ಮಾನಸಿಕ ರಾಜಪ್ರಭುತ್ವ

ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವವಾದರೂ, ಬಹುಪಾಲು ಜನರ ಮನಸ್ಸಿನ ಕಲ್ಪನಾಲೋಕ ಇನ್ನೂ ರಾಜಪ್ರಭುತ್ವದ್ದಾಗಿದೆ. ಗಮನಿಸಿ ನೋಡಿ ಪ್ರಜಾಪ್ರಭುತ್ವದ ದೇಶದಲ್ಲಿ ರಾಜಕಾರಣಿ, ಸಿನೆಮಾ ನಟರುಗಳಿಂದ ಹಿಡಿದು ಸಾಮಾನ್ಯ ಜನರವರೆಗೂ ರಾಜನಾಗುವ ಕನಸು ಜೀವಂತವಾಗಿಯೇ ಇದೆ. ಮನೋವೈಜ್ಞಾನಿಕವಾಗಿ ಭಾರತದ ಮನಸ್ಸಿನ ಅಧಿಕಾರ ಪ್ರಜ್ಞೆ ಹೇಗಿದೆ ಎಂಬುದನ್ನು ಗಮನಿಸಬೇಕು.
ಭಾರತ ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿದೆ. ಆದರೆ ನಮ್ಮ ರಾಜಕೀಯ ವ್ಯವಸ್ಥೆ ಪ್ರಜಾಪ್ರಭುತ್ವವಾದಷ್ಟು ವೇಗವಾಗಿ ನಮ್ಮ ಮನಸ್ಸಿನ ಅಧಿಕಾರದ ಕಲ್ಪನೆ ಪ್ರಜಾಪ್ರಭುತ್ವವಾಗಿದೆಯೇ? ಈ ಪ್ರಶ್ನೆಯನ್ನು ನಮ್ಮ ಮಕ್ಕಳ ಬಾಲ್ಯದಿಂದಲೇ ಕೇಳಬೇಕು. ಮಗುವನ್ನು ಮುದ್ದಿನಿಂದ ನನ್ನ ರಾಜಕುಮಾರ, ಈ ಮನೆಯ ರಾಜಕುಮಾರಿ ಎಂದು ಕರೆಯುವುದನ್ನು ಗಮನಿಸಿ. ಅದರಲ್ಲಿ ತಪ್ಪೇನಿಲ್ಲ. ಅದು ಪ್ರೀತಿಯ ಭಾಷೆ. ಆದರೆ ಅದರ ಜೊತೆಗೆ ನಾವು ಯಶಸ್ಸನ್ನು ವಿವರಿಸುವ ಕೆಲವು ಮಾತುಗಳನ್ನು ಗಮನಿಸಬೇಕು. ‘‘ರಾಜನ ಹಾಗೆ ಬದುಕಬೇಕು’’ ಎಂದೋ, ‘‘ನಿನ್ನ ಕೈಕೆಳಗೆ ನೂರು ಜನ ಕೆಲಸ ಮಾಡಬೇಕು’’ ಎಂದೋ, ‘‘ನೀನು ಯಾರ ಮುಂದೆಯೂ ತಲೆಬಾಗಬಾರದು’’ ಎಂದೋ, ‘‘ನೀನು ಕೈಯೊಡ್ಡಿ ಕೇಳುವವನಾಗಬಾರದು; ಕೈ ಎತ್ತಿ ಕೊಡುವವನಾಗಬೇಕು’’ ಎಂದೋ, ‘‘ಎಲ್ಲರಿಗಿಂತ ಮೇಲೆ ಬರಬೇಕು’’ ಎಂದೋ ಹೇಳುವಂತಹ ಮಾತುಗಳೆಲ್ಲವೂ ಸೇರಿ ಮಗುವಿನ ಮನಸ್ಸಿನಲ್ಲಿ ಯಶಸ್ಸಿಗೆ ಒಂದು ವಿಚಿತ್ರ ಚಿತ್ರವನ್ನು ಬಿಡಿಸಬಹುದಾಗಿದೆ.
ಅದೆಂತಹ ಚಿತ್ರಣವನ್ನು ಕಟ್ಟಿಕೊಡುವುದು ಎಂದರೆ, ಯಶಸ್ಸು ಎಂದರೆ ಸಮರ್ಥನಾಗುವುದಲ್ಲ; ಮೇಲಿರುವುದು, ನಾಯಕತ್ವ ಎಂದರೆ ಜೊತೆಗಿರುವುದಲ್ಲ; ಆಳುವುದು, ಗೌರವ ಎಂದರೆ ಪರಸ್ಪರ ಗೌರವವಲ್ಲ; ಇತರರು ನಮಗೆ ತಲೆಬಾಗುವುದು ಎಂಬುವುದಾಗುತ್ತದೆ. ಇಲ್ಲಿಯೇ ಪ್ರಜಾಪ್ರಭುತ್ವದ ಮೊದಲ ಮನೋವೈಜ್ಞಾನಿಕ ಸಮಸ್ಯೆ ಆರಂಭವಾಗುತ್ತದೆ. ಪ್ರಜಾಪ್ರಭುತ್ವವೇನೋ ಬಂದಿತು. ಆದರೆ, ಫ್ಯೂಡಲ್ ಮನಸ್ಸು ಹಾಗೆಯೇ ಉಳಿಯಿತು.
ವಾಸ್ತವದಲ್ಲಿ ಪ್ರಜಾಪ್ರಭುತ್ವದ ಮೂಲತತ್ವ ಬಹಳ ಸರಳ. ಯಾರೂ ಹುಟ್ಟಿನಿಂದ ಶ್ರೇಷ್ಠರಲ್ಲ. ಅಧಿಕಾರ ಎಂಬುದು ವ್ಯಕ್ತಿಯ ಸ್ವಂತ ಆಸ್ತಿಯಲ್ಲ. ಅಧಿಕಾರ ನಾವು ಹೊತ್ತಿರುವ ಒಂದು ಹೊಣೆಗಾರಿಕೆ; ಅದನ್ನು ಸಮಾಜ ನಿರ್ದಿಷ್ಟ ಅವಧಿಗೆಂದು ನಮಗೆ ಒಪ್ಪಿಸುತ್ತದೆ. ಆದರೆ ಪಾಳೇಗಾರಿಕೆಯ ಅಥವಾ ಫ್ಯೂಡಲ್ ಮನಸ್ಸಿನ ತರ್ಕ ಇದಕ್ಕೆ ವಿರುದ್ಧವಾಗಿರುತ್ತದೆ. ‘‘ನಾನು ಮೇಲೆ; ನೀನು ಕೆಳಗೆ’’, ‘‘ನಾನು ಕೊಡುವವನು; ನೀನು ಪಡೆಯುವವನು’’, ‘‘ನಾನು ರಕ್ಷಕ; ನೀನು ಅವಲಂಬಿತ’’, ‘‘ನಾನು ಆದೇಶಿಸುವವನು; ನೀನು ಪಾಲಿಸುವವನು’’ ಇಂತಹ ಮನಸ್ಸಿಗೆ ಪ್ರಜಾಪ್ರಭುತ್ವವೂ ಕೂಡಾ ಒಂದು ಮೌಲ್ಯದ ವ್ಯವಸ್ಥೆಯಾಗದೆ ಕೇವಲ ಅಧಿಕಾರ ಪಡೆಯುವ ವಿಧಾನವಾಗಿಬಿಡಬಹುದು.
ಗಮನಿಸಿ ನೋಡಿ, ಚುನಾವಣೆ ಪ್ರಜಾಪ್ರಭುತ್ವ ದ್ದಾಗಿರುತ್ತದೆ; ಆದರೆ ಗೆದ್ದ ನಂತರ ಬಹುಪಾಲು ರಾಜಕಾರಣಿಗಳ ವರ್ತನೆ ರಾಜನದ್ದಾಗಿರುತ್ತದೆ. ಅಹಂಕಾರಕ್ಕೂ ಒಂದು ರಚನೆ ಇದೆ. ಅಹಂ ಎಂದರೆ ಕೇವಲ ನಾನು ದೊಡ್ಡವನು ಎಂಬ ಭಾವನೆಯಲ್ಲ. ಅದು ಸಂಬಂಧಗಳ ನಕ್ಷೆಯನ್ನೂ ನಿರ್ಮಿಸುತ್ತದೆ. ನಾನು ಯಾರಿಗಿಂತ ಮೇಲೆ ಇದ್ದೇನೆ? ಯಾರು ಯಾರು ನನ್ನ ಮಾತು ಕೇಳಬೇಕು? ಯಾರು ನನ್ನನ್ನು ಹೊಗಳಬೇಕು? ಯಾರು ನನಗೆ ಗೌರವ ತೋರಿಸಬೇಕು? ಯಾರು ನನ್ನ ಮುಂದೆ ಕೈ ಕಟ್ಟಿಕೊಂಡು ಕಾಯಬೇಕು? ನನ್ನ ಆಗಮನಕ್ಕೆ ಎಷ್ಟು ಜನ ಎದ್ದು ನಿಲ್ಲಬೇಕು? ಈ ಪ್ರಶ್ನೆಗಳಿಗೆ ಸಾಮಾಜಿಕ ವ್ಯವಸ್ಥೆ ಮತ್ತು ನಡವಳಿಕೆಗಳಿಂದ ಬಲವರ್ಧನೆ ಸಿಕ್ಕಾಗ ಶ್ರೇಣೀಕೃತ ಅಹಂಕಾರ ರೂಪುಗೊಳ್ಳುತ್ತದೆ. ಆಗ ಅಧಿಕಾರ ಎಂದರೆ ಕೆಲಸ ಮಾಡುವ ಸಾಮರ್ಥ್ಯವಲ್ಲ; ತನ್ನ ಮಹತ್ವವನ್ನು ಪ್ರದರ್ಶಿಸುವ ಅವಕಾಶವಾಗುತ್ತದೆ.
ದೊಡ್ಡ ಕುರ್ಚಿ, ವಿಶೇಷವಾದ ಆಡಂಬರದ ಪ್ರವೇಶ, ಹಿಂಬಾಲಕರ ಗುಂಪು, ಹಾರಗಳು, ಕಟೌಟ್‌ಗಳು, ಹೊಗಳಿಕೆ, ಹೆಸರುಗಳ ಮುಂದೆ-ಹಿಂದೆ ಬಿರುದುಗಳು; ಇವೆಲ್ಲವೂ ಕೇವಲ ಆಚರಣೆಗಳಲ್ಲ. ಕೆಲವು ಸಂದರ್ಭಗಳಲ್ಲಿ ಅವು ಅಧಿಕಾರದ ಮನಸ್ಸಿಗೆ ದೊರೆಯುವ ಮಾನಸಿಕ ತೃಪ್ತಿಯ ಪ್ರಶಸ್ತಿಗಳೂ ಆಗಬಹುದು.
‘ಕೊಡುವವನು’ ಎಂಬ ಅಹಂಕಾರವೂ ಅಪಾಯಕಾರಿ ಎಂಬುದನ್ನು ನಾವು ಮರೆಯುವಂತಿಲ್ಲ. ಅಲ್ಲಿ ಔದಾರ್ಯವನ್ನೂ ಕೂಡಾ ಶ್ರೇಣೀಕೃತ ಅಹಂಕಾರವಾಗಿಯೇ ರೂಪಿಸುತ್ತೇವೆ. ‘‘ನಾನು ಅವನಿಗೆ ಕೆಲಸ ಕೊಟ್ಟೆ’’, ‘‘ನಾನು ಅವರಿಗೆ ಸಹಾಯ ಮಾಡಿದೆ’’, ‘‘ನಾನು ಇಷ್ಟು ಜನರನ್ನು ಸಾಕುತ್ತಿದ್ದೇನೆ’’; ಎಂಬೆಲ್ಲಾ ಮನೋಭಾವನೆಗಳು ರೂಪುಗೊಂಡಾಗ ಸಹಾಯ ಪಡೆಯುವ ವ್ಯಕ್ತಿಯ ಘನತೆಗಿಂತ ಸಹಾಯ ಮಾಡುವವನ ಮಹತ್ವ ದೊಡ್ಡದಾಗುತ್ತದೆ. ಆದರೆ ಪ್ರಜಾಪ್ರಭುತ್ವದಲ್ಲಿ ಸರಕಾರ ನಾಗರಿಕನಿಗೆ ದಾನ ಕೊಡುವುದಿಲ್ಲ. ಅದು ನಾಗರಿಕನ ಹಕ್ಕನ್ನು ನಿರ್ವಹಿಸುತ್ತದೆ. ನಾಯಕ ಜನರ ಪಾಲಕನಲ್ಲ; ಜನರಿಂದ ಹೊಣೆಗಾರಿಕೆ ಪಡೆದ ಪ್ರತಿನಿಧಿ. ಕೆಲಸ ನೀಡಿರುವವನು ಕೆಲಸಗಾರನ ಜೀವನದ ಒಡೆಯನಲ್ಲ; ಇಬ್ಬರೂ ಪರಸ್ಪರ ಅವಲಂಬಿತ ಆರ್ಥಿಕ ವ್ಯವಸ್ಥೆಯ ಭಾಗಿಗಳು. ಇದನ್ನು ಅರಿಯದ ಮನಸ್ಸು ನಾಗರಿಕರ ಹಿತರಕ್ಷಣೆಯನ್ನೂ ಉದಾರವೆಂದೋ, ಸಾರ್ವಜನಿಕ ಸೇವೆಯನ್ನು ವ್ಯಕ್ತಿಗತವಾದ ಔದಾರ್ಯವೆಂದೋ ಪರಿಗಣಿಸಿ ಅದರಂತೆ ನಡೆದುಕೊಳ್ಳುವ ಸಾಧ್ಯತೆಗಳಿವೆ.
ನಮ್ಮ ಭಾಷೆಯಲ್ಲೇ ಶ್ರೇಣೀಕೃತ ಹೆಚ್ಚುಗಾರಿಕೆ ಅಡಗಿರಬಹುದು. ‘‘ನನ್ನ ಕೆಳಗೆ ಇಷ್ಟು ಜನ ಕೆಲಸ ಮಾಡುತ್ತಾರೆ’’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವವರನ್ನು ಕಾಣುತ್ತೇವೆ. ಆದರೆ, ‘‘ನನ್ನ ಜೊತೆ ಇಷ್ಟು ಜನ ಕೆಲಸ ಮಾಡುತ್ತಾರೆ’’ ಎಂದರೆ? ಒಂದು ಉಪಸರ್ಗ ಅಥವಾ ಪೂರ್ವಪದವೇ (preposition) ಬದಲಾಗುತ್ತದೆ. ಆದರೆ ಅದರೊಂದಿಗೆ ಸಂಪೂರ್ಣ ಮಾನಸಿಕ ಅಧಿಕಾರ (power psychology) ಬದಲಾಗುತ್ತದೆ.
ಕೆಳಗೆ ಎಂದಾಗ ಅದು ಮೇಲಿನಿಂದ ಕೆಳಗಿನ ಶ್ರೇಣಿಯ ಲಂಬವಾದದ ಸಂಬಂಧ (vertical relationship). ಜೊತೆಗೆ ಎಂದಾಗ ಸಮತಲವಾದ ಸಂಬಂಧ (horizontal relationship). ಪ್ರಜಾಪ್ರಭುತ್ವದ ಮನಸ್ಸು ಎರಡನೆಯದನ್ನು ಹೆಚ್ಚು ಕಲಿಯಬೇಕಿದೆ. ನಾಯಕನನ್ನು ರಾಜನನ್ನಾಗಿಸುವುದು ಜನರೂ ಹೌದು. ಇದು ಕೇವಲ ಅಧಿಕಾರದಲ್ಲಿರುವವರ ಸಮಸ್ಯೆಯಲ್ಲ. ಜನರೂ ಕೂಡ ನಾಯಕರನ್ನು ಜನಸೇವಕ ಎಂದು ಹೇಳುತ್ತಲೇ ಅವರಿಗೆ ರಾಜಮರ್ಯಾದೆ ಕೊಡುತ್ತಾರೆ. ಅವರಿಗಾಗಿ ರಸ್ತೆಯಲ್ಲಿ ಸಂಚಾರಗಳನ್ನು ನಿಲ್ಲಿಸುತ್ತಾರೆ. ಅವರ ಮುಂದೆ ಬಾಗುತ್ತಾರೆ. ಅವರ ಮಕ್ಕಳಿಗೂ ರಾಜಕೀಯ ಉತ್ತರಾಧಿಕಾರ ಸಹಜವೆಂದು ಭಾವಿಸುತ್ತಾರೆ. ತಮ್ಮ ನಾಯಕನ ವಿಮರ್ಶೆಯನ್ನು ತಮ್ಮದೇ ಅವಮಾನವೆಂದು ಅನುಭವಿಸುತ್ತಾರೆ. ಇಲ್ಲಿ ಪ್ರಜಾಪ್ರಭುತ್ವ ನಿಧಾನವಾಗಿ ವ್ಯಕ್ತಿಪೂಜೆಗೆ ತಿರುಗಿ, ವ್ಯಕ್ತಿ ಆರಾಧನೆಯ ಸಮೂಹ (personality cult) ಆಗಬಹುದು.
ರಾಜನನ್ನು ತೆಗೆದುಹಾಕಿ ಸಂವಿಧಾನ ತಂದರೂ, ನಮ್ಮ ಮನಸ್ಸು ಮತ್ತೊಬ್ಬ ರಾಜನನ್ನು ಹುಡುಕುತ್ತಿದ್ದರೆ ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುತ್ತದೆ. ಮಗುವಿಗೆ ರಾಜನಾಗು ಎನ್ನುವುದಕ್ಕಿಂತ ಬೇರೆಯೇ ಯಶಸ್ಸಿನ ಭಾಷೆಯನ್ನು ಕೊಡಬೇಕಿದೆ. ಎಲ್ಲರಿಗಿಂತ ಮೇಲೆ ಬಾ ಎನ್ನುವುದಕ್ಕಿಂತ ನಿನ್ನ ಸಾಮರ್ಥ್ಯದ ಮಟ್ಟಿಗೆ ಬೆಳೆ ಎಂಬ ಕಿವಿ ಮಾತು ಹೇಳಬೇಕಾಗಿದೆ.






