ಮನೆಯಲ್ಲಿ ಸಂವಿಧಾನ

ನಮ್ಮ ಕುಟುಂಬಗಳು ಎಂತಹ ನಾಗರಿಕರನ್ನು ರೂಪಿಸುತ್ತಿವೆ? ಇದು ಮನೋವೈಜ್ಞಾನಿಕವಾಗಿ ನಮ್ಮನ್ನು ನಾವು ಪ್ರಶ್ನಿಸಿಕೊಳ್ಳಬೇಕಾದದ್ದು. ಏಕೆಂದರೆ ಪ್ರಜಾಪ್ರಭುತ್ವವನ್ನು ನಾವು ಸಾಮಾನ್ಯವಾಗಿ ಸಂವಿಧಾನ, ಸಂಸತ್ತು, ಚುನಾವಣೆ ಮತ್ತು ರಾಜಕೀಯ ಪಕ್ಷಗಳ ಮೂಲಕ ಅರ್ಥಮಾಡಿಕೊಳ್ಳುತ್ತೇವೆ. ಆದರೆ ಪ್ರಜಾಪ್ರಭುತ್ವದ ಮೊದಲ ಪಾಠವನ್ನು ಯಾವುದೇ ಮಗು ಸಂವಿಧಾನದಲ್ಲಿ ಓದುವುದಿಲ್ಲ. ಅದು ಮನೆಯಲ್ಲೇ ಕಲಿಯುತ್ತದೆ. ಒಂದು ಕುಟುಂಬದಲ್ಲಿ ನಾವು ನೋಡಬೇಕಾಗಿರುವುದು ಏನೆಂದರೆ, ಒಂದು ಮಗುವಿಗೆ ತನ್ನ ಅಭಿಪ್ರಾಯ ಹೇಳಲು ಮನೆಯಲ್ಲಿ ಅವಕಾಶವಿದೆಯೇ? ಯಾಕೆ? ಎಂದು ಕೇಳಬಹುದೇ? ತಂದೆ ಅಥವಾ ತಾಯಿ ಏನಾದರೂ ತಪ್ಪು ಮಾಡಿದರೆ ಮಗು ಅದನ್ನು ಹೇಳಬಹುದೇ? ಹೇಳಿದರೆ ಕೇಳುವರೇ? ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನ ಸ್ವಾತಂತ್ರ್ಯವಿದೆಯೇ? ಹಿರಿಯರ ಮಾತನ್ನು ಗೌರವಿಸಬೇಕೆಂದರೆ ಪ್ರಶ್ನಿಸದೆ ಪಾಲಿಸಬೇಕೆಂದೇ ಅರ್ಥವೇ? ಇಂತಹ ಸಣ್ಣ ಪ್ರಶ್ನೆಗಳಲ್ಲಿಯೇ ಭವಿಷ್ಯದ ನಾಗರಿಕನ ಮನಸ್ಸು ರೂಪುಗೊಳ್ಳುತ್ತದೆ.
ಕುಟುಂಬವೇ ಮಗುವಿನ ಮೊದಲ ಪ್ರಭುತ್ವದ ವ್ಯವಸ್ಥೆ. ಮಗುವಿಗೆ ಹುಟ್ಟಿದಾಗ ರಾಷ್ಟ್ರವೆಂದರೇನು ಗೊತ್ತಿರುವುದಿಲ್ಲ. ಅದರ ಮೊದಲ ಅಧಿಕಾರ ವ್ಯವಸ್ಥೆ ಕುಟುಂಬ. ತಾಯಿ-ತಂದೆಯೇ ಮೊದಲ ಸ್ವಾಯತ್ತೆ (authority). ಮನೆಯ ನಿಯಮಗಳೇ ಮೊದಲ ನ್ಯಾಯಾಂಗ ವ್ಯವಸ್ಥೆ. ಅಣ್ಣ-ತಂಗಿಯರೊಂದಿಗೆ ಅಥವಾ ಇತರ ಕುಟುಂಬದ ಸದಸ್ಯರೊಂದಿಗೆ ಹಂಚಿಕೊಳ್ಳುವುದೇ ಮೊದಲ ಅರ್ಥವ್ಯವಸ್ಥೆ. ತಪ್ಪು ಮಾಡಿದಾಗ ನಡೆಯುವ ವಿಚಾರಣೆಯೇ ಮೊದಲ ನ್ಯಾಯಾಂಗ. ಯಾರ ಮಾತಿಗೆ ಎಷ್ಟು ಬೆಲೆ ಎಂಬುದೇ ಮೊದಲ ಸಾಮಾಜಿಕ ಶ್ರೇಣಿ (social hierarchy¦). ಹೀಗಾಗಿ ಕುಟುಂಬವನ್ನು ಕೇವಲ ಖಾಸಗಿ ಸಂಬಂಧಗಳ ಜಾಗವೆಂದು ನೋಡಲಾಗುವುದಿಲ್ಲ. ಅದು ಮಗುವಿನ ಮೊದಲ ರಾಜಕೀಯ ಮನಶಾಸ್ತ್ರದ ಪ್ರಯೋಗಾಲಯ (political psychology laboratory) ಕೂಡ ಹೌದು.
‘‘ನಾನು ಹೇಳಿದ್ದೇನೆ, ನೀನು ಮಾಡು!’’ ಎಂಬುದು ಭಾರತೀಯ ಕುಟುಂಬಗಳಲ್ಲಿ ಬಹಳ ಪರಿಚಿತವಾದ ವಾಕ್ಯ.
‘‘ಯಾಕೆ?’’ ಎಂದರೆ, ‘‘ಹೆಚ್ಚು ಮಾತಾಡಬೇಡ’’ ಎಂಬುದು ಹಿರಿಯರ ಉತ್ತರ. ಇಲ್ಲಿ ಮಗು ಒಂದು ಪಾಠ ಕಲಿಯುತ್ತದೆ, ಅದು ಅಧಿಕಾರಕ್ಕೆ ಕಾರಣ ಕೊಡುವ ಅಗತ್ಯವಿಲ್ಲ. ಮಗು ಪ್ರಶ್ನಿಸಿದಾಗ ಉತ್ತರಿಸುವ ಬದಲು ಪ್ರಶ್ನೆಯನ್ನೇ ಅಸಭ್ಯತೆ ಅಥವಾ ಶಿಷ್ಟತೆಯಲ್ಲ ಎಂದು ಪರಿಗಣಿಸಿದರೆ, ಅದು ಆ ಹೊತ್ತಿಗೆ ವಿನಯವನ್ನು ಕಲಿಯಬಹುದು; ಆದರೆ ತಾರ್ಕಿಕತೆಯನ್ನು ಕಲಿಯದೇ ಹೋಗಬಹುದು. ಇಂತಹ ಮನಸ್ಸು ದೊಡ್ಡವರಾದಾಗ ಎರಡು ಸಾಧ್ಯತೆಗಳಿವೆ. ಒಂದೋ ಅಧಿಕಾರಕ್ಕೆ ಸುಲಭವಾಗಿ ಶರಣಾಗುತ್ತದೆ ಅಥವಾ ತಾನೇ ಅಧಿಕಾರ ಪಡೆದಾಗ ತನ್ನ ಕೆಳಗಿನವರಿಂದ ಅದೇ ಶರಣಾಗತಿಯನ್ನು ನಿರೀಕ್ಷಿಸುತ್ತದೆ.
ಹೀಗಾಗಿ ಅಧಿಕಾರಯುತ ಪೋಷಕತ್ವ (authoritarian parenting) ಮನೆಯೊಳಗೆ ಮಾತ್ರ ಉಳಿಯುವುದಿಲ್ಲ. ಅದರ ಮನೋವೈಜ್ಞಾನಿಕ ನೆರಳು ಶಾಲೆ, ಕೆಲಸ ಮಾಡುವ ಜಾಗ, ವೈವಾಹಿಕ ಜೀವನ, ಧರ್ಮ ಮತ್ತು ರಾಜಕೀಯದವರೆಗೂ ಹಬ್ಬುತ್ತದೆ.
ಒಂದು ವಿಷಯದಲ್ಲಿ ಸ್ಪಷ್ಟತೆ ಇರಲಿ. ಗೌರವ ಮತ್ತು ವಿಧೇಯತೆ ಎರಡೂ ಒಂದೇ ಅಲ್ಲ. ಹಿರಿಯರಿಗೆ ಗೌರವ ಕೊಡಬೇಕು ಎನ್ನುವುದು ನಮ್ಮ ಸಂಸ್ಕೃತಿಯ ಬಹಳ ಸುಂದರ ಮೌಲ್ಯ. ಆದರೆ ಒಂದು ಸೂಕ್ಷ್ಮ ವ್ಯತ್ಯಾಸವನ್ನು ನಾವು ಮಕ್ಕಳಿಗೆ ಕಲಿಸಬೇಕಿದೆ. ಗೌರವಿಸುವುದು ಎಂದರೆ ಶರಣಾಗುವುದು ಅಲ್ಲ ಎಂಬುದು. ನಾನು ನಿಮ್ಮನ್ನು ಗೌರವಿಸಬಹುದು ಮತ್ತು ನಿಮ್ಮೊಂದಿಗೆ ಅಸಮ್ಮತಿಯನ್ನೂ ಕೂಡಾ ಸೂಚಿಸಬಹುದು. ನೀವು ನನ್ನ ತಂದೆಯಾಗಿರಬಹುದು; ಆದರೂ ನಿಮ್ಮ ಪ್ರತಿಯೊಂದು ಅಭಿಪ್ರಾಯವೂ ಸತ್ಯವಾಗಬೇಕಿಲ್ಲ. ಶಿಕ್ಷಕರಿಗೆ ಗೌರವ ಕೊಡಬಹುದು; ಜೊತೆಗೆ ಪ್ರಶ್ನೆಯನ್ನೂ ಕೇಳಬಹುದು. ನಾವು ದೇಶವನ್ನು ಪ್ರೀತಿಸಬಹುದು; ನಮ್ಮ ಸರಕಾರವನ್ನು ವಿಮರ್ಶಿಸಬಹುದು. ಧರ್ಮವನ್ನು ಗೌರವಿಸಬಹುದು; ಆದರೆ ಅದರ ಹೆಸರಿನಲ್ಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸಬಹುದು. ಈ ವ್ಯತ್ಯಾಸವನ್ನು ಮನೆಯಲ್ಲೇ ಕಲಿಯದಿದ್ದರೆ, ಮುಂದೆ ವ್ಯಕ್ತಿ ಭಿನ್ನಾಭಿಪ್ರಾಯವನ್ನು ಅಗೌರವ ಎಂದು ತಪ್ಪಾಗಿ ಗ್ರಹಿಸುವ ಸಾಧ್ಯತೆ ಹೆಚ್ಚುತ್ತದೆ.
ಮನೆಯೊಳಗಿನ ನ್ಯಾಯವೇ ಮಗುವಿನ ಮೊದಲ ಸಂವಿಧಾನ ಎಂಬುದನ್ನು ಮರೆಯಬಾರದು. ಅಣ್ಣನಿಗೆ ಒಂದು ನಿಯಮ, ತಂಗಿಗೆ ಇನ್ನೊಂದು ನಿಯಮ ಇದ್ದರೆ? ಹುಡುಗ ರಾತ್ರಿ ಹೊರಗೆ ಹೋಗಬಹುದು; ಹುಡುಗಿ ಹೋಗಬಾರದು ಎಂದರೆ? ಹಿರಿಯರು ತಪ್ಪು ಮಾಡಿದರೂ ಕ್ಷಮೆ ಕೇಳಬೇಕಾಗಿಲ್ಲ; ಮಗು ಮಾತ್ರ ಕ್ಷಮೆ ಕೇಳಬೇಕೆಂದರೆ? ಮಗು ಇವುಗಳನ್ನು ಕೇವಲ ನಿಯಮಗಳಾಗಿ ನೋಡುವುದಿಲ್ಲ. ಅದರ ಮೆದುಳು ನಿಧಾನವಾಗಿ ಅಧಿಕಾರದ ಬಲ ಹೇಗೆ ಕೆಲಸ ಮಾಡುತ್ತದೆ ಎಂಬ ಮಾದರಿಯನ್ನು ನಿರ್ಮಿಸಿಕೊಳ್ಳುತ್ತದೆ.
ಅಧಿಕಾರ ಇರುವವನಿಗೆ ಸವಲತ್ತಿನ ಹಕ್ಕು ಸಹಜ ಎಂದು ಕಲಿತ ಮಗು ಮುಂದೆ ಸಮಾಜದಲ್ಲೂ ಅಸಮಾನತೆಯನ್ನು ಸಹಜವೆಂದು ಭಾವಿಸಬಹುದು.
ಆದ್ದರಿಂದ ಸಂವಿಧಾನದ ಸಮಾನತೆ ಎಂಬ ಪದವನ್ನು ಶಾಲೆಯಲ್ಲಿ ಕಂಠಪಾಠ ಮಾಡಿಸುವ ಮೊದಲು, ಮನೆಯಲ್ಲಿ ಸಮಾನತೆ ಅನುಭವವಾಗಬೇಕು.






