ರಕ್ರಿಯೆಯಲ್ಲಿ ತನಗೆ ತಿಳಿಯದೆಯೇ ತೊಡಗಿಕೊಂಡಿರುತ್ತಾನೆ.
ಬೀದಿಯಲ್ಲಿ ನಿಂತು ವ್ಯವಸ್ಥೆಯ ಕೊಳಕನ್ನು, ರಾಜಕೀಯ ಭ್ರಷ್ಟಾಚಾರವನ್ನು ಮತ್ತು ಸಾಂಸ್ಥಿಕ ಕಪಟತನಗಳನ್ನು ಧೈರ್ಯವಾಗಿ ಬಯಲಿಗೆಳೆಯುವ ಒಬ್ಬ ಹೋರಾಟಗಾರ ನಮಗೆ ಸಿಕ್ಕಾಗ, ಈ ಸಮಾಜವು ಅತ್ಯಂತ ಸಂಭ್ರಮದಿಂದ ಎದ್ದು ನಿಂತು ಚಪ್ಪಾಳೆ ತಟ್ಟುತ್ತದೆ. ಅವನನ್ನು ‘ಸಿಂಗಂ’ ಎಂದೋ, ‘ನಾಯಕ’ ಎಂದೋ ಆಕಾಶಕ್ಕೆ ಎತ್ತಿ ಹಿಡಿಯುತ್ತದೆ. ಆದರೆ, ಈ ಚಪ್ಪಾಳೆಗಳ ಸದ್ದಿನ ಆಳದಲ್ಲಿ ಒಂದು ಭೀಕರವಾದ ಮಾನಸಿಕ ಜಡತ್ವ ಅಡಗಿರುತ್ತದೆ. ಜನರು ಆ ಹೋರಾಟಗಾರನನ್ನು ಹೊಗಳುವುದರ ಮೂಲಕ, ತಾವು ಸಾಮೂಹಿಕವಾಗಿ ತೆಗೆದುಕೊಳ್ಳಬೇಕಾಗಿದ್ದ ನಿರ್ಧಾರಗಳನ್ನು ಮತ್ತು ತಮ್ಮ ಮುಂದಿನ ನಡಾವಳಿಯ ನೈತಿಕ ಜವಾಬ್ದಾರಿಯನ್ನು ಅತ್ಯಂತ ಸುಲಭವಾಗಿ ಮರೆತುಬಿಡುತ್ತಾರೆ. ಯಾರೋ ಒಬ್ಬ ನಮಗಾಗಿ ಹೋರಾಡುತ್ತಿದ್ದಾನೆ, ನಾವು ಕೇವಲ ಪ್ರೇಕ್ಷಕರಾಗಿ ಚಪ್ಪಾಳೆ ತಟ್ಟಿದರೆ ಸಾಕು ಎಂಬ ಈ ಚಪ್ಪಾಳೆಗಾರನ ಜಾಲಕ್ಕೆ (Cheerleader Trap) ತನಗೇ ಅರಿವಿಲ್ಲದಂತೆ ಸಿಕ್ಕಿಬೀಳುವುದು ನಮ್ಮ ಸಮಾಜದ ಅತ್ಯಂತ ಅಪಾಯಕಾರಿ ಕಾಯಿಲೆ.
ಜನ ಟಿ.ವಿ.ಯಲ್ಲಿ ಅಥವಾ ಮೊಬೈಲ್ ಫೋನ್ ಪರದೆಯ ಮೇಲೆ ಲಂಚ ಪಡೆಯುವ ಅಧಿಕಾರಿಯನ್ನು ನೋಡಿ ಉಗುಳುತ್ತಾರೆ. ಜಾತಿ ರಾಜಕಾರಣದ ವಿಕೃತಿಯನ್ನು ಕಂಡು ಫೇಸ್‌ಬುಕ್‌ನಲ್ಲಿ ಸುದೀರ್ಘ ಭಾಷಣ ಬರೆಯುತ್ತಾರೆ. ಆದರೆ, ಅದೇ ಜನ ತಮ್ಮ ದಿನನಿತ್ಯದ ಬದುಕಿಗೆ ಮರಳಿದ ತಕ್ಷಣ, ತಮ್ಮ ಮಗುವಿಗೆ ಶಾಲೆಯಲ್ಲಿ ಸೀಟು ಸಿಗಲು ಪ್ರಭಾವಿ ವ್ಯಕ್ತಿಗಳ ಕೈಕಾಲು ಹಿಡಿಯಲು ಹಿಂಜರಿಯುವುದಿಲ್ಲ. ಸಮಾಜವು ಸ್ಪರ್ಧೆ (Competition) ಮತ್ತು ಶ್ರೇಣಿಯಲ್ಲಿ ಅಗ್ರಸ್ಥಾನ (Rank/Status) ಪಡೆಯುವುದನ್ನು ಅತ್ಯಂತ ಸಹಜ ಮತ್ತು ಗೌರವಾನ್ವಿತ ವಿಷಯ ಎಂದು ನಂಬಿಬಿಟ್ಟಿದೆ. ನಮ್ಮ ಇಡೀ ಶಿಕ್ಷಣ ಮತ್ತು ಕೌಟುಂಬಿಕ ವ್ಯವಸ್ಥೆ ನಿಂತಿರುವುದೇ ಈ ಕ್ರೂರ ಶ್ರೇಣೀಕೃತ ಮನಸ್ಥಿತಿಯ ಮೇಲೆ.
ಆದರೆ, ಯಾರೂ ಗಮನಿಸದ ಕಟು ಸತ್ಯವೇನೆಂದರೆ, ಜನ ತಾವು ದಿನನಿತ್ಯ ಬಯ್ಯುವ ಭ್ರಷ್ಟಾಚಾರ, ವಶೀಲಿಬಾಜಿ ಮತ್ತು ದೌರ್ಜನ್ಯಗಳೆಂಬ ನಕಾರಾತ್ಮಕ ವ್ಯವಸ್ಥೆಗಳಿಗೆ ಮೂಲ ಕಾರಣವೇ ನಾವೇ ಸೃಷ್ಟಿಸಿ, ಪೋಷಿಸುತ್ತಿರುವ ಈ ಸ್ಪರ್ಧಾತ್ಮಕ ಮತ್ತು ಅಹಂ ಆಧಾರಿತ ಮನಸ್ಥಿತಿ. ಯಾವಾಗ ವೈಯಕ್ತಿಕ ಸಾಮರ್ಥ್ಯಕ್ಕಿಂತ ಕೇವಲ ಗೆಲುವು ಮತ್ತು ಅಧಿಕಾರ ಮಾತ್ರ ಮುಖ್ಯವಾಗುತ್ತದೆಯೋ, ಆಗ ಭ್ರಷ್ಟಾಚಾರವು ಕೇವಲ ಒಂದು ಅಪರಾಧವಾಗಿ ಉಳಿಯುವುದಿಲ್ಲ; ಅದು ಆ ಸ್ಪರ್ಧೆಯಲ್ಲಿ ಗೆಲ್ಲಲು ಬಳಸುವ ಅತ್ಯಂತ ಸಾಮಾನ್ಯ ಆಯುಧವಾಗಿ ರೂಪಾಂತರಗೊಳ್ಳುತ್ತದೆ. ಈ ಕಪಟತನದ ಬೇರುಗಳು ಇರುವುದು ದೇಶದ ಸಂಸತ್ತಿನಲ್ಲಿ ಅಲ್ಲ, ಅದು ನಮ್ಮದೇ ಸಂಸಾರಗಳಲ್ಲಿ, ನಮ್ಮ ಪೂಜಾ ಕೋಣೆಗಳಲ್ಲಿ ಮತ್ತು ನಮ್ಮ ಡೈನಿಂಗ್ ಟೇಬಲ್‌ಗಳ ಮೇಲೆ.
ವ್ಯಕ್ತಿ ಭ್ರಷ್ಟಾಚಾರದ ವಿರುದ್ಧ ಮಾತಾಡುವಾಗ ತನ್ನ ಪರಮ ಉದ್ದೇಶ ಯಾರೋ ಒಬ್ಬ ರಾಜಕಾರಣಿಯನ್ನೋ, ಅಧಿಕಾರಿಯನ್ನೋ ಅಥವಾ ಮತ್ತೊಂದು ಧರ್ಮವನ್ನೋ ಬೆಟ್ಟು ಮಾಡಿ ತೋರಿಸುವುದಲ್ಲ ಎಂಬುದರ ಬಗ್ಗೆ ಮನೋಜಾಗೃತಿಯನ್ನು ಹೊಂದಿರಬೇಕು. ಬದಲಿಗೆ, ಭಾರತದ ಇತಿಹಾಸದ ಕತ್ತಲಕೋಣೆಯಿಂದ ವರ್ತಮಾನದ ಕಲುಷಿತ ರಾಜಕೀಯದವರೆಗೆ ನಡೆದುಬಂದಿರುವ ನಮ್ಮದೇ ಮನೋಚರಿತ್ರೆಯನ್ನು (Psychohistory) ಅಗೆದು ತೆಗೆದು, ಪ್ರತಿಯೊಬ್ಬ ನಾಗರಿಕರು ತಮ್ಮ ಕಣ್ಣೆದುರು ನಿರ್ದಾಕ್ಷಿಣ್ಯವಾದ ಕನ್ನಡಿಯನ್ನು ಹಿಡಿದುಕೊಳ್ಳುವುದು ಅತ್ಯಗತ್ಯವಾಗುತ್ತದೆ.
ಇತಿಹಾಸವನ್ನು ಓದುವುದೆಂದರೆ ಕಳೆದುಹೋದ ಕಾಲದ ಬಗ್ಗೆ ಗತವ್ಯಾಮೋಹ ಮತ್ತು ಭೂತಗೀಳು ಬೆಳೆಸಿಕೊಳ್ಳುವುದಲ್ಲ; ಅಥವಾ ಯಾರೋ ನೂರು ವರ್ಷಗಳ ಹಿಂದೆ ಮಾಡಿದ ತಪ್ಪುಗಳಿಗೆ ಇಂದಿನ ಬೀದಿಗಳಲ್ಲಿ ನಮ್ಮ ಜೊತೆಯಲ್ಲಿ ನಡೆಯುವವರೊಂದಿಗೆ ಸೇಡು ತೀರಿಸಿಕೊಳ್ಳುವುದಲ್ಲ. ಇತಿಹಾಸವನ್ನು ಓದುವುದೆಂದರೆ, ಇಂದು ನಮ್ಮೊಳಗೆ ಇಣುಕುವ ಜಾತಿಯ ಅಹಂಕಾರ, ಅಧಿಕಾರದ ಹಪಾಹಪಿ ಮತ್ತು ಕಪಟ ನೈತಿಕತೆಗಳು ಹೇಗೆ ಶತಶತಮಾನಗಳ ಇತಿಹಾಸದ ಕತ್ತಲಕೋಣೆಯಿಂದ ಬಂದು ನಮ್ಮ ವ್ಯಕ್ತಿತ್ವದ ಭಾಗವಾಗಿ ಕುಳಿತಿವೆ ಎಂಬುದನ್ನು ಆಡಿಟ್ ಮಾಡಿಕೊಳ್ಳುವುದು.
ನಾವು ಯಾರನ್ನೂ ಬಲವಂತವಾಗಿ ಸುಧಾರಿಸಲು ಹೊರಡುವುದೋ, ಸಮಾಜದ ಈ ಕಾಯಿಲೆಗೆ ಕೇವಲ ಮೇಲ್ನೋಟದ ಮುಲಾಮು ಹಚ್ಚುವ ಕೆಲಸ ಮಾಡುವುದೋ ನಿಜವಾದ ಬದಲಾವಣೆಗೆ ಬಯಸುವವರ ಇಷ್ಟವಾಗಬಾರದು. ಈ ವ್ಯವಸ್ಥೆಯ ಮೂಲ ಜೀವಕೋಶವನ್ನೇ ಶಸ್ತ್ರಚಿಕಿತ್ಸೆಗೆ ಒಳಪಡಿಸಿ, ಕಟು ಸತ್ಯಗಳ ಎಕ್ಸ್‌ರೇ ವರದಿಯನ್ನು ತಮ್ಮ ಮುಂದೆ ಇಡುವುದು ಮತ್ತು ಇಂತಹದೊಂದು ಭೀಕರ ಕಾಯಿಲೆ ನಮ್ಮೊಳಗೇ ಇದೆ ಎಂದು ತಮ್ಮ ಪ್ರಜ್ಞೆಯನ್ನು ಎಚ್ಚರಿಸಿಕೊಳ್ಳುವುದು ನನ್ನ ಪರಮ ಕರ್ತವ್ಯವಾಗಬೇಕಿದೆ. ಇದನ್ನು ತಿಳಿದು ಪಾಠವನ್ನು ಕಲಿಯುವುದು ಅಥವಾ ಕಣ್ಣು ಮುಚ್ಚಿ ಕುಳಿತುಕೊಳ್ಳುವುದು ವ್ಯಕ್ತಿಯ ಆಂತರಿಕ ಸಾಮರ್ಥ್ಯ ಮತ್ತು ಜ್ಞಾನೋದಯಕ್ಕೆ ಬಿಟ್ಟಿದ್ದು. ಆದರೆ, ಈ ಆತ್ಮಾವಲೋಕನದ ಮತ್ತು ನಮ್ಮನ್ನು ನಾವು ವ್ಯಕ್ತಿಗತವಾಗಿಯೂ ಹಾಗೂ ಸಾಮೂಹಿಕವಾಗಿಯೂ ಸರಿಪಡಿಸಿಕೊಳ್ಳುವ ಪ್ರಕ್ರಿಯೆಗೆ ನಾವು ಸಿದ್ಧರಾಗದಿದ್ದರೆ, ಮುಂದೆ ಸಂಭವಿಸಬಹುದಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಘೋರಗಳನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಮನೋಜಾಗೃತಿ ಎನ್ನುವುದು ಮನೋಚರಿತ್ರೆಯನ್ನು ಅರಿಯುವ ಪ್ರಾರಂಭಿಕ ಪಾಠಗಳಿಂದ ಆರಂಭವಾಗುತ್ತದೆ.






