ಪ್ರಜಾಸತ್ತಾತ್ಮಕ ಕೌಶಲ್ಯ

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಬಹುಮತಕ್ಕೆ ಗೆಲುವು. ಆದರೆ ನೂರು ಜನರಲ್ಲಿ ಐವತ್ತೊಂದು ಜನರ ಮಾತು ಅಥವಾ ಅಭಿಪ್ರಾಯ ಗೆದ್ದಿತು ಎಂಬ ಕಾರಣಕ್ಕೆ ಉಳಿದ ನಲವತ್ತೊಂಭತ್ತು ಜನರ ಮಾನವ ಘನತೆ ರದ್ದಾಗುವುದಿಲ್ಲ. ಬಹುಮತ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಆದರೆ ಅವರಿಗೆ ಮಾನವ ಹಕ್ಕಿನ ಮೇಲಿನ ಅಧಿಕಾರ ಸಿಗುವುದಿಲ್ಲ. ಹೀಗಾಗಿ ಪ್ರಜಾಸತ್ತಾತ್ಮಕ ಕೌಶಲ್ಯದಲ್ಲಿ ಬಹುಮತ ಗೆದ್ದಿತು ಎಂಬಲ್ಲಿಗೆ ವಿಷಯ ಎಂದಿಗೂ ಮುಗಿಯುವುದಿಲ್ಲ. ಗೆದ್ದ ನಂತರ ಸೋತವರ ಹಕ್ಕನ್ನು ಕಾಪಾಡುವ ಸಾಮರ್ಥ್ಯವೂ ಅದೇ. ನನ್ನ ಜೊತೆ ಇಲ್ಲದವನಿಗೂ ನ್ಯಾಯ ಸಿಗಬೇಕು ಎಂದು ಬಯಸುವುದು ಪ್ರಜಾಸತ್ತಾತ್ಮಕ ಕೌಶಲ್ಯದ ಅತ್ಯಂತ ಉನ್ನತ ಲಕ್ಷಣಗಳಲ್ಲಿ ಒಂದು.
ಇನ್ನು ಪ್ರಜಾಸತ್ತಾತ್ಮಕ ಮನಸ್ಥಿತಿಯ ಬಹು ಮುಖ್ಯವಾದ ಲಕ್ಷಣವೆಂದರೆ ಉತ್ತರದಾಯಿತ್ವ ಅಥವಾ ಹೊಣೆಗಾರಿಕೆ. ಪಾಳೇಗಾರಿಕೆ, ಜಮೀನ್ದಾರ ಮನಸ್ಥಿತಿ ಇರುವವರು ‘‘ನಾನು ಯಾರು ಗೊತ್ತಾ?’’ ಎಂದು ಪ್ರಶ್ನಿಸುತ್ತಾರೆ. ಆದರೆ ಪ್ರಜಾಸತ್ತಾತ್ಮಕ ಮನಸ್ಥಿತಿ ಕೇಳುವುದೆಂದರೆ ನನ್ನ ಹೊಣೆಗಾರಿಕೆ ಏನು? ಎಂದು. ಪಾಳೇಗಾರಿಕೆ ಅಥವಾ ಜಮೀನ್ದಾರಿಯ ಫ್ಯೂಡಲ್ ಮನಸ್ಥಿತಿಯವರಿಗೆ ಅಧಿಕಾರ ಹೆಚ್ಚಾದಂತೆ ಸೌಕರ್ಯ ಹೆಚ್ಚಬೇಕು ಎಂಬುದು. ಆದರೆ ಅಧಿಕಾರ ಹೆಚ್ಚಾದಂತೆ ಹೊಣೆಗಾರಿಕೆ ಹೆಚ್ಚಬೇಕು ಎಂಬುದು ಪ್ರಜಾಸತ್ತಾತ್ಮಕ ಮನಸ್ಥಿತಿ. ತಪ್ಪಾದಾಗ ಕೈ ಕೆಳಗೆ ಕೆಲಸ ಮಾಡುವವರು ಕ್ಷಮೆ ಕೇಳಬೇಕು; ಆದರೆ ಬಾಸ್ ಕೇಳಬೇಕಾಗಿಲ್ಲ ಎನ್ನುವ ಆಫೀಸಿಗೂ, ಮಗು ಮಾತ್ರ ಕ್ಷಮೆ ಕೇಳಬೇಕು; ತಂದೆ ಅಥವಾ ತಾಯಿ ಕೇಳಬೇಕಾಗಿಲ್ಲ ಎನ್ನುವ ಮನೆಗೂ ಒಂದೇ ಅಧಿಕಾರ ಮನಸ್ಥಿತಿ (power psychology) ಇರುತ್ತದೆ. ಪ್ರಜಾಸತ್ತಾತ್ಮಕ ಕೌಶಲ್ಯ ಇರುವವನು ಸ್ಥಾನಮಾನವನ್ನು ತಪ್ಪಿಸಿಕೊಳ್ಳುವ ಕವಚಗಳನ್ನು ಬಳಸುವುದಿಲ್ಲ.
ಇನ್ನು ಬಹಳ ಮುಖ್ಯವಾದ ಅಂಶವೆಂದರೆ, ಪರಸ್ಪರರಲ್ಲಿ ಒಪ್ಪಿಗೆಯನ್ನು ಪಡೆಯುವುದು. ನನಗೆ ಒಳ್ಳೆಯದು ಎಂದು ಅನಿಸಿದ್ದನ್ನು ಮತ್ತೊಬ್ಬರ ಮೇಲೆ ಹೇರುವ ಹಕ್ಕು ನನಗಿದೆಯೇ? ಈ ಪ್ರಶ್ನೆ ಕುಟುಂಬದಿಂದಲೇ ಆರಂಭವಾಗುತ್ತದೆ. ‘‘ನಾವು ಮಾಡುವುದೆಲ್ಲಾ ನಿನ್ನ ಒಳ್ಳೆಯದಕ್ಕೇ’’ ಎಂಬ ಮಾತಿನಲ್ಲಿ ಮಗುವಿನ ಜೀವನವನ್ನು ನಿಯಂತ್ರಿಸುವುದು, ಪ್ರೀತಿಯ ಹೆಸರಿನಲ್ಲಿ ಸಂಗಾತಿಯ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವುದು, ಸಮಾಜದ ಒಳಿತಿನ ಹೆಸರಿನಲ್ಲಿ ವ್ಯಕ್ತಿಯ ಧ್ವನಿಯನ್ನು ಅಳಿಸುವುದು; ಇವುಗಳ ಹಿಂದೆ ಒಂದೇ ಕಲ್ಪಿತ ಧೋರಣೆಗಳು (assumption) ಇರಲು ಸಾಧ್ಯ. ‘‘ನಿನಗಿಂತ ನಿನಗೆ ಏನು ಬೇಕು ಎಂಬುದು ನನಗೆ ಹೆಚ್ಚು ಗೊತ್ತು’’ ಎನ್ನುವ ಧೋರಣೆಯು ಮತ್ತೊಬ್ಬರ ಒಪ್ಪಿಗೆಯನ್ನೇ ಪಡೆಯದೆ ತಮ್ಮದನ್ನು ಹೇರಲು ಮುಂದಾಗುತ್ತಾರೆ. ಇದು ಖಂಡಿತ ಪ್ರಜಾಸತ್ತಾತ್ಮಕ ಕೌಶಲ್ಯ ಅಲ್ಲ. ಪ್ರಜಾಸತ್ತಾತ್ಮಕ ಕೌಶಲ್ಯ (Democratic Intelligence) ಇನ್ನೊಬ್ಬ ವ್ಯಕ್ತಿಯ ಆಶಯ ಮತ್ತು ಆಯಾಮವನ್ನು ಗುರುತಿಸುತ್ತದೆ.
ನಿಸ್ಸಂಶಯವಾಗಿ ಡೆಮಾಕ್ರಟಿಕ್ ಇಂಟೆಲಿಜೆನ್ಸ್‌ನ ಮೊದಲ ಶಾಲೆ ಮನೆಯೇ ಆಗಿರುತ್ತದೆ. ಮಗುವಿಗೆ ಡೆಮಾಕ್ರಸಿಯನ್ನು ಶಾಲೆಯಲ್ಲಿ ಪಠ್ಯಪುಸ್ತಕಕ್ಕಿಂತ ಮೊದಲೇ ಕುಟುಂಬ ಕಲಿಸುತ್ತದೆ. ಮಗು ಪ್ರಶ್ನಿಸಬಹುದೇ? ಅದರ ಮಾತನ್ನು ಕೇಳಲಾಗುತ್ತದೆಯೇ? ಮನೆಯ ನಿಯಮಗಳಿಗೆ ಕಾರಣ ಹೇಳಲಾಗುತ್ತದೆಯೇ? ಹಿರಿಯರು ತಪ್ಪಾದಾಗ ಕ್ಷಮೆ ಕೇಳುತ್ತಾರೆಯೇ? ಹೆಣ್ಣು ಮತ್ತು ಗಂಡು ಮಗುವಿನ ಸ್ವಾತಂತ್ರ್ಯಕ್ಕೆ ಒಂದೇ ಮಾನದಂಡವಿದೆಯೇ? ಇವೆಲ್ಲವೂ ಪ್ರಜಾಸತ್ತಾತ್ಮಕ ಕೌಶಲ್ಯವೇ.
ಮನೆಯಲ್ಲೇ ಪಾಳೇಗಾರಿಕೆ ಸಂಸ್ಕೃತಿ (authoritarian culture) ಇಟ್ಟುಕೊಂಡು ಶಾಲೆಯಲ್ಲಿ ಪ್ರಜಾಪ್ರಭುತ್ವ ಪಾಠ ಮಾಡಿಸುವುದು ಹೇಗೆಂದರೆ ಆಪರೇಟಿಂಗ್ ಸಿಸ್ಟಮ್ ಒಂದು ರೀತಿಯದ್ದಾಗಿಟ್ಟುಕೊಂಡು ಸಾಫ್ಟ್‌ವೇರ್ ಬೇರೇನೋ ಅಳವಡಿಸಿಕೊಂಡು ಸಿಸ್ಟಮ್ ನಡೆಸಲು ಪ್ರಯತ್ನಿಸಿದಂತಾಗಬಹುದು.
ಪ್ರಜಾಸತ್ತಾತ್ಮಕ ಕೌಶಲ್ಯ ಎಂಬುದು ಒಂದು ರಾಜಕೀಯ ಗುಣ ಮಾತ್ರವಲ್ಲ. ಅದು ಗಂಡ-ಹೆಂಡತಿಯ ನಡುವೆ ಬೇಕು. ಮಕ್ಕಳ ಪೋಷಣೆಯಲ್ಲಿರಬೇಕು. ಶಾಲೆಯಲ್ಲಿ, ಉದ್ಯೋಗದ ಜಾಗದಲ್ಲಿ, ಧಾರ್ಮಿಕ ಸಂಸ್ಥೆಗಳಲ್ಲಿ, ಸಾಹಿತ್ಯ ಮತ್ತು ಕಲಾ ವಲಯದಲ್ಲಿ, ಒಂದು ಕಮಿಟಿ ಮೀಟಿಂಗಲ್ಲಿ ಕೂಡ ಇರಬೇಕು. ಏಕೆಂದರೆ ಪ್ರಜಾಪ್ರಭುತ್ವ ಎನ್ನುವುದು ಪಾರ್ಲಿಮೆಂಟಲ್ಲಿ ಮಾತ್ರ ನಡೆಯುವುದಿಲ್ಲ. ಎರಡು ಮನುಷ್ಯರ ನಡುವೆ ಅಧೀನ ಅಥವಾ ಅಧಿಕಾರ ಇರುವ ಪ್ರತಿಯೊಂದು ಜಾಗದಲ್ಲಿಯೂ ಪ್ರಜಾಪ್ರಭುತ್ವಕ್ಕೆ ಅವಕಾಶವಿದೆ.
ನಮ್ಮ ಪ್ರಜಾಸತ್ತಾತ್ಮಕ ಕೌಶಲ್ಯ ಅಥವಾ ಧೋರಣೆಯನ್ನು ಅಳೆಯಲು ನಮ್ಮನ್ನೇ ಕೆಲವು ಪ್ರಶ್ನೆ ಕೇಳಿಕೊಂಡರೆ ಸಾಕು: ಯಾರಾದರೂ ನನ್ನನ್ನು ಪ್ರಶ್ನಿಸಿದಾಗ ನನಗೆ ಏನಾಗುತ್ತದೆ? ನನ್ನ ವಿರೋಧಿಗೂ ಮಾತನಾಡಲು ಅವಕಾಶ ಕೊಡಬಲ್ಲೆನೇ? ನನಗೆ ಅಧಿಕಾರ ಸಿಕ್ಕಾಗ ಹಂಚಿಕೊಳ್ಳಬಲ್ಲೆನೇ? ನಾನು ತಪ್ಪಿದಾಗ ಸಾರ್ವಜನಿಕವಾಗಿ ಒಪ್ಪಿಕೊಳ್ಳಬಲ್ಲೆನೇ? ನನ್ನ ಗುಂಪಿಗೆ ಸಿಗಬೇಕೆಂದು ಬಯಸುವ ಹಕ್ಕನ್ನೇ ನನ್ನ ವಿರೋಧಿಗೂ ಕೊಡಲು ಸಿದ್ಧನೇ? ಯಾರೂ ನನ್ನನ್ನು ಹೊಗಳದಿದ್ದರೂ ನಾನು ಸೇವೆ ಮಾಡಬಲ್ಲೆನೇ? ಈ ಪ್ರಶ್ನೆಗಳಿಗೆ ನಮ್ಮ ಉತ್ತರವೇ ನಮ್ಮ ಪ್ರಜಾಸತ್ತಾತ್ಮಕ ಧೋರಣೆಗೆ ಹಿಡಿದ ಕನ್ನಡಿಯಾಗಬಹುದು.
ಒಟ್ಟಾರೆ ಪ್ರಜಾಪ್ರಭುತ್ವ ಎಂಬುದು ಒಂದು ಆರೋಗ್ಯವಂತ ಮನಸ್ಥಿತಿ. ಪ್ರಜಾಪ್ರಭುತ್ವವನ್ನು ಬರೀ ಚುನಾವಣೆಯ ತಂತ್ರಗಾರಿಕೆಯನ್ನಾಗಿ ನೋಡಲಾಗದು. ದೇಶದ ಸಂವಿಧಾನ ಪ್ರಜಾಸತ್ತಾತ್ಮಕವಾಗಿದೆ ಎಂದ ಮಾತ್ರಕ್ಕೆ ಕುಟುಂಬವೂ ಪ್ರಜಾಸತ್ತಾತ್ಮಕ ಆಗಿರುವುದಿಲ್ಲ. ಒಂದು ಸಾಮಾಜಿಕ ವ್ಯವಸ್ಥೆಗೆ ಅಥವಾ ಸಂಸ್ಥೆಗೆ ಪ್ರಜಾಸತ್ತಾತ್ಮಕ ವಿನ್ಯಾಸ ಬೇಕಾದಂತೆ ವ್ಯಕ್ತಿಗೆ ಪ್ರಜಾಸತ್ತಾತ್ಮಕ ಮನಸ್ಥಿತಿ ಇರಬೇಕು.
ಮುಂದಿನ ಪೀಳಿಗೆಗಳಿಗೆ ನಾವು ಐಕ್ಯೂ, ಇಕ್ಯೂ ಜೊತೆಗೆ ಡಿಕ್ಯೂ ಕೂಡಾ ಬೆಳಸಬೇಕಾಗುತ್ತದೆ. ಎಲ್ಲರಿಗಿಂತ ಮೇಲಿರುವುದನ್ನು ಯಶಸ್ಸೆಂದು ಕಲಿಸುವುದಕ್ಕಿಂತ, ಎಲ್ಲರೊಂದಿಗೆ ಘನತೆಯಿಂದ ಬದುಕುವುದನ್ನು ಯಶಸ್ಸೆಂದು ಕಲಿಸಬೇಕು. ನಾಯಕನಾಗುವುದು ಎಂದರೆ ಜನರನ್ನು ತನ್ನ ಹಿಂದೆ ನಡೆಸುವುದಷ್ಟೇ ಅಲ್ಲ; ಅಗತ್ಯವಿದ್ದಾಗ ಅವರ ಮಾತನ್ನು ಕೇಳಿ ತನ್ನ ದಿಕ್ಕನ್ನೂ ಬದಲಿಸಬಲ್ಲವನಾಗುವುದು ಎಂದು ಕಲಿಸಬೇಕು. ಏಕೆಂದರೆ ಪ್ರಜಾಪ್ರಭುತ್ವವೆಂದರೆ ಇತರರನ್ನು ಆಳುವ ವ್ಯವಸ್ಥೆಯಷ್ಟೇ ಅಲ್ಲ. ಇತರರನ್ನು ಆಳಬೇಕೆಂಬ ನಮ್ಮೊಳಗಿನ ಆಸೆಯೇ ನಮ್ಮನ್ನು ಆಳದಂತೆ ನೋಡಿಕೊಳ್ಳುವ ಪ್ರಜ್ಞೆ.






