Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಬಹುಮತ

ಬಹುಮತ

ಯೋಗೇಶ್ ಮಾಸ್ಟರ್ಯೋಗೇಶ್ ಮಾಸ್ಟರ್1 March 2026 1:16 PM IST
share
ಬಹುಮತ

ವ್ಯಕ್ತಿಪೂಜೆ ಮತ್ತು ಸಮೂಹ ಸನ್ನಿಯ ಪರಿಣಾಮಗಳನ್ನು ಗಮನಿಸುತ್ತಾ ಮುನ್ನಡೆದಂತೆ ಸಮಾಜದಲ್ಲಿ ಬಹುಮತದ ಬಗ್ಗೆಯೂ ಮನಶಾಸ್ತ್ರೀಯವಾಗಿ ಚಿಂತಿಸಬೇಕಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ಬಹುಮತವೇ ಶಕ್ತಿ, ಆದರೆ ಅದೇ ಬಹುಮತ ಅಜ್ಞಾನ, ಅಸಂವೇದನೆ ಮತ್ತು ಗುಂಪು ಮನಸ್ಥಿತಿಗೆ ಒಳಗಾದಾಗ ಪ್ರಜಾಪ್ರಭುತ್ವದ ಶತ್ರುವಾಗುತ್ತದೆ. ಬಹುಮತವನ್ನು ಮನೋವಿಜ್ಞಾನ, ಸಮಾಜಶಾಸ್ತ್ರ ಮತ್ತು ರಾಜಕೀಯ ಎಂಬ ಮೂರು ದೃಷ್ಟಿಕೋನಗಳಿಂದ ಗ್ರಹಿಸದೆ ಬರೀ ಹೊರ ನೋಟದಿಂದ ನೋಡಿದರೆ ಸಮಸ್ಯೆಯಾಗುತ್ತದೆ.

ಬಹುಮತ ಎಂದರೆ ಶಕ್ತಿಯೂ ಹೌದು, ಅಪಾಯವೂ ಹೌದು. ಪ್ರಜಾಪ್ರಭುತ್ವದಲ್ಲಿ ಬಹುಮತ ಎಂದರೆ ಅದು ಜನರ ಇಚ್ಛೆಯ ಪ್ರತಿಬಿಂಬವಾಗಿರುತ್ತದೆ. ಅದರ ನಿರ್ಧಾರಕ್ಕೆ ಸಾಮಾಜಿಕ ಮಾನ್ಯತೆ ಇರುತ್ತದೆ. ಆದರೆ ಬಹುಮತಕ್ಕೆ ವಿವೇಕ, ಸಂವೇದನೆ ಮತ್ತು ಜವಾಬ್ದಾರಿ ಇಲ್ಲದಾಗ, ಅದು ಶಕ್ತಿಯಾಗದೆ ಒಂದು ದೌರ್ಬಲ್ಯ ಮತ್ತು ಒಟ್ಟಾರೆ ಸಮಾಜಕ್ಕೆ ಉಪದ್ರವ ಅಥವಾ ಪೀಡೆ ಆಗುತ್ತದೆ.

ಮನೋವೈಜ್ಞಾನಿಕವಾಗಿ ಯಾರದೋ ನಾಯಕನ ಭಕ್ತನಾಗಿರುವ ಮನಸ್ಸು ಮತ್ತು ಸಮೂಹದ ಮರುಳು ದೀರ್ಘಕಾಲ ನರಳುವಂತಹ ಸಮಸ್ಯೆಗಳನ್ನು ತಂದೊಡ್ಡುತ್ತವೆ. ಭಕ್ತ ಮನಸ್ಥಿತಿಯ ವ್ಯಕ್ತಿ ತನ್ನ ಗುರುತನ್ನು ನಾಯಕನೊಂದಿಗೆ ಬೆಸೆದುಕೊಳ್ಳುತ್ತಾನೆ. ಅವನಿಗೆ ನಾನು ಎಂಬುದಕ್ಕಿಂತ ನಾವು ಮುಖ್ಯವಾಗುತ್ತದೆ. ಆಗ ತರ್ಕಕ್ಕಿಂತ ತನ್ನ ನಾಯಕನ ಬಗ್ಗೆ ಇರುವ ನಿಷ್ಠೆ ದೊಡ್ಡದಾಗುತ್ತದೆ. ಇದರಿಂದ ಭಕ್ತನ ವೈಯಕ್ತಿಕ ಮನಸ್ಸು ತನ್ನ ಸಂಪೂರ್ಣ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತದೆ. ಏಕೆಂದರೆ ಗುಂಪಿನಲ್ಲಿ ಇದ್ದಾಗ, ತಪ್ಪು ತಪ್ಪಾಗಿ ಕಾಣುವುದಿಲ್ಲ. ಕ್ರೌರ್ಯವೂ ಧರ್ಮವಾಗಿ ಕಾಣುತ್ತದೆ. ಅಸಂವೇದನೆ ಸಾಮಾನ್ಯವಾಗುತ್ತದೆ. ಅಲ್ಲಿಗೆ ಸಾಮಾನ್ಯವಾದ ನೈತಿಕ ಸಂವೇದನೆಯು ಸಾಯುತ್ತದೆ.

ಹಾಗೆಯೇ ಇದನ್ನು ಸಮಾಜಶಾಸ್ತ್ರೀಯವಾಗಿ ಅಸಂವೇದಿತ ಸಮಾಜದಲ್ಲಿ ಬಹುಮತದ ಅರ್ಥ ಹೇಗೆ ಕಳೆದುಹೋಗುತ್ತದೆ ಎಂಬುದನ್ನೂ ಗಮನಿಸಬೇಕು. ಸಂವೇದನೆ ಇಲ್ಲದ ಸಮಾಜದಲ್ಲಿ ದುರ್ಬಲರ ನೋವು ಕಾಣುವುದಿಲ್ಲ, ಅಲ್ಪಸಂಖ್ಯಾತರ ಧ್ವನಿ ಗಲಾಟೆಯ ಶಬ್ದವಾಗುತ್ತದೆ, ಭಿನ್ನಾಭಿಪ್ರಾಯ ಅಪಾಯವಾಗುತ್ತದೆ. ಅಂಥ ಸಮಾಜದಲ್ಲಿ ಬಹುಮತ ಎಂಬುದು ನ್ಯಾಯವನ್ನು ತೀರ್ಮಾನಿಸುವುದಿಲ್ಲ. ಶಕ್ತಿಯನ್ನು ಮಾತ್ರ ಪ್ರದರ್ಶಿಸುತ್ತದೆ. ಹಾಗಾದಾಗ ಇದು ಸಂಖ್ಯೆಯ ದಬ್ಬಾಳಿಕೆ ಆಗುತ್ತದೆಯೇ ಹೊರತು ಪ್ರಜಾಪ್ರಭುತ್ವವಾಗುವುದಿಲ್ಲ.

ಇನ್ನು ರಾಜಕೀಯ ದೃಷ್ಟಿಯಿಂದಲೂ ನೋಡಿದರೆ, ಸಂವೇದನೆ ಇಲ್ಲದ, ಸೂಕ್ಷ್ಮದೃಷ್ಟಿ, ದೂರದೃಷ್ಟಿ ಮತ್ತು ವಿವೇಚನೆ ಇಲ್ಲದ ಬಹುಮತದ ದೌರ್ಜನ್ಯ (Tyranny of Majority) ಎಂತಹ ಕೆಟ್ಟ ಪರಿಸ್ಥಿತಿಯನ್ನಾದರೂ ಸಮಾಜದಲ್ಲಿ ನಿರ್ಮಿಸಬಹುದು. ಮೊದಲನೆಯದಾಗಿ ಅಂತಹ ಬಹುಮತವು ಕಾನೂನನ್ನು ಭಾವನೆಗೆ ಒಳಪಡಿಸುತ್ತದೆ. ವಿಷಯಗಳನ್ನು ಭಾವೋದ್ರೇಕಕ್ಕೆ ಒಳಪಡಿಸುತ್ತಾ ನಾವು ಧಾರ್ಮಿಕವಾಗಿ ಬಹುಜನರು ಎಂದೋ, ಜಾತಿಯಲ್ಲಿ ಬಹುಜನರು ಎಂದೋ ಮತೀಯ ಭಾವನೆಗಳನ್ನು ಕೆರಳಿಸುತ್ತಾ ಹೋದಂತೆ ಸಂವಿಧಾನವನ್ನು ಅಡ್ಡಿಯಂತೆ ನೋಡಲಾಗುತ್ತದೆ. ದೊಡ್ಡ ಸಮೂಹವೇ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ತಿರುಗಬಹುದು. ಎಲ್ಲರ ಹಕ್ಕುಗಳನ್ನು ತಾವು ಔದಾರ್ಯದಿಂದ ಮಾಡುತ್ತಿರುವ ಅನುಗ್ರಹವೆಂದು ಭಾವಿಸಲಾಗುತ್ತದೆ. ಇಲ್ಲಿ ಬಹುಮತದಿಂದ ಚುನಾಯಿತರಾಗಿರುವವರ ಏಕಪಕ್ಷೀಯ ನೀತಿಗಳು ಪ್ರಶ್ನಾತೀತವಾಗುತ್ತವೆ. ಬಹಳ ಮುಖ್ಯವಾಗಿ ರಾಜಕೀಯ, ಸಾಮಾಜಿಕ ಸಂಸ್ಥೆಗಳು ದುರ್ಬಲಗೊಳ್ಳುತ್ತವೆ ಅಥವಾ ನಾಶವಾಗುತ್ತವೆ. ಅವಿವೇಕದ ಬಹುಮತದಿಂದ ಗೆದ್ದಿರುವ ನಾಯಕನ ಇಚ್ಛೆಯೇ ಕಾನೂನಾಗುತ್ತದೆ. ಇದು ಪ್ರಜಾಪ್ರಭುತ್ವದ ಮುಖವಾಡದೊಳಗಿನ ಅಧಿಕಾರಶಾಹಿಯಾಗಿ ಮಾರ್ಪಾಡಾಗುತ್ತದೆ.

ಇನ್ನು ಅನಕ್ಷರತೆ ಮತ್ತು ಸ್ವಾರ್ಥಗಳು ಬಹುಮತದ ವಿಷಕಾರಿ ಸಂಯೋಜನೆಯಾಗಿರುತ್ತವೆ. ಇಲ್ಲಿ ಅನಕ್ಷರತೆ ಎಂದರೆ ಅಕ್ಷರಜ್ಞಾನವಲ್ಲ, ವಿಮರ್ಶಾತ್ಮಕ ಚಿಂತನೆಯ ಕೊರತೆ ಮತ್ತು ಮಾಹಿತಿ ಪರಿಶೀಲನೆ ಇಲ್ಲದೆ ನಂಬುವುದು. ಇದರ ಜೊತೆಗೆ ಸ್ವಾರ್ಥ ಸೇರಿಕೊಂಡಾಗ ದೂರದೃಷ್ಟಿ ಸಂಪೂರ್ಣವಾಗಿ ನಾಶವಾಗಿ ತಕ್ಷಣದ ಲಾಭವೇ ಸತ್ಯವಾಗಿ ತೋರುತ್ತದೆ. ದೀರ್ಘಾವಧಿ ಹಾನಿ ಬಹುಮತದ ನಿರ್ಮಾಪಕರಿಗೆ ಕಾಣುವುದಿಲ್ಲ. ಸಮಾಜದ ಒಟ್ಟಾರೆ ಹಿತ ಮರೆತುಹೋಗುತ್ತದೆ.

ಇಂಥ ಬಹುಮತದ ಅಭಿಪ್ರಾಯವು ಭವಿಷ್ಯಕ್ಕೆ ಮಾರ್ಗದರ್ಶಿಯಾಗುವುದಿಲ್ಲ. ಬದಲಿಗೆ ಸಮಾಜವನ್ನು ಹಿಂದಕ್ಕೆ ಎಳೆಯುತ್ತದೆ. ಅದು ಸಂವಿಧಾನಾತ್ಮಕ ಸಂವೇದನೆ ಇಲ್ಲದ ಬಹುಮತವಾಗಿಬಿಡುತ್ತದೆ. ಬಹುಮತ ಎಂಬುದು ಎಷ್ಟೇ ವಿಜೃಂಭಿಸಿದರೂ ಸಂವಿಧಾನವು ಬಹುಮತಕ್ಕೂ ಮಿತಿ ಹಾಕುತ್ತದೆ, ದುರ್ಬಲರನ್ನು ರಕ್ಷಿಸುತ್ತದೆ ಮತ್ತು ಮಾನವನ ಹಕ್ಕನ್ನು ಮತ್ತು ಘನತೆಯನ್ನು ಕಾಪಾಡುತ್ತದೆ.

ಆದರೆ ಭಕ್ತರ ಬಹುಮತ ನಾವು ಹೆಚ್ಚು, ನಮಗೆ ಎಲ್ಲವೂ ಸರಿ ಎಂದು ಭಾವಿಸುತ್ತದೆ. ಅದಕ್ಕೆ ವಿರುದ್ಧವಾಗಿ ತೋರುವ ಸಂವಿಧಾನವನ್ನು ತೊಂದರೆಯಂತೆ ನೋಡುತ್ತದೆ. ಇಲ್ಲಿ ಸಂವಿಧಾನ ಕಾಗದವಾಗುತ್ತದೆ, ಅದು ಮುಂದುವರಿದಂತೆ ಬಹುಮತ ಶಕ್ತಿಯಾಗುತ್ತದೆ, ಸಂವಿಧಾನದ ನ್ಯಾಯವಲ್ಲ.

ಒಟ್ಟಾರೆ ವ್ಯಕ್ತಿಯ ಮಾನಸಿಕ ಮತ್ತು ಸಮಾಜದ ಸಂಕಲಿತ ಮನಸ್ಸಿನ ಆರೋಗ್ಯದ ಹಿತದೃಷ್ಟಿಯಿಂದ ನೋಡುವುದಾದರೆ, ಪ್ರಜಾಪ್ರಭುತ್ವದಲ್ಲಿ ಬಹುಮತ ಮುಖ್ಯ. ಆದರೆ ಸಂವೇದನಾಶೀಲ ಬಹುಮತ ಇನ್ನಷ್ಟು ಮುಖ್ಯವಾಗುತ್ತದೆ. ಪ್ರಶ್ನೆ ಮಾಡುವ ವ್ಯಕ್ತಿಗತ ನಾಗರಿಕ ಬಹುಮತಕ್ಕಿಂತ ಅಮೂಲ್ಯನಾಗಿರುವರು. ಭಕ್ತರಿಂದ ಕೂಡಿದ ಬಹುಮತ ಪ್ರಜಾಪ್ರಭುತ್ವದ ಶಕ್ತಿ ಎಂದಿಗೂ ಅಲ್ಲ. ಅದು ಅದರ ಅಗ್ನಿ ಪರೀಕ್ಷೆ. ವ್ಯಕ್ತಿಗಳು ಮತ್ತು ಸಮೂಹಗಳು ಕೇಳುವ ಪ್ರಶ್ನೆಗಳೇ ಪ್ರಜಾಪ್ರಭುತ್ವ ಉಸಿರಾಡುತ್ತಿದೆ ಎಂಬ ಸಂಕೇತ.

ಸಮಾಜದೊಂದಿಗೆ ಸಂವಹನ ಮಾಡುವ ಸಾಹಿತಿಗಳು, ಕಲಾವಿದರು ಮತ್ತು ಮಾಧ್ಯಮದವರು ತಾವು ಬದುಕುತ್ತಿರುವ ಸಮಾಜವನ್ನು ಬರಿದೇ ಗಮನಿಸುವವರಾಗಿ ಮತ್ತು ಆ ಘಟನೆಗಳನ್ನು ತಮ್ಮ ಕ್ಷೇತ್ರದ ನಿರೂಪಣೆಯ ವಸ್ತುವನ್ನಾಗಿ ನೋಡುವುದಲ್ಲ. ಸಾಕ್ಷಿಗಳಾಗಬೇಕಾಗುತ್ತದೆ. ಸಾಕ್ಷಿಪ್ರಜ್ಞೆಗಳಾದವರು ಸಮಾಜದ ನೋವನ್ನು ಅನುಭವಿಸುತ್ತಾರೆ, ಮೌನದ ಅರ್ಥವನ್ನು ಓದುತ್ತಾರೆ, ಗುಂಪಿನ ಹಿಂಸೆಯ ಹಿಂದೆ ಇರುವ ಭಯವನ್ನು ಗುರುತಿಸುತ್ತಾರೆ. ಅವರು ಯಾವ ನಾಯಕರ ಅಥವಾ ಪಕ್ಷದ ಪರವೂ ಆಗಿರದೇ ಮಾನವ ಹಕ್ಕು ಮತ್ತು ಘನತೆಯ ಪರವಾಗಿರುತ್ತಾರೆ. ಅದು ಅವರ ದೃಷ್ಟಿಯ ಕೇಂದ್ರವಾಗಬೇಕು ಕೂಡಾ. ಬರಹಗಾರರಾಗಿ, ಕಲಾವಿದರಾಗಿ ಅಥವಾ ಯಾವುದೇ ಸಾಮಾಜಿಕ ಸಂವಹನಕಾರರಾಗಿ ಅವರ ಜವಾಬ್ದಾರಿ ಭಾವೋದ್ರೇಕಗೊಳಿಸುವುದಲ್ಲ. ಬದಲಾಗಿ ಚಿಂತನೆಗೆ ಒಳಮಾಡುವುದು. ಇಂದಿನ ಸಮಾಜಕ್ಕೆ ಕೆರಳಿಸುವ ಅನೇಕಾನೇಕ ವಿಷಯಗಳು ಇವೆ. ಆದರೆ ಅರಳಿಸುವ ಕೆಲಸಕ್ಕೆ ಸಮಾಜದೊಂದಿಗೆ ಯಾವುದೇ ರೀತಿಯಲ್ಲಿ ಸಂವಹನ ಮಾಡುವ ವ್ಯಕ್ತಿಗಳದ್ದಾಗಿರುತ್ತದೆ. ಜೊತೆಗೆ ಬಹುಮತವೆಂಬುದು ಶತ್ರುವಲ್ಲ, ಆದರೆ ಅದರ ಅಸಂವೇದನೆ ಸಮಸ್ಯೆ ಎಂಬುದನ್ನು ಗಮನಿಸಬೇಕಾಗುತ್ತದೆ. ಬಹುಮತವನ್ನು ದ್ವೇಷಿಸಲಾಗದು. ಆದರೆ ಬಹುಮತದ ದೌರ್ಜನ್ಯವನ್ನು ಬಹಿರಂಗಪಡಿಸಬೇಕು.

Tags

Majority
share
ಯೋಗೇಶ್ ಮಾಸ್ಟರ್
ಯೋಗೇಶ್ ಮಾಸ್ಟರ್
Next Story
X