ಸಿನೆಮಾ: ಮನಸ್ಸಿನ ಪ್ರೊಜೆಕ್ಟರ್

ಸಿನೆಮಾ ಅತಿ ದೊಡ್ಡ ಪ್ರಮಾಣದಲ್ಲಿ ಸಾಮಾನ್ಯ ಜನರ ಸಂಕಲಿತ ಮನಸ್ಥಿತಿಯ ಮೇಲೆ ಪರಿಣಾಮಕಾರಿಯಾದ ಪ್ರಭಾವಗಳನ್ನು ಬೀರುವುದರಲ್ಲಿ ಸಂಶಯವಿಲ್ಲ. ಅದರಲ್ಲಿಯೂ ಸಿನೆಮಾ ಒಂದನ್ನೇ ಮನರಂಜನೆಯನ್ನಾಗಿಸಿಕೊಂಡಿರುವ ಬಹು ದೊಡ್ಡ ಸಮೂಹವಿದೆ. ಅದು ಪುಸ್ತಕಗಳನ್ನು ಓದುವುದಿಲ್ಲ. ತಾವೇ ಸೃಜನಶೀಲರಾಗಿಯೋ ಅಥವಾ ರಚನಾತ್ಮಕವಾಗಿಯೋ ಇರುವುದಿಲ್ಲ. ತಮ್ಮದೇ ಆದ ಸ್ವತಂತ್ರ ಚಿಂತನೆ ಅಥವಾ ತಾತ್ವಿಕ ಅಧ್ಯಯನ ಮತ್ತು ಒಳನೋಟಗಳನ್ನು ಹೊಂದಿರುವುದಿಲ್ಲ. ಅಂತಹವರಿಗೆ ಸಿನೆಮಾ ಪ್ರೇಮ, ಕಾಮ, ಸಂಬಂಧ ಮತ್ತು ಧೋರಣೆಗಳ ಪ್ರೇರಣೆಯಾಗಿರುತ್ತವೆ ಮತ್ತು ಈ ಸಿನೆಮಾಗಳೇ ಅವರಿಗೆ ತಾತ್ವಿಕ ಹೂರಣ ಹಾಗೂ ನೈತಿಕ ಚೌಕಟ್ಟುಗಳನ್ನು ಒದಗಿಸುವಂತವಾಗಿರುತ್ತವೆ.
ಹೀಗಾಗಿ ಸಿನೆಮಾ ತಯಾರಕರಿಗೆ ಮಾನಸಿಕ ಸಂವೇದನಾಶೀಲತೆ (Psychological Sensitivity) ಅತ್ಯಂತ ಅಗತ್ಯವಾಗಿರುವುದಾಗಿರುತ್ತದೆ. ಏಕೆಂದರೆ, ಪ್ರತೀ ವ್ಯಕ್ತಿಯ ಮನಸ್ಸು ಒಂದೇ ತರಹ ಇರುವುದಿಲ್ಲ. ಕೆಲವರು ಬಲಿಷ್ಠ ಮನಸ್ಸು ಹೊಂದಿರುತ್ತಾರೆ, ಆದರೆ ಅನೇಕರು ಆಂತರಿಕ ಗಾಯಗಳು (Psychological Wounds), ಹತಾಶೆ (Frustration), ಭಯ ಮತ್ತು ಒಂಟಿತನ (Loneliness) ಇತ್ಯಾದಿ ಮಾನಸಿಕ ಮತ್ತು ಭಾವನಾತ್ಮಕ ಗಾಯಗಳನ್ನು ಒಳಗೊಂಡ ಮನಸ್ಥಿತಿಯಲ್ಲಿ ಬದುಕುತ್ತಿದ್ದಾರೆ.
ಸಿನೆಮಾ ಅಥವಾ ಸಿರೀಸ್‌ಗಳಲ್ಲಿ ಲೈಂಗಿಕ ಹಿಂಸೆ, ಕ್ರೂರತೆ, ಮಹಿಳೆಯರ ಅವಮಾನ, ನಿರಂತರ ಅಪರಾಧ ದೃಶ್ಯಗಳು ಪ್ರಧಾನವಾಗಿ ಮತ್ತು ಮತ್ತೆ ಮತ್ತೆ ಕಾಣುತ್ತಿದ್ದರೆ, ಅವುಗಳು ಸಾಮಾನ್ಯ ಮನಸ್ಸಿನಲ್ಲೂ ಆತಂಕ (Anxiety) ಹೆಚ್ಚಿಸುತ್ತವೆ. ಆದರೆ ದುರ್ಬಲವಾಗಿರುವ ಗಾಯಗೊಂಡ ಮನಸ್ಸಿನಲ್ಲಿ (Vulnerable Mind) ಅವು ಪ್ರಚೋದನೆ (Trigger) ಆಗುತ್ತದೆ.
ಅದರಿಂದ, ಸಿನೆಮಾ ತಯಾರಕರ ಮತ್ತು ಜನ ಸಾಮಾನ್ಯರ ಧೋರಣೆಯಲ್ಲಿ ಇದು ‘ಮನರಂಜನೆ’ ಆಗಬಹುದು, ಆದರೆ ಮತ್ತೊಬ್ಬರಿಗೆ ಇದು ಅಪಾಯಕಾರಿ ಪ್ರೇರಣೆ ಆಗಬಹುದು. ಇದನ್ನು ಅರಿಯುವ ಜವಾಬ್ದಾರಿ ಸಿನೆಮಾ ತಯಾರಕರದ್ದಾಗಿದೆ.
ಸಿನೆಮಾಗಳು ತಮ್ಮ ದೃಶ್ಯ ವೈಭವಗಳ ಮತ್ತು ಸಂಗೀತ, ಅಭಿನಯವೇ ಇತ್ಯಾದಿಗಳ ಗಾಢ ಕಲಾತ್ಮಕ ಪ್ರಭಾವದಿಂದಾಗಿ ಭಾವನಾತ್ಮಕವಾದ (Emotional Impact) ಪರಿಣಾಮ ಉಂಟು ಮಾಡುತ್ತವೆ.
ಚಿತ್ರಗಳು ಮತ್ತು ಸಿರೀಸ್‌ಗಳು ಮನಸ್ಸಿನ ಆಲೋಚನೆ, ಚಿಂತನೆ, ವಿವೇಚನೆಗಿಂತ ಮೊದಲು ಭಾವನೆಗಳನ್ನು ತಾಕುತ್ತವೆ (Emotional Brain).
ಯಾವಾಗ ಮತ್ತೆ ಮತ್ತೆ ಅತ್ಯಾಚಾರ ದೃಶ್ಯಗಳು, ಹಿಂಸಾತ್ಮಕ ಸಂಬಂಧಗಳು, ದ್ವೇಷದಿಂದ ಕೂಡಿದ ಪಾತ್ರಗಳು ಇರುವಂತಹ ಕತೆಗಳನ್ನು ನೋಡಿದಾಗ ಏನಾಗುತ್ತದೆ? ಸಹಾನುಭೂತಿ ಮತ್ತು ಪರಾನುಭೂತಿ (Empathy) ಕಡಿಮೆಯಾಗುತ್ತದೆ. ನೋವು ‘ಸಾಮಾನ್ಯ’ ಎಂದು ತೋರುತ್ತದೆ. ದುಃಖದ ಮೇಲೆ ನಿರ್ಲಕ್ಷ್ಯ ಬರುತ್ತದೆ. ಇದನ್ನೇ ಭಾವನಾ ಜಡತ್ವ (Emotional Numbing) ಎಂದು ಕರೆಯುತ್ತಾರೆ.
ಇದರಿಂದ, ಬಲಿಯಾದವರ ನೋವು ಅರ್ಥವಾಗುವುದಿಲ್ಲ, ಸಹಾನುಭೂತಿ ನಿಧಾನವಾಗಿ ಸಾಯುತ್ತದೆ. ‘ಇದು ಜೀವನದಲ್ಲಿ ಸಹಜ’ ಎಂಬ ಭ್ರಮೆ ಬರುತ್ತದೆ. ಖಂಡಿತವಾಗಿಯೂ ಇದು ವ್ಯಕ್ತಿಯ ಮನಸ್ಸಿನ ಆರೋಗ್ಯಕ್ಕೆ ಮತ್ತು ಸಮಾಜಕ್ಕೆ ಅತ್ಯಂತ ಅಪಾಯಕಾರಿ ಲಕ್ಷಣ.
ಹಾಗೆಯೇ ಸಾಮೂಹಿಕ ಮನೋಪ್ರಜ್ಞೆ ಅಥವಾ ಸಂಕಲಿತ ಮನಸ್ಥಿತಿಯ ಬಗ್ಗೆ (Collective Consciousness) ಸಮಾಜದ ಮನಸ್ಸು ವ್ಯಕ್ತಿಗಳ ಮನಸ್ಸಿನಿಂದ ನಿರ್ಮಾಣವಾಗುತ್ತದೆ ಎಂಬುದನ್ನು ಗಮನಿಸಬೇಕು.
ಎಲ್ಲರೂ ಒಂದೇ ತರಹದ ವಿಷಯಗಳನ್ನು ನೋಡಿದಾಗ: ಅವರಲ್ಲಿ ಅಪರಾಧ ಸಾಮಾನ್ಯವಾಗುತ್ತದೆ, ಲೈಂಗಿಕ ಶೋಷಣೆ ಕಥೆಯ ಒಂದು ಭಾಗವಾಗುತ್ತದೆ, ಸಿನೆಮಾದ ನಾಯಕನೇ ಕ್ರೂರವಾಗಿ ವರ್ತಿಸುವಾಗ ಹಿಂಸೆ ‘ಹೀರೋಯಿಸಂ’ ಆಗುತ್ತದೆ. ಇದು ಸಾಮೂಹಿಕ ಸಾಮಾನ್ಯೀಕರಣ (Collective Normalization)ಆಗುತ್ತದೆ. ಅದರ ಪರಿಣಾಮ:
ಅಪರಾಧದ ಮೇಲೆ ಸಮಾಜದ ಪ್ರತಿಕ್ರಿಯೆ ದುರ್ಬಲವಾಗುತ್ತದೆ, ‘ಇದೆಲ್ಲಾ ಆಗ್ತಾನೆ ಇರುತ್ತೆ’ ಎಂಬ ಅಸಡ್ಡೆ ಬರುತ್ತದೆ, ತಪ್ಪು ಮತ್ತು ಸರಿ ನಡುವಿನ ಗಡಿ ಮಸುಕಾಗುತ್ತದೆ.
ಹಾಗಾಗಿ ಇದು ಕೇವಲ ಸಿನೆಮಾ ಸಮಸ್ಯೆಯಲ್ಲ; ಇದು ಸಾಮಾಜಿಕ ಮನಸ್ಸಿನ ಆರೋಗ್ಯದ ಪ್ರಶ್ನೆ. ಜೊತೆಗೆ ನಮ್ಮ ಮಕ್ಕಳ ಮಾನಸಿಕ ಭವಿಷ್ಯದ ಪ್ರಶ್ನೆ. ನಾವು ಏನು ನೋಡುತ್ತೇವೋ, ನಮ್ಮ ಮಕ್ಕಳು ಅದರಲ್ಲಿ ಬದುಕುತ್ತಾರೆ.







