ನಿರ್ಲಿಪ್ತ ವಾಸ್ತವ

ಆಲೋಚನೆ, ಪರಿಕಲ್ಪನೆ, ಭಾವನೆ, ಅಹಂಕಾರ, ಪ್ರತಿಷ್ಠೆ; ಇತ್ಯಾದಿಗಳನ್ನು ಮಾನಸಿಕ ಸ್ವಭಾವಗಳನ್ನಾಗಿ ಹೊಂದಿರುವ ಮನುಷ್ಯನು ಆ ಎಲ್ಲಾ ಸ್ವಭಾವಗಳನ್ನು ಮೌಲ್ಯವನ್ನಾಗಿಸುವುದಕ್ಕಾಗಿ ‘ಸತ್ಯ’ ಎಂಬ ಮಾನದಂಡವನ್ನು ಕಂಡು ಹಿಡಿದಿದ್ದಾನೆ. ಆ ಮಾನದಂಡಕ್ಕೆ ಎಲ್ಲಾ ಬಗೆಯ ಗೌರವ, ಆದರ ಮತ್ತು ಭಕ್ತಿಯನ್ನು ಆರೋಪಿಸುತ್ತಾನೆ. ಹಾಗೆ ಆರೋಪಿಸಲ್ಪಡುವ ಸತ್ಯವೆಂಬ ಮಾನದಂಡವನ್ನು ಪ್ರೀತಿಸುತ್ತಾನೆ. ವ್ಯಕ್ತಿ ಮತ್ತು ಸಮಾಜ ಸದಾ ಒಂದು ಮಾನದಂಡದಿಂದಲೇ ಗೌರವ ಮತ್ತು ಮೌಲ್ಯವನ್ನು ಅಳೆಯುವುದು. ಹಾಗಾಗಿ ಎಲ್ಲಾ ವ್ಯಕ್ತಿಗಳೂ ಮತ್ತು ಸಮುದಾಯಗಳೂ ತಮ್ಮ ಮಾನದಂಡದ ಚೌಕಟ್ಟಿನಲ್ಲಿಯೇ ಮಾನ್ಯತೆಯನ್ನು ನೀಡುವುದು. ಆ ಮಾನ್ಯತೆಯು ಸತ್ಯದ ಮೇಲೆ ಆಧರಿತವಾದದ್ದು ಎಂದು ಹೇಳುವುದು. ಹಾಗಾಗಿಯೇ ಸಮೂಹಗಳಿಗೂ ಮತ್ತು ವ್ಯಕ್ತಿಗಳಿಗೂ ಸತ್ಯ ಎಂದರೆ ಬಲು ಪ್ರೀತಿ. ಕಟ್ಟುನಿಟ್ಟಾಗಿ ತಪ್ಪಬಾರದ ಕಟ್ಟಳೆಯಂತೆ ಪ್ರೀತಿಸುತ್ತಾರೆ.
ಆದರೆ, ವಾಸ್ತವ ಎಂಬುದು ಇದೆಯಲ್ಲಾ, ಅದು ಬಹಳ ಉದಾಸಿ. ಅದು ಎಂದಿಗೂ ಮಾನವನನ್ನು ಪ್ರೀತಿಸುವುದಿಲ್ಲ. ಅದಕ್ಕೆ ಮಾನವ ಜನ್ಮ ದೊಡ್ಡದು ಅಂತ ಯಾವ ವಿಶೇಷತೆಗಳಿಂದಲೂ ನೋಡುವುದಿಲ್ಲ. ಹಾಗಾಗಿಯೇ ಸತ್ಯ ಎಂದು ಹೇಳಬೇಕಾದರೆ ಅದಕ್ಕೆ ಹಣೆಪಟ್ಟಿಗಳು ಬೇಕು, ಮೌಲ್ಯಮಾಪನ ಮಾಡುವಂತಹ ಮಾನದಂಡಗಳಿರಬೇಕು, ನಿರ್ದಿಷ್ಟ ಶಿಷ್ಟಾಚಾರ, ವಿಚಾರ, ಜೊತೆಗೆ ಸುಳ್ಳು ಎಂದು ಸಾಬೀತು ಮಾಡಲು ಒಂದಷ್ಟು ವಿಷಯಗಳಿರಬೇಕು.
ಯಾವುದೋ ಒಂದು ಧರ್ಮಕಾರ್ಯ ಮಾಡಿದರೆ, ಶ್ರೇಯಸ್ಸು ಸಿಗುವುದು ಅಥವಾ ಮುಕ್ತಿ ಸಿಗುವುದು ಆ ಧಾರ್ಮಿಕರ ಪಾಲಿಗೆ ಸತ್ಯವಾಗಿರುತ್ತದೆ. ಮತ್ತೊಂದು ಧರ್ಮದವರಿಗೆ ಮತ್ತೊಂದೇನನ್ನೋ ಮಾಡಬಾರದಾಗಿರುತ್ತದೆ. ಅದನ್ನು ಮಾಡಿದರೆ ಪಾಪ ಉಂಟಾಗುತ್ತದೆ, ಅಂತಿಮದಿನದಲ್ಲಿ ವಿಚಾರಣೆಯ ಅಗ್ನಿಗೆ ಒಳಪಡಬೇಕಾಗುತ್ತದೆ, ದೇವರ ಸನ್ನಿಧಿಯಿಂದ ತಿರಸ್ಕರಿಸಲ್ಪಡುತ್ತಾನೆ. ಇದು ಆಯಾ ಧಾರ್ಮಿಕರ ಪರಮ ಸತ್ಯವಾಗಿರುತ್ತದೆ.
ಯಾರೊಬ್ಬ ವ್ಯಕ್ತಿಯು ಶ್ರೇಯಸ್ಸನ್ನು ಪಡೆಯುವ ಧರ್ಮಕಾರ್ಯವನ್ನು ಮಾಡುವಾಗಲೂ, ನರಕಾಗ್ನಿಯನ್ನು ಎದುರಿಸುವ ಅಧರ್ಮಕಾರ್ಯವನ್ನು ಮಾಡುವಾಗಲೂ ಸೂರ್ಯ ಉದಯಿಸಿರುತ್ತಾನೆ, ಮಳೆ ಬೀಳುವಲ್ಲಿ ಬಿದ್ದಿರುತ್ತದೆ, ಚಳಿಗಾಳಿ ಬೀಸುವಲ್ಲಿ ಎಂದಿನಂತೆ ಬೀಸಿರುತ್ತದೆ, ವ್ಯಕ್ತಿಗೆ ಗಾಯವಾದಲ್ಲಿ ರಕ್ತ ಬಂದಿರುತ್ತದೆ, ಮಗು ಹುಟ್ಟುವಲ್ಲಿ ಹೆಣ್ಣು ಮತ್ತು ಗಂಡಿನ ಮಿಲನವಾಗಿರುತ್ತದೆ, ಮೇಲಕ್ಕೆ ಎಸೆದ ವಸ್ತು ಗುರುತ್ವಾಕರ್ಷಣ ಬಲದಿಂದ ಕೆಳಕ್ಕೆ ಬೀಳುತ್ತದೆ, ಹುಟ್ಟನ್ನು ಪಡೆದಿರುವ ಎಂತಹ ಆರೋಗ್ಯವಂತನಿಗೂ, ಗಟ್ಟಿಗನಿಗೂ ಒಂದು ದಿನ ಮರಣ ಬರುತ್ತದೆ; ಇದು ವಾಸ್ತವ. ಇಂತಹ ವಾಸ್ತವ ಎಲ್ಲರ ಸತ್ಯಗಳಿಗೂ ನಿರ್ಲಿಪ್ತವಾಗಿರುತ್ತದೆ. ವಾಸ್ತವ ಎಂಬುದು ಭಾವನೆಗಳ ಆಧಾರದಲ್ಲಿ, ಶ್ರದ್ಧಾ ನಂಬಿಕೆಗಳಿಗೆ ಅನುಸಾರವಾಗಿ ಕೆಲಸ ಮಾಡುವುದಿಲ್ಲ.
ಒಳ್ಳೆಯವರು ಎಂದು ಹಣೆಪಟ್ಟಿ ಕಟ್ಟಿಸಿಕೊಂಡಿರುವವರಿಗೆ, ಅಜಾತಶತ್ರು ಎಂಬ ಬಿರುದಾಂಕಿತರಿಗೂ ತೊಂದರೆ ಆಗುತ್ತದೆ, ದುಃಖ ಬರುತ್ತದೆ, ಸಾವು ನೋವು ಉಂಟಾಗುತ್ತದೆ. ಕೆಟ್ಟವರು ಎಂದು ತಿರಸ್ಕಾರಕ್ಕೆ ಒಳಗಾಗಿರುವವರಿಗೆ ಯಶಸ್ಸು ಸಿಗುತ್ತದೆ. ನ್ಯಾಯದ ಪರ ಹೋರಾಡುವವರು ಸೋಲುತ್ತಾರೆ. ಸದಾ ಸುಳ್ಳುಗಳನ್ನೇ ಹೇಳುತ್ತಾ, ಜನರಿಗೆ ಮೋಸಗಳನ್ನು ಮಾಡುವವರು ಗೆಲ್ಲುತ್ತಲೇ ಬರುತ್ತಾರೆ. ಇದನ್ನು ಅನ್ಯಾಯ ಎನ್ನುವುದು ಮನುಷ್ಯರು. ಆದರೆ ಇದು ವಾಸ್ತವ. ವಾಸ್ತವಕ್ಕೆ ನೈತಿಕತೆ ಎಂದರೇನೆಂದೇ ತಿಳಿಯದು. ಅದು ಕೇವಲ ಸಂಭವಿಸುತ್ತಿರುತ್ತದೆ. ದುಷ್ಟನೆಂದು ದೂರಲ್ಪಟ್ಟವನು, ಸಂತ ಎಂದು ಪೂಜಿಸಲ್ಪಟ್ಟವನು; ಯಾರು ನೀರೆರೆದು ಪೋಷಿಸಿದರೂ ಗಿಡ ಬೆಳೆಯುತ್ತದೆ. ಅದು ನೈತಿಕ ತೀರ್ಪುಗಳ ಆಧಾರದಲ್ಲಿ ತಿರಸ್ಕಾರ, ಸ್ವೀಕಾರಗಳನ್ನು ಮಾಡದು. ಇಂತಹ ನಿರ್ಲಿಪ್ತತೆಯನ್ನು ಮನುಷ್ಯನಿಗೆ ಸಹಿಸಿಕೊಳ್ಳುವುದು ಕಷ್ಟ. ಆದ್ದರಿಂದಲೇ ಯಾವುದೇ ಜೀವರಾಶಿಗಳೂ ಸೃಷ್ಟಿಸಲಾಗದಂತಹ ಕತೆಗಳನ್ನು ತಾನು ಕಟ್ಟಿಕೊಳ್ಳುತ್ತಾನೆ. ಏಕೆಂದರೆ ನಿರ್ಲಿಪ್ತ ಮತ್ತು ನೀರವ ವಾಸ್ತವಕ್ಕಿಂತ ಅರ್ಥಪೂರ್ಣ ಮತ್ತು ಭಾವನಾತ್ಮಕ ಭ್ರಮೆ ಹೆಚ್ಚು ಸಾಂತ್ವನ ನೀಡುತ್ತದೆ. ಮನಸ್ಸಿಗೆ ಮುದ ಎನಿಸುತ್ತದೆ. ಇದನ್ನೇ ಅರ್ಥೈಸುವಿಕೆ ಅಥವಾ ಒeಚಿಟಿiಟಿg ಒಚಿಞiಟಿg ಎಂದು ಮನೋವಿಜ್ಞಾನದಲ್ಲಿ ಹೇಳುವುದು. ಮನುಷ್ಯ ಯಾವುದನ್ನೂ ನಿರ್ಲಿಪ್ತನಾಗಿ ನೋಡುವುದಿಲ್ಲ. ಅವುಗಳಿಗೆಲ್ಲಾ ಅರ್ಥವನ್ನು ನೀಡುತ್ತಾನೆ.
ವಾಸ್ತವ ಎಂಬುದು ಒಂದೇ ಇದ್ದರೂ ಅದರ ಬಗ್ಗೆ ಅನೇಕ ಕಥೆಗಳು ಹುಟ್ಟುತ್ತವೆ. ಸೂರ್ಯ ಮೂಡಣದಲ್ಲಿ ಮೂಡಿ ಪಡುವಣದಲ್ಲಿ ಪವಡಿಸುವ ಪ್ರಾಕೃತಿಕ ವಾಸ್ತವವನ್ನು ವಿಶ್ವದ ವಿವಿಧ ಭೂಭಾಗಗಳಲ್ಲಿ ನಾನಾ ರೀತಿಗಳಲ್ಲಿ ಅರ್ಥೈಸಿ ಕಥೆಗಳನ್ನು ಹೆಣೆದಿದ್ದಾರೆ. ಜನಪದರು ಆ ಕಾಲಕ್ಕೆ ತಮ್ಮ ಕತೆಗಳನ್ನು ಸತ್ಯವೆಂದೇ ನಂಬಿದ್ದರು. ಆದರೆ ವಾಸ್ತವದಲ್ಲಿ ಯಾವುದೇ ಕತೆಗಳಿರದು. ಮನುಷ್ಯನ ವಿವರಣೆಗಳು ಹುಟ್ಟುವ ಮುನ್ನವೇ ಅದು ಅಸ್ತಿತ್ವದಲ್ಲಿದ್ದು ತನ್ನ ಪಾಡಿಗೆ ತಾನು ಕ್ರಿಯಾಶೀಲವಾಗಿರುತ್ತದೆ. ಮನುಷ್ಯ ಯಾವಾಗಲೋ ಒಮ್ಮೆ ಅದನ್ನು ಅರಿಯುತ್ತಾನೆ. ವಾಸ್ತವ ನಮ್ಮ ಸ್ವೀಕಾರ ಅಥವಾ ತಿರಸ್ಕಾರಗಳನ್ನು ಲೆಕ್ಕಿಸದ ಕಾರಣ, ನಾವೂ ಭಾವೋದ್ವೇಗಕ್ಕೆ ಒಳಗಾಗದೆ ಅಥವಾ ಭಾವೋದ್ರೇಕದಿಂದ ಚಿತ್ರಿಸಲು ಯತ್ನಿಸದೆ ವಾಸ್ತವವನ್ನು ನೋಡಲು ಕಲಿಯಬೇಕು.
ಸತ್ಯ ಮನುಷ್ಯನ ಭಾವೋದ್ವೇಗವನ್ನು ಪ್ರೇರೇಪಿಸುವಂತಹದ್ದು. ವಾಸ್ತವ ನಿರ್ಲಿಪ್ತವಾಗಿರುವಂತಹದ್ದು. ಹಾಗಾಗಿ ಸತ್ಯ ಎಂಬುದೂ ಮತ್ತು ವಾಸ್ತವ ಎಂಬುದೂ ಒಂದೇ ಅಲ್ಲ. ವಾಸ್ತವವು ನಮ್ಮ ಅಭಿಪ್ರಾಯಗಳಿಂದ, ಪರಿಕಲ್ಪನೆಗಳಿಂದ ಹೊರತಾಗಿ ಸ್ವತಂತ್ರವಾಗಿ ಅಸ್ತಿತ್ವದಲ್ಲಿರುತ್ತದೆ. ಸತ್ಯ ಎಂದು ನಾವು ಯಾವುದನ್ನು ಕರೆಯುತ್ತೇವೆಯೋ ಅದನ್ನೇ ಬಳಸಿಕೊಂಡು ವಾಸ್ತವವನ್ನು ಅರಿಯಲು ಸಾಧ್ಯ. ಆದರೆ ಸತ್ಯವನ್ನೇ ವಾಸ್ತವ ಎಂದು ನಿರೂಪಿಸಲು ಹೋದರೆ ಅದು ಅಜ್ಞಾನವಾಗುತ್ತದೆ ಮತ್ತು ವ್ಯರ್ಥ ಪ್ರಯತ್ನವಾಗುತ್ತದೆ.
ವಾಸ್ತವ ಮತ್ತು ಸತ್ಯದ ನಡುವಿನ ವ್ಯತ್ಯಾಸ ಅರ್ಥವಾದ ಮೇಲೆ ನಮ್ಮ ನೋಡುವ, ವಿವರಿಸುವ, ಗ್ರಹಿಸುವ, ಅರ್ಥೈಸುವ ಎಲ್ಲಾ ರೀತಿಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಿಕೊಳ್ಳಬೇಕಾಗುತ್ತದೆ. ನಾನು ವಾಸ್ತವವನ್ನು ಗ್ರಹಿಸುತ್ತಿದ್ದೇನೆಯೋ ಅಥವಾ ನಾನು ಕಲಿತಿರುವ ಸತ್ಯದ ಮಾನದಂಡದ ಮೌಲ್ಯದ ಆಧಾರದಲ್ಲಿ ವಾಸ್ತವವನ್ನು ಗ್ರಹಿಸಲು ಯತ್ನಿಸುತ್ತಿದ್ದೇನೆಯೋ ಎಂದು ಗಮನಿಸಿಕೊಳ್ಳಬೇಕಾಗುತ್ತದೆ.






