Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
    • ಕ್ರೈಂ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 23ನೇ ವಾರ್ಷಿಕ ವಿಶೇಷಾಂಕ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ಪುಸ್ತಕ ಸಾಂಗತ್ಯ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಚರಿತ್ರ
  5. ಹಳತೆಂಬ ಹೊನ್ನು

ಹಳತೆಂಬ ಹೊನ್ನು

ಯೋಗೇಶ್ ಮಾಸ್ಟರ್,ಯೋಗೇಶ್ ಮಾಸ್ಟರ್,31 May 2026 10:40 AM IST
share
ಹಳತೆಂಬ ಹೊನ್ನು

‘‘ನಮ್ಮ ತಾತ ಸುತ್ತೇಳು ಹಳ್ಳಿಯ ಪಟೇಲರಾಗಿದ್ದರು, ಮತ್ತೇನೋ ಆಗಿದ್ದರು, ಅವರು ಅಷ್ಟು ವೈಭವದಿಂದ ಮೆರಿತಿದ್ರು’’ ಎಂದೆಲ್ಲಾ ಯಾವಾಗಲೋ ಒಮ್ಮೆ ಸಂದರ್ಭಾನುಸಾರವಾಗಿ ಯಾರಾದರೂ ವ್ಯಕ್ತಿ ಹೇಳಿದರು ಎಂದಿಟ್ಟುಕೊಳ್ಳಿ. ಅದು ತಮ್ಮ ಕೌಟುಂಬಿಕ ಇತಿಹಾಸದ ಸ್ಮರಣೆ ಎಂದುಕೊಳ್ಳೋಣ. ಆದರೆ, ಅದನ್ನೇ ಯಾವಾಗಲೂ ಹೇಳುತ್ತಿರುತ್ತಾರೆ, ಈಗ ಏನೂ ಇಲ್ಲ, ಎಂದೆಲ್ಲಾ ಕೊರಗುತ್ತಿದ್ದಾರೆ ಎಂದರೆ ಹಳತರ ವೈಭವವನ್ನು ನೆನೆಸಿಕೊಂಡು ತಮ್ಮ ದೌರ್ಬಲ್ಯವನ್ನು ಮುಚ್ಚಿಕೊಳ್ಳಲು ಅಥವಾ ಸಮಾಧಾನಿಸಿಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ತಿಳಿಯುತ್ತದೆ.

ಓಲ್ಡ್ ಈಸ್ ಗೋಲ್ಡ್ ಅಂತ ಅನ್ನೋದಕ್ಕೆ ತುಂಬಾ ಜನಕ್ಕೆ ಭಾವುಕತೆ ಉಂಟಾಗುತ್ತದೆ. ತಾವು ಹೈಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಪ್ರಶಂಸಿಸುವ ಸಂಗೀತ, ಚಲನಚಿತ್ರಗಳನ್ನು ವಯಸ್ಕರಾದಾಗ ನೆನಪಿಸಿಕೊಂಡು ಓಲ್ಡ್ ಈಸ್ ಗೋಲ್ಡ್ ಅನ್ನುವುದು ಮನೋವೈಜ್ಞಾನಿಕವಾಗಿ ಸಹಜವಾದದ್ದು. ನಮ್ಮ ಕಾಲದ್ದು ಅಂತ ಮುದುಕರಾದಾಗಲೂ ನೆನೆಸಿಕೊಳ್ಳುವುದು ಹೈಸ್ಕೂಲು ಮತ್ತು ಕಾಲೇಜಿನ ವಯೋಮಾನದ ಅಭಿರುಚಿಗಳನ್ನು.

ಆದರೆ ನಮ್ಮ ಭಾರತೀಯ ಸಮಾಜದಲ್ಲಿ ಓಲ್ಡ್ ಈಸ್ ಗೋಲ್ಡ್ ಎಂಬ ಪರಿಕಲ್ಪನೆ ಸಾಮಾಜಿಕ ಮತ್ತು ಸಂಕಲಿತ ಮನಸ್ಥಿತಿಯ ವಿಷಯದಲ್ಲಿ ಸಹಜವಾಗಿರುವುದಾಗಿಲ್ಲ. ಅದು ಗಂಭೀರ ಸ್ವರೂಪದ ಭೂತಗೀಳು ಅಥವಾ ಗತವ್ಯಾಮೋಹ (Nostalgia) ಆಗಿದೆ. ಇದು ವ್ಯಕ್ತಿಯೊಬ್ಬ ತನ್ನ ಹಳೆಯ ಅನುಭವಗಳನ್ನು ನೆನಪಿಗೆ ತಂದುಕೊಂಡು ತನ್ನ ಭಾವನೆಗಳನ್ನು ಮುದಗೊಳಿಸಿಕೊಳ್ಳುವಷ್ಟು ಸರಳವಾಗಿಲ್ಲ.

ಹಳೆಯ ವಿಷಯಗಳು ನಾನಾ ರೀತಿಗಳಲ್ಲಿ ಹೊಸೆದುಕೊಂಡು, ಹೆಣೆದುಕೊಂಡು, ಬೆಸೆದುಕೊಂಡು ಸಿಕ್ಕುಸಿಕ್ಕಾಗಿ ಬಿಡಿಸಿಕೊಳ್ಳಲು ಹೆಣಗಾಡಿದಷ್ಟೂ ಕಗ್ಗಂಟಾಗುವಷ್ಟು ಸಂಕೀರ್ಣವಾಗಿದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಹಳತರ ವ್ಯಾಮೋಹ ಅಥವಾ ಭೂತಗೀಳು ವಿರೋಧಾಭಾಸಗಳಿಂದ ಕೂಡಿದ್ದು ಮತ್ತು ವಿಮರ್ಶೆಗೆ ತೆರೆದುಕೊಳ್ಳದೆ ಸಾಮಾಜಿಕ ವ್ಯವಸ್ಥೆಗಳನ್ನೇ ಹಿಂದಕ್ಕೊಯ್ಯುವಷ್ಟು ಬಲವಾಗಿದೆ.

ಹಳತೆಲ್ಲಾ ಹೊನ್ನು ಎಂದು ಆನಂದಿಸುವ ಜನರು ವಿವೇಚನೆಯೇ ಇಲ್ಲದೆಯೇ ಐತಿಹಾಸಿಕ ಪ್ರಸಂಗಗಳಿಂದ ಹಿಡಿದು, ಜಾತಿ, ಲಿಂಗ, ವರ್ಗ ತಾರತಮ್ಯಗಳನ್ನು ಮತ್ತು ಪೂರ್ವಾಗ್ರಹಗಳನ್ನೆಲ್ಲಾ ಹೊಸ ವಿದ್ಯಮಾನಗಳೊಂದಿಗೆ ಬೆರೆಸುತ್ತಾ ಭಾರತೀಯ ಸಮಾಜದ ಭವಿಷ್ಯದ ಕಡೆಗಿನ ನಡೆಯನ್ನೇ ಕುಂಟುವಂತೆ ಮಾಡಿದ್ದಾರೆ ಮತ್ತು ಮಾಡುತ್ತಿದ್ದಾರೆ.

ಭೂತದ ಗೀಳು ಮಾಡುವ ಅವಾಂತರಗಳು ಒಂದೊಂದಲ್ಲ. ಸಮಾಜದ ಒಟ್ಟಾರೆ ಮನಸ್ಥಿತಿಯು ಅಸಮರ್ಪಕವಾದ ಅಥವಾ ಸಾಮರಸ್ಯವಿಲ್ಲದ ಮಾನಸಿಕ ವಾತಾವರಣ ಉಂಟಾಗಿ ಪ್ರಗತಿಗೆ ಹಿನ್ನಡೆ ಉಂಟಾಗುತ್ತದೆ. ಹಿಂದಿನ ವಿಷಯಗಳನ್ನು ವೈಭವೀಕರಿಸುವುದರ ಮೂಲಕ ವರ್ತಮಾನದ ಸಾಮಾಜಿಕ, ಆರ್ಥಿಕ, ಔದ್ಯೋಗಿಕ, ಶೈಕ್ಷಣಿಕ ಆತಂಕಗಳಿಂದ ಪಲಾಯನ ಮಾಡುವುದಾಗಿರುತ್ತದೆ.

ಹಳತೆಲ್ಲಾ ಹೊನ್ನು ಎಂಬ ಪರಿಕಲ್ಪನೆಯು ಭವ್ಯತೆಯ ಒಂದು ಯಾಂತ್ರಿಕ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತದೆ. ಇದರಲ್ಲಿ ವ್ಯಕ್ತಿಗತವಾಗಿ ಸಾಧಿಸಲು ಕಡಿಮೆ ಸಾಮರ್ಥ್ಯವಿರುವವರು ಅಥವಾ ಅತ್ಯುತ್ತಮ ಸ್ಥಾನಮಾನ ಪಡೆಯುವುದರ ಆತಂಕದಲ್ಲಿರುವವರು ಭವ್ಯತೆ ಮತ್ತು ಪರಂಪರೆಯೇ ಮೊದಲಾದ ಹಳತರ ನೆರಳಿನ ‘ಸಂಕಲಿತ ಅಹಂಕಾರ’ವನ್ನು (borrowed collective ego) ಎರವಲಾಗಿ ಪಡೆಯುತ್ತಾರೆ. ಇಡೀ ಜಗತ್ತಿನಲ್ಲಿ ನಮ್ಮ ಪೂರ್ವಜರೇ ಅದ್ಯಾವುದನ್ನೋ ಮೊದಲು ಮಾಡಿದ್ದು, ನಮ್ಮವರೇ ಅದನ್ನು ಕಂಡುಹಿಡಿದದ್ದು, ನಮ್ಮ ಪೂರ್ವಿಕರು ಆ ಕಾಲದಲ್ಲೇ ಅಷ್ಟು ಮುಂದುವರಿದಿದ್ದರು ಇತ್ಯಾದಿ ಹಳತರ ವ್ಯಾಮೋಹದಿಂದ ಸಂತೋಷ ಪಡುತ್ತಿರುತ್ತಾರೆ. ತಮ್ಮ ಅಸಮರ್ಥತೆಯನ್ನು ಅಥವಾ ಕೀಳರಿಮೆಯನ್ನು ನಿವಾರಿಸಿಕೊಳ್ಳಲು ಮನಸ್ಸು ಮಾಡಿಕೊಳ್ಳುವ ರಕ್ಷಣಾ ತಂತ್ರವಾಗಿರುತ್ತದೆ. ಅದು ಎಷ್ಟರಮಟ್ಟಿಗೆ ಮುಂದುವರಿಯುವುದು ಎಂದರೆ ಸಾಮಾಜಿಕ ವ್ಯವಸ್ಥೆಯ ಮೂಲ ಸಮಸ್ಯೆಯನ್ನು ರಾಜಕೀಯದ ದೋಷಪೂರಿತ ಆಡಳಿತ ಅಥವಾ ಆಡಳಿತ ಯಂತ್ರದ ಸಮಸ್ಯೆ ಎಂದು ನೋಡುವುದಿಲ್ಲ. ಹಾಗೆ ನೋಡುವವರದು ತಿಳುವಳಿಕೆಯ ದೋಷವೆಂದೇ ಸಮಸ್ಯೆಯನ್ನು ಮತ್ತೊಂದು ದಿಕ್ಕಿಗೆ ಹೊರಳಿಸಿಬಿಡುತ್ತಾರೆ. ಹಳತೆಲ್ಲಾ ಹೊನ್ನು ಎನ್ನುವ ಮನೋಭಾವವು ಚರಿತ್ರೆಯನ್ನು ಸಂಶೋಧಿಸಿ ಸಾಧಕ ಬಾಧಕಗಳನ್ನು ಸೋಸುವ ಬದಲು ಸ್ವರ್ಣಯುಗ ಅಥವಾ ಅತ್ಯುತ್ತಮವಾದ ಕಾಲ ಅದಾಗಿತ್ತು ಎಂದು ಪ್ರತಿಪಾದಿಸಿಬಿಡುವಂತಾಗುತ್ತದೆ.

ಗಮನಿಸಿ ನೋಡಿ, ಯಾರು ಅಥವಾ ಯಾವ ಸಮುದಾಯವು, ಸಮೂಹವು ಹಳತರ ವೈಭವಗಳನ್ನು ಸದಾ ಮೆಲುಕು ಹಾಕಿಕೊಂಡು, ಚಾರಿತ್ರಿಕ ಸಂಗತಿಗಳನ್ನು ನಿನ್ನೆ ನಮ್ಮ ಮನೆಯಲ್ಲಿ ನಡೆಯಿತು ಎಂಬಂತೆ ಭಾವೋದ್ವೇಗದಲ್ಲಿ ಹೇಳುತ್ತಿದ್ದಾರೆ ಅಥವಾ ಒಂದು ಸಮುದಾಯದ ಚಾರಿತ್ರಿಕ ಸಂಗತಿಗಳನ್ನು, ತಾವು ಗುರುತಿಸಿಕೊಂಡಿರುವ ಮತ್ತೊಂದು ಸಮುದಾಯದ ಸಂಗತಿಗಳೊಂದಿಗೆ ಸಂಘರ್ಷಾತ್ಮಕವಾಗಿ ಬೆಸೆದುಕೊಂಡು ಈಗ ಇಲ್ಲಿ ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದರೆ, ಅವರು ಯಾವುದೇ ರಚನಾತ್ಮಕ ಮತ್ತು ಉತ್ಪಾದಕವಾದ ಚಟುವಟಿಕೆಗಳನ್ನು ಮಾಡುತ್ತಿಲ್ಲ ಎಂದೇ ಅರ್ಥ. ಯಾರು ಉತ್ಪಾದಕತೆ ಮತ್ತು ರಚನಾತ್ಮಕವಾದ ಚಟುವಟಿಕೆಗಳಲ್ಲಿ ತೊಡಗಿರುತ್ತಾರೋ ಅವರು ಪ್ರಗತಿಯನ್ನು ಆಶಿಸುತ್ತಿರುತ್ತಾರೆ. ಅವರಿಗೆ ಹಿಂದಕ್ಕೆ ಹೋಗುವುದು ಎಂದರೆ ಸಮಯ, ಸಂಪನ್ಮೂಲ ಮತ್ತು ಪರಿಶ್ರಮ ವ್ಯರ್ಥ ಎಂದೇ ಭಾವನೆ. ಹಾಗಾಗಿ ಹಿಂದೆ ನಡೆದಿರುವುದೆಲ್ಲವನ್ನೂ ಕೂಡಾ,‘‘ಓ ಹಾಗಾ? ಸರಿ ಇವತ್ತಿನದು ನೋಡಿಕೊಳ್ಳೋಣ, ಮುಂದೇನು ಮಾಡಬೇಕೋ ಅದನ್ನು ಮಾಡೋಣ’’ ಎಂದು ರೆಫರೆನ್ಸ್ ಆಗಿ ನೋಡುತ್ತಾರೆಯೇ ಹೊರತು, ಅದಕ್ಕಾಗಿ ತಮ್ಮ ಸಮಯ, ಪರಿಶ್ರಮ, ಸಂಪನ್ಮೂಲ ಮತ್ತು ಭಾವನಾತ್ಮಕವಾದ ಹೂಡಿಕೆಗಳನ್ನು ಮಾಡುವುದಿಲ್ಲ.

ಪ್ರಗತಿ ಅಥವಾ ಬೆಳವಣಿಗೆಯ ಮನಸ್ಥಿತಿಯವರ ಮೊತ್ತ ಮೊದಲ ಲಕ್ಷಣವೇ ಹಳತನ್ನು ಕೆದಕದಿರುವುದು ಮತ್ತು ಈಗಿನ ಹಾಗೂ ಮುಂದಿನ ನಡೆಗಳ ಬಗ್ಗೆ ಲಕ್ಷ್ಯ ಕೊಡುವುದು. ಅದರ ಬಗ್ಗೆ ಎಚ್ಚರಿಕೆ ಇರುತ್ತದೆ. ಬೌದ್ಧಿಕವಾಗಿ ಅದನ್ನು ನಿಭಾಯಿಸುವ ಅಥವಾ ನಿವಾರಿಸಿಕೊಳ್ಳುವ ಕೌಶಲ್ಯವನ್ನು ಹೊಂದಿರುತ್ತಾರೆಯೇ ಹೊರತು ಮರೆತಿರುವುದಿಲ್ಲ. ಆದರೆ ಪುರೋಗಾಮಿಗಳು ಭಾವನಾತ್ಮಕವಾಗಿ ಅದನ್ನು ಸಾಧಿಸುವುದಿಲ್ಲ ಅಷ್ಟೇ.

ಸಾಮಾಜಿಕವಾಗಿ ಮಾತ್ರವಲ್ಲ ದಂಪತಿಯರ ಅಥವಾ ಕೌಟುಂಬಿಕ ಕಲಹಗಳೂ ಉಲ್ಬಣಗೊಳ್ಳುವುದು ಹಳತರ ವಿಷಯಗಳಿಗೆ ಅಂಟಿಕೊಂಡಾಗ. ಅವರಿಗೆ ತಪ್ಪುಗಳನ್ನು ಕ್ಷಮಿಸಲಾಗದು, ಸೇಡು ಬಿಡಲಾಗದು; ಏಕೆಂದರೆ ಹಟಮಾರಿ ಮನಸ್ಸಿಗೆ ತನ್ನದೇ ಅಹಂಕಾರವನ್ನು ಮಣಿಸಿಕೊಳ್ಳಲು ಆಗುವುದಿಲ್ಲ. ಕೌಂಟುಂಬಿಕವಾಗಿಯಾಗಲಿ, ಸಾಮಾಜಿಕವಾಗಿಯಾಗಲಿ; ಹಳತರ ತಪ್ಪು ನಡೆಗಳನ್ನು ಈಗ ಖಂಡಿಸಿ, ನಿಂದಿಸಿ ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳುವಂತೆ ವರ್ತಿಸುವುದರಿಂದ ಪ್ರಗತಿಯ ಹಿಮ್ಮುಖವಾಗುತ್ತದೆ.

Tags

Old gold
share
ಯೋಗೇಶ್ ಮಾಸ್ಟರ್,
ಯೋಗೇಶ್ ಮಾಸ್ಟರ್,
Next Story
X